Homeಮುಖಪುಟ2022ರ ಚುನಾವಣೆಯ ಪಾಠಗಳು

2022ರ ಚುನಾವಣೆಯ ಪಾಠಗಳು

- Advertisement -
- Advertisement -

ಇಂದಿನ ಚುನಾವಣಾ ರಾಜಕಾರಣದ ಸನ್ನಿವೇಶದಲ್ಲಿ ಯಾವುದೇ ರಾಜಕೀಯ ಪಕ್ಷ 182 ಸ್ಥಾನಗಳ ಪೈಕಿ 156 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಹುಡುಗಾಟದ ಮಾತಲ್ಲ. ಗುಜರಾತ್‌ನ ಮಟ್ಟಿಗಂತೂ ಇದೊಂದು ಅಭೂತಪೂರ್ವ ಸಾಧನೆಯೇ ಸರಿ. ಏಕೆಂದರೆ ಸತತ 27 ವರ್ಷಗಳಿಂದ ಅಧಿಕಾರದಲ್ಲಿರುವ ಪಕ್ಷ ನಾನಾ ರೀತಿಯ ದುರಾಡಳಿತ ನಡೆಸಿಯೂ ಇಷ್ಟೊಂದು ಬಹುಮತ ಸಾಧಿಸುತ್ತದೆಂದರೆ ಅದೊಂದು ಅದ್ವಿತೀಯ ಕಲೆಯೇ ಸೈ. ಇಂತಹ ರಾಜಕೀಯ ಕಲೆ ಪ್ರದರ್ಶಿಸಿದ ಮಾನ್ಯ ಪ್ರಧಾನಿ ಮೋದಿಯವರಿಗೂ ಅವರ ಬಿಜೆಪಿ ಪಕ್ಷಕ್ಕೂ ಅದರ ಹಿಂದಿನ ಆರೆಸ್ಸೆಸ್ ಎಂಬ ಮಾಯಾವಿ ಸಂಘಟನೆಗೂ ಅಭಿನಂದನೆಗಳು ಸಲ್ಲುತ್ತವೆ.

ಈ ಚುನಾವಣಾ ಯಶಸ್ಸನ್ನು ’ಮೋದಿ ಸುನಾಮಿ’ ಎಂದು ಮಾಧ್ಯಮಗಳು ಬಣ್ಣಿಸುತ್ತಿವೆ. ಮಾತ್ರವಲ್ಲ, 2024ರಲ್ಲಿ ದೇಶಾದ್ಯಂತ ಇದೇ ಸುನಾಮಿ ಅಪ್ಪಳಿಸಲಿದೆ ಎಂಬ ಭವಿಷ್ಯವನ್ನು ಕೂಡ ಬಿತ್ತರಿಸುತ್ತಿದ್ದಾರೆ. ವಿರೋಧ ಪಕ್ಷಗಳ ಅನೇಕ ನಾಯಕರು, ಕಾರ್ಯಕರ್ತರನ್ನು ಒಳಗೊಂಡಂತೆ ಅನೇಕ ಸಮಾಜಮುಖಿ ಚಿಂತಕರೂ ಈ ಪ್ರಚಾರದ ’ಸುನಾಮಿ’ಯ ಹೊಡೆತಕ್ಕೆ ಸಿಲುಕಿ ಕಂಗಾಲಾಗಿರುವುದು ಗೋಚರಿಸುತ್ತದೆ. ಇಂತಹ ವಿಷಮ ಸನ್ನಿವೇಶದಲ್ಲಿ ಸ್ವಲ್ಪ ಸಮಾಧಾನಚಿತ್ತದಿಂದ ಈ ವಿದ್ಯಮಾನದ ಒಳಸುಳಿಗಳನ್ನು ಅರ್ಥಮಾಡಿಕೊಳ್ಳುವುದು ತೀರಾ ಅವಶ್ಯ.

ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲವು ಹಿರಿಯ ಪತ್ರಕರ್ತರ ಜೊತೆಗೆ ಗುಜರಾತ್‌ನಲ್ಲಿ ಸುತ್ತಾಡುವ ಯೋಗ ನನಗೂ ಒದಗಿಬಂದಿತ್ತು. ಗುಜರಾತ್‌ನಲ್ಲಿ ಕಣ್ಣಾರೆ ಕಂಡಿದ್ದು, ಕೇಳಿದ್ದು ಮಾತ್ರವಲ್ಲದೆ ಓದಿದ್ದು, ಬಲ್ಲವರೊಂದಿಗೆ ಚರ್ಚಿಸಿದ್ದು ಎಲ್ಲ ಒಳಗೊಂಡು ನನ್ನಲ್ಲಿ ರೂಪುಗೊಂಡ ಕೆಲವು ಅಭಿಪ್ರಾಯಗಳನ್ನು ಓದುಗರ ಮುಂದಿಡುತ್ತಿದ್ದೇನೆ.

1) ಮೋದಿಯ ದೈವೀಕರಣ

ಈ ಗೆಲುವಿಗೆ ಮೋದಿ ಮಾತ್ರವೇ ಏಕಮೇವ ಕಾರಣ ಎಂಬುದನ್ನು ಅತಿರಂಜಿತವಾಗಿ ಪ್ರಚಾರ ಮಾಡಲಾಗುತ್ತಿದೆ. ನಗರ ಕೇಂದ್ರಿತ ವ್ಯಾಪಾರಿ ವರ್ಗದಲ್ಲಿ ಹಾಗೂ ಮಧ್ಯಮ ವರ್ಗದಲ್ಲಿ ಮೋದಿಯ ಬಗೆಗಿನ ಆರಾಧನೆ ಹೆಚ್ಚಿನ ಮಟ್ಟದಲ್ಲಿದೆ. ಆಧುನಿಕ ಸಂವಹನ ಮಾಧ್ಯಮದೊಂದಿಗೆ ನಿತ್ಯ ಒಡನಾಡುವ ಯುವಜನತೆಯಲ್ಲೂ ಮೋದಿಯ ಪ್ರಭಾವ ಗಣನೀಯವಾಗಿದೆ. ಜನರ ಅಸಮಾಧಾನವನ್ನು ಮ್ಯಾನೇಜ್ ಮಾಡಲು ಮೋದಿಯನ್ನು ದೈವೀಕರಿಸಲಾಗಿದೆ. ಮೋದಿ ಯಾವ ತಪ್ಪನ್ನು ಮಾಡಲು ಸಾಧ್ಯವಿಲ್ಲ, ಒಂದುವೇಳೆ ತಪ್ಪಾಗಿದ್ದರೂ ಅದು ಗುಜರಾತಿನ ಹಿತದೃಷ್ಟಿಯಿಂದ ಮಾಡಿರುತ್ತಾರೆ ಎನ್ನುವ ನರೆಟಿವ್ ಗುಜರಾತಿನಲ್ಲಿ ಚನ್ನಾಗಿಯೇ ಕೆಲಸ ಮಾಡುತ್ತಿದೆ.

ಆದರೆ ಇದಕ್ಕೆ ಇನ್ನೊಂದು ಮುಖವೂ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರದ ಬಡಜನರ ಮಧ್ಯದಲ್ಲಿ ಮೋದಿಯ ವರ್ಚಸ್ಸು ಅಷ್ಟಾಗಿ ಕೆಲಸ ಮಾಡುವುದಿಲ್ಲ. ಅದರಲ್ಲೂ ದಲಿತರು, ಆದಿವಾಸಿಗಳು ಹಾಗೂ ಮುಸ್ಲಿಮರ ನಡುವೆ ಮೋದಿಗೆ ಹೇಳಿಕೊಳ್ಳುವಂಥ ಯಾವ ವರ್ಚಸ್ಸೂ ಇಲ್ಲ.

ಆದರೆ ಗುಜರಾತಿನಲ್ಲಿ ವರ್ತಮಾನದ ಯಾವುದೇ ನಾಯಕನಿಗಿಂತ ಹಲವು ಪಟ್ಟು ಹೆಚ್ಚಿನ ಬೆಂಬಲ ಹೊಂದಿರುವುದು ಮೋದಿಯ ಹೆಗ್ಗಳಿಕೆ. ಮೋದಿಯ ಹೆಸರಿಗೆ ಹೆಚ್ಚಿನ ಮತಗಳು ಬೀಳುತ್ತವೆ ಎಂಬುದು ಕೂಡ ಸುಳ್ಳಲ್ಲ. ಆದರೆ ಮೋದಿಯ ಹೆಸರೊಂದೇ ಗೆಲುವನ್ನು ತಂದುಕೊಡುತ್ತದೆ ಎಂಬ ಪ್ರಚಾರವನ್ನು ನಂಬುವುದು ಮಾತ್ರ ಮೂರ್ಖತನ.

2) ಗುಜರಾತಿನಲ್ಲಿ ಬಿಜೆಪಿ ಪಕ್ಷದ ಸಂಘಟನೆಯ ಜಾಲ

ಗುಜರಾತಿನಲ್ಲಿ ಸುತ್ತಾಡಿರುವ ಎಲ್ಲ ಪತ್ರಕರ್ತರ ಸಾರ್ವತ್ರಿಕ ಅಭಿಪ್ರಾಯ ಏನೆಂದರೆ ಬಿಜೆಪಿ ರಾಜ್ಯದ ಮೂಲೆಮೂಲೆಗಳಲ್ಲೂ ತನ್ನ ಸಂಘಟನಾ ಯಂತ್ರಾಂಗವನ್ನು ಹೊಂದಿದೆ ಎಂಬುದು. ಬಿಜೆಪಿ ಎಂದರೆ ಕೇವಲ ಪಕ್ಷ ಮಾತ್ರವಲ್ಲ, ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಆರೆಸ್ಸೆಸ್ ಕೂಟದ ಯಂತ್ರಾಂಗವನ್ನು ನಾವು ಗಮನದಲ್ಲಿಡಬೇಕು. ಗುಜರಾತಿ ಮೂಲದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಹೇಳುವ ಪ್ರಕಾರ ಈ ಸಂಘಿ ಕೂಟ ಗುಜರಾತಿ ಸಮಾಜದ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಮುಖ್ಯವಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳ ಯಾವುದೇ ಧಾರ್ಮಿಕ ಕಾರ್ಯಕ್ರಮವಿರಲಿ, ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಸಭೆಯಿರಲಿ, ಆಸ್ತಿ ಖರೀದಿ ವ್ಯವಹಾರವಿರಲಿ ಅಥವಾ ಮದುವೆ ಕಾರ್ಯಕ್ರಮವೇ ಆಗಿರಲಿ ಸಂಘಿ ಕೂಟದ, ಅದರಲ್ಲೂ ವಿಶೇಷವಾಗಿ ವಿಶ್ವ ಹಿಂದೂ ಪರಿಷತ್‌ನ ಒಬ್ಬನಾದರೂ ಸದಸ್ಯನ ಪಾತ್ರ ಇದ್ದೇ ಇರುತ್ತದೆ.

ಇದನ್ನೂ ಓದಿ: ಹಿಮಾಚಲಪ್ರದೇಶ ಮುಖ್ಯಮಂತ್ರಿಯಾಗಿ ಸುಖವಿಂದರ್‌ ಸಿಂಗ್ ಸುಖು ಆಯ್ಕೆ

ಪ್ರತಿ 30 ಮತದಾರರಿಗೆ ಕನಿಷ್ಟ ಒಬ್ಬ ಕಾರ್ಯಕರ್ತನನ್ನು ನಿಯೋಜಿಸುತ್ತಿದ್ದದ್ದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಆದರೆ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 30 ಮತದಾರರಿಗೆ 5 ಜನರ ಸಮಿತಿಯೊಂದನ್ನು ನೇಮಿಸಿದ್ದಾರೆ. ಚುನಾವಣೆಯ ಮುನ್ನಾದಿನ ರಾತ್ರಿ ನಾವು ಅಹಮದಾಬಾದಿನ ರಸ್ತೆಗಳಲ್ಲಿ ಸುತ್ತಾಡುತ್ತಿದ್ದಾಗ, ನಡುತಾತ್ರಿ ಕಳೆದು ಒಂದೂವರೆ ಗಂಟೆಯಲ್ಲಿ ಕಂಡ ದೃಶ್ಯ ಈ ಸಂಘಟನಾ ಶಕ್ತಿ ಮತ್ತು ವಿಧಾನಕ್ಕೆ ಸಾಕ್ಷಿಯಾಗಿತ್ತು. ಮಾರುತಿ ಕಾರಿನ ಶೋರೂಮಿನಲ್ಲಿ ನಡೆಯುತ್ತಿದ್ದ ಆ ಕ್ಷೇತ್ರದ ಬೂತ್ ಮಟ್ಟದ ಸಂಘಟಕರ ಸಭೆಯಲ್ಲಿ ಸ್ವತಃ ಮಂತ್ರಿಗಳು, ಶಾಸಕರು ಬಂದು ಕುಳಿತಿದ್ದರು. ಸಂಘಟಕರು ತಮ್ಮ ಕ್ಷೇತ್ರದಲ್ಲಿನ ಮತದಾರರ ಸ್ಥಿತಿಗತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಕೈಯ್ಯಲ್ಲಿಡಿದು ಸಭೆಗೆ ಹಾಜರಾಗುತ್ತಿದ್ದರು. ರಾತ್ರಿ ಮೂರು ಗಂಟೆಯವರೆಗೆ ಸಭೆ ನಡೆಯುವುದೆಂದು ತಿಳಿದುಬಂತು.

ಈ ಸಂಘಟನಾ ಬಲ ಇದ್ದಕ್ಕಿದ್ದಂತೆ ರೂಪುಗೊಂಡಿದ್ದಲ್ಲ ಅಥವಾ ಮೋದಿ ಬಂದ ನಂತರವಷ್ಟೇ ರೂಪುಗೊಂಡದ್ದಲ್ಲ. ಇದಕ್ಕೆ ನೂರು ವರ್ಷಗಳ ಇತಿಹಾಸವಿದೆ. ಈ ಶಕ್ತಿಯ ಮುಂದೆ ಇತರೆ ಪಕ್ಷಗಳು ಹ್ಯಾಲೊಜೆನ್ ಲೈಟಿನ ಮುಂದೆ ಮೊಂಬತ್ತಿ ಇಟ್ಟಂತೆ ಅಷ್ಟೆ.

3) ದ್ವೇಷ ರಾಜಕಾರಣ

ಧಾರ್ಮಿಕ ನಿಷ್ಠೆ ಎಂಬುದು ಗುಜರಾತಿ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಧಾರ್ಮಿಕ ನಿಷ್ಠೆಯನ್ನು ಬಹಳ ವ್ಯವಸ್ಥಿತವಾಗಿ ಕೋಮು ದ್ವೇಷವನ್ನಾಗಿ, ಮುಸ್ಲಿಂ ವಿರೋಧಿ ಭಾವನೆಯಾಗಿ ತಿದ್ದಿ ಪೋಷಿಸಿ ಬೆಳೆಸಲಾಗಿದೆ. ಪರಿಣಾಮವಾಗಿ ಗುಜರಾತ್ ಅತ್ಯಂತ ಕೋಮು ಧ್ರುವೀಕರಣಗೊಂಡ ಸಮಾಜವಾಗಿದೆ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಆ ಕೋಮು ಭಾವನೆಗೆ, ಮುಸ್ಲಿಂ ದ್ವೇಷಕ್ಕೆ ನೀರೆರೆಯುವ ವಿದ್ಯಮಾನಗಳು ನಡೆಯುತ್ತವೆ. ಬಿಲ್ಕಿಸ್ ಬಾನು ಅತ್ಯಾಚಾರಿಗಳು ಹಾಗೂ ಕೊಲೆಗಡುಕರನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡಿ, ಅತ್ಯಾಚಾರಿಗಳಿಗೆ ಸನ್ಮಾನ ಮಾಡಿ ಸಿಹಿ ತಿನಿಸಿದ್ದು ಇದರ ಭಾಗವಷ್ಟೆ. ಹಾಗೆಯೆ 2002ರ ಕೋಮು ದಂಗೆಯ ಒಂದು ಕೇಂದ್ರಸ್ಥಾನವಾದ ನರೋಡಾ ಪಾಟಿಯಾದಲ್ಲಿ ದಂಗೆ, ಕೊಲೆಗಳಿಗೆ ಕಾರಣಕ್ಕಾಗಿ ಇದೀಗ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯ ಮಗಳಿಗೆ (ಆಕೆಗೆ ರಾಜಕಾರಣದ ಜೊತೆ ಯಾವುದೇ ಸಂಬಂಧವಿಲ್ಲ) ಅದೇ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಯ್ತು. ಈಗ ಆಕೆ ಯುವ ಶಾಸಕಿ.

2002ರಲ್ಲಿ ದಂಗೆಕೋರರಿಗೆ ತಕ್ಕ ಪಾಠ ಕಲಿಸಲಾಯ್ತು ಎಂಬ ಅಮಿತ್ ಶಾ ಚುನಾವಣಾ ಭಾಷಣ ಕೂಡ ಇದರ ಭಾಗವೇ. ಹೀಗೆ ಒಂದು ಅಲ್ಪಸಂಖ್ಯಾತ ಸಮುದಾಯವನ್ನು ವಿಲನ್‌ಗಳನ್ನಾಗಿ ಚಿತ್ರಿಸಿ, ಅಗತ್ಯ ಬಿದ್ದಾಗೆಲ್ಲ ದ್ವೇಷ ರಾಜಕಾರಣವನ್ನು ಬಡಿದೆಬ್ಬಿಸುವ ವ್ಯವಸ್ಥಿತ ತಂತ್ರಗಾರಿಕೆ ಬಹಳವಾಗಿ ಕೆಲಸ ಮಾಡುತ್ತಿದೆ.

4) ವಿರೋಧ ಪಕ್ಷದ ನಿರಂತರ ಆಪೋಷನ

ಗುಜರಾತಿನಲ್ಲಿ ಮೋದಿ ಮತ್ತು ಬಿಜೆಪಿಯ ಗೆಲುವು ಅವರ ಸ್ವಂತ ಶಕ್ತಿ ಸಾಮರ್ಥ್ಯಗಳ ಆಧಾರದಲ್ಲಿ ಮಾತ್ರ ನಿಂತಿಲ್ಲ. ಎದುರಾಳಿಗಳ ಶಕ್ತಿಯನ್ನು ನಿರಂತರ ನಾಶ ಮಾಡುವುದು ಹಾಗೂ ವಿರೋಧ ಪಕ್ಷ ಬಲಿಷ್ಠಗೊಳ್ಳದಂತೆ ಮಾಡುವುದರಲ್ಲೂ ಅಡಗಿದೆ. ಬಹುಶಃ ಇದು ಗುಜರಾತ್ ಮಾದರಿಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶ.

27 ವರ್ಷಗಳಿಂದ ಚುನಾವಣೆಗಳಲ್ಲಿ ನಿರಂತರ ಬಹುಮತ ಪಡೆಯುತ್ತಿದ್ದರೂ ಪ್ರತಿಬಾರಿ ಕಾಂಗ್ರೆಸ್ ಪಕ್ಷದ ಆಯ್ದ ಶಾಸಕರನ್ನು ನುಂಗಿಹಾಕುವ (ಆಪರೇಷನ್ ಕಮಲ) ಷಡ್ಯಂತ್ರವನ್ನು ಅನುಸರಿಸಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಬಹುಮತವಿದ್ದಾಗ್ಯೂ 20 ಮಂದಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ನುಂಗಿಹಾಕಿದೆ. ಚುನಾವಣೆಗೆ ಕೆಲವೇ ವಾರಗಳಿದ್ದಾಗಲೂ 11 ಬಾರಿ ಶಾಸಕರಾಗಿದ್ದ ಆದಿವಾಸಿ ಸಮುದಾಯದ ಪ್ರಭಾವಿ ಕಾಂಗ್ರೆಸ್ ಶಾಸಕರೊಬ್ಬರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್, ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಮುಂತಾದವರನ್ನು ಸಾಮ ದಾನ ಬೇಧ ದಂಡ ಪ್ರಯೋಗಗಳ ಮೂಲಕ ಸೆಳೆದದ್ದು ಇಂಥದೇ ಷಡ್ಯಂತ್ರದ ಭಾಗ.

5) ಕಾಂಗ್ರೆಸ್ ಪಕ್ಷದ ಸೋಲು ನಿರೀಕ್ಷಿತ

ಏಕೆಂದರೆ ಅದು ಹೋರಾಟದ ಕಣದಲ್ಲಿ ಇರಲೇ ಇಲ್ಲ. ಯುದ್ಧ ಆರಂಭವಾಗುವ ಮುನ್ನವೇ ಶಸ್ತ್ರತ್ಯಾಗ ಮಾಡಿದ ಸನ್ನಿವೇಶದಲ್ಲಿತ್ತು ಕಾಂಗ್ರೆಸ್‌ನ ಪರಿಸ್ಥಿತಿ. ಬೆಲೆಯೇರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಸತತ 22 ಪರೀಕ್ಷೆಗಳ ಪೇಪರ್ ಲೀಕ್, ಜೆಎಸ್‌ಟಿ ಹೊಡೆತ, ದಲಿತರ ಮೇಲಿನ ದೌರ್ಜನ್ಯ ಹೀಗೆ ಸಾಲು ಸಾಲು ಸಮಸ್ಯೆಗಳು ಹಾಸಿಕೊಂಡಿದ್ದರೂ ಕಾಂಗ್ರೆಸ್ ಯಾವ ವಿಷಯದಲ್ಲಾದರೂ ಹೋರಾಟ ರೂಪಿಸುವುದು ಹಾಗಿರಲಿ, ಗಟ್ಟಿಯಾಗಿ ದನಿಯೆತ್ತಲೂ ಇಲ್ಲ. ಚುನಾವಣೆಯ ಹೊಸ್ತಿಲಲ್ಲಿ ನಡೆದ ಮೊರ್ಬಿ ಸೇತುವೆ ಕುಸಿತದಲ್ಲಿ 140 ಮಂದಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಾಗಲೂ ಕಾಂಗ್ರೆಸ್ ಸ್ಪಂದನೆ ಬಹಳ ಪೇಲವವಾಗಿತ್ತು. ಇವೆಲ್ಲಾ ಸಾಲದೆಂಬಂತೆ ತಮ್ಮೊಳಗೇ ಇರುವ ಗುಂಪುಗಾರಿಕೆ ಬೇರೆ.

ಇಂಥಾ ಪಕ್ಷವನ್ನು ಜನರು ಯಾಕಾದರೂ ಬೆಂಬಲಿಸಿ ಮತ ಹಾಕಿಯಾರು? ಯಾವ ಭರವಸೆಯ ಮೇಲೆ ಮತ ಹಾಕುತ್ತಾರೆ? ಇದು ಊಹೆಗೂ ನಿಲುಕದ ಸಂಗತಿ. ಆದರೂ ಕಾಂಗ್ರೆಸ್ ಪಕ್ಷಕ್ಕೆ ಕಟಿಬದ್ಧರಾಗಿ ಮತ ಚಲಾಯಿಸುತ್ತಿರುವ ಸುಮಾರು ಶೇ.30ರಷ್ಟಿರುವ ಮತದಾರರಿಗೆ ಆ ಪಕ್ಷ ಋಣಿಯಾಗಿರಬೇಕು.

6) ಕಾಂಗ್ರೆಸ್‌ನ ಹೀನಾಯ ಸೋಲಿಗೆ ಎಎಪಿ ಕಾರಣ

ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ. ಆದರೆ ಇಷ್ಟೊಂದು ಹೀನಾಯ ಸೋಲಿಗೆ ಬಿಜೆಪಿ ಅನುಸರಿಸಿದ ಹಲವು ಅಕ್ರಮ ಮಾರ್ಗಗಳ ಜೊತೆಗೆ ಎಎಪಿ ಮೂರನೇ ಶಕ್ತಿಯಾಗಿ ಪ್ರವೇಶಿಸಿದ್ದು ಕಾರಣ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳನ್ನು ಎಎಪಿ ಕಬಳಿಸಿರುವುದು ಬಿಜೆಪಿ ಸ್ಕೋರ್ ಹೆಚ್ಚಾಗಲು ಕಾರಣವಾಗಿದೆ.

7) 156 ಸೀಟುಗಳ ಸುನಾಮಿಯ ಸಂಕೀರ್ಣ ಕಾರಣಗಳು

ಗುಜರಾತ್ ನೆಲಕ್ಕೆ ಕಾಲಿಟ್ಟ ಮೊದಲ ದಿನವೇ ನಮ್ಮ ಅನುಭವಕ್ಕೆ ಬಂದ ಸಂಗತಿ ಬಿಜೆಪಿಯ ಗೆಲುವು ಬಹುತೇಕ ನಿಶ್ಚಿತ ಎಂಬುದು. ಆದರೆ ಭಾರೀ ಭರ್ಜರಿ ಗೆಲುವಿನ ಹಿಂದೆ ಹತ್ತು ಹಲವು ಕಾರಣಗಳಿವೆ. ಅದರಲ್ಲಿ ಎಎಪಿ ಎಂಟ್ರಿಯ ನಂತರ ಏರ್ಪಟ್ಟ ತ್ರಿಕೋನ ಸ್ಪರ್ಧೆ, ಚುನಾವಣಾ ಆಯೋಗ ಹಾಗೂ ಇನ್ನಿತರೆ ಸರ್ಕಾರಿ ಸಂಸ್ಥೆಗಳ ಷಾಮೀಲು, ನೈತಿಕತೆಯನ್ನು ಗಾಳಿಗೆ ತೂರಿ ಚುನಾವಣಾ ದಿನವೇ ಮೋದಿ ನಡೆಸಿದ ರೋಡ್ ಶೋಗಳು, ಮಾಧ್ಯಮಗಳ ಏಕಮುಖ ಪ್ರಚಾರ, ಅಪಾರವಾಗಿರುವ ಕಾರ್ಪೊರೆಟ್‌ಗಳ ಹಣ ಬಲ ಹೀಗೆ ಹತ್ತು ಹಲವು ಕಾರಣಗಳಿವೆ. ಎರಡನೇ ಹಂತದ ಚುನಾವಣೆಯ ಕೊನೆಯ ಒಂದು ಗಂಟೆಯಲ್ಲಿ ಅಂದರೆ ಸಂಜೆ ಐದು ಗಂಟೆಯ ನಂತರ ಸರಾಸರಿ ಶೇಕಡ 6.5ರಷ್ಟು ಮತಗಳು ಸೇರ್ಪಡೆಯಾಗಿವೆ ಎಂಬ ಆರೋಪವೂ ಈಗೀಗ ದಟ್ಟವಾಗಿ ಕೇಳಿಬರುತ್ತಿದೆ.

ಪ್ರಭುತ್ವ ವಿರೋಧಿ ಅಲೆ ಸಾಕಷ್ಟು ಗಟ್ಟಿಯಾಗಿ ಕೇಳಿಬರುತ್ತಿದ್ದದರಿಂದ ಮೋದಿ-ಶಾದ್ವಯರು ಹೆಚ್ಚಿನ ಪೂರ್ವ ತಯಾರಿ ಮಾಡಿದ್ದನ್ನು, ಹೆಚ್ಚು ಪರಿಶ್ರಮ ಪಟ್ಟಿದ್ದನ್ನು ನಾವು ಕಂಡಿದ್ದೇವೆ. ಪರಿಶ್ರಮ ಎಂದರೆ ತೆರೆಯ ಮುಂದಿನ ಪರಿಶ್ರಮ ಮಾತ್ರವಲ್ಲ. ಅದರಲ್ಲಿ ತೆರೆಮರೆಯ ಪರಿಶ್ರಮವೂ ಸೇರುತ್ತದೆ.

8) ಜಿಗ್ನೇಶ್ ಮೇವಾನಿಯ ಗೆಲುವು ಐತಿಹಾಸಿಕವಾದುದು

ಜಿಗ್ನೇಶ್ ಮೇವಾನಿಯವರನ್ನು ಸೋಲಿಸಲು ಆರೆಸ್ಸೆಸ್ ಮತ್ತು ಬಿಜೆಪಿ ಹೈಕಮಾಂಡ್‌ಗಳು ನಿಶ್ಚಯಿಸಿ ತಮ್ಮ ಎಲ್ಲ ಹತ್ಯಾರುಗಳನ್ನು ಪ್ರಯೋಗಿಸಿದ್ದಾಗ್ಯೂ ಅವರು ಗೆದ್ದುಬಂದದ್ದು ಮಾತ್ರ ರೋಚಕವಾದುದು. ಜಿಗ್ನೇಶ್‌ರನ್ನು ಮಣಿಸುವ ಭಾಗವಾಗಿ ಕಾಂಗ್ರೆಸ್‌ನ ಜನಪ್ರಿಯ ನಾಯಕ, ಅದೇ ವಡಗಾಂ ಕ್ಷೇತ್ರದ ಮಾಜಿ ಶಾಸಕ ಮಣಿಲಾಲ್ ವಘೇಲರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜೆಪಿಯಿಂದ ಕಣಕ್ಕಿಳಿಸಿದರು. ವರ್ಷಾನುಗಟ್ಟಲೆಯಿಂದ ಜಿಗ್ನೇಶ್ ಜಾತಿವಾದಿಯೆಂತಲೂ, ಸುಳ್ಳು ದೂರುಗಳನ್ನು ದಾಖಲಿಸಿ ಜನರಿಗೆ ಕಿರುಕುಳ ಕೊಡುತ್ತಾನೆಂತಲೂ, ಪ್ರಚಾರಪ್ರಿಯತೆಗೆ ಬಿದ್ದು ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾನೆಂತಲೂ ನಿರಂತರ ಅಪಪ್ರಚಾರ ನಡೆಸಲಾಯ್ತು.

ಆ ಕ್ಷೇತ್ರದ ಮುಸ್ಲಿಮರನ್ನು ಜಿಗ್ನೇಶ್ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ಯಥೇಚ್ಚವಾಗಿ ನಡೆದವು. ಜಿಗ್ನೇಶ್ ಸೋಲಿಸಲು ಯಥೇಚ್ಚ ಹಣ ಸುರಿಯಲಾಯ್ತು. ಚುನಾವಣೆಯ ದಿನ ಕೆಲವು ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಿಂಬಾಗಿಲಿನಿಂದ ಪ್ರವೇಶಿಸಿ ರಿಗ್ಗಿಂಗ್ ಮಾಡಿಸಿದರು ಎಂದು ಸ್ವತಃ ಜಿಗ್ನೇಶ್ ದೂರಿದರು.

ಇಷ್ಟೆಲ್ಲಾ ಯಾಕಾಗಿ? ಮೋದಿ ಮಾದರಿಯ ರಾಕ್ಷಸ ರಾಜಕಾರಣವನ್ನು ಗಟ್ಟಿಯಾಗಿ ಸದನದ ಒಳಗೆ ಮತ್ತು ಹೊರಗೆ ಪ್ರಶ್ನಿಸುವ ದನಿ ಜಿಗ್ನೇಶರದ್ದು. ಕೇವಲ ವಡಗಾಂ ಮಾತ್ರವಲ್ಲ, ಇಡೀ ಗುಜರಾತಿನಾದ್ಯಂತ ದಮನಿತರ ದನಿಯಾಗಿ ಸುತ್ತಾಡುತ್ತಲೇ ಇರುತ್ತಾರೆ. ಅಷ್ಟು ಮಾತ್ರವಲ್ಲದೆ ದೇಶಾದ್ಯಂತ ಮಹತ್ವದ ಹಲವು ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾ ಯುವಜನರ ಆಶಾಕಿರಣವಾಗಿ ಹೊರಹೊಮ್ಮುತ್ತಿದ್ದಾರೆ.

ಇದು ಸಂಘಿ ಕೂಟದ ಕಣ್ಣು ಕೆಂಪಾಗುವಂತೆ ಮಾಡಿದ ಅಂಶ. ಹೇಗಾದರೂ ಮಾಡಿ ಜಿಗ್ನೇಶ್ ದನಿಯನ್ನು ಮಣಿಸಬೇಕೆಂದು ಷಡ್ಯಂತ್ರ ರಚಿಸಿದ್ದವರಿಗೆ ಈಗ ನಿರಾಶೆಯಾಗಿದೆ. ಜಿಗ್ನೇಶ್ ಮಾಡಿದ್ದ ಕೆಲಸಗಳು ಮತ್ತು ದಣಿವರಿಯದೆ ನಡೆಸಿದ ಹೋರಾಟಗಳನ್ನು ಕಂಡು ಕ್ಷೇತ್ರದ ಜನರು ಬೆಂಬಲಿಸಿದ್ದಾರೆ. ಜಿಗ್ನೇಶ್‌ರ ದನಿ ಇನ್ನೂ ಹೆಚ್ಚಾಗಿ ಮೊಳಗಲಿದೆ.

ಇಲ್ಲಿ ಕಾಂಗ್ರೆಸ್‌ನವರು ಕಲಿಯಬೇಕಾದ ಒಂದು ಪಾಠವಿದೆ. ನೀವು ಜನರ ದನಿಯಾಗಿ ಹೋರಾಡಲು ತಯಾರಾಗಿದ್ದರೆ ಯಾವುದೇ ’ಸುನಾಮಿ’ಯನ್ನಾದರೂ ಎದುರಿಸಿ ಗೆಲ್ಲಬಹುದೆಂಬುದು.

ಈ ಯುವ ಶಾಸಕನಿಗೆ ಓಡಾಡಲು, ಕನಿಷ್ಟ ಚುನಾವಣಾ ಪ್ರಚಾರ ಮಾಡುವುದಕ್ಕಾದರೂ ಸ್ವಂತ ಕಾರು ಇರಲಿಲ್ಲ. ಕೈಯ್ಯಲ್ಲಿ ಹಣವೂ ಇಲ್ಲ. ಶಾಸಕರಿಗೆ ಸಿಗುವ ಸರ್ಕಾರಿ ಭತ್ಯೆಗಳು ಮಾತ್ರ ಈತನ ಆದಾಯ. ಹೀಗಿದ್ದಾಗ್ಯೂ ಜನರನ್ನೇ ಆಶ್ರಯಿಸಿ, ಜನಬಲದಿಂದಲೇ ಗೆದ್ದು ಬಂದ ಜಿಗ್ನೇಶಣ್ಣನಿಗೆ ಹ್ಯಾಟ್ಸಾಫ್.

ಹಿಮಾಚಲ ಪ್ರದೇಶ: ಪರಿಶ್ರಮಕ್ಕೆ ಸಿಕ್ಕ ಫಲ

ಮೋದಿ ’ಸುನಾಮಿ’ ಬಗ್ಗೆ ಬೋಂಗು ಬಿಡುವವರು ಹಿಮಾಚಲದಲ್ಲಿ ಮೋದಿ ಸುನಾಮಿ ಯಾಕೆ ಕೆಲಸ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವ ಗೋಜಿಗೇ ಹೋಗುವುದಿಲ್ಲ. ಬದಲಿಗೆ ಅದು ತೀರಾ ಸಣ್ಣ ರಾಜ್ಯ ಅಂತಲೋ, ಅಲ್ಲಿ ಬಿಜೆಪಿಯ ಒಳಜಗಳಗಳಿಂದ ಸೋತರು ಅಂತಲೋ ಸಬೂಬು ಕಾರಣಗಳನ್ನು ಕೊಡುತ್ತಾರೆ. ಹಿಮಾಚಲ ರಾಜಕಾರಣದ ವಾಸ್ತವ ಗುಜರಾತ್‌ಗಿಂತ ಭಿನ್ನ ಮಾತ್ರವಲ್ಲ ಅಲ್ಲಿ ವಿರೋಧ ಪಕ್ಷವಾಗಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡಿದ ಕಾಂಗ್ರೆಸ್ ಕೂಡ ಭಿನ್ನ.

ಹಿಮಾಚಲದಲ್ಲೂ ಕೂಡ ಮೋದಿಯವರು ತನ್ನ ಮುಖ ನೋಡಿ ಓಟು ಕೊಡಿ ಎಂಬ ಮಾಮೂಲಿ ಡೈಲಾಗ್‌ಗಳನ್ನು ಹರಿಯಬಿಟ್ಟಿದ್ದರು. 32 ಜನರ ಸ್ಟಾರ್ ಕ್ಯಾಂಪೇನರ್‌ಗಳ ತಂಡವೂ ಕೆಲಸ ಮಾಡಿತ್ತು. ಸಾಲದ್ದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರವರ ಗೃಹ ರಾಜ್ಯ ಬೇರೆ. ಹಾಗಾಗಿ ಅದು ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆ ಖಂಡಿತಾ ಆಗಿತ್ತು. ಹೀಗೆ ಬಿಜೆಪಿ ತನ್ನ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸಿದರೂ ಹಿಮಾಚಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಹಿಮಾಚಲ ಪ್ರದೇಶ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಸೋಲು

ಕಾಂಗ್ರೆಸ್ ಗೆಲುವಿಗೆ ಕಾರಣವಾದದ್ದು ರಾಜ್ಯದ ಪ್ರಮುಖ ಸಮಸ್ಯೆಗಳನ್ನು ಚುನಾವಣಾ ಇಶ್ಯೂವಾಗಿಸಿದ್ದು. ಒಂದು, ಹಿಮಾಚಲ ಪ್ರದೇಶದ ರೈತರ ಸಮಸ್ಯೆ. ಸೇಬು ಇಲ್ಲಿನ ಬಹಳ ಪ್ರಮುಖವಾದ ವಾಣಿಜ್ಯ ಬೆಳೆ. ಮೋದಿ ಮಿತ್ರ ಅದಾನಿಯವರು ಹಿಮಾಚಲದಲ್ಲಿ ಸೇಬಿನ ವ್ಯಾಪಾರಕ್ಕಿಳಿದು ರೈತರ ಜೇಬಿಗೆ ಕತ್ತರಿ ಹಾಕುವ ಕಾಯಕದಲ್ಲಿ ಈಗಾಗಲೇ ತೊಡಗಿದ್ದಾರೆ; ಹೀಗಾಗಿ ರೈತರಿಗೂ ಅದಾನಿಗೂ ನಡುವೆ ಜಟಾಪಟಿ ಶುರುವಾಗಿದೆ. ಈ ಸಂಘರ್ಷದಲ್ಲಿ ಕಾಂಗ್ರೆಸ್ ಪಕ್ಷ ಸೇಬು ಬೆಳೆಗಾರರ ಜೊತೆಗೆ ನಿಂತು ನ್ಯಾಯಯುತ ಬೇಡಿಕೆಯ ಭರವಸೆ ಕೊಟ್ಟಿದೆ.

ಎರಡು, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತೇವೆಂಬ ಭರವಸೆ ಮತ್ತೊಂದು ಪ್ರಮುಖ ಅಂಶ. ಹಿಮಾಚಲದಲ್ಲಿ ಸೇನೆಯಲ್ಲಿ ಕೆಲಸ ಮಾಡುವ ಹಾಗೂ ಇತರೆ ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ನಿವೃತ್ತಿ ಜೀವನದಲ್ಲಿ ಪಿಂಚಣಿ ಆಧರಿಸಿ ಬದುಕುವ ಲಕ್ಷಾಂತರ ಕುಟುಂಬಗಳಿವೆ. ಬಿಜೆಪಿ ಸರ್ಕಾರ ಹಳೆಯ ಪಿಂಚಣಿ ಯೋಜನೆ ರದ್ದು ಮಾಡಿದ್ದರಿಂದ ಪಿಂಚಣಿ ವಂಚಿತರು ಸಂಘರ್ಷದ ಹಾದಿ ಹಿಡಿದಿದ್ದರು. ಕಾಂಗ್ರೆಸ್ ಪಕ್ಷ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಭರವಸೆ ನೀಡಿ ಪರಿಣಾಮಕಾರಿ ಪ್ರಚಾರ ಕೈಗೊಂಡಿತ್ತು.

ಸುಖವಿಂದರ್ ಸಿಂಗ್ ಸುಖು

ಪ್ರಚಾರದ ಅಂಶಗಳು ಮಾತ್ರವಲ್ಲದೆ ಕೇಂದ್ರ ನಾಯಕತ್ವ ಕೂಡ ಪ್ರಚಾರಕ್ಕೆ ಸಾಥ್ ನೀಡಿದರು. ಖರ್ಗೆ, ಪ್ರಿಯಾಂಕ ಗಾಂಧಿ ಮುಂತಾದವರು ಹೆಚ್ಚಿನ ಸಮಯ ಕೊಟ್ಟರು. ಜೊತೆಗೆ ಹಿಮಾಚಲ ಕಾಂಗ್ರೆಸ್‌ನಲ್ಲಿ ಕ್ರೆಡಿಬಲ್ ನಾಯಕರ ಒಂದು ತಂಡವೇ ಇತ್ತು. ಪರಸ್ಪರ ಆಂತರಿಕ ತಿಕ್ಕಾಟಗಳಿದ್ದಾಗ್ಯೂ ಎಲ್ಲರೂ ಪೈಪೋಟಿಯಲ್ಲಿ ತಂತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಪರಿಣಾಮವಾಗಿ 68 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿದ್ದಾರೆ. ಸರಿಯಾದ ಕಾರ್ಯತಂತ್ರದೊಂದಿಗೆ ಹೋರಾಡಿದರೆ ಗೆಲುವು ನಿಶ್ಚಿತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಲೇಬೇಕು. ಬಿಜೆಪಿ ಕೋಮುವಾದಿ ಫೈರ್‌ಬ್ರಾಂಡ್ ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಹಿಮಾಚಲದವರೇ. ಆತನ ಜಿಲ್ಲೆಯಲ್ಲಿ ಬಿಜೆಪಿ ಧೂಳೀಪಟವಾಗಿ ಎಲ್ಲ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆರಿಸಿಬಂದಿದೆ. ಅಂದರೆ ಸೋಕಾಲ್ಡ್ ಹಿಂದುತ್ವದ ಐಕಾನ್‌ಗಳಿಗೆ ಹಿಮಾಚಲದ ಜನ ಸೊಪ್ಪು ಹಾಕಿಲ್ಲ ಎಂಬುದು ಸಂತೋಷದ ಸಂಗತಿ.

ನೂತನ ಕಾಂಗ್ರೆಸ್ ಸರ್ಕಾರದ ಬಗ್ಗೆ ಎರಡು ಮಾತು ಹೇಳಲೇಬೇಕು. ಆರಂಭದಲ್ಲಿ ಭಿನ್ನಮತದಂತೆ ಕಂಡುಬಂದಾಗ್ಯೂ ಅದನ್ನು ಶೀಘ್ರವಾಗಿ ಉಪಶಮನ ಮಾಡಿ ಸುಸೂತ್ರವಾಗಿ ಸರ್ಕಾರ ರಚಿಸುವುದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ. ಸಿಎಂ ಗಾದಿಗೇರಿರುವ ಸುಖವಿಂದರ್ ಸಿಂಗ್ ಸುಖು ಅವರ ತಂದೆ ಬಸ್ ಚಾಲಕರಾಗಿದ್ದರು. ಪಕ್ಷದ ರ್‍ಯಾಂಕ್‌ಗಳಲ್ಲೂ ಬಹಳ ಶ್ರಮದಿಂದ ಮೇಲೆ ಬಂದವರು. ಪ್ರಬಲ ಠಾಕೂರ್ ಸಮುದಾಯದವರಾಗಿದ್ದು ಈ ಆಯ್ಕೆಯ ಹಿಂದೆ ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರವಿದೆ. ಜೊತೆಗೆ ವೀರಭದ್ರಸಿಂಗರ ಬಲಗೈಯಂತಿದ್ದ ಮುಖೇಶ್ ಅಗ್ನಿಹೋತ್ರಿಯನ್ನು ಉಪಮುಖ್ಯಮಂತ್ರಿ ಮಾಡಿದ್ದು ಕೂಡ ಪ್ರತಿಭಾ ಸಿಂಗ್ ಬಣಕ್ಕೆ ಸಮಾಧಾನ ತಂದಿದೆ. ಮುಖೇಶ್ ಮತ್ತೊಂದು ಪ್ರಬಲ ಜಾತಿಯಾದ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವುದೂ ಕೂಡ ರಾಜಕೀಯ ಲಾಭ ತಂದುಕೊಡುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಪರಿಶ್ರಮಪಟ್ಟರೆ ಫಲವಿದೆ ಎಂಬುದನ್ನು ಹಿಮಾಚಲ ಪ್ರದೇಶದ ಕಾಂಗ್ರೆಸ್ ನಿರೂಪಿಸಿದೆ.

ಅಜೇಯ ’ಗಾಡ್ ಮದರ್’ ಅಂಡ್ ಸನ್

ಇಷ್ಟೆಲ್ಲಾ ಅಬ್ಬರದ ನಡುವೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಂಧಲ್ ಜಡೇಜ ಎಂಬುವವರು ಕುಟಿಯಾನ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಕಳೆದ ಎರಡು ಬಾರಿ ಇವರು ಇದೇ ಕ್ಷೇತ್ರದಿಂದ ಶಾಸಕರಾಗಿದ್ದವರು. ಆದರೆ ಸಮಾಜವಾದಿ ಪಕ್ಷದಿಂದಲ್ಲ. ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷದಿಂದ. ಆ ಪಕ್ಷ ತೊರೆದು ಈ ಬಾರಿ ಹೊಸ ಪಕ್ಷದ ಚಿಹ್ನೆ ಹಿಡಿದು ಗೆದ್ದಿದ್ದಾರೆ. ’ಗಡಿಯಾರ (ಎನ್‌ಸಿಪಿ ಚಿಹ್ನೆ) ನಿಂತುಹೋಗಿದೆ. ಸೈಕಲ್ (ಸಮಾಜವಾದಿ ಪಕ್ಷದ ಚಿಹ್ನೆ) ಚನ್ನಾಗಿ ಓಡುತ್ತಿದೆ, ಆದ್ದರಿಂದ ನೀವು ಸೈಕಲ್ ಸವಾರಿ ಮಾಡಿ’ ಅಂತ ಪ್ರಚಾರ ಮಾಡಿದ್ದರು.

ಕಂಧಲ್ ಜಡೇಜ

ಈತನಿಗೆ ಪಕ್ಷದ ಚಿಹ್ನೆ ಏನಿದ್ದರೂ ತೋರಿಕೆಗೆ ಮಾತ್ರ. ಹೆಚ್ಚಾಗಿ ಗ್ರಾಮೀಣ ಪ್ರದೇಶವನ್ನು ಆವರಿಸಿರುವ ಈ ಕ್ಷೇತ್ರದಲ್ಲಿ ಭಾರೀ ಜನ ಬೆಂಬಲ ಹೊಂದಿರುವ ಈತ ಮೂಲತಃ ಒಬ್ಬ ಡಾನ್. ಈ ಡಾನ್ ಪಟ್ಟ ಕೂಡ ತನ್ನ ತಾಯಿ ಸಂತೊಕ್ಬೆನ್ ಜಡೆಜಾರಿಂದ ಬಂದದ್ದು. 2012ರಲ್ಲಿ ಹೃದಯಾಘಾತದಿಂದ ತೀರಿಕೊಂಡ ಆಕೆ ಪೋರಬಂದರ್ ಸುತ್ತಮುತ್ತಲ ಅಂಡರ್‌ವರ್ಲ್ಡ್‌ಅನ್ನು ನಿಯಂತ್ರಿಸುತ್ತಿದ್ದರು. ಜನತಾ ದಳದ ಅಭ್ಯರ್ಥಿಯಾಗಿ ಒಮ್ಮೆ ಶಾಸಕಿ ಕೂಡ ಆಗಿದ್ದರು. ಈಕೆಯ ಕತೆಯನ್ನಾಧರಿಸಿ ’ಗಾಡ್ ಮದರ್’ ಎಂಬ ಬಾಲಿವುಡ್ ಸಿನಿಮಾ ಕೂಡ ಬಂದಿದೆ. ಹತ್ತಾರು ಕೊಲೆ ಕೇಸುಗಳು ಒಳಗೊಂಡಂತೆ ನೂರಾರು ಕೇಸುಗಳು ಈ ಗ್ಯಾಂಗ್ ಮೇಲಿವೆ.

ಇಲ್ಲಿ ಮತ್ತೊಂದು ವೈರುಧ್ಯದ ಸಂಗತಿಯಿದೆ. ಈ ಕ್ಷೇತ್ರ ಸೌರಾಷ್ಟ್ರ ಭಾಗದ ಪೋರಬಂದರ್ ಜಿಲ್ಲೆಯ ಕರಾವಳಿ ತೀರದಲ್ಲಿದ್ದು ಮಹಾತ್ಮ ಗಾಂಧಿಯ ತವರು ಜಿಲ್ಲೆಯಾಗಿದೆ. ಸುಮಾರು ನಾಲ್ಕು ದಶಕಗಳಿಂದ ಇಲ್ಲಿ ಈ ಡಾನ್‌ಗಳದೇ ಸಾಮ್ರಾಜ್ಯ. ನಿರಂತರವಾಗಿ ಗೆದ್ದು ಬರಲು ಕಾರಣ ಜನಸಾಮಾನ್ಯರೊಂದಿಗಿರುವ ಇವರ ಸಂಬಂಧ. ತಮ್ಮ ಕ್ಷೇತ್ರದ ಮತದಾರರ ಕೈಗೆ ಸುಲಭವಾಗಿ ಸಿಗುತ್ತಾರೆ ಮತ್ತು ತಮ್ಮ ಕೆಲಸ ಮಾಡಿಕೊಡುತ್ತಾರೆ ಎಂಬುದು ಇವರ ಬಗ್ಗೆ ಇರುವ ಜನಜನಿತ ಅಭಿಪ್ರಾಯ.

ಇಲ್ಲಿ ಮೋದಿ ಅಲೆಗಿಲೆ ಯಾವುದೂ ತಟ್ಟೋದಿಲ್ಲ. ಯಾರೇ ಕೂಗಾಡಲಿ, ಊರೇ ಹೋರಾಡಲಿ ಅವರ ನೆಮ್ಮದಿಗೆ ಭಂಗವಿಲ್ಲ. ಅಂದಹಾಗೆ ಸೋಕಾಲ್ಡ್ ಸುನಾಮಿ ಎದ್ದಿರುವ ಈ ಬಾರಿ ಮತ್ತಷ್ಟು ಹೆಚ್ಚಿನ ಅಂತರದೊಂದಿಗೆ ಕಂಧಲ್ ಜಡೇಜ ಗೆದ್ದುಬಂದಿದ್ದಾರೆ. ಜಡೇಜ ಪಡೆದ ಮತಗಳು 60,163, ಆದರೆ ಬಿಜೆಪಿ ಅಭ್ಯರ್ಥಿ ಪಡೆದ ಮತಗಳು 33,532. ಈ ಫಲಿತಾಂಶ ಏನನ್ನು ತೋರಿಸುತ್ತದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...