Homeಚಳವಳಿಲೋಹಿಯಾ ಎಂಬ ಬದ್ಧತೆಯ ಚೈತನ್ಯ

ಲೋಹಿಯಾ ಎಂಬ ಬದ್ಧತೆಯ ಚೈತನ್ಯ

- Advertisement -
- Advertisement -

ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಅರ್ಥಶಾಸ್ತ್ರದಲ್ಲಿನ ಸಂಶೋಧನೆಯ ಸಲುವಾಗಿ ಕಳೆದ ಶತಮಾನದ ಮೂವ್ವತ್ತರ ದಶಕದ ಆದಿಭಾಗದಲ್ಲಿ (1930) ರಾಮಮನೋಹರ ಲೋಹಿಯಾ ಜರ್ಮನಿಗೆ ತೆರಳಿದರು. ಅವರು ಅಪರಿಮಿತ ಉತ್ಸಾಹದಿಂದಲೇ ಕಾರ್ಲ್‍ಮಾಕ್ರ್ಸ್‍ನ ಮಹತ್ವಪೂರ್ಣ ಬರಹಗಳನ್ನು ಅಧ್ಯಯನ ಮಾಡಿದರು. ಗಾಂಧೀಜಿಯವರ ಅಹಿಂಸೆ, ಸ್ವಾತಂತ್ರ್ಯ, ಸಮಾನತೆ, ವಿಕೇಂದ್ರೀಕರಣ ಮತ್ತು ತಾನು ಅರ್ಥೈಸಿಕೊಂಡ ರೀತಿಯಲ್ಲಿ ಜನಸಮುದಾಯದ ಹಿತಕ್ಕೆ ತನ್ನನ್ನು ಅಕ್ಷರಶಃ ತೆತ್ತುಕೊಳ್ಳುವ ಗುಣಗಳು ಲೋಹಿಯಾರಲ್ಲಿ ಹದಿಹರೆಯದಲ್ಲಿಯೇ ಮೈಗೂಡಿದ್ದವು. ಜೊತೆಗೆ ಸತ್ಯದ ಸಕಲ ಸೂಕ್ಷ್ಮಗಳಿಗೂ ಮನಸ್ಸನ್ನು ಸದಾ ಕಾಲ ತೆರೆದಿಟ್ಟುಕೊಳ್ಳಬೇಕೆನ್ನುವ ಪ್ರಜಾಸತ್ತಾತ್ಮಕ ಹಠದ ಕಾಳಜಿಗಳಿಂದ ಪ್ರಭಾವಿತರಾಗಿದ್ದ ಲೋಹಿಯಾ ತೀವ್ರ ಸಂವೇದನಾಶೀಲ ಚಿಂತಕರಾಗಿದ್ದರು. ಲೋಹಿಯಾ ಅವರು ತಮ್ಮ ಕಾಲದ ಎಲ್ಲ ಪುರೋಗಾಮಿ ಚಿಂತನೆಗಳ ಬೆಳಕಿನಲ್ಲಿ ಭಾರತದ ಸುಡುವಾಸ್ತವಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಹಾಗೂ ಅವುಗಳಿಗೆ ಮಾನವೀಯ ಅಂತಃಕರಣದ ಅಮೃತಸ್ಪರ್ಶವನ್ನು ನೀಡುವ ಬಗೆ ಯಾವುದೆಂಬ ಬಗ್ಗೆ ಕಾಲಕಾಲಕ್ಕೆ ಗಾಢವಾಗಿ ಧ್ಯಾನಿಸಿದವರು. ಹೋರಾಟದ ಹಲವಾರು ಯೋಜನೆಗಳನ್ನು ಇವರು ಭಾರತದ ಒಳಗೆ ಮತ್ತು ಹೊರಗೆ ಹಾಗೂ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಹಮ್ಮಿಕೊಳ್ಳುತ್ತಲೇ ಉದ್ದಕ್ಕೂ ಜೀವ ಸವೆಸಿದವರು. ಇಂತಹ ಮಹಾನ್ ಸಾಧಕರ ಚಿಂತನೆ, ತ್ಯಾಗ ಮತ್ತು ಜೀವಪರ ಆಲೋಚನೆಗಳು ನಮ್ಮೆಲ್ಲರ ನಡುವೆ ಚರ್ಚೆಗೆ ಒಳಗಾಗಬೇಕು. ಹಾಗೂ ಆಶಾದಾಯಕವಾದ ಜನಪರ ಚಟುವಟಿಕೆಗಳು ಸದಭಿರುಚಿಯ ಆಕಾಂಕ್ಷೆಗಳ ತುಂಬು ಚೌಕಟ್ಟಿನಲ್ಲಿ ನಿರಂತರವಾಗಿ ಎಲ್ಲೆಲ್ಲೂ ಕುಡಿಯೊಡೆಯುತ್ತಿರಬೇಕು. ಈ ಹಂಬಲದ ದ್ಯೋತಕವಾಗಿ ಅರಿವಿನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುವ ನಿಲುವಿಗೆ ಬದ್ಧರಾಗಿರುವ ಅನೇಕರನ್ನು ರಾಮಮನೋಹರ ಲೋಹಿಯಾ ಬರಹಗಳು ಪ್ರೇರೇಪಿಸುವೆ. ಲೋಹಿಯಾ ನಮ್ಮನ್ನಗಲಿ ಐದಾರು ದಶಕಗಳು ಕಳೆದ ನಂತರ ಅವರ ಬರಹಗಳು ಹಲವು ಸಂಪುಟಗಳಲ್ಲಿ ನಮ್ಮ ಕೈಸೇರಿವೆ. ನಾಡಿನ ಯಾವ ಮೂಲೆಗೆ ತೆರಳಿದರೂ ಈ ಹೊತ್ತಗೆಗಳ ಪ್ರಕಟಣೆಯ ಹಿಂದಿರುವ ಆರೋಗ್ಯಕರ ತುಡಿತಗಳನ್ನು ಕುರಿತು ಕೊಂಡಾಡುವವರು ಎಡತಾಕುತ್ತಿರುತ್ತಾರೆ. ಹಾಗೆಯೇ ಈ ಸಂಪುಟಗಳ ಹುಡುಕಾಟದಲ್ಲಿರುತ್ತಾರೆ. ನಮ್ಮ ನಡುವಣ ಕಡುಬಡವ ಶ್ರಮಜೀವಿ ಬಂಧುಗಳು ಮತ್ತು ಸಾಮಾಜಿಕ ಆರ್ಥಿಕ ಕೊರತೆಗಳ ಹಿನ್ನೆಲೆಗಳಿಂದ ಬಂದಿರುವ ಎಲ್ಲಾ ತರುಣ ತರುಣಿಯರೂ ಸಹ ಅನಾಯಾಸವಾಗಿ ಕೊಂಡು ಓದುವ ಸಂತೋಷಕ್ಕೆ ಒಳಗಾಗಲೆನ್ನುವ ಕಾರಣದಿಂದಾಗಿ ಕರ್ನಾಟಕ ಸರ್ಕಾರವು ಈ ಗ್ರಂಥಗಳನ್ನು ಅತ್ಯಂತ ಸುಲಭ ಬೆಲೆಗೆ ದೊರೆಯುವ ಸೌಲಭ್ಯವನ್ನು ಒದಗಿಸಿರುವುದು ಶ್ಲಾಘನೀಯವಾದ ಕ್ರಮವಾಗಿದೆ.
ವಿಶ್ವಮಾನವತತ್ವದ ಆಶಯಗಳಿಗೆ ಉದ್ದಕ್ಕೂ ಬದ್ಧರಾಗಿದ್ದ ಕುವೆಂಪು ಅವರು ಈ ಸಂಬಂಧದ ಅನಿಷ್ಟಕಾರಕ ಅಸಮಾನತೆಯ ಕ್ರೌರ್ಯಗಳಿಗೆ ಕಡುವಿರೋಧಿಯಾಗಿದ್ದು, ತಮ್ಮೆಲ್ಲ ಬರಹಗಳಲ್ಲಿ ಇಡೀ ಜನಸಮುದಾಯದ ಏಳಿಗೆಗಾಗಿ ಒಂದೇಸಮನೆ ತುಡಿಯುತ್ತಿರುವ ಬಗೆಗೆ ಅರಿತುಕೊಂಡಿದ್ದ ಲೋಹಿಯಾ ಅವರು ಒಮ್ಮೆ ಕರ್ನಾಟಕದ ತಮ್ಮ ಆತ್ಮೀಯ ಒಡನಾಡಿಗಳಾದ ಶಾಂತವೇರಿ ಗೋಪಾಲಗೌಡರೇ ಮುಂತಾದವರ ಜೊತೆಗೂಡಿ ಕುವೆಂಪು ಅವರನ್ನು ಕಂಡು ಸುದೀರ್ಘವಾಗಿ ಚರ್ಚಿಸಿದ್ದರು. ಲೋಹಿಯಾ ಅವರ ಮುಕ್ತಮನಸ್ಸು ಮತ್ತು ಹೋರಾಟದ ಹೆಜ್ಜೆಗಳನ್ನು ಆಳವಾಗಿ ಗಮನಿಸಿದ್ದ ಕುವೆಂಪು ಅವರು 1971ರಷ್ಟು ಹಿಂದೆಯೇ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಎಂ.ಡಿ.ನಂಜುಂಡಸ್ವಾಮಿ ಅವರು ಜೊತೆಗೂಡಿ ಅನುವಾದಿಸಿ ಸಂಪಾದಿಸಿದ್ದ “ಲೋಹಿಯಾ” ಎಂಬ ಶೀರ್ಷಿಕೆಯಲ್ಲಿ ಹೊರಬಂದ ಲೋಹಿಯಾ ಸೂಕ್ತಿಗಳ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಈ ಮನಸಂಪನ್ನ ಸಮಾಜವಾದಿಯ ಪ್ರಖರವಾದ ವಿಚಾರಧಾರೆಯು ಎಲ್ಲ ಭಾಷೆಗಳಲ್ಲಿಯೂ ದೊರೆಯುವಂತಾಗಬೇಕೆಂದು ಹೃದಯ ತುಂಬಿ ಹಾರೈಸಿದ್ದರು:
“ಮಹಾತ್ಮ ಗಾಂಧೀಜಿಯ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿ ಸ್ವಸುಖ, ಸ್ವಲಾಭ, ಸ್ವಾರ್ಥಗಳನ್ನೆಲ್ಲ ತ್ಯಾಗ ಮಾಡಿ, ಅಖಿಲ ಭಾರತೀಯ ಸುಪ್ರಸಿದ್ಧರಾದ ವ್ಯಕ್ತಿಗಳು ಹಲವರಿದ್ದಾರೆ. ಆದರೆ ಮತ-ಧರ್ಮ ಸಂಬಂಧವಾದ ಮೂಢ, ಅರ್ಧಮೂಢ ಭಾವನೆಗಳಿಂದ ವಿಮುಕ್ತರಾಗಿ, ತುದಿಯವರೆವಿಗೂ ವೈಜ್ಞಾನಿಕ ದೃಷ್ಟಿಯನ್ನೂ, ವೈಚಾರಿಕ ಬುದ್ಧಿಯನ್ನೂ ಮೆರೆದು, ನಾಡಿನ ತರುಣ ವರ್ಗದಲ್ಲಿ ಸ್ವಮತ, ಸ್ವಜಾತೀಯ ಮತ್ತು ಪ್ರಾದೇಶಿಕವಾದ ಸಂಕುಚಿತ ಭಾವಗಳಿಂದ ದೂರವಾಗಿ ವಿಚಾರಪರತೆಯನ್ನು ಪ್ರಚೋದಿಸಿದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ರಾಮಮನೋಹರ ಲೋಹಿಯಾ ಅವರು ಸುವಿಶೇಷ ಗಣ್ಯರೂ ಮಾನ್ಯರೂ ಆಗಿದ್ದಾರೆ. ವೈಜ್ಞಾನಿಕತೆ ಮತ್ತು ವೈಚಾರಿಕತೆಗಳಲ್ಲಿ ಜವಾಹರಲಾಲ್ ನೆಹರೂ ಅವರು, ಆನುವಂಶಿಕವಾಗಿ, ಸಂಸ್ಕಾರರೂಪವಾಗಿ, ರಕ್ತಗತವಾಗಿ ಬಂದಿದ್ದ ಶ್ರೀಮಂತಿಕೆಯ ಉಚ್ಚವರ್ಗದ ಮತ್ತು ಬೂರ್ಜುವಾ ಮನೋಧರ್ಮದ ಪ್ರಭಾವದಿಂದ ಪಾರಾಗಲು ಸಾಧ್ಯವಾಗಲಿಲ್ಲ ಎಂಬುದು ಅವರ ಸ್ವಾತಂತ್ರ್ಯೋತ್ತರ ಜೀವಿತದಲ್ಲಿ ಸುವ್ಯಕ್ತವಾಗುತ್ತದೆ. ಅಲ್ಲದೆ ಮಹಾಪ್ರಧಾನಿಯ ಪಟ್ಟದಲ್ಲಿ ಸುಸ್ಥಿರರಾಗಿ ಅಧಿಕಾರರೂಢರಾದ ಮೇಲೆ ಹಿಂದಿನ ತಮ್ಮ ತ್ಯಾಗ ಜೀವನದ ಪ್ರತೀಕಾರ ಸ್ವರೂಪವಾಗಿ ಸಮಗೈಯಾಗಿ ಸರಿದೂಗುವಷ್ಟರಮಟ್ಟಿಗೆ ಭೋಗ ಜೀವನದ ಸುಖಪರತೆಗೆ ವಶರಾಗಿ ಮಹಾತ್ಮಾಜಿಯವರ ಸರಳ ಜೀವನಮಾರ್ಗದಿಂದ ದೂರವಾಗುತ್ತಾ ಹೋದರು. ವೈಯಕ್ತಿಕ ಜೀವನದಲ್ಲಿಯೂ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿಯೂ ಲೋಹಿಯಾ ಅವರಾದರೋ ಭೋಗಜೀವನಕ್ಕಾಗಲಿ ಅಧಿಕಾರ ಲಾಲಸೆಗಾಗಲಿ ಸಿಲುಕದೆ, ತಾವು ಪಾಶ್ಚಾತ್ಯ ಅರ್ಥಶಾಸ್ತ್ರ ಮತ್ತು ರಾಜಕೀಯಶಾಸ್ತ್ರಗಳಿಂದ ಕಲಿತ ತತ್ವಗಳನ್ನು ಗಾಂಧೀಜಿಯ ಸತ್ಯ, ಅಹಿಂಸೆ ಮತ್ತು ಸರ್ವೋದಯ ತತ್ವಗಳಿಂದ ಶೋಧಿಸಿ, ತಮ್ಮದೇ ಆದ ಒಂದು ವಿಶಿಷ್ಟ ಭಾರತೀಯ ಸಮಾಜವಾದವನ್ನು ರೂಪಿಸಿಕೊಂಡು, ಅದರ ಸ್ಥಾಪನೆಗಾಗಿ ಹೋರಾಟವನ್ನು ಮುಂದುವರಿಸಿ, ಸ್ವಾತಂತ್ರ್ಯೋತ್ತರದಲ್ಲಿಯೂ ಸ್ವಾತಂತ್ರ್ಯಪೂರ್ವದ ಕ್ಲೇಶ ಕಷ್ಟಗಳನ್ನೇ ಅನುಭವಿಸುತ್ತಾ ಆಹುತಿಯಾದರು, ತಾನೇ ಹೊತ್ತಿಸಿದ ಯಜ್ಞಾಗ್ನಿ ಜ್ವಾಲೆಯಲ್ಲಿ!
ಅವರು ಸತತವೂ ಸಕ್ರಿಯ ರಾಜಕೀಯರಂಗದ ಹೋರಾಟದಲ್ಲಿ ಮುಂಚೂಣಿಯ ಯೋಧರಾಗಿರುತ್ತಿದ್ದರೂ ಹಿಂದಿಯಲ್ಲಿಯೂ ಇಂಗ್ಲೀಷ್‍ನಲ್ಲಿಯೂ ಅನೇಕ ಶಾಸ್ತ್ರೀಯವೂ ವೈಜ್ಞಾನಿಕದೃಷ್ಟಿಪೂರ್ಣವೂ ಆಗಿರುವ ಪ್ರೌಢಗ್ರಂಥಗಳನ್ನು ರಚಿಸಿ ಹೋಗಿದ್ದಾರೆ. ರಾಜಕೀಯ ರಂಗದ ಅಸೂಯಾ, ಈಷ್ರ್ಯಾ, ದ್ವೇಷ ಕಾರಣಗಳಿಂದಾಗಿಯೂ ಅವರು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕೈಗೊಂಡ ನಿಷ್ಠುರಸಮರ ಕಾರಣದಿಂದಾಗಿಯೂ, ಇಂಗ್ಲೀಷ್ ವಿಚಾರದಲ್ಲಿ ಅವರು ತಾಳಿದ ದಿಟ್ಟ ಭಂಗಿಯಿಂದ ಕುಪಿತಗೊಂಡ ದಾಸ್ಯಮನೋಧರ್ಮದ ಇಂಗ್ಲೀಷ್ ಪತ್ರಿಕೆಗಳ ಮೌನಪಿತೂರಿಯಿಂದಲೂ, ಮತಮೌಢ್ಯದ ವಿಚಾರವಾಗಿ ಅವರು ಬೀಸುತ್ತಿದ್ದ ವಿಚಾರಖಡ್ಗಾಘಾತಕ್ಕೆ ಸಿಲುಕಿದವರ ಶಿಖಂಡಿಕ್ರೋಧದ ದೆಸೆಯಿಂದಲೂ ಅವರ ವಿಚಾರಧಾರೆಗೆ ಸಾಕಷ್ಟು ಪ್ರಕಟಣೆ ಪ್ರಚಾರಗಳು ದೊರೆಯಲಿಲ್ಲ. ಇನ್ನು ಮುಂದಾದರೂ ಅವು ಎಲ್ಲ ಭಾಷೆಗಳಲ್ಲಿಯೂ ದೊರೆಯುವಂತಾಗಿ ಮುಂದಿನ ಪೀಳಿಗೆಯ ತರುಣರು ವೈಜ್ಞಾನಿಕ ದೃಷ್ಟಿಸಂಪನ್ನರಾಗಿ ವಿಚಾರ ಮಾರ್ಗದಲ್ಲಿ ದೇಶ ಸೇವೆಗೆ ಮುಂಬರಿಯುವಂತಾಗಲಿ”.
ಭಾರತದ ಅವಕಾಶವಿಹೀನ ಜನವರ್ಗಗಳ ನಿತ್ಯಧ್ಯಾನದಲ್ಲಿಯೇ ಬದುಕಿದ್ದು, ಭೂಮಿತಾಯಿಯ ಮಡಿಲ ಮಕ್ಕಳೆಲ್ಲರೂ ಯಾವುದೇ ಆತಂಕಕಾರಕ ಗಡಿಗೆರೆಗಳ ಹಂಗಿಲ್ಲದೆ ಇಡೀ ವಿಶ್ವದ ಆರೋಗ್ಯಪೂರ್ಣ ಪ್ರಜೆಗಳಾಗಿ ಎಲ್ಲ ಬಗೆಯ ಮುಕ್ತಚಿಂತನೆಯ ಬೆಳಕಿನಲ್ಲಿ ನೆಲೆಗೊಳ್ಳಬೇಕೆನ್ನುವ ಲೋಹಿಯಾ ಅವರ ಕನಸುಗಳು ಮಾವನ ಜೀವನದಲ್ಲಿ ಎಷ್ಟು ಮಹತ್ವಪೂರ್ಣವಾದವುಗಳೆಂಬುದನ್ನು ಮೇಲಿನ ಮಾತುಗಳಲ್ಲಿ ಕುವೆಂಪು ಅವರು ಸ್ಪಷ್ಟವಾಗಿ ಹಿಡಿದಿಟ್ಟಿದ್ದಾರೆ. ಪಂಚಭೂತಗಳ ವಂಚನೆರಹಿತ ಗುಣಧರ್ಮದ ವಿಶಾಲ ಚೌಕಟ್ಟಿನಲ್ಲಿ ಉದಾರವಾದ ಮನಸ್ಸಿನಿಂದ ಬದುಕಬೇಕಾಗಿರುವ ನಾವೆಲ್ಲ ಸಂಕುಚಿತವಾದ ಆಲೋಚನೆಯ ಯಾವುದೇ ಒಂದು ಜಾತಿ, ಧರ್ಮ, ವರ್ಗ, ಲಿಂಗ, ಭಾಷೆ, ಪ್ರದೇಶಗಳ ಹಂಗಿಲ್ಲದೆ ನಿರಾಳವಾಗಿದ್ದು, ಪರಸ್ಪರ ಪ್ರೀತ್ಯಾದರಗಳ ಹೊಳೆಯಲ್ಲಿ ಮಿಂದುಮಡಿಯಾಗಿರುವ ಜನಸಮುದಾಯವಾಗಿದ್ದು, ನೈತಿಕಧೈರ್ಯದ ಸಾಕ್ಷಾತ್ ಪ್ರತಿರೂಪಗಳಂತೆ ಚೈತನ್ಯವಂತರಾಗಿ ಜೀವಿಸುವ ಅಮೃತಕ್ಷಣಗಳ ನಿರಂತರ ಹಾರೈಕೆಯಲ್ಲಿದ್ದ ರಾಮಮನೋಹರರು ಸದಭಿರುಚಿಯ ಬದುಕಿಗೆ ಬದ್ಧರಾಗಿದ್ದರು. ಕರ್ನಾಟಕದಲ್ಲಿ ಐವತ್ತು, ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಸಮಾಜವಾದಿ ಚಳವಳಿಯು ಸಾಕಷ್ಟು ಪರಿಣಾಮಕಾರಿಯಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿದ್ದ ಅವಧಿಯಲ್ಲಿ ಶಿವಮೊಗ್ಗ ಭಾಗದಿಂದ ಬಂದ ಪ್ರತಿಭಾವಂತ ಸಾಹಿತಿಗಳಾದ ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದವರು ತಮ್ಮ ಹದಿಹರೆಯದ ದಿನಗಳಿಂದಲೇ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿದ್ದು, ಹೊಸ ಸಾಂಸ್ಕøತಿಕ ಬದುಕಿನ ಆಶಯಗಳನ್ನು ತೀವ್ರವಾಗಿ ಪ್ರತಿಪಾದಿಸತೊಡಗಿದರು. ಇದರ ಪರಿಣಾಮವಾಗಿ ಸಂವೇದನಾಶೀಲ ತರುಣ ಲೇಖಕರೆಲ್ಲರೂ ಲೋಹಿಯಾ ಸಮಾಜವಾದದಲ್ಲಿ ತೀವ್ರವಾದ ಆಸಕ್ತಿಯನ್ನು ಬೆಳೆಸಿಕೊಂಡು ಕ್ರಿಯಾಶೀಲರಾದರು. ಹಾಗೆಯೇ – ಮಾಕ್ರ್ಸ್, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ಫುಲೆ, ನಾರಾಯಣಗುರು ಮುಂತಾದ ಜನಪರ ಕಾಳಜಿಗಳ ಚಿಂತಕರು ಹಾಗೂ ಹೋರಾಟಗಾರರ ಬದುಕು ಮತ್ತು ಸಾಧನೆಯನ್ನು ಕುರಿತ ಅಧ್ಯಯನಕ್ಕೆ ಹೆಚ್ಚಿನ ಒತ್ತು ದೊರೆಯಿತು. ಈ ಸಂಬಂಧದ ಬರಹಗಳು ಅಲ್ಲಲ್ಲಿ ಪ್ರಕಟವಾಗತೊಡಗಿದ್ದವು. ಅಂಬೇಡ್ಕರ್ ಲೇಖನಗಳ ಎಲ್ಲಾ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಹಾಗೂ ಆಸಕ್ತರೆಲ್ಲರಿಗೂ ತಲುಪಿಸುವ ಸ್ವಾಗತಾರ್ಹವಾದ ನಿರ್ಧಾರವನ್ನು ಕರ್ನಾಟಕ ಸರ್ಕಾರವು ಕೈಗೊಂಡಿತು. ಇದರ ಬೆನ್ನಲ್ಲಿಯೇ ಲೋಹಿಯಾ ಬರಹಗಳ ವಿವಿಧ ಸಂಪುಟಗಳನ್ನು ಕನ್ನಡ ಓದುಗರಿಗೆ ಇದೇ ರೀತಿಯಲ್ಲಿ ಉಡುಗೊರೆಯಾಗಿ ನೀಡಿರುವ ಸರ್ಕಾರದ ತೀರ್ಮಾನವು ಶ್ಲಾಘನೀಯವಾದುದು. ಅಂಬೇಡ್ಕರ್ ಮತ್ತು ಲೋಹಿಯಾ ಅವರ ಬರಹಗಳು ಸಮರ್ಥವಾಗಿ ಕಟ್ಟಿಕೊಡುವ ಭಾರತದ ಸುಡುವಾಸ್ತವಗಳ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಎಲ್ಲ ಭಾರತೀಯ ಭಾಷೆಗಳಲ್ಲಿಯೂ ದೊರೆಯುವಂತೆ ಆದಾಗ ಇಡೀ ರಾಷ್ಟ್ರದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರಭಾವದ ಆದರ್ಶಗಳ ಸಾಂಸ್ಕøತಿಕ ಆಂದೋಲನವೊಂದು ಕ್ರಮೇಣ ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

– ಪ್ರೊ. ಕಾಳೇಗೌಡ ನಾಗವಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...