Homeಮುಖಪುಟಮಧ್ಯಪ್ರದೇಶ: ಹಿಂದುತ್ವ ಗುಂಪಿನ ರ್‍ಯಾಲಿಯಿಂದಾಗಿ ಕೋಮು ಘರ್ಷಣೆ; 12ಕ್ಕೂ ಹೆಚ್ಚು ಮುಸ್ಲಿಮರ ಬಂಧನ

ಮಧ್ಯಪ್ರದೇಶ: ಹಿಂದುತ್ವ ಗುಂಪಿನ ರ್‍ಯಾಲಿಯಿಂದಾಗಿ ಕೋಮು ಘರ್ಷಣೆ; 12ಕ್ಕೂ ಹೆಚ್ಚು ಮುಸ್ಲಿಮರ ಬಂಧನ

ಘಟನೆಗೆ ಸಂಬಂಧಪಡದ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯೊಂದನ್ನು ಅಧಿಕಾರಿಗಳು ಉರುಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಭೋಪಾಲ್: ಬಲಪಂಥೀಯ ಹಿಂದುತ್ವ ಗುಂಪುಗಳು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮನವಾರ್ ತೆಹಸಿಲ್‌ನಲ್ಲಿ ‘ಶೌರ್ಯ ಯಾತ್ರೆ’ ನಡೆಸಿದ್ದು, ಮುಸ್ಲಿಮರು ವಾಸಿಸುವ ಪ್ರದೇಶಕ್ಕೆ ಪೊಲೀಸರ ಸೂಚನೆಗಳಿಗೆ ವಿರುದ್ಧವಾಗಿ ಪ್ರವೇಶಿಸಿದ್ದು ಘರ್ಷಣೆಗೆ ಕಾರಣವಾಗಿದೆ.

ಆದರೆ ಪೊಲೀಸರು ಆರೋಪಿಗಳಲ್ಲಿ ಮುಸ್ಲಿಮರನ್ನು ಮಾತ್ರ ಬಂಧಿಸಿದ್ದಾರೆ. ಮೂವರು ಆರೋಪಿಗಳಿಗೆ ಆಶ್ರಯ ನೀಡಿದರೆಂಬ ಆರೋಪದಿಂದಾಗಿ ಮುಸ್ಲಿಂ ವ್ಯಕ್ತಿಯ ಮನೆಯೊಂದನ್ನು ಧ್ವಂಸಗೊಳಿಸಲಾಗಿದೆ.

ಡಿಸೆಂಬರ್ 23, 2021 ರಂದು, ಹಿಂದುತ್ವ ಗುಂಪುಗಳು DJ ಹಾಡುಗಳೊಂದಿಗೆ ಬೃಹತ್ ‘ಶೌರ್ಯ ಯಾತ್ರೆ’ಯನ್ನು ನಡೆಸಿದವು. ಗಾಂಧಿನಗರ ಪ್ರದೇಶಕ್ಕೆ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ತಡೆದರು.

ಪೊಲೀಸರ ಕ್ರಮದಿಂದಾಗಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆ ಪ್ರಾರಂಭವಾಗಿದೆ ಎಂಬ ವದಂತಿ ಹರಡಲು ಕಾರಣವಾಯಿತು. ಈ ಪ್ರದೇಶದಲ್ಲಿ 2016ರಲ್ಲಿ ಇದೇ ರೀತಿಯ ಘರ್ಷಣೆ ನಡೆದಿತ್ತು.

ಜನವರಿ 12, 2016ರಂದು, ಮನವಾರ ನಗರದಲ್ಲಿ ವಿಶ್ವ ಹಿಂದೂ ಪರಿಷತ್‌ನ ‘ಶೌರ್ಯ ಯಾತ್ರೆ’ಯ ಸಂದರ್ಭದಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಹಿಂಸಾಚಾರದ ಸಮಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಹತ್ತಾರು ಅಂಗಡಿಗಳನ್ನು ಸುಟ್ಟು ಹಾಕಲಾಗಿತ್ತು. ಅದೇ ರೀತಿಯ ಪ್ರಕರಣ ಮತ್ತೆ ಮರುಕಳಿಸಿದೆ.

ಗಲಭೆ, ಕೊಲೆ ಯತ್ನ, ಅಪಹರಣ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಧಾರ್ ಪೊಲೀಸರು ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ಮನವಾರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಗುರುತಿಸಲ್ಪಟ್ಟ 30 ಮಂದಿ ಹಾಗೂ ಅಪರಿಚಿತ 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಹನ್ನೆರಡು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರೆಲ್ಲರೂ ಮುಸ್ಲಿಮರಾಗಿದ್ದಾರೆ.

“ಹಿಂದುತ್ವದ ಗುಂಪು ಮುಸ್ಲಿಮರು ಹೆಚ್ಚು ವಾಸಿಸುವ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸಿತು. ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದರು. ಆದರೆ ಆ ಗುಂಪು ಪೊಲೀಸ್ ಬ್ಯಾರಿಕೇಡ್‌ಗಳನ್ನು ತಳ್ಳಲು ಪ್ರಯತ್ನಿಸಿತು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಧಾರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧೀರಜ್ ಪಾಟಿದಾರ್, “ಕಲ್ಲು ತೂರಾಟದಲ್ಲಿ ಗಾಯಗೊಂಡ ಸ್ಥಳೀಯರ ದೂರಿನ ಆಧಾರದ ಮೇಲೆ ಮತ್ತು ಘಟನೆಯ ವಿಡಿಯೋ ತುಣುಕಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇತರರನ್ನು ಬಂಧಿಸಲು ಕ್ರಮ ಜರುಗಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ವ್ಯಕ್ತಿಯ ಮನೆ ಧ್ವಂಸ

ಘಟನೆ ನಡೆದ ಎರಡು ದಿನಗಳ ನಂತರ ಜಿಲ್ಲಾಡಳಿತವು 55 ವರ್ಷದ ಖಲೀಲ್ ಖತ್ರಿ ಅವರ ಮೂರು ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಿದೆ. ಒಟ್ಟು 45 ಲಕ್ಷ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ. ಮೂವರು ಆರೋಪಿಗಳು ಈ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ನೋಟಿಸ್ ನೀಡಿದ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕಟ್ಟಡಕ್ಕೆ ಅನುಮತಿಯನ್ನು ಪಡೆದುಕೊಳ್ಳಲು ಮಾಲೀಕರು ವಿಫಲರಾಗಿದ್ದರು.

“ಇತ್ತೀಚಿನ ಕಲ್ಲು ತೂರಾಟದ ಘಟನೆಯಲ್ಲಿ ನನ್ನ ಬಾಡಿಗೆದಾರರಲ್ಲಿ ಮೂವರ ಹೆಸರುಗಳು ಸೇರಿದ್ದವು. ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ ಎಂದು ನಾನು ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ನಿರ್ಮಿಸಿದ ಮನೆಯನ್ನು ಜಿಲ್ಲಾಡಳಿತ ಕೆಡವಿದೆ. ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಹತ್ತಿರದ ಎಲ್ಲಾ ಮನೆಗಳನ್ನು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ” ಎಂದು ಖತ್ರಿ ಹೇಳಿರುವುದಾಗಿ ‘ದಿ ವೈರ್‌’ ವರದಿ ಮಾಡಿದೆ.

“ನಾನು ಹೆಚ್ಚುವರಿ ಎಸ್‌ಪಿ ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡಿದ್ದೇನೆ. ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೋರಿದ್ದೇನೆ. ನಾನು ಅಗತ್ಯ ಅನುಮತಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದೇನೆ. ಆದರೆ ‌ಆರೋಪಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಅವರು ನನ್ನನ್ನು ದೂಷಿಸಿದ್ದಾರೆ. ನಾನು ಮುಸ್ಲಿಂ ಎಂಬ ಕಾರಣಕ್ಕೆ ನನ್ನ ಮನೆಯನ್ನು ಕೆಡವಲಾಯಿತು” ಎಂದು ಅವರು ಆರೋಪಿಸಿದ್ದಾರೆ.

ಕಟ್ಟಡ ನೆಲಸಮಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಶಿವಂಗಿ ಜೋಶಿ, ‘ಕಟ್ಟಡ ಕೆಡವಿರುವುದು ಶಾಂತಿ ಕದಡಲು ಯತ್ನಿಸಿದ ಸಮಾಜಘಾತುಕರಿಗೆ ಎಚ್ಚರಿಕೆಯಾಗಿದೆ. ಮನೆಯಿಂದ ಕತ್ತಿ, ಚಾಕುಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಗಳನ್ನು ಗುರುತಿಸಿದ ನಂತರ ನಾವು ಈ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ’ ಎಂದಿದ್ದಾರೆ.

ಧಾರ್ ಜಿಲ್ಲೆಯ ಶೆಹರ್-ಎ-ಕಾಜಿಬ್ ಜಮೀಲ್ ಸಿದ್ದಿಕಿ, “ಘಟನೆಯು ದುರದೃಷ್ಟಕರವಾಗಿದೆ ಮತ್ತು ಪೊಲೀಸರು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ. “ಎರಡೂ ಕಡೆಯಿಂದ ಕಲ್ಲು ತೂರಲಾಯಿತು ಮತ್ತು ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಪೊಲೀಸರನ್ನು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ. ಮುಸ್ಲಿಮರ ನಿಯೋಗವು ಧಾರ್ ಎಸ್ಪಿ ಮತ್ತು ಇಂದೋರ್ ಇನ್‌ಸ್ಪೆಕ್ಟರ್‌ ಜನರಲ್ ಅವರನ್ನು ಭೇಟಿ ಮಾಡಿ ನ್ಯಾಯಯುತ ಕ್ರಮಕ್ಕಾಗಿ ಒತ್ತಾಯಿಸಿದೆ.

ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲದ ಖಲೀಲ್ ಖತ್ರಿ ಅವರ ಮನೆಯನ್ನು ಜಿಲ್ಲಾಡಳಿತ ನೆಲಸಮಗೊಳಿಸಿದೆ ಎಂದು ಆರೋಪಿಸಿದ್ದಾರೆ. ಹತ್ತಿರದಲ್ಲಿ ನಿರ್ಮಿಸಲಾದ ಎಲ್ಲಾ ಮನೆಗಳಿಗೆ ಕಟ್ಟಡದ ಅನುಮತಿ ಇರಲಿಲ್ಲ. ಸಮಯ ನೀಡಿದ್ದರೆ ಅವರು ಅನುಮತಿಯನ್ನು ಪಡೆದುಕೊಳ್ಳಬಹುದಿತ್ತು ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ‘ಮತಾಂತರದ ತಂತ್ರ’ ಎಂದು ಆರೋಪಿಸಿ ಸಾಂತಕ್ಲಾಸ್‌ ಪ್ರತಿಕೃತಿ ದಹಿಸಿದ ಬಲಪಂಥೀಯರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...