Homeಕರ್ನಾಟಕಪುಟ್ಟ ಭಾರತಗಳು: ಧಾರವಾಡದಿಂದೊಂದು ವರದಿ

ಪುಟ್ಟ ಭಾರತಗಳು: ಧಾರವಾಡದಿಂದೊಂದು ವರದಿ

- Advertisement -
- Advertisement -

ನಾನು ವಾಸಿಸುವ ಧಾರವಾಡವು ಒಂದು ಪುಟ್ಟ ಪಟ್ಟಣ. 1947ರಲ್ಲಿ ಭಾರತದ ಜನಸಂಖ್ಯೆ ಸುಮಾರು 36 ಕೋಟಿ ಆಗಿದ್ದಾಗ, ಧಾರವಾಡದ್ದು 47,000; ಅಂದರೆ, ಒಟ್ಟು ಜನಸಂಖ್ಯೆಯ ಏಳು ಆಥವಾ ಎಂಟು ಸಾವಿರದ ಭಾಗ ಮಾಡಿದರೆ ಅದರಲ್ಲಿ ಒಂದು ಭಾಗ ಧಾರವಾಡ. ಭಾರತದ ಜನಸಂಖ್ಯೆ 120 ಕೋಟಿ ತಲುಪಿದಾಗ, ಹುಬ್ಬಳ್ಳಿ- ಧಾರವಾಡದ ಜನಸಂಖ್ಯೆ 12 ಲಕ್ಷ ಅಂದರೆ, ಸಾವಿರದ ಒಂದು ಭಾಗ ಆಗಿತ್ತು. ಸ್ವಾತಂತ್ರ್ಯದ ನಂತರ ಸಂಖ್ಯಾತ್ಮಕವಾಗಿ ಅದು ತನಗಿಂತ ಚಿಕ್ಕ ಪಟ್ಟಣಗಳಿಗಿಂತ ಸಾಕಷ್ಟು ಹೆಚ್ಚಿನ ಬೆಳವಣಿಗೆ ತೋರಿಸಿದೆ. ಧಾರವಾಡವು ನಂತರ ತನ್ನ ದಕ್ಷಿಣಕ್ಕೆ 20 ಕಿ.ಮೀ. ದೂರವಿರುವ ಹುಬ್ಬಳ್ಳಿಯೊಂದಿಗೆ ವಿಲೀನಗೊಂಡಿದೆ. ಇನ್ನು 20 ಕಿ.ಮೀ. ಉತ್ತರಕ್ಕಿರುವ ಕಿತ್ತೂರು ವೇಗವಾಗಿ ಬೆಳೆಯುತ್ತಿದ್ದು, ಧಾರವಾಡದ ವಿಸ್ತರಣೆಯೇ ಆಗುವತ್ತ ದಾಪುಗಾಲು ಇಡುತ್ತಿದೆ. ಇನ್ನೇನು ಒಂದೆರಡು ದಶಕಗಳಲ್ಲಿ ಮೂರೂ ಪಟ್ಟಣಗಳು ಒಟ್ಟು ಸೇರಿ ಸುಮಾರು 25 ಕಿ.ಮೀ. ಅಗಲ ಮತ್ತು 80 ಕಿ.ಮೀ. ಉದ್ದಕ್ಕೂ, ಸುಮಾರು 2000 ಚದರ ಕಿ.ಮೀ. ವಿಸ್ತಾರದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಲಿದೆ. ಆಗ ಬೆಳೆಯುತ್ತಿರುವ ಧಾರವಾಡವು ಭಾರತದಲ್ಲಿ ಇನ್ನೂರೈವತ್ತರಲ್ಲಿ ಒಂದು ಭಾಗವಾಗಲಿದೆ. ಅದರ ಬೆಳವಣಿಗೆಯ ಲಯವು ಭಾರತದ ಇತರ ಭಾಗಗಳ ಬೆಳವಣಿಗೆಗೆ ಸರಿಹೊಂದುತ್ತದೆ.

ಈ ಭಾರತವೆಂಬ ಈ ಸಮುದಾಯ “ಧಾರವಾಡದ ಅಡಿಗಲ್ಲು ವ್ಯವಸ್ಥೆ” (ಧಾರವಾಡ ರಾಕ್ ಸಿಸ್ಟಮ್) ಎಂದು ಭೂಗರ್ಭ ಶಾಸ್ತ್ರಜ್ಞರು ಕರೆಯುವ 180 ಕೋಟಿ ವರ್ಷಗಳ ಹಿಂದೆ ರೂಪುಗೊಂಡ ಅಡಿಗಲ್ಲಿನ ವ್ಯವಸ್ಥೆಯ ಮೇಲೆಯೇ ನಿಂತಿದೆ. ಹೊಮೋಸೇಪಿಯನ್ಸ್ ಎಂದು ಕರೆಯಲಾಗುವ ನವ ಮಾನವ ಜನಾಂಗವು ಇಲ್ಲಿ ಹಲವಾರು ಸಹಸ್ರಮಾನಗಳಿಂದ ನೆಲೆಸಿದ್ದು, ಇಲ್ಲಿ ಬೇಸಾಯವು ಕನಿಷ್ಟ ಆರು ಸಹಸ್ರಮಾನಗಳಿಂದ ನಡೆದುಕೊಂಡು ಬಂದಿದೆ. ಮೊದಲನೇ ಸಹಸ್ರಮಾನದ ಕಾಲದಲ್ಲೇ ಈ ಪ್ರದೇಶವು ನೇಕಾರಿಕೆ ಮತ್ತು ಬೆಳ್ಳಿ ಕೆಲಸಗಳನ್ನು ಕಲಿತು ತನ್ನದೇ ಆದ ಶೈಲಿ, ಸಂಪ್ರದಾಯವನ್ನು ರೂಪಿಸಿಕೊಂಡಿತ್ತು. ಕಳೆದ ಹದಿನೈದು ಶತಮಾನಗಳಿಂದ ಧಾರವಾಡ ಇಲ್ಲಿ ಆಳಿದ ಹಲವಾರು ಅರಸರು ಮತ್ತು ರಾಜವಂಶಸ್ಥಗಳ ಏಳುಬೀಳುಗಳನ್ನು ಕಂಡಿದ್ದು, ಅದರೊಂದಿಗೆ ಬಂದ ಹೊಸ ಸಾಂಸ್ಕೃತಿಕ ಆಚರಣೆಗಳು ಮತ್ತು ವಿನ್ಯಾಸ ಶೈಲಿಗಳನ್ನು ಕಂಡಿದೆ. ಅವರಲ್ಲಿ ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಬಹಮನಿ ಸುಲ್ತಾನರು, ವಿಜಯನಗರದ ಅರಸರು, ಆದಿಲ್ ಶಾಹಿ ಮನೆತನ, ಮರಾಠರು, ಹೈದರ್ ಆಲಿ ಮತ್ತು ಬ್ರಿಟಿಷರು ಸೇರಿದ್ದಾರೆ. ಇಲ್ಲಿ ಬ್ರಿಟಿಷರಿಗೆ ತೋರಲಾದ ಪ್ರತಿರೋಧ ಗಮನಾರ್ಹವಾದುದು. ನರಗುಂದದ ಬಾಬಾ ಸಾಹಿಬ್ ಮತ್ತು ಕಿತ್ತೂರಿನ ರಾಣಿ ಚೆನ್ನಮ್ಮ ಅವರಂತೂ ಬ್ರಿಟಿಷರನ್ನು ತಡೆದು ನಿಲ್ಲಿಸಲು ಕೊನೆಯುಸಿರು ಇರುವವರೆಗೂ ಕಾದಾಡಿದರು. ಅದಕ್ಕಿಂತ ಮುಂಚೆ, ಧಾರವಾಡದ ಪಶ್ಚಿಮಕ್ಕಿರುವ ಗೋವಾದಿಂದ ಪೋರ್ಚುಗೀಸರ ಆಕ್ರಮಣವನ್ನು ಧಾರವಾಡದ ಜನತೆ ಯಶಸ್ವಿಯಾಗಿ ತಡೆದಿದ್ದರು.

ಶಾಹು ಮಹಾರಾಜ

ಹನ್ನೆರಡನೇ ಶತಮಾನದಲ್ಲಿ ಈ ಭಾಗವು ಜಾತಿ, ಜನಾಂಗ ಭೇದ ಮತ್ತು ಲಿಂಗ ತಾರತಮ್ಯವನ್ನು ವಿರೋಧಿಸಿದ ಬಸವಣ್ಣನವರ ಲಿಂಗಾಯತ ಚಳವಳಿಯಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಿತ್ತು. ಅದುವೇ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಕರ್ನಾಟಕ ರಾಜ್ಯದ ಅಡಿಗೆ ತರುವ ಕಡೆಗೆ ಮೊದಲ ಹೆಜ್ಜೆ ಇರಿಸಿತ್ತು. ಸ್ವಾತಂತ್ರ್ಯದ ನಂತರ ಕರ್ನಾಟಕವು ಅತ್ಯಂತ ನೆಪಿಡುವ ರೈತ ಚಳವಳಿಗೂ ಅದು ಹುಟ್ಟು ನೀಡಿತ್ತು. ಕನ್ನಡ ಭಾಷಾ ಚಳವಳಿ ಮತ್ತು ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ ಚಳವಳಿಯ ಕಿಡಿ ಹೊತ್ತಿಸಿದ್ದೂ ಈ ಭಾಗವೇ! ಧಾರವಾಡವು ಚಿಂತಕರ, ಲೇಖಕರ, ಗಾಯಕರ, ಸಾಮಾಜಿಕ ಕಾರ್ಯಕರ್ತರ ಅದ್ಭುತವಾದ ಮಿಶ್ರಣವನ್ನು ತನ್ನ ಜನತೆಯ ನಡುವೆ ಹೊಂದಿದೆ. ಇದು ಇಡೀ ಭಾರತದ ಸಾಹಿತ್ಯದ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಹೊಂದಿರುವ ಪ್ರದೇಶವೂ ಹೌದು. ದ.ರಾ. ಬೇಂದ್ರೆ, ವಿನಾಯಕ ಕೃಷ್ಣ ಗೋಕಾಕ, ಗಿರೀಶ್ ಕಾರ್ನಾಡ್ ಎಂಬ ಮೂವರು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳನ್ನು ಹೊಂದಿರುವ ಪ್ರದೇಶವಿದು. ಈ ಚಿಕ್ಕ ಪಟ್ಟಣದಿಂದ ಇತರ ನೂರಾರು ಲೇಖಕರು, ಚಿಂತಕರು, ನಾಟಕಕಾರರು, ಗಾಯಕರು, ಕಲಾವಿದರು ಹುಟ್ಟಿಬಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಧಾರವಾಡವು ಡಾ. ಬಿ.ಆರ್. ಅಂಬೇಡ್ಕರ್, ಕೊಲ್ಲಾಪುರದ ಶಾಹು ಮಹಾರಾಜರು, ಮಹಾತ್ಮಾ ಗಾಂಧಿಯವರ ಜೊತೆಗೂ ನಿಕಟ ಸಂಬಂಧವನ್ನು ಹೊಂದಿತ್ತು. 1856ರಲ್ಲಿ ಎರ್‍ಲೂ ಬಿನ್ ನಾರಾಯಣ್ ಎಂಬ ಹುಡುಗ- ಕಳಂಕಿತ ಪಟ್ಟ ಕಟ್ಟಲಾಗಿದ್ದ ಮಹಾರ್ ಸಮುದಾಯದ ಹುಡುಗ- ಶಾಲೆ ಕಲಿಯಲು ಬಯಸಿದ್ದ. ಅವನನ್ನು ಶಾಲೆಗೆ ಸೇರಿಸಲು ನಿರಾಕರಿಸಿದಾಗ ಅವನು ಮುಂಬಯಿಯಲ್ಲಿ ಇದ್ದ ಆಡಳಿತಕ್ಕೆ ಒಂದು ದೂರು ಬರೆದ. ಅವನ ಈ ದೂರು ಮುಂಬಯಿಯಿಂದ ಕಲ್ಕತ್ತಕ್ಕೆ ಮತ್ತು ಅಲ್ಲಿಂದ ಲಂಡನಿಗೆ ತಲುಪಿತು. ಅವನಿಗೆ ಕೊನೆಗೂ ಶಾಲೆಯಲ್ಲಿ ಪ್ರವೇಶ ಸಿಕ್ಕಿತು. ನಂತರ ಈ ಹುಡುಗ ಏನಾದ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಇದಾದ ಎಪ್ಪತ್ತು ವರ್ಷಗಳ ನಂತರ ಡಾ. ಅಂಬೇಡ್ಕರ್ ಅವರು ಮುಂಬಯಿ ಸರಕಾರದ ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾಗ, ಈ ಪ್ರಕರಣಕ್ಕೆ ಸಂಬಂಧಿಸಿದ ಕಡತ ಅವರ ಕಣ್ಣಿಗೆ ಬಿತ್ತು. ಈ ಹುಡುಗ ತನ್ನ ಹಕ್ಕಿಗಾಗಿ ಮಾಡಿದ ಹೋರಾಟದಿಂದ ದಂಗುಬಡಿದ ಅಂಬೇಡ್ಕರ್ ಅವರು, ಈ ನಾರಾಯಣನ ವಂಶಜರನ್ನು ಹುಡುಕುವ ಸಲುವಾಗಿ ಧಾರವಾಡಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಅವರಿಗೆ ಅಲ್ಲಿ ಆತನ ವಂಶಜರನ್ನು ಹುಡುಕಲು ಸಾಧ್ಯವಾಗದಿದ್ದರೂ, ಆ ಭೇಟಿಯ ವೇಳೆ ಬಡಕುಟುಂಬಗಳ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲೊಂದನ್ನು ಸ್ಥಾಪಿಸಲು ನಿರ್ಧರಿಸಿದರು. ಅವರು ಅಲ್ಲಿ ಜಾಗ ಪಡೆದು ಹಾಸ್ಟೆಲನ್ನೂ ನಿರ್ಮಿಸಿದರು. ನಂತರ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ರಮಾಬಾಯಿಯವರು ಅಲ್ಲಿನ ಮಕ್ಕಳಿಗೆ ಉಣಿಸಿ ತಿನಿಸಿ, ಆ ಹಾಸ್ಟೆಲಿಗೆ ಬೇಕಾದ ನಿಧಿಯನ್ನೂ ಸಂಗ್ರಹಿಸಿದರು. ಅವರು ಅದಕ್ಕಾಗಿ ತನ್ನ ಚಿನ್ನಾಭರಣಗಳನ್ನೂ ಮಾರಿದರು.

ಶಾಹು ಮಹಾರಾಜರನ್ನು ಅವರ ಪಟ್ಟಾಭಿಷೇಕಕ್ಕೆ ಮುಂಚಿತವಾಗಿ ಧಾರವಾಡದ ಕ್ರೈಸ್ತರು ನಡೆಸುತ್ತಿದ್ದ ಹೈಸ್ಕೂಲೊಂದಕ್ಕೆ ಕಳುಹಿಸಲಾಯಿತು. ಅದು ಅವರಿಗೆ ಮುಂದೆ ತಮ್ಮ ಕೊಲ್ಲಾಪುರ ರಾಜ್ಯದಲ್ಲಿ ಹಲವಾರು ಪ್ರಗತಿಪರ ಶಾಸನಗಳನ್ನು ತರಲು ಪ್ರೇರಣೆಯಾಯಿತು.

ಮಹಾತ್ಮ ಗಾಂಧಿ

ಮಹಾತ್ಮಾ ಗಾಂಧಿಯವರು 1921ರಲ್ಲಿ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದರು. ಅವರು ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಮತ್ತು ಗದಗಕ್ಕೆ ಬಂದು ಅಂದು ಹರಿಜನರು ಎಂದು ಕರೆಯಲಾಗುತ್ತಿದ್ದ ದಲಿತರು, ಬ್ರಾಹ್ಮಣರು, ಜೈನರು, ಲಿಂಗಾಯತರು ಮತ್ತು ಮುಸ್ಲಿಮರನ್ನು ಭೇಟಿ ಮಾಡಿದರು. ಅವರಿಂದ ಸ್ವಾತಂತ್ರ್ಯದ ವಿಚಾರಗಳಿಗೆ ಪ್ರೇರಿತರಾದ ಹಲವರು ಅವರಿಗೆ ನೆರವಾಗಲು ಎನ್. ಎಸ್. ಹರ್ಡೀಕರ್ ನೇತೃತ್ವದಲ್ಲಿ ಒಂದು ಗುಂಪನ್ನು ಕಟ್ಟಿದರು. ಕೆಲವೇ ವರ್ಷಗಳಲ್ಲಿ ಈ ಗುಂಪು ಬೆಳೆದು, ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿಯವರಿಗೆ ನೆರವಾಗಿ, ಮುಂದೆ ಸೇವಾದಳವಾಯಿತು.

ಕಳೆದ ಶತಮಾನದಲ್ಲಿ ಧಾರವಾಡವು ಶಾಸ್ತ್ರೀಯ ಸಂಗೀತಕ್ಕೆ ಒಂದು ಸಂಕೇತವೇ ಅಯಿತು. ಮೊದಲಿಗೆ ಬರೋಡಾದಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಅಬ್ದುಲ್ ಕರೀಂ ಖಾನ್ ಅವರು ಇಲ್ಲಿಗೆ ಭೇಟಿ ನೀಡಿದರು. ಅವರು ಬರೋಡದ ರಾಜ ವಂಶಸ್ಥರ ವಿರೋಧವನ್ನೂ ಲೆಕ್ಕಿಸದೇ ಮದುವೆಯಾಗಿದ್ದ ತಾರಾಬಾಯಿ ಮಾನೆಯವರು ಅವರನ್ನು ಬಿಟ್ಟು ಹೋದ ಬಳಿಕ, 1922ರಲ್ಲಿ ಧಾರವಾಡವನ್ನೇ ತನ್ನ ಮನೆಯನ್ನಾಗಿ ಮಾಡಿಕೊಳ್ಳಲು ಅವರು ನಿರ್ಧರಿಸಿದರು. ಇಲ್ಲಿ ಅವರು, ಹಿಂದೂಸ್ತಾನಿ ಸಂಗೀತದಲ್ಲಿ ಅತಿ ಎತ್ತರದ ಸ್ಥಾನದಲ್ಲಿಟ್ಟು ನೋಡುವ ಕೇಸರ್‌ಬಾಯಿ ಕೇರ್ಕರ್ ಅವರಿಗೆ ಸಂಗೀತ ಕಲಿಸಿಕೊಟ್ಟರು. ಹಾಗೆಯೇ ಸವಾಯಿ ಗಂಧರ್ವ ಅವರನ್ನು ತರಬೇತಿಗೊಳಿಸಿದರು. ಗಂಧರ್ವ ಅವರು ಮುಂದೆ ಗಂಗೂಬಾಯಿ ಹಾನಗಲ್ ಮತ್ತು ಭೀಮಸೇನ ಜೋಶಿ ಅವರನ್ನು ತರಬೇತಿಗೊಳಿಸಿದರು. ಇವರಿಬ್ಬರು ಮತ್ತು ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಫಕೀರಪ್ಪ ಕುಂದಗೋಳ ಮತ್ತು ಪುಟ್ಟರಾಜ ಗವಾಯಿಯವರು ಧಾರವಾಡವನ್ನು ಭಾರತದ ಅತ್ಯಂತ ಸಂಗೀತಮಯ ಊರಾಗಿ ಮಾಡಿದರು. ಈ ಸಂಗೀತವೇ ಧಾರವಾಡದ ಜನತೆಗೆ ಮನುಷ್ಯರನ್ನು ಹಿಂದೂಗಳಾಗಿ ಅಥವಾ ಮುಸ್ಲಿಮರಾಗಿ ಪ್ರತ್ಯೇಕಗೊಳಿಸಿ ನೋಡದಿರುವುದನ್ನು ಕಲಿಸಿದೆ. ಇಲ್ಲಿನ ಸಂಗೀತ ಪರಂಪರೆಗೆ ಕೋಮುದೃಷ್ಟಿಕೋನವಿಲ್ಲ.

ಇತ್ತೀಚೆಗೆ ಹಿಜಾಬ್ ವಿವಾದ ಟಿವಿ ಸ್ಟುಡಿಯೋಗಳಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಾಗ ಧಾರವಾಡದಲ್ಲಿ ಒಂದು ಸಂಗೀತ ಕಛೇರಿ ನಡೆಯುತ್ತಿತ್ತು. ಸಿತಾರ್ ವಾದಕ ರಹೀಮತ್ ಖಾನ್ ಅವರ ವಂಶಜರಾದ ಏಳು ಮಂದಿ ಈ ಕಾರ್ಯಕ್ರಮದಲ್ಲಿ ಜೊತೆ ಸೇರಿದ್ದರು. ಛೋಟೆ ರಹೀಮತ್ ಖಾನ್, ರಫೀಕ್ ಖಾನ್, ಶಫೀಕ್ ಖಾನ್, ರಯೀಸ್ ಖಾನ್, ಮೊಹ್ಸಿನ್ ಖಾನ್ ಮತ್ತು ಮನ್ಸೂರ್ ಖಾನ್ ಇವರೆಲ್ಲರೂ ತಮ್ಮ ಹೆಗ್ಗುರುತಾದ ಕಪ್ಪು ಕುರ್ತಾಗಳಲ್ಲಿ ವಿರಾಜಮಾನರಾಗಿದ್ದರು. ಇಡೀ ಸಭಾಂಗಣವೇ ಕಿಕ್ಕಿರಿದು ತುಂಬಿತ್ತು. ಅವರು ತಮ್ಮ ಸಿತಾರ್‌ಗಳ ಮಾಂತ್ರಿಕತೆಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಿದ್ದರು. ಅವರನ್ನು ಮುಸ್ಲಿಮರೆಂದಾಗಲೀ, ಅವರ ಜೊತೆಗಿದ್ದ ಅವರಷ್ಟೇ ಪ್ರತಿಭಾವಂತ ತಬಲಾ ವಾದಕ ರಘುನಾಥ ನಾಕೋಡ್ ಅವರನ್ನು ಒಬ್ಬ ಹಿಂದೂ ಎಂದಾಗಲೀ ಯಾರೂ ಯೋಚಿಸಲಿಲ್ಲ.

ಧಾರವಾಡವು ಶತಮಾನಗಳಿಂದ ಕಂಡ ಅನೇಕ ಅರಸರು ಇಲ್ಲಿ ಸುನ್ನಿಗಳನ್ನು, ಬೌದ್ಧರನ್ನು, ಶಿಯಾಗಳನ್ನು, ಕ್ರೈಸ್ತರನ್ನು, ಲಿಂಗಾಯತರನ್ನು ಮತ್ತು ಹಿಂದೂಗಳನ್ನು ಇಲ್ಲಿಗೆ ತಮ್ಮೊಂದಿಗೆ ಕರೆತಂದಿದ್ದಾರೆ. ಧಾರವಾಡವು ಅವರೆಲ್ಲರಿಗೆ ಸೇರಿದ್ದು, ಆವರೆಲ್ಲರೂ ಧಾರವಾಡಕ್ಕೆ ಸೇರಿದವರಾಗಿದ್ದಾರೆ. ಬುದ್ಧ, ಮಹಾವೀರ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಲೋಹಿಯಾ ಇವರೆಲ್ಲರೂ ಧಾರವಾಡಕ್ಕೆ ಸೇರಿದವರಾಗಿದ್ದಾರೆ. ಧಾರವಾಡವು ಅವರೆಲ್ಲರಿಗೂ ಸೇರಿದ್ದಾಗಿದೆ. ಇಲ್ಲಿಂದ ಸಂಸತ್ತಿಗೆ ಆಯ್ಕೆಯಾಗಿದ್ದವರಲ್ಲಿ ಕರ್ಮಾಕರ್, ಮಹಿಷಿ, ಸನದಿ, ನಾಯ್ಕರ್, ಸಂಕೇಶ್ವರ- ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಮುಸ್ಲಿಮರು ಸೇರಿದ್ದಾರೆ.

“ಭಾರತದ ಪರಿಕಲ್ಪನೆ” ಹೇಗಿರಬೇಕು ಎಂಬ ಬಗ್ಗೆ ದೇಶದಲ್ಲಿ ಬಿಸಿಯೇರಿದ ಚರ್ಚೆ ನಡೆದಿದೆ. ಧಾರವಾಡ ಮತ್ತು ಗುಜರಾತಿನ ನಡಿಯಾಡ್, ಮಹಾರಾಷ್ಟ್ರದ ಕೊಲ್ಲಾಪುರ, ಮಧ್ಯಪ್ರದೇಶದ ದೇವಾಸ್, ಪಂಜಾಬಿನ ಪಟಿಯಾಲ, ಒರಿಸ್ಸಾದ ಕಟಕ್, ಮುಂತಾದ ಬೇರೆ ರಾಜ್ಯಗಳಲ್ಲಿ ಇರುವ ಹಲವಾರು ಪಟ್ಟಣಗಳು ಈ “ಭಾರತದ ಪರಿಕಲ್ಪನೆ”ಗೆ ಅತ್ಯುತ್ತಮ ಉದಾಹರಣೆಗಳು.

ಉನ್ಮತ್ತ ಆಡಳಿತಗಾರರು ಬಂದಿರಲಿ, ಹೋಗಿರಲಿ, ಅದೃಷ್ಟವಶಾತ್ ಅವು ಮಾತ್ರ ಇನ್ನೂ ಭಾರತದಲ್ಲಿ ಉಳಿದಿವೆ; ಉಳಿದಿರುತ್ತವೆ. ಈ ಪಟ್ಟಣಗಳು ಮೈವೆತ್ತಿಕೊಂಡಿರುವ ಈ ಹೂರಣದ ಕಾಲಾತೀತತೆಯೇ ಭಾರತದ ಪರಿಕಲ್ಪನೆ. ಕೆರಳಿದ ಆಡಳಿತಗಾರರು ಇದನ್ನು ಕಡೆಗಣಿಸುತ್ತಾರೆ. ಆದರೆ, ಭಾರತವು ಈ ಭಾರತದ ಪರಿಕಲ್ಪನೆಯೇ ಹೃದಯದಲ್ಲಿ ಇಟ್ಟುಕೊಂಡು ಬದುಕುಳಿದಿದೆ.

ಅನುವಾದ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: 1856ರಲ್ಲೇ ಸಮಾನತೆಯ ಪ್ರಶ್ನೆ ಎತ್ತಿದ್ದ ಧಾರವಾಡದ ಎರ್‍ಲೂ ಬಿನ್ ನಾರಾಯಣ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...