Homeಅಂಕಣಗಳುಚುನಾವಣಾ ರಾಜಕೀಯದಲ್ಲಿ ಜಾತೀಯತೆ ಪ್ರಶ್ನೆ ಎತ್ತುವ ಮಾರಿ ಸೆಲ್ವರಾಜ್‌ರ ’ಮಾಮನ್ನನ್'

ಚುನಾವಣಾ ರಾಜಕೀಯದಲ್ಲಿ ಜಾತೀಯತೆ ಪ್ರಶ್ನೆ ಎತ್ತುವ ಮಾರಿ ಸೆಲ್ವರಾಜ್‌ರ ’ಮಾಮನ್ನನ್’

- Advertisement -
- Advertisement -

ಕೆಲವು ದಿನಗಳ ಹಿಂದೆ ನಡೆದ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳೋಣ; 29 ಜೂನ್ ಗುರುವಾರ ಉತ್ತರ ಪ್ರದೇಶದ ಭೀಮ್ ಆರ್ಮಿಯ ಸಹಸಂಸ್ಥಾಪಕ, ಅಂಬೇಡ್ಕರೈಟ್ ಚಳವಳಿಕಾರ ಮತ್ತು ರಾಜಕಾರಣಿ ಚಂದ್ರಶೇಖರ ಆಜಾದ್ ರಾವಣ್ ಅವರ ಮೇಲೆ ಯುಪಿಯ ಸಹರನ್‌ಪುರ್ ಜಿಲ್ಲೆಯಲ್ಲಿ ಮನುವಾದಿ ಗುಂಪೊಂದು ಗುಂಡಿನ ದಾಳಿ ನಡೆಸಿತು. ಚಂದ್ರಶೇಖರ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ರಾಷ್ಟ್ರದಾದ್ಯಂತ ಪರಿಚಿತವಿರುವ ಈ ದಲಿತ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆಸುವಂತಹ ಮನುವಾದಿ ಮನಸ್ಥಿತಿ 21ನೇ ಶತಮಾನದ ಕಾಲು ಭಾಗ ಕಳೆದರೂ ಬದಲಾಗಿಲ್ಲ ಎಂಬುದು ನಮ್ಮ ದೇಶದ ಸುಡುವಾಸ್ತವ. ಈ ಘಟನೆಗೆ ಮೂರು ದಿನಗಳ ಹಿಂದೆ ಅಂದರೆ ಜೂನ್ 26ರಂದು, ಕೋಲಾರದ ಬೋಡಗುರ್ಕಿ ಗ್ರಾಮದಲ್ಲಿ ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತನ್ನ ಮಗಳನ್ನೇ ಅಪ್ಪ ಕತ್ತು ಹಿಸುಕಿ ಕೊಂದ ಹೀನ ಘಟನೆ ಬೆಳಕಿಗೆ ಬಂದಿತ್ತು. ತನ್ನ ಪ್ರೇಯಸಿಯ ಕೊಲೆಯ ನೋವನ್ನು ತಾಳಲಾರದೆ ಆ ದಲಿತ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗಳನ್ನೇ ಕತ್ತುಹಿಸುಕಿ ಕೊಂದ ವ್ಯಕ್ತಿ ಗೊಲ್ಲ ಸಮುದಾಯಕ್ಕೆ ಸೇರಿದವನು.

ಜನಸಂಖ್ಯೆಯಲ್ಲಿ ಕರ್ನಾಟಕದಲ್ಲಿ ಅಷ್ಟೇನೂ ದೊಡ್ಡ ಸಮುದಾಯವಾಗಿರದ, ರಾಜಕೀಯವಾಗಿಯೂ ದೊಡ್ಡ ಶಕ್ತಿಯೇನೂ ಆಗಿರದ ಈ ಶೂದ್ರ ಗೊಲ್ಲ ಸಮುದಾಯದಲ್ಲಿ ಈ ಮಟ್ಟಿನ ಹೀನ ಜಾತಿಪ್ರತಿಷ್ಠೆ ಮಡುಗಟ್ಟಿರುವುದನ್ನು ನೋಡಿದರೆ ಈ ಪಿಡುಗಿನಿಂದ ದೇಶಕ್ಕೆ ಎಂದಿಗಾದರೂ ಮುಕ್ತಿ ಇದೆಯೇ ಎಂಬ ಆತಂಕ ಕಾಡದೆ ಇರದು. ಇದೇ ಸಮಯದಲ್ಲಿ ಗೊಲ್ಲ ಸಮುದಾಯಕ್ಕೆ ಸೇರಿದ ಮತ್ತೊಂದು ಜಾತಿ ತಾರತಮ್ಯದ ಘಟನೆ ನೆನಪಾಗುತ್ತದೆ. 2019ರಲ್ಲಿ ಪಾವಗಡ ತಾಲೂಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಚಿತ್ರದುರ್ಗದ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿಯವರ ಪ್ರವೇಶವನ್ನು ಆ ಹಟ್ಟಿಯ ಜನರು ನಿರ್ಬಂಧಿಸಿದ್ದರು! ಕಾರಣ, ಎ. ನಾರಾಯಣಸ್ವಾಮಿ ದಲಿತರು ಎಂಬುದು. ಇದು ಯಾವುದೋ, ಹತ್ತಾರು ವರ್ಷಕ್ಕೆ ದೇಶದಲ್ಲಿ ಒಮ್ಮೆ ನಡೆಯುವ ವಿದ್ಯಮಾನವೇನಲ್ಲ. ದೇಶದಲ್ಲಿ ಕಾನೂನನ್ನು ರೂಪಿಸಬಹುದಾದ ಸಂಸದೀಯ ಹುದ್ದೆಯನ್ನು ಹೊಂದಿರುವವರು ಕೂಡ ದಿನನಿತ್ಯ ಎಂಬಂತೆ ಅನುಭವಿಸುವ ತಾರತಮ್ಯವಿದು.

ಚಂದ್ರಶೇಖರ ಆಜಾದ್ ರಾವಣ್

ತಮಿಳುನಾಡಿನ ಒಂದು ಘಟನೆಯನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. ತಮಿಳುನಾಡಿನಲ್ಲಿ ಶೋಷಕ ಜಾತಿಯಾದ ವಣ್ಣಿಯಾರ್‌ಗಳು ದಲಿತರ ಮೇಲೆ ನಡೆಸುವ ದೌರ್ಜನ್ಯಗಳಿಗೆ ಎಲ್ಲೆಯೇ ಇಲ್ಲ. ವಣ್ಣಿಯಾರ್‌ಗಳ ಪಕ್ಷ ಎಂದೇ ಬಿಂಬಿತವಾಗಿರುವ ಪಿಎಂಕೆ ಇದಕ್ಕೆ ನೇರವಾಗಿಯೇ ಬೆಂಬಲ ನೀಡುತ್ತಾ ಬಂದಿದೆ. ಕಳೆದ 2021ರ ವಿಧಾನಸಭಾ ಚುನಾವಣೆಯಲ್ಲಿ ವಲ್ಲಿಪುರಂ ಎಂಬ ಕ್ಷೇತ್ರದ ಮಾಯೈನೂರು ಗ್ರಾಮಕ್ಕೆ ಡಿಎಂಕೆ ಅಭ್ಯರ್ಥಿ ಡಾ. ಆರ್. ಲಕ್ಷ್ಮಣನ್ (ಇವರು ವಣ್ಣಿಯಾರ್ ಸಮುದಾಯದವರು) ತಮ್ಮ ಮೈತ್ರಿಪಕ್ಷವಾದ ವಿಸಿಕೆ ಪಕ್ಷದ ಮುಖಂಡರ ಜೊತೆಗೆ ತೆರಳಿದ್ದರು. ವಿಸಿಕೆ ಪಕ್ಷ ದಲಿತರನ್ನು ಪ್ರತಿನಿಧಿಸುವ ಪಕ್ಷ. ಆ ಕಾರಣಕ್ಕಾಗಿ ವಿಸಿಕೆ ಪಕ್ಷದ ಮುಖಂಡರನ್ನು ಹೊರಗಿಟ್ಟು ಮತ ಕೇಳುವುದಕ್ಕೆ ಬರುವುದಾದರೆ, ಡಿಎಂಕೆ ಅಭ್ಯರ್ಥಿ ಊರಿನೊಳಗೆ ಬರಲಿ ಎಂದು ಗ್ರಾಮಸ್ಥರು ಷರತ್ತು ಹಾಕಿದ್ದರು. ಇದನ್ನು ನಿರಾಕರಿಸದೆ ಆ ಅಭ್ಯರ್ಥಿ ವಿಸಿಕೆ ಮುಖಂಡರು ವಾಪಸ್ ತೆರಳಿದ ಮೇಲೆ ಮತ ಯಾಚಿಸಿದ್ದರು ಎಂದು ವರದಿಯಾಗಿದೆ.

ಇನ್ನೊಂದು ಅಂಶವನ್ನು ನಾವೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಗಮನಿಸಿಯೇ ಇರುತ್ತೇವೆ?! ಯಾವುದೇ ಮೀಸಲು ಕ್ಷೇತ್ರದಲ್ಲಿ ಗೆಲ್ಲುವ ದಲಿತ ರಾಜಕಾರಣಿಯ ಬಗ್ಗೆ ಲಘುವಾಗಿ ಆಡುವ ಮಾತುಗಳು ಯಾವುವೆಂದು. ಆ ಅಭ್ಯರ್ಥಿ ಇನ್ನೂ (ಸೋ ಕಾಲ್ಡ್) ಮೇಲ್ಜಾತಿ ಮನೆಗಳಲ್ಲಿ ಕೆಳಗೇ ಕೈಕಟ್ಟಿ ಕೂತುಕೊಳ್ಳುತ್ತಾನೆ; ಮೇಲ್ಜಾತಿ ದೇವಸ್ಥಾನಗಳನ್ನು ಪ್ರವೇಶಿಸುವುದಿಲ್ಲ; ಮೇಲ್ಜಾತಿ ಜನರಿಗೆ ಕೊಡಬೇಕಾದ ಗೌರವವನ್ನು ಕೊಡುತ್ತಾನೆ. ಅದಕ್ಕೇ ಆತ ಗೆಲ್ಲುತ್ತಿರುವುದು ಎಂಬ ಜಾತಿ ಪ್ರತಿಷ್ಠೆಯ ಮಾತುಗಳನ್ನು. ಇದನ್ನು ಕೆಲವೊಮ್ಮೆ ಮುಗ್ಧ ಮಾತುಗಳಂತೆಯೂ ಉದುರಿಸುವುದಿದೆ! ಅದೇ ತುಸು ಅಸರ್ಟಿವ್ ಆಗಿ ಮಾತನಾಡುವ ದಲಿತ ರಾಜಕಾರಣಿಗಳ ಬಗ್ಗೆ ಇಲ್ಲಸಲ್ಲದ ಗುಲ್ಲೆಬ್ಬಿಸುವುದು, ಅಪಪ್ರಚಾರ ನಡೆಸುವುದನ್ನು ನಮ್ಮ ಸುತ್ತಲೂ ಢಾಳವಾಗಿ ಕಾಣಬಹುದು. ಅಂತವರಿಗೆ ಎಲ್ಲರನ್ನು ನಿಭಾಯಿಸಲಾಗದ, ಎಲ್ಲರ ಜೊತೆಗೆ ಹೆಜ್ಜೆ ಹಾಕಲಾಗದ ಎಲೀಟ್ ಎಂಬ ಹಣೆಪಟ್ಟಿ ಕಟ್ಟುವುದು ವಿರಳವೇನಲ್ಲ. ಇನ್ನೂ ಸ್ವಲ್ಪ ಹೆಚ್ಚು ಅಸರ್ಟ್ ಮಾಡುವವರ ಮೇಲೆ, ಚಂದ್ರಶೇಖರ್ ರಾವಣ್ ಮೇಲೆ ಹಲ್ಲೆ ಮಾಡಿದಂತೆಯೇ ಅಟ್ಯಾಕ್ ಮಾಡಬಹುದು. ಅದು ಇನ್ನೂ ವಿಕೋಪಕ್ಕೂ ಹೋಗಬಹದು. ಕಲಾಪ್ರಾಕಾರಗಳಲ್ಲಿ ಈ ಕಥೆಗಳನ್ನು ಹೇಳುವವರು ಬೇಡವೇ?

ಇದನ್ನೂ ಓದಿ: ಸಿನಿಮಾ ವಿಮರ್ಶೆ; ಬಿರಿಯಾನಿ ಘಮಲಿನ ಮ್ಯಾಜಿಕ್ ಸೃಷ್ಟಿಸಲು ವಿಫಲವಾದ ’ಡೇರ್‌ಡೆವಿಲ್ ಮುಸ್ತಫಾ’

ಬೇಕೇಬೇಕು ಎಂದು ತಮಿಳುನಾಡಿನ ಕೆಲವು ಯುವಕರು ಕೆಲವು ವರ್ಷಗಳ ಹಿಂದೆ ಸಿನಿಮಾಗಳನ್ನು ಮಾಡಲು ಮುಂದಾದರು ಮತ್ತು ಜಾತಿವಿರೋಧಿ ಆಂದೋಲನದ ವಿವೇಕವನ್ನು ಸಿನಿಮಾ ಕ್ಷೇತ್ರಕ್ಕೆ ವಿಸ್ತರಿಸಿ ಅವರು ಪಸರಿಸುತ್ತಿದ್ದಾರೆ. ಪರಸ್ಪರ ಸಹಕಾರಕ್ಕೂ ಅವರು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಜನಸಾಮಾನ್ಯರನ್ನು ತಮ್ಮ ಸಿನಿಮಾಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲೂ ಅವರು ಸಫಲರಾಗಿದ್ದಾರೆ. ಮುಖ್ಯವಾಹಿನಿ ಸಿನಿಮಾಗಳಲ್ಲಿ ಜಾತಿಯ, ಜಾತಿ ದೌರ್ಜನ್ಯದ ಪ್ರಶ್ನೆಗಳೆತ್ತಿ, ’ಕಮರ್ಷಿಯಲ್’ ಸಿನಿಮಾಗಳೆಂದರೆ ಕೇವಲ ತಲೆಬುಡವಿಲ್ಲದ ಫೈಟ್, ಹಾಸ್ಯ ಮತ್ತು ಹಾಡುಗಳ ದೃಶ್ಯಗಳಿಂದ ತುಂಬುವುದು ಮಾತ್ರವಲ್ಲ ಬದಲಾಗಿ ಗಂಭೀರವಾದ ಕಥೆಗಳನ್ನು ಕೂಡ ಹೇಳಬಹುದು ಎಂದು ಮರುವ್ಯಾಖ್ಯಾನಿಸುವುದರಲ್ಲೂ ಅವರು ಸಫಲರಾಗಿದ್ದಾರೆ. ಅದರಲ್ಲಿ ಪ ರಂಜಿತ್ ಮತ್ತು ಮಾರಿ ಸೆಲ್ವರಾಜ್ ಪ್ರಮುಖರು. ಈಗ ಮಾರಿ ಸೆಲ್ವರಾಜ್ ಮತ್ತೊಂದು ಆಂಟಿ ಕ್ಯಾಸ್ಟ್ ಫಿಲ್ಮ್ ’ಮಾಮನ್ನನ್’ಅನ್ನು ನಿರ್ದೇಶಿಸಿ ಬಿಡುಗಡೆ ಮಾಡಿದ್ದಾರೆ. ಒಂದು ಕಡೆಗೆ ಬಾಬಾಸಾಹೇಬರ ಮತ್ತು ಪೆರಿಯಾರ್‌ರಂತಹ ಮಹನೀಯರ ಬರಹ, ಬದುಕು ಮತ್ತು ಚಳವಳಿಗಳಿಂದ ಪ್ರೇರಣೆ ಪಡೆದು ಉದಯಿಸಿದ ಡಿಎಂಕೆ ಪಕ್ಷ, ತಮಿಳುನಾಡಿನಲ್ಲಿ ಧಾರಾಳವಾಗಿದ್ದ ಜಾತಿ ದೌರ್ಜನ್ಯವನ್ನೂ ತನ್ನ ಒಡಲಲ್ಲಿ ಇಟ್ಟುಕೊಂಡ ವೈರುಧ್ಯಗಳನ್ನು ಹೊಂದಿದ್ದ ಪಕ್ಷವಾಗಿತ್ತು. ಈಗ ತಾತ್ವಿಕವಾಗಿ ಅದು ತಾನು ಬದಲಾಗಿದ್ದೇನೆಂದು ಪ್ರತಿಪಾದಿಸಿಕೊಳ್ಳುತ್ತಿದ್ದರೂ, ಆ ಪಕ್ಷದ ಮೇಲೆ ಅಂತಹ ಆರೋಪಗಳು ಇನ್ನೂ ಆಗಾಗ ಕೇಳಿಬರುತ್ತಿರುತ್ತವೆ. ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಸ್ಟಾಲಿನ್ ಅವರ ಮಗ ಉದಯಾನಿಧಿ ಸ್ಟಾಲಿನ್ ಅವರು ಸದರಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಸಿನಿಮಾದ ನಿರ್ಮಾಪಕರಾಗಿಯೂ ತೊಡಗಿಸಿಕೊಂಡಿದ್ದಾರೆ.

ಮಾರಿ ಸೆಲ್ವರಾಜ್

’ಮಾಮನ್ನನ್’ (ಖ್ಯಾತ ತಮಿಳು ಹಾಸ್ಯ ನಟ ವಡಿವೇಲು ಈ ಪಾತ್ರವನ್ನು ನಿರ್ವಹಿಸಿದ್ದಾರೆ) ಮೀಸಲು ಕ್ಷೇತ್ರದ ಶಾಸಕ. ತನ್ನ ಮನೆಗೆ ಯಾರೇ ತನ್ನನ್ನು ಭೇಟಿಯಾಗಲೂ ಬಂದರೂ ಅವರನ್ನು ಕುಳಿತುಕೊಳ್ಳುವಂತೆ ಮಾಡಲು ಆದ್ಯತೆ ನೀಡುವ ಮತ್ತು ತನ್ನ ಜೊತೆಗೆ ಸಮಾನವಾಗಿ ಕುಳಿತುಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಅವರಿಗೆ ಮಾಮನ್ನನ್ ಯಾವಾಗಲೂ ತಿಳಿಸುತ್ತಿರುತ್ತಾನೆ. ಇದೊಂದು ಮಾಮೂಲಿ ಕ್ರಿಯೆಯನ್ನು ಅಷ್ಟು ಒತ್ತುನೀಡಿ ಒಂದೆರಡು ದೃಶ್ಯಗಳಲ್ಲಿ ಚಿತ್ರಿಸುತ್ತಿರುವುದರಿಂದ, ಇದು ಬಹುಶಃ ಮುಂದೆ ಈ ಚಿತ್ರದ ಮುಖ್ಯ ಸಂಘರ್ಷವಾಗಿ ಬೆಳೆಯಬಹುದು ಎಂಬ ಸೂಚನೆ ವೀಕ್ಷಕನಿಗೆ ಸಿಗದೆ ಇರಲಾರದು.

ಕಥೆ ಹಿನ್ನೆಲೆಗೆ ಜಾರುತ್ತದೆ. ಸೇಲಂನ ಕಾಸಿಪುರಂ ಕ್ಷೇತ್ರದಲ್ಲಿ ಮಾಮನ್ನನ್ ಸಣ್ಣ ಮಟ್ಟದ ದಲಿತ ರಾಜಕಾರಣಿ. ತಾನು ಬದುಕುತ್ತಿರುವ ಹಳ್ಳಿಯಲ್ಲಿ ಒಂದು ಜಾತಿ ದೌರ್ಜನ್ಯ ನಡೆಯುತ್ತದೆ. ಊರ ಬಾವಿಯಲ್ಲಿ ಹಾರಿ ಈಜಾಡುವ ನಾಲ್ಕು ದಲಿತ ಬಾಲಕರು ತಪ್ಪಿಸಿಕೊಳ್ಳಲಾಗದಂತೆ ಸವರ್ಣೀಯರು ಅವರೆಡೆಗೆ ಕಲ್ಲುಗಳನ್ನು ತೂರುತ್ತಾರೆ. ಒಬ್ಬನನ್ನು ಹೊರತುಪಡಿಸಿ ಮೂವರು ಬಾಲಕರು ಕಲ್ಲೆಸೆತದಿಂದ ಮೃತಪಡುತ್ತಾರೆ. ಆದರೆ ಅಲ್ಲಿನ ಸವರ್ಣೀಯ ರಾಜಕಾರಣಿಯ ಬೆದರಿಕೆಯ ಮತ್ತು ಸೋಗಲಾಡಿ ಮಾತುಗಳಿಗೆ ತಲೆಬಾಗಿ ಪ್ರಕರಣ ದಾಖಲಾಗದಂತೆ ತಡೆಯಲು ಮಾಮನ್ನನ್ ಸಹಕರಿಸುತ್ತಾನೆ. ಮುಂದೆ ಕಾಸಿಪುರಂ ಮೀಸಲು ಕ್ಷೇತ್ರವಾಗಿ ಬದಲಾಗುತ್ತದೆ; ಅಲ್ಲಿ ಮಾಮನ್ನನ್ ಶಾಸಕನಾಗುತ್ತಾನೆ. ಆದರೆ ಸವರ್ಣೀಯರ ಮತ್ತು ದಲಿತ ಶಾಸಕನ ನಡುವಿನ ಸಮೀಕರಣ ಬದಲಾಗಿದೆಯೇ? ದಲಿತ ಬಾಲಕರ ಕೊಲೆ ಪ್ರಕರಣದಲ್ಲಿ ರಾಜಿ ಮಾಡಿಕೊಂಡ ಗಿಲ್ಟ್ ಮಾಮನ್ನನ್‌ಅನ್ನು ಕಾಡದೆ ಬಿಡುತ್ತದೆಯೇ?

ಮತ್ತೆ ಕಥೆ ವರ್ತಮಾನಕ್ಕೆ ಬರುತ್ತದೆ. ಮಾಮನ್ನನ್ ಮಗ ಅಥಿವೀರ (ಉದಯಾನಿಧಿ ಸ್ಟಾಲಿನ್) 15 ವರ್ಷಗಳಿಂದ ತಂದೆಯ ಜೊತೆಗೆ ಮಾತು ಬಿಟ್ಟಿರುವ ವಿಷಯ ವೀಕ್ಷಕರಿಗೆ ಈಗಾಗಲೇ ತಿಳಿದಿರುತ್ತದೆ. ಫ್ಲಾಷ್‌ಬ್ಯಾಕ್‌ನಲ್ಲಿ ಹೇಳುವ ಕಥೆಯಲ್ಲಿ ಗೊತ್ತಾದಂತೆ, ಬಾವಿಯಲ್ಲಿ ಈಜಾಡುವಾಗ ಸವರ್ಣೀಯರ ದಾಳಿಯಿಂದ ಉಳಿದ ಒಬ್ಬನೇ ಬಾಲಕ ಅಥಿವೀರ. ಆ ಟ್ರಾಮಾದಿಂದ ಮತ್ತು ತನ್ನ ತಂದೆ ಸವರ್ಣೀಯರ ಎದುರು ಮೌನವಹಿಸಿದ ಆಘಾತದಿಂದ ಹೊರಬರಲು ಅವನಿಗೆ ಸಾಧ್ಯವಾಗಿಲ್ಲ. ಈಗ, ತನ್ನ ಪ್ರೀತಿಯ ಕೆಲಸವಾದ ಹಂದಿಗಳ ಸಾಕಣೆ ಮತ್ತು ಮಾರ್ಷಲ್ ಆರ್ಟ್ ಕಲಿಸಿಕೊಡುವುದರಲ್ಲಿ ಅಥಿವೀರ ನಿರತನಾಗಿದ್ದಾನೆ. ಅನಿರೀಕ್ಷಿತವಾಗಿ ಒಂದು ಸಮಸ್ಯೆ ಎದುರಾಗಿ ತನ್ನ ತಂದೆಯ ಜೊತೆಗೆ ಈಗಿನ ಪೀಳಿಗೆಯ ಫ್ಯೂಡಲ್ ರಾಜಕಾರಣಿಯನ್ನು ಕಾಣಲು ಹೋಗಬೇಕಾಗುತ್ತದೆ. 15 ವರ್ಷಗಳ ತರುವಾಯವೂ, ತನ್ನೂರಿನ ಫ್ಯೂಡಲ್ ರಾಜಕಾರಣಿಗಳು ತನ್ನ ತಂದೆಯ ಜೊತೆಗೆ ಕೆಟ್ಟದಾಗಿ ವರ್ತಿಸುವ, ಕುಳಿತುಕೊಳ್ಳಲು ಒಂದು ಕುರ್ಚಿಯನ್ನೂ ಕೊಡದೆ ಮಾತನಾಡಿಸುವ ಸವರ್ಣೀಯರ ಕ್ರೌರ್ಯ ಪರಿಚಯವಾಗುತ್ತದೆ, ಕೆರಳಿಸುತ್ತದೆ. ಮೊದಲ ಭೇಟಿಯಲ್ಲಿಯೇ ರತ್ನವೇಲು (ಫಹದ್ ಫಾಸಿಲ್) ಜೊತೆಗೆ ಇದು ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಮತ್ತು ವೀಕ್ಷಕರನ್ನೂ ಸೀಟಿನ ತುದಿಗೆ ತಂದು ಕೂರಿಸುತ್ತದೆ.

ಶೋಷಿತರು ತಿರುಗಿಬೀಳುವುದನ್ನು ಫ್ಯೂಡಲ್ ಜಾತಿಯ ರತ್ನವೇಲು ಸಹಿಸಿಕೊಳ್ಳಲು ಸಾಧ್ಯವೇ? ಮಾಮನ್ನನ್ ಮತ್ತು ಅಥಿವೀರ ತಮ್ಮ ಘನತೆಯ ಹೋರಾಟಕ್ಕಾಗಿ ತಮ್ಮ ನಡುವಿನ ಕಂದರವನ್ನು ತುಂಬಿಕೊಂಡು ಒಟ್ಟಿಗೆ ಹೋರಾಡಲು ಸಾಧ್ಯವೇ?

ಸಾಂಕೇತಿಕವಾಗಿ ಮಾಮನ್ನನ್ ಮತ್ತು ರತ್ನವೇಲು ಡಿಎಂಕೆ ಪಕ್ಷಕ್ಕೆ ಸೇರಿದವರಂತೆ ಚಿತ್ರಿಸಿರುವುದರಿಂದ ಹಾಗೂ ಆ ರಾಜಕೀಯ ಪಕ್ಷದ ಚೌಕಟ್ಟಿನಲ್ಲಿಯೇ ಸಂಘರ್ಷವನ್ನು ಬಗೆಹರಿಸಿ ರಾಜಕೀಯ ಪಕ್ಷದ ಸುಧಾರಣೆಯನ್ನು ಕಟ್ಟಿಕೊಡುವ ನಿರೂಪಣೆಗೆ ಸೀಮಿತವಾಗಿರುವುದರಿಂದ ಸಮುದಾಯದ ಮಟ್ಟದಲ್ಲಿ, ಜನರ ಸಂಘಟಿತ ಹೋರಾಟವನ್ನು ಚಿತ್ರಿಸುವ ಅವಕಾಶವನ್ನು ನಿರ್ದೇಶಕ ಮಾರಿ ಸೆಲ್ವರಾಜ್ ಕಳೆದುಕೊಂಡರೇನೋ ಅನ್ನಿಸದೆ ಇರದು. ಆದರೆ, ಚುನಾವಣಾ ರಾಜಕಾರಣದಲ್ಲಿರುವ ಜಾತೀಯತೆಯ ಕೊಳಕನ್ನು ಮುಖ್ಯವಾಹಿನಿ ಸಿನಿಮಾ ಮಾಧ್ಯಮದಲ್ಲಿ ತೋರಿಸಲು ಮಾಡಿಕೊಂಡಿರುವ ಆಯ್ಕೆಗೇ ಮಾರಿ ಸೆಲ್ವರಾಜ್ ಅಭಿನಂದನಾರ್ಹರು. ಸಿನಿಮಾದ ಮುಖ್ಯ ಸಂಘರ್ಷವಾದ ಫ್ಯೂಡಲ್ ಕ್ರೌರ್ಯ ವರ್ಸಸ್ ತಳಸಮುದಾಯಗಳ ಘನತೆಯನ್ನು ಅತ್ಯುತ್ತಮವಾಗಿ ಎಸ್ಟಾಬ್ಲಿಷ್ ಮಾಡುವ ಜೊತೆಜೊತೆಗೇ, ಎರಡು ಪೀಳಿಗೆಗಳು ತಮ್ಮ ಮೇಲಾಗುವ ದೌರ್ಜನ್ಯಕ್ಕೆ ಹೇಗೆ ಮುಖಾಮುಖಿಯಾಗುತ್ತವೆ ಎಂಬ ಉಪಸಂಘರ್ಷವನ್ನೂ ಮಾರಿ ಕಟ್ಟಿಕೊಡುತ್ತಾರೆ. ಕಾನೂನು ವಿದ್ಯಾರ್ಥಿ ಕಾಲೇಜಿನಲ್ಲಿ ಎದುರಿಸುವ ಜಾತಿ ದೌರ್ಜನ್ಯದ ಕಥೆಯಾದ ಮಾರಿಯವರ ಮೊದಲನೆಯ ಸಿನಿಮಾ ’ಪರಿಯೇರುಂ ಪೆರುಮಾಳ್’ ಹಾಗೂ ಆಗತಾನೆ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದ್ದ ದಲಿತ ಸಮುದಾಯದ ಮೇಲೆ ಸವರ್ಣೀಯರು ನಡೆಸುವ ದೌರ್ಜನ್ಯದ ಕಥೆಯಾದ ’ಕರ್ಣನ್’ ಸಿನಿಮಾದಲ್ಲಿ ಕೂಡ ಈ ಉಪಸಂಘರ್ಷ ಮಾರಿ ಅವರಿಗೆ ರಿಪಿಟಿಟಿವ್ ಆದ ಶೋಧನೆಯಾಗಿದೆ. ಮೂರೂ ಸಿನಿಮಾಗಳಲ್ಲಿ ಕಾಲಘಟ್ಟಕ್ಕೆ ತಕ್ಕಂತೆ ದಲಿತರ ಪ್ರತಿರೋಧದ ಬಗೆ ವಿಭಿನ್ನವಾಗಿದ್ದರೂ, ಆ ಪ್ರತಿರೋಧ ಎಂದೂ ದ್ವೇಷದಿಂದ ಕೂಡಿರದೆ ಅಥವಾ ಸೇಡನ್ನು ಪ್ರತಿಪಾದಿಸದೆ ತಮ್ಮ ಘನತೆಯ ಬದುಕಿಗೆ ನಡೆಸುವ ಹೋರಾಟವೆಂಬಂತೆ ಚಿತ್ರಿಸಿರುವುದು ಪ್ರಜ್ಞವಾಂತ ನಿರ್ದೇಶಕ ಮಾರಿ ಅವರ ಹೆಚ್ಚುಗಾರಿಕೆ.

ತಮಿಳು ಚಿತ್ರರಂಗದಲ್ಲಿ ಹಾಸ್ಯನಟನೆಗೆ ಸೀಮಿತವಾಗಿದ್ದ ವಡಿವೇಲು, ಮಾಮನ್ನನ್ ಪಾತ್ರದಲ್ಲಿ, ತನ್ನ ಸಮುದಾಯದ ಮೇಲೆ ನಡೆದ ದೌರ್ಜನ್ಯಕ್ಕೆ ಪ್ರತಿರೋಧ ತೋರಿಸದೆ ರಾಜಿಯಾದ ಸಂಕಟವನ್ನು ಒಡಲಲ್ಲಿಟ್ಟುಕೊಂಡು, ಎರಡು ಬಾರಿ ಶಾಸಕನಾಗಿ ತನಗಿಂತಲೂ ಕಿರಿಯವನ ಕೈಲಿ ಅವಮಾನ ಎದುರಿಸುವ ರಾಜಕೀಯ ಜೀವನವನ್ನು ಪರಿಣಾಮಕಾರಿಯಾಗಿ ನಟಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತುಸುವಾದರೂ ಸಂಚಲನ ಮೂಡಿಸಬಲ್ಲ ಶಕ್ತಿಯಿರುವ ಮತ್ತು ಸುಧಾರಣೆಗೆ ಆಹ್ವಾನ ನೀಡುವ ಈ ಸಿನಿಮಾ ತನ್ನೆಲ್ಲಾ ಲೋಪದೋಷಗಳ ಹೊರತಾಗಿಯೂ, ಭಾರತದ ಕ್ರೂರ ವಾಸ್ತವಗಳನ್ನು ಬಿಚ್ಚಿಡುವ ಪ್ರಮುಖ ಸಿನಿಮಾವಾಗಿ ಕಾಡುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...