Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಳವಳ್ಳಿ: ಹಾಲಿ ಶಾಸಕ ಅನ್ನದಾನಿ ಮೇಲಿನ ಆಡಳಿತ ವಿರೋಧಿ ಅಲೆ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಳವಳ್ಳಿ: ಹಾಲಿ ಶಾಸಕ ಅನ್ನದಾನಿ ಮೇಲಿನ ಆಡಳಿತ ವಿರೋಧಿ ಅಲೆ ನರೇಂದ್ರ ಸ್ವಾಮಿಯವರಿಗೆ ವರವಾಗಲಿದೆಯೇ?

- Advertisement -
- Advertisement -

ಮೈಸೂರು ಪ್ರಾಂತ್ಯದ ಭಾಗವಾಗಿದ್ದಾಗ ಮಳವಳ್ಳಿ ವಿಧಾನಸಭಾ ಕ್ಷೇತ್ರವು ಎರಡು ಸ್ಥಾನಗಳನ್ನು ಹೊಂದಿತ್ತು. ಒಂದು ಸ್ಥಾನ ಸಾಮಾನ್ಯ ಕ್ಷೇತ್ರವಾದರೆ ಮತ್ತೊಂದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. ಆನಂತರ 1962ರ ವೇಳೆಗೆ ಕಿರುಗಾವಲು ಕ್ಷೇತ್ರವನ್ನು ರಚಿಸಿ, ಅದನ್ನು ಸಾಮಾನ್ಯ ಕ್ಷೇತ್ರವನ್ನಾಗಿ ಮಾಡಿದರೆ, ಮಳವಳ್ಳಿಯನ್ನು ಮೀಸಲು ಸ್ಥಾನವನ್ನಾಗಿ ಉಳಿಸಿಕೊಳ್ಳಲಾಯಿತು. ಇದು ಮಂಡ್ಯ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದೆ. ದುರಂತವೆಂದರೆ ಇಡೀ ಜಿಲ್ಲೆಯಲ್ಲಿ ಜಾತೀಯತೆ ಹೊದ್ದು ಮಲಗಿದ್ದರೆ, ಅಸ್ಪೃಶ್ಯತೆಯಿಂದ ಹೆಚ್ಚು ನಲುಗಿದ ಕ್ಷೇತ್ರ ಕೂಡ ಆಗಿದೆ.

1952ರ ಮೊದಲ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಕಿಸಾನ್ ಮಜ್ದೂರ್ ಪಕ್ಷದಿಂದ ಬಿ.ಪಿ ನಾಗರಾಜ ಮೂರ್ತಿಯವರು ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಕೆ.ವಿ ವೀರಪ್ಪರವರ ಎದುರು ಜಯ ಪಡೆಯುತ್ತಾರೆ. ಮೀಸಲು ಸ್ಥಾನದಿಂದ ಡಾ.ಬಿ.ಆರ್ ಅಂಬೇಡ್ಕರ್ ಸ್ಥಾಪಿಸಿದ್ದ ಶೆಡ್ಯೂಲ್ ಕಾಸ್ಟ್ ಫೆಡರೇಷನ್ ಪಕ್ಷದಿಂದ ಎನ್.ಚಿಕ್ಕಲಿಂಗಯ್ಯನವರು ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಎಂ.ಸಿ ವೆಂಕಟೇಶ್ ವಿರುದ್ಧ ಗೆಲುವು ಕಾಣುತ್ತಾರೆ.

ಬಿ.ಪಿ ನಾಗರಾಜ ಮೂರ್ತಿ

1957ರ ಎರಡನೇ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಹೆಚ್.ವಿ ವೀರೇಗೌಡರು ಸ್ಪರ್ಧಿಸಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಬಿ.ಪಿ ನಾಗರಾಜಮೂರ್ತಿಯವರನ್ನು ಮಣಿಸುತ್ತಾರೆ. ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಎಂ.ಮಲ್ಲಿಕಾರ್ಜುನ ಸ್ವಾಮಿಯವರು ಸ್ಪರ್ಧಿಸಿ ಶೆಡ್ಯೂಲ್ ಕಾಸ್ಟ್ ಫೆಡರೇಷನ್ ಪಕ್ಷದ ಎನ್.ಚಿಕ್ಕಲಿಂಗಯ್ಯನವರನ್ನು ಸೋಲಿಸಿ ಶಾಸಕರಾಗುತ್ತಾರೆ.

1962 ಚುನಾವಣೆ ವೇಳೆಗೆ ಮಳವಳ್ಳಿ ಸಾಮಾನ್ಯ ಸ್ಥಾನ ಮಾತ್ರ ಉಳಿದಿರುತ್ತದೆ. ಆಗ ಜಿ.ಮಾದೇಗೌಡರವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಎಂ.ಸಿ ದೊಡ್ಡಯ್ಯನವರನ್ನು ಮಣಿಸುತ್ತಾರೆ.

1967ರ ವೇಳೆಗೆ ಮಳವಳ್ಳಿ ಮೀಸಲು ಕ್ಷೇತ್ರವಾಗುತ್ತದೆ. ಪಕ್ಕದ ಕಿರುಗಾವಲು ಸಾಮಾನ್ಯ ಕ್ಷೇತ್ರವಾಗುತ್ತದೆ (ಈಗ ಆ ಕ್ಷೇತ್ರ ಅಸ್ತಿತ್ವದಲ್ಲಿಲ್ಲ). ಆ ಚುನಾವಣೆಯಲ್ಲಿ ಎಂ.ಮಲ್ಲಿಕಾರ್ಜುನ ಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಪ್ರಜಾ ಸೋಷಿಯಲಿಸ್ಟ್ ಪಕ್ಷದ ಎಂ.ಮಹಾದೇವ ಸ್ವಾಮಿಯವರನ್ನು ಮಣಿಸುತ್ತಾರೆ. ಆ ಮೂಲಕ ಎರಡು ಬಾರಿ ಮಳವಳ್ಳಿಯಿಂದ ಮತ್ತು ಒಮ್ಮೆ ಕಿರುಗಾವಲಿನಿಂದ ಜಯಸಿ ಸತತ ಮೂರನೇ ಬಾರಿಗೆ ಶಾಸಕರಾದರು.

1972ರಲ್ಲಿ ಎಂ.ಮಲ್ಲಿಕಾರ್ಜುನ ಸ್ವಾಮಿಯವರು ಕಾಂಗ್ರೆಸ್‌ನಿಂದ ಕಣಕ್ಕಿಳಿದು ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ರುದ್ರಯ್ಯನವರನ್ನು ಮಣಿಸುತ್ತಾರೆ. ನಾಲ್ಕು ಬಾರಿ ಶಾಸಕರಾದ ಅವರು ಗ್ರಾಮೀಣಾಭಿವೃದ್ದಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ.

1978ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷವು ಎಂ.ಮಲ್ಲಿಕಾರ್ಜುನ ಸ್ವಾಮಿಗೆ ಬದಲಾಗಿ ಎಂ.ಶಿವಯ್ಯನವರಿಗೆ ಟಿಕೆಟ್ ನೀಡುತ್ತದೆ. ಇದರಿಂದ ಸಿಟ್ಟಿಗೆದ್ದ ಮಲ್ಲಿಕಾರ್ಜುನ ಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಇವರಿಬ್ಬರ ನಡುವಿನ ಮತ ವಿಭಜನೆಯಿಂದ ಜನತಾ ಪಕ್ಷದ ಕೆ.ಎಲ್ ಮರಿಸ್ವಾಮಿಯವರು ಕೇವಲ 62 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೇಲುಕೋಟೆಯಲ್ಲಿ ಸಿ.ಎಸ್ ಪುಟ್ಟರಾಜು ವರ್ಸಸ್ ದರ್ಶನ್ ಪುಟ್ಟಣ್ಣಯ್ಯ ನಡುವೆ ಫೈಟ್: ಅದೃಷ್ಟದ ಅದಲುಬದಲು ಸಾಧ್ಯವೇ?

1983ರ ಚುನಾವಣೆಯಲ್ಲಿ ಯುವ ಮುಖಂಡ ಬಿ.ಸೋಮಶೇಖರ್ ಜನತಾ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಅವರು ಕಾಂಗ್ರೆಸ್ ಪಕ್ಷದ ಎಂ.ಮಾದಯ್ಯನವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸುತ್ತಾರೆ. ಅವರಿಗೆ ಪ್ರಾಥಮಿಕ ಮತ್ತು ವಯಸ್ಕರ ಶಿಕ್ಷಣ ಖಾತೆ ನೀಡಲಾಗುತ್ತದೆ. 1985ರ ವೇಳೆಗೆ ಸೋಮಶೇಖರ್ ಮತ್ತೆ ಜನತಾ ಪಕ್ಷದಿಂದ ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಹೆಚ್.ಡಿ ಅಮರನಾಥ್‌ರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ.

1989ರ ಚುನಾವಣೆಯಲ್ಲಿ ಬಿ.ಸೋಮಶೇಖರ್ ಜನತಾದಳದಿಂದ ಸ್ಪರ್ಧಿಸುತ್ತಾರೆ. ಅವರನ್ನು ಕಾಂಗ್ರೆಸ್ ಪಕ್ಷದ ಮಲ್ಲಾಜಮ್ಮನವರು ಸೋಲಿಸಿ ಮೊದಲ ಬಾರಿಗೆ ಶಾಸಕರಾಗುತ್ತಾರೆ. ಆದರೆ 1994ರಲ್ಲಿ ನಡೆಯುವ ಚುನಾವಣೆಯಲ್ಲಿ ಜನತಾದಳದಲ್ಲಿದ್ದ ಸೋಮಶೇಖರ್ ಕಾಂಗ್ರೆಸ್‌ನ ಮಲ್ಲಾಜಮ್ಮನವರನ್ನು ಸೋಲಿಸಿ ಮೂರನೇ ಬಾರಿಗೆ ಶಾಸಕರಾಗುತ್ತಾರೆ. ಅಲ್ಲದೆ ಉನ್ನತ ಶಿಕ್ಷಣ ಸಚಿವರಾಗುತ್ತಾರೆ. ಆದರೆ ಅವರು ಕಾನೂನು ಓದುವಾಗ ನಕಲಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ರಾಜೀನಾಮೆ ನೀಡಬೇಕಾಗುತ್ತದೆ. ತನಿಖೆಯ ನಂತರ ನಿರ್ದೋಷಿಯೆಂದು ಪರಿಗಣಿಸಿ ಅವರನ್ನು ಕಂದಾಯ ಮಂತ್ರಿಯನ್ನಾಗಿ ಮಾಡಲಾಗುತ್ತದೆ.

ಮಲ್ಲಿಕಾರ್ಜುನಸ್ವಾಮಿ

1999ರ ಚುನಾವಣೆಯಲ್ಲಿ ಬಿ.ಸೋಮಶೇಖರ್ ಜೆಡಿಯು ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದು ಇಬ್ಬರಿಗೆ ಬಿ ಫಾರಂ ನೀಡಲಾಗುತ್ತದೆ. ಕೊನೆಗೆ ಪಿ.ಎಂ ನರೇಂದ್ರ ಸ್ವಾಮಿ ಅಧಿಕೃತ ಅಭ್ಯರ್ಥಿಯಾಗುತ್ತಾರೆ. ಆದರೆ ಮಾಜಿ ಶಾಸಕಿ ಮಲ್ಲಾಜಮ್ಮನವರು ಪಕ್ಷೇತರರಾಗಿ ಕಣದಲ್ಲಿ ಉಳಿಯುತ್ತಾರೆ. ಇವರಿಬ್ಬರ ನಡುವಿನ ಮತ ಹಂಚಿಕೆಯಿಂದಾಗಿ ಬಿ.ಸೋಮಶೇಖರ್ ಮತ್ತೆ ಗೆದ್ದು 4ನೇ ಬಾರಿಗೆ ಶಾಸಕರಾಗುತ್ತಾರೆ.

2004ರ ವೇಳೆಗೆ ಡಾ.ಕೆ ಅನ್ನದಾನಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್‌ನಿಂದ ಪಿ.ಎಂ ನರೇಂದ್ರ ಸ್ವಾಮಿ ಅಭ್ಯರ್ಥಿಯಾಗುತ್ತಾರೆ. ಜೆಡಿಯುನಿಂದ ಮಾಜಿ ಸಚಿವ, ಶಾಸಕ ಬಿ.ಸೋಮಶೇಖರ್ ಕಣಕ್ಕಿಳಿಯುತ್ತಾರೆ. ಅನ್ನದಾನಿಯವರು ಮೊದಲ ಬಾರಿ ಗೆದ್ದು ವಿಧಾನಸೌಧ ಪ್ರವೇಶಿಸುತ್ತಾರೆ.

2008ರಲ್ಲಿ ಜೆಡಿಎಸ್‌ನಿಂದ ಅನ್ನದಾನಿಯವರು ಮತ್ತೆ ಕಣಕ್ಕಿಳಿಯುತ್ತಾರೆ. ಎರಡು ಬಾರಿ ಸೋತಿದ್ದ ಪಿ.ಎಂ ನರೇಂದ್ರ ಸ್ವಾಮಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ಯಮದೂರು ಸಿದ್ಧರಾಜುರವರಿಗೆ ಮಣೆ ಹಾಕುತ್ತದೆ. ಇದರಿಂದ ನರೇಂದ್ರಸ್ವಾಮಿಯವರು ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಬಿ.ಸೋಮಶೇಖರ್‌ರವರು ಮತ್ತೆ ಜೆಡಿಯುನಿಂದ ಕಣಕ್ಕಳಿಯುತ್ತಾರೆ. ಆ ಚುನಾವಣೆಯಲ್ಲಿ ಪಿ.ಎಂ ನರೇಂದ್ರ ಸ್ವಾಮಿಯವರು 45,288 ಮತಗಳನ್ನು ಪಡೆದು ಜಯಕಾಣುತ್ತಾರೆ. ಡಾ.ಕೆ ಅನ್ನದಾನಿ 33,369 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಿಜೆಪಿ ಅಭ್ಯರ್ಥಿ ಕಲ್ಕುಣಿ ಮಹದೇವಯ್ಯ 29,158 ಮತಗಳನ್ನು ಪಡೆದರೆ ಬಿಎಸ್‌ಪಿ ಅಭ್ಯರ್ಥಿ ಕಾಡುಮನೆ ಪ್ರಸನ್ನ 10,014 ಮತಗಳನ್ನು ಗಳಿಸಿದರು. ಮಾಜಿ ಸಚಿವ ಬಿ ಸೋಮಶೇಖರ್ 9,062 ಮತಗಳನ್ನು ಪಡೆದು ಐದನೇ ಸ್ಥಾನ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಯಮದೂರು ಸಿದ್ದರಾಜು ಕೇವಲ 7,044 ಮತಗಳನ್ನು ಪಡೆದು, ಠೇವಣಿ ಕಳೆದುಕೊಂಡು ಆರನೇ ಸ್ಥಾನಕ್ಕೆ ನೂಕಲ್ಪಟ್ಟರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀರಂಗಪಟ್ಟಣ: ಟಿಪ್ಪು ಹಳಿಯಲು ಪಣತೊಟ್ಟ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಜೆಡಿಎಸ್-ಕಾಂಗ್ರೆಸ್ ನಡುವೆಯೇ ಫೈಟ್

ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಪಿ.ಎಂ ನರೇಂದ್ರ ಸ್ವಾಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದರು. 2013ರ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್ ಪಾಳಯಕ್ಕೆ ಸೇರಿದ ಅವರು ಸಮೀಪದ ಅಭ್ಯರ್ಥಿ ಕೆ. ಅನ್ನದಾನಿ ವಿರುದ್ಧ 538 ಮತಗಳ ಅಲ್ಪ ಅಂತರದಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾದರು. ಅವರು 61,869 ಮತಗಳನ್ನು ಪಡೆದರೆ, ಜೆಡಿಎಸ್‌ನ ಅನ್ನದಾನಿ 61,331 ಮತಗಳನ್ನು ಪಡೆದರು. ಕೆಜೆಪಿಯ ಜಿ.ಮುನಿರಾಜು 26,397 ಮತಗಳನ್ನು ಪಡೆದರೆ ಬಿಎಸ್‌ಆರ್‌ಸಿಪಿಯಿಂದ ಸ್ಪರ್ಧಿಸಿದ್ದ ಡಾ. ಮೂರ್ತಿ 8,018 ಮತ ಗಳಿಸಿದರು.

2018ರ ಚುನಾವಣೆಯ ಸಮಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಒಕ್ಕಲಿಗರ ಪರವಾಗಿನ ಅಲೆಯಲ್ಲಿ ಡಾ.ಕೆ ಅನ್ನದಾನಿ ಗೆದ್ದು ಬರುತ್ತಾರೆ. ಅವರು 1,03,038 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಪಿ.ಎಂ ನರೇಂದ್ರಸ್ವಾಮಿ 76,278 ಮತಗಳನ್ನು ಪಡೆದು 26,760 ಮತಗಳ ಅಂತರದಿಂದ ಸೋಲು ಕಾಣುತ್ತಾರೆ. ಬಿಜೆಪಿ ಸೇರಿದ್ದ ಮಾಜಿ ಸಚಿವ ಬಿ.ಸೋಮಶೇಖರ್ 10,808 ಮತಗಳಿಗೆ ಸೀಮಿತರಾಗುತ್ತಾರೆ.

ಅಂದಾಜು ಜಾತಿವಾರು ಮತಗಳು

ಮಂಡ್ಯ ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರಗಳಿಗಿಂತ ಭಿನ್ನವಾಗಿ ಮಳವಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕ್ಷೇತ್ರದಲ್ಲಿ ಒಟ್ಟು ಸುಮಾರು 2,50,000 ಮತಗಳಿದ್ದರೆ ಪರಿಶಿಷ್ಟ ಜಾತಿಯ 75,000 ದಷ್ಟು ಮತಗಳಿವೆ. ಒಕ್ಕಲಿಗರ 70,000, ಲಿಂಗಾಯತರ 30,000 ಮತ್ತು 25,000ದಷ್ಟು ಕುರುಬ ಸಮುದಾಯದ ಮತಗಳಿವೆ. ಮುಸ್ಲಿಂ ಸಮುದಾಯದ 15,000 ಮತಗಳಿದ್ದರೆ ಇತರೆ ಸಮುದಾಯದ ಮತಗಳು 35,000 ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

ಎರಡನೇ ಬಾರಿಗೆ ಶಾಸಕರಾಗಿರುವ ಅನ್ನದಾನಿಯವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಎರಡು ಬಾರಿ ಶಾಸಕರಾದರೂ ಸಹ ಕಣ್ಣಿಗೆ ಕಾಣುವ ಅಭಿವೃದ್ದಿ ಮಾಡಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರೆ ಹೇಳುತ್ತಾರೆ. ಇದಕ್ಕೆ ಕಾರಣ ಕೋವಿಡ್ ಬಂದಿದ್ದು, ಬಿಜೆಪಿ ಸರ್ಕಾರ ಅನುದಾನ ನೀಡದಿರುವುದು ಎಂದು ಸಮರ್ಥಿಸಿಕೊಳ್ಳುತ್ತಾರೆ. ಮಳವಳ್ಳಿ ಪಟ್ಟಣದ ರಸ್ತೆಗಳು ಕಿತ್ತುಹೋಗಿವೆ. ಎಲ್ಲೆಲ್ಲೂ ಗುಂಡಿಗಳಿದ್ದು, ಧೂಳು ಮುಖಕ್ಕೆ ರಾಚುತ್ತದೆ. ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ನಗರದ ಸ್ವಚ್ಛತೆ ಹಾಳಾಗಿದೆ. ಹಾಗಾಗಿ ಜನರು ಶಾಸಕರ ಮೇಲೆ ಕೋಪಗೊಂಡಿದ್ದಾರೆ. ಕುಡಿಯುವ ನೀರನ್ನು ಎಲ್ಲರಿಗೂ ಒದಗಿಸಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಇನ್ನು ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತರುವುದು, ಹೆಚ್ಚಿನ ಅನುದಾನ ತರುವುದು ದೂರದ ಮಾತಾಗಿದೆ. ಜೆಡಿಎಸ್ ಪಕ್ಷ ಮಾತ್ರ ಮತ್ತೆ ಅವರಿಗೆ ಟಿಕೆಟ್ ಘೋಷಿಸಿದೆ.

ಕಾಂಗ್ರೆಸ್‌ನಿಂದ ನರೇಂದ್ರ ಸ್ವಾಮಿ ಕಣಕ್ಕೆ

ಎರಡು ಬಾರಿ ಶಾಸಕರಾಗಿರುವ, ಒಮ್ಮೆ ಸಚಿವರಾಗಿರುವ ಪಿ.ಎಂ ನರೇಂದ್ರ ಸ್ವಾಮಿ ಈ ಬಾರಿ ಶತಾಯಗತಾಯ ಗೆಲ್ಲಲು ಕಸರತ್ತು ನಡೆಸಿದ್ದಾರೆ. ತಮ್ಮ ಅವಧಿಯಲ್ಲಿ ಮಾಡಿರುವ ರಸ್ತೆಗಳು, ನೀರಾವರಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ್ತೊಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಬಹಳಷ್ಟು ಜನರು ನರೇಂದ್ರ ಸ್ವಾಮಿಯವರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ, ಕ್ಷೇತ್ರಕ್ಕೆ ಅನುದಾನ ತಂದಿದ್ದಾರೆ ಎನ್ನುತ್ತಾರೆ. ಆದರೆ ಅವರು ಜೋರುದನಿಯಲ್ಲಿ ಒರಟಾಗಿ ಮಾತನಾಡುತ್ತಾರೆ ಎಂದು ಆರೋಪಿಸುತ್ತಾರೆ.

ಇನ್ನು ಮಾಜಿ ಶಾಸಕಿ ಮಲ್ಲಾಜಮ್ಮ ಕೂಡ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಸೇರಿರುವ ಆದರ್ಶ ಶಿಕ್ಷಣ ಸಂಸ್ಥೆಯ ಡಾ.ಮೂರ್ತಿಯವರು ಕಾಂಗ್ರೆಸ್ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಆದರೆ ಅನ್ನದಾನಿಯವರನ್ನು ಸೋಲಿಸುವ ಸಾಮರ್ಥ್ಯವಿರುವುದು ಪಿ.ಎಂ ನರೇಂದ್ರಸ್ವಾಮಿಯವರಿಗೆ ಮಾತ್ರ ಎನ್ನುವ ಹಲವು ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಟಿಕೆಟ್ ಗ್ಯಾರಂಟಿ ಎನ್ನುತ್ತಿದ್ದಾರೆ.

ಬಿಜೆಪಿಯಲ್ಲಿ ಮೂವರು ಆಕಾಂಕ್ಷಿಗಳು

ಮಳವಳ್ಳಿಯಲ್ಲಿ ಇದುವರೆಗೂ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2008ರಲ್ಲಿ ಬಿಜೆಪಿ ಅಭ್ಯರ್ಥಿ ಕಲ್ಕುಣಿ ಮಹದೇವಯ್ಯನವರು 29,158 ಮತಗಳನ್ನು ಪಡೆದಿದ್ದೆ ಇದುವರೆಗಿನ ದೊಡ್ಡ ಸಾಧನೆಯಾಗಿದೆ. ಆದರೂ ಪಕ್ಷದ ಟಿಕೆಟ್‌ಗಾಗಿ ಕ್ಷೇತ್ರದಲ್ಲಿ ಮೂವರು ಪೈಪೋಟಿ ನಡೆಸುತ್ತಿದ್ದಾರೆ. ಭೋವಿ ಸಮುದಾಯದ ಜಿ.ಮುನಿರಾಜುರವರು 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ 26,397 ಮತಗಳನ್ನು ಪಡೆದಿದ್ದರು. ಆದರೆ ಕಳೆದ ಚುನಾವಣೆಯ ಸಮಯದಲ್ಲಿ ಮಾಯವಾಗಿದ್ದ ಅವರು ಈಗ ಮತ್ತೆ ಪ್ರತ್ಯಕ್ಷರಾಗಿದ್ದು ತನಗೇ ಬಿಜೆಪಿ ಟಿಕೆಟ್ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಅವರು ಮೂಲ ಮಳವಳ್ಳಿಯವರಲ್ಲ, ಬೆಂಗಳೂರಿನ ಕೆಂಗೇರಿಯವರು ಎಂದು ಕೆಲವರು ಆರೋಪ ಮಾಡುತ್ತಾರೆ.

ಜಿ ಮುನಿರಾಜು

ಇನ್ನು ಮಾಜಿ ಸಚಿವ ಬಿ.ಸೋಮಶೇಖರ್ ಬಿಜೆಪಿ ಸೇರಿ ಕಳೆದ ಚುನಾವಣೆಯಲ್ಲಿ 10 ಸಾವಿರದಷ್ಟು ಮತಗಳನ್ನು ಪಡೆದಿದ್ದರು. ಅವರು ಮತ್ತೊಮ್ಮೆ ಟಿಕೆಟ್ ಕೇಳುತ್ತಿದ್ದಾರೆ. ನಾಲ್ಕು ಬಾರಿ ಗೆದ್ದು ಐದು ಬಾರಿ ಸೋತಿರುವ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಲು ಹಾತೊರೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಯಮದೂರು ಸಿದ್ಧರಾಜು ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಈ ಮೂವರ ಟಿಕೆಟ್ ರೇಸ್‌ನಲ್ಲಿ ಜಿ.ಮುನಿರಾಜು ಮುಂದಿದ್ದಾರೆ.

ಬಿಎಸ್‌ಪಿ

ಕ್ಷೇತ್ರದಲ್ಲಿ ಒಂದಷ್ಟು ನೆಲೆ ಹೊಂದಿರುವ ಬಿಎಸ್‌ಪಿ ಪಕ್ಷದಿಂದ ರಾಜ್ಯಾಧ್ಯಕ್ಷರಾದ ಎಂ. ಕೃಷ್ಣಮೂರ್ತಿಯವರು ಅಭ್ಯರ್ಥಿಯಾಗಿದ್ದು ಚುನಾವಣಾ ತಯಾರಿ ನಡೆಸಿದ್ದಾರೆ. ಕ್ಷೇತ್ರದಾದ್ಯಂತ ಭೀಮ ಸಂದೇಶ ಯಾತ್ರೆ ಕೈಗೊಂಡಿದ್ದಾರೆ.

2023ರ ಸಾಧ್ಯತೆಗಳು

ಮಳವಳ್ಳಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರಾನೇರ ಹಣಾಹಣಿ ನಡೆಯುವ ಸೂಚನೆಗಳು ಗೋಚರಿಸುತ್ತಿವೆ. ಶಾಸಕ ಅನ್ನದಾನಿಯವರು ಜೆಡಿಎಸ್ ಪಕ್ಷ ಮತ್ತು ಕುಮಾರಸ್ವಾಮಿಯವರ ನಾಮಬಲದ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಪಿ.ಎಂ ನರೇಂದ್ರ ಸ್ವಾಮಿಯವರು ತಾನು ಮಾಡಿದ ಕೆಲಸಗಳು ಮತ್ತು ಕ್ಷೇತ್ರದ ಅಹಿಂದ ಮತಗಳು ತನ್ನ ಕೈ ಹಿಡಿಯುತ್ತವೆ ಎಂದು ನಂಬಿದ್ದಾರೆ.

ಇನ್ನು ಬಿಜೆಪಿ ಪಕ್ಷವು ಜಿ.ಮುನಿರಾಜುರವರಿಗೆ ಟಿಕೆಟ್ ನೀಡಿದ್ದಲ್ಲಿ ಕ್ಷೇತ್ರದ ಒಂದಷ್ಟು ಲಿಂಗಾಯಿತ ಮತಗಳ ಜೊತೆ ಮತ್ತಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅವರೊಟ್ಟಿಗೆ ಬಿಎಸ್‌ಪಿಯ ಎಂ.ಕೃಷ್ಣಮೂರ್ತಿಯವರು ಸಹ ಒಂದಷ್ಟು ಮತಗಳನ್ನು ಪಡೆಯಲಿದ್ದಾರೆ. ಇವರಿಬ್ಬರೂ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಹಾಲಿ ಶಾಸಕ ಡಾ.ಕೆ ಅನ್ನದಾನಿಯವರ ಮತಗಳನ್ನು ಕಬಳಿಸುತ್ತಾರೊ ಅಥವಾ ಮಾಜಿ ಸಚಿವ ನರೇಂದ್ರ ಸ್ವಾಮಿಯವರ ಮತಬುಟ್ಟಿಗೆ ಕೈ ಹಾಕುತ್ತಾರೊ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿರ್ಧಾರವಾಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...