Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀರಂಗಪಟ್ಟಣ: ಟಿಪ್ಪು ಹಳಿಯಲು ಪಣತೊಟ್ಟ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಜೆಡಿಎಸ್-ಕಾಂಗ್ರೆಸ್...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀರಂಗಪಟ್ಟಣ: ಟಿಪ್ಪು ಹಳಿಯಲು ಪಣತೊಟ್ಟ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಜೆಡಿಎಸ್-ಕಾಂಗ್ರೆಸ್ ನಡುವೆಯೇ ಫೈಟ್

- Advertisement -
- Advertisement -

ಭಾರತದ ನೆಲದಲ್ಲಿ ಬ್ರಿಟಿಷರಿಗೆ ಮೊದಲ ಬಾರಿಗೆ ಮಣ್ಣು ಮುಕ್ಕಿಸಿದ್ದ ರಾಜರಾದ ಹೈದರ್‌ಅಲಿ ಮತ್ತು ಟಿಪ್ಪುವಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ವಿಶ್ವಪ್ರಸಿದ್ಧ ಸ್ಥಳಗಳಲ್ಲೊಂದು. ಮೈಸೂರು ಮತ್ತು ಕೆಆರ್‌ಎಸ್ ಅಣೆಕಟ್ಟೆಗೆ ಹತ್ತಿರವಿರುವ ಇದು ಇಂದಿಗೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಕಾವೇರಿ ನದಿ ಕವಲೊಡೆದು ಮತ್ತೆ ಸೇರುವ ಸಂಗಮ, ಟಿಪ್ಪುವಿನ ಬೇಸಿಗೆ ಅರಮನೆಯಲ್ಲಿರುವ ವಸ್ತು ಸಂಗ್ರಹಾಲಯ, ಶ್ರೀ ರಂಗನಾಥ ಸ್ವಾಮಿ ದೇವಾಲಯ, ನಿಮಿಷಾಂಬ ದೇವಾಲಯ, ಕರಿಘಟ್ಟ ಬೆಟ್ಟ, ಟಿಪ್ಪು ಕಟ್ಟಿಸಿದ ಜಾಮಿಯಾ ಮಸೀದಿ ನೋಡಲು ವಿಶ್ವದೆಲ್ಲೆಡೆಯಿಂದ ಜನರು ಶ್ರೀರಂಗಪಟ್ಟಣಕ್ಕೆ ಬರುತ್ತಾರೆ. ರೈತಾಪಿ ಜನರೇ ಪ್ರಧಾನವಾಗಿರುವ ಶ್ರೀರಂಗಪಟ್ಟಣದಲ್ಲಿ ಚುನಾವಣೆ ಬಂದಂತೆ ಓಟಿಗಾಗಿ ಜನರನ್ನು ಒಡೆದಾಳುವ ಯತ್ನ ಆರಂಭವಾಗಿದೆ.

ಶ್ರೀರಂಗಪಟ್ಟಣವು ಕುಟುಂಬ ರಾಜಕಾರಣಕ್ಕೆ ಹೆಸರಾದ ಸಾಮಾನ್ಯ ವಿಧಾನಸಭಾ ಕ್ಷೇತ್ರ. ಮಂಡ್ಯ ನಗರದ ಹೊರವಲಯದಿಂದ ಆರಂಭವಾಗುವ ಈ ಕ್ಷೇತ್ರವ್ಯಾಪ್ತಿ ಕೆ.ಆರ್.ಎಸ್ ಅಣೆಕಟ್ಟೆಯವರೆಗೂ ವ್ಯಾಪಿಸಿದೆ. ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಮತ್ತು ತಗ್ಗಹಳ್ಳಿ ಜಿಲ್ಲಾ ಪಂಚಾಯ್ತಿಗಳು, ಕೊತ್ತತ್ತಿ 1 ಮತ್ತು 2ನೇ ಹೋಬಳಿಗಳು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿವೆ. ಈ ಕ್ಷೇತ್ರದಲ್ಲಿ ಅರಕೆರೆ ಗ್ರಾಮದ ಎರಡು ಕುಟುಂಬಗಳೇ ಇದುವರೆಗೂ ಪಾರಮ್ಯ ಮೆರೆದಿವೆ. ಮೂವರು ಮಹಿಳೆಯರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಒಕ್ಕಲಿಗ ಬಾಹುಳ್ಯದ ಈ ಮತ ಕ್ಷೇತ್ರದಲ್ಲಿ ಗೆದ್ದವರು, ಬಿದ್ದವರು ಎಲ್ಲರೂ ಒಕ್ಕಲಿಗರೇ ಆಗಿದ್ದಾರೆ. ಇದುವರೆಗಿನ 16 ಚುನಾವಣೆಗಳಲ್ಲಿ ಕಾಂಗ್ರೆಸ್ 5 ಬಾರಿ ಗೆಲುವು ಕಂಡರೆ, ಜನತಾಪಕ್ಷ 4 ಬಾರಿ, ಜೆಡಿಎಸ್ 4 ಬಾರಿ, ಜನತಾದಳ ಒಮ್ಮೆ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಚುನಾವಣಾ ಇತಿಹಾಸ

1952ರ ಮೊದಲ ಚುನಾವಣೆಯಲ್ಲಿ ಅರಕೆರೆ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಪುಟ್ಟಸ್ವಾಮಿಯವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸ್ವತಂತ್ರ ಅಭ್ಯರ್ಥಿಯಾದ ಚುಂಚೇಗೌಡರ ಎದುರು ಗೆಲುವು ಸಾಧಿಸುತ್ತಾರೆ. ಆನಂತರ ಅವರು ಮೈಸೂರಿನ ರಾಜಕೀಯದಲ್ಲಿ ನಿರತರಾಗುತ್ತಾರೆ. 1957ರ ಚುನಾವಣೆಯಲ್ಲಿ ಅದೇ ಸ್ವತಂತ್ರ ಅಭ್ಯರ್ಥಿ ಚುಂಚೇಗೌಡರು ಕಾಂಗ್ರೆಸ್ ಅಭ್ಯರ್ಥಿ ಸ್ವಾತಂತ್ರ್ಯ ಹೋರಾಟಗಾರ ಎ.ಜಿ ಬಂದೀಗೌಡರ ಎದುರು ಗೆಲುವು ಸಾಧಿಸುತ್ತಾರೆ. 1962ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಂದೀಗೌಡರು ಚುಂಚೇಗೌಡರನ್ನು ಮಣಿಸಿ ಶಾಸಕರಾಗುತ್ತಾರೆ.

ಕೆ.ಪುಟ್ಟಸ್ವಾಮಿ

1967ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚುಂಚೇಗೌಡರ ಪುತ್ರ ಎ.ಸಿ ಶ್ರೀಕಂಠಯ್ಯನವರ ಎದುರು ಸ್ವತಂತ್ರ ಅಭ್ಯರ್ಥಿ ಬಿ.ದೊಡ್ಡಬೋರೇಗೌಡರು ಕಣಕ್ಕಿಳಿದು ಕೇವಲ 89 ಮತಗಳ ಅಂತರದಿಂದ ಜಯ ಕಾಣುತ್ತಾರೆ. 1972ರ ಚುನಾವಣಾ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ದಮಯಂತಿ ಬೋರೇಗೌಡರು ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದ ಎ.ಸಿ ಶ್ರೀಕಂಠಯ್ಯನವರನ್ನು ಮಣಿಸಿ ಶಾಸಕಿಯಾಗಿ ಆಯ್ಕೆಯಾಗುತ್ತಾರೆ. 1978ರಲ್ಲಿ ಎಂ ಶ್ರೀನಿವಾಸ್‌ರವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಪಕ್ಷದ ಸಿ.ಎಲ್ ಗೋವಿಂದರಾಜುರವರ ವಿರುದ್ಧ ಗೆಲುವು ಸಾಧಿಸುತ್ತಾರೆ.

1983ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾದ ಎ.ಎಸ್ ಬಂಡಿಸಿದ್ಧೇಗೌಡರು ಕಾಂಗ್ರೆಸ್ ಪಕ್ಷದ ಎಂ ಶ್ರೀನಿವಾಸ್‌ರವರನ್ನು ಮಣಿಸಿ ಶಾಸಕರಾಗುತ್ತಾರೆ. 1985ರಲ್ಲಿ ಮತ್ತೆ ಕಣಕ್ಕಿಳಿದು ಎ.ಸಿ ಶ್ರೀಕಂಠಯ್ಯನವರನ್ನು ಮಣಿಸಿ ಎರಡನೇ ಬಾರಿ ಶಾಸಕರಾಗುತ್ತದೆ. ಅವರು ರಾಮಕೃಷ್ಣ ಹೆಗಡೆಯವರ ಸರ್ಕಾರದಲ್ಲಿ ಉಗ್ರಾಣ ಖಾತೆ ಸಚಿವರಾಗಿದ್ದಾಗ ಅಕಾಲಿಕ ಮರಣಕ್ಕೀಡಾಗುತ್ತಾರೆ. ಹಾಗಾಗಿ 1986ರಲ್ಲಿ ಉಪಚುನಾವಣೆ ಎದುರಾಗುತ್ತದೆ. ಆಗ ಅವರ ಪತ್ನಿ ವಿಜಯಲಕ್ಷ್ಮಿ ಬಂಡಿಸಿದ್ಧೇಗೌಡರವರು ಜನತಾಪಕ್ಷದಿಂದ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್ ಪಕ್ಷವು ಮಾಜಿ ಶಾಸಕಿ ದಮಯಂತಿ ಬೋರೇಗೌಡರಿಗೆ ಟಿಕೆಟ್ ನೀಡುತ್ತದೆ. ಪತಿಯ ಸಾವಿನ ಅನುಕಂಪದ ಅಲೆಯಲ್ಲಿ ವಿಜಯಲಕ್ಷ್ಮಿ ಬಂಡಿಸಿದ್ಧೇಗೌಡರವರು ಜಯ ಸಾಧಿಸುತ್ತಾರೆ.

1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಮಯಂತಿ ಬೋರೇಗೌಡರು ಜನತಾ ಪಕ್ಷದ ವಿಜಯಲಕ್ಷ್ಮಮ್ಮನವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. 1994ರಲ್ಲಿ ಜನತಾದಳದಲ್ಲಿದ್ದ ವಿಜಯಲಕ್ಷ್ಮಿ ಬಂಡಿಸಿದ್ಧೇಗೌಡರವರು ಕಾಂಗ್ರೆಸ್‌ನ ದಮಯಂತಿ ಬೋರೇಗೌಡರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ.

ಸತತ ಏಳು ಚುನಾವಣೆಗಳಲ್ಲಿ ಸೋತ ಎ.ಸಿ ಶ್ರೀಕಂಠಯ್ಯನವರು ನಿಧನರಾದ ನಂತರ ಅವರ ಪತ್ನಿ ಪಾರ್ವತಮ್ಮ ಶ್ರೀಕಂಠಯ್ಯನವರು 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಜೆಡಿಎಸ್‌ನಿಂದ ವಿಜಯಲಕ್ಷ್ಮಿ ಬಂಡಿಸಿದ್ಧೇಗೌಡರು ಸ್ಪರ್ಧಿಸುತ್ತಾರೆ. ರೈತ ಸಂಘದಿಂದ ಕಣಕ್ಕಿಳಿದು ಸೋತಿದ್ದ ಕೆ.ಎಸ್ ನಂಜುಂಡೇಗೌಡರು ಮತ್ತೆ ಸ್ಪರ್ಧಿಸುತ್ತಾರೆ. ಮೂವರ ನಡುವಿನ ಸ್ಪರ್ಧೆಯಲ್ಲಿ ಪಾರ್ವತಮ್ಮ ಶ್ರೀಕಂಠಯ್ಯನವರು ಗೆಲುವು ಸಾಧಿಸುತ್ತಾರೆ. 2004ರಲ್ಲಿ ಮತ್ತೆ ಇದೇ ರೀತಿಯ ಸ್ಪರ್ಧೆಯಿರುತ್ತದೆ. ಆದರೆ ಆಗ ಜೆಡಿಎಸ್‌ನ ವಿಜಯಲಕ್ಷ್ಮಮ್ಮನವರು ಗೆಲುವು ಸಾಧಿಸುತ್ತಾರೆ.

ಅಂಬರೀಶ್‌ಗೆ ಸೋಲು

2008ರ ಚುನಾವಣೆ ವೇಳೆಗೆ ಶ್ರೀರಂಗಪಟ್ಟಣದಲ್ಲಿ ಬಹಳಷ್ಟು ಬದಲಾವಣೆಗಳಾಗಿರುತ್ತದೆ. ಹಾಲಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ಧೇಗೌಡರವರು ಹಿಂದೆ ಸರಿದು ತಮ್ಮ ಪುತ್ರ ರಮೇಶ್‌ಬಾಬು ಬಂಡಿಸಿದ್ಧೇಗೌಡರನ್ನ ಜೆಡಿಎಸ್ ಅಭ್ಯರ್ಥಿಯನ್ನಾಗಿಸುತ್ತಾರೆ. ಅದೇ ರೀತಿ ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯನವರ ಪುತ್ರ ರವೀಂದ್ರ ಶ್ರೀಕಂಠಯ್ಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುತ್ತಾರೆ. ಆದರೆ ರಾಜ್ಯ ರಾಜಕಾರಣ ಪ್ರವೇಶಿಸುವ ಉಮೇದಿನಲ್ಲಿದ್ದ ಚಿತ್ರನಟ ಅಂಬರೀಶ್‌ರವರು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಅಭ್ಯರ್ಥಿಯಾಗುತ್ತಾರೆ. ಇದರಿಂದ ಸಿಟ್ಟಿಗೆದ್ದ ರವೀಂದ್ರ ಶ್ರೀಕಂಠಯ್ಯನವರು ಚುನಾವಣೆಯಲ್ಲಿ ತಟಸ್ಥರಾದುದ್ದಲ್ಲದೆ ಹಿಂಬಾಗಿಲ ಮೂಲಕ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸುತ್ತಾರೆ. ಹಾಗಾಗಿ ರಮೇಶ್ ಬಾಬು ಬಂಡಿಸಿದ್ಧೇಗೌಡರು 52,234 ಮತಗಳನ್ನು ಪಡೆಯುವ ಮೂಲಕ 5,160 ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ. ಭಾರೀ ಪೈಪೋಟಿ ನೀಡಿದ ಅಂಬರೀಶ್‌ರವರು ತಮ್ಮ ಜನಪ್ರಿಯತೆಯ ನಡುವೆಯೂ ಕೇವಲ 47,074 ಮತಗಳಿಗೆ ಸೀಮಿತಗೊಂಡು ಸೋಲು ಅನುಭವಿಸುತ್ತಾರೆ. ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಸ್ ನಂಜುಂಡೇಗೌಡರು 27,547 ಮತಗಳನ್ನು ಪಡೆದು 5ನೇ ಸೋಲು ಕಾಣುತ್ತಾರೆ.

ಎ.ಎಸ್ ಬಂಡಿಸಿದ್ದೇಗೌಡ

2013ರ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ರಮೇಶ್ ಬಾಬು ಬಂಡಿಸಿದ್ಧೇಗೌಡ ಮತ್ತೆ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್‌ನಿಂದ ರವೀಂದ್ರ ಶ್ರೀಕಂಠಯ್ಯನವರೆ ಅಭ್ಯರ್ಥಿ ಎಂದು ತೀರ್ಮಾನವಾಗಿತ್ತು. ಆದರೆ ಕಳೆದ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣ ಆತ ಎಂದು ಆರೋಪಿಸಿದ ಅಂಬರೀಶ್ ಅವರಿಗೆ ಟಿಕೆಟ್ ಸಿಗದಂತೆ ನೋಡಿಕೊಂಡು ತಮ್ಮ ಬೆಂಬಲಿಗ ಎಸ್.ಎಲ್ ಲಿಂಗರಾಜುಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದರು. ಇದರಿಂದ ಕುಪಿತಗೊಂಡ ರವೀಂದ್ರ ಶ್ರೀಕಂಠಯ್ಯ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲುಳಿದರು. ಇದೆಲ್ಲದರ ಪರಿಣಾಮ ಮತ್ತೆ ರಮೇಶ್ ಬಾಬು ಬಂಡಿಸಿದ್ಧೇಗೌಡ 55,204 ಮತಗಳನ್ನು ಪಡೆದು ಗೆಲುವು ಸಾಧಿಸುತ್ತಾರೆ. ರವೀಂದ್ರ ಶ್ರೀಕಂಠಯ್ಯ 41,580 ಮತಗಳನ್ನು ಪಡೆದು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಲಿಂಗರಾಜು ಕೇವಲ 27,197 ಮತಗಳಿಗೆ ಕುಸಿದರು. ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಸ್ ನಂಜುಂಡೇಗೌಡರು 24,075 ಮತಗಳನ್ನು ಪಡೆದರು.

ಇದನ್ನೂ ಓದಿ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವವರಾರು? ಇಲ್ಲಿದೆ ಪೂರ್ಣ ಸಮೀಕ್ಷೆ

2018ರ ಚುನಾವಣೆ ವೇಳೆಗೆ ಮತ್ತಷ್ಟು ಬದಲಾವಣೆಗಳು ಸಂಭವಿಸಿದವು. ಸತತ ಎರಡು ಬಾರಿ ಶಾಸಕನಾದರೂ ಪಕ್ಷ ಮತ್ತು ಎಚ್‌ಡಿಕೆ ತನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂಬ ಆರೋಪದ ಮೇಲೆ ರಮೇಶ್ ಬಾಬು ಜೆಡಿಎಸ್ ತೊರೆದು ಚಲುವನಾರಾಯಣಸ್ವಾಮಿಯವರೊಂದಿಗೆ  ಕಾಂಗ್ರೆಸ್ ಸೇರಿದರು. ಇದು ಜೆಡಿಎಸ್ ಪಕ್ಷಕ್ಕೆ, ದೇವೇಗೌಡರ ಕುಟುಂಬಕ್ಕೆ ಮತ್ತು ಒಕ್ಕಲಿಗರಿಗೆ ಬಗೆದ ದ್ರೋಹ ಎಂದು ಎಚ್.ಡಿ ಕುಮಾರಸ್ವಾಮಿ ಪ್ರಚಾರ ಮಾಡಿದರು. ಕುಮಾರಸ್ವಾಮಿಯವರ ಕಡೆಯ ಚುನಾವಣೆ ಇದು ಮತ್ತು ಅವರು ಸಿಎಂ ಆಗುತ್ತಾರೆ ಎಂಬ ಕಥನ ಹರಿದಾಡಿ ಇಡೀ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪರ ದೊಡ್ಡ ಅಲೆಯೆದ್ದಿತು. ಒಕ್ಕಲಿಗ ಮತಗಳೆಲ್ಲ ಬಹುತೇಕ ಜೆಡಿಎಸ್ ಜೊತೆಗೆ ಧ್ರುವೀಕರಣಗೊಂಡಿದ್ದವು. ಈ ಸಂದರ್ಭದಲ್ಲಿ ಸತತ ಎರಡು ಬಾರಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ಗೆ ಹಾರಿ 1,01,307 ಮತಗಳನ್ನು ಪಡೆಯುವ ಮೂಲಕ ಬೃಹತ್ ಗೆಲುವು ಪಡೆದರು. ರಮೇಶ್‌ಬಾಬು ಬಂಡಿಸಿದ್ಧೇಗೌಡರು 57,619 ಮತಗಳಿಗೆ ಸೀಮಿತವಾಗಿ 43,688 ಮತಗಳ ಬೃಹತ್ ಅಂತರದ ಸೋಲು ಕಂಡರು. ಸರ್ವೋದಯ ಕರ್ನಾಟಕ ತೊರೆದು ಬಿಜೆಪಿ ಸೇರಿದ್ದ ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ಕೇವಲ 11,326 ಮತಗಳನ್ನು ಪಡೆದು 7ನೇ ಬಾರಿಗೆ ಹೀನಾಯ ಸೋಲು ಕಂಡರು. ಅವರು ಈ ಹಿಂದೆ ರೈತಸಂಘದಲ್ಲಿದ್ದಾಗ ಪಡೆಯುತ್ತಿದ್ದ ಮತಗಳ ಅರ್ಧದಷ್ಟನ್ನು ಸಹ ಬಿಜೆಪಿ ಸೇರಿ ಪಡೆಯಲಾಗದೆ ಮುಖಭಂಗ ಅನುಭವಿಸಿದರು.

ಅಂದಾಜು ಜಾತಿವಾರು ಮತಗಳು

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರವು ಸುಮಾರು 2,20,000 ಮತದಾರರನ್ನು ಒಳಗೊಂಡಿದೆ. ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಒಂದು ಲಕ್ಷದ ಆಸುಪಾಸಿನಲ್ಲಿವೆ. ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತಗಳಿದ್ದು ಸುಮಾರು 40,000ದಷ್ಟಿವೆ. 11,000 ಸಾವಿರದಷ್ಟು ಮುಸ್ಲಿಂ ಮತಗಳು, 10,000ದಷ್ಟು ಕುರುಬ ಮತಗಳು ಮತ್ತು 9,000 ಸಾವಿರದಷ್ಟು ಲಿಂಗಾಯತ ಸಮುದಾಯದ ಮತಗಳಿವೆ. ಇತರೆ ಸಮುದಾಯದ 50,000ದಷ್ಟು ಮತಗಳಿವೆ.

ಹಾಲಿ ಪರಿಸ್ಥಿತಿ

ಮೊದಲ ಬಾರಿಗೆ ಶಾಸಕರಾಗಿರುವ ರವೀಂದ್ರ ಶ್ರೀಕಂಠಯ್ಯನವರು ಸೊಫೆಸ್ಟಿಕೇಟೆಡ್ ವೈಟ್ ಕಾಲರ್ ರಾಜಕಾರಣಿ ಎನಿಸಿಕೊಂಡಿದ್ದಾರೆ. ಅವರು ಸುಲಭಕ್ಕೆ ಜನರ ಕೈಗಾಗಲಿ, ಪತ್ರಕರ್ತರ ಕೈಗಾಗಲಿ ಸಿಗುವುದಿಲ್ಲ ಎಂಬ ಆರೋಪ ಎದುರಿಸುತ್ತಿದ್ದಾರೆ. ಒಂದಷ್ಟು ಕಾಮಗಾರಿಗಳ ಗುದ್ದಲಿ ಪೂಜೆಗಳು, ರಸ್ತೆಗಳನ್ನು ಮಾಡಿಸಿರುವುದು ಬಿಟ್ಟರೆ ಉಳಿದಂತೆ ಅವರು ಶಾಸಕರಾಗಿ ಮಾಡಿದ ಯಾವುದೇ ಕೆಲಸಗಳು ಎದ್ದು ಕಾಣುತ್ತಿಲ್ಲ. ಯಾರಾದರೂ ಅವರ ಬಳಿಗೆ ಕೆಲಸಗಳಾಗಬೇಕು ಎಂದು ಹೋದರೆ ಆಗುತ್ತೆ ಅಥವಾ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ಹೇಳುತ್ತಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ವಿಜಯಲಕ್ಷ್ಮಿ ಬಂಡಿಸಿದ್ಧೇಗೌಡ

ಮತ್ತೊಮ್ಮೆ ಜೆಡಿಎಸ್ ಟಿಕೆಟ್ ಪಕ್ಕಾ ಮಾಡಿಕೊಂಡಿರುವ ರವೀಂದ್ರ ಶ್ರೀಕಂಠಯ್ಯನವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಕಳೆದ ಬಾರಿ ಇದ್ದ ಜೆಡಿಎಸ್ ಪಕ್ಷದ ಪರವಾಗಿನ ಒಕ್ಕಲಿಗರ ಅಲೆ ಈ ಬಾರಿ ಕಂಡುಬರುತ್ತಿಲ್ಲ. ಹಾಗಾಗಿ ಅವರು ತಮ್ಮ ಸಾಂಪ್ರದಾಯಕ ಎದುರಾಳಿ ರಮೇಶ್ ಬಾಬು ಬಂಡಿಸಿದ್ಧೇಗೌಡರು ಎದುರು ಗೆಲ್ಲಲು ತಿಣುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ ಮಾಜಿ ಜಿ.ಪಂ ಅಧ್ಯಕ್ಷರಾದ ತಗ್ಗಹಳ್ಳಿ ವೆಂಕಟೇಶ್ ತನಗೆ ಜೆಡಿಎಸ್ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ. “30 ವರ್ಷದಿಂದ ಪಕ್ಷ ಕಟ್ಟಿದವರನ್ನು ಬಿಟ್ಟು ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಕಣಕ್ಕಿಳಿಯುತ್ತೇನೆ. ದೇವೇಗೌಡರು ಹೇಳಿದರೂ ಹಿಂದೆ ಸರಿಯುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ. ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಸಂತೋಷ್ ಸಹ ರವೀಂದ್ರ ಶ್ರೀಕಂಠಯ್ಯನವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಪ್ರಬಲ ಪೈಪೋಟಿ ಒಡ್ಡುತ್ತಿರುವ ರಮೇಶ್ ಬಾಬು ಬಂಡಿಸಿದ್ಧೇಗೌಡ

ಕಳೆದ ಚುನಾವಣೆಯಲ್ಲಿ ಸೋಲುಂಡಿರುವ ರಮೇಶ್‌ಬಾಬು ಬಂಡಿಸಿದ್ಧೇಗೌಡರು ಜನರ ನಡುವೆಯೆ ಇದ್ದುಕೊಂಡು ಚುನಾವಣಾ ತಯಾರಿ ನಡೆಸಿದ್ದಾರೆ. ಈ ಬಾರೀ ಶತಾಯಗತಾಯ ಗೆಲ್ಲಲು ಪಣತೊಟ್ಟಿದ್ದು, ಈ ಚುನಾವಣೆಯನ್ನು ಅಳಿವು ಉಳಿವಿನ ಪ್ರಶ್ನೆಯನ್ನಾಗಿ ತೆಗೆದುಕೊಂಡಿದ್ದಾರೆ. ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯನವರಿಗೆ ಸಂಪೂರ್ಣ ತದ್ವಿರುದ್ಧ ಇರುವ ಇವರು ಸಾಮಾನ್ಯ ಜನರಿಗೂ ಸುಲಭಕ್ಕೆ ಸಿಗುತ್ತಾರೆ ಎಂಬ ಹೆಸರು ಗಳಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್‌ಗಾಗಿ ಪುಟ್ಟೇಗೌಡರು ಮತ್ತು ಪಾಲಹಳ್ಳಿ ಚಂದ್ರಶೇಖರ್‌ರವರು ಸಹ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೂ ಮಾಜಿ ಶಾಸಕ ರಮೇಶ್‌ಬಾಬು ಬಂಡಿಸಿದ್ಧೇಗೌಡರೆ ಅಭ್ಯರ್ಥಿಯಾಗುವ ಹೆಚ್ಚಿನ ಸಾಧ್ಯತೆಯಿದೆ.

ದ್ವೇಷ ರಾಜಕೀಯಕ್ಕಿಳಿದ ಬಿಜೆಪಿ

ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಗಮನಾರ್ಹ ಪ್ರದರ್ಶನ ನೀಡಿದ ಉದಾಹರಣೆಗಳಿಲ್ಲ. ರೈತಸಂಘದ ಪ್ರಭಾವಿ ಮುಖಂಡರಾಗಿದ್ದ ಕೆ.ಎಸ್ ನಂಜುಂಡೇಗೌಡರು ಬಿಜೆಪಿ ಸೇರಿದ ನಂತರ ಮಂಕಾಗಿಬಿಟ್ಟಿದ್ದಾರೆ. ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಕಷ್ಟ. ಇನ್ನು ಡಾ.ಸಿದ್ದರಾಮಯ್ಯನವರು ಸಹ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಇಷ್ಟು ದಿನ ಕಾಂಗ್ರೆಸ್‌ನಲ್ಲಿದ್ದ ಎಸ್.ಎಲ್ ಲಿಂಗರಾಜುರವರ ಅಳಿಯ, ಕೆಪಿಸಿಸಿ ಸದಸ್ಯರಾದ ಸಚ್ಚಿದಾನಂದ ಬಿಜೆಪಿ ಸೇರಿ ಅಭ್ಯರ್ಥಿಯಾಗುವ ಉತ್ಸಾಹದಲ್ಲಿದ್ದಾರೆ. ಆದರೆ ನಂಜುಂಡೇಗೌಡರಂತೆ ತನ್ನನ್ನು ಜನ ಮೂಲೆಗೆ ತಳ್ಳಿಬಿಟ್ಟಾರು ಎಂಬ ಭಯದಲ್ಲಿ ಅವರು ದ್ವೇಷ ರಾಜಕಾರಣದ ಮೊರೆಹೋಗಿದ್ದಾರೆ. ಇತಿಹಾಸದ ಕನಿಷ್ಟ ಜ್ಞಾನವಿಲ್ಲದೆ ಟಿಪ್ಪು ಮತಾಂಧ ಎಂಬ ಬಿಜೆಪಿ-ಸಂಘಪರಿವಾರ ಹೇಳಿಕೊಟ್ಟ ಭಾಷಣ ಮಾಡುತ್ತಾ, ಹಣವನ್ನು ನೀರಿನಂತೆ ಖರ್ಚು ಮಾಡುತ್ತಾ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ.

ಇನ್ನು ಟಿಪ್ಪು ಸುಲ್ತಾನರನ್ನು ಹಣಿಯುತ್ತಲೇ, ಜುಮ್ಮಾ ಮಸೀದಿಗೂ ಮುಂಚೆ ಹನುಮಂತನ ದೇವಾಲಯವಿತ್ತು, ಅದನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂದು ಆರ್‌ಎಸ್‌ಎಸ್ ವಿವಾದ ಮಾಡಲು ಹೊರಟಿದೆ. ಅದಕ್ಕೆಂದೇ ಹೊರಗಿನಿಂದ ಕಾರ್ಯಕರ್ತರನ್ನು ಕರೆಸಿ ಹನುಮ ಮಾಲೆ ಯಾತ್ರೆ ನಡೆಸುತ್ತಿದೆ. ಆದರೆ ಸ್ಥಳೀಯರು ಇದಕ್ಕೆ ಸೊಪ್ಪು ಹಾಕದೆ ತಮ್ಮ ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮುಳುಗಿದ್ದಾರೆ. ಹಾಗಾಗಿ ಬಿಜೆಪಿ ಎಷ್ಟೇ ಹಣ ಖರ್ಚು ಮಾಡಿದರೂ ಅದಕ್ಕೆ ಮೂರನೇ ಅಥವಾ ಅದರ ನಂತರದ ಸ್ಥಾನವೇ ಗ್ಯಾರಂಟಿ ಅನ್ನುತ್ತಾರೆ ಅಲ್ಲಿನ ರಾಜಕೀಯದ ಆಳ-ಅಗಲ ಬಲ್ಲವರು.

ಇನ್ನು ಆಪ್ ಪಕ್ಷದಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಚಂದಗಾಲು ಗ್ರಾಮದ ವಕೀಲರಾದ ವೆಂಕಟೇಶ್‌ರವರು ಈ ಬಾರಿಯೂ ಕಣಕ್ಕಿಳಿಯಲಿದ್ದು ಅದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ರೈತಸಂಘ ಹಿಂದೆ ನೆಲೆ ಹೊಂದಿದ್ದ ಕ್ಷೇತ್ರವಿದು. ಹಾಗಾಗಿ ಅವರು ಸಹ ಅಭ್ಯರ್ಥಿಯನ್ನು ಹಾಕಲು ಯೋಚಿಸುತ್ತಿದ್ದಾರೆ. ಆದರೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರೈತಸಂಘದ ಪ್ರಸನ್ನ ಕುಮಾರ್, ತಗ್ಗಹಳ್ಳಿ ವೆಂಕಟೇಶ್‌ರವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಹಾಗಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಒಟ್ಟಾರೆಯಾಗಿ ಚುನಾವಣಾ ಕಣದಲ್ಲಿ ಹಲವಾರು ಜನರಿದ್ದರೂ ಈ ಬಾರಿ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ ಮತ್ತು ಕಾಂಗ್ರೆಸ್‌ನ ರಮೇಶ್‌ಬಾಬು ಬಂಡಿಸಿದ್ಧೇಗೌಡರ ನಡುವೆ ನೇರ ಹಣಾಹಣಿ ಏರ್ಪಡುವ ಸೂಚನೆಗಳು ಕಂಡು ಬರುತ್ತಿವೆ. ಅರಕೆರೆಯವರಾದ ಇಬ್ಬರಿಗೂ ಬೇರು ಮಟ್ಟದಲ್ಲಿ ಕಾರ್ಯಕರ್ತರ ಸಂಪರ್ಕವಿದ್ದು, ಅವರದ್ದೇ ಆದ ಮತ್ತು ತಮ್ಮ ಪಕ್ಷಗಳ ಸಾಲಿಡ್ ಮತಗಳಿವೆ. ಬಿಜೆಪಿಯ ಸಚ್ಚಿದಾನಂದ ಮತ್ತು ಜೆಡಿಎಸ್ ಆಕಾಂಕ್ಷಿ ತಗ್ಗಹಳ್ಳಿ ವೆಂಕಟೇಶ್‌ರವರು ಯಾರ ಮತಗಳನ್ನು ಹೆಚ್ಚು ಕೀಳುತ್ತಾರೆ ಎಂಬುದರ ಮೇಲೆ ಕ್ಷೇತ್ರದ ಫಲಿತಾಂಶ ನಿರ್ಧಾರವಾಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...