ಮಸ್ಕಿ ತಾಲ್ಲೂಕಿನ 58 ಬರಪೀಡಿತ ಹಳ್ಳಿಗಳಿಗೆ NRBC_5A ಕಾಲುವೆ ಮೂಲಕ ನೀರಾವರಿ ಯೋಜನೆ ಬೇಕೆಂದು ಹೋರಾಡುವವರಿಗೆ ನೀವೇನು ವಿಶ್ವೇಶ್ವರಯ್ಯನವರ ಥರ ವಿಜ್ಞಾನಿಗಳ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕೇಳಿದ್ದಾರೆ. ಇಲ್ಲಿಗೆ ನೀರು ಬರುವುದಿಲ್ಲ ಎಂದು ಹೇಳಲು ಅವರೇನು ವಿಶ್ವೇಶ್ವರಯ್ಯನವರೇ ಎಂದು ಹೋರಾಟ ಸಮಿತಿ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ತರಾಟೆಗೆ ತಗೆದುಕೊಂಡಿದ್ದಾರೆ.

NRBC_5A ನೀರಾವರಿ ಯೋಜನೆಗಾಗಿ ನಡೆಯುತ್ತಿರುವ ಹೋರಾಟ ಇಂದಿಗೆ 136ನೇ ದಿನಕ್ಕೆ ಕಾಲಿಟ್ಟಿದೆ. ಪಾಮನಕಲ್ಲೂರಿನ ರೈತರ ಧರಣಿ ಸ್ಥಳದ ಮುಂದೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ, ಸಚಿವ ಬಿ. ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಶಿವನಗೌಡ ಗೊರಬಾಳರವರು ಬಿಜೆಪಿ ಪರವಾಗಿ ಮತ ಕೇಳಲು ಆಗಮಿಸಿದಾಗ ಅವರನ್ನು ಹೋರಾಟಗಾರರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೋರಾಟ ಸಮಿತಿ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ಮಾತನಾಡಿ, “ಇಷ್ಟು ದಿನ ನಾವು ಹೋರಾಟ ಮಾಡುತ್ತಿದ್ದೇವೆ, ನೀವೇಕೆ ತಿರುಗಿ ನೋಡಲಿಲ್ಲ? ಇಲ್ಲಿ ವಾಲ್ಮೀಕಿ ಭವನದ ಉದ್ಘಾಟನೆಗೆ ಶ್ರೀರಾಮುಲುರವರು ಬರಬೇಕಿತ್ತು, ಏಕೆ ಬರಲಿಲ್ಲ? ನಾವು ನೀರು ಬೇಕು ಎಂದು ಎಷ್ಟು ಸಲ ಕೇಳಿದ್ದೇವೆ ಗೊತ್ತೆ? ಸಂಗಣ್ಣ ಕರಡಿಯವರಿಗೆ ಗೊತ್ತಿದೆ, ಅವರು ಹೇಳಬೇಕು” ಎಂದು ಒತ್ತಾಯಿಸಿದರು.

ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ನೀರಾವರಿ ಹೋರಾಟಗಾರರು ತರಾಟೆಗೆ ತೆಗೆದುಕೊಂಡ ವಿಡಿಯೋ ನೋಡಿ..

ನೀವು ನೀರು ಕೊಡಲು ಆಗುವುದಿಲ್ಲ ಎನ್ನಲು ಕಾರಣವೇನು? ಇಂಜಿನಿಯರ್‌ಗಳು ನೀರು ಕೊಡಲು ಸಾಧ್ಯ ಎಂದು ವರದಿ ಕೊಟ್ಟಿದ್ದಾರೆ. ಎಂಡಿಆರ್‌ಎಫ್‌ ನವರನ್ನು ಕೇಳಿದರೆ ಸರ್ಕಾರ ಆದೇಶ ಮಾಡಿದರೆ ನಾವು ನೀರಾವರಿ ಮಾಡುತ್ತೇವೆ ಎನ್ನುತ್ತಾರೆ. ಸರ್ಕಾರ ಎಂದರೆ ನೀವೇ ತಾನೇ? ಏಕೆ ನೀವು ಮಾಡುತ್ತಿಲ್ಲ? ನೀರು ಇಲ್ಲವೇ? ಹಾಗಾದರೆ ಬಸವೇಶ್ವರ ಏತ ನೀರಾವರಿಗೆ ನೀರು ಎಲ್ಲಿಂದ ಬರುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ರೈತರಿಗೆ ಒಳ್ಳೆಯದಾಗುವುದನ್ನು ಮಾಡಿದರೆ ರೈತರು ನಿಮ್ಮನ್ನ ಮರೆಯುವುದಿಲ್ಲ. ದೇವದುರ್ಗದಲ್ಲಿ ದೇವೇಗೌಡರು ಕಾಲುವೆ ಮಾಡಿಸಿದ್ದಕ್ಕೆ ಎಲ್ಲರ ಮನೆಯಲ್ಲಿ ಅವರ ಫೋಟೊ ಇದೆ ಗೊತ್ತೆ? ನಿಮಗ್ಯಾಕೆ ಇದು ಸಾಧ್ಯವಿಲ್ಲ? ರಂಗರಾಮ್‌ ವರದಿಯ ಪ್ರಕಾರ ಈ ಪ್ರದೇಶಕ್ಕೆ NRBC_5A ಮೂಲಕ ಮಾತ್ರ ನೀರು ಕೊಡಲು ಸಾಧ್ಯ ಎನ್ನಲಾಗಿದೆ. ಹಾಗಿದ್ದರೂ ಪ್ರತಾಪಗೌಡ ಪಾಟೀಲರು ನೀರು ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹಾಗಾಗಿಯೇ ನಾವು ಅವರನ್ನು ವ್ಯಕ್ತಿಯಾಗಿ ವಿರೋಧಿಸುತ್ತಿದ್ದೇವೆಯೇ ಹೊರತು ಪಕ್ಷವನ್ನಲ್ಲ ಎಂದಿದ್ದಾರೆ.

13 ವರ್ಷದಲ್ಲಿ ಈ ಯೋಜನೆ ಮಾಡಿ ಎಂದು ಪ್ರತಾಪಗೌಡಪಾಟೀಲರು ಎಷ್ಟು ಅರ್ಜಿ ಕೊಟ್ಟಿದ್ದಾರೆ ಲೆಕ್ಕ ಕೊಡಲಿ? NRBC_5A ಯೋಜನೆ ಜಾರಿ ಮಾಡದೇ ರಾಯಚೂರು ಜಿಲ್ಲೆಗೆ ಕಾಲಿಡುವುದಿಲ್ಲ ಎಂದು ಯಡಿಯೂರಪ್ಪನವರು ಹೇಳಿದ್ದರು. ಆದರೂ ಏಕೆ ಯೋಜನೆ ಜಾರಿಯಾಗಲಿಲ್ಲ ಎಂದು ತಿಮ್ಮನಗೌಡ ಚಿಲ್ಕರಾಗಿ ಕಿಡಿಕಾರಿದರು.

ಶಾಸಕರು NRBC_5A ಯೋಜನೆ ಜಾರಿ ಮಾಡಬೇಕೆಂದು ಪ್ರತಾಪಗೌಡರು ಹೇಳಿದರೆ ನಾವು ಮಾಡುತ್ತೇವೆ ಎಂದು ಮೈತ್ರಿ ಸರ್ಕಾರದ ಸಚಿವರು ಹೇಳಿದ್ದರು. ಆದರೆ ಇವರು ಒಮ್ಮೆಯೂ ಹೇಳಲಿಲ್ಲ. ಹಾಗಾಗಿ ನಾವು ಬಿಜೆಪಿ ಆಗಿದ್ದರೂ ಪ್ರತಾಪಗೌಡರನ್ನು ವಿರೋಧಿಸುತ್ತೇವೆ ಎಂದರು.

ಮಸ್ಕಿಯ ಸಾವಿರಾರು ಯುವಕರು ದುಡಿಯಲು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ವಯಸ್ಸಾದವರು ಮಾತ್ರ ಇದ್ದೇವೆ. ಅನಾವೃಷ್ಟಿಯಿಂದ ನರಳುತ್ತಿದ್ದೇವೆ. ನಮಗೆ ಬೆಳೆಯೇ ಬರುತ್ತಿಲ್ಲ. ಈ ಕಷ್ಟ ಬಿಜೆಪಿಯವರಿಗೆ ಗೊತ್ತಾಗುವುದಿಲ್ಲವೇ? ಎಂದು ಕಿಡಿಕಾರಿದರು.

ನಾವು ರೈತರೇನು ಭಯೋತ್ಪಾದಕರೇ? ನಮ್ಮ ಸರ್ಕಾರದ ಪ್ರತಿನಿಧಿಗಳಾಗಿ ನಿಮ್ಮನ್ನು ನಾವು ಎಂದಾದರೂ ಅವಮಾನ ಮಾಡಿದ್ದೇವೆಯೇ? ನೀವು ಅಷ್ಟೇ ರೈತರಿಗೆ ಅವಮಾನ ಮಾಡಬೇಡಿ. ನಾವು ಯಾರು ನಮಗೆ ಮನೆ ಕೊಡಿ ಎಂದು ಕೇಳುತ್ತಿಲ್ಲ. ಈ ಪ್ರದೇಶಕ್ಕೆ ಒಂದು ನೀರಾವರಿ ಯೋಜನೆ ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ. ರೈತರಿಲ್ಲದಿದ್ದರೆ ದೇಶ ಉಳಿಯುವುದಿಲ್ಲ. ಇದನ್ನು ಅರಿಯದ ಸರ್ಕಾರ ನಮಗೆ ಏಕೆ ಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: NRBC_5A ಜಾರಿಗಾಗಿ 4 ಗ್ರಾ.ಪಂ ಚುನಾವಣೆ ಬಹಿಷ್ಕಾರ: ಉಪ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸಲು ರೈತರ ನಿರ್ಧಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here