ಬಂದ ಎರಡೂವರೆ ತಿಂಗಳಲ್ಲೇ ಬೀದರ್ ಡೀಸಿ ಎತ್ತಂಗಡಿಯಾಗಿದೆ. ಒನ್ಸ್ ಎಗೇನ್ ದಕ್ಷ, ಜನಸ್ನೇಹಿ ಅನ್ನಿಸಿಕೊಂಡ ಅಧಿಕಾರಿಗಳ ಇಂತಹ ದಿಢೀರ್ ವರ್ಗಾವಣೆಯ ಬೆನ್ನಿಗೆ ಏನೇನು ಚರ್ಚೆಗಳು ನಡೆಯಬೇಕೊ ಅವೆಲ್ಲವೂ ಶುರುವಾಗಿವೆ. ನಿಜಕ್ಕೂ ಈಗ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅಲ್ಪಾವಧಿಯಲ್ಲೇ ಜನರ ಮೆಚ್ಚುಗೆ ಗಳಿಸಿದ್ದಂತವರು. ಅದರಲ್ಲೂ ಬೀದರ್ ಜಿಲ್ಲಾ ಆಸ್ಪತ್ರೆಯ ವೈದ್ಯರುಗಳಿಗೆ ಬಿಸಿ ಮುಟ್ಟಿಸಿ, ಇಡೀ ಆಸ್ಪತ್ರೆಯನ್ನು ಸುಧಾರಿಸಿದ ಪರಿಯಿದೆಯಲ್ಲ ಅದು ಜನರ ಮೆಚ್ಚುಗೆ ಗಳಿಸಿತ್ತು. ಆದರೆ ಇದೀಗ ಅಂತವರನ್ನು ವರ್ಗ ಮಾಡಿ ಆ ಜಾಗಕ್ಕೆ “ಭೂಮಿಗೆ ಭಾರವಾಗಿರುವ ವೇಸ್ಟ್ ಬಾಡಿ” ಎಂಬ ಕುಖ್ಯಾತಿಗೆ ಈಡಾಗಿರುವ ಹಳೆಯ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ್ ಅವರನ್ನೇ ತಂದು ಕೂರಿಸಲಾಗಿದೆ. ಅಷ್ಟು ಮಾತ್ರವಲ್ಲ, ಶ್ರವಣ್ ಅವರಿಗೆ ಯಾವುದೇ ಹುದ್ದೆ ನೀಡದೆ, ಅವಮಾನಿಸಲಾಗಿದೆ.
ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿ ನೀತಿಸಂಹಿತೆ ಜಾರಿಯಾದ ಮೇಲೆ ಭಾರತದ ಚುನಾವಣಾ ಆಯೋಗವು ನಿಷ್ಪಕ್ಷಪಾತಿಯಾಗಿ ಮತ್ತು ದಕ್ಷವಾಗಿ ಕಾರ್ಯನಿರ್ವಹಿಸದೆ, ಯಾವುದೊ ಒಂದು ಪಕ್ಷದ ಪರವಾಗಿ ಅಥವಾ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಾರೆಂಬ ಅನುಮಾನವಿದ್ದ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಓದುಗರಿಗೆ ನೆನಪಿರಬಹುದು. ಹಾಗೆ ವರ್ಗಾವಣೆಗೊಂಡವರಲ್ಲಿ ಆಗಿನ ಬೀದರ್ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ್ ಕೂಡ ಒಬ್ಬರು. ಅವರ ಜಾಗಕ್ಕೆ ಅನಿರುದ್ಧ್ ಶ್ರವಣ್ ಅವರನ್ನು ನೇಮಕ ಮಾಡಲಾಗಿತ್ತು.
ಪ್ರಸ್ತುತ ನಿಯಮಗಳ ಪ್ರಕಾರ ಐಎಎಸ್ ಅಧಿಕಾರಿಯನ್ನು, ಒಂದು ಸ್ಥಳದಲ್ಲಿ ಎರಡು ವರ್ಷ ಪೂರ್ಣಗೊಳಿಸುವ ಮುನ್ನವೇ ವರ್ಗಾವಣೆ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಎಚ್.ಆರ್. ಮಹಾದೇವ್ ಅವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಕರಣವು ಮಹಾದೇವ್ ಅವರ ಪರವಾಗಿಯೇ ತೀರ್ಪಿತ್ತು ಮಹಾದೇವ್ ಅವರನ್ನು ಮರಳಿ ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ನೇಮಿಸಬೇಕೆಂದು ಆದೇಶ ನೀಡಿತ್ತು. ನ್ಯಾಯಾಧೀಕರಣದ ಈ ತೀರ್ಪನ್ನು ಪ್ರಶ್ನಿಸಿ ಚುನಾವಣಾ ಆಯೋಗವು ಕರ್ನಾಟಕ ಹೈಕೋರ್ಟಿನ ಮೊರೆ ಹೋಯಿತು. ಚುನಾವಣೆಗಳು ನಡೆಯುತ್ತಿರುವುದನ್ನು ಪರಿಗಣಿಸಿದ ಹೈಕೋರ್ಟು ನ್ಯಾಯಾಧೀಕರಣದ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು. ಈಗ ಚುನಾವಣೆಗಳು ಮುಗಿದಿರೋದ್ರಿಂದ ಹೈಕೋರ್ಟು ತಡೆಯಾಜ್ಞೆ ತೆರವುಗೊಳಿಸಿ, ನ್ಯಾಯಾಧೀಕರಣದ ತೀರ್ಪು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ದೆಸೆಯಿಂದ ತೊಲಗಿದ್ದ ಮಹಾದೇವ್ ಮತ್ತೆ ಬೀದರ್‍ಗೆ ವಕ್ಕರಿಸಿಕೊಂಡಿದ್ದಾರೆ.
2011 ಬ್ಯಾಚಿನ ಐಎಎಸ್ ಅಧಿಕಾರಿಯಾದ ಅನಿರುದ್ಧ್ ಶ್ರವಣ್ ಯಾವುದೇ ಅಡೆತಡೆಯಿಲ್ಲದಂತೆ, ಗೊಂದಲಗಳಿಲ್ಲದಂತೆ ಮತ್ತು ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಅಚ್ಚುಕಟ್ಟಾಗಿ ಚುನಾವಣೆಗಳನ್ನು ನಡೆಸಿದ್ದಲ್ಲದೇ, ನಂತರವೂ ಅನೇಕ ಜನಮೆಚ್ಚುವ ಕೆಲಸಗಳನ್ನು ಮಾಡಿದ್ದರು. ಅದರಲ್ಲಿ ಬೀದರ್ ಜಿಲ್ಲಾಸ್ಪತ್ರೆಗೆ ಕಾಯಕಲ್ಪ ನೀಡಿದ್ದು ವಿಶೇಷವಾದದ್ದು. ಅಸಲಿಗೆ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಬಿಮ್ಸ್) ಬೋಧಕ ಆಸ್ಪತ್ರೆಯಾಗಿರುವ ಇದು ಈ ಭಾಗದ ಬಡಬಗ್ಗರ ಆಶಾಕಿರಣ. ಖಾಸಗಿ ಆಸ್ಪತ್ರೆಗಳಿಗೆ ದುಡ್ಡು ಖರ್ಚು ಮಾಡಲಾಗದ ಬಡವರು ಈ ಆಸ್ಪತ್ರೆಗೆ ದೌಡಾಯಿಸುತ್ತಾರೆ.
ಆದರೆ, ಇಲ್ಲಿನ ವೈದ್ಯರಿಗೆ ರೊಕ್ಕ ಮಾಡುವ ಕಾಯಿಲೆ ಅಂಟಿಕೊಂಡು, ಪ್ರತಿಯೊಬ್ಬ ವೈದ್ಯರೂ ತಮ್ಮದೇ ಆದ ಸ್ವಂತ ಖಾಸಗಿ ಕ್ಲಿನಿಕ್ ತೆರೆದುಕೊಂಡು ದಿನವಿಡೀ ಅಲ್ಲೇ ಠಿಕಾಣಿ ಹೂಡಿರುತ್ತಿದ್ದರು. ಆಸ್ಪತ್ರೆಯತ್ತ ಮುಖ ಹಾಕುತ್ತಿರಲಿಲ್ಲ. ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ಕುಗಳಲ್ಲಿ ಸೇವೆ ಸಲ್ಲಿಸುವುದು ನಿಯಮಗಳ ಪ್ರಕಾರ ಅಪರಾಧವೇನಲ್ಲ. ಆದರೆ, ಸರ್ಕಾರಿ ಕೆಲಸದ ಅವಧಿ ಮುಗಿದ ಮೇಲೆ ಅಥವಾ ಅದಕ್ಕಿಂತ ಮೊದಲು ಆ ಕೆಲಸ ಮಾಡಬಹುದು. ಆದರೆ, ಬೀದರಿನ ವೈದ್ಯರು ತಮ್ಮ ಸರ್ಕಾರಿ ಕರ್ತವ್ಯವನ್ನೇ ಮರೆತು ಸ್ವಂತ ಕ್ಲಿನಿಕ್ಕುಗಳಲ್ಲಿ ಹಣ ಪೀಕುವ ದಂಧೆಗೆ ಫಿಕ್ಸ್ ಆಗಿದ್ದರು.
ಅತ್ತ ಜಿಲ್ಲಾಸ್ಪತ್ರೆಯಲ್ಲಿ ಎಕ್ಸ್‍ರೆ, ಪ್ರಯೋಗಾಲಯ, ಔಷಧಿ ಅಂಗಡಿ ಸೌಕರ್ಯಗಳಿದ್ದರೂ ಜನರಿಗೆ ಅವುಗಳ ಉಪಯೋಗ ದೊರಕುತ್ತಿರಲಿಲ್ಲ. ಯಾಕೆಂದರೆ, ಆಸ್ಪತ್ರೆಯ ಸಿಬ್ಬಂದಿ ಖಾಸಗೀ ಔಷಧಿ ಅಂಗಡಿಗಳು, ಖಾಸಗಿ ಲ್ಯಾಬ್‍ಗಳನ್ನು ಶಿಫಾರಸ್ಸು ಮಾಡಿ ತಾಕೀತು ಮಾಡುತ್ತಿದ್ದರು.
ಅನಿರುದ್ಧ್ ಶ್ರವಣ್ ಜಿಲ್ಲಾಧಿಕಾರಿಯಾಗಿ ಬಂದ ಮೇಲೆ ಇದೆಲ್ಲಕ್ಕೂ ಬ್ರೇಕ್ ಬಿತ್ತು. ಮೊದಲ ಸಲ ಆಸ್ಪತ್ರೆಗೆ ಭೇಟಿ ನೀಡಿದಾಗಲೇ ಬಹುತೇಕ ವೈದ್ಯರು ಇಲ್ಲದಿರುವುದನ್ನು ಗಮನಿಸಿದ ಶ್ರವಣ್ ಆವತ್ತಿನಿಂದಲೇ ಚಾಟಿ ಬೀಸುವುದಕ್ಕೆ ಶುರು ಮಾಡಿದರು. ನೋಟಿಸ್ ಜಾರಿ ಮಾಡಿದ್ದಲ್ಲದೆ ಕರ್ತವ್ಯದ ಸಮಯದಲ್ಲಿ ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸುವುದಾಗಿ ಎಲ್ಲಾ ವೈದ್ಯರಿಂದ ತಲಾ ಒಂದೊಂದು ಲಕ್ಷ ರೂಪಾಯಿ ಬಾಂಡ್ ಬರೆಸಿಕೊಂಡಿದ್ದರು. ಅಷ್ಟಕ್ಕೇ ಸುಮ್ಮನಾಗದೆ, ವಾರಕ್ಕೆ ಎರಡು ಮೂರು ಬಾರಿ ಭೇಟಿ ನೀಡಿ ಚೆಕ್ ಮಾಡುತ್ತಿದ್ದರು. ಹದಗೆಟ್ಟುಹೋಗಿದ್ದ ಆಸ್ಪತ್ರೆ ಒಂದೇ ತಿಂಗಳಲ್ಲಿ ಮತ್ತೆ ಸರಿಹಾದಿಗೆ ಬಂದಿತು. ಚಿಕಿತ್ಸೆ ಬಯಸಿ ಬರುತ್ತಿದ್ದ ಬಡಬಗ್ಗರಿಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ಸಿಗಲಾರಂಭಿಸಿತು.
ಅನಿರುದ್ಧ್ ಈ ಕ್ರಮದಿಂದ ಬಡರೋಗಿಗಳಿಗೆ ಅನುಕೂಲವಾದರು ವೈದ್ಯರ ಅಕ್ರಮ ಹಣಗಳಿಕೆಗೆ ಬ್ರೇಕ್ ಬಿದ್ದಿತು. ಇದರಿಂದ ಹತಾಶಗೊಂಡ ಅವರು ಶತಗತಾಯ ಶ್ರವಣ್ ಅವರನ್ನು ಎತ್ತಂಗಡಿ ಮಾಡಲೇಬೇಕೆಂಬ ಪ್ರಯತ್ನ ಶುರು ಮಾಡಿಕೊಂಡರು. ಒಬ್ಬ ವೈದ್ಯರೇ ಹೇಳುವಂತೆ ಪ್ರತಿಯೊಬ್ಬ ಡಾಕ್ಟರ್ ತಲಾ ಐದೈದು ಲಕ್ಷ ರೂಪಾಯಿ ಕಲೆಹಾಕಿಕೊಂಡು ಬೆಂಗಳೂರಿಗೆ ಹೋಗಿ ಡೀಸಿ ವರ್ಗಾವಣೆಗೆ ಪ್ರಯತ್ನಿಸಿದ್ದರಂತೆ. ಇದೇ ವೇಳೆಗೆ ಹೈಕೋರ್ಟ್ ಕೂಡಾ ತನ್ನ ತಡೆಯಾಜ್ಞೆ ತೆರವುಗೊಳಿಸಿ ಮತ್ತೆ ಮಹಾದೇವ್ ಅವರನ್ನೇ ಜಿಲ್ಲಾಧಿಕಾರಿಯಾಗಿ ನೇಮಿಸಿದ್ದು ನಿಜಕ್ಕೂ ಈ ವೈದ್ಯರಿಗೆ ಹಾಲು ಕುಡಿದಷ್ಟೇ ಖುಷಿ ಕೊಟ್ಟಿದೆ ಅನ್ನಿಸುತ್ತೆ.
ಕೇವಲ ಆಸ್ಪತ್ರೆಗೆ ಸುಧಾರಣೆ ತಂದಿದ್ದಷ್ಟೇ ಅಲ್ಲ, ವಿಶೇಷ ಕಾರ್ಯಪಡೆಗಳನ್ನು ರಚಿಸಿ ಪ್ಲಾಸ್ಟಿಕ್ ವಿರುದ್ಧ ಸಮರವನ್ನೇ ಸಾರಿದ್ದ ಅನಿರುದ್ಧ್‍ರವರು ಬೀದರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ದಿಟ್ಟ ಹೆಜ್ಜೆಯಿಟ್ಟಿದ್ದರು. ಕೆಟ್ಟ ಪರಿಸ್ಥಿತಿಯಲ್ಲಿರುವ ಜಿಲ್ಲೆಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಸುಧಾರಿಸುವುದಕ್ಕೆ ಯೋಜನೆಗಳನ್ನು ರೂಪಿಸಿದ್ದರು. ಬಾಲಕಾರ್ಮಿಕ ವ್ಯವಸ್ಥೆಗೆ ಬ್ರೇಕ್ ಹಾಕಲು ಸಜ್ಜಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ತೂಕಡಿಸುತ್ತಿದ್ದ ಅಧಿಕಾರಶಾಹಿ ಆಡಳಿತ ಯಂತ್ರಾಂಗಕ್ಕೆ ಚಾಟಿಯೇಟು ಬೀಸಿ ಚುರುಕುಗೊಳಿಸಿದ್ದರು.
ಜನರ ಅಪಾರ ಮೆಚ್ಚುಗೆ ಗಳಿಸಿದ್ದ ಅನಿರುದ್ಧ್ ಅವರ ಬಗ್ಗೆ ಟೀಮ್ ಯುವ ಸಂಘಟನೆಯ ನೇತಾರ ವಿನಯ್ ಮಾಲಗೆಯವರು ಪತ್ರಿಕೆಯೊಡನೆ ಹೀಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಅನಿರುದ್ಧ್ ಶ್ರವಣ್‍ರವರು ಜಿಲ್ಲಾಧಿಕಾರಿಯಾಗಿದ್ದ 78 ದಿನಗಳು ಕೆಳಹಂತದ ಅಧಿಕಾರಿಗಳಿಗೆ ಕಷ್ಟಕರ ದಿನಗಳಾಗಿದ್ದವು. ಹಿಂದುಳಿದ ಈ ಜಿಲ್ಲೆಯನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು, ಯಾವ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂಬ ಬಗ್ಗೆ ದೂರಗಾಮಿ ದೃಷ್ಟಿಕೋನ ಹೊಂದಿದ್ದರು. ಬೀದರ್ ಮತ್ತು ಬಸವಕಲ್ಯಾಣಗಳನ್ನು ಪ್ರಮುಖ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಂಡಿದ್ದ ಅವರು ಬಡಜನರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುವ ಅಭಿಲಾಷೆ ಹಂಚಿಕೊಂಡಿದ್ದರು. ಇಂತಹ ಜನಪರ ಅಧಿಕಾರಿಯ ವರ್ಗಾವಣೆಯಾಗಿರುವುದು ಜಿಲ್ಲೆಯ ಜನರಿಗಾದ ದೊಡ್ಡ ನಷ್ಟ”.
ಈ ಕುರಿತು ಸ್ವತಃ ಅನಿರುದ್ಧ್ ಶ್ರವಣ್‍ರನ್ನೇ ಪತ್ರಿಕೆ ಮಾತಿಗೆಳೆದಾಗ, ಸರ್ಕಾರದ ಆದೇಶವನ್ನು ಗೌರವಿಸುತ್ತೇನೆ, ಬೀದರ್‍ನಲ್ಲಿ ನನ್ನ ಅಲ್ಪದಿನಗಳ ಅನುಭವ ಅದ್ಭುತವಾಗಿತ್ತು, ಸುಸೂತ್ರವಾಗಿ ಚುನಾವಣೆ ನಡೆಸಲು ಮತ್ತು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡಲು ಬೀದರ್ ಜನ ನೀಡಿದ ಸಹಕಾರವನ್ನು ನಾನು ಮರೆಯಲಾರೆ ಎಂದರು. ಅವರು ಅದೆಷ್ಟು ಬೀದರ್ ಜನರ ಪ್ರೀತಿವಿಶ್ವಾಸಗಳನ್ನು ಗಳಿಸಿದ್ದರೆಂದರೆ ಕೆಎಟಿ ತೀರ್ಪಿನಂತೆ ಮಹಾದೇವ್‍ರನ್ನೇ ಮರಳಿ ಬೀದರ್ ಜಿಲ್ಲಾಧಿಕಾರಿಯಾಗಿ ನೇಮಿಸಬೇಕೆಂಬ ಆದೇಶ ಹೊರಬೀಳುತ್ತಿದ್ದಂತೆಯೇ ಅನೇಕ ಸಂಘಟನೆಗಳು ಮತ್ತು ಬಿಡಿಬಿಡಿ ವ್ಯಕ್ತಿಗಳು ಮುಖ್ಯಮಂತ್ರಿಗೆ ಪತ್ರ ಬರೆದು ಅನಿರುದ್ಧ್ ಶ್ರವಣ್ ಅವರನ್ನೇ ಮುಂದುವರೆಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಸಿಎಂ ಕುಮಾರಸ್ವಾಮಿಯವರು ಹೇಗೆ ಸ್ಪಂದಿಸುತ್ತಾರೊ ಗೊತ್ತಿಲ್ಲ.

– ಕೆ.ಬಿ.ಕಟ್ಟಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here