Homeಮುಖಪುಟಮಣಿಪುರ ಹಿಂಸಾಚಾರದ ಗಮನ ಬೇರೆಡೆ ಸೆಳೆಯಲು ಏಕರೂಪ ನಾಗರಿಕ ಸಂಹಿತೆ ಹೇಳಿಕೆ ನೀಡಿದ ಮೋದಿ: ಪ್ರತಿಪಕ್ಷಗಳ...

ಮಣಿಪುರ ಹಿಂಸಾಚಾರದ ಗಮನ ಬೇರೆಡೆ ಸೆಳೆಯಲು ಏಕರೂಪ ನಾಗರಿಕ ಸಂಹಿತೆ ಹೇಳಿಕೆ ನೀಡಿದ ಮೋದಿ: ಪ್ರತಿಪಕ್ಷಗಳ ಟೀಕೆ

- Advertisement -
- Advertisement -

ಮಣಿಪುರದ ಹಿಂಸಾಚಾರ ಮತ್ತು ನಿರುದ್ಯೋಗದಂತಹ ಸಮಸ್ಯೆಗಳ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಹೇಳಿಕೆ ನೀಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳಿವೆ.

ಈ ಏಕರೂಪದ ನಾಗರಿಕ ಸಂಹಿತೆಯು ವಿವಿಧ ನಂಬಿಕೆಗಳ ಜನರಿಗೆ ವಿಭಿನ್ನ ವೈಯಕ್ತಿಕ ಕಾನೂನುಗಳನ್ನು ಅನುಮತಿಸುವ ಬದಲು ಎಲ್ಲಾ ಭಾರತೀಯರಿಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಪಡೆಯುವ ಹೀಗೆ ಅನೇ ಆಚಾರವಿಚಾರಗಳನ್ನು ನಿಯಂತ್ರಿಸಲು ಒಂದೇ ಸಾಮಾನ್ಯ ಕಾನೂನುಗಳನ್ನು ಒಳಗೊಂಡಿರುತ್ತದೆ.

ಈ ಸಂಹಿತೆಯನ್ನು ಜಾರಿಗೆ ತರುವುದು ಬಿಜೆಪಿಯ ಕಾರ್ಯಸೂಚಿಯಲ್ಲಿ ವರ್ಷಗಳಿಂದಲೂ ಇದೆ. ಈ ತಿಂಗಳ ಆರಂಭದಲ್ಲಿ, ಕಾನೂನು ಆಯೋಗವು ಈ ವಿಷಯದ ಬಗ್ಗೆ ನಾಗರಿಕರು ಮತ್ತು ಧಾರ್ಮಿಕ ಗುಂಪುಗಳ ಅಭಿಪ್ರಾಯಗಳನ್ನು ಕೇಳಿದೆ.

ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಭಾರತದಲ್ಲಿ ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದೆ ಮತ್ತು ಸುಪ್ರೀಂ ಕೋರ್ಟ್ ಕೂಡ ಅದನ್ನು ಪ್ರತಿಪಾದಿಸಿದೆ ಎಂದು ಮೋದಿ ಮಂಗಳವಾರ ಹೇಳಿದ್ದರು. ಅವರ ಹೇಳಿಕೆ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರು “ನಿಜವಾದ ಪ್ರಶ್ನೆಗಳಿಗೆ” ಮೋದಿ ಉತ್ತರಿಸಬೇಕು ಎಂದು ಹೇಳಿದರು.

”ಕಳೆದ 60 ದಿನಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಈ ಬಗ್ಗೆ ಪ್ರಧಾನಿ ಏಕೆ ಒಂದೇ ಒಂದು ಮಾತನ್ನೂ ಆಡಿಲ್ಲ? ಇವೆಲ್ಲವೂ ದಿಕ್ಕು ತಪ್ಪಿಸುವ ಸಮಸ್ಯೆಗಳು. ಅವರು ದೇಶದ ನಿಜವಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ, ಅದಕ್ಕಾಗಿಯೇ ಅವರು ಸಮಸ್ಯೆಗಳನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ” ಎಂದರು.

ಮಣಿಪುರವು ಮೇ 3 ರಿಂದ ಮೈಟೈಸ್ ಮತ್ತು ಕುಕಿಗಳ ನಡುವಿನ ಜನಾಂಗೀಯ ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಇದು 100 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದಾರೆ. ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಬೇಕೆಂಬ ಬಹುಸಂಖ್ಯಾತ ಮೈತಿ ಸಮುದಾಯಗಳ ಬೇಡಿಕೆಯನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತು.

”ಏಕರೂಪ ನಾಗರಿಕ ಸಂಹಿತೆಯಂತಹ ಕಾನೂನು ಜಾರಿಗೆ ಬಂದರೆ ಬುಡಕಟ್ಟು ಜನಾಂಗದವರ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೊಡೆತ ಬೀಳುತ್ತದೆ” ಎಂದು ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.

”ನೀವು [ಬಿಜೆಪಿ] ಯಾವಾಗಲೂ ಹಿಂದೂ-ಮುಸ್ಲಿಂ ದೃಷ್ಟಿಕೋನದಿಂದ ಏಕೆ ಯೋಚಿಸುತ್ತೀರಿ?” ಎಂದು ಬಾಘೆಲ್ ಕೇಳಿದ್ದಾರೆ. ”ಛತ್ತೀಸ್‌ಗಢದಲ್ಲಿ ನಮ್ಮಲ್ಲಿ ಬುಡಕಟ್ಟು ಜನರಿದ್ದಾರೆ. ಅವರು ನಂಬಿಕೆಗಳು ಮತ್ತು ಸಾಂಪ್ರದಾಯಿಕ ನಿಯಮಗಳಿಗೆ ತೊಂದರೆಯಾಗುವುದಿಲ್ಲವೇ? ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅವರ ಸಂಪ್ರದಾಯಕ್ಕೆ ಏನಾಗುಬಹುದು? ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ರಾಷ್ಟ್ರೀಯ ಜನತಾ ದಳ ಸಂಸದ ಮನೋಜ್ ಝಾ ಅವರು, ”ಮಾತನಾಡುವ ಮೊದಲು, ಪ್ರಧಾನ ಮಂತ್ರಿಯವರು 21 ನೇ ಕಾನೂನು ಆಯೋಗವು ಏನು ಹೇಳಿದೆ ಎಂಬುದನ್ನು ಪರಿಶೀಲಿಸಬೇಕು ಮತ್ತುಸಂವಿಧಾನ ಸಭೆಯ ಚರ್ಚೆಗಳನ್ನು ಆಳವಾಗಿ ವಿಶ್ಲೇಷಿಸಬೇಕು. ಏಕೆಂದರೆ ನಿಮಗೆ ಸಹಾಯ ಮಾಡಲು ಹೊರಟವರು ನಿಮಗೆ ಹಾನಿಯನ್ನುಂಟುಮಾಡುತ್ತಾರೆ” ಎಂದು ಎಚ್ಚರಿಸಿದರು.

21ನೇ ಕಾನೂನು ಆಯೋಗವು ಆಗಸ್ಟ್ 31, 2018ರಂದು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತು, “ಈ ಹಂತದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ” ಎಂದು ಹೇಳಿದೆ. ತಾರತಮ್ಯ ತಡೆಯಲು ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಕ್ರೋಡೀಕರಿಸಬೇಕು ಎಂದು ಶಿಫಾರಸು ಮಾಡಿತ್ತು.

ದ್ರಾವಿಡ ಮುನ್ನೇತ್ರ ಕಳಗಂ ನಾಯಕ ಟಿಕೆಎಸ್ ಇಳಂಗೋವನ್ ಅವರು ಮಾತನಾಡಿ, ”ಹಿಂದೂಗಳಿಗೆ ಈ ಏಕರೂಪ ನಾಗರಿಕ ಸಂಹಿತೆಯನ್ನು ಅನ್ವಯಿಸಬೇಕು. ಆಗ ”ಎಲ್ಲಾ ಜಾತಿಯ ಜನರಿಗೂ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಸಿಗುತ್ತದೆ” ಎಂದು ಹೇಳಿದ್ದಾರೆ.

”ದೇಶದ ಎಲ್ಲಾ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಮಾಡಲು ಅವಕಾಶ ನೀಡಬೇಕು ಹಾಗಾಗಿ ಹಿಂದೂ ಧರ್ಮದಲ್ಲಿ ಮೊದಲು ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ನಮಗೆ ಏಕರೂಪ ನಾಗರಿಕ ಸಂಹಿತೆ ಬೇಡ ಏಕೆಂದರೆ ಸಂವಿಧಾನವು ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ನೀಡಿದೆ” ಎಂದರು.

ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ”ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು “ಕಿತ್ತುಕೊಳ್ಳುತ್ತಾರೆಯೇ?” ಎಂದು ಕೇಳುವ ಮೂಲಕ ಮೋದಿಯವರ ಹೇಳಿಕೆಯನ್ನು ಟೀಕಿಸಿದ್ದಾರೆ.

”ಮೋದಿ ಜಿ ಪಾಕಿಸ್ತಾನದ ಕಾನೂನಿನಿಂದ ಏಕೆ ಸ್ಫೂರ್ತಿ ಪಡೆಯುತ್ತಿದ್ದಾರೆ?” ಎಂದು ಓವೈಸಿ ಕೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ”ಅವರು [ಮೋದಿ] ಇಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನನ್ನು ಸಹ ಮಾಡಿದರು, ಆದರೆ ನೆಲದ ಮಟ್ಟದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಮುಸ್ಲಿಮರನ್ನು ‘ಹಿಂದೂ ನಾಗರಿಕ ಸಂಹಿತೆ’ಗೆ ಸೇರಿಸಲು ಮೋದಿ ಯತ್ನ: ಪ್ರಧಾನಿ ವಿರುದ್ಧ ಗುಡುಗಿದ ಒವೈಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...