ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಮತ್ತೊಮ್ಮೆ ಲಿಖಿಂಪುರ್‌ ಹತ್ಯಾಕಾಂಡದ ರೈತರ ಪರವಾಗಿ ನಿಂತಿದ್ದು, ರೈತರ ಅಮಾಯಕ ರಕ್ತಕ್ಕೆ ಉತ್ತರದಾಯಿತ್ವ ಇರಬೇಕು ಎಂದು ಅವರು ಹೇಳಿದ್ದಾರೆ. ಭಾನುವಾರ ಯುಪಿಯ ಲಖಿಂಪುರ್ ಖೇರಿಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸುವ ದೀರ್ಘ ಮತ್ತು ಉತ್ತಮ ಗುಣಮಟ್ಟದ ವೀಡಿಯೊವನ್ನು ಅವರು ಟ್ವೀಟ್ ಮಾಡಿದ್ದಾರೆ.

ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರಾಗಿರುವ ವರುಣ್‌ ಗಾಂಧಿ ಅವರು ಭಾನುವಾರ ಲಖಿಂಪುರ್ ಖೇರಿಯಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಹತ್ಯಾಕಾಂಡಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: ರೈತರ ಮೇಲೆ ಕಾರು ಹರಿಸುತ್ತಿರುವ ವೈರಲ್ ವಿಡಿಯೋ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ

ಗುರುವಾರ ಘಟನೆಯ ಸ್ಪಷ್ಟ ಮತ್ತು ಧೀರ್ಘ ವಿಡಿಯೊವನ್ನು ಟ್ವೀಟ್ ಮಾಡಿರುವ ವರುಣ್‌ ಗಾಂಧಿ, “ವೀಡಿಯೊ ಅತ್ಯಂತ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮಾಡುವ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅಂದು ಚೆಲ್ಲಿದ ರೈತರ ಮುಗ್ಧ ರಕ್ತಕ್ಕೆ ಹೊಣೆಗಾರಿಕೆ ವಹಿಸಬೇಕು. ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿ ಹಠ ಮತ್ತು ಕ್ರೌರ್ಯದ ಸಂದೇಶ ಪ್ರವೇಶಿಸುವ ಮೊದಲು ನ್ಯಾಯ ಒದಗಿಸಬೇಕು” ಎಂದು ಹೇಳಿದ್ದಾರೆ.

ಮಂಗಳವಾರ ಘಟನೆಯ ಬಗ್ಗೆಗಿನ ಸಣ್ಣ ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದ ವರುಣ್‌, “ಈ ವೀಡಿಯೊ ಎಲ್ಲರ ಆತ್ಮವನ್ನು ಕಲಕುತ್ತದೆ” ಎಂದು ಹೇಳಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದರು.

ಅಂದು ಅವರು ತನ್ನ ಟ್ವೀಟ್‌ನಲ್ಲಿ, “ಲಖಿಂಪುರ್ ಖೇರಿಯಲ್ಲಿ ಉದ್ದೇಶಪೂರ್ವಕವಾಗಿ ವಾಹನವನ್ನು ರೈತರ ಮೇಲೆ ಹರಿಸಿರುವ ಈ ವಿಡಿಯೋ ಎಲ್ಲರ ಆತ್ಮವನ್ನೂ ಕಲಕುತ್ತದೆ. ಪೊಲೀಸರು ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿ ಈ ವಾಹನಗಳ ಮಾಲೀಕರು, ಅದರಲ್ಲಿ ಕುಳಿತಿರುವ ಜನರು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು” ಎಂದು ಬರೆದಿದ್ದರು.

ರೈತರ ಸಾವಿನಲ್ಲಿ ಭಾಗಿಯಾದವರನ್ನು ಖಂಡಿಸಿದ್ದಲ್ಲದೆ, ಸರ್ಕಾರವು ತಾಳ್ಮೆಯಿಂದ ಮತ್ತು ಸಂಯಮದಿಂದ ವರ್ತಿಬೇಕು ಎಂದು ಒತ್ತಾಯಿಸಿದ್ದರು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಮತ್ತು ಮೃತಪಟ್ಟ ರೈತರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡುವಂತೆ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು.

 ಇದನ್ನೂ ಓದಿ: ರೈತರ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಯುಪಿ ಸಿಎಂಗೆ ಪತ್ರ ಬರೆದ ಬಿಜೆಪಿ ಸಂಸದ ವರುಣ್ ಗಾಂಧಿ

1 COMMENT

LEAVE A REPLY

Please enter your comment!
Please enter your name here