ಬಂಗಾಳದಲ್ಲಿ ಮತದಾರರ ಹೆಸರುಗಳು ಮತ್ತು ಪಟ್ಟಿಗಳನ್ನು ಕೇಂದ್ರ ಮಟ್ಟದಲ್ಲೇ ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವಂತಹ ಮತದಾರರ ಪಟ್ಟಿ ಸಾಫ್ಟ್‌ವೇರ್ ಬಳಕೆಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಆಗ್ರಹಿಸಿದ್ದಾರೆ.
“ಸೀಮಾ ಖನ್ನಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಾನು ಇಂದು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಎಫ್‌ಐಆರ್ ದಾಖಲಿಸಲು ಸೂಕ್ತ ಆಧಾರಗಳಿವೆಯೇ ಎಂದು ಪರಿಶೀಲಿಸಲು ಎಸ್‌ಎಚ್‌ಒ ಅವರು ಈ ತಿಂಗಳ 5ನೇ ತಾರೀಖಿನವರೆಗೆ ಸಮಯ ಕೇಳಿದ್ದಾರೆ. ಮುಂದಿನ ಕ್ರಮಕ್ಕಾಗಿ ನಾನು 6ನೇ ತಾರೀಖಿನಂದು ಮರಳಿ ಬರುವುದಾಗಿ ಅವರಿಗೆ ತಿಳಿಸಿದ್ದೇನೆ” ಎಂದು ಮಹುವಾ ಮೊಯಿತ್ರಾ ಅವರು ಬುಧವಾರ (ಸೆ.30) ಎಕ್ಸ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಚುನಾವಣಾ ಆಯೋಗ, ಗ್ಯಾನೇಶ್ ಕುಮಾರ್ ಮತ್ತು ಸೀಮಾ ಖನ್ನಾ ವಿರುದ್ಧ ಆರೋಪಗಳನ್ನು ಮಾಡಿ ಹಾಕಿರುವ ಪೋಸ್ಟ್‌ಗಳನ್ನು ರಿಪೋಸ್ಟ್ ಮಾಡಿರುವ ಮಹುವಾ ಮೊಯಿತ್ರಾ, “ದೆಹಲಿ ಡಿಸಿಪಿ ಮತ್ತು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎಸ್‌ಹೆಚ್ಒ ಅವರೇ..ಇವೆಲ್ಲವೂ ಸೀಮಾ ಖನ್ನಾ ವಿರುದ್ಧ ಕ್ರಮ ಕೈಗೊಳ್ಳಲು ಇರುವ ಆಧಾರಗಳು, ಅಕ್ಟೋಬರ್ 6ರಂದು ನಿಮ್ಮನ್ನು ಭೇಟಿಯಾಗುತ್ತೇನೆ” ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಸೀಮಾ ಖನ್ನಾ ಅವರ ಫೋಟೋ ಹಂಚಿಕೊಂಡಿರುವ ಮಹುವಾ ಮೊಯಿತ್ರಾ, “ಒಬ್ಬರು ಅಪರಾಧಿ, ದೇಶದ್ರೋಹಿ, ಸೈಬರ್ ಭಯೋತ್ಪಾದಕಿ, ಭಾರತದ ಪ್ರಜಾಪ್ರಭುತ್ವದ ಚೌಕಟ್ಟಿಗೆ ಹಾನಿ ಮಾಡಲು ಸಾಫ್ಟ್‌ವೇರ್ ಅನ್ನು ಅಕ್ರಮವಾಗಿ ಬಳಸುತ್ತಿರುವ ವ್ಯಕ್ತಿ. ಈ ಹೆಸರನ್ನು ನೆನಪಿಡಿ: ಸೀಮಾ ಖನ್ನಾ, ಡಿಜಿ ಐಟಿ ಭಾರತೀಯ ಚುನಾವಣಾ ಆಯೋಗ. ಈ ಮುಖವನ್ನು ಗುರುತಿಸಿ” ಎಂದು ಬರೆದುಕೊಂಡಿದ್ದಾರೆ. “ಮೇಡಂ, ಅಡಗಿಕೊಳ್ಳಲು ನಿಮಗೆ ಯಾವುದೇ ಗುಂಡಿ ಅಥವಾ ಅಡಗುತಾಣವೂ ಸಾಕಾಗುವುದಿಲ್ಲ ಮೇಡಂ” ಎಂದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ದವೂ ಇದೇ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಮಹುವಾ ಮೊಯಿತ್ರಾ ದೂರು ದಾಖಲಿಸಿದ್ದಾರೆ.


