Homeಮುಖಪುಟಹಿಂದೂಗಳ ಮೆರವಣಿಗೆ ಮೇಲೆ ಉಗುಳಿದ ಆರೋಪ: 150 ದಿನಗಳ ಜೈಲು ವಾಸದ ಬಳಿಕ ಮುಸ್ಲಿಂ ಯುವಕನಿಗೆ...

ಹಿಂದೂಗಳ ಮೆರವಣಿಗೆ ಮೇಲೆ ಉಗುಳಿದ ಆರೋಪ: 150 ದಿನಗಳ ಜೈಲು ವಾಸದ ಬಳಿಕ ಮುಸ್ಲಿಂ ಯುವಕನಿಗೆ ಜಾಮೀನು

- Advertisement -
- Advertisement -

ಹಿಂದೂ ಧರ್ಮೀಯರ ಮೆರವಣಿಗೆ ಸಾಗುತ್ತಿದ್ದ (ಉಜ್ಜಯಿನಿಯ ಮಹಾಕಾಲ್ ಮೆರವಣಿಗೆ) ವೇಳೆ ಮನೆಯ ಮಾಳಿಗೆ ಮೇಲೆ ನಿಂತು ಉಗುಳಿದ್ದಾನೆ ಎಂಬ ಕಾರಣಕ್ಕೆ ಬಂಧಿಸ್ಪಟ್ಟಿದ್ದ ಮುಸ್ಲಿಂ ಯುವಕನಿಗೆ 150 ದಿನಗಳ ಜೈಲು ವಾಸದ ಬಳಿಕ ಮಧ್ಯಪ್ರದೇಶದ ಹೈಕೋರ್ಟ್‌ ಪೀಠ ಜಾಮೀನು ನೀಡಿದೆ. ಪ್ರಕರಣ ಸಂಬಂಧ ಒಟ್ಟು ಮೂವರನ್ನು ಬಂಧಿಸಲಾಗಿತ್ತು. ಈ ಪೈಕಿ ಇಬ್ಬರು ಅಪ್ರಾಪ್ತರು ಈ ಹಿಂದೆಯೇ ಜಾಮೀನು ಪಡೆದಿದ್ದರು.

ಹಿಂದೂ ಮೆರವಣಿಗೆ ಮೇಲೆ ಉಗುಳಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದ ಬೆನ್ನಲ್ಲೇ, ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರ ಮೂರು ಅಂತಸ್ಥಿತ ಮನೆಯನ್ನು, ಜುಲೈ 19,2023ರಂದು ಮಧ್ಯಪ್ರದೇಶದ ಉಜ್ಜಯಿನಿಯ ನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ತಂದು ಪೊಲೀಸರ ಸಮ್ಮುಖದಲ್ಲಿ ಧ್ವಂಸ ಮಾಡಿದ್ದರು. ಈ ವೇಳೆ ತಮಟೆ ಬಾರಿಸಿ ಧ್ವಂಸ ಕಾರ್ಯಾಚರಣೆಯನ್ನು ಸಂಭ್ರಮಿಸಲಾಗಿತ್ತು.

ಉಜ್ಜಯಿನಿಯ 43 ವರ್ಷದ ಅಶ್ರಫ್ ಹುಸೇನ್ ಮನ್ಸೂರಿ ಎಂಬವರ ಮನೆಯನ್ನು ಧ್ವಂಸ ಮಾಡಲಾಗಿತ್ತು. ಮನೆ ಧ್ವಂಸಗೊಳಿಸುವ ಅರ್ಧ ಗಂಟೆಗೂ ಮುನ್ನ ಅಶ್ರಫ್ ಅವರ ಮೃತ ತಾಯಿಯ ಹೆಸರಿನಲ್ಲಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಮನೆ ಧ್ವಂಸ ಮಾಡಿದ್ದಲ್ಲದೆ ಅಶ್ರಫ್ ಅವರ 18 ಮತ್ತು 15 ವರ್ಷದ ಇಬ್ಬರು ಗಂಡು ಮಕ್ಕಳು ಮತ್ತು ಅವರ ಗೆಳೆಯನ 15 ವರ್ಷದ ಓರ್ವ ಮಗನನ್ನು ಪೊಲೀಸರು ಬಂಧಿಸಿದ್ದರು.

ಬಂಧಿತ ಮೂವರು ಮೆರವಣಿಗೆ ಮೇಲೆ ಉಗುಳಿದ್ದಾರೆ ಎಂಬ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಉಜ್ಜಯಿನಿಯ ಖರಕುವಾ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದ ಹಿಂದೂ ಯುವಕರು, ಅಶ್ರಫ್ ಅವರ ಕುಟುಂಬದ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು.

ಅಲ್ಲದೆ, ಇಂದೋರ್‌ನಿಂದ ಉತ್ತರಕ್ಕೆ 55 ಕಿ.ಮೀ ದೂರದಿಂದ ಉಜ್ಜಯಿನಿಯ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾವನ್ ಲೋಟ್ (28) ಎಂಬಾತ ಅಶ್ರಫ್ ಅವರ ಕುಟುಂಬಸ್ಥರು ಮೆರವಣಿಗೆ ಮೇಲೆ ಉಗುಳಿದ್ದಾರೆ ಎಂದು ದೂರು ನೀಡಿದ್ದ. ದೂರು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಐದು ಸೆಕ್ಷನ್‌ಗಳಾದ 295-ಎ, 153-ಎ, 296,505,34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಮೂವರನ್ನು ಬಂಧಿಸಿದ್ದರು.

ನ್ಯಾಯಾಲಯದ ಮುಂದೆ ವ್ಯತಿರಿಕ್ತ ಹೇಳಿಕೆ ನೀಡಿದ ದೂರುದಾರ

ಜುಲೈ 17, 2023ರಂದು ಮೆರವಣಿಗೆ ನಡೆದಿತ್ತು. ಜುಲೈ 19ರಂದು ಅಶ್ರಫ್ ಅವರ ಮನೆ ಧ್ವಂಸ ಮಾಡಿದ್ದಲ್ಲದೆ ಅವರ ಮಕ್ಕಳನ್ನು ಬಂಧಿಸಲಾಗಿತ್ತು. ಇದಾಗಿ ಐದು ತಿಂಗಳ ಬಳಿಕ 15 ಡಿಸೆಂಬರ್ 2023ರಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದ ಮುಂದೆ ಹಾಜರಾದ ದೂರುದಾರ ಸಾವನ್ ಲೋಟ್ ಮತ್ತು ಆತನ ಸ್ನೇಹಿತ, ಪ್ರಕರಣದ ಸಾಕ್ಷಿ ಅಜಯ್ ಖತ್ರಿ, ಬಂಧಿತರು ಮೆರವಣಿಗೆ ಮೇಲೆ ಉಗುಳಿದ್ದನ್ನು ನಾವು ನೋಡಿಲ್ಲ ಎಂದಿದ್ದರು. ಬಂಧಿತರನ್ನು ಗುರುತಿಸುವಲ್ಲಿ ಅವರು ವಿಫಲರಾಗಿದ್ದರು.

ನ್ಯಾಯಾಲಯಕ್ಕೆ ಲಿಖಿತ ಹೇಳಿಕೆಯನ್ನೂ ನೀಡಿದ್ದ ಇವರು, ನಾವು ನೀಡಿದ ದೂರು ಸರಿಯಾಗಿ ಹೊಂದಿಕೆಯಾಗದಿದ್ದರೂ, ಎಫ್‌ಐಆರ್‌ ಪ್ರತಿಗೆ ಪೊಲೀಸರು ಸಹಿ ಹಾಕಿದ್ದರು ಎಂದು ಆಪಾದಿಸಿದ್ದರು.

151 ದಿನಗಳ ಬಳಿಕ ಜಾಮೀನು

15 ಡಿಸೆಂಬರ್ 2023 ರಂದು, ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಅಶ್ರಫ್ ಅವರ 18 ವರ್ಷದ ಮಗ ಬಂಧಿತ ಅದ್ನಾನ್ ಮನ್ಸೂರಿಗೆ ಜಾಮೀನು ನೀಡಿತ್ತು. ಪ್ರಕರಣದ ಏಕೈಕ ವಯಸ್ಕ ಆರೋಪಿ ಈತನಾಗಿದ್ದ. ಜುಲೈ 18 ರಿಂದ 151 ದಿನಗಳ ಕಾಲ ಈತ ಸುಖಾ ಸುಮ್ಮನೆ ಜೈಲಿನಲ್ಲಿದ್ದ.

ಅಪ್ರಾಪ್ತರಿಗೆ ಮೊದಲೇ ಸಿಕ್ಕಿತ್ತು ಜಾಮೀನು:

ಪ್ರಕರಣ ಸಾಕ್ಷಿ ಅಜಯ್ ಖತ್ರಿ ಕೂಡ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಆತನ ಹೇಳಿಕೆ ಪ್ರಾಸಿಕ್ಯೂಶನ್‌ಗೆ ಪೂರಕವಾಗಿಲ್ಲ ಎಂದು ಅದ್ನಾನ್‌ಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಅನಿಲ್ ವರ್ಮಾ ಅವರ ಏಕ ಸದಸ್ಯ ಪೀಠ ಹೇಳಿತ್ತು.

ಅದ್ನಾನ್‌ಗೆ ಜಾಮೀನು ಸಿಗುವ ಮೊದಲು ಆತನೊಂದಿಗೆ ಬಂಧಿತರಾಗಿದ್ದ 15 ವರ್ಷದ ಇಬ್ಬರು ಅಪ್ರಾಪ್ತರಿಗೆ 19 ಸೆಪ್ಟೆಂಬರ್ 2023ರಂದು ಬಾಲಪರಾಧಿ ನ್ಯಾಯಾಲ ಜಾಮೀನು ನೀಡಿತ್ತು.

ಅಪ್ರಾಪ್ತರ ಅರ್ಜಿ ಎರಡು ಸಲ ತಿರಸ್ಕಾರಗೊಂಡಿತ್ತು:

19 ಸೆಪ್ಟೆಂಬರ್ 2023ರಂದು ಇಬ್ಬರು ಅಪ್ರಾಪ್ತರಿಗೆ ಬಾಲ ನ್ಯಾಯಮಂಡಳಿ ಜಾಮೀನು ನೀಡಿತ್ತು. ಆದರೆ, ಅದಕ್ಕೂ ಮುನ್ನ ಎರಡು ಸಲ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಜುಲೈ 19 ರಂದು ಮತ್ತು ನಂತರ ಮತ್ತೆ ಜುಲೈ 24 ರಂದು ಅಪ್ರಾಪ್ತರ ಪರ ವಕೀಲ ಉಮೇಶ್ ಶರ್ಮಾ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಬಾಲ ನ್ಯಾಯ ಮಂಡಳಿ ಮತ್ತು ಮಕ್ಕಳ ನ್ಯಾಯಾಲಯ ತಿರಸ್ಕರಿಸಿತ್ತು.

ಈ ವಿಚಾರವನ್ನು ಅದ್ನಾನ್‌ಗೆ ಜಾಮೀನು ನೀಡುವಾಗ ಉಲ್ಲೇಖಿಸಿದ್ದ ಇಂದೋರ್‌ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಅನಿಲ್ ವರ್ಮಾ ಅವರು, ಬಾಲಾಪರಾಧಿ ನ್ಯಾಯಾಲಯವು ಎರಡು ಸಲ ಅಪ್ರಾಪ್ತರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2000ರಡಿ ದೋಷಪೂರಿತ ನಿರ್ಧಾರವಾಗಿದೆ ಎಂದು ಹೇಳಿದ್ದರು. ಇಬ್ಬರು ಅಪ್ರಾಪ್ತರು ವಯಸ್ಕ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರಿಗೆ ಜಾಮೀನು ನೀಡಿದರೆ ‘ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯಕ್ಕೆ’ ಕಾರಣರಾಗಬಹುದು ಎಂಬುವುದನ್ನು ತಳ್ಳಿ ಹಾಕಿದ್ದರು.

ವಿಡಿಯೋ ಸಾಕ್ಷ್ಯ ಉಲ್ಲೇಖಿಸಿದ್ದ ಪೊಲೀಸರು, ಸಾಬೀತುಪಡಿಸುವಲ್ಲಿ ವಿಫಲ

ಇಡೀ ಪ್ರಕರಣಕ್ಕೆ ದೂರು ನೀಡಿದ್ದ ಸಾವನ್ ಲೋಟ್, ಆತನ ಸ್ನೇಹಿತ ಅಜಯ್ ಖತ್ರಿ ಮತ್ತು ಒಂದು ವೈರಲ್ ವಿಡಿಯೋವನ್ನು ಸಾಕ್ಷಿಯಾಗಿ ಪೊಲೀಸರು ಉಲ್ಲೇಖಿಸಿದ್ದರು. ದೂರು ನೀಡಿದಾತ ಮತ್ತು ಸಾಕ್ಷಿ ನ್ಯಾಯಾಲಯದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಕೊನೆಯ ಸಾಕ್ಷಿಯಾಗಿದ್ದ ವಿಡಿಯೋವನ್ನು ಪೊಲೀಸರು ಉಲ್ಲೇಖಿಸಿದ್ದರೇ ಹೊರತು, ನ್ಯಾಯಾಲಯದ ಮುಂದೆ ಸಾಭೀತುಪಡಿಸುವಲ್ಲಿ ವಿಫಲರಾಗಿದ್ದರು.

ಅದ್ನಾನ್ ಮನ್ಸೂರಿ ಪರ ಕೆಳ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ದೇವೇಂದ್ರ ಸೆಂಗಾರ್ ಅವರು, ಉಜ್ಜಿಯಿನಿ ಪೊಲೀಸರು ವಿಡಿಯೋ ಸಾಕ್ಷಿಯನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಪೊಲೀಸರು ಹೇಳಿರುವುದು ಒಂದು ವೈರಲ್ ವಿಡಿಯೋ ಕುರಿತಾಗಿದೆ. ಆ ವಿಡಿಯೋದಲ್ಲಿ ಮೂವರು ಮನೆಯ ಮಾಳಿಗೆ ನಿಂತು ನೋಡುತ್ತಿರುವುದು. ಅವರ ಕೈಯಲ್ಲಿ ಒಂದು ಬಾಟಲಿ ಹಿಡಿದಿರುವ ದೃಶ್ಯವಿದೆ. ಅದು ಬಂಧಿತರೇ ಎಂಬುವುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಮನೆ ಧ್ವಂಸವನ್ನು ಸಂಭ್ರಮಿಸಿದ್ದರು ಪೊಲೀಸರು, ಪಾಲಿಕೆ ಸಿಬ್ಬಂದಿ:

ಮೆರವಣಿಗೆ ಮೇಲೆ ಮೂವರು ಉಗುಳಿದ್ದಾರೆ ಎಂಬ ವಿಡಿಯೋ ವದಂತಿ ಮತ್ತು ದೂರು ಆಧರಿಸಿ ಜುಲೈ 18,203ರಂದು ತಡರಾತ್ರಿ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರನ್ನು ಪೊಲೀಸರು ಅವರ ಮನೆಯಿಂದಲೇ ಬಂಧಿಸಿ ಕರೆದೊಯ್ದಿದ್ದರು. ಮರು ದಿನ (ಜುಲೈ 18) ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬೆಳಗ್ಗಿನ ಉಪಹಾರ ಸೇವಿಸಲು ಅಶ್ರಫ್ ಹುಸೇನ್ ಮನ್ಸೂರ್ ಅವರ ಮನೆಯವರು ತಯಾರಿ ನಡೆಸುತ್ತಿದ್ದರು. ಈ ವೇಳೆ ಅಶ್ರಫ್ ಅವರಿಗೆ ಸ್ಥಳೀಯ ಪೊಲೀಸ್ವ ಠಾಣೆಯಿಂದ ಒಂದು ಕರೆ ಬಂದಿತ್ತು. ಅದರಲ್ಲಿ ಮಾತನಾಡಿದ್ದ ಪೊಲೀಸ್ ಅಧಿಕಾರಿ, “ನಿಮ್ಮ ಮಗ ತಪ್ಪು ಮಾಡಿದ್ದಾನೆ , ನಿಮ್ಮ ಮನೆಯನ್ನು ಈಗ ಧ್ವಂಸ ಮಾಡುತ್ತೇವೆ” ಎಂದಿದ್ದರು.

ಇದಾಗಿ ಅರ್ಧ ಗಂಟೆಯ ಬಳಿಕ 9:30 ಗಂಟೆಗೆ ಅಶ್ರಫ್ ಮತ್ತು ಅವರ ಮೂವರು ಇಬ್ಬರು ಸಹೋದರರು ಸುಮಾರು 50 ವರ್ಷಗಳಿಂದ ವಾಸವಿದ್ದ ಮನೆ ಬಳಿ ಬಂದ ಪೊಲೀಸರು, ಮೂರು ಅಂತಸ್ಥಿತ ಮನೆಯ ತಳ ಮಹಡಿಯ ಗೋಡೆಗೆ ಒಂದು ನೋಟಿಸ್ ಅಂಟಿಸಿದ್ದರು. ಆ ನೋಟಿಸ್ ಮನೆಯನ್ನು ಧ್ವಂಸ ಮಾಡುವುದರ ಕುರಿತಾಗಿತ್ತು.

ಅಶ್ರಫ್‌ ಅವರ ತಾಯಿ, 2009ರಲ್ಲಿ ನಿಧನ ಹೊಂದಿರುವ ಶಹಜನ್‌ಬೀ ಅವರ ಹೆಸರಿನಲ್ಲಿ ನೋಟಿಸ್ ನೀಡಲಾಗಿತ್ತು. ಅದರಲ್ಲಿ, ನಿಮ್ಮ ಮನೆ ಕಡ್ಡ ಅನಧಿಕೃತವಾಗಿದೆ. ಮಧ್ಯಪ್ರದೇಶ ಪುರಸಭೆಗಳ ಕಾಯಿದೆ, 1961 ರ ಸೆಕ್ಷನ್ 436 ರ ಪ್ರಕಾರ, ಇದು ಕೊನೆಯ ನೋಟಿಸ್ ನೀಡಲಾಗಿದೆ. ನಿಮ್ಮ ಮನೆಯನ್ನು ಧ್ವಂಸ ಮಾಡುತ್ತೇವೆ. ಧ್ವಂಸ ಕಾರ್ಯಾಚರಣೆಯ ಶುಲ್ಕವನ್ನು ನೀವೇ ಪಾವತಿಸಬೇಕು ಎಂದು ಬರೆಯಲಾಗಿತ್ತು.

ನೋಟಿಸ್ ಕೊಟ್ಟ ಸ್ವಲ್ಪ ಹೊತ್ತಿನಲ್ಲೇ ಅಶ್ರಫ್ ಅವರ ಮನೆಯ ಮುಂದೆ ಪೊಲೀಸರು, ಪಾಲಿಕೆ ಸಿಬ್ಬಂದಿ ಜೆಸಿಬಿ ಮತ್ತು ತಮಟೆ ತಂಡದೊಂದಿಗೆ ಹಾಜರಾಗಿದ್ದರು. ಅಶ್ರಫ್ ಅವರ ಕುಟುಂಬ ತಮ್ಮ ವಸ್ತುಗಳನ್ನು ಖಾಲಿ ಮಾಡಲೂ ಸಮಯ ನೀಡದೆ ಮನೆಯನ್ನು ಧ್ವಂಸ ಮಾಡಿದ್ದರು. ಈ ವೇಳೆ ಹಿಂದೂಗಳ ಗೋವಿಂದ ಗೋವಿಂದ ಹಾಡು ಹಾಕಿ, ಜೋರಾಗಿ ತಮಟೆ ಬಡಿಯುತ್ತಾ ಮನೆಯ ಧ್ವಂಸವನ್ನು ಅಧಿಕಾರಿಗಳು ಸಂಭ್ರಮಿಸಿದ್ದರು ಎಂದು ಅಶ್ರಫ್ ಆರೋಪಿಸಿದ್ದರು.

ನಮ್ಮ ಮನೆ ಅಕ್ರಮ ಕಟ್ಟಡವಾಗಿರಲಿಲ್ಲ. ಒಂದು ಆಗಿದ್ದರೆ, ಮಧ್ಯಪ್ರದೇಶ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ, 1956 ರ ಪ್ರಕಾರ ಸರ್ಕಾರವು ನಮಗೆ 14 ದಿನಗಳ ಮುಂಚೆ ನೋಟಿಸ್ ನೀಡಬೇಕಾಗಿತ್ತು ಮತ್ತು ಮುಂದಿನ ಕ್ರಮದ ಮೊದಲು ನಮ್ಮ ವಿವರಣೆಗಾಗಿ ಕಾಯಬೇಕಾಗಿತ್ತು ಎಂದು ಅಶ್ರಫ್ ಹೇಳಿದ್ದರು.

ಮಾಡದ ತಪ್ಪಿಗೆ ಜೈಲು ಸೇರಿದ್ದ ಅಮಾಯಕರು :

ಅಶ್ರಫ್ ಹುಸೇನ್ ಮನ್ಸೂರ್ ಅವರ ಇಬ್ಬರು ಮಕ್ಕಳು ಮತ್ತು ಅವರ ಗೆಳೆಯನ ಓರ್ವ ಮಗ ಸೇರಿದಂತೆ ಬಂಧಿತರಾಗಿದ್ದ ಮೂವರು ಪ್ರಸ್ತುತ ಬಿಡುಗಡೆಯಾಗಿದ್ದಾರೆ. ಅವರ ಮೇಲಿನ ಆರೋಪ ಸುಳ್ಳು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಮಾಡದ ತಪ್ಪಿಗೆ ಅಶ್ರಫ್ ಅವರ ಮಗ ಅದ್ನಾನ್ 150 ದಿನ ಜೈಲು ವಾಸ ಅನುಭವಿಸಿದ್ದ. ಅಲ್ಲದೆ ಅವರ ಮೂರು ಅಂತಸ್ತಿನ ಮನೆ ಮತ್ತು ಜೀವನಕ್ಕೆ ಆಸರೆಯಾಗಿದ್ದ ಸಣ್ಣ ಅಂಗಡಿಯನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದ ಮಹಾರಾಷ್ಟ್ರ ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಉದ್ಧವ್ ಠಾಕ್ರೆ ಬಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...