Homeಮುಖಪುಟಎಲ್ಲಾ ಧಾರೆಗಳು ಇಂದು ಒಗ್ಗೂಡುವ ಅಗತ್ಯ; ಐಕ್ಯ ಹೋರಾಟ ಏಕೆ?

ಎಲ್ಲಾ ಧಾರೆಗಳು ಇಂದು ಒಗ್ಗೂಡುವ ಅಗತ್ಯ; ಐಕ್ಯ ಹೋರಾಟ ಏಕೆ?

ಈ ಕರಾಳ ಕಾನೂನುಗಳನ್ನು ತರುತ್ತಿರುವುದು ಒಂದು ಸರ್ವಾಧಿಕಾರಿ ಧೋರಣೆಯ ಅಥವಾ ನಿರಂಕುಶ ಅಧಿಕಾರದ ಸರ್ಕಾರ. ಇಂದು ಮುಖ್ಯವಾಹಿನಿಯಲ್ಲಿರುವ ಹಲವು ಮಾಧ್ಯಮಗಳು, ಹಲವು ನ್ಯಾಯಾಲಯಗಳು, ಕೇಂದ್ರೀಯ ತನಿಖಾ ಸಂಸ್ಥೆಗಳು ಇವೆಲ್ಲವು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸದೆ ಹೋದರೆ, ನುಂಗಲು ಕಾದು ಕುಳಿತಿರುವ ಪ್ರಭುತ್ವಕ್ಕೆ ಆಹಾರವಾದಂತೆ. ಈ ಸದ್ಯದ ಒಗ್ಗಟ್ಟಿನ ಕಾರಣದಿಂದಲೇ, ಸರ್ಕಾರ ಏನೆಲ್ಲಾ ಮಾಡಿದರೂ ಇಲ್ಲಿಯತನಕ ಹೋರಾಟವನ್ನು ಹತ್ತಿಕ್ಕಲು ಆಗಿಲ್ಲ.

- Advertisement -
- Advertisement -

ಕೋವಿಡ್ ಸಾಂಕ್ರಾಮಿಕ ಭಾರತಕ್ಕೆ ಕಾಲಿಟ್ಟಾಗಿನಿಂದಲೂ ಈ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆದುಹೋದವು. ಸರ್ಕಾರದ ದುರಾಡಳಿತದಿಂದ ನಮ್ಮ ಜೀವನ ಎಷ್ಟು ಅಲ್ಲೋಲ-ಕಲ್ಲೋಲವಾಗಿದೆ ಎಂದರೆ, ಎರಡು ತಿಂಗಳ ಹಿಂದೆ ಏನಾಯಿತು ಎಂದೇ ಮರೆತು ಹೋಗುತ್ತೇವೆ. ಅಷ್ಟು ಹೊಸ ಹೊಸ ಪ್ರಭುತ್ವ ನಿರ್ಮಿತ ಕ್ಷೆಭೆಗಳು ಹುಟ್ಟಿಕೊಳ್ಳುತ್ತಿವೆ.

ದಿಲ್ಲಿಯ ಗಡಿಗಳಲ್ಲಿ ಹಾಗು ದೇಶಾದ್ಯಂತ ನಡೆಯುತ್ತಿರುವ ಹೋರಾಟದ ಈ ಸಮಯದಲ್ಲಿ, ಸ್ವಲ್ಪ ರಿವೈಂಡ್ ಮಾಡಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿಗೆ ಹೋಗೋಣ. ಸೆಪ್ಟೆಂಬರ್ ಕೊನೆಯವಾರದಲ್ಲಿ “ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ-ದಮನಿತ ವಿರೋಧಿ ನೀತಿಗಳನ್ನು ಖಂಡಿಸಿ – ಕರ್ನಾಟಕ ಬಂದ್ ಎಂದು ಘೋಷಿಸಲಾಯಿತು. ’ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ’ದ ಕರಪತ್ರ ಇದಾಗಿತ್ತು. ಸೆಪ್ಟೆಂಬರ್ 28ರಂದು ಬೆಂಗಳೂರಿನ ಪುರಭವನದ ಮೆಟ್ಟಿಲೆದುರು ಜನಸಾಮಾನ್ಯರ ಸಾಗರವೆ ಸೇರಿತ್ತು. ಸಾವಿರ ನದಿಗಳು ಸೇರಿ ಆಗುವ ಸಾಗರದಂತೆ ಇಲ್ಲಿ ಸಹ ಕಾರ್ಮಿಕ ಹೋರಾಟದ ಕೆಂಪು ಬಾವುಟ, ದಲಿತ ಹೋರಾಟದ ಅಸ್ಮಿತೆ ನೀಲಿ ಬಾವುಟ, ರೈತರ ಹಸಿರು ಬಾವುಟ, ಕನ್ನಡ ಪರ ಸಂಘಟನೆಗಳು ತಂದ ಕರ್ನಾಟಕದ ಅರಿಶಿಣ-ಕೆಂಪು ಬಾವುಟ, ಮುಸ್ಲಿಂ ಸಂಘಟನೆಗಳು ಹಾಗು ಇನ್ನು ಹಲವಾರು ಜನ ತಂದಿದ್ದ ಭಾರತದ ತ್ರಿವರ್ಣಧ್ವಜ – ಇವೆಲ್ಲವೂ ಸೇರಿ ಸೃಷ್ಟಿಯಾಗಿತ್ತು ಆ ಸಾಗರ.

ಈ ರೀತಿ ಅನೇಕ ಸಂಘಟನೆಗಳು ಒಂದಾಗಿ ಸೇರಿದ್ದು ಐತಿಹಾಸಿಕ ಹಾಗು ಆಶಾದಾಯಕ ಬೆಳವಣಿಗೆ. ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದ ಈ ಐಕ್ಯ ಆಂದೋಲನ, ಈಗಲು ಸಹ ಗಟ್ಟಿಯಾಗಿ ಮುಂದುವರೆದಿದೆ. ಕಳೆದ ಎರಡು ತಿಂಗಳುಗಳಲ್ಲಿ ವಿದ್ಯಾರ್ಥಿ-ಯುವಜನ ಹಾಗು ಮಹಿಳಾ ಸಂಘಟನೆಗಳು ಸಹ ಕೈ ಜೋಡಿಸಿದ್ದಾರೆ. ಇದು ಇಲ್ಲಿ ಮಾತ್ರವಲ್ಲು, ಭಾರತಾದ್ಯಂತ ನಡೆಯುತ್ತಿದೆ. ದಿಲ್ಲಿಯ ಗಡಿಭಾಗಗಳ ಹೋರಾಟದಲ್ಲಿ ರೈತ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು, ಸಿಖ್ ಸಾಂಸ್ಕೃತಿಕ ಹಾಗು ಧಾರ್ಮಿಕ ಸಂಘಟನೆಗಳು, ದಲಿತ ಕೃಷಿ ಕಾರ್ಮಿಕರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಹರಿಯಾಣದ ಜಾಟ್ ಸಮುದಾಯದ ನೇತೃತ್ವದ ’ಸರ್ವ್ ಖಾಪ್ ಇವರೆಲ್ಲರೂ ಸೇರಿ ಹೋರಾಟವನ್ನು ಯಶಸ್ವಿ ಮಾಡಿದ್ದಾರೆ.

ಲಾಂಛನ, ಬ್ಯಾನರ್‌ಗಳನ್ನು ಒಂದು ಮಟ್ಟಕ್ಕೆ ಪಕ್ಕಕ್ಕಿಟ್ಟು ಒಟ್ಟಿಗೆ ಬಂದಿರುವ ಶಕ್ತಿಗಳು ಮುಂದಿನ ಹೋರಾಟದ ಸ್ವರೂಪವನ್ನು ಕಟ್ಟಿಕೊಡುತ್ತಿವೆ. ಈ ನಿಟ್ಟಿನಲ್ಲಿ ಸದ್ಯದ ಕೃಷಿ ಕಾಯ್ದೆಗಳ ಅಪಾಯವನ್ನು ಅರಿತು, ಅವುಗಳ ವಿರುದ್ಧದ ಐಕ್ಯ ಹೋರಾಟಕ್ಕೆ ಯಶಸ್ಸು ಸಿಗುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.

ಮೊದಲನೆಯದಾಗಿ, ಈ ಕಾನೂನುಗಳು ಕೇವಲ ಕೃಷಿಯ ಮೇಲಷ್ಟೇ ಪರಿಣಾಮ ಉಂಟು ಮಾಡುವುದಿಲ್ಲ. ಕರ್ನಾಟಕದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರು ಹಾಗು ಕೃಷಿ ಆರ್ಥಿಕ ತಜ್ಞರಾದ ಪ್ರಕಾಶ್ ಕಮ್ಮರಡಿ ಅವರು ಹೇಳುವಂತೆ, ನಮ್ಮ ಮುಂದೆ ಇರುವ ಸವಾಲು ಕೇವಲ ಕೃಷಿಯದ್ದಲ್ಲ ಬದಲಿಗೆ, ಭೂ ಸಂಬಂಧಿತ ವಿಚಾರಗಳದ್ದು (ಅಗ್ರೇರಿಯನ್ ರೆಲೇಷನ್ಶಿಪ್). ಕರ್ನಾಟಕ ತಂದ ಭೂಸುಧಾರಣೆ ಕಾಯ್ದೆ ಹಾಗು ಎಪಿಎಂಸಿ ಕಾಯ್ದೆ ತಿದ್ದುಪಡಿಗಳಿಂದ ಯಾರು ಕೃಷಿ ಮಾಡುವುದು, ಭೂಮಿಯ ಒಡೆತನ ಯಾರದ್ದು, ಭೂಮೆ ಯಾರಿಗೆ ಹಂಚಲಾಗುವುದು ಇವೆಲ್ಲದರ ಮೇಲೆ ಪರಿಣಾಮವಾಗಲಿದೆ.

ಹಾಗಾಗಿ ಇದರ ಬಗ್ಗೆ ಗಮನ ಕೊಡಬೇಕಾದದ್ದು ಕೇವಲ ರೈತರಿಗೆ ಮಾತ್ರ ಸಂಬಂಧಿಸಿದ್ದಲ್ಲ ಬದಲಿಗೆ ರೈತ ಕಾರ್ಮಿಕರು, ದಲಿತರು, ಭೂ ಹೀನರು ಎಲ್ಲರೂ ಧ್ವನಿ ಎತ್ತಬೇಕಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗು ಕೈಗಾರಿಕ (ಸೌಲಭ್ಯ) ತಿದ್ದುಪಡಿಯಿಂದ ಇನ್ನುಮುಂದೆ ಕೃಷಿ ಭೂಮಿಯಲ್ಲಿ ಯಾವುದೇ ಕನ್ವರ್ಷನ್ ಇಲ್ಲದೆ, ಯಾವುದೇ ಮಂಜೂರಾತಿಯ ಅವಶ್ಯಕತೆ ಇಲ್ಲದೆ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಕೃಷಿ ಭೂಮಿಯಲ್ಲಿ ಸಹ ರಿಯಲ್ ಎಸ್ಟೇಟ್ ವ್ಯಾಪಾರ ಶುರುವಾಗಲಿದೆ. ಇವೆಲ್ಲ ನಡೆಯುತ್ತಿರುವಾಗ, ಈ ವಿಷಯದ ಬಗ್ಗೆ ಕೇವಲ ರೈತ ಸಂಘಟನೆಗಳಲ್ಲ, ಗ್ರಾಮೀಣ ಕರ್ನಾಟಕದ ಬಗ್ಗೆ, ಭೂ ಹೀನರ ಬಗ್ಗೆ, ಕಾರ್ಮಿಕರ ಬಗ್ಗೆ ಚಿಂತನೆ ಇರುವ ಎಲ್ಲರು ಹೋರಾಡಬೇಕಾಗಿದೆ.

ಎರಡನೆಯದಾಗಿ, ಭಾರತದಲ್ಲಿ ಇಂದು ನಮ್ಮ ಗಮನ ಕರಾಳ ಕೃಷಿ ಕಾಯಿದೆಗಳ ಕಡೆಗಿದೆ. ಈ ಕರಾಳ ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದರೆ, ರಾಜ್ಯ ಸರ್ಕಾರಗಳು, ಕಾರ್ಮಿಕರು ಹಲವು ದಶಕಗಳ ಹೋರಾಟದಿಂದ ಪಡೆದ, ತಮಗೆ ಹಕ್ಕುಗಳನ್ನು ನೀಡುವ ಕಾನೂನುಗಳನ್ನು ಸಡಿಲಗೊಳಿಸಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಂದಿದೆ. ಪಂಜಾಬ್‌ನ ಮಜ್ಧೂರ್ ಅಧಿಕಾರ್ ಸಂಘಟನ್‌ನ ಸದಸ್ಯೆ ಹಾಗು ದಲಿತ-ಕಾರ್ಮಿಕ ಹೋರಾಟಗಾರ್ತಿ ನೌದೀಪ್ ಕೌರ್ ಇದರ ಬಗ್ಗೆ ಮಾತನಾಡುತ್ತಾ, ರೈತರ-ಕಾರ್ಮಿಕರ ಮಧ್ಯ ಅನ್ಯೋನ್ಯವಾದ ಸಂಬಂಧವಿದೆ. ಇವರಿಬ್ಬರು ಉತ್ಪಾದಕರು- ಒಬ್ಬರು ಹೊಲದಲ್ಲಿ ಉತ್ಪಾದನೆ ಮಾಡುತ್ತಾರೆ, ಇನ್ನೂಬ್ಬರು ಕಾರ್ಖಾನೆಯಲ್ಲಿ. ಇಂದು ಸರ್ಕಾರ ಇಬ್ಬರನ್ನೂ ಮಾರಲು ಹೊರಟಿದೆ.

ಕೃಷಿ ಕಾಯಿದೆಗಳು ತಂದಹಾಗೆ ಕಾರ್ಮಿಕ ವಿರೋಧಿ ಕಾನೂನುಗಳು ಸಹ ತಂದಿದ್ದಾರೆ. ನಾವು ಎರಡನ್ನು ವಿರೋಧಿಸಬೇಕು. ಕಾರ್ಮಿಕರು ರೈತರೊಂದಿಗೆ ನಿಲ್ಲಬೇಕು. ಈ ಕೃಷಿ ಕಾನೂನುಗಳನ್ನು ಹಿಂಪಡೆಯದಿದ್ದರೆ ಕಾರ್ಮಿಕರು, ಕಾರ್ಖಾನೆಗಳಿಗೆ ಬೀಗ ಹಾಕಿ ಅವರು ಸಹ ಬೀದಿಗೆ ಇಳಿಯಬೇಕು ಎಂದರು. ಓರ್ವ ದಲಿತ-ಕಾರ್ಮಿಕ ಹೋರಾಟಗಾರ್ತಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತರಲು ಹೊರಟಿರುವುದನ್ನು ಕಂಡು ಭಯಪಟ್ಟ ಆಡಳಿತ ವ್ಯವಸ್ಥೆ ಆಕೆಯನ್ನು ಬಂಧಿಸಿದ್ದು ಇನ್ನೂ ಸಹ ಬಿಡುಗಡೆ ಮಾಡಿಲ್ಲ. ನೌದೀಪ್ ಕೌರ್ ಅವರ ಮಾತಿನ ಕಡೆಗೆ ಗಮನ ಹರಿಸಿ ಅವರ ಬಿಡುಗಡೆಗೆ ಹೋರಾಡಬೇಕಾದ ಸಂದರ್ಭ ಬಂದಿದೆ.

ಸರ್ಕಾರ ಏಕೆ ಕೃಷಿ ಕಾನೂನುಗಳನ್ನು ಹಾಗು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿತು? ಏಕೆಂದರೆ, ಸಣ್ಣ ರೈತ ಆಧರಿತ ಕೃಷಿಯನ್ನು ಕಾರ್ಪೊರೆಟೀಕರಣ ಮಾಡಿದಾಗ, ಅನೇಕ ರೈತರು ತಮ್ಮ ಜೀವನೋಪಾಯ ಕಳೆದುಕೊಂಡು ನಗರಗಳಿಗೆ ವಲಸೆ ಹೋಗುತ್ತಾರೆ. ಲೇಬರ್ ಸರ್ಪ್ಲಸ್ ಆಗುತ್ತದೆ. ನಗರದಲ್ಲಿ ವೇತನಗಳು ಇನ್ನೂ ಕಡಿಮೆ ಆಗುತ್ತವೆ. ಆದರೆ ಕನಿಷ್ಟ ವೇತನ ಕಾಯ್ದೆಯಿಂದ, ಕನಿಷ್ಠ ವೇತನ ಕೊಡಲೇಬೇಕಾಗುತ್ತಿತ್ತು. ಈಗ ಅದನ್ನೆ ಕಿತ್ತುಹಾಕಿದ್ದಾರೆ, ಅಂದಮೇಲೆ, ನಗರಗಳಿಗೆ ಉಕ್ಕಿ ಹರಿಯುವ ಕಾರ್ಮಿಕರನ್ನು ಇನ್ನು ಕಡಿಮೆ ವೇತನಕ್ಕೆ ಕೆಲಸ ಮಾಡಿಸಿಕೊಳ್ಳಬಹುದು. ಹಾಗು ಒಮ್ಮೆಯೆ ಅಷ್ಟು ಜನಕ್ಕೆ ಕಾಯಂ ನೌಕರಿ ಏಕೆ ಕೊಡತ್ತಾರೆ? ಅದಕ್ಕೆ ಕಾಯಂ ನೌಕರಿ ಬದಲು ಗುತ್ತಿಗೆ ತರಹದ ’ಫಿಕ್ಸೆಡ್ ಟರ್ಮ್ ಎಂಪ್ಲಾಯ್ಮೆಂಟ್ ಕಾನೂನು ತಂದರು. ಹಾಗಾಗಿ ಕಾರ್ಮಿಕ ಕಾನೂನು ತಿದ್ದುಪಡಿಗೂ, ಕೃಷಿ ಕಾನೂನುಗಳಿಗೂ ಘೋರ ಸಂಬಂಧವಿದೆ. ಹೀಗಿರಬೇಕಾದರೆ, ಈ ಕಾನೂನುಗಳನ್ನು ಕಾರ್ಮಿಕರು, ರೈತರು ಇಬ್ಬರು ಒಟ್ಟಿಗೆ ವಿರೋಧಿಸಬೇಕಲ್ಲವೆ?

ಮೂರನೆಯದಾಗಿ, ಈ ಕಾನೂನುಗಳು ಕೇವಲ ಕೃಷಿ ಮೇಲೆ ಪರಿಣಾಮ ಬೀರುವುದಿಲ್ಲ ಬದಲಿಗೆ ಇಡೀ ಆಹಾರದ ವ್ಯವಸ್ಥೆಯನ್ನೇ ಬದಲಾಯಿಸಲಿದೆ. ಬೆಂಗಳೂರಿನ ಯುವ ವಕೀಲರೊಬ್ಬರು ಹೇಳಿದಂತೆ “ಆಲ್ ದೋಸ್ ವೂ ಈಟ್ ಮಸ್ಟ್ ಸ್ಪೀಕ್ ಅಂತ, ಇದು ನಿಜವಾದ ಮಾತು. ಭಾರತದಲ್ಲಿ ಇಂದು ಬಡವರು ಒಂದಿಷ್ಟು ಮಟ್ಟಿಗೆ ಬದುಕಿರುವುದು ನಮ್ಮ ಪಡಿತರ ಚೀಟಿ ವ್ಯವಸ್ಥೆ ನೀಡುವ ಆಹಾರದಿಂದ. ಕೇಂದ್ರ ಸರ್ಕಾರ ತಂದಿರುವ ಅಗತ್ಯ ಸರಕು ಕಾಯ್ದೆಯ ತಿದ್ದುಪಡಿ ಹಾಗು ಕೃಷಿ ಮಾರುಕಟ್ಟೆಗಳ ಕಾಯ್ದೆಗಳಿಂದ ಪಡಿತರ ಚೀಟಿಯ ವ್ಯವಸ್ಥೆಯ ಉಳಿಯುವಿಕೆಯ ಬಗ್ಗೆಯೇ ಪ್ರಶ್ನೆ ಎದ್ದಿದೆ. ಇಂದು ಇರುವ ವ್ಯವಸ್ಥೆ ಏನೆಂದರೆ ಸರ್ಕಾರ ಮಂಡಿಗಳ ಮೂಲಕ ರೈತರಿಗೆ ಎಂಎಸ್‌ಪಿ ನೀಡಿ ಭತ್ತ, ಗೋಧಿಯನ್ನು ಖರೀದಿಸಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ನೀಡುತ್ತದೆ. ಈ ಸಂಸ್ಥೆಯು ಇದನ್ನು ರಾಜ್ಯ ಸರ್ಕಾರಗಳ ಮೂಲಕ ಪಡಿತರ ಚೀಟಿ ಅಂಗಡಿಗಳಿಗೆ ಸರಬರಾಜು ಮಾಡಬೇಕಾಗಿದೆ.

ಈಗ ಮಂಡಿಗಳೆ ಉಳಿಯದಿದ್ದರೆ, ಸರ್ಕಾರದ ಖರೀದಿ ಆಗುತ್ತ ಎನ್ನುವ ಪ್ರಶ್ನೆ ಇದೆ. ಎರಡನೆಯದಾಗಿ ಎಫ್‌ಸಿಐನ ಖಾಸಗೀಕರಣ ಶುರುವಾಗಿ, ಧಾನ್ಯಗಳ ಸಂಗ್ರಹಣೆಯನ್ನು ಅದಾನಿ ಕಂಪನಿಗೆ ಕೊಡಲಾಗಿದೆ. ಅವರು ಕೋಟ್ಯಂತರ ಟನ್ ಧಾನ್ಯಗಳನ್ನು ಸಂಗ್ರಹಿಸಲು ಸಿಲೋಸ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಗ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮಾಡಿ, ಧಾನ್ಯಗಳ ಸಂಗ್ರಹಣೆಯ ನಿಯಂತ್ರಣಕ್ಕೆ ಕೊನೆ ಹಾಡಿ, ಧಾನ್ಯಗಳ ವ್ಯಾಪಾರ ಖಾಸಗೀಕರಣವಾಗುವ ಸಂಭವವಿದೆ. ಕೆಲವು ವರ್ಷಗಳ ಹಿಂದೆ ಇದೇ ಒತ್ತಾಯವನ್ನು (ಎಫ್‌ಸಿಐಅನ್ನು ಖಾಸಗೀಕರಣಗೊಳಿಸುವುದು) ಸರ್ಕಾರದ ಶಾಂತಕುಮಾರ್ ಸಮಿತಿ ಮುಂದೆ ಮಾಡಲಾಗಿತ್ತು. ಹಾಗಾಗಿ ಪಡಿತರ ಚೀಟಿಯ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಈ ಕಾನೂನುಗಳನ್ನು ಎಲ್ಲರು ಸೇರಿ ವಿರೋಧಿಸಬೇಕಾಗಿದೆಯಲ್ಲವೆ? ಹಾಗಂತ ಇದು ಕೇವಲ ಬಡವರ ಹೋರಾಟ ಅಲ್ಲ. ಕೃಷಿ ಕಾರ್ಪೊರೆಟೀಕರಣವಾದ ನಂತರ, ಬಂಡವಾಳಶಾಹಿಗಳು ತಮಗೆ ಅತಿ ಹೆಚ್ಚು ಲಾಭವಾಗುವುದನ್ನು ಮಾತ್ರ ನೋಡುತ್ತಾರೆ. ಹಾಗಾಗಿ ಹೆಚ್ಚು ಬೆಲೆ ಇರುವ ಎಕ್ಸ್ಪೋರ್ಟ್ ಮಾರುಕಟ್ಟೆಗೆ ಬೇಕಾಗಿರುವ ಬೆಳೆಯನ್ನೆ ಬೆಳೆಸುವ ಸಾಧ್ಯತೆಗಳು ಹೆಚ್ಚು. ನಮಗೆ ಅಗತ್ಯವಿರುವ ರಾಗಿಯಿಂದ ಹಿಡಿದು ನಾಟಿ ಕೊತ್ತಂಬರಿ, ಮೂಲಂಗಿ ಇತ್ಯಾದಿ ತರಕಾರಿ ಬೆಳೆಗಳೆಲ್ಲಾ ಇದರಿಂದ ಅಪಾಯದಂಚಿಗೆ ಹೋಗಬಹುದು.

ಜೊತೆಗೆ ಪಶ್ಚಿಮ ದೇಶಗಳಲ್ಲಿ ಆದಂತೆ ಕಾರ್ಪೊರೇಟ್ ಕೃಷಿ ಬಂದಾಗ ಹೆಚ್ಚಿನ ರಾಸಾಯನಿಕ ಗೊಬ್ಬರ ಮತ್ತಿತರೆ ಅನೈಸರ್ಗಿಕ ವಸ್ತಗಳ ಬಳಕೆ ವಿಪರೀತ ಹೆಚ್ಚಳಗೊಳ್ಳಬಹುದು. ನಮ್ಮ ಆಹಾರದಲ್ಲಿ ವಿಷವೇ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ಎಲ್ಲರೂ ಸೇರಿ ವಿರೋಧಿಸುವ ಅಗತ್ಯವಿದೆಯಲ್ಲವೇ? (ಹಾಗಾಗಿ ನಗರದ ಹೆಚ್ಚು ಜನ ಈ ಹೋರಾಟದೊಂದಿಗೆ ಇರಬೇಕಾಗಿತ್ತಲ್ಲವೇ? ಏಕೆ ಇಲ್ಲ? ಏಕೆಂದರೆ ಹೋರಾಡುತ್ತಿರುವ ನಾವು ಅವರಿಗೆ ವಿಷಯ ತಲುಪಿಸಲು ಪರಿಣಾಮಕಾರಿಯಾಗಿ ಪ್ರಯತ್ನಿಸಿಲ್ಲ. ಮುಖ್ಯವಾಹಿನಿಯ ಮಾಧ್ಯಮಗಳ ಮೂಲಕ ಅವರಿಗೆ ಈ ವಿಷಯಗಳು ತಿಳಿಯುವುದಿಲ್ಲ. ಅವರೊಂದಿಗೆ ಚರ್ಚೆ ಸಂವಾದವನ್ನು ನಾವು ಕೂಡಲೆ ಮಾಡಬೇಕಿದೆ).

ಎಲ್ಲದಕ್ಕೂ ಮುಖ್ಯವಾಗಿ, ಈ ಕರಾಳ ಕಾನೂನುಗಳನ್ನು ತರುತ್ತಿರುವುದು ಒಂದು ಸರ್ವಾಧಿಕಾರಿ ಧೋರಣೆಯ ಅಥವಾ ನಿರಂಕುಶ ಅಧಿಕಾರದ ಸರ್ಕಾರ. ಇಂದು ಮುಖ್ಯವಾಹಿನಿಯಲ್ಲಿರುವ ಹಲವು ಮಾಧ್ಯಮಗಳು, ಹಲವು ನಾಯಾಲಯಗಳು, ಕೇಂದ್ರೀಯ ತನಿಖಾ ಸಂಸ್ಥೆಗಳು ಇವೆಲ್ಲವು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸದೆ ಹೋದರೆ, ನುಂಗಲು ಕಾದು ಕುಳಿತಿರುವ ಪ್ರಭುತ್ವಕ್ಕೆ ಆಹಾರವಾದಂತೆ. ಈ ಸದ್ಯದ ಒಗ್ಗಟ್ಟಿನ ಕಾರಣದಿಂದಲೇ, ಸರ್ಕಾರ ಏನೆಲ್ಲಾ ಮಾಡಿದರೂ ಇಲ್ಲಿಯತನಕ ಹೋರಾಟವನ್ನು ಹತ್ತಿಕ್ಕಲು ಆಗಿಲ್ಲ. ಹೋರಾಟಗಾರರನ್ನು ಭಯೋತ್ಪಾದಕರೆಂದು ಕರೆದರು, ಗಣರಾಜ್ಯೋತ್ಸವದಂದು ಹಾಗು ಅದರ ನಂತರ ಗಲಭೆಗಳನ್ನು ಸೃಷ್ಟಿ ಮಾಡಲು ಪ್ರಯತ್ನಿಸಿದರು. ಆದರೂ ಸಹ, ಪ್ರಭುತ್ವದ ಯಾವ ಹುನ್ನಾರಗಳೂ ಯಶಸ್ವಿಯಾಗಿಲ್ಲ. ಇದು ಏಕೆಂದರೆ ಇಂದು ಅನೇಕ ಸಂಘಟನೆಗಳ, ಮನಸ್ಸುಗಳ, ಜಾತಿಗಳ, ಸಮುದಾಯಗಳ ಬಾವುಟಗಳು ಒಟ್ಟಿಗೆ ನಿಂತಿವೆ. ಈ ಒಗ್ಗಟ್ಟೇ ನಮ್ಮ ಕವಚ.

ಹಾಗಾಗಿ ಈಗಾಗಲೆ ಸೇರಿರುವ ಸಂಘಟನೆಗಳು ಮತ್ತು ಶಕ್ತಿಗಳು ಐಕ್ಯತೆಯನ್ನು ಮುಂದುವರಿಸಬೇಕಾಗಿದೆ. ಜೊತೆಗೆ ಈಗ ಹೋರಾಟಕ್ಕೆ ಇನ್ನೂ ಸೇರದಿರುವ ಉಳಿದ ದಮನಿತ ಸಮುದಾಯಗಳನ್ನು ಸಹ ಸೇರಿಸಿಕೊಳ್ಳಬೇಕಿದೆ.

ಈ ಹೋರಾಟಕ್ಕೆ ಇನ್ನೂ ಯಾರ್‍ಯಾರು ಸೇರಿಕೊಳ್ಳಬೇಕಿದೆ?

ಪ್ರಜಾವಾಣಿಯಲ್ಲಿ ವರದಿಯಾಗಿರುವಂತೆ, ಕೃಷಿ ಕಾನೂನುಗಳಿಂದ ಈಗಾಗಲೆ ಎಪಿಎಂಸಿಗಳಲ್ಲಿ ಸೆಸ್ ಕಡಿಮೆಯಾಗಿದೆ. ಮಂಡಿಗಳು ಮುಚ್ಚಿಹೋಗುವ ಸಂಭವವಿದೆ. ಅಂದರೆ ಸರ್ಕಾರ ತನ್ನ ಪಾತ್ರವನ್ನು ಕಡಿಮೆ ಮಾಡಿಕೊಂಡು, ಕಾರ್ಪೊರೆಟ್‌ಗಳಿಗೆ ಹೆಚ್ಚಿನ ಮಹತ್ವ ಒದಗಿಸಲು ಪ್ರಯತ್ನಿಸುತ್ತಿದೆ. ಇದರಿಂದ ಹಾನಿಗೊಳಗಾಗುವುದು ಸಣ್ಣ ರೈತರು ಮಾತ್ರವಲ್ಲ ಬದಲಿಗೆ ಸಣ್ಣ ವ್ಯಾಪಾರಸ್ಥರು ಹಾಗು ಬೀದಿ ವ್ಯಾಪಾರಿಗಳು ಕೂಡ. ಹೊಸ ಕೃಷಿ ಕಾಯಿದೆ ಬಂದನಂತರ ಸಿಂಧನೂರ್‌ನಲ್ಲಿ ರಿಲಾಯೆನ್ಸ್ ಕಂಪನಿ ಸಾವಿರ ಟನ್ ಭತ್ತವನ್ನು, ಎಂಎಸ್‌ಪಿಗಿಂತ ಸ್ವಲ್ಪವೇ ಹೆಚ್ಚಿನ ಬೆಲೆಗೆ ಖರೀದಿಸಿದ್ದು ವರದಿಯಾಯಿತು. ಬರುವ ದಿನಗಳಲ್ಲಿ ರಿಲಾಯನ್ಸ್ ತರಹದ ದೊಡ್ಡ ಕಂಪನಿಗಳು ಮಾರುಕಟ್ಟೆಗೆ ಬಂದರೆ ಸಣ್ಣ ವ್ಯಾಪಾರಿಗಳು ಯಾರು ಉಳಿಯುತ್ತಾರೆ? ಮಂಡಿಗಳು ಮುಚ್ಚಿಹೋದರೆ, ಬೀದಿ ವ್ಯಾಪಾರಿಗಳು ಯಾರ ಬಳಿ ಸರಕನ್ನು ಪಡೆಯುತ್ತಾರೆ.

ರೈತರು,ಟೋಲ್‌ಪ್ಲಾಝಾಗಳನ್ನು
PC: Dinalipi

ಗುತ್ತಿಗೆ ಕೃಷಿ ಮೂಲಕ ರೈತರಿಂದ ಸರಕನ್ನು ಕೊಂಡರೆ, ಅದನ್ನು ಕೆ.ಆರ್.ಮಾರುಕಟ್ಟೆಯ ಹೋಲ್‌ಸೇಲ್‌ಗಳಿಗೋ ಅಥವ ಬೀದಿ ವ್ಯಾಪಾರಿಗಳಿಗೆ ಮಾರುತ್ತಾರೆಯೆ? ಆಗ ನಷ್ಟ ಯಾರಿಗೆ? ಹಾಗಾಗಿ ಈ ಒಂದು ಹೋರಾಟವನ್ನು ಸಣ್ಣ ಮತ್ತು ಮಧ್ಯಮ ಸ್ವತಂತ್ರ ವ್ಯಾಪಾರಿಗಳೆಲ್ಲರೂ ಸಹ ಬೆಂಬಲಿಸಬೇಕಾಗಿದೆ. ಇದೇ ರೀತಿ ಸಮಾಜದ ಇನ್ನು ಹಲವು ವಲಯಗಳನ್ನು ಹೋರಾಟಕ್ಕೆ ಆಹ್ವಾನಿಸಬೇಕಾಗಿದೆ.

ಒಟ್ಟಾರೆ ಹೇಳುವುದಾದರೆ, ಸಾವಿರಾರು ವರ್ಷಗಳಿಂದ ಬಂದಿರುವ ಈ ನೆಲದ ಸಣ್ಣ ರೈತ ಆಧಾರಿತ ಕೃಷಿ ವ್ಯವಸ್ಥೆ ಇಂದು ನಮ್ಮ ಕಣ್ಣು ಮುಂದೆ ನಾಶವಾಗುವ ಸಾಧ್ಯತೆ ಇದೆ. ನಮ್ಮ ಇಡೀ ಗ್ರಾಮೀಣ ಆರ್ಥಿಕತೆಯೆ ನಾಶವಾಗಿ ರೈತರೆಲ್ಲರೂ ಕಾರ್ಪೊರೆಟ್ ಗುಲಾಮರಾಗುವ ಸಂಭವವಿದೆ. ನ್ಯಾಯವಾದಿ ನಾಗಮೋಹನ್ ದಾಸ್ ಅವರು ಹೇಳುವಂತೆ, ರೈತರೆ ಇಲ್ಲವಾದ ಮೇಲೆ, ರೈತ ಸಂಘಟನೆ ಎಲ್ಲಿರುತ್ತದೆ, ಹಳ್ಳಿಗಳು ಏಕೆ ಬೇಕಾಗುತ್ತದೆ? ಕೇವಲ ಕಾರ್ಮಿಕರ ಕಾಲೋನಿಗಳಿರುತ್ತವೆ. ಭಾರತದ ಹಳ್ಳಿಗಳನ್ನ ಲೇಬರ್ ಕ್ಯಾಂಪ್ ಮಾಡಿ, ನಮ್ಮ ಆಹಾರದ ವ್ಯವಸ್ಥೆಯನ್ನು ನಿಷ್ಠಾವಂತ, ಸ್ವಾಭಿಮಾನಿ ರೈತರಿಂದ ಲಾಭಕೋರರ ಕೈಯಿಗೆ ಕೊಡುವ ಈ ಹುನ್ನಾರವನ್ನು ಒಟ್ಟಿಗೆ ಎದುರಿಸಬೇಕಾಗಿದೆ. ನಮ್ಮ ಐಕ್ಯ ಹೋರಾಟಗಳು ಸರಕಾರವನ್ನು ಹೆದರಿಸಿದೆ. ಅವರು ಹಿಂದೇಟು ಹಾಕಿದ್ದಾರೆ. ಆದರೆ ಹೋರಾಟ ಇನ್ನು ಮುಗಿದಿಲ್ಲ. ಗೆಲ್ಲಲು ಈ ಐಕ್ಯತೆಯನ್ನು ಕಾಪಾಡಿ, ನಮ್ಮ ಹೋರಾಟವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ.

ದೇವನೂರ ಮಹಾದೇವ ಅವರು ಹೇಳಿದ ಹಾಗೆ, ಕರ್ನಾಟಕದಲ್ಲಿ ಈಗ ಸಂಘಟನೆಗಳು ಒಟ್ಟಾಗಿ ಸೇರಿವೆ, ಈಗ ಸಮುದಾಯಗಳನ್ನು ಒಟ್ಟಿಗೆ ಸೇರುವಂತೆ ನೊಡಿಕೊಳ್ಳಬೇಕು.

ವಿನಯ್ ಕೂರಗಾಯಲ ಶ್ರೀನಿವಾಸ

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಟೋಲ್ ಪ್ಲಾಜಾ ಮುತ್ತಿಗೆ, ದೇಶಾದ್ಯಂತ ರೈಲು ತಡೆ ಹೋರಾಟಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...