Homeಮುಖಪುಟರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ: ಗೆಲುವು ಸುಲಭವೇ? ಇಲ್ಲಿದೆ ಲೆಕ್ಕಾಚಾರ

ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ: ಗೆಲುವು ಸುಲಭವೇ? ಇಲ್ಲಿದೆ ಲೆಕ್ಕಾಚಾರ

- Advertisement -
- Advertisement -

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಮುಂದಿನ ರಾಮನಗರದ ಜೆಡಿಎಸ್ ಅಭ್ಯರ್ಥಿ ಎಂದು ಅವರ ತಾಯಿ, ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ. ರಾಮನಗರದ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದ್ದು, ಆ ಜವಾಬ್ದಾರಿ ಹೊರಲು ಸಿದ್ದ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಹಾಗಿದ್ದರೆ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧ್ಯವೇ? ಕ್ಷೇತ್ರದ ಪರಿಸ್ಥಿತಿ ಏನಿದೆ? ಜಾತಿವಾರು ಮತಗಳೆಷ್ಟು? ರಾಜಕೀಯ ಇತಿಹಾಸವೇನು ಎಂಬುದನ್ನು ನೋಡೋಣ.

ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದವರು ಸಿಎಂ ಆಗುತ್ತಾರೆ ಎಂಬ ಮಾತು ಮತ್ತು ಇಲ್ಲಿಂದ ಗೆದ್ದು ಸಿಎಂ ಆದವರು ಪೂರ್ಣಾವಧಿ ಪೂರೈಸುವ ಮೊದಲೇ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯೂ ಜನರಲ್ಲಿತ್ತು. ನಾಲ್ವರು ಸಿಎಂಗಳು ಐದು ಬಾರಿ ಅಧಿಕಾರ ನಡೆಸಲು ಸಹಕರಿಸಿರುವ ಜಿಲ್ಲೆಯಿದು. ಕೆಂಗಲ್ ಹನುಮಂತಯ್ಯ, ಎಚ್.ಡಿ. ದೇವೇಗೌಡರು ರಾಮನಗರದಿಂದ ಆಯ್ಕೆಯಾಗಿ ತಲಾ ಒಮ್ಮೊಮ್ಮೆ ಸಿಎಂ ಆದರೆ, ಎಚ್.ಡಿ. ಕುಮಾರಸ್ವಾಮಿಯವರು ಇಲ್ಲಿಂದ ಗೆದ್ದು ಎರಡು ಬಾರಿ ಸಿಎಂ ಆಗಿದ್ದಾರೆ. ರಾಮಕೃಷ್ಣ ಹೆಗಡೆಯವರು ಕೂಡ 1983ರಲ್ಲಿ ಸಿಎಂ ಆದ ನಂತರ ಕನಕಪುರ ಉಪಚುನಾವಣೆಯಲ್ಲಿ ಗೆದ್ದು ವಿಧಾನಸಭಾ ಸದಸ್ಯರಾಗಿದ್ದರು. ಈ ಎಲ್ಲ ಕಾರಣಗಳಿಂದ ರಾಮನಗರ ರಾಜಕೀಯ ಪಕ್ಷಗಳಿಗೆ-ನಾಯಕರಿಗೆ ಜಿದ್ದಾಜಿದ್ದಿನ ಜಿಲ್ಲೆ.

ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ದಲಿತರು ಮತ್ತು ಮುಸ್ಲಿಮರು ಸಹ ಗಣನೀಯ ಸಂಖ್ಯೆಯಲ್ಲಿದ್ದು, ಪ್ರತಿ ಬಾರಿಯೂ ಒಕ್ಕಲಿಗರೆ ನಿರ್ಣಾಯಕ ಮತದಾರರಾಗಿದ್ದಾರೆ. 2007ರಲ್ಲಿ ರಾಮನಗರ ಅಧಿಕೃತ ಜಿಲ್ಲೆಯ ಸ್ಥಾನಮಾನ ಪಡೆದ ನಂತರ ಇಲ್ಲಿನ ಜನತೆ ಹಲವು ಕನಸುಗಳನ್ನು ಕಂಡಿದ್ದರು. ಜಿಲ್ಲೆಯಾಗಿ 15 ವರ್ಷ ಪೂರೈಸಿದರೂ ಕೆಲ ಕಟ್ಟಡಗಳನ್ನು ಎತ್ತಿರುವುದು ಬಿಟ್ಟರೆ ಮಹತ್ವದ ಬದಲಾವಣೆಯಾಗಿಲ್ಲ ಎನ್ನುವುದು ಜನರ ಕೊರಗು. ಇಲ್ಲಿಂದ ಗೆದ್ದವರು ಜನರ ಕೈಗೆ ಸಿಗುವುದಿಲ್ಲ, ಬಹುತೇಕ ರೈತಾಪಿ ಜನರಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ, ರೇಷ್ಮೆ ಬೆಳೆ ಕೈ ಹಿಡಿಯುತ್ತಿಲ್ಲ, ಸುಸಜ್ಜಿತ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಹಲವು ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಇಲ್ಲಿಂದ 2023ರಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಬೇಕೆಂದು ಮಾಜಿ ಸಿಎಂ ಎಚ್‌ಡಿಕೆ ನಿರ್ಧರಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಸಹ ಜಿಲ್ಲೆಯಲ್ಲಿ ಮೇಕೆದಾಟು ಯೋಜನೆಗಾಗಿನ ಪಾದಯಾತ್ರೆ ನಡೆಸಿ ಸುದ್ದಿ ಮಾಡಿತ್ತು.

ರಾಜಕೀಯ ಇತಿಹಾಸ

2018ರಲ್ಲಿ ರಾಮನಗರದಲ್ಲಿ ಒಟ್ಟು ಅಂದಾಜು 2,07,000 ಮತದಾರರಿದ್ದರು. ಅದರಲ್ಲಿ ಸುಮಾರು 99,000ಕ್ಕೂ ಹೆಚ್ಚು ಒಕ್ಕಲಿಗರು, ಎಸ್‌ಸಿ ಮತ್ತು ಎಸ್‌ಟಿ ಸೇರಿ 45,000, ಮುಸ್ಲಿಮರು 35,000, ಮತ್ತು 15,000ದಷ್ಟು ಲಿಂಗಾಯತ ಹಾಗೂ 10,000ಕ್ಕೂ ಹೆಚ್ಚು ಇತರ ಸಮುದಾಯದ ಮತದಾರರಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ಒಕ್ಕಲಿಗ ಮತಗಳು ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನ ಮತಬ್ಯಾಂಕ್ ಆಗಿ ಪರಿವರ್ತನೆ ಆಗಿವೆ. ಹಿಂದೊಮ್ಮೆ ಕೋಮು ಸೂಕ್ಷ್ಮ ಕ್ಷೇತ್ರವಾಗಿದ್ದ ಇದು ಇತ್ತೀಚಿನ ವರ್ಷಗಳಲ್ಲಿ ಅದರಿಂದ ಹೊರಬಂದಿದೆ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಫೈಟ್ ಇರುವುದರಿಂದ ಇದು ಸಾಧ್ಯವಾಗಿದೆ.

ರಾಮನಗರ ಕ್ಷೇತ್ರದಲ್ಲಿ 1957ರಿಂದ ಒಟ್ಟು 6 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಂ ಲಿಂಗಪ್ಪನವರು ಇಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರು ಸಹ ಆಗಿದ್ದಾರೆ. ನಾಲ್ಕು ಬಾರಿ ಜೆಡಿಎಸ್, ಎರಡು ಬಾರಿ ಜನತಾ ಪಕ್ಷದ ಅಭ್ಯರ್ಥಿಗಳು, ಒಮ್ಮೆ ಜನತಾದಳ ಮತ್ತು ಒಮ್ಮೆ ಪಕ್ಷೇತರ ಅಭ್ಯರ್ಥಿ ಇಲ್ಲಿಂದ ಗೆಲುವು ಸಾಧಿಸಿದ್ದಾರೆ.

ಎಚ್.ಡಿ ದೇವೇಗೌಡರ ಪ್ರವೇಶ

ಹಾಸನ ಜಿಲ್ಲೆಯ ಎಚ್.ಡಿ ದೇವೇಗೌಡರು 1985ರಲ್ಲಿ ಸಾತನೂರು ಕ್ಷೇತ್ರಕ್ಕೆ ಕಾಲಿಟ್ಟರು. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್‌ರನ್ನು ಸೋಲಿಸಿದರು. ಆದರೆ ದೇವೇಗೌಡರು 1989ರಲ್ಲಿ ಹೊಳೆ ನರಸೀಪುರದಲ್ಲಿ ಸೋಲನ್ನು ಅನುಭವಿಸಿದ್ದರು. 1994ರಲ್ಲಿಯೂ ಅಲ್ಲಿ ಕಠಿಣ ಸವಾಲು ಎದುರಿಸಬೇಕಾದ ಪರಿಸ್ಥಿತಿಯಲ್ಲಿದ್ದಾಗ ರಾಮನಗರದ ಮುಖಂಡರು ಇಲ್ಲಿಗೆ ಆಹ್ವಾನ ನೀಡಿದರು. ಆಗ ರಾಮನಗರ ಕ್ಷೇತ್ರದಲ್ಲಿ ಜನತಾದಳದಿಂದ ಜಯಗಳಿಸಿದ ಅವರು ರಾಜ್ಯದ 14ನೇ ಸಿಎಂ ಆದರು. ಅಲ್ಲಿಂದ ರಾಮನಗರ ಹೆಚ್ಚು ಕಡಿಮೆ ಜೆಡಿಎಸ್ ಪಕ್ಷದ ಭದ್ರಕೋಟೆಯಾಯಿತು.

ಅಂಬರೀಶ್‌ಗೆ ಸೋಲು

1996 ರಲ್ಲಿ ರಾಮನಗರ ಕ್ಷೇತ್ರದ ಶಾಸಕರಾಗಿದ್ದ ದೇವೇಗೌಡರಿಗೆ ಪ್ರಧಾನಿ ಪಟ್ಟ ಒಲಿಯಿತು. ಆಗ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗಾಗಿ 1997 ರಲ್ಲಿ ರಾಮನಗರ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಯಿತು. ಆಗ ಜನಪ್ರಿಯ ಚಿತ್ರನಟರಾಗಿದ್ದ ಅಂಬರೀಶ್‌ರನ್ನು ಜನತಾದಳದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ಭಾರೀ ಪ್ರಚಾರ ನಡೆಸಿದ್ದ ಅವರೇ ಬಹುತೇಕ ಜಯಗಳಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ ಆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ ಪಕ್ಷದ ಸಿ.ಎಂ ಲಿಂಗಪ್ಪನವರು 9,610 ಮತಗಳ ಅಂತರದಿಂದ ಅಂಬರೀಶ್‌ರನ್ನು ಸೋಲಿಸಿದರು.

ಕುಮಾರಸ್ವಾಮಿ ಹಿಡಿತಕ್ಕೆ ಸಿಕ್ಕ ಕ್ಷೇತ್ರ

ಇಲ್ಲಿ 2004ರಿಂದ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿಯವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಅವರು ಕ್ಷೇತ್ರ ತ್ಯಜಿಸಿದಾಗ ನಡೆದ ಉಪಚುನಾವಣೆಯಲ್ಲಿಯೂ ಸಹ ಜೆಡಿಎಸ್ ಜಯಭೇರಿ ಭಾರಿಸಿದೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ, ಬಿಡದಿಯಲ್ಲಿ ತೋಟ, ಮನೆ ಹೊಂದಿರುವ ಎಚ್.ಡಿ.ಕೆ ಇಲ್ಲಿಯೇ ನೆಲೆಯೂರಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿಯವರು 92,626 ಮತಗಳನ್ನು ಪಡೆದು ಜಯಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಕೂಡ 69,990 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದ್ದರು. ಆ ಚುನಾವಣೆಯಲ್ಲಿ ಎಚ್‌.ಡಿ.ಕೆ ಬದಲು ಜೆಡಿಎಸ್‌ನಿಂದ ಬೇರೆ ಯಾರು ನಿಂತಿದ್ದರೂ ಗೆಲುವು ಕಷ್ಟವಿತ್ತು. ಆಗ ರಾಮನಗರದ ಹಲವು ಬೂತ್‌ಗಳಲ್ಲಿ ಇಕ್ಬಾಲ್ ಹುಸೇನ್ ಲೀಡ್ ಪಡೆದಿದ್ದರೆ ಕೆಲ ಬೂತ್‌ಗಳಲ್ಲಿ ಕುಮಾರಸ್ವಾಮಿಯವರಿಗೆ 10 ಕ್ಕಿಂತ ಕಡಿಮೆ ಮತಗಳು ಬಿದ್ದಿದ್ದವು!. ಹಾಗಾಗಿ ಆ ಚುನಾವಣೆಯನ್ನು ಎಚ್‌.ಡಿ.ಕೆ ಮರೆಯುವಂತಿಲ್ಲ. ನಂತರ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಸಿಎಂ ಆದರು. ಅವರು ಚನ್ನಪಟ್ಟಣ ಕ್ಷೇತ್ರದಲ್ಲಿಯು ಸಹ ಗೆಲುವು ಸಾಧಿಸಿದ್ದರಿಂದ ರಾಮನಗರ ಕ್ಷೇತ್ರವನ್ನು ತ್ಯಜಿಸಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರನ್ನು ಜೆಡಿಎಸ್‌ನಿಂದ ಕಣಕ್ಕಿಳಿದರು. ಕಾಂಗ್ರೆಸ್ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಆದರೆ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಸಿ.ಎಂ. ಲಿಂಗಪ್ಪನವರ ಮಗ ಎಲ್ ಚಂದ್ರಶೇಖರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿ ಆದರು. ಆದರೆ ಚುನಾವಣೆಗೆ ಎರಡು ದಿನ ಬಾಕಿ ಇದ್ದಾಗ ಅವರು ಬಿಜೆಪಿಗೆ ರಾಜೀನಾಮೆ ನೀಡಿ ವಾಪಸ್ ಕಾಂಗ್ರೆಸ್ ಸೇರಿ ಸ್ಪರ್ಧೆಯಿಂದ ಹಿಂದೆ ಸರಿದು, ನಾಮಕಾವಸ್ಥೆ ಚುನಾವಣೆ ಎದುರಿಸಿ ಸೋತರು. ಇದರಲ್ಲಿ ಡಿ.ಕೆ ಸಹೋದರರ ಕೈವಾಡವಿದ್ದಿದ್ದರಿಂದ ಬಿಜೆಪಿಗೆ ತೀವ್ರ ಮುಜುಗರ ಉಂಟಾಯಿತು. ಇದರಿಂದಾಗಿ ಆ ಚುನಾವಣೆಯಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಯವರು ಅನಾಯಾಸವಾಗಿ 1,06,137 ಮತಗಳ ಅಂತರದ ಭಾರೀ ಗೆಲುವು ದಾಖಲಿಸಿದರು.

ರಾಮನಗರ ಸಮೀಕ್ಷೆಯ ವಿಡಿಯೋ ನೋಡಿ

 

ಡಿ.ಕೆ ಶಿವಕುಮಾರ್‌ ಪಾತ್ರವೇನು?

ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ರಾಮನಗರದ ಕನಕಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚಿಗೆ ಅವರ ಮತ್ತು ಎಚ್‌ಡಿಕೆ ನಡುವೆ ಮಾತಿನ ಚಕಮತಿ ನಡೆಯುತ್ತಿದೆ. ಅವರು ಸದ್ಯಕ್ಕೆ ಒಂದು ಕಡೆ ಎಚ್.ಡಿ.ಕೆಯವರನ್ನು ಬದಿಗೆ ಸರಿಸಿ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಆದರೆ ಅದೇ ಸಮಯಕ್ಕೆ ದೇವೇಗೌಡರ ಕುಟುಂಬದ ಬೆಂಬಲವನ್ನೂ ನೀರಿಕ್ಷಿಸುತ್ತಿದ್ದಾರೆ. ಹಾಗಾಗಿಯೇ ಅವರು ಕುಮಾರಸ್ವಾಮಿಯವರೊಂದಿಗೆ ಚೆನ್ನಾಗಿದ್ದಾರೋ ಇಲ್ಲವೋ ತಿಳಿಯುವುದೇ ಕಷ್ಟ ಎನಿಸಿಬಿಡುತ್ತದೆ.

ಡಿ.ಕೆ.ಶಿ. ಮೇಕೆದಾಟು ಯೋಜನೆಗಾಗಿ ನಡೆಸಿದ ಪಾದಯಾತ್ರೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದರು. ಕೋವಿಡ್ ಹೆಚ್ಚಾಗುತ್ತಿರುವುದರಿಂದ ಪಾದಯಾತ್ರೆ ನಿಲ್ಲಿಸಬೇಕು ಎಂದು ಸರ್ಕಾರ ಎಷ್ಟೇ ಎಚ್ಚರಿಕೆ ಕೊಟ್ಟರೂ, ವೀಕೆಂಡ್ ಕರ್ಫ್ಯೂ ಇದ್ದರೂ ಪಾದಯಾತ್ರೆಗೆ ಚಾಲನೆ ನೀಡಿದರು. ಅಂದುಕೊಂಡಂತೆ ರಾಮನಗರ ಜಿಲ್ಲೆ ಪ್ರವೇಶಿಸಿದ ನಂತರವೇ ಅವರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ. ಇದಕ್ಕೆ ರಾಮನಗರದ ಮೇಲೆ ಅವರ ಕಣ್ಣಿಟ್ಟಿರುವುದೇ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಒಕ್ಕಲಿಗರ ಪಕ್ಷ ಎಂಬುದು ಒಂದು ಕಾರಣವಾದರೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ಹೊಂದಿಲ್ಲದಿರುವುದು ಎರಡನೇ ಕಾರಣ. ರಾಮನಗರದಲ್ಲಿ ಕಾಂಗ್ರೆಸ್ ತಲೆಹಾಕುವುದಿಲ್ಲ, ಕನಕಪುರದಲ್ಲಿ ಜೆಡಿಎಸ್ ತಲೆ ಹಾಕುವುದಿಲ್ಲ. ಡಿ.ಕೆ.ಶಿ ಮತ್ತು ಎಚ್.ಡಿ.ಕೆ ನಡುವೆ ಈ ಹೊಂದಾಣಿಕೆಯಿದ್ದು ಚುನಾವಣೆಯಲ್ಲಿ ಗೆಲ್ಲಲು ಪರಸ್ಪರ ಸಹಕರಿಸುತ್ತಾರೆ ಎಂಬ ಆರೋಪ ಸಹ ಇದೆ.

ಹಾಗಾಗಿಯೇ ಕುಮಾರಸ್ವಾಮಿಯವರು ರಾಮನಗರ ನಿಖಿಲ್ ಕುಮಾರಸ್ವಾಮಿಯವರಿಗೆ ಸೇಫ್ ಕ್ಷೇತ್ರ ಎಂದು ಪರಿಗಣಿಸಿ ಅಲ್ಲಿಂದ ಕಣಕ್ಕಿಳಿಸಲು ಬಯಸಿದ್ದಾರೆ. ಅದನ್ನು ತಮ್ಮ ಪತ್ನಿ ಬಾಯಿಂದಲೇ ಹೇಳಿಸಿದ್ದಾರೆ. ತಾವು ಯಥಾಪ್ರಕಾರ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದರೆ, ಅನಿತಾ ಕುಮಾರಸ್ವಾಮಿಯವರು ಈ ಬಾರ ಸ್ಪರ್ಧೆಯಿಂದ ಹಿಂದೆ ಸರಿಯಬಹುದು. ಇಲ್ಲದಿದ್ದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಆಲೋಚನೆಯೂ ಅವರಲ್ಲಿದೆ.

ನಿಖಿಲ್ ಜಯ ಸುಲಭವೇ?

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕೆಂದು ನಿರ್ಧಿರಿಸಿದ್ದಾರೆ. ಅವರಿಗೆ ಗೆಲುವಿಗೆ ರಾಮನಗರ ಹೇಳಿ ಮಾಡಿಸಿದ ಕ್ಷೇತ್ರವೂ ಆಗಿದೆ. ಏಕೆಂದರೆ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾವುದೇ ಪ್ರಬಲ ಅಭ್ಯರ್ಥಿಗಳು ಕಂಡುಬರುತ್ತಿಲ್ಲ. ದೇವೇಗೌಡರ ಕುಟುಂಬದ ಮೇಲೆ ಜಿಲ್ಲೆಯ ಜನರಿಗಿರುವ ಪ್ರೀತಿ, ಜೆಡಿಎಸ್ ಒಕ್ಕಲಿಗರ ಪಕ್ಷವೆಂಬ ಟ್ಯಾಗ್‌ಲೈನ್ ಮತ್ತು ಈಗಾಗಲೇ ಮಂಡ್ಯದಲ್ಲಿ ಸೋತಿರುವ ಅನುಕಂಪದ ಅಲೆ ನಿಖಿಲ್ ಕುಮಾರಸ್ವಾಮಿಯವರನ್ನು ಈ ಬಾರಿ ಗೆಲುವಿನ ದಡ ಸೇರಿಸಲಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಮತ.

ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಇಲ್ಲಿ ಪೈಪೋಟಿ ಕೊಡಬಹುದು. ಕುಮಾರಸ್ವಾಮಿಯವರ ಕುಟುಂಬದವರೆ ಇಲ್ಲಿ ಪದೇ ಪದೇ ಗೆಲ್ಲುವುದು ಏಕೆ? ಸ್ಥಳೀಯರಿಲ್ಲವೇ ಎಂಬ ಮಾನದಂಡ ಮುನ್ನಲೆಗೆ ತಂದು ಪ್ರಚಾರ ಮಾಡಬಹುದು. ಆದರೆ ಪ್ರಬಲ ಕ್ಯಾಂಡಿಡೇಟ್ ಕಾಣುತ್ತಿಲ್ಲ. ಒಂದು ವೇಳೆ ಡಿ.ಕೆ ಶಿವಕುಮಾರ್ ಕನಕಪುರದ ಜೊತೆಗೆ ರಾಮನಗರದಿಂದಲೂ ಸ್ಪರ್ಧೆ ಮಾಡಿದರೆ ಮಾತ್ರ ನಿಖಿಲ್ ಆತಂತಕ್ಕೆ ಒಳಗಾಗುವ ಪರಿಸ್ಥಿತಿ ಇರುತ್ತದೆ. ಆದರೆ ಅಂತಹ ಲಕ್ಷಣಗಳು ಕಾಣುತ್ತಿಲ್ಲ.

ಬಿಜೆಪಿಯ ಬಯಕೆಯೇನು?

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಯಾವುದೇ ನೆಲೆ ಇಲ್ಲ. ಈ ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆಯೂ ಗೆಲ್ಲಲಾಗದ ಬಿಜೆಪಿ, ಎರಡು ಬಾರಿ ಮಾತ್ರ ರನ್ನರ್ ಅಪ್ ಆಗಿದೆ ಅಷ್ಟೇ. ಉಸ್ತುವಾರಿ ಮಂತ್ರಿ ಅಶ್ವಥ್ ನಾರಾಯಣ್ ಮತ್ತು ಸಿ.ಪಿ ಯೋಗೀಶ್ವರ್ ಜಿಲ್ಲೆಯಲ್ಲಿ ಬಿಜೆಪಿ ಬೇರು ಬಿಡಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.

2013ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸಿದ್ದ ಸಿ.ಪಿ ಯೋಗೀಶ್ವರ್ 2018ರಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸೋತರು. ಎಂಎಲ್‌ಸಿಯಾಗಿ ಸಚಿವರಾಗಿದ್ದ ಅವರು ಈಗ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಜೊತೆಗೆ ಹೈಕಮಾಂಡ್ ಸೂಚಿಸಿದರೆ ರಾಮನಗರದಿಂದಲೂ ಸ್ಪರ್ಧಿಸಲು ಸಿದ್ಧ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅದು ಸದ್ಯಕ್ಕೆ ಫಲ ಕೊಡುವ ಯಾವುದೇ ಸೂಚನೆ ಕಾಣುತ್ತಿಲ್ಲ.

ಕೊನೆಯ ಮಾತು

ಇಡೀ ರಾಮನಗರ ಜಿಲ್ಲೆಯ ಜನರ ಬಹುಮುಖ್ಯ ಸಮಸ್ಯೆಯೆಂದರೆ ಇಲ್ಲಿನ ಹೆವಿವೈಟ್ ರಾಜಕಾರಣಿಗಳೇ ಆಗಿದ್ದಾರೆ. ಚುನಾವಣೆಗೆ ಒಂದು ವರ್ಷ ಇರುವಂತೆ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಇವರು ಚುನಾವಣೆ ಮುಗಿದಂತೆ ಇನ್ನು ನಾಲ್ಕು ವರ್ಷ ನಾಪತ್ತೆಯಾಗಿಬಿಡುತ್ತಾರೆ. ರಾಜ್ಯ ರಾಜಕೀಯದಲ್ಲಿ ಬ್ಯುಸಿ ಆಗುವ ಈ ಯಾವ ರಾಜಕಾರಣಿಗಳು ಸಹ ಸಾಮಾನ್ಯ ಜನರ ಕೈಗೆ ಸಿಗುವುದಿಲ್ಲ, ಅವರ ಹೆಸರಿನಲ್ಲಿ ಅವರ ಹಿಂಬಾಲಕರೆ ಇಲ್ಲಿ ಆಡಳಿತ ನಡೆಸುತ್ತಾರೆ, ಅಧಿಕಾರಿಗಳ ಮೇಲೆ ಒತ್ತಡ ತರುತ್ತಾರೆ, ಸ್ವತಂತ್ರವಾಗಿ ಆಡಳಿತ ನಡೆಸಲು ಬಿಡುವುದಿಲ್ಲ, ಜನರು ಹೈರಣಾಗುತ್ತಾರೆ ಎಂಬುದು ಸಾಮಾನ್ಯ ಆರೋಪ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಪ್ರಬಲ ವಿರೋಧಿಗಳಿಲ್ಲದ ಡಿ.ಕೆ ಸಹೋದರರ ಸಾಮ್ರಾಜ್ಯ ಕನಕಪುರ

ಜಿಲ್ಲೆಯ ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಒಂದಷ್ಟು ಭಾಗ ಬಿಟ್ಟರೆ ಜಿಲ್ಲೆಗೆ ಸಮರ್ಪಕ ನೀರಾವರಿ ಯೋಜನೆ ಇಲ್ಲ. ಇನ್ನು ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಬೆಲೆ ಇಳಿಕೆ ಎಂಬುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹೆಚ್ಚಿನ ರೈತರು ರೇಷ್ಮೆ ಬೆಳೆಯುತ್ತಿದ್ದು, ಬೆಲೆ ಕುಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಈ ಹಿಂದೆ ಎದುರಾಗಿದ್ದಿದೆ. ಈ ಯಾವ ಸಂದರ್ಭದಲ್ಲಿಯೂ ಇಲ್ಲಿನ ರಾಜಕಾರಣಿಗಳು ರೈತರ ನೆರವಿಗೆ ನಿಂತಿಲ್ಲ.

ವಿಸ್ತರಣೆಯಾಗದ ರೇಷ್ಮೆ ಮಾರುಕಟ್ಟೆ, ಉದ್ಘಾಟನೆಯಾಗದ ಜಿಲ್ಲಾಸ್ಪತ್ರೆ, ನಿಂತಲ್ಲೇ ನಿಂತ ಪ್ರವಾಸೋದ್ಯಮ ಬೆಳವಣಿಗೆ, ಬುಡಕಟ್ಟು ಜನರತ್ತ ತಿರುಗಿ ನೋಡದ ಸರ್ಕಾರ, ಶುದ್ಧೀಕರಣವಾಗದ ವೃಷಭಾವತಿ-ಅರ್ಕಾವತಿ ನದಿಗಳು… ಈ ರೀತಿ ಸಾಲು ಸಾಲು ಸಮಸ್ಯೆಗಳು ಕ್ಷೇತ್ರವನ್ನು ಕಾಡುತ್ತಿವೆ. ಆದರೆ ಅವೆಲ್ಲವೂ ಈ ಚುನಾವಣೆಯಲ್ಲಿ ಮುನ್ನಲೆಗೆ ಬರುತ್ತವೆಯೇ? ಇಲ್ಲ ಈ ಬಾರಿಯೂ ಜಾತಿ ಮೇಲಾಟವೇ ಮುಖ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

– ಮುತ್ತುರಾಜು

ವಿವಿಧ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ ಓದಲು ಇಲ್ಲಿ ಕ್ಲಿಕ್ ಮಾಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...