ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಯಾಗದಿರಲು ‘ಉತ್ತರ ಭಾರತದ ಮನಸ್ಥಿತಿಯೆ’ ಕಾರಣ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಪುಣೆ ವೈದ್ಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆಗಳಿಗೆ ಇನ್ನು ಅನುಮೋದನೆ ನೀಡಿಲ್ಲ. ಇದು ಮಹಿಳಾ ನಾಯಕತ್ವವನ್ನು ಒಪ್ಪಿಕೊಳ್ಳಲು ದೇಶ ಇನ್ನೂ ಮಾನಸಿಕವಾಗಿಲ್ಲ ಸಿದ್ದವಾಗಿಲ್ಲದಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.
“ನಾನು ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಸದಸ್ಯನಾಗಿದ್ದಾಗಿನಿಂದಲೂ ಈ ವಿಷಯದ ಕುರಿತು ಮಾತನಾಡುತ್ತ ಬಂದಿದ್ದೇನೆ. ಮನಸ್ಥಿತಿ ಅದರಲ್ಲಿಯೂ ಉತ್ತರ ಭಾರತದ ಮನಸ್ಥಿತಿ ಈ ವಿಷಯದಲ್ಲಿ ಅನುಕೂಲಕರವಾಗಿಲ್ಲ. ನಾನು ಹಿಂದೊಮ್ಮೆ ಕಾಂಗ್ರೆಸ್ ಸಂಸದನಾಗಿದ್ದಾಗ ಈ ವಿಷಯದ ಕುರಿತು ಲೋಕಸಭೆಯಲ್ಲಿ ಮಾತನಾಡಿದ್ದೆ. ಭಾಷಣ ಮುಗಿಸಿ ಹಿಂದೆ ತಿರುಗಿ ನೋಡಿದಾಗ ಯಾರೋಬ್ಬರೂ ಇರದೆ ಎದ್ದು ಹೋಗಿದ್ದರು. ಅಂದರೆ ಮಹಿಳಾ ಮೀಸಲಾತಿ ವಿಷಯವು ನಮ್ಮ ಪಕ್ಷದ ಸದಸ್ಯರಿಗೆ ಜೀರ್ಣಿಸಿಕೊಳ್ಳಲು ಅಸಾಧ್ಯದವಾದ ವಿಷಯವಾಗಿದೆ” ಎಂದು ಪವಾರ್ ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ
ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಯಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ್ದೆ. ಇದಕ್ಕೆ ಆರಂಭದಲ್ಲಿ ಅಪಸ್ವರ ಕೇಳಿಬಂದರೂ ನಂತರ ಎಲ್ಲರೂ ಒಪ್ಪಿಕೊಂಡಿದ್ದಾರೆ. ಹಾಗಾಗಿ ಎಲ್ಲಾ ಪಕ್ಷಗಳು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ನಿರಂತರವಾಗಿ ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ.
ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಎನ್.ವಿ.ರಮಣ ಅವರು ಇತ್ತೀಚೆಗೆ ಕರೆ ನೀಡಿದ್ದರು. ದೇಶದ್ಯಾಂತ ಇರುವ ಕಾನೂನು ಕಾಲೇಜುಗಳಲ್ಲಿಯೂ ಮಹಿಳೆಯರಿಗೆ ಅರ್ಧದಷ್ಟು ಮೀಸಲಾತಿ ನೀಡಬೇಕೆಂಬ ಒತ್ತಾಯ ಸಹ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.
ಇದನ್ನೂ ಓದಿ: ಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ