ಒಡಿಶಾದಲ್ಲಿ ಒಂದು ಕೋಟಿ ಮೌಲ್ಯದ ಹಾವಿನ ವಿಷ ವಶ, 6 ಮಂದಿಯ ಬಂಧನ
PC: ANI

ಒಡಿಶಾದಲ್ಲಿ 1.3 ಕೋಟಿ ರೂಪಾಯಿಗಳ ಮೌಲ್ಯದ ಹಾವಿನ ವಿಷವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ತಂಡವೊಂದನ್ನು ಭುವನೇಶ್ವರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರು ಆರೋಪಿಗಳಿಂದ ಎರಡು ಬಾಟಲಿಗಳಲ್ಲಿ 1.3 ಲೀಟರ್ ವಿಷವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳು ಹಾವಿನ ವಿಷವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

“ನಾವು ಒಂದು ಲೀಟರ್ ಹಾವಿನ ವಿಷ ಮತ್ತು ಐದು ಮಿಲಿಲೀಟರ್‌ಗಳ ಐದು ಬಾಟಲುಗಳನ್ನು ವಶಪಡಿಸಿಕೊಂಡಿದ್ದೇವೆ. ಬಾಲಸೋರ್‌ನ ಮಹಿಳೆ ಸೇರಿದಂತೆ ಮೂವರು 10 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿನ ವಿಷದ ಮೌಲ್ಯ 1 ಕೋಟಿಗಿಂತ ಹೆಚ್ಚಾಗಿದೆ” ಎಂದು ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಅಶೋಕ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿಗೆ ಮೊದಲ ಮುಸ್ಲಿಂ ನಟ ನಾಮನಿರ್ದೇಶನ: ಇತಿಹಾಸ ಸೃಷ್ಟಿಸಿದ ರಿಜ್ ಅಹ್ಮದ್

“ಒಂದು ಲೀಟರ್ ವಿಷವನ್ನು ಸಂಗ್ರಹಿಸಲು ಸುಮಾರು 200 ಹಾವುಗಳು ಬಳಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಆರು ಜನರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39, 44, 49 ಮತ್ತು 51 ರ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳನ್ನು ನಾಳೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು” ಎಂದು ಅಶೋಕ್ ಮಿಶ್ರಾ ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಹಕರ ವೇಷ ಧರಿಸಿ ಕಾರ್ಯಾಚರಣೆ ನಡೆಸಿ ವಿಷ ಮಾರಲು ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ವಿಷದ ದಂಧೆ ಮತ್ತು ಗ್ಯಾಂಗ್‌ನ ಇತರ ಸದಸ್ಯರ ಬಗ್ಗೆ ವಿವರಗಳನ್ನು ಪಡೆಯಲು ಮೂವರ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ವೇಳೆ, ಬಂಧಿತ ಆರೋಪಿಗಳಲ್ಲಿ ಒಬ್ಬರು ಬಾಟಲಿಗಳಲ್ಲಿನ ವಿಷದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಕೆಲವು ಜನರು ಔಷಧಿಗಳೆಂದು ಹೇಳಿಕೊಂಡು ನಮಗೆ ಹಸ್ತಾಂತರಿಸಿದರು. ಒಳಗೆ ಏನು ಇದೆ ಎಂಬುದು ನಮಗೆ ತಿಳಿದಿರಲಿಲ್ಲ. ಗೌತಮ್ ಎಂಬ ಭುವನೇಶ್ವರ ಮೂಲದ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಹಸ್ತಾಂತರಿಸಲು ನಮಗೆ ಎರಡು ಬಾಟಲಿಗಳನ್ನು ಕೊಟ್ಟಿದ್ದಾನೆ ”ಎಂದು ಆರೋಪಿ ಹೇಳಿದ್ದಾರೆ.

ಜೊತೆಗೆ ಬಾಟಲಿಗಳನ್ನು ನೀಡಿದ ಗೌತಮ್ ಎಂಬುವವರು ಇರುವ ಸ್ಥಳದ ಬಗ್ಗೆ ತನಗೆ ತಿಳಿದಿಲ್ಲ ಎಂದು ಆರೋಪಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಇದನ್ನೂ ಓದಿ: ಬಿಜೆಪಿ ಶಾಸಕನನ್ನು ಥಳಿಸಿ ಅಸಮಾಧಾನ ಹೊರಹಾಕಿದ ಪಂಜಾಬ್ ರೈತರು: ಆರೋಪ

LEAVE A REPLY

Please enter your comment!
Please enter your name here