Homeಪುಸ್ತಕ ವಿಮರ್ಶೆಜಾತೀಯತೆ ಮತ್ತು ಜನಾಂಗೀಯವಾದವನ್ನು ಬೆಸೆದು ಶೋಷಣೆಯ ವ್ಯಾಪಕತೆಯನ್ನು ಚರ್ಚಿಸುವ ’ಕ್ಯಾಸ್ಟ್’

ಜಾತೀಯತೆ ಮತ್ತು ಜನಾಂಗೀಯವಾದವನ್ನು ಬೆಸೆದು ಶೋಷಣೆಯ ವ್ಯಾಪಕತೆಯನ್ನು ಚರ್ಚಿಸುವ ’ಕ್ಯಾಸ್ಟ್’

- Advertisement -
- Advertisement -

ಇಡೀ ಪ್ರಪಂಚದಲ್ಲಿ ಜಾತಿವಾದ ಮತ್ತು ಜನಾಂಗೀಯವಾದದ ಅತಿ ದೊಡ್ಡ ಪಿಡುಗುಗಳಾಗಿದ್ದವರು ಮೂವರು:
ಅಮೆರಿಕದ ದಕ್ಷಿಣ ಪ್ರಾಂತದ ಜಿಮ್ ಕ್ರೊ, ಭಾರತದಲ್ಲಿ ಮನುಧರ್ಮ ಶಾಸ್ತ್ರವನ್ನು ಸೃಷ್ಟಿಸಿದ ಮನು ಮತ್ತು ಜರ್ಮನಿಯ ಹಿಟ್ಲರ್.

ಲೇಖಕಿ ಇಸಾಬೆಲ್ ವಿಲ್ಕರ್ಸನ್ ಅವರ ’ಕ್ಯಾಸ್ಟ್: ದ ಲೈಸ್ ದಟ್ ಡಿವೈಡ್ ಅಸ್’ (ಜಾತಿ: ನಮ್ಮನ್ನ ಬೇರ್ಪಡಿಸುವ ಸುಳ್ಳುಗಳು) – ಈ ಪುಸ್ತಕ ಪ್ರಾರಂಭವಾಗುವುದು ಜರ್ಮನಿಯಲ್ಲಿನ ಹ್ಯಾಂಬರ್ಗ್‌ನಲ್ಲಿ ಸೆರೆ ಹಿಡಿದ ಒಂದು ಫೋಟೋದ ಬಗೆಗಿನ ವಿವರಣೆಯೊಂದಿಗೆ. ಅದರಲ್ಲಿ ನೌಕಾಂಗಣದ ಕೆಲಸಗಾರರ ದೊಡ್ಡ ಗುಂಪೊಂದು ಸಾಮೂಹಿಕವಾಗಿ ಹಿಟ್ಲರ್‌ನನ್ನು ’ಹೈಲ್ ಹಿಟ್ಲರ್’ (Heil Hitler) ಎಂದು ತಮ್ಮ ಬಲಗೈಗಳನ್ನು ಮೇಲಕ್ಕೆತ್ತಿ ನಮಸ್ಕರಿಸುತ್ತಿರುವ ದೃಶ್ಯ. ಆ ಗುಂಪಿನಲ್ಲಿ ಒಬ್ಬನು ಮಾತ್ರ ನಿಶ್ಯಬ್ದವಾಗಿ ಪ್ರತಿಕ್ರಿಯಿಸದೇ ನಿಂತಿರುವುದು ವಿಶಿಷ್ಟವಾಗಿ ಕಾಣುತ್ತಿರುತ್ತದೆ. ಅವನ ಹೆಸರು ಆಗಸ್ಟ್ ಲ್ಯಾಂಡ್ ಮೆಸ್ಸರ್. ಆ ಇಡೀ ಜನ ಸಮೂಹದಲ್ಲಿ ಚರಿತ್ರೆಯ ನ್ಯಾಯಯುತ ಪಕ್ಷಪಾತಿ ಅವನೊಬ್ಬನೇ!

2016ರಲ್ಲಿ ಊಹಿಸಲಾರದಷ್ಟು ಶಾಖ ಅಂದರೆ 95 ಡಿಗ್ರಿಯ ಬಿಸಿ ಅಲೆಯೊಂದು ಭೂಮಿಯ ಕೊನೆಯ ಭಾಗ ಎಂದು ಪರಿಗಣಿಸಲಾಗುವ ಸೈಬೀರಿಯಾದ ಟುಂಡ್ರ ಪ್ರದೇಶದಲ್ಲಿ ಎದ್ದಿತು. ಇದರಿಂದ, ರಷ್ಯದ ಯಮಲ್ ಅನ್ನುವ ಪ್ರದೇಶದಲ್ಲಿ, ಭೂಮಿಯ ಅಡಿಯಲ್ಲಿದ್ದ ಮೀಥೇನ್ ಅನಿಲದ ಸ್ಥಾವರಗಳು ಹೊತ್ತಿಕೊಂಡವು ಮತ್ತು ಆ ಪ್ರದೇಶ ಅನೇಕ ಕಾಳ್ಗಿಚ್ಚುಗಳಿಂದ ಆವೃತವಾಯಿತು.

ನಂತರ ಅಲ್ಲಿನ ಪ್ರಾಂತೀಯ ದನಕಾಯುವವರ ಮಕ್ಕಳು ನಿಗೂಢವಾದ ಕಾಯಿಲೆಗೆ ತುತ್ತಾದರು ಮತ್ತು ಹನ್ನೆರಡು ವರ್ಷದ ಬಾಲಕನೊಬ್ಬ ಹೊಟ್ಟೆ ನೋವಿನಿಂದ ಅಸುನೀಗಿದ. ರಷ್ಯ ಪ್ರಭುತ್ವ ತುರ್ತು ಪರಿಸ್ಥಿತಿಯನ್ನ ಘೋಷಿಸಿ, ನೂರಾರು ರೋಗಗ್ರಸ್ತ ಜನಗಳನ್ನು ಸಕ್ಲೆಹಾರ್ಡ್ ಪ್ರದೇಶದ ನಿನೆಟ್ ಎಂಬಲ್ಲಿನ ಆಸ್ಪತ್ರೆಗೆ ವಿಮಾನ ಮೂಲಕವಾಗಿ ರವಾನಿಸಿತು.

ವಿಜ್ಞಾನಿಗಳು ಇದಕ್ಕೆ ಕಾರಣವನ್ನ ಕಂಡುಹಿಡಿಯುವಲ್ಲಿ ಸಫಲರಾದರು. ಅತಿ ದೊಟ್ಟಮಟ್ಟದ ಶಾಖದಿಂದ, ಅಲ್ಲಿ ಯುದ್ಧದ ನಂತರ ಭೂಗತವಾಗಿದ್ದ ಆಂಥ್ರಾಕ್ಸ್ ಎಂಬ ರಾಸಾಯನಿಕ ವಿಷ ಹೊರಬಂದಿದ್ದೇ ಇದಕ್ಕೆ ಕಾರಣ ಅನ್ನುವುದನ್ನು ಅರಿತರು. ಈ ರೋಗಕಾರಕ ಆಂಥ್ರಾಕ್ಸ್‌ಅನ್ನು ರೈನ್ ಡಿಯರ್ ಎಂಬ ಪ್ರಾಣಿಗಳು ತಿಂದು ಸತ್ತ ನಂತರ ಮಂಜುಗಡೆಯಲ್ಲಿ ಅದರ ಅವಶೇಷಗಳು ಹೂತುಹೋಗಿದ್ದವು. ಈಗ ಉಂಟಾದ ಉಷ್ಣಾಂಶದ ಕಾರಣ ಈ ಪ್ರಾಣಿಯ ಅವಶೇಷಗಳು ಮೇಲೆದ್ದು ಬಂದು, ಅವುಗಳಲ್ಲಿ ಅಡಗಿದ್ದ ವಿಷ ಜನರನ್ನ ಆಹುತಿ ತೆಗೆದುಕೊಂಡಿತು ಎನ್ನುವ ಅಭಿಪ್ರಾಯಕ್ಕೆ ವಿಜ್ಞಾನಿಗಳು ಬಂದರು. ಈ ಆಂಥ್ರಾಕ್ಸ್ ವಿಷ ರೈನ್ ಡಿಯರ್‌ಗಳು ಮೇಯುವ ಪ್ರದೇಶಕ್ಕೆ ಹರಡಿ ಅಲ್ಲಿಂದ ದನ ಕಾಯುವ ಹುಡುಗರನ್ನು ಬಲಿ ತೆಗೆದುಕೊಂಡಿತು. ಈ ಆಂಥ್ರಾಕ್ಸ್ ಎಂಬ ವಿಷಪುನಶ್ಚೇತನಗೊಂಡಂತೆಯೇ, ಮಾನವರಲ್ಲಿನ ಜಾತಿ ದ್ವೇಷ ಇಂದಿನ ಶತಮಾನದಲ್ಲಿ ಪುನರ್‌ವಿಕಸನಗೊಂಡಿತು. ಈ ಜಾತಿಯ ವಿಷ ಕೂಡ ಅಸ್ತಂಗತವಾಗಿರಲೇ ಇಲ್ಲ. ವಿಪರೀತವಾದ ಪರಿಸ್ಥಿತಿಗಳ ನಿರೀಕ್ಷೆಯಲ್ಲಿ ಈ ವಿಷ ನಿಶ್ಯಬ್ದವಾಗಿ ಸದಾಕಾಲ ಕಾಯುತ್ತಲೇ ಇತ್ತು.

ಇದೇ ರೀತಿಯಲ್ಲಿ ಅಮೆರಿಕ ದೇಶದಲ್ಲಿ ಕೂಡ ಈ ವಿಷ ಆಚೆ ಬಂದು ಹಲವರನ್ನು ಬಲಿಪಡೆಯಿತು. ಜಾತಿಪದ್ಧತಿಯ ಭೀಕರತೆಯನ್ನು ಮತ್ತು ಕ್ರೌರ್ಯವನ್ನ ವರ್ಣಿಸುವ ಹಾಗೂ ಮನ ಕದಡುವ ರೂಪಕೋಕ್ತಿ ಇದು. ಈ ರೀತಿಯ ಕ್ರೌರ್ಯದ ವರ್ಣನೆಗಳು ಕಲ್ಲು ಹೃದಯದ ಜಾತಿವಾದಿಗಳ ಹೃದಯವನ್ನೂ ಕರಗಿಸಬಲ್ಲವು! ಇಂತಹುವುಗಳನ್ನು ತೀವ್ರತೆಯಿಂದ ಈ ಪುಸ್ತಕದಲ್ಲಿ ಹಿಡಿದಿಡಲಾಗಿದೆ.

ಆಗಸ್ಟ್ 1619ರ ಕೊನೆಯ ದಿನಗಳಲ್ಲಿ ಅಂದರೆ ಪ್ಲೈಮೊತ್ ರಾಕ್‌ಗೆ ಯಾತ್ರಾರ್ಥಿಗಳು ಬಂದಿಳಿಯುವುದಕ್ಕಿಂತ ಒಂದು ವರ್ಷದ ಮುಂಚೆಯೇ, ಒಬ್ಬ ಡಚ್ ಯೋಧ ಜೇಮ್ಸ್ ನದಿ ಸಮುದ್ರ ಸೇರುವ ಬಂಜರು ಪ್ರದೇಶದ ಜಾಗದ ದಡಕ್ಕೆ ತನ್ನ ಹಡಗನ್ನು ತಂದು ಕಟ್ಟಿಹಾಕಿದ. ಈಗ ಅದೇ ಜಾಗವನ್ನು ವರ್ಜಿನಿಯ ಎಂದು ಕರೆಯುತ್ತಿರುವುದು. ನಮಗಿದು ತಿಳಿದಿದ್ದಕ್ಕೆ ಕಾರಣ ಬಹಳ ಹಿಂದೆಯೇ ಅಲ್ಲಿ ಬಂದು ನೆಲಸಿದ ಜಾನ್ ರೋಲ್ಫ್ ಅನ್ನುವವನು ಬರೆದ ಒಂದು ಸಾಲಿನಿಂದ. ಆಫ್ರಿಕನ್ನರು ಅಮೆರಿಕದ ಇಂಗ್ಲಿಷ್ ಕಾಲೊನಿಯಲ್ಲಿ ನೆಲಸಿದ್ದರ ಬಗ್ಗೆ ಅತ್ಯಂತ ಹಳೆಯ ಮಾಹಿತಿ ಎಂದರೆ ಇವನು ಬರೆದಿಟ್ಟಿದ್ದೇ. ಮತ್ತು ಇದೇ ಜನಗಳನ್ನು ಅತ್ಯಂತ ಹೀನಾಯ ಮಟ್ಟಕ್ಕೆ ನೂಕಿದ ಅಲ್ಲಿನ ಜಾತಿ ವ್ಯವಸ್ಥೆಯ ಮೊದಲ ಲಿಖಿತ ದಾಖಲೆ ಇದಾಗಿದೆ. ರಾಲ್ಫ್ ಆಗ ಬಂದಿದ್ದ ಇಪ್ಪತ್ತು ಜನ ನೀಗ್ರೊಗಳನ್ನು ಸರಕು ಸಾಮಗ್ರಿ ಎಂದೇ ಪರಿಗಣಿಸಿ ಬರೆದಿದ್ದಾನೆ. ಅಲ್ಲಿನ ಗವರ್ನರ್ ಇವರನ್ನು ವಿಜಯೋತ್ಸವದ ಕುರುಹಿಗಾಗಿ ಕೊಂಡುಕೊಳ್ಳುತ್ತಾನೆ. ಈ ಆಫ್ರಿಕನ್ನರನ್ನು ಸ್ಪ್ಯಾನಿಶ್ ಕಾಲೊನಿಗಳಿಗೆ ಗುಲಾಮರನ್ನಾಗಿಸಿಕೊಳ್ಳುವುದಕ್ಕೆ ಕೊಂಡೊಯ್ಯುತ್ತಿದ್ದ ಹಡಗಿನಿಂದ ಅಪಹರಿಸಲಾಗಿತ್ತು. ಅಮೆರಿಕದಲ್ಲಿ ಜಾತಿ ಪದ್ಧತಿಯ ಆರಂಭ ಇಲ್ಲಿಂದಲೇ ಎಂದು ಹೇಳಲಾಗುತ್ತದೆ. ಅಮೆರಿಕ ಸಂಯುಕ್ತ ರಾಷ್ಟ್ರವಾಗಿ ಉಗಮಗೊಳ್ಳುವುದಕ್ಕಿಂತ ಮೊದಲೇ ಅಲ್ಲಿ ಜಾತಿ ಪದ್ಧತಿ ಜಾರಿಯಾಯಿತು.

ಈ ಪುಸ್ತಕದ ಲೇಖಕಿ ಈ ಜಾತಿ ವ್ಯವಸ್ಥೆ ಅನ್ನುವ ಪರಿಕಲ್ಪನೆಯನ್ನ ಅನೇಕ ಸ್ತರಗಳಲ್ಲಿ ಛೇದಿಸಿ, ಹಲವು ಶೋಷಣೆಗಳಿಗೆ ಅದನ್ನು ವಿಸ್ತರಿಸಿ ಅದರ ಭೀಕರತೆ ಮತ್ತು ಅಮಾನವೀಯತೆಯನ್ನು ತೆರೆದಿಟ್ಟು ತೋರಿಸಿದ್ದಾರೆ. ಉದಾಹರಣೆಗೆ, “ಜಾತಿ ವ್ಯವಸ್ಥೆ ಕೃತಕವಾಗಿ ಕಟ್ಟಲ್ಪಟ್ಟ ಒಂದು ವ್ಯವಸ್ಥೆ. ನಿರ್ದಿಷ್ಟವಾದ, ಒತ್ತಾಯಪೂರ್ವಕವಾಗಿ ಮತ್ತು ಬಲವಂತದಿಂದ ಅಂಟಿಸಲ್ಪಟ್ಟ ಮನುಷ್ಯನ ಮೌಲ್ಯಗಳ ಶ್ರೇಣೀಕರಣ. ಅದು ಒಂದು ಗುಂಪಿನ ಪ್ರಾಬಲ್ಯ ಹಾಗು ಹಿರಿಮೆಯನ್ನು ಪ್ರತಿಪಾದಿಸಿ, ಇನ್ನೊಂದು ಗುಂಪನ್ನು ಕೀಳೆಂದು ಕರೆಯುವ ಪರಿಕಲ್ಪನೆಯನ್ನ ಮುಂದೊಡ್ಡುತ್ತದೆ. ಅದನ್ನು ನಿರ್ಧರಿಸುವ ಮಾನದಂಡಗಳು, ಮೊದಲನೆಯದಾಗಿ ಮನೆತನ ಮತ್ತು ವಂಶ ಪಾರಂಪರ್ಯತೆ. ಅದಲ್ಲದೇ ಕೆಲವು ಬದಲಾಗಲಾರದ ಗುಣಲಕ್ಷಣಗಳು. ಆ ಗುಣಲಕ್ಷಣಗಳು ಯಾವುದೇ ವ್ಯಕ್ತಿತ್ವಕ್ಕೆ ಎಲ್ಲ ರೀತಿಯಲ್ಲೂ ಅಸಂಬದ್ಧವಾಗಿದ್ದರೂ ಪ್ರಬಲ ಜಾತಿಗೆ ಸೇರಿದವರಿಗೆ ಅದು ಜೀವನ್‌ಮರಣದ ಪ್ರಶ್ನೆಯಂತೆ ಕಾಣುತ್ತದೆ ಮತ್ತು ಪ್ರಬಲ ಜಾತಿಯನ್ನು ಸೃಷ್ಟಿಸಿದವರೇ ಈ ಗುಣಲಕ್ಷಣಗಳನ್ನೂ ಸೃಷ್ಟಿಸಿದವರೂ ಆಗಿರುವುದರಿಂದ, ಜಾತಿ ವ್ಯವಸ್ಥೆ ಈ ಶ್ರೇಣೀಕರಿಸಿದ ಗುಂಪುಗಳನ್ನ ದೂರ ಇಡಲು ಬಹಳ ಕಠಿಣವಾದ ಗಡಿಗಳನ್ನು ಮತ್ತು ಕಟ್ಟುಪಾಡುಗಳನ್ನ ಉಪಯೋಗಿಸಿಕೊಳ್ಳುತ್ತದೆ” ಎನ್ನುತ್ತಾರೆ.

PC : Amazon Book Review, (ಇಸಾಬೆಲ್ ವಿಲ್ಕರ್ಸನ್)

ಇಲ್ಲಿ ಲೇಖಕಿ ಮೂರೂ ದೇಶಗಳ ಜಾತಿ ವ್ಯವಸ್ಥೆಯನ್ನ ವಿಶ್ಲೇಷಿಸುತ್ತಾರೆ. ಮೊದಲನೆಯದು ದುರಂತದ ಕಡೆಗೆ ವೇಗವಾಗಿ ಹೆಜ್ಜೆ ಇಟ್ಟ ಜರ್ಮನಿಯ ನಾಜಿ ಕಂಪನಿಯ ಜಾತಿ ವ್ಯವಸ್ಥೆ, ಎರಡನೆಯದು ಇನ್ನೂ ಪ್ರಸಕ್ತದಲ್ಲಿರುವ ಸಾವಿರಾರು ವರ್ಷಗಳ ಚರಿತ್ರೆಯನ್ನು ಹೊಂದಿರುವ ಭಾರತದ ಜಾತಿ ವ್ಯವಸ್ಥೆ, ಮತ್ತು ತನ್ನ ಮುಖವಾಡಗಳನ್ನ ಬದಲಾಯಿಸುತ್ತಿರುವ, ಸುಳಿವು ಕೊಡದ, ಜನಾಂಗೀಯ ಆಧಾರಿತ ಅಮೆರಿಕದ ಜಾತಿಯ ಪಿರಮಿಡ್ ವ್ಯವಸ್ಥೆ. ಈ ಪ್ರತಿಯೊಂದು ವ್ಯವಸ್ಥೆಗಳಲ್ಲಿ ಪ್ರಬಲರು ತಮ್ಮ ಅಮಾನವೀಯತೆಯ ನಡೆಗಳನ್ನು ಸಮರ್ಥಿಸಿಕೊಳ್ಳಲು ಕೀಳೆಂದು ಪರಿಗಣಿಸಲ್ಪಟ್ಟ ಜನಾಂಗವನ್ನ ಕಳಂಕಿತರನ್ನಾಗಿ ಮಾಡುವುದು ಪರಿಪಾಠವಾಗಿತ್ತು. ಜಾತಿ ವ್ಯವಸ್ಥೆಯೊಂದು ಶಕ್ತಿಯುತವಾಗಿ ಬೆಳೆಯುವುದು ಪವಿತ್ರ ಗ್ರಂಥಗಳಲ್ಲಿ ನಮೂದಿಸಿರುವ ದೈವಿಕವಾದ ಇಚ್ಚೆ ಮತ್ತು ಪ್ರಾಕೃತಿಕವಾದ ನಿಯಮ ಎಂದು ಸಮರ್ಥಿಸಿಕೊಳ್ಳಲಾಗುತ್ತಿತ್ತು ಮತ್ತು ಅದು ವಂಶಾವಳಿಯಿಂದ ಬಂದುತಹ ಸಂಸ್ಕೃತಿಯ ಕಾರಣದಿಂದ ಎನ್ನುವ ವಾದವನ್ನ ಮುಂದೊಡ್ಡಲಾಗುತ್ತಿತ್ತು.
ಇನ್ನೊಂದು ಅಧ್ಯಾಯದಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ಭಾರತಕ್ಕೆ ಬಂದಾಗ, ತಮ್ಮ ದೇಶದ ಆಫ್ರಿಕನ್ ಅಮೆರಿಕನ್ ಜನಾಂಗ ಎದುರಿಸುತ್ತಿರುವಂತಹ ಕಷ್ಟ ಕಾರ್ಪಣ್ಯಗಳನ್ನು ಇಲ್ಲಿನ ಶೋಷಿತವರ್ಗವೂ ಎದುರಿಸುತ್ತಿದೆ ಎನ್ನುವ ಸತ್ಯವನ್ನ ಕಂಡಿದ್ದರ ಬಗೆಗಿನ ಚರ್ಚೆ ಮಾಡುತ್ತದೆ.

ಒಂದು ದಿನ ಮಧ್ಯಾಹ್ನದಂದು ಲೂಥರ್ ಕಿಂಗ್ ಮತ್ತು ಅವರ ಪತ್ನಿ ಭಾರತದ ದಕ್ಷಿಣ ಭಾಗದ ತುದಿಗೆ ಪ್ರಯಾಣ ಬೆಳೆಸುತ್ತಾರೆ. ಅವರು ಹೋಗುವುದು ಕೇರಳದ ತ್ರಿವೆಂಡ್ರಮ್ ಪಟ್ಟಣಕ್ಕೆ. ಅಲ್ಲಿ ಅವರು ಅಸ್ಪೃಶ್ಯ ವಿದ್ಯಾರ್ಥಿಗಳಿದ್ದ ಪ್ರೌಢಶಾಲೆಯೊಂದಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನ ಮುಖ್ಯೋಪಾಧ್ಯಾಯರು ಕಿಂಗ್ ದಂಪತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದು ಈ ರೀತಿ: “ಯುವ ವಿದ್ಯಾರ್ಥಿಗಳೇ ಅಮೆರಿಕದಿಂದ ಬಂದಿರುವ ನಿಮ್ಮ ಸಹಅಸ್ಪೃಶ್ಯನೊಬ್ಬರನ್ನು ನಿಮಗೆ ಪರಿಚಯಿಸುತ್ತಿದ್ದೇನೆ” ಎಂದು.

ಈ ಸಮಯದಲ್ಲಿ ಕಿಂಗ್ ಅವರಿಗೆ ಒಂದು ರೀತಿಯ ಮನಃಪರಿವರ್ತನೆಯಾಗುತ್ತದೆ. ಅವರಿಗೆ ಭಾರತೀಯ ಜಾತಿ ವ್ಯವಸ್ಥೆಯ ನಿಜ ಪರಿಚಯವಾಗುತ್ತದೆ. ಆಗ ಅವರು ತಮಗೆ ತಾವೇ ಹೇಳಿಕೊಳ್ಳುವುದು, “ಹೌದು, ನಾನೊಬ್ಬ ಅಸ್ಪೃಶ್ಯ, ಅಮೆರಿಕ ದೇಶದಲ್ಲಿರುವ ಪ್ರತಿಯೊಬ್ಬ ನೀಗ್ರೋನೂ ಅಸ್ಪೃಶ್ಯನೇ” ಎಂದು. ಈ ರೀತಿಯ ಅನೇಕ ಜಾತಿವ್ಯವಸ್ಥೆಯ ಭೀಕರತೆಯ ಉಪಖ್ಯಾನಗಳು ಈ ಪುಸ್ತಕದಲ್ಲಿ ಪ್ರತಿಬಿಂಬಿತವಾಗುತ್ತದೆ. ಇನ್ನೊಂದು ಅಧ್ಯಾಯದಲ್ಲಿ ಹೇಗೆ ಈ ಜನಾಂಗೀಯ ದ್ವೇಷದ ಪಂಥಕ್ಕೆ ಬುನಾದಿ ಹಾಕಲಾಯಿತು ಅನ್ನುವುದರ ಬಗ್ಗೆ ಚರ್ಚಿಸಲಾಗಿದೆ. 1913ರಲ್ಲಿ ಒಬ್ಬ ಪ್ರಮುಖ ಶಿಕ್ಷಣ ತಜ್ಞ ಥಾಮಸ್ ಪಿಯರ್ಸ್ ಬೈಲಿ ಅನ್ನುವವನು, ಅಮೆರಿಕದ ದಕ್ಷಿಣ ಪ್ರಾಂತ್ಯದಲ್ಲಿ ಹೇಗೆ ಜನಾಂಗೀಯ ದ್ವೇಷದ ಪಂಥವನ್ನ ಸೃಷ್ಟಿಸುವ ಕಾರ್ಯದಲ್ಲಿ ತನ್ನನ್ನು ತಾನೇ ಅಳವಡಿಸಿಕೊಂಡ ಎನ್ನುವುದನ್ನು ವಿಲ್ಕರ್ಸನ್ ವಿವರವಾಗಿ ದಾಖಲಿಸುತ್ತಾರೆ.

ಅದೇ ವರ್ಷ ಭಾರತದ ಜಾತಿವ್ಯವಸ್ಥೆಯಲ್ಲಿ ಅತ್ಯಂತ ಕೀಳೆಂದು ಪರಿಗಣಿಸಿದ ಅಸ್ಪೃಶ್ಯಜಾತಿಯಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಬಾಂಬೆಯಿಂದ ನ್ಯೂಯಾರ್ಕ್ ನಗರದಲ್ಲಿ ಕಾಲಿರಿಸುತ್ತಾರೆ. ಆ ಶರದೃತುವಿನಲ್ಲಿ ಭೀಮರಾವ್ ಅಂಬೇಡ್ಕರ್ ಅಮೆರಿಕ ದೇಶಕ್ಕೆ ಬರುವುದು ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನ ಅಭ್ಯಸಿಸಲು. ಅವರು ತಮ್ಮ ಗಮನವನ್ನೆಲ್ಲಾ ಕೇಂದ್ರೀಕರಿಸಿದ್ದು ಅಮೆರಿಕದ ಜನಾಂಗೀಯ ಮತ್ತು ಜಾತಿ ವ್ಯವಸ್ಥೆಯನ್ನ ಅಭ್ಯಸಿಸುವ ಕಡೆಗೆ. ನ್ಯೂಯಾರ್ಕ್ ನಗರದ ಕೆಳವರ್ಗದ ಜನ ವಾಸಿಸುವ ಸ್ಥಳದ ಹತ್ತಿರವೇ ವಾಸಿಸುತ್ತಿದ್ದ ಅಂಬೇಡ್ಕರ್, ತಮ್ಮ ಜನಾಂಗದ ಪ್ರತಿರೂಪವಾದ ಜನಾಂಗದ ಪರಿಸ್ಥಿತಿಯನ್ನ ಅಭ್ಯಸಿಸಿ ಥೀಸಿಸ್‌ಅನ್ನು ಬರೆದು ಮುಗಿಸುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ಜನಾಂಗೀಯ ದ್ವೇಷದ ಕೇಂದ್ರಬಿಂದುವಾದ ದಕ್ಷಿಣ ಪ್ರಾಂತಕ್ಕೆ ಗೌರವಾರ್ಪಣೆಯ ಸಲುವಾಗಿ ’ಬರ್ಥ್ ಆಫ್ ಎ ನೇಶನ್’ ಅನ್ನುವ ಚಿತ್ರದ ಬಿಡುಗಡೆಯಾಗುತ್ತದೆ. ನಂತರ ಅಂಬೇಡ್ಕರ್ ಅವರು ಲಂಡನ್ನಿನಲ್ಲಿ ಅಭ್ಯಯಿಸಿ ಅಸ್ಪೃಶ್ಯರ ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿಕೊಳ್ಳಲು ಭಾರತಕ್ಕೆ ಹಿಂದಿರುಗುತ್ತಾರೆ.

1870ರಲ್ಲಿ ಅಮೆರಿಕದಲ್ಲಿ ಗುಲಾಮಗಿರಿಯು ಕಾನೂನುಬದ್ಧವಾಗಿ ಅಂತ್ಯಗೊಳ್ಳುವ ಸಮಯದಲ್ಲೇ ಭಾರತದಲ್ಲಿ ಜ್ಯೋತಿಬಾ ಫುಲೆ ಎನ್ನುವ ಸಾಮಾಜಿಕ ಸುಧಾರಕರೊಬ್ಬರು ತಲೆಎತ್ತಿ ನಿಲ್ಲುತ್ತಾರೆ. ಅವರಿಗೆ ಸ್ಫೂರ್ತಿದಾಯಕವಾಗಿದ್ದು ಅಮೆರಿಕದ ಜಾತಿ ನಿರ್ಮೂಲನಾವಾದಿಗಳ ಒಂದು ನಡೆಯಿಂದ. ಅನೇಕ ದಶಕಗಳ ನಂತರ 1946ರ ಬೇಸಿಗೆಯಲ್ಲಿ ವಿಶ್ವಸಂಸ್ಥೆಗೆ ಅಮೆರಿಕದ ಕಪ್ಪುಜನಾಂಗೀಯರು ತಮ್ಮನ್ನು ಸಂರಕ್ಷಿತ ಅಲ್ಪಸಂಖ್ಯಾತರು ಎಂದು ಪರಿಗಣಿಸಬೇಕು ಎಂದು ಬೇಡಿಕೆ ಸಲ್ಲಿಸಿದಾಗ ಬೀಮರಾವ್ ಅಂಬೇಡ್ಕರ್ ಅವರು ಆ ಕಾಲದ ಪ್ರಚಲಿತ ಆಫ್ರಿಕನ್ ಅಮೆರಿಕನ್‌ರ ಒಬ್ಬ ಮಹಾನ್ ಪ್ರಜ್ಞಾವಂತ ಡಬಳ್ಯು. ಇ. ಬಿ. ಡು. ಬಾಯ್ಸ್ ಅವರನ್ನು ಸಂಪರ್ಕಿಸುತ್ತಾರೆ. ಅವರು ಡು ಬಾಯ್ಸ್‌ಗೆ ಹೇಳಿದ್ದು, “ನಾನು ಸಾಗರದಾಚೆಯ ನೀಗ್ರೊಗಳ ಸಮಸ್ಯೆಯ ವಿದ್ಯಾರ್ಥಿ” ಮತ್ತು “ನಮ್ಮ ಜಾತಿಯ ಹಾಗೂ ಅವರಿಗೂ ಸಾಮಾನ್ಯವಾಗಿರುವ ಭವಿಷ್ಯದ ಸಮಸ್ಯೆಗಳನ್ನು ಗುರುತಿಸಿದ್ದೇನೆ” ಎಂದು. “ಭಾರತದ ಅಸ್ಪೃಶ್ಯರ ಪರಿಸ್ಥಿತಿ ಮತ್ತು ಅಮೆರಿಕದ ನೀಗ್ರೊಗಳ ಪರಿಸ್ಥಿತಿಗಳಲ್ಲಿ ಬಹಳಷ್ಟು ಸಾಮ್ಯತೆ ಇದೆ” ಅಂತ ಅಂಬೇಡ್ಕರ್ ಡು ಬಾಯ್ಸ್ ಅವರಿಗೆ ಪತ್ರ ಬರೆದರು.

ಡು ಬಾಯ್ಸ್ ಎರಡೂ ದೇಶಗಳಲ್ಲಿನ ಶೋಷಿತ ವರ್ಗದ ಪರವಾಗಿ ಮಾತನಾಡಿದ್ದರು ಮತ್ತು ಆ ಶೋಷಿತ ವರ್ಗಗಳಲ್ಲಿನ ಅಸ್ತಿತ್ವದಲ್ಲಿ ಎರಡು ರೀತಿಯ ಪ್ರಜ್ಞೆಗಳು ಇರುವುದನ್ನ ಗುರುತಿಸಿದರು. “ಅದ್ಯಾಕೆ ದೇವರು ನನ್ನನ್ನು ನನ್ನ ಮನೆಯಲ್ಲೇ ಪರಕೀಯ ಮತ್ತು ಬಹಿಷ್ಕೃತನನ್ನಾಗಿ ಮಾಡಿದ?” ಅನ್ನುವ ಪ್ರಶ್ನೆಯಿಂದ ಪ್ರಭಾವಿತರಾಗಿ ಡು ಬಾಯ್ಸ್ ದಶಕಗಳ ಮೊದಲೇ ಭಾರತದಲ್ಲಿನ ಜಾತಿ ಪರಿಕಲ್ಪನೆಯನ್ನ ತಿಳಿದುಕೊಂಡು ತಮ್ಮ ಜನಗಳ ಕೂಗನ್ನ ಅರ್ಥಪೂರ್ಣವಾದ ದಾರಿಗೆ ತರುವ ಪ್ರಯತ್ನ ಮಾಡಿದ್ದರು.

ಈ ಪುಸ್ತಕದಲ್ಲಿ ಹಲವಾರು ಮೇಲ್ಜಾತಿಗಳ ದ್ವೇಷ ಮತ್ತು ಹಿಂಸೆಯನ್ನೊಳಗೊಂಡ ಘಟನೆಗಳನ್ನು ವಿವರಿಸಲಾಗಿದೆ. ಆದರೆ ಬಹಳಷ್ಟು ಬಲಿಷ್ಠ ಜಾತಿಯ ಜನರಿಗೆ ಶೋಷಿತವರ್ಗದ ಬಗ್ಗೆ ಅನುಕಂಪವಿದ್ದರೂ, ಅನೇಕ ಸ್ತರಗಳಲ್ಲಿ ಅವರಿಗೆ ವಂಶೀಯವಾಗಿ ಅಂಟಿಕೊಂಡು ಬಂದಿರುವ ತಾರತಮ್ಯ ಮಾಡುವ ಧೋರಣೆ ಅವರ ಸುಪ್ತ ಪ್ರಜ್ಞೆಯಲ್ಲಿ ಅಡಗಿ ಕೂತಿರುತ್ತದೆ ಮತ್ತು ಅದು ಅವರಲ್ಲಿ ತಾತ್ಕಾಲಿಕವಾದರೂ ಬಂದು ಹೋಗುತ್ತಲೇ ಇರುತ್ತದೆ.

ಇಸಬೆಲ್ ವಿಲ್ಕರ್ಸನ್ ಈ ಪುಸ್ತಕದಲ್ಲಿ ಜಾತೀಯ ದೌರ್ಜನ್ಯದ ಅನೇಕ ಮುಖಗಳನ್ನ ಚಿತ್ರಿಸಿ ತೋರಿಸಿದ್ದಾರೆ ಹಾಗೂ ಜಗತ್ತಿನ ಹಲವು ರೀತಿಯ ಜನಾಂಗೀಯ ತಾರತಮ್ಯಗಳನ್ನು ಜಾತಿ ವ್ಯವಸ್ಥೆಯ ಮೂಲಕ ನೋಡಿದ್ದಾರೆ. ಪುಸ್ತಕ ಓದಿದ ನಂತರ ನಮ್ಮನ್ನು ಹೆಚ್ಚು ಕಾಡುವುದು ಒಂದು ಸಂಗತಿ: ಅದು ’ಪಾಪ ಪ್ರಜ್ಞೆ’. ಈ ಜಾತೀಯತೆ ಮತ್ತು ಜನಾಂಗೀಯ ದ್ವೇಷದ ವಿಷಬೀಜವನ್ನ ಮನುಷ್ಯನ ಆಂತರ್ಯದಿಂದ ಸಂಪೂರ್ಣವಾಗಿ ಕಿತ್ತು ದಹಿಸಿಬಿಡಬಹುದೇ ಅನ್ನುವುದೊಂದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ!

ಕೆ ಶ್ರೀನಾಥ್

ಕೆ ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...