Homeಕರ್ನಾಟಕಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ವಿಶೇಷ ಅಭಿವೃದ್ಧಿ ಯೋಜನೆ ರದ್ದು; ಆಘಾತಕಾರಿ ನಡೆ

ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ವಿಶೇಷ ಅಭಿವೃದ್ಧಿ ಯೋಜನೆ ರದ್ದು; ಆಘಾತಕಾರಿ ನಡೆ

- Advertisement -
- Advertisement -

ಇತ್ತೀಚಿಗೆ ಕರ್ನಾಟಕ ಸರಕಾರ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ವಿಶೇಷ ಅಭಿವೃದ್ದಿ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವದು ಅತ್ಯಂತ ಆಘಾತಕಾರಿ ಹಾಗೂ ಪ್ರಾದೇಶಿಕ ತಾರತಮ್ಯ ನಿವಾರಣೆಗೆ ನೀಡಿದ ಕೊಡಲಿಪೆಟ್ಟು ಎನ್ನಬಹುದು. ರಾಜ್ಯದ ಅಂದಿನ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿದ್ದು, ಆ ಹಿಂದುಳಿದ ತಾಲ್ಲೂಕುಗಳ ನಡುವೆಯೇ ಅಭಿವೃದ್ಧಿಯಲ್ಲಿ ತಾರತಮ್ಯವಿರುವದನ್ನು ಈ ವರದಿ ದಾಖಲಿಸಿತ್ತು. ಈ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿ ಸರಕಾರದ ಕರ್ತವ್ಯವಾಗಿದೆ. ಆದರೆ, ಸರಕಾರ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ವಿಶೇಷ ಅಭಿವೃದ್ಧಿ ಯೋಜನೆಯಿಂದ ಯಾವುದೇ ಉಪಯೋಗವಾಗಿಲ್ಲವೆಂದು ನಿರ್ಣಯಿಸಿರುವದು ಸರಿಯಾದ ನಿರ್ಣಯವಲ್ಲ. ವಿಶೇಷ ಅಭಿವೃದ್ಧಿ ಯೋಜನೆ ಅನುಷ್ಠಾನ ಯಾವ ಮಟ್ಟದಲ್ಲಿ ಮತ್ತು ಯಾವ ಅವಧಿಯಲ್ಲಿ ಮಾಡಲಾಗಿದೆ ಎಂಬ ವಿಚಾರದ ಹಿನ್ನಲೆಯಲ್ಲಿ ಇದನ್ನು ಚರ್ಚೆಗೆ ಒಡ್ಡಬೇಕಿದೆ.

ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಕಂಡುಬಂದ ವಾಸ್ತವ ಅಭಿವೃದ್ಧಿ ಏನೇ ಇದ್ದರೂ 1999-2000ದ ವೇಳೆಗೆ ರಾಜ್ಯದ ತಲಾವಾರು ಸರಾಸರಿ ಆದಾಯ 16,654 ರೂ. ಗಳಾಯಿತು. ಆದರೆ, ವ್ಯತ್ಯಾಸ ನೋಡಿ: ಬೀದರನಲ್ಲಿ ಇದು 9902 ರೂ. ಗಳಿದ್ದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ 27,984 ರೂ. ಇದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕಗಳ ನಡುವಣ ಅಸಮತೋಲನ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಕಂಡುಬಂದ ಅಸಮಾಧಾನಕ್ಕೆ ಪ್ರತಿಯಾಗಿ ಸರಕಾರವು 1956ರಿಂದ ಬೇರೆಬೇರೆ ವಿಧಗಳಲ್ಲಿ ಪ್ರತಿಕ್ರಿಯಿಸುತ್ತಲೇ ಬಂದಿದೆ. ಆದರೂ 2000ದವರೆಗೂ ಪ್ರಾದೇಶಿಕ ಅಸಮತೋಲನದ ಬಗ್ಗೆ ಯಾವುದೇ ಸಮಗ್ರ ನಿಲುವು ಕಂಡುಬಂದಿರಲಿಲ್ಲ. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ಸರಕಾರದಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನಗಳ ಪರಿಹಾರಕ್ಕಾಗಿ ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಯಿತು.

ಎಸ್.ಎಂ ಕೃಷ್ಣ

ಅಭಿವೃದ್ಧಿಯ ಮಟ್ಟದಲ್ಲಿ ಜಿಲ್ಲೆಜಿಲ್ಲೆಗಳ ನಡುವೆ, ತಾಲ್ಲೂಕುತಾಲ್ಲೂಕುಗಳ ನಡುವೆ, ಪ್ರದೇಶಪ್ರದೇಶಗಳ ನಡುವೆ, ಉತ್ತರ ದಕ್ಷಿಣ ಕರ್ನಾಟಕಗಳ ನಡುವಣ ಅಸಮಾನತೆಯನ್ನು ತಗ್ಗಿಸಲು ಸೂಕ್ತ ಅಭಿವೃದ್ಧಿ ವಿಧಾನವನ್ನು ಶಿಫಾರಸ್ಸು ಮಾಡುವದು ಹಾಗೂ ಸಂತುಲಿತ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಇರುವ ಕಾರ್ಯವಿಧಾನದ ಅನುಷ್ಠಾನಕ್ಕಾಗಿ ಸಾಂಸ್ಥಿಕ ಕಾರ್ಯತಂತ್ರವನ್ನು ರಚಿಸುವದು ಈ ಸಮಿತಿಯ ಉದ್ದೇಶವಾಗಿತ್ತು. ಅಸಮತೋಲನಗಳನ್ನು ಗುರುತಿಸಲು ಸಮಿತಿಯು ಒಂದು ವೈಜ್ಞಾನಿಕ ಹಾಗೂ ಸಮಗ್ರ ವಿಧಾನವನ್ನು ಅನುಸರಿಸಿದೆ ಎಂದು ಹೇಳಬಹುದು. ಸಮಿತಿಯು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯತಿಗಳೊಡನೆ ಹಾಗೂ ಪ್ರಾದೇಶಿಕ ಅಸಮಾನತೆಯ ಬಗ್ಗೆ ಕಾಳಜಿ ಇರುವ ವ್ಯಕ್ತಿ, ಸಂಘ ಸಂಸ್ಥೆಗಳೊಡನೆ ಚರ್ಚೆ ನಡೆಸಿದೆ. ಈ ಸಮಿತಿಯು ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಿಲ್ಲೆ ಅಥವಾ ಒಂದು ಪ್ರದೇಶವನ್ನು ಮೂಲಭೂತ ಘಟಕವೆಂದು ಪರಿಗಣಿಸಲಿಲ್ಲ; ಅವರೇ ಹೇಳಿರುವಂತೆ ಯಾವುದೇ ಒಂದು ಪ್ರದೇಶದ ಎಲ್ಲ ಜಿಲ್ಲೆಗಳು ಅಥವಾ ತಾಲ್ಲೂಕು ಏಕರೂಪವಾಗಿ ಅಭಿವೃದ್ಧಿ ಹೊಂದಿವೆಯೆಂದಾಗಲಿ ಅಥವಾ ಏಕರೂಪವಾಗಿ ಹಿಂದುಳಿದಿವೆ ಎಂದು ಹೇಳುವದಾಗಲಿ ಸಾಧ್ಯವಿಲ್ಲವೆಂದು ಭಾವಿಸಿದೆ. ಆದ್ದರಿಂದ ತಾಲ್ಲೂಕನ್ನು ಮೂಲಭೂತ ಘಟಕವೆಂದು ಪರಿಗಣಿಸಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಯಾವ ಮಟ್ಟದಲ್ಲಿದೆಯೆಂದು ಸೂಕ್ತ ವಿವರಣೆಯೊಂದಿಗೆ ಸರಕಾರದ ಗಮನ ಸೆಳೆದ ವರದಿಯೆಂದೇ ಪ್ರಚಲಿತವಾದದ್ದು ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ 2002ರಲ್ಲಿ ನೀಡಿದ ವರದಿ. ಆ ವರದಿಯಂತೆ ಅಭಿವೃದ್ಧಿಯ ಅಸಮಾನತೆ ಎನ್ನುವದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ. ಆದರೆ, ಹೈದ್ರಾಬಾದ ಕರ್ನಾಟಕದಲ್ಲಿ ಅತೀ ಹೆಚ್ಚು ಅಸಮಾನತೆ ಕಂಡುಬಂದಿದೆ ಎಂದು ತಿಳಿಸಿದೆ. ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳು ಹಿಂದುಳಿದಿವೆ ಎಂದು Comprehensive Composite Development Index(CCDI) ಹಾಗೂ Cumulative Deprivation Index(CDI) ಆಧಾರದಲ್ಲಿ ನಿರ್ಧರಿಸಿದೆ. ಈ 114 ತಾಲ್ಲೂಕುಗಳನ್ನು CCDI ಅಂಶಗಳ ಅನುಸಾರ ಮೂರು ಭಾಗಗಳಾಗಿ ವರ್ಗೀಕರಿಸಿ, 39 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದ ತಾಲ್ಲೂಕುಗಳೆಂದು ಅವುಗಳ CCDI ಅಂಶ 0.53ರಿಂದ 0.79ಕ್ಕೂ ಕಡಿಮೆ ಇರುವ, 40 ತಾಲ್ಲೂಕುಗಳನ್ನು ಅತೀ ಹಿಂದುಳಿದ ತಾಲ್ಲೂಕುಗಳೆಂದು ಅವುಗಳ CCDI ಅಂಶ 0.80ರಿಂದ 0.88ಕ್ಕೂ ಕಡಿಮೆ ಇರುವ ಹಾಗೂ 35 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ಅವುಗಳ CCDI ಅಂಶ 0.89ರಿಂದ 0.99ಕ್ಕೂ ಕಡಿಮೆ ಇರುವ ತಾಲ್ಲೂಕುಗಳನ್ನು ವರ್ಗೀಕರಿಸಿದೆ. ಉಳಿದ 61 ತಾಲ್ಲೂಕುಗಳನ್ನು ಸಾಪೇಕ್ಷವಾಗಿ ಅಭಿವೃದ್ಧು ಹೊಂದಿದ ತಾಲ್ಲೂಕುಗಳೆಂದು ಹೇಳಿದ್ದು ಅವುಗಳ CCDI ಅಂಶ 1.0ರಿಂದ 1.96ವರೆಗೆ ಇದೆ.

ಕುಮಾರಸ್ವಾಮಿ

ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ನೀಡಿದ ವರದಿಯಂತೆ, 39 ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ 21 ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ (ಕಲ್ಯಾಣ ಕರ್ನಾಟಕದ ಒಟ್ಟು ತಾಲ್ಲೂಕುಗಳು 31). ಬೆಂಗಳೂರು ವಿಭಾಗದಲ್ಲಿ 11 ಅತ್ಯಂತ ಹಿಂದುಳಿದ ತಾಲ್ಲೂಕುಗಳು, ಬೆಳಗಾವಿ ವಿಭಾಗದಲ್ಲಿ 5 ಅತ್ಯಂತ ಹಿಂದುಳಿದ ತಾಲ್ಲೂಕುಗಳು ಹಾಗೂ ಮೈಸೂರು ವಿಭಾಗದಲ್ಲಿ 2 ಅತ್ಯಂತ ಹಿಂದುಳಿದ ತಾಲ್ಲೂಕುಗಳಿವೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವ 31 ತಾಲ್ಲೂಕುಗಳ ಪೈಕಿ 28 ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳಾಗಿವೆ (21 ಅತ್ಯಂತ ಹಿಂದುಳಿದ, 5 ಅತೀ ಹಿಂದುಳಿದ ಹಾಗೂ 2 ಹಿಂದುಳಿದ ತಾಲ್ಲೂಕುಗಳು). ರಾಜ್ಯದಲ್ಲಿ ಒಟ್ಟು 61 ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಲ್ಲಿದ್ದು, ಅವುಗಳಲ್ಲಿ ಕೇವಲ 3 ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಈ 3 ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಲ್ಲಿ ಒಂದು ಬೀದರ ಜಿಲ್ಲೆಯ ಬೀದರ ತಾಲ್ಲೂಕು ಹಾಗೂ ಎರಡು ತಾಲ್ಲೂಕುಗಳು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಮತ್ತು ಹೊಸಪೇಟೆ ತಾಲ್ಲೂಕುಗಳಾಗಿವೆ. ಕಲ್ಯಾಣ ಕರ್ನಾಟಕದ ಗುಲಬರ್ಗಾ, ಯಾದಗೀರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಒಂದೇಒಂದು ತಾಲ್ಲೂಕು ಕೂಡ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಪಟ್ಟಿಯಲ್ಲಿಲ್ಲ.

ಮೈಸೂರು ವಿಭಾಗದಲ್ಲಿ ಇರುವ ಮೂರು ಜಿಲ್ಲೆಗಳಲ್ಲಿ (ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು) ಒಂದೇಒಂದು ತಾಲ್ಲೂಕು ಕೂಡ ಹಿಂದುಳಿದ ಪಟ್ಟಿಯಲ್ಲಿಲ್ಲ. ಈ ಮಟ್ಟದಲ್ಲಿ ಪ್ರಾದೇಶಿಕ ಅಸಮಾನತೆ ಕರ್ನಾಟಕ ರಾಜ್ಯದಲ್ಲಿದೆ. ಅತ್ಯಂತ ಸಂಪದ್ಭರಿತ ನಾಡೆಂದು ಕಡೆಯಲ್ಪಡುವ ಕರ್ನಾಟಕ ರಾಜ್ಯದ ಪರಿಸ್ಥಿತಿ ಹೀಗಿರುವಾಗ, ಇಲ್ಲಿಯವರೆಗಿನ ಸರಕಾರಗಳಿಗೆ ಮತ್ತು ಸದನದಲ್ಲಿದ್ದ ಎಲ್ಲ ಜನಪ್ರತಿನಿಧಿಗಳಿಗೆ ಈ ವರದಿಯನ್ನು ಜಾರಿಗೊಳಿಸುವ ಅನಿವಾರ್ಯತೆ ಮತ್ತು ಬದ್ಧತೆಯಿರಬೇಕಿತ್ತು.

ಡಾ.ಡಿ.ಎಂ.ನಂಜುಂಡಪ್ಪನವರ ಉನ್ನತಾಧಿಕಾರ ಸಮಿತಿ ನೀಡಿದ ವರದಿಯಲ್ಲಿರುವ 114 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಸಮಿತಿಯು ಒಟ್ಟು ಎಂಟು ವರ್ಷಗಳ ಕಾಲಾವಧಿಯಲ್ಲಿ ಕೈಗೊಳ್ಳಬಹುದಾದ ಕ್ರಿಯಾಯೋಜನೆ ಮತ್ತು ರಾಜ್ಯದಲ್ಲಿ ಅಸಮಾನತೆಯನ್ನು ಹೊಗಲಾಡಿಸುವ ನೀಲಿನಕ್ಷೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು. ಸದರಿ, ನೀಲಿ ನಕ್ಷೆಯಂತೆ 2003ರಿಂದ 2011ರವರೆಗೆ ಎಂಟು ವರ್ಷಗಳ ಕಾಲ ಸರಕಾರ ಈ 114 ಹಿಂದುಳಿದ ತಾಲ್ಲೂಕುಗಳಿಗೆ ಅಂದಿನ ಬಜೆಟ್ ಪ್ರಮಾಣದಂತೆ 16000 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಬೇಕು; ಮತ್ತು ಸಾಮಾನ್ಯ ಬಜೆಟ್ ಮೂಲಕ ಬರುವ 15000 ಕೋಟಿ ರೂಪಾಯಿ ಅನುದಾನವನ್ನು ಸಮರ್ಪಕವಾಗಿ ಬಳಿಸಿದಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಬಹುದೆಂದು ತಿಳಿಸಲಾಗಿತ್ತು.

ಈ ಎಂಟು ವರ್ಷಗಳ ವಿಶೇಷ ಅಬಿವೃದ್ಧಿ ಯೋಜನೆಯ ಅನುದಾನವನ್ನು ಡಾ.ಡಿ.ಎಂ.ನಂಜುಂಡಪ್ಪನವರ ವರದಿಯು ನಿರ್ದಿಷ್ಟವಾಗಿ ಇಂತಿಂತಹ ವಲಯಗಳಿಗೆ ಮತ್ತು ಯೋಜನೆಗಳಿಗೆ, ವಿಶೇಷ ಅಭಿವೃದ್ಧಿ ಯೋಜನೆಯಡಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿತ್ತು. ವರದಿ ಗುರುತಿಸಿರುವ ವಲಯಗಳಲ್ಲಿ ಕೃಷಿ (ಎ.ಪಿ.ಎಂ.ಸಿ., ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಹೈನುಗಾರಿಕೆ), ಗ್ರಾಮೀಣಾಭಿವೃದ್ದಿ (ಗ್ರಾಮೀಣ ರಸ್ತೆ, ಜಿ.ಪಂ.ರಸ್ತೆ, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ವಸತಿ), ನೀರಾವರಿ, ಸಾಮಾಜಿಕ ಸೇವೆಗಳು (ಶಿಕ್ಷಣ, ಆರೋಗ್ಯ, ಕ್ರೀಡೆ, ಪ್ರವಾಸೋದ್ಯಮ, ನಗರಾಭಿವೃದ್ಧಿ, ಮಹಿಳಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ), ಸಾರಿಗೆ (ರೈಲ್ವೆ, ವಿಮಾನ, ಬಂದರು), ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುತ್, ಆರ್ಥಿಕ ಸೇವೆ, ಕೈಗಾರಿಕೆ ಮತ್ತು ಖನಿಜ ಎಂದು ಅಭಿವೃದ್ಧಿಯಲ್ಲಿ ಹಿಂದುಳಿದ ವಲಯಗಳನ್ನು ಗುರುತಿಸಿ ಯೋಜನೆ ರೂಪಿಸಿದ್ದರು.

ಸಿದ್ದರಾಮಯ್ಯ

2002ರಲ್ಲಿ ರಾಜ್ಯ ಸರಕಾರದ ಬಜೆಟ್ ಗಾತ್ರ ಸುಮಾರು 17,328.00 ಕೋಟಿ ರೂ. ಮಾತ್ರ, ಅದರಂತೆ ಒಟ್ಟು 16,000 ಕೋಟಿ ರೂ. (ಬಜೆಟ್ ಗಾತ್ರಕ್ಕೆ ಶೇ.92.33ರಷ್ಟು) ವಿಶೇಷ ಅನುದಾನ ನೀಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ. ಆದರೆ, ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅಂದಿನ ಸರಕಾರ ತಕ್ಷಣದಲ್ಲಿ ಜಾರಿಗೊಳಿಸಲು ಮನಸ್ಸು ಮಾಡಲಿಲ್ಲ. ಮುಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದ ಸರಕಾರ 2007-08ನೇ ಆರ್ಥಿಕ ವರ್ಷದಲ್ಲಿ ಸುಮಾರು 1571.50 ಕೋಟಿ ರೂ. ಅನುದಾನದೊಂದಿಗೆ ವರದಿಯನ್ನು ಅನುಷ್ಠಾನ ಮಾಡಲು ನಿರ್ಧರಿಸಿದಾಗ ರಾಜ್ಯದ ಬಜೆಟ್ ಗಾತ್ರ 40,762.00 ಕೋಟಿ ರೂ. ಆಗಿತ್ತು. ಅಂದರೆ, ವರದಿ ನೀಡಿದಾಗ ಇದ್ದಂತಹ ಬಜೆಟ್ ಗಾತ್ರ, ವರದಿ ಅನುಷ್ಠಾನ ಮಾಡಲು ಪ್ರಾರಂಭವಾದಾಗ ಎರಡು ಪಟ್ಟು ಹೆಚ್ಚಾಯಿತು. ಅದರಂತೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಕ್ರಿಯಾಯೋಜನೆಯ ಅನುದಾನ ಎರಡು ಪಟ್ಟು ಹೆಚ್ಚಾಗಬೇಕಿತ್ತು, ಅಂದರೆ ವರ್ಷಕ್ಕೆ 2000 ಕೋಟಿ ರೂ. ವಿಶೇಷ ಅನುದಾನದ ಬದಲಾಗಿ 4000 ಕೋಟಿ ರೂ.ಗೆ ಹೆಚ್ಚಿಸಬೇಕಾಗಿತ್ತು; ದುರದೃಷ್ಟವಶಾತ್ ಅದಾಗಲಿಲ್ಲ. ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚಾಗುತ್ತ ಹೋಗಿತ್ತು; ಇದರಿಂದ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು ಹೆಚ್ಚು ಅಭಿವೃದ್ಧಿ ಹೊಂದುತ್ತ ಹೋಗಿ ಹಿಂದುಳಿದ ತಾಲ್ಲೂಕುಗಳು ಹಿಂದುಳಿಯುವ ಸಂಪ್ರದಾಯ ಮುಂದುವರಿಯುತ್ತ ಬಂತು. 2022-23ನೇ ಸಾಲಿನ ಬಜೆಟ್ ಗಾತ್ರ 2,56,000 ಕೋಟಿ ರೂವರೆಗೂ ಬಂತು, ಅಂದರೆ 2002-03ರ ಬಜೆಟ್ ಗಾತ್ರಕ್ಕಿಂತ ಸುಮಾರು 12 ಪಟ್ಟು ಹೆಚ್ಚಾಗಿದ್ದರೂ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ವಿಶೇಷ ಅಭಿವೃದ್ಧಿ ಯೋಜನೆಗೆ 2000-3000 ಕೋಟಿ ರೂ. ಮಿತಿಯೊಳಗೆ ಅನುದಾನ ನೀಡಿ ಕೈತೊಳೆದುಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿರುವ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿರುವ ಅವಕಾಶವನ್ನು ಸರಕಾರವೇ ಹಾಳು ಮಾಡಿಕೊಂಡಂತಾಗಿದೆ ಎಂದು ಹೇಳಬಹುದು. ಆದರೆ, ರಾಜ್ಯದ ಜನರ ನಿರೀಕ್ಷೆಯಂತೆ ಇಂದಲ್ಲ ನಾಳೆ ಈ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ತೊಡೆದುಹಾಕಲೇಬೇಕು.

ಹಿಂದಿನ ಬಿಜೆಪಿ ಸರಕಾರವಿದ್ದಾಗ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿದ್ದ ನೀರಾವರಿ ಕ್ಷೇತ್ರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಕೆಬಿಜೆಎನ್‌ಎಲ್/ಕೆಎನ್‌ಎನ್‌ಎಲ್ ಕ್ಯಾಪಿಟೆಲ್ ಹಣ ಹೊಂದಿಸಲು, ನಬಾರ್ಡ್ ಯೋಜನೆಗೆ ಬಳಸಲಾಗಿದೆ; ಶಿಕ್ಷಣ ಇಲಾಖೆಗೆ ಮೀಸಲಾದ ಅನುದಾನವನ್ನು ನಬಾರ್ಡ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ್, ವಿದ್ಯಾರ್ಥಿಗಳಿಗೆ ಧನ ಸಹಾಯ ಮತ್ತು ಶುಲ್ಕ ಮರುಪಾವತಿ ಮತ್ತು ವಿದ್ಯಾ ವಿಕಾಸ ಯೋಜನೆಗೆ ಹಾಗೂ ಹಿಂದುಳಿದ ತಾಲ್ಲೂಕುಗಳಲ್ಲಿ 8ನೇ ತರಗತಿಯ ಶಾಲಾ ಮಕ್ಕಳ ಸೈಕಲ್ ಖರೀದಿಸಲು ಬಳಸಲಾಗಿದೆ; ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿಗೆ ಬಳಸಬೇಕಾದ ಅನುದಾನವನ್ನು ಹಿಂದುಳಿದ ತಾಲ್ಲೂಕುಗಳಲ್ಲಿ ಮಾತ್ರ ಹಾಲಿನ ಪ್ರೋತ್ಸಾಹ ಧನ ನೀಡಲು ಬಳಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆಗೆ ಮೀಸಲಾದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನವನ್ನು ರಾಷ್ಟ್ರೀಯ ಕೃಷಿ ಯೋಜನೆಗಳ ಜೊತೆಗೆ ಹೊಂದಾಣಿಕೆ ಮಾಡಲಾಗಿದೆ. ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ಮೀಸಲಾದ ಅನುದಾನವನ್ನು ಗೃಹ ಇಲಾಖೆಗೆ ಬಳಸಲಾಗಿದೆ ಮತ್ತು ಡಾ.ಡಿ.ಎಂ.ನಂಜುಂಡಪ್ಪನವರು ಸೂಚಿಸಿದಂತೆ ಶೇ.40ರಷ್ಟು ಅನುದಾನವನ್ನು ಗುಲ್ಬರ್ಗಾ ವಿಭಾಗಕ್ಕೆ ಬಳಸಬೇಕೆಂದಿದ್ದರೂ ಸಾರಿಗೆ ಇಲಾಖೆಯ ಎಲ್ಲ ನಿಗಮಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ಅನ್ಯಾಯ ಮಾಡಲಾಗಿದೆ. ಇದು ಎಲ್ಲ ಇಲಾಖೆಗಳಿಗೂ ಅನ್ವಯಿಸಿರಬಹುದು. ಇದೇ ರೀತಿ ವಸತಿ ಯೋಜನೆಗೆ ನಿಗದಿಗೊಳಿಸಲಾದ ಅನುದಾನವನ್ನು ರಾಷ್ಟ್ರೀಯ ವಸತಿ ಯೋಜನೆಗಳ (ಇಂದಿರಾ ಆವಾಸ್, ಆಶ್ರಯ, ಗ್ರಾಮೀಣ ವಸತಿ) ಮತ್ತು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಆಶ್ರಯ ಯೋಜನೆಗಾಗಿ 2010-11ನೇ ಸಾಲಿನಲ್ಲಿ 40 ಕೋಟಿ ರೂ ಸಾಲ ನೀಡಲಾಗಿದೆ. ಜೊತೆಗೆ ಹೊಂದಾಣಿಕೆ ಮಾಡಲಾಗಿದೆ. ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಇದ್ದಂತ ಏಕೈಕ ಅವಕಾಶವನ್ನು ಸರಕಾರ ಈ ರೀತಿ ಹಾಳುಮಾಡಿಕೊಂಡಿದೆ. ಅಂದರೆ, ಕಳೆದ 15 ವರ್ಷಗಳಿಂದ ಅನುಷ್ಠಾನ ಮಾಡಲಾಗುತ್ತಿರುವ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಎಲ್ಲ ಸರಕಾರಗಳು ಬದ್ದತೆ ತೋರದೆ ತಪ್ಪುತಪ್ಪಾಗಿ ಅನುಷ್ಠಾನ ಮಾಡಿರುವದರಿಂದ ರಾಜ್ಯದಲ್ಲಿ ತಾಲ್ಲೂಕು ತಾಲ್ಲೂಕುಗಳ ನಡುವೆ, ಪ್ರದೇಶ ಪ್ರದೇಶಗಳ ನಡುವೆ ಇರುವ ಅಭಿವೃದ್ಧಿಯ ಅಸಮಾನತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದೇ ಹೇಳಬಹುದಾಗಿದೆ.

2014ರಲ್ಲಿ ಧಾರವಾಡದ Centre for Multi Disciplinary Development Research (CMDR) ಸಂಸ್ಥೆಯು ಡಾ.ಡಿ.ಎಂ.ನಂಜುಂಡಪನವರ ವರದಿಯ ಅನುಷ್ಠಾನದಿಂದಾದ ಬದಲಾವಣೆಯ ಬಗ್ಗೆ ಸಂಶೋಧನೆ ಮಾಡಿದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯ ಅಂಶಗಳನ್ನು ನೋಡಿದಲ್ಲಿ ಅಭಿವೃದ್ಧಿ ಯಾವ ದಿಕ್ಕಿನ ಕಡೆಗೆ ಹೋಗುತ್ತಿದೆ ಎಂದು ಚರ್ಚಿಸುವ ಅಗತ್ಯವಿದೆ. CMDR ಸಂಸ್ಥೆಯ ವರದಿಯಂತೆ ರಾಜ್ಯದಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ಸೂಚಿಸಿದಂತೆ 39 ಅತ್ಯಂತ ಹಿಂದುಳಿದ ತಾಲ್ಲೂಕುಗಳು ಈಗ 40 ಆಗಿವೆ. ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಈ ಹಿಂದೆ 21 ಅತ್ಯಂತ ಹಿಂದುಳಿದ ತಾಲ್ಲೂಕುಗಳಿದ್ದರೆ ಈಗ 24 ತಾಲ್ಲೂಕುಗಳು ಆ ಪಟ್ಟಿ ಸೇರಿವೆ.

ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ರಾಜ್ಯದಲ್ಲಿ 114 ಹಿಂದುಳಿದ ತಾಲ್ಲೂಕುಗಳಿದ್ದರೆ, ಸಿ.ಎಂ.ಡಿ.ಆರ್. ಸಂಸ್ಥೆಯ ವರದಿಯಂತೆ 109 ಹಿಂದುಳಿದ ತಾಲ್ಲೂಕುಗಳು ಉಳಿದಿವೆ. ಅವುಗಳಲ್ಲಿ 40 ಅತ್ಯಂತ ಹಿಂದುಳಿದ ತಾಲ್ಲೂಕುಗಳು (ಅಂದು ಈ ಸಂಖ್ಯೆ 39 ಇತ್ತು), 34 ಅತೀ ಹಿಂದುಳಿದ ತಾಲ್ಲೂಕುಗಳು (ಡಾ.ಡಿ.ಎಂ. ನಂಜುಂಡಪ್ಪನವರ ವರದಿಯಂತೆ 40) ಮತ್ತು 35 ಹಿಂದುಳಿದ ತಾಲ್ಲೂಕುಗಳಾಗಿವೆ (ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲೂ 35). ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ರಾಜ್ಯದ 175 ತಾಲ್ಲೂಕುಗಳಲ್ಲಿ 61 ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು ಎಂದು ಗುರುತಿಸಲಾಗಿದೆ. ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನದ 5 ವರ್ಷಗಳ ನಂತರ ಈ ಸಂಖ್ಯೆ 66 ತಾಲ್ಲೂಕುಗಳಾಗಿವೆ. ಅಂದರೆ ಇದೇ ವೇಗದಲ್ಲಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿ ಮಾಡಿದಲ್ಲಿ ಒಂದು ಶತಮಾನದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಅಸಮಾನತೆ ಸರಪಡಿಸಲು ಸಾಧ್ಯವಾಗಬಹುದೇನೋ ಕಾದು ನೋಡಬೇಕಾಗಿದೆ. ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ಬದ್ಧತೆ ಇಲ್ಲದ ರಾಜಕಾರಣ ಜನರನ್ನು ಇನ್ನೂ ಎಷ್ಟು ತಾಳ್ಮೆ ಪರೀಕ್ಷೆ ಮಾಡಿಸಲು ಹೊರಟಿದೆಯೋ ಗೊತ್ತಿಲ್ಲ.

ಸರಕಾರ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು 2007-08ನೇ ಸಾಲಿನಿಂದ ಜಾರಿಗೊಳಿಸಲು ಪ್ರಾರಂಭಿಸಿ 2014-15ನೇ ಸಾಲಿನವರೆಗೆ ಅನುಷ್ಠಾನ ಮಾಡಿದೆ; ಸಿದ್ದರಾಮಯ್ಯನವರ ನೇತೃತ್ವದ ಸರಕಾರ 2015-16ನೇ ಸಾಲಿನಿಂದ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಇನ್ನೂ 5 ವರ್ಷಗಳ ಅವಧಿಗೆ ಮುಂದುವರಿಸಲು ನಿರ್ಧರಿಸಿ ಸುಮಾರು ಪ್ರತಿ ವರ್ಷ 3000 ಕೋಟಿ ರೂ. ಅನುದಾನ ನಿಗದಿಗೊಳಿಸುತ್ತ ಮುಂದುವರಿದಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರದಂತೆ 2015-16ನೇ ಸಾಲಿನಿಂದ 2019-20ರವರೆಗೆ 5 ವರ್ಷ ಪೂರ್ಣಗೊಂಡಿದೆ; ಈಗಿನ ಸರಕಾರ ಈ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನ ಮುಂದುವರಿಸಿದೆ.

ಪ್ರಸಕ್ತ ಸರಕಾರ ಸದರಿ ವರದಿಯಂತೆ ಹಿಂದುಳಿದ ತಾಲ್ಲೂಕುಗಳ ಅಸಮಾನತೆಯನ್ನು ಸರಿಮಾಡುವ ಬದ್ಧತೆ ತೋರಿಸಲು ಮುಂದಾಗಬೇಕಿತ್ತು. ಎಲ್ಲಿಯವರೆಗೆ ರಾಜ್ಯದಲ್ಲಿ ಇರುವ ಈ ಪ್ರಾದೇಶಿಕ ಅಸಮಾನತೆ ಸಂಪೂರ್ಣವಾಗಿ ಸಮಾನ ಅಭಿವೃದ್ದಿಯ ಕಡೆಗೆ ಹೋಗುವದಿಲ್ಲವೋ ಅಲ್ಲಿಯವರೆಗೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನ ಮಾಡಲೇಬೇಕಿದೆ. 2007-08ರಿಂದ 2021-22ರವರೆಗೆ ಈ 15 ವರ್ಷಗಳಲ್ಲಿ ಸರಕಾರ 40385.27 ಕೋಟಿ ರೂ.ಗಳಷ್ಟು ಅನುದಾನವನ್ನು ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನಕ್ಕಾಗಿ ಹಂಚಿಕೆ ಮಾಡಿದ್ದರೂ, ಇಲ್ಲಿಯವರೆಗೆ ಸುಮಾರು 31276.67 ಕೋಟಿ ರೂ. ಮಾತ್ರ ಬಿಡುಗಡೆಗೊಳಿಸಿದೆ. ಅದರಲ್ಲಿ ಒಟ್ಟು 28987.18 ಕೋಟಿ ರೂ. ಅನುದಾನವನ್ನು ಖರ್ಚು ಮಾಡಲಾಗಿದೆ.

ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆಗೆ ಸುಮಾರು 2057.43 ಕೋಟಿ ರೂ ಅನುದಾನ ನಿಗದಿಗೊಳಿಸಿದ್ದರೂ ಕೇವಲ 1203.34 ಕೋಟಿ ರೂ ಮಾತ್ರ ಖರ್ಚು ಮಾಡಲಾಗಿದೆ; ಅದರಂತೆಯೇ ಗ್ರಾಮೀಣಾಭಿವೃದ್ದಿಗೆ 5294.26 ಕೋಟಿ ರೂ. ನಿಗದಿಗೊಳಿಸಿ ಕೇವಲ 3787.00 ಕೋಟಿ ರೂ. ಖರ್ಚು ಮಾಡಲಾಗಿದೆ; ನೀರಾವರಿಗೆ ವರದಿಯಲ್ಲಿ 8000 ಕೋಟಿ ರೂ ಖರ್ಚು ಮಾಡಲು ಸೂಚಿಸಿದ್ದರೂ ಇಲ್ಲಿಯವರೆಗೆ ಕೇವಲ 6178.01 ಕೋಟಿ ರೂ ಅನುದಾನ ನಿಗದಿಗೊಳಿಸಿ ಅದರಲ್ಲಿ 4143.65 ಕೋಟಿ ರೂ ಮಾತ್ರ ಖರ್ಚು ಮಾಡಲಾಗಿದೆ. ಗೃಹ ಇಲಾಖೆಗೆ ನೀಡಬೇಕಿದ್ದ ಅನುದಾನ ವರದಿಯಲ್ಲಿ ನಮೂದಿಲ್ಲದಿದ್ದರೂ ಸುಮಾರು 172.34 ಕೋಟಿ ರೂ. ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಖರ್ಚು ಮಾಡಲಾಗಿದೆ. ಈ ರೀತಿ, ಸರಕಾರಗಳು ವರದಿಯಲ್ಲಿರುವ ಅಂಶಕ್ಕೂ ಅನುಷ್ಠಾನಕ್ಕೂ ಅಜಗಜಾಂತರ ವ್ಯತ್ಯಾಸ ಬರುವ ಹಾಗೆ ಅನುಷ್ಠಾನಗೊಳಿಸಿರುವುದರಿಂದ ಇಂದಿಗೂ ಈ ಅಭಿವೃದ್ಧಿಯ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗಿಲ್ಲ.

ಈಗ ಸರಕಾರ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಅನುಷ್ಠಾನ ಮಾಡುವುದರಿಂದ ಯಾವುದೇ ಉಪಯೋಗವಾಗಿಲ್ಲ; ಅದನ್ನು ಮುಂದುವರಿಸುವದು ಸಮರ್ಪಕವಾದುದ್ದಲ್ಲ ಎಂದು ನಿರ್ಣಯಿಸಿ, ನೀತಿ ಆಯೋಗದ ಸೂಚ್ಯಂಕಗಳ ಆಧಾರದಲ್ಲಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿ ಮಾಡುವದಾಗಿ ಘೋಷಿಸಿದೆ. ಇದು ಅವೈಜ್ಞಾನಿಕ ವಿಧಾನ. ಇದರಲ್ಲಿ ಯಾವುದೇ ನಿರ್ದಿಷ್ಟ ಗುರಿ, ನಿರ್ದಿಷ್ಠ ಅವಧಿ ನಿಗದಿಯಾಗದೇ ಇರುವದರಿಂದ ಅಭಿವೃದ್ಧಿ ಹಾಗೂ ಸಮಾನತೆ ಎನ್ನುವದು ಮರೀಚಿಕೆಯಾಗುವದು ಬಹಳ ಸ್ಪಷ್ಟವಾಗಿದೆ.

ಸರಕಾರಕ್ಕೆ ನಿಜವಾಗಿಯೂ ಪ್ರಾದೇಶಿಕ ಸಮಾನತೆಯ ಕುರಿತು ಕಾಳಜಿ ಇದ್ದಲ್ಲಿ, ಡಾ.ಡಿ.ಎಂ.ನಂಜುಂಡಪ್ಪನವರ ವರದಿಯನ್ನು ಬಜೆಟ್ ಗಾತ್ರದ ಶೇ.11ರಷ್ಟು ಅನುದಾನ ನೀಡುವದರ ಮೂಲಕ ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮಾಡಬೇಕು. ಅಲ್ಲದೆ, ಇಲ್ಲಿಯವರೆಗೆ ಆಗಿರುವ ಅಭಿವೃದ್ಧಿಯ ಬದಲಾವಣೆಯ ಕುರಿತು ಅಧ್ಯಯನ ಮಾಡಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ವೈಜ್ಞಾನಿಕವಾದ ವರದಿಯನ್ನು ಪಡೆದು ಪ್ರಾದೇಶಿಕ ಸಮಾನತೆ ಸಾಧಿಸುವ ಕುರಿತು ಚಿಂತಿಸಬೇಕಾಗಿದೆ ಮತ್ತು ಕಾರ್ಯೋನ್ಮುಖವಾಗಬೇಕಿದೆ.

ಡಾ. ರಝಾಕ ಉಸ್ತಾದ

ಡಾ. ರಝಾಕ ಉಸ್ತಾದ
ರಾಯಚೂರಿನವರಾದ ಡಾ.ರಝಾಕ ಉಸ್ತಾದ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರು, ಹಿರಿಯ ಮುಖಂಡರು.


ಇದನ್ನೂ ಓದಿ: ಹೈದ್ರಾಬಾದ್ ಕರ್ನಾಟಕದ ಮೇಲೆ ನಡೆಯುತ್ತಿದೆ ನಿರಂತರ ವಂಚನೆ : ಡಾ.ರಝಾಕ ಉಸ್ತಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಅತ್ಯಂತ ದುರದೃಷ್ಟಕರ, ಸ್ವೀಕಾರಾರ್ಹವಲ್ಲ..’; ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್

0
ಅನಿವಾಸಿ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು "ತಮ್ಮ ಪೂರ್ವದ ಜನರು ಚೀನಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ" ಎಂಬ ಟೀಕೆಗಳ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಆಡಳಿತಾರೂಢ ಬಿಜೆಪಿ...