ಚಾಮರಾಜನಗರ ದುರಂತಕ್ಕೆ ಆಮ್ಲಜನಕ ಕೊರತೆ ಕಾರಣ

ಕಳೆದ ವಾರ ಚಾಮರಾಜನಗರದಲ್ಲಿ 24 ಕೋವಿಡ್ ರೋಗಿಗಳ ಸಾವಿಗೆ ಆಮ್ಲಜನಕದ ಕೊರತೆ ಮತ್ತು ಆಸ್ಪತ್ರೆ ಮತ್ತು ಜಿಲ್ಲಾಡಳಿತದ ವೈಫಲ್ಯ ಕಾರಣವಾಗಿದೆ ಎಂದು ನ್ಯಾಯಮೂರ್ತಿ ಎ.ಎಸ್ ವೇಣುಗೋಪಾಲ್ ಗೌಡ (ನಿವೃತ್ತ) ನೇತೃತ್ವದ ಸಮಿತಿ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಮೇ 2 ರಂದು ರಾತ್ರಿ 10.30 ರಿಂದ ನಾಲ್ಕು ಗಂಟೆಗಳ ಕಾಲ ಆಮ್ಲಜನಕ ಲಭ್ಯವಿಲ್ಲದ ಕಾರಣ ಮೇ 3 ರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಕೊರೊನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿ ದೃಢಪಡಿಸಿದೆ.

ಮೇ 4 ಮತ್ತು ಮೇ 10ರ ವರೆಗೆ ಆಸ್ಪತ್ರೆಯಲ್ಲಿ 62 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಕನಿಷ್ಠ 36 ಮಂದಿ ಮೇ 2 ರಂದು ಆಮ್ಲಜನಕ ಸಿಗದ ರೋಗಿಗಳಾಗಿದ್ದರು ಎಂದು ಸಮಿತಿ ತಿಳಿಸಿದೆ.

ಇದನ್ನೂ ಓದಿ: ಚಾಮರಾಜನಗರ ಆಸ್ಪತ್ರೆಯಲ್ಲಿ ದುರಂತ: ಆಮ್ಲಜನಕ ಕೊರತೆಯಿಂದ 24 ಜನರು ಮೃತ

ದುರಂತದ ಸಮಯದಲ್ಲಿ ನಾಯಕತ್ವದ ಗುಣವನ್ನು ಪ್ರದರ್ಶಿಸುವಲ್ಲಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿ ವಿಫಲರಾಗಿದ್ದಾರೆ ಎಂದು ವರದಿ ತಿಳಿಸಿದೆ. “ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಐಎಂಎಸ್) ಡೀನ್ ಮತ್ತು ಮೈಕ್ರೋಬಯಾಲಜಿಸ್ಟ್ ಉಸ್ತುವಾರಿ ಜಿಲ್ಲಾ ಶಸ್ತ್ರಚಿಕಿತ್ಸಕ ರೋಗಿಗಳ ಜೀವಗಳನ್ನು ಉಳಿಸಲು ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಲು ಮಾರ್ಗದರ್ಶನ ಮಾಡುವಲ್ಲಿ ವಿಫಲರಾಗಿದ್ದಾರೆ” ಎಂದು ವರದಿ ತಿಳಿಸಿದೆ.

“ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಮಾಡಲು ಶೋಚನೀಯವಾಗಿ ವಿಫಲರಾಗಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಮೈಸೂರಿನ ಜಿಲ್ಲಾಧಿಕಾರಿ ಆಮ್ಲಜನಕ ಪೂರೈಕೆಗೆ ಅಡ್ಡಿಯುಂಟುಮಾಡಿದ್ದಾರೆ ಎಂದು ಯಾವುದೇ ಆಧಾರವಿಲ್ಲದೆ ಆರೋಪಿಸಿದ್ದಾರೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಚಾಮರಾಜನಗರ ಸೇರಿದಂತೆ ಇತರ ಯಾವುದೇ ಜಿಲ್ಲೆಗಳ ಆಮ್ಲಜನಕ ಸಿಲಿಂಡರ್‌ಗಳನ್ನು ಮರುಪೂರಣ ಮಾಡುವುದು ಜಿಲ್ಲಾಡಳಿತ ಮತ್ತು ಅಧಿಕಾರಿಗಳ ಜವಾಬ್ದಾರಿ. ಮೈಸೂರು ಜಿಲ್ಲಾಧಿಖಾರಿ ರೋಹಿಣಿ ಸಿಂಧೂರಿ ವಿರುದ್ಧ ಯಾವುದೇ ಆಧಾರವಿಲ್ಲ ಎಂದು ಸಮಿತಿ ತಿಳಿಸಿದೆ.

ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸುವ ಟ್ರಕ್ ಮುಂಜಾನೆ 2 ಗಂಟೆಯ ಹೊತ್ತಿಗೆ ಚಾಮರಾಜನಗರಕ್ಕೆ ತಲುಪಬೇಕಿತ್ತು. ಆದರೆ ಇನ್ನೂ 30 ಸಿಲಿಂಡರ್‌ಗಳನ್ನು ಲೋಡ್ ಮಾಡಲು ಮರುಪೂರಣ ಏಜೆನ್ಸಿಯಲ್ಲಿ ನಿಲ್ಲಿಸಲಾಗಿತ್ತು. ಈ ಟ್ರಕ್ ಮೇ 3 ರಂದು ಬೆಳಿಗ್ಗೆ 6 ಗಂಟೆಗೆ ಆಸ್ಪತ್ರೆ ತಲುಪಿದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ನ್ಯಾಯಾಲಯದ ನಿರ್ದೇಶನದ ನಂತರ ಮುಖ್ಯ ಕಾರ್ಯದರ್ಶಿ ಇತ್ತೀಚೆಗೆ ವಶಪಡಿಸಿಕೊಂಡಿದ್ದ ಅಧಿಕೃತ ದಾಖಲೆಗಳನ್ನು ವಿಶ್ಲೇಷಿಸಿದ ನಂತರ ಸಮಿತಿ ತನ್ನ ವರದಿಯನ್ನು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದೆ. ಜೊತೆಗೆ ಮೃತರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಶಿಫಾರಸು ಮಾಡಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟಿದ್ದರೆ ಅದಕ್ಕೆ ಸರ್ಕಾರವೆ ಹೊಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕಿತ್ಸೆ ವೈಫಲ್ಯದಿಂದ ಮೃತಪಟ್ಟಿದ್ದರೆ ಅದು ಉದ್ದೇಶಪೂರ್ವಕ ಅಲ್ಲ. ಉದ್ದೇಶಪೂರ್ವಕವಾಗಿ ಮಾಡಿದ್ದರೆ, ಅದಕ್ಕೆ ಕಾರಣರಾದವರೇ ಹೊಣೆ ಹೊರಬೇಕು ಎಂದು ಅವರು ಹೇಳಿದ್ದರು.


ಇದನ್ನೂ ಓದಿ: ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಆಗಿದ್ದರೆ ಸರ್ಕಾರವೆ ಹೊಣೆ – ಸಿಟಿ ರವಿ

LEAVE A REPLY

Please enter your comment!
Please enter your name here