ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ತಾನ ನ್ಯಾಯಾಲಯ ಆದೇಶ
ಫೋಟೋ ಕೃಪೆ: ದಿ ವೈರ್‌

ಬೇಹುಗಾರಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರ ವಕೀಲರನ್ನು ನೇಮಿಸಿಕೊಳ್ಳಲು ಭಾರತಕ್ಕೆ ಮತ್ತೊಂದು ಅವಕಾಶವನ್ನು ನೀಡಬೇಕು ಎಂದು ಇಸ್ಲಾಮಾಬಾದ್ ಹೈಕೋರ್ಟ್ ಹೇಳಿದೆ.

ಪಾಕಿಸ್ತಾನದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಾಕಿಸ್ತಾನದಲ್ಲಿ ವಾದ ಮಾಡಲು ಪರವಾನಗಿ ಪಡೆದ ವಕೀಲರನ್ನು ನೇಮಕ ಮಾಡಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ನ್ಯಾಯಾಲಯ ಪಾಕಿಸ್ತಾನ ಸರ್ಕಾರವನ್ನು ಕೇಳಿದೆ ಎಂದಿದ್ದಾರೆ.

“ಈಗ ಈ ವಿಷಯವು ಹೈಕೋರ್ಟ್‌ನಲ್ಲಿದೆ, ಭಾರತಕ್ಕೆ ಮತ್ತೊಂದು ಅವಕಾಶವನ್ನು ಏಕೆ ನೀಡಬಾರದು” ಎಂದು ದ್ವಿಸದಸ್ಯ ಪೀಠದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ ಹೇಳಿದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನದ ವಕೀಲರಿಗೆ ಭಾರತೀಯ ವಕೀಲರ ತಂಡ ಸಹಾಯ ಮಾಡಬಹುದೇ ಎಂದು ಕೇಳಿದಾಗ, ಅಂತಹ ಯಾವುದೇ ಆಯ್ಕೆಯನ್ನು ಇಲ್ಲಿಯವರೆಗೆ ನೀಡಿಲ್ಲ ಎಂದು ಖಾಲಿದ್ ಜಾವೇದ್ ಖಾನ್ ಹೇಳಿದರು. ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಲಾಗಿದೆ.

“ಪಾಕಿಸ್ತಾನ ಸರ್ಕಾರವು ಜಾಧವ್ ಅವರ ಹಕ್ಕುಗಳ ಬಗ್ಗೆ ಮತ್ತೊಮ್ಮೆ ತಿಳಿಸುತ್ತದೆ … ಶಾಸನಬದ್ಧ ಪರಿಹಾರವನ್ನು ಪಡೆಯುವ ಹಕ್ಕಿನ ಬಗ್ಗೆ ಅವರಿಗೆ ನಿರ್ದಿಷ್ಟವಾಗಿ ತಿಳಿಸಲಾಗುವುದು … ಮತ್ತು ಅವರ ಪರವಾಗಿ ಕಾನೂನು ಪ್ರಾತಿನಿಧ್ಯವನ್ನು ವ್ಯವಸ್ಥೆ ಮಾಡಲು ಭಾರತ ಸರ್ಕಾರಕ್ಕೆ ಅಧಿಕಾರ ನೀಡಬೇಕು” ಎಂದು ನ್ಯಾಯಾಲಯವು ತನ್ನ ಲಿಖಿತ ರೂಪದ ಆದೇಶದಲ್ಲಿ ತಿಳಿಸಿದೆ.

“ಪಾಕಿಸ್ತಾನ ಸರ್ಕಾರವು ಈ ಆದೇಶವನ್ನು ಭಾರತ ಸರ್ಕಾರಕ್ಕೆ ತಿಳಿಸುತ್ತದೆ, ಎರಡನೆಯದು ಜಾಧವ್ ಪರವಾಗಿ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸ್ವಾತಂತ್ರ್ಯವನ್ನು ಹೊಂದಿರುತ್ತದೆ” ಎಂದು ಅದು ಹೇಳಿದೆ.

ಪರಿಣಾಮಕಾರಿ ನ್ಯಾಯಾಂಗ ಪರಿಹಾರದ ಎಲ್ಲಾ ಮಾರ್ಗಗಳನ್ನು ಪಾಕಿಸ್ತಾನವು ನಿರ್ಬಂಧಿಸಿದೆ ಎಂದು ಕಳೆದವಾದ ಭಾರತ ಹೇಳಿತ್ತು. ಜುಲೈ 16 ರಂದು ನಡೆದ ಕಾನ್ಸುಲರ್ ಪ್ರವೇಶ ಸಭೆಯಲ್ಲಿ ಜಾಧವ್ ಅವರು ಸಹಿ ಮಾಡಿದ “ಪವರ್ ಆಫ್ ಅಟಾರ್ನಿ” ಕಾನೂನು ದಾಖಲೆ ಪಡೆಯಲು ಭಾರತೀಯ ರಾಜತಾಂತ್ರಿಕರಿಗೆ ಅವಕಾಶವಿರಲಿಲ್ಲ ಎಂದು ಭಾರತ ದೂರಿತ್ತು.

ಜಾಧವ್‌ಗೆ “ಕಾನೂನು ಪ್ರತಿನಿಧಿಯನ್ನು” ನೇಮಕ ಮಾಡುವ ವಿಚಾರಕ್ಕೆ ಪಾಕಿಸ್ತಾನ ಸರ್ಕಾರ ಜುಲೈ 22 ರಂದು ಮರುಪರಿಶೀಲನಾ ಅರ್ಜಿ ಸಲ್ಲಿಸಿತು. ಮನವಿಯನ್ನು ಆಲಿಸಲು ನ್ಯಾಯಾಲಯವು ದ್ವಿಸದಸ್ಯ ಪೀಠವನ್ನು ರಚಿಸಿತ್ತು.

ಈ ವಿಷಯವನ್ನು ಆಲಿಸಲು ದೊಡ್ಡ ನ್ಯಾಯಪೀಠವನ್ನು ರಚಿಸುವುದು ಸೂಕ್ತ ಎಂದು ಸೋಮವಾರ ನ್ಯಾಯಾಲಯ ಹೇಳಿದೆ. ಇದು ಮಾಜಿ ಅಟಾರ್ನಿ ಜನರಲ್ ಸೇರಿದಂತೆ ಪಾಕಿಸ್ತಾನದ ಮೂರು ಪ್ರಮುಖ ವಕೀಲರನ್ನು ಅಮಿಕಸ್ ಕ್ಯೂರಿಯಂತೆ ನೇಮಿಸಿದೆ.


ಓದಿ: ಮರುಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ ಕುಲಭೂಷಣ್ ಜಾಧವ್: ಪಾಕ್


 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts