Homeಮುಖಪುಟಪ್ಯಾರಲಲ್ ಮದರ್ಸ್ ಸಿನಿಮಾ; ಇತಿಹಾಸ-ವರ್ತಮಾನ, ನೆನಪು-ಸಂಬಂಧಗಳ ಚಿತ್ರಣ

ಪ್ಯಾರಲಲ್ ಮದರ್ಸ್ ಸಿನಿಮಾ; ಇತಿಹಾಸ-ವರ್ತಮಾನ, ನೆನಪು-ಸಂಬಂಧಗಳ ಚಿತ್ರಣ

- Advertisement -
- Advertisement -

ಸ್ಪೇನ್ ದೇಶದ ಪೆದ್ರೊ ಅಲ್ಮೊದೊವಾರ್ ಈಗಾಗಲೇ ಜಾಗತಿಕ ಮನ್ನಣೆ ಗಳಿಸಿರುವ ಚಿತ್ರ ನಿರ್ದೇಶಕ. ಇವರ ಚಿತ್ರ ನಿರ್ದೇಶನದ ವಿಶಿಷ್ಟ ಮಾದರಿ ಮತ್ತು ನಿರ್ಮಾಣ ಶೈಲಿ ’ಅಲ್ಮೊದೊವಾರಿಯನ್ ಎಂದೇ ಹೆಸರುವಾಸಿ. ಇವರು ಸ್ಥಾಪಿತ ಜಾಡನ್ನು ತೊರೆದು ತಮ್ಮ ಹಲವು ಚಿತ್ರಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಒಂದು ಖಚಿತ ನಿಲುವು ತೆಳೆಯುತ್ತಾರೆ. ಸ್ವತಃ ಗೇ ಆಗಿರುವ ಅಲ್ಮೊದೊವಾರ್ ಅವರ ಚಿತ್ರಗಳಲ್ಲಿ ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್ ಹಾಗೂ ಇತರೆ ಲೈಂಗಿಕ ಅಲ್ಪಸಂಖ್ಯಾತ ಪಾತ್ರಗಳ ಚಿತ್ರಣಗಳು ದಟ್ಟವಾಗಿ ಕಾಣಸಿಗುತ್ತವೆ. ಇವರ ಚಿತ್ರಗಳ ವಿಶೇಷವೆಂದರೆ ಈ ಪಾತ್ರಗಳೆಲ್ಲವೂ ತಮ್ಮ ಸೆಕ್ಷುಯಾಲಿಟಿಯನ್ನು ಬಹಿರಂಗವಾಗಿ ಒಪ್ಪಿಕೊಂಡು ದಿಟ್ಟತನದಿಂದ ನಡೆದುಕೊಳ್ಳುತ್ತವೆ. ಇವರ ಬಹಳಷ್ಟು ಚಿತ್ರಗಳಲ್ಲಿ ಲೈಂಗಿಕತೆ, ಕಾಮ, ಬಯಕೆ, ಕುಟುಂಬ ವ್ಯವಸ್ಥೆ ಹಾಗೂ ಅಸ್ಮಿತೆಯ ಹುಡುಕಾಟಗಳು ಕಂಡುಬರುತ್ತವೆ. ಮುಂದುವರೆದು ಇವರ ಚಿತ್ರಗಳಲ್ಲಿ ಗಾಢ ಬಣ್ಣಗಳ ಬಳಕೆ, ಮೆಲೊಡ್ರಾಮಾ, ಅಂತರ್ ಪಠ್ಯೀಯತೆ ಹಾಗೂ ಜಟಿಲವಾದ ಚಿತ್ರ ನಿರೂಪಣಾ ಶೈಲಿಯನ್ನು ಕಾಣಬಹುದು. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಇವರು ಭಾಜನರಾಗಿರುವುದು ಮೇಲಿನ ಈ ಹಲವು ಕಾರಣಗಳಿಗಾಗಿ. ಲೈಂಗಿಕ ಹಾಗೂ ರಾಜಕೀಯ ಸ್ವಾತಂತ್ರ್ಯಗಳ ಹುಡುಕಾಟ ಅವರ ಚಿತ್ರಗಳಲ್ಲಿ ಸ್ಥಾಯೀ ಎಂದು ಹಲವು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಪೆದ್ರೊ ಚಿತ್ರ ನಿರ್ದೇಶಕನಾಗುವ ಬಯಕೆ ಹೊತ್ತು 1967ರಲ್ಲಿ ತಮ್ಮ ಹಳ್ಳಿಯನ್ನು ತೊರೆದು ಮ್ಯಾಡ್ರಿಡ್ ನಗರಕ್ಕೆ ಓಡಿಹೋಗುತ್ತಾರೆ. ಆ ಕಾಲದಲ್ಲಿ ಸ್ಟೇನ್ ದೇಶವು ಫ್ರಾನ್ಸಿಸ್ಕೋ ಫ್ರ್ಯಾಂಕೊ ಎಂಬ ಸರ್ವಾಧಿಕಾರಿಯ ಬಿಗಿ ಹಿಡಿತದಲ್ಲಿರುತ್ತದೆ. ಪೆದ್ರೊ ಸಿನಿಮಾ ನಿರ್ಮಾಣದ ಪಟ್ಟುಗಳನ್ನು ಕಲಿಯುತ್ತಿದ್ದ ನ್ಯಾಷನಲ್ ಸ್ಕೂಲ್ ಆಫ್ ಸಿನಿಮಾ ಸಂಸ್ಥೆಯು ಸರ್ವಾಧಿಕಾರಿಯ ದೌರ್ಜನ್ಯಕ್ಕೆ ಮುಚ್ಚಿ ಹಾಕಲ್ಪಡುತ್ತದೆ. ಪೆದ್ರೊ ಏಕಾಂಗಿಯಾಗಿ ಅಲ್ಲಿಂದ ಹೊರಬಿದ್ದು ಹಲವು ಸಣ್ಣಪುಟ್ಟ ಕೆಲಸ ಮಾಡುತ್ತಲೇ ಚಿತ್ರ ನಿರ್ಮಾಣದ ಕನಸನ್ನು ಘೋಷಿಸಿಕೊಂಡಿರುತ್ತಾರೆ. 1975ರಲ್ಲಿ ಫ್ರ್ಯಾಂಕೋ ತೀರಿಕೊಂಡ ನಂತರ ಸ್ಪೇನ್‌ನಲ್ಲಿ ಒಂದು ಸಾಂಸ್ಕೃತಿಕ ಪುನರುತ್ಥಾನ ಜರುಗುತ್ತದೆ. ಅದುವರೆಗೂ ಇದ್ದ ಬಿಗು ಸಡಿಲಗೊಂಡು ಹೊಸ ವಿಚಾರಗಳ, ಹೊಸ ಚಿಂತನೆಗಳ ಸಮಾಜ ನಿರ್ಮಿತವಾಗುತ್ತದೆ. ಆರ್ಥಿಕ ಸುಧಾರಣೆ ಮತ್ತು ಜನರ ಹೊಸ ಚಿಂತನೆಗಳು ’ಲಾ ಮೊವಿದಾ ಮಾಡ್ರಿಲೆನಾ’ (The Madrilenian Movement) ಎನ್ನುವ ಪ್ರತಿ ಸಾಂಸ್ಕೃತಿಕ ಚಳವಳಿಯನ್ನು ಮ್ಯಾಡ್ರಿಡ್ ನಗರ ಕೇಂದ್ರಿತವಾಗಿ ಹುಟ್ಟು ಹಾಕುತ್ತವೆ. ಇಂಥ ಕಾಲದಲ್ಲಿ ಪೆದ್ರೊ ಈ ಚಳವಳಿಯ ಮುಂಚೂಣಿ ವಕ್ತಾರನಾಗಿ ತನ್ನ ಬರೆಹ ಹಾಗೂ ಚಿತ್ರಗಳಲ್ಲಿ ಸ್ಪೇನ್ ಸಮಾಜದ ಹೊಸ ಆಶಯಗಳನ್ನು ಬಿಂಬಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಾರೆ. ಸರ್ವಾಧಿಕಾರದ ಕರಾಳತೆಯನ್ನು, ಭೀಕರತೆಯನ್ನು ತೊಡೆದು ಹೊಸ ಅಸ್ಮಿತೆಗಳ ಹುಡುಕಾಟದಲ್ಲಿರುವ ಸ್ಪೇನ್‌ನ ನಾಗರಿಕರ ಆಂತರಿಕ ತೊಳಲಾಟಗಳ ಶೋಧ ಅವರ ಚಿತ್ರಗಳಲ್ಲಿ ಕಂಡುಬರುತ್ತವೆ. ಗತಿಸಿಹೋದ ಕಾಲದ ಕಹಿ ನೆನಪುಗಳು ಹಾಗೂ ಭವಿಷ್ಯದ ನಿರ್ಮಾಣಗಳ ಚಿತ್ರಣ ಪೆದ್ರೊನ ಚಿತ್ರಗಳಲ್ಲಿ ಕಲಾತ್ಮಕವಾಗಿ ಬಿಂಬಿಸಿರುವುದು ಕಂಡುಬರುತ್ತದೆ. 1980ರಿಂದ ಪೆದ್ರೊ ಚಿತ್ರಗಳನ್ನು ನಿರ್ಮಿಸುತ್ತ, ನಿರ್ದೇಶಿಸುತ್ತಲೇ ಬಂದಿರುವುದು ಆತನ ಅಚಲ ನಂಬಿಕೆ, ಸ್ಥೈರ್ಯ ಹಾಗೂ ಕಲಾತ್ಮಕತೆಯ ಯಶಸ್ಸನ್ನು ಸೂಚಿಸುವಂತಿವೆ.

ಪೆದ್ರೊ ಅಲ್ಮೊದೊವಾರ್

ಈ ಎಲ್ಲಾ ಹಿನ್ನೆಲೆಯಲ್ಲಿ 2021ರಲ್ಲಿ ತೆರೆಕಂಡ ’ಮಾದ್ರೆಸ್ ಪ್ಯಾರಲೆಲಾಸ್’ (ಪ್ಯಾರಲಲ್ ಮದರ್ಸ್-2021) ಚಿತ್ರವು ಅವರ ದೇಶದ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ನಡೆದ ಕ್ರೌರ್ಯಗಳ ನೇರ ಹಾಗೂ ಪರೋಕ್ಷ ಪರಿಣಾಮಗಳನ್ನು ಎರಡು ಸ್ತ್ರೀ ಪಾತ್ರಗಳ ಮೂಲಕ ಬಹಳ ಸಾಂಕೇತಿಕವಾಗಿ ನಿರೂಪಿಸುತ್ತದೆ. ಇಲ್ಲಿ ಗಮನಿಸಬಹುದಾದ ಇನ್ನೊಂದು ಪ್ರಮುಖ ಅಂಶವೆಂದರೆ, 20ನೇ ಶತಮಾನದಲ್ಲಿ, ಕಾಂಬೋಡಿಯಾ ನಂತರದಲ್ಲಿ, ಸ್ಪೇನ್ ದೇಶವು ಸರ್ವಾಧಿಕಾರಿ ನರಹತ್ಯೆಗಳಲ್ಲಿ ಎರಡನೆ ಸ್ಥಾನವನ್ನು ಪಡೆದುಕೊಂಡಿದೆ. ಇಂಥ ಚಾರಿತ್ರಿಕ ಹಿನ್ನೆಲೆಯಲ್ಲಿ ಗ್ರಹಿಸಿದಾಗ ಈ ಚಿತ್ರಕ್ಕೆ ನಮಗೆ ಪ್ರವೇಶಿಕೆ ದೊರಕುತ್ತದೆ. ಅವನ ಚಿತ್ರಗಳಲ್ಲಿ ಈಗಾಗಲೇ ಬಳಸಿರುವ ಕ್ಲಿಷ್ಟ ನಿರೂಪಣಾ ಶೈಲಿ ಇಲ್ಲಿಯೂ ಇದೆ.

ಇತಿಹಾಸ-ವರ್ತಮಾನ ಹಾಗೂ ಭವಿಷ್ಯಗಳು ಇಲ್ಲಿ ವಕ್ರ ನಿರೂಪಣೆಯಲ್ಲಿ (Non-linear narration) ನಮಗೆ ಎದುರಾಗುತ್ತವೆ. ಇತಿಹಾಸ-ವರ್ತಮಾನ ಹಾಗೂ ಭವಿಷ್ಯದ ಮುಖಾಮುಖಿಯನ್ನು ನಿರ್ದೇಶಕ ಈ ಚಿತ್ರದಲ್ಲಿ ಎರಡು ಭಿನ್ನ ಸ್ತ್ರೀಪಾತ್ರಗಳ ಮೂಲಕ ತೋರಿಸುತ್ತಾರೆ. ಒಂದು ಕಡೆ ಮಧ್ಯವಯಸ್ಸು ಸಮೀಪಿಸುತ್ತಿರುವ ಫ್ಯಾಶನ್ ಫೋಟೊಗ್ರಾಫರ್ ಆಗಿರುವ ಜಾನಿಸ್ (ಪೆನಲಪಿ ಕ್ರುಝ್) ಹಾಗೂ ಇನ್ನೊಂದೆಡೆ ಹದಿವಯಸ್ಸಿನ ಆನ (ಮಿಲೆನಾ ಸ್ಮಿಟ್) ಪಾತ್ರಗಳ ಜೀವನ ಚಿತ್ರಣಗಳ ಮೂಲಕ ಪೆದ್ರೂ ಈ ಚಿತ್ರದಲ್ಲಿ ಸ್ಪೇನ್ ದೇಶದ ಸರ್ವಾಧಿಕಾರಿ ವ್ಯವಸ್ಥೆಯ ಗತದ ಗಾಯಗಳು, ವರ್ತಮಾನದ ಸಂಕಟಗಳು ಹಾಗೂ ಭವಿಷ್ಯದ ನಿರೀಕ್ಷೆಗಳನ್ನು ಶೋಧಿಸುತ್ತಾನೆ. ನೆನಪುಗಳು ಕಳೆದುಕೊಳ್ಳುವಿಕೆ, ಅಸ್ಮಿತೆಯ ಹುಡುಕಾಟ, ಪ್ರೀತಿ, ಕಾಮ, ಅವಿವಾಹಿತ ತಾಯ್ತನದ ಚಿತ್ರಣಗಳ ಮೂಲಕ ಕಥೆಯ ನಿರೂಪಣೆ ದಟ್ಟ ಸಾಂಕೇತಿಕತೆಯಲ್ಲಿ ಸಾಗುತ್ತದೆ. ಜಾನಿಸ್ ಗತದ ನೆನಪುಗಳು ಹಾಗೂ ಅಸ್ಮಿತೆಯ ಬೇರುಗಳೆಡೆಗೆ ಹಾತೊರೆದರೆ ಆನಾ ಇತಿಹಾಸದ ಗೊಡವೆಯೊಲ್ಲದ ನವ ತರುಣ ಸಮುದಾಯದ ಪ್ರತಿನಿಧಿಯಾಗುತ್ತಾಳೆ.

ಜಾನಿಸ್ ತನ್ನ ಫೋಟೋಶೂಟ್ ಒಂದರಲ್ಲಿ ಅರ್ತುರೊ ಎಂಬ ವಿಧಿವಿಜ್ಞಾನಿ ಮಾನವ ಶಾಸ್ತ್ರಜ್ಞನನ್ನು ಭೇಟಿಯಾಗುತ್ತಾಳೆ. ಸರ್ವಾಧಿಕಾರಿ ಬೆಂಬಲಿಗರಾದ ಫೆಲಾಂಜಿಸ್ಟ್‌ಗಳು (Falangists) ತನ್ನ ಮುತ್ತಾತನನ್ನು ಒಂದು ರಾತ್ರಿ ಅಚಾನಕ್ಕಾಗಿ ವಶಕ್ಕೆ ತೆಗೆದುಕೊಂಡು ಕೊಲೆಗೈದು ಅಜ್ಞಾತ ಸ್ಥಳವೊಂದರಲ್ಲಿ ಹೂತಿರುತ್ತಾರೆ. ತನ್ನ ಅಜ್ಜಿಯ ಕೊನೆಯಾಸೆ ಈಡೇರಿಸಲು ಜಾನಿಸ್ ತನ್ನ ಮುತ್ತಾತನ ಅಸ್ಥಿಪಂಜರವನ್ನು ಹೇಗಾದರೂ ಮಾಡಿ ಹುಡುಕಿ ಕ್ಯಾನ್ಸರ್ ರೋಗಿಯಾದ ತನ್ನ ಅಜ್ಜಿಯ ಮನಸ್ಸಿಗೆ ಸಮಾಧಾನ ನೀಡಲು ಹಾತೊರೆಯುತ್ತಾಳೆ. ಅದಕ್ಕೆಂದೇ ಅವಳು ಅರ್ತುರೊನಲ್ಲಿ ತನ್ನ ಮುತ್ತಾತನ ಸಮಾಧಿ ಸ್ಥಳವನ್ನು ಹುಡುಕಿಕೊಡಲು ನೆರವಿಗಾಗಿ ಕೇಳುತ್ತಾಳೆ. ಅವಿವಾಹಿತೆ ಜಾನಿಸ್ ಹಾಗೂ ವಿವಾಹಿತ ಅರ್ತುರೊ (ಅವನ ಹೆಂಡತಿ ಕ್ಯಾನ್ಸರ್ ಪೀಡಿತೆ)ರಲ್ಲಿ ಅನುರಾಗ ಉಂಟಾಗಿ ಜಾನಿಸ್ ಗರ್ಭವತಿಯಾಗುತ್ತಾಳೆ. ಅತ್ತ ಕಡೆಯಲ್ಲಿ ತಾನು ಪ್ರೀತಿಸಿದ ಯುವಕ ಮತ್ತವನ ಸಹಚರರ ಅತ್ಯಾಚಾರಕ್ಕೊಳಗಾಗಿ ಆನಾ ಕೂಡ ಗರ್ಭ ಧರಿಸುತ್ತಾಳೆ. ಸಮಾಜದ ಕೆಂಗಣ್ಣಿಗೆ ಗುರಿಯಾಗುವುದು ಬೇಡವೆಂದ ಆನಾಳ ತಂದೆಯ ಮಾತಿನಿಂದ, ಒಲ್ಲದ ಮಗುವಿಗೆ ತಾಯಾಗುವ ಸಂಕಟ ಹೊತ್ತಿರುತ್ತಾಳೆ. ಹೆರಿಗೆ ಆಸ್ಪತ್ರೆಯ ವಾರ್ಡಿನಲ್ಲಿ ಇವರೀರ್ವರೂ ಮೊದಲು ಭೇಟಿಯಾಗುತ್ತಾರೆ. ಇಬ್ಬರೂ ಹೆಣ್ಣುಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ಪ್ರಮಾದವಶಾತ್ ಇವರ ಮಕ್ಕಳು ಆದಲುಬದಲಾಗುತ್ತಾರೆ. ಇದರ ಅರಿವಿಲ್ಲದೇ ಜಾನಿಸ್ ಮತ್ತು ಆನಾ ತಮ್ಮ ಜೀವನ ಕಳೆಯುತ್ತಿರುತ್ತಾರೆ.

ಪೆನಲಪಿ ಕ್ರುಝ್

ಒಮ್ಮೆ ಅರ್ತುರೊ ಮಗುವನ್ನು ನೋಡಲು ಜಾನಿಸ್‌ಳ ಮನೆಗೆ ಬಂದಾಗ ಮಗುವಿನ ಲಕ್ಷಣಗಳು ತನ್ನನ್ನು ಹೋಲುವುದಿಲ್ಲ ಎನ್ನುತ್ತಾನೆ. ಇಬ್ಬರಲ್ಲೂ ಜಗಳವುಂಟಾಗಿ ಜಾನಿಸ್ ಆರ್ತುರೊನಿಂದ ದೂರವುಳಿದೇ ಒಂಟಿ ತಾಯಾಗಿ ಸೆಸೀಲಿಯಾಳನ್ನು ಸಲಹುವ ನಿರ್ಧಾರ ಮಾಡುತ್ತಾಳೆ. ಆದರೂ ಒಮ್ಮೆ ಆಕೆ ತನ್ನ ಹಾಗೂ ಸೆಸೇಲಿಯಾಳ ಡಿ.ಎನ್.ಎ ಪರೀಕ್ಷೆ ಮಾಡಿಸಲಾಗಿ ಮಗು ಅವಳದಲ್ಲ ಎಂಬ ವರದಿ ಬರುತ್ತದೆ. ಈ ವಿಷಯವನ್ನು ಗೌಪ್ಯವಾಗಿಟ್ಟು ಅವಳು ಏಕಾಂಗಿಯಾಗಿ ಬದುಕುತ್ತಿರುತ್ತಾಳೆ. ಅದೇ ಸಮಯದಲ್ಲಿ ಅತ್ತ ಆನಾಳ ಹತ್ತಿರವಿದ್ದ ಅನಿಟಾ ಅಕಾಲಿಕವಾಗಿ ಹಾಸಿಗೆಯಲ್ಲೇ SIDS (Sudden Infant Death Syndrome) ಎಂಬ ಕಾಯಿಲೆಗೆ ಬಲಿಯಾಗುತ್ತಾಳೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಜಾನಿಸ್‌ಳ ಮುತ್ತಾತನಂತೆಯೆ ಅನಿಟಾ ಕೂಡ ರಾತ್ರಿಯಲ್ಲಿ ಅಕಾರಣವಾಗಿ ಅಸುನೀಗುತ್ತಾಳೆ ಎಂಬುದು.

ಗತಕಾಲದ ನೆನಪುಗಳು, ಗುಟ್ಟುಗಳು ಮತ್ತು ಸತ್ಯಗಳು ಎಂದಾದರೂ ಹೊರಬಂದೇ ತೀರುತ್ತವೆ ಎಂದು ಮನಗಂಡ ಜಾನಿಸ್ ವಿಷಯವನ್ನು ಆನಾಳಿಗೆ ತಿಳಿಸುತ್ತಾಳೆ. ಹಾಗೂ ಆನಾಳನ್ನು ಸೆಸೇಲಿಯಾಳ ಪೋಷಣೆಗಾಗಿ ನೇಮಿಸಿಕೊಳ್ಳುತ್ತಾಳೆ. ಆನಾಗೆ ತಿಳಿಸದೆ ಮಗು ಮತ್ತವಳ ಡಿ.ಎನ್.ಎ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಾಳೆ. ವರದಿಯಲ್ಲಿ ಆನಾಳೆ ಸೆಸೇಲಿಯಾಳ ನಿಜವಾದ ತಾಯಿಯೆಂದು ತಿಳಿಯುತ್ತದೆ. ಈ ಸತ್ಯ ತಿಳಿದ ಮೇಲೆ ಆನಾ ಕೋಪದಲ್ಲಿ ಸೆಸೇಲಿಯಾಳನ್ನು ಕರೆದುಕೊಂಡು ತನ್ನ ತಾಯಿಯ ಹತ್ತಿರ ಹೊರಟುಬಿಡುತ್ತಾಳೆ.

ಚಿತ್ರಕಥೆಯು ಹಠಾತ್ತನೆ ಚಲಿಸಿ, ಸ್ಪೇನ್ ಸರ್ಕಾರವು ಫೆಲಾಂಜಿಸ್ಟ್‌ಗಳ ನರಹತ್ಯೆಯ ಬಲಿಪಶುಗಳಾದವರ ಗೋರಿಗಳನ್ನು ಪುನಃ ಅಗೆಯಲು ಅರ್ತುರೋನ ನೇತೃತ್ವದ ತಂಡಕ್ಕೆ ಅನುಮತಿ ನೀಡುತ್ತದೆ. ಮತ್ತೆ ಜಾನಿಸ್ ಹಾಗೂ ಅರ್ತುರೊ ಒಂದಾಗುತ್ತಾರೆ (ಈ ವೇಳೆಗೆ ಅರ್ತುರೊ ತನ್ನ ಹೆಂಡತಿಗೆ ವಿಚ್ಛೇದನ ನೀಡಿರುತ್ತಾನೆ). ಇಬ್ಬರೂ ಜೊತೆಗೂಡಿ ಜಾನಿಸ್‌ಳ ಮೂಲ ಊರಿಗೆ ಹೊರಟು ಅಲ್ಲಿ ಜಾನಿಸ್‌ಳ ಮುತ್ತಾತನ ಹಾಗೂ ಇನ್ನಿತರ ದುರ್ದೈವಿಗಳ ವಿವರಗಳನ್ನು ಕಲೆಹಾಕಿ, ಬದುಕುಳಿದವರ ಡಿ.ಎನ್.ಎ ಮಾದರಿಗಳನ್ನು ಸಂಗ್ರಹಿಸುತ್ತಾರೆ. ಕೊನೆಗೆ ಎಲ್ಲಾ ದಾಖಲೆ ಹಾಗೂ ವಿವರಗಳೊಂದಿಗೆ ಕೊಲೆಗೈದು ಹೂತುಹಾಕಿದ ಜಾಗವನ್ನು ಪತ್ತೆ ಮಾಡಲಾಗುತ್ತದೆ. ಈ ಒಂದು ಸನ್ನಿವೇಶ ಬರುವ ಹೊತ್ತಿಗೆ ಆನಾ ಕೂಡ ಜಾನಿಸ್‌ಳನ್ನು ಕ್ಷಮಿಸಿ ಅವಳ ಈ ಹುಡುಕಾಟಕ್ಕೆ ಜೊತೆಯಾಗಿರುತ್ತಾಳೆ. ಇನ್ನೊಂದು ವಿವರವೇನೆಂದರೆ ಜಾನಿಸ್ ಮತ್ತೆ ಅರ್ತುರೊನಿಂದ ಮೂರು ತಿಂಗಳ ಗರ್ಭಿಣಿಯೆಂಬುದು ಕೂಡಾ ತಿಳಿಯುತ್ತದೆ. ಈ ಉತ್ಖನನವು ಐತಿಹಾಸಿಕ ನೆನಪು ಹಾಗೂ ಸತ್ಯದ ಚಲನಶೀಲತೆಯನ್ನು ಸಾಂಕೇತಿಸುತ್ತದೆ. ಚಿತ್ರದ ಕೊನೆಗೆ ಹಿನ್ನುಡಿಯ ರೂಪದಲ್ಲಿ ನಿರ್ದೇಶಕ – ಎಡ್ವರ್ದೊ ಗೆಲಿಯಾನೊ (Eduardo Galiano) ಎಂಬ ಉರುಗ್ವೆ ದೇಶದ ಪತ್ರಕರ್ತ ಹಾಗೂ ಬರಹಗಾರನ ಈ ಸಾಲುಗಳನ್ನು ಬಳಸುತ್ತಾನೆ: “ಯಾವ ಇತಿಹಾಸವೂ ಮೂಕವಲ್ಲ. ಎಷ್ಟೇ ಬಾರಿ ದುಷ್ಟರು ಅದರ ಮೇಲೆ ಹಕ್ಕು ಸಾಧಿಸಿದರೂ, ಅದನ್ನು ಒಡೆದರೂ, ಸುಳ್ಳುಗಳನ್ನು ಸೃಷ್ಟಿಸಿದರೂ, ಯಾವುದೇ ಮಾನವ ಇತಿಹಾಸವು ಬಾಯಿ ಮುಚ್ಚಿಕೊಂಡು ಮೌನವಾಗಿರಲು ನಿರಾಕರಿಸುತ್ತದೆ. ಅಜ್ಞಾನ ಹಾಗೂ ಕಿವುಡಾಗಿರುವಿಕೆಯ ಹೊರತಾಗ್ಯೂ ಗತವು ವರ್ತಮಾನದಲ್ಲಿ ಜೀವಂತವಾಗಿ ಮಿಡಿಯುತ್ತಿರುತ್ತದೆ.”

ಮಿಲೆನಾ ಸ್ಮಿಟ್

ಈ ಒಂದು ಅಂತರ್ ಪಠ್ಯೀಯತೆಯು ಚಿತ್ರಕ್ಕೊಂದು ಸ್ಪಷ್ಟ ಆಯಾಮ ದೊರಕಿಸುತ್ತದೆ. ಅದಕ್ಕೆಂದೇ ಪೆದ್ರೊ ಕೊನೆಯ ಶಾಟ್‌ನಲ್ಲಿ ಅಮಾಯಕ ಸ್ಪೇನ್ ಜನರ ಮುಗ್ಧತೆಯ ಪ್ರತೀಕವಾಗಿ ಸಮಾಧಿ ಸ್ಥಳವನ್ನು ಶಿಲುಬೆಯಾಕಾರದಲ್ಲಿ ಚಿತ್ರಿಸಿದ್ದಾರೆ. ಹಾಗೂ ಕೊನೆಯಲ್ಲಿ ಅರ್ತುರೊ ಮತ್ತಿತರು ಅದೇ ಗೋರಿಯಲ್ಲಿ ಸತ್ತವರ ಅನುಕರಣೆ ಮಾಡುವಂತೆ ಮಲಗಿರುವ ಚಿತ್ರಣ ಬರುತ್ತದೆ. ಜಾನಿಸ್, ಆನಾರ ಮಕ್ಕಳ ತೊಟ್ಟಿಲುಗಳು ಹಾಗೂ ಈ ಗೋರಿಯ ಸಂಕೇತ ಕೂಡಾ ಮಾರ್ಮಿಕವಾಗುತ್ತದೆ. ಇದೇ ರೀತಿಯಲ್ಲಿ ಜಾನಿಸ್‌ಳ ಪಾತ್ರದ ಚಿತ್ರಣವು ಯಾವಾಗಲೂ ಕಡುಗೆಂಪು ಹಾಗೂ ಕಪ್ಪು ವರ್ಣಗಳಲ್ಲಿ ಕಂಡುಬಂದರೆ, ಆನಾಳ ಪಾತ್ರವು ತಿಳಿ ಬಣ್ಣದ ಹಿನ್ನೆಲೆ ಹಾಗೂ ಉಡುಪುಗಳಲ್ಲಿ ಚಿತ್ರಿತವಾಗಿದೆ.

ಚಿತ್ರದ ಇನ್ನೊಂದು ಮುಖ್ಯ ಸಂಕೇತವೆಂದರೆ ಕಪ್ಪು ಜನಾಂಗದ ಗುಲಾಮಳಾಗಿರಬಹುದಾದ ತರುಣಿಯ ಅರೆನಗ್ನ ಪೇಂಟಿಂಗ್‌ನ ಎದುರಲ್ಲೇ ಬಹಳಷ್ಟು ಸಾರಿ ಜಾನಿಸ್ ಹಾಗೂ ಆನಾ ಮಾತುಕತೆ ನಡೆಸುತ್ತಾರೆ. ಮೂಲ ನಿವಾಸಿ ಜಾನಿಸ್, ಬಿಳಿಯ ಜನಾಂಗಕ್ಕೆ ಸೇರಿದ ಆನಾ ಹಾಗೂ ಐತಿಹಾಸಿಕವಾಗಿ ದೌರ್ಜನ್ಯಕ್ಕೊಳಗಾದ ಕಪ್ಪು ಗುಲಾಮ ಹೆಣ್ಣುಮಗಳು – ಈ ಮೂವರೂ ಪುರುಷ ಪ್ರಧಾನ ವ್ಯವಸ್ಥೆ ಹಾಗೂ ಅದರ ಸಂಕಥನಗಳಾದ ವಸಾಹತುಶಾಹಿ, ಗುಲಾಮಗಿರಿ ಮತ್ತು ಅತ್ಯಾಚಾರಗಳ ಬಲಿಪಶುಗಳು ಮತ್ತು ಕೊನೆಗೆ ಹೆಣ್ಣುಗಳೇ ಎನ್ನುವುದನ್ನು ಪೆದ್ರೊ ಸೂಕ್ಷ್ಮವಾಗಿ ಹೇಳಿದ್ದಾರೆ ಎನಿಸುತ್ತದೆ.

ಡಾ. ರವಿಕುಮಾರ ಎಸ್. ಕುಂಬಾರ್

ಡಾ. ರವಿಕುಮಾರ ಎಸ್. ಕುಂಬಾರ್
ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಕವಿತೆ, ಅನುವಾದ ಹಾಗೂ ವಿಮರ್ಶೆ ಇವರ ಕಾರ್ಯ ಕ್ಷೇತ್ರಗಳು.


ಇದನ್ನೂ ಓದಿ: ಒಟಿಟಿ ವೇದಿಕೆಗಳಿಂದ ಮುಕ್ತ ಅವಕಾಶ: ವೈಜ್ಞಾನಿಕ ಕಲ್ಪನೆಯ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...