Homeಮುಖಪುಟಮಣಿಪುರ: ಅಸಹಾಯಕರಾಗಿ ಮೈತೈಗಳ ವಿರುದ್ಧ ಪ್ರತಿಭಟನೆಗಿಳಿದ ಪೊಲೀಸರು

ಮಣಿಪುರ: ಅಸಹಾಯಕರಾಗಿ ಮೈತೈಗಳ ವಿರುದ್ಧ ಪ್ರತಿಭಟನೆಗಿಳಿದ ಪೊಲೀಸರು

- Advertisement -
- Advertisement -

ಮಣಿಪುರದ ಮೈತೈ ಪ್ರಾಬಲ್ಯದ ಕಣಿವೆ ಜಿಲ್ಲೆಗಳಾದ್ಯಂತ ಪೊಲೀಸ್ ಸಿಬ್ಬಂದಿಗಳು ಮೈತೈ ಸಂಘಟನೆಯಾದ ಅರಾಂಬೈ ತೆಂಗೋಲ್‌ನ ಸದಸ್ಯರು ಪೊಲೀಸ್ ಅಧಿಕಾರಿಯನ್ನು ಅಪಹರಿಸಿರುವುದನ್ನು ಖಂಡಿಸಿ ಪ್ರತಿಭಟಿಸಿದ್ದಾರೆ.

ಮಂಗಳವಾರ ಸಂಜೆ ಇಂಫಾಲದಲ್ಲಿ ಶಸ್ತ್ರಸಜ್ಜಿತ ಗುಂಪೊಂದು ಎಎಸ್‌ಪಿ ಒಬ್ಬರ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಅಪಹರಿಸಿದೆ. ಇದನ್ನು ಖಂಡಿಸಿ ನಾಲ್ಕು ಜಿಲ್ಲೆಗಳ ನೂರಾರು ಮಣಿಪುರ ಪೊಲೀಸ್‌ ಕಮಾಂಡೋಗಳು ಸಾಂಕೇತಿಕವಾಗಿ “ ಆರ್ಮ್ಸ್‌ ಡೌನ್” ಪ್ರತಿಭಟನೆಯನ್ನು ನಡೆಸಿದ್ದಾರೆ. ಪಶ್ಚಿಮ ಇಂಫಾಲ್‌, ಥೌಬಾಲ್‌, ಕಕ್ಚಿಂಗ್‌ ಮತ್ತು ಬಿಷ್ಣುಪುರ್‌ ಜಿಲ್ಲೆಗಳ ಕಮಾಂಡೋಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ದಾಳಿಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಫೆಬ್ರವರಿ 27ರಂದು ಸುಮಾರು 200 ಶಸ್ತ್ರಸಜ್ಜಿತ ದುಷ್ಕರ್ಮಿಗಳು ಇಂಫಾಲ್ ಪೂರ್ವದಲ್ಲಿರುವ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್ಪಿ) ಮೊಯಿರಾಂಗ್ಥೆಮ್ ಅಮಿತ್ ಅವರ ನಿವಾಸಕ್ಕೆ ನುಗ್ಗಿ, ಬಂಧಿತ ಅರಾಂಬೈ ತೆಂಗೋಲ್‌ನ ಸೆಕ್ಮೈ ಘಟಕದ ಮುಖ್ಯಸ್ಥ ರಾಬಿನ್ ಎಂ. ಅವರನ್ನು ಬಿಡುಗಡೆಗೆ ಆಗ್ರಹಿಸಿತ್ತು.

ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ ಜೊತೆಗಿನ ಶಾಂತಿ ಒಪ್ಪಂದದ ತಿಂಗಳ ನಂತರ, ಮಣಿಪುರದಲ್ಲಿ ಅಪಹರಣ, ಸುಲಿಗೆ ಪ್ರಕರಣಗಳು ಹೆಚ್ಚುತ್ತಿವೆ. ಈ ಮಧ್ಯೆ ಹೆಚ್ಚುವರಿ ಎಸ್‌ಪಿ ಮತ್ತು ಅವರ ಬೆಂಗಾವಲು ಸಿಬ್ಬಂದಿಯನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದಾರೆ, ನಂತರ ಅವರನ್ನು ಕ್ವಾಕಿಥೆಲ್ ಕೊಂಜೆಂಗ್ ಲೈಕೈ ಪ್ರದೇಶದಿಂದ ರಕ್ಷಿಸಲಾಗಿದೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಣಿಪುರ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶಸ್ತ್ರಸಜ್ಜಿತ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಯ ನಿವಾಸವನ್ನು  ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಪೊಲೀಸ್‌ ಕ್ರಮದ ವೇಳೆ ರಬಿನಾಶ್ ಮೊಯಿರಾಂಗ್ಥೆಮ್ (24) ಮತ್ತು ಕಂಗುಜಮ್ ಭೀಮಸೇನ್ (20) ಎಂದು ಗುರುತಿಸಲಾದ ಇಬ್ಬರು ಗಾಯಗೊಂಡಿದ್ದಾರೆ.

ಮಣಿಪುರ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ನಮ್ಮ ನೈತಿಕ ಸ್ಥೈರ್ಯ ಕುಸಿದಿದೆ. ಯಾವುದೇ ನಾಗರಿಕ ಸಮಾಜದ ಗುಂಪುಗಳು ನಮ್ಮ ಬೆಂಬಲಕ್ಕೆ ಬಂದಿಲ್ಲ. ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ತಡೆದಿದ್ದಾರೆ. ನಮ್ಮವರೇ ನಮ್ಮನ್ನು ಬೆಂಬಲಿಸುತ್ತಿಲ್ಲ. ದಾಳಿಗೆ ಒಳಗಾದ ಪೊಲೀಸ್ ಅಧಿಕಾರಿಯೂ ಮೈತೇಯ್ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ರಾಜ್ಯದಾದ್ಯಂತ ಪೊಲೀಸರಿಂದ 4,000ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಲಕ್ಷಗಟ್ಟಲೆ ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ. ರಾಜ್ಯ ಸರ್ಕಾರದ ಮನವಿಗಳ ಹೊರತಾಗಿಯೂ, ಈ ಶಸ್ತ್ರಾಸ್ತ್ರಗಳನ್ನು ಹಿಂತಿರುಗಿಸಲಾಗಿಲ್ಲ. ಇವು ಈಗಲೂ ನಾಗರಿಕರ ಕೈಯ್ಯಲ್ಲಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದ ವಕೀಲ್‌ ಹಸನ್‌ ನಿವಾಸವನ್ನು ಕೆಡವಿದ ಸ್ಥಳೀಯಾಡಳಿತ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...