ಪ್ಯಾಲೆಸ್ತೀನ್ ಪರ ಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಕುರಿತು ತನಿಖೆಯಾಗಬೇಕು ಮತ್ತು ಈ ಸಂಬಂಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯನ್ನು ಭೇಟಿಯಾಗಿರುವ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಶನ್, ಕಲೆಕ್ಟಿವ್ ಬೆಂಗಳೂರು, ಸ್ಟೂಡೆಂಟ್ಸ್ ಫಾರ್ ಪೀಪಲ್ಸ್ ಡೆಮಾಕ್ರಸಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಸ್ಟೂಡೆಂಟ್ ಯೂನಿಯನ್, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟೀಸ್, ಅಡ್ವಕೇಟ್ಸ್ ಅಂಡ್ ಆಕ್ಟಿವಿಸ್ಟ್ ಸಂಘಟನೆಗಳ ಸದಸ್ಯರು ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ಯಾಲೆಸ್ತೀನ್‌ಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನ ಫ್ರೇಝರ್ ಟೌನ್‌ನಲ್ಲಿ ಜೂನ್ 2ರಂದು ‘ಬೆಂಗಳೂರು ವಿಥ್ ಗಾಝಾ’ ಎಂಬ ಹೆಸರಿನಲ್ಲಿ ಸಣ್ಣ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ನೆರೆದಿದ್ದ ಮಹಿಳೆಯರು, ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ. ಕೇವಲ ಪುರುಷ ಪೊಲೀಸರು ಆಗಮಿಸಿ ಮಹಿಳೆಯರನ್ನೂ ಬಲವಂತವಾಗಿ ವಾಹನಕ್ಕೆ ಹತ್ತಿಸಿದ್ದಾರೆ. ಅಲ್ಲಿದ್ದವರಿಗೆ ಏನು ನಡೆಯುತ್ತಿದೆ ಎಂದು ವಿವರಿಸಲೂ ಸಮಯ ನೀಡಿಲ್ಲ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಗಾಝಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡದ ಕುರಿತು ಜಾಗೃತಿ ಕಾರ್ಯಕ್ರಮ ಮಾತ್ರ ಆಯೋಜಿಸಲಾಗಿತ್ತು. ಅಲ್ಲಿ ಯಾವುದೇ ಪ್ರತಿಭಟನೆ ನಡೆಯುತ್ತಿರಲಿಲ್ಲ. ಹಾಗಾಗಿ, ಪ್ರತಿಭಟನೆಯ ಅನುಮತಿ ಪಡೆಯುವ ಅಗತ್ಯವಿರಲಿಲ್ಲ. ನೆರೆದಿದ್ದ ಜನರು ಯಾವುದೇ ಘೋಷಣೆಗಳನ್ನೂ ಕೂಗಿರಲಿಲ್ಲ. ಪೊಲೀಸರು ಯಾವುದೇ ಮಾಹಿತಿ ನೀಡದೆ ಏಕಾಏಕಿ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ಪ್ರತಿರೋಧ ಒಡ್ಡುವ ಸಲುವಾಗಿ ಘೋಷಣೆ ಕೂಗಿದ್ದಾರೆ. ಘಟನೆಯ ವಿಡಿಯೋ ಮಾಡಲು ಮುಂದಾದಾಗ, ಅದಕ್ಕೂ ತಡೆಯೊಡ್ಡಿದ್ದ ಪೊಲೀಸರು, ಮೊಬೈಲ್ ಕಿತ್ತುಕೊಳ್ಳುವುದಾಗಿ ಹೆದರಿಸಿದ್ದಾರೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಪೊಲೀಸರ ಕ್ರಮ ಖಂಡನೀಯ ಮಾತ್ರವಲ್ಲದೆ, ನಾಗರಿಕರ ಅಭಿವ್ಯಕ್ತಿ ಹಕ್ಕಿನ ಉಲ್ಲಂಘನೆಯಾಗಿದೆ. ಭಾರತ ದೇಶ ಅಧಿಕೃವಾಗಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿರುವಾಗ, ಸಿಎಂ ಸಿದ್ದರಾಮಯ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮಧ್ಯ ಪ್ರವೇಶಿಸುದಿಲ್ಲ ಎಂದು ಹೇಳಿರುವಾಗ ಪೊಲೀಸರು ನಡೆದುಕೊಂಡಿರುವ ರೀತಿ ಖಂಡನೀಯ. ಘಟನೆಗೆ ಸಂಬಂಧಿಸಿದಂತೆ ನಾಗರಿಕರ ಮೇಲೆ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ. ಅವುಗಳನ್ನು ರದ್ದುಗೊಳಿಸಬೇಕು ಮತ್ತು ಪೊಲೀಸ್ ದೌರ್ಜನ್ಯದ ಕುರಿತು ತನಿಖೆಯಾಗಬೇಕು ಎಂದು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಡಿಸಿಪಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ವಿವಾದಿತ ‘ಹಮಾರೆ ಬಾರಹ್’ ಸಿನಿಮಾ ಬಿಡುಗಡೆ ನಿಷೇಧಿಸಿದ ಸರ್ಕಾರ