PC: NDTV

ರೈತರ ಹತ್ಯೆ ನಡೆದ ಉತ್ತರ ಪ್ರದೇಶದ ಲಖಿಂಪುರ್‌ ಖೇರಿಗೆ ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಪ್ರವೇಶಿಸದಂತೆ ತಡೆಯೊಡ್ಡಿದ್ದ ಉತ್ತರ ಪ್ರದೇಶ ಸರ್ಕಾರ ಕೊನೆಗೂ ಅವಕಾಶ ನೀಡಿದೆ.

ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರರು ಮೂವರು ಘಟನಾ ಸ್ಥಳಕ್ಕೆ ಭೇಟಿ ನೀಡಬಹುದು ಎಂದು ಉತ್ತರ ಪ್ರದೇಶದ ಗೃಹ ಇಲಾಖೆ ಮಧ್ಯಾಹ್ನ ಸ್ಪಷ್ಟಪಡಿಸಿದೆ.

ಸೋಮವಾರ ಸ್ಥಳಕ್ಕೆ ಹೊರಟಿದ್ದ ಪ್ರಿಯಾಂಕಾ ಗಾಂಧಿಯವರನ್ನು ಯುಪಿ ಸರ್ಕಾರ ತಡೆದು ಗೃಹಬಂಧನದಲ್ಲಿ ಇರಿಸಿತ್ತು. ಇದನ್ನು ಪ್ರಿಯಾಂಕಾ ಗಾಂಧಿ ಅವರು ಸೇರಿದಂತೆ ಇತರ ನಾಯಕರು “ಅಕ್ರಮ ಬಂಧನ” ಎಂದು ಟೀಕಿಸಿದ್ದರು.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವು ಲಖಿಂಪುರ್ ಖೇರಿಗೆ ಭೇಟಿ ನೀಡಲು ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿತ್ತು. ಭಾನುವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಎಂಟು ಜನರ ಪೈಕಿ ನಾಲ್ವರು ರೈತರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಕಾಂಗ್ರೆಸ್ ನಿಯೋಗ ಹೊರಟಿತ್ತು.

ಲಖಿಂಪುರ್ ಖೇರಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಹಾಕಲಾಗಿದೆ. ಇದರ ಅಡಿಯಲ್ಲಿ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಲಾಗಿತ್ತು. ಲಖಿಂಪುರ್ ಖೇರಿಯ ಜಿಲ್ಲಾ ಕೇಂದ್ರದಿಂದ 70 ಕಿಮೀ ದೂರದಲ್ಲಿರುವ ಟಿಕುನಿಯಾಕ್ಕೆ ಪ್ರತಿಪಕ್ಷ ನಾಯಕರು ಹೋಗುವುದನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರವು ಬಿಗಿ ಬಂದೋಬಸ್ತ್ ಮತ್ತು ಪೊಲೀಸರನ್ನು ನಿಯೋಜಿಸಿದೆ.

ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಛತ್ತೀಸ್‌ಘಡದ ಮುಖ್ಯಮಂತ್ರಿ ಭೂಪೇಶ್‌ ಭಾಗೇಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಚನ್ನಿ, ಹಿರಿಯ ನಾಯಕ ಕೆ.ಸಿ.ವೇಣುಗೋಪಲ್‌ ಮತ್ತು ಸಚಿನ್‌ ಪೈಲೆಟ್‌ ಅವರು ಸ್ಥಳಕ್ಕೆ ಹೊರಟಾಗ ದೆಹಲಿ-ಲಕ್ನೋ ವಿಮಾನವನ್ನು ಹತ್ತದಂತೆ ಬುಧವಾರ ಬೆಳಿಗ್ಗೆಯೂ ತಡೆಯಲಾಗಿತ್ತು. ಬುಧವಾರ ಬೆಳಿಗ್ಗೆ ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದ್ದರು.

“ಹಿಂದೆ ಪ್ರಜಾಪ್ರಭುತ್ವವಿತ್ತು, (ಈಗ) ಭಾರತದಲ್ಲಿ ಸರ್ವಾಧಿಕಾರವಿದೆ. ರಾಜಕಾರಣಿಗಳು ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ನಾವು ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದು ನಿನ್ನೆಯಿಂದ ಹೇಳಲಾಗುತ್ತಿದೆ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ದ ನಾಯಕರು ಲಖಿಂಪುರ ಖೇರಿಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮೃತ ರೈತರ ಕುಟುಂಬಗಳನ್ನು ಭೇಟಿಯಾಗಲು ಲಖಿಂಪುರ್‌ ಖೇರಿಗೆ ಕಾಂಗ್ರೆಸ್ ನಿಯೋಗ ಹೊರಟಿತ್ತು.

“ಸೆಕ್ಷನ್ 144 ಜಾರಿಯಿದ್ದರೂ ಮೂರು ಜನರ ತಂಡ ಹೋಗಬಹುದು. ಸೆಕ್ಷನ್ 144 ನಲ್ಲಿ 5 ಜನರ ತಂಡ ಹೋಗಬಾರದು. ಇದರಿಂದಾಗಿ ನಾವು ಪತ್ರ ಬರೆದಿದ್ದೇವೆ. ಬೇರೆ ಪಕ್ಷದವರಿಗೆ ಅನುಮತಿ ನೀಡಲಾಗುತ್ತಿದೆ. ನಮ್ಮನ್ನು ಮಾತ್ರ ತಡೆಯಲಾಗುತ್ತಿದೆ. ನಾವೇನು ತಪ್ಪು ಮಾಡಿದ್ದೇವೆ..?” ಎಂದು ಪ್ರಶ್ನಿಸಿದ್ದರು.

“ನಾವು ವಿರೋಧ ಪಕ್ಷದವರು. ನಾವು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಹತ್ರಾಸ್‌ನಲ್ಲಿ ನಾವು ಒತ್ತಡ ಹಾಕಿದ ಕಾರಣಕ್ಕೆ ಅಲ್ಲಿ ತನಿಖೆ ಆರಂಭವಾಯಿತು. ಇದರಿಂದಾಗಿ ರೈತರ ವಿಷಯದಲ್ಲಿಯೂ ನಾವು ಒತ್ತಡ ಹಾಕುತ್ತಿದ್ದೇವೆ. ರೈತರನ್ನು ಕೊಲೆ ಮಾಡಲಾಗಿದೆ, ಅವರಿಗೆ ಅನ್ಯಾಯವಾಗಿದೆ. ನಿಜ ಹೇಳಬೇಕೆಂದರೆ ಇದು ನಿಮ್ಮ (ಮಾಧ್ಯಮ) ಕೆಲಸ. ನೀವು ನಿಮ್ಮ ಜವಾಬ್ದಾರಿ ಮರೆತು ಕುಳಿತಿದ್ದಿರಿ ಅದಕ್ಕೆ ನಾವು ಮಾಡುತ್ತಿದ್ದೆವೆ” ಎಂದು ಮಾಧ್ಯಮದವರ ವಿರುದ್ದ ಕಿಡಿ ಕಾರಿದ್ದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸೀತಾಪುರದಲ್ಲಿ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಿಯಾಂಕಾ ಗಾಂಧಿಯನ್ನು ಅತಿಥಿ ಗೃಹದಲ್ಲಿ ಬಂಧನದಲ್ಲಿರಿಸಲಾಗಿದೆ. ಪ್ರಿಯಾಂಕಾ, ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು, ಪಕ್ಷದ ನಾಯಕ ದೀಪೇಂದ್ರ ಹೂಡಾ ಮತ್ತು ಇತರರ ವಿರುದ್ಧ  (ಸಿಆರ್‌ಪಿಸಿ) ಸೆಕ್ಷನ್ 151, 107, 116 ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಉಲ್ಲೇಖನೀಯ. ಈ ಎಲ್ಲ ಬೆಳವಣಿಗೆಗಳ ನಡುವೆ ಅಂತಿಮವಾಗಿ ಕಾಂಗ್ರೆಸ್ ನಾಯಕರು ಸ್ಥಳಕ್ಕೆ ತೆರಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿರಿ: ರೈತರ ಹತ್ಯೆಯಲ್ಲಿ ಸಚಿವ ‘ಅಜಯ್‌ ಮಿಶ್ರಾ’‍ ಹೆಸರು: ಯುಪಿ ಬ್ರಾಹ್ಮಣ ಪ್ರಾತಿನಿಧ್ಯಕ್ಕೆ ಸಂಕಷ್ಟ!

LEAVE A REPLY

Please enter your comment!
Please enter your name here