Homeಅಂಕಣಗಳು`ಅಲಕ್ಷಿತ’ ಲೋಕದ ಪಾಡು

`ಅಲಕ್ಷಿತ’ ಲೋಕದ ಪಾಡು

- Advertisement -
- Advertisement -

ಕನ್ನಡ ಚಿಂತನೆ-ಸಂಶೋಧನೆಗಳಲ್ಲಿ `ಅಲಕ್ಷಿತ’ ಪರಿಕಲ್ಪನೆ ಚಾಲ್ತಿಯಲ್ಲಿದೆ. ಅಧಿಕಾರಸ್ಥ ಸಂಸ್ಕøತಿ ಬದಿಗೆ ಸರಿಸಿರುವ ಲೋಕವನ್ನು ಆಸ್ಥೆಯಿಂದ ಗಮನಿಸುವುದು ಇದರ ಲಕ್ಷಣ. ಈ ಲೋಕದೃಷ್ಟಿ ಸಾಹಿತ್ಯಲೋಕಕ್ಕೆ ಹೊಸತೇನಲ್ಲ. ಕನಕದಾಸರು ರಾಗಿಯ ಮೇಲೆ ಕಾವ್ಯಬರೆದ ಕಾಲದಿಂದಲೂ ಇತ್ತು. 20ನೇ ಶತಮಾನದಲ್ಲಿ ಒಂದು ಮೌಲ್ಯಪ್ರಜ್ಞೆಯಾಗಿ ಚರ್ಚೆಗೆ ಬಂದಿತು. ರಾಮಕೇಂದ್ರಿತ ಕಥನ ಕಟ್ಟುವ ಭರದಲ್ಲಿ ಲಕ್ಷ್ಮಣನ ಸತಿಯಾಗಿದ್ದ ಊರ್ಮಿಳೆಯ ಬಗ್ಗೆ ಮೌನವಹಿಸಿದ್ದನ್ನು ಕುರಿತು ಟಾಗೂರರು `ಕಾವ್ಯದ ಅನಾದರ’ ಎಂದು ಲೇಖನ ಬರೆದರು. ಅವರ ಪ್ರಕಾರ ಗಂಡನಿಲ್ಲದೆ 14 ವರ್ಷ ಒಂಟಿಯಾಗಿ ಊರ್ಮಿಳೆ ಪಟ್ಟಿರಬಹುದಾದ ಪಾಡನ್ನು ಕವಿ ಲಕ್ಷಿಸಬೇಕಿತ್ತು. ಸುಖದುಃಖದ ವಿಷಯದಲ್ಲಿ ಮನುಷ್ಯರನ್ನು ತರತಮಿಸಿ ನೋಡುವುದರಿಂದ ಬರೆಹ ತನ್ನ ಮಾನುಷ ಸಮಗ್ರತೆ ಕಳೆದುಕೊಳ್ಳುತ್ತದೆ.
ಸ್ವಾರಸ್ಯವೆಂದರೆ, ಹೀಗೆ ಚಿಂತಿಸಿದ ಟಾಗೂರರು, ಬ್ರಾಹ್ಮಣ ಜಮೀನ್ದಾರಿ ವರ್ಗದಿಂದ ಬಂದವರು. ಆದರೆ ಜಾತಿ ಬಡತನ ಲಿಂಗದ ಕಾರಣದಿಂದ ಅಲಕ್ಷಿತಗೊಂಡಿರುವ ಜನರಿದ್ದ ಪರಿಸರದಲ್ಲಿ ಹುಟ್ಟಿಬೆಳೆದ ಅವರಿಗೆ, ದಮನಿತರ ಲೋಕವನ್ನು ಒಳಗೊಳ್ಳುವ ಪ್ರಜ್ಞೆ ತೀವ್ರವಾಗಿತ್ತು. ಈ ಪ್ರಜ್ಞೆ ಖರ್ಜೂರ ಮಾರುವ ಪರದೇಶಿ ಮುದುಕನ ಕತೆಯಾದ ‘ಕಾಬೂಲಿವಾಲಾ’ದಲ್ಲಿದೆ; ಧರ್ಮರಕ್ಷಣೆಯ ಹಮ್ಮಿನಲ್ಲಿ ಮಹಿಳೆಯರ ಕ್ರಿಯಾಶೀಲತೆಯನ್ನೇ ಮರೆತ ರಾಷ್ಟ್ರವಾದಿಯೊಬ್ಬನ ಕಥೆಯಾದ ‘ಗೋರಾ’ದಲ್ಲಿದೆ. ಟಾಗೂರರ ಚಿಂತನೆ ಕನ್ನಡದ ಅನೇಕ ಲೇಖಕರನ್ನು ಪ್ರಭಾವಿಸಿತು. ಕುವೆಂಪು ‘ರಾಮಾಯಣ ದರ್ಶನಂ’ನಲ್ಲಿ ಊರ್ಮಿಳೆಯ ಮೇಲೆ ಪ್ರತ್ಯೇಕ ಅಧ್ಯಾಯ ಬರೆದರು. ಅವರು ನಾಯಿ-ಗುತ್ತಿ-ತಿಮ್ಮಿಯರ ಪಾಡನ್ನು ಬಿಂಬಿಸುತ್ತ ಬರೆದ `ಮದುಮಗಳು’ ಕಾದಂಬರಿಯಲ್ಲೂ ಈ ಲೋಕದೃಷ್ಟಿಯಿದೆ; ‘ಜಲಗಾರ’ ‘ಶೂದ್ರತಪಸ್ವಿ’ ನಾಟಕಗಳಲ್ಲಿ; ‘ಇಲ್ಲಿ ಯಾರೂ ಮುಖ್ಯರಲ್ಲ ಯಾವುದೂ ಅಮುಖ್ಯವಲ್ಲ’ ಎಂಬ ಸಾಹಿತ್ಯ ಮೀಮಾಂಸಾತ್ಮಕ ಹೇಳಿಕೆಯಲ್ಲಿ ಇದಿದೆ.
ಸಂವೇದನಶೀಲ ಲೇಖಕರ ಬರೆಹದಲ್ಲಿ `ಅಲಕ್ಷಿತ’ ಲೋಕಗಳನ್ನು ಲಕ್ಷ್ಯಕ್ಕೆ ತರÀುವ ಪ್ರಕ್ರಿಯೆ ಬೇರೆಬೇರೆ ಪರಿಯಲ್ಲಿದೆ. ಪರ್ವತಗಳ ಉನ್ನತ ಶಿಖರ ವರ್ಣನೆಯಷ್ಟೇ ಅದರ ಬುಡದಲ್ಲಿರುವ ಹುಲ್ಲಿನೆಸಳು, ಹರಿದಾಡುವ ಇರುವೆ, ಅವರಿಗೆ ಮುಖ್ಯವಾಗುತ್ತದೆ. ಸಾಹಿತ್ಯಕ್ಕೆ ಅಧೋಲೋಕಗಳ ಸೆಳೆತ ಕುರಿತು ರಾಮಾನುಜನ್, ಜನಪದ ಕತೆಯೊಂದನ್ನು ರೂಪಕವಾಗಿ ಹೇಳುವುದುಂಟು. ಅದರಲ್ಲಿ ಸಂತಾನಾಪೇಕ್ಷಿ ರಾಣಿಯೊಬ್ಬಳು ಮಂತ್ರಿಸಿದ ಮಾವಿನಹಣ್ಣ ತಿರುಳನುಂಡು ಓಟೆ ಹೊರಗೆಸೆವಳು; ಓಟೆಯನ್ನು ತಿಂದ ಮೇಕೆ ರಾಜಕುಮಾರನನ್ನು ಹಡೆಯುತ್ತದೆ. ಹಾದಿಬೀದಿಯಲ್ಲಿ ಬಿದ್ದುದನ್ನು ನೋಡುವ-ತಿನ್ನುವ ಮೇಕೆಯ ಗುಣವಿಲ್ಲದೆ ದೊಡ್ಡ ಕಲೆ ಹುಟ್ಟದು. ಮನೆಯ ದೈನಿಕಗಳನ್ನೇ ಲೋಕದ ಬೃಹತ್ ವಿದ್ಯಮಾನಗಳೆಂದು ಬರೆಯುವ ಕೇರಳದ ವೈಕಂ ಬಶೀರರ ‘ಪಾತುಮ್ಮಳ ಆಡು’ ಈ ನಿಲುಮೆಯ ಶ್ರೇಷ್ಠಸೃಷ್ಟಿ. ತಳಲೋಕದ ವಸ್ತುವನ್ನು ಆರಿಸಿಕೊಳ್ಳುವ ದೃಷ್ಟಿಕೋನವನ್ನು ಕನ್ನಡಕ್ಕೆ ಪರಿಚಯಿಸಿದವರಲ್ಲಿ ಶರಣರೇ ಆದ್ಯರು. ಅನ್ನದಗುಳನ್ನು ಕಂಡ ಕಾಗೆ ತನ್ನ ಬಳಗವನೆಲ್ಲ ಕರೆವ ರೂಪಕವನ್ನು ಅವರು ಸೃಷ್ಟಿಸಿದರು. ಹರಿಹರನ ರಗಳೆಗಳ ಬಹುತೇಕ ನಾಯಕರು ತಳಸ್ತರದವರು; ಕನಕದಾಸರ `ರಾಮಧಾನ್ಯ ಚರಿತೆ’ಯು ಅವರ ಅವಸ್ಥೆಯ ಆತ್ಮಕಥನಾತ್ಮಕ ಮಂಡನೆಯೂ ಆಗಿತ್ತು. ಆಧುನಿಕ ಗದ್ಯಸಾಹಿತ್ಯ ಶುರುವಾಗುವುದೇ ‘ಇಂದಿರಾಬಾಯಿ’ ಎಂಬ ಬಾಲವಿಧವೆಯ ಕಥನದಿಂದ. ಮುಂದೆ ಈ ಪರಂಪರೆಯಲ್ಲಿ ಕಾರಂತರ ಚೋಮ, ಬೆಸಗರಹಳ್ಳಿಯವರ ‘ಗಾಂಧಿ’ ‘ಒಡಲಾಳ’ದ ಸಾಕವ್ವ ಪಾತ್ರಗಳಾಗಿ ಮೂಡಿದರು.
‘ಅಲಕ್ಷಿತ’ ಪರಿಭಾಷೆಗೆ `ಪ್ರಧಾನ’ `ಮುಖ್ಯ’ `ಅಧಿಕಾರಸ್ಥ’ ಎನಿಸಿದ ಆಲೋಚನ ಕ್ರಮವು ಕಡೆಗಣಿಸಿರುವ ಲೋಕಕ್ಕೆ ಸಂಬಂಧಿಸಿದ್ದು ಎಂಬರ್ಥವಿದೆ. ವಾಸ್ತವ ಇಷ್ಟು ಸರಳವಾಗಿಲ್ಲ; ಲಕ್ಷಿತ-ಅಲಕ್ಷಿತ ಎಂದು ವಿಂಗಡಿಸಲು ಬಳಕೆಯಾಗುತ್ತಿರುವ ಮಾನದಂಡದಲ್ಲೇ ಸಮಸ್ಯೆ ಇರಬಹುದು. ನಿರ್ದಿಷ್ಟ ಲೋಕದ ಅನುಭವ ಮತ್ತು ಅರಿವು, ನಾಗರಿಕ ಶಿಷ್ಟ ಅಧಿಕಾರಸ್ಥ ಸಮಾಜದ ಅರಿವಿಗೆ ಅಪರಿಚಿತವಾಗಿರಬಹುದು. ಆದರೆ ಸಮುದಾಯದ ಬದುಕಿಗೆ ಅವು ಪರಿಚಿತವೇ ಆಗಿರುತ್ತವೆ. ‘ಅಲಕ್ಷಿತ’ ಎನ್ನುವುದು ಗಾತ್ರದಲ್ಲಿ ಚಿಕ್ಕದ್ದು ಎಂಬ ಗ್ರಹಿಕೆಯಿದೆ. ಹೀಗೆನ್ನುವಾಗ ಕಿರುಸಂಖ್ಯೆಯಲ್ಲಿರುವ ಸಮುದಾಯಗಳ ಜೀವನಕ್ರಮಗಳು ತಕ್ಷಣ ಹೊಳೆಯುತ್ತವೆ. ದ್ವಿಲಿಂಗಿಗಳ, ಗೇಗಳ, ಸೂಫಿ-ತಂತ್ರ ಪಂಥಗಳ ಲೋಕಗಳು ನೆನಪಾಗುತ್ತವೆ. ಇವುಗಳಲ್ಲಿ ಕೆಲವು ದಮನಿತವೂ ಹೌದು.
ಆದರೆ ಗಾತ್ರದಲ್ಲಿ ಚಿಕ್ಕದಾಗಿರುವ ಎಲ್ಲವೂ ಅಲಕ್ಷಿತವಲ್ಲ. ಬ್ರಾಹ್ಮಣ-ಪಾರ್ಸಿ ಸಂಸ್ಕøತಿಗಳು ಗಾತ್ರದಲ್ಲಿ ಚಿಕ್ಕವಿದ್ದರೂ ಪ್ರಭಾವದ ದೃಷ್ಟಿಯಿಂದ ಚಿಕ್ಕವಲ್ಲ. ಇವಕ್ಕೆ ಹೋಲಿಸಿದರೆ ದಲಿತರ, ಅಲೆಮಾರಿಗಳ, ಮಹಿಳೆಯರ, ದೇಶೀಭಾಷೆಗಳ ಲೋಕಗಳು ಗಾತ್ರದಲ್ಲಿ ವಿಸ್ತಾರ. ಅಧಿಕಾರವಿಲ್ಲದ ಕಾರಣ, ಅವುಗಳ ಅನುಭವ ಮತ್ತು ಆಲೋಚನ ಕ್ರಮ ಅಮುಖ್ಯವಾಗಿವೆ- ರೈತಾಪಿ ಕುಶಲಕರ್ಮಿಗಳ ಜ್ಞಾನಪರಂಪರೆ ಅಗಾಧವಾಗಿದ್ದರೂ, ವಿಶ್ವವಿದ್ಯಾಲಯದ ಜ್ಞಾನದ ಮುಂದೆ ಅಮುಖ್ಯವಾಗಿರುವಂತೆ. ಹಾಗೆಕಂಡರೆ ಅಲಕ್ಷಿತ ಎನ್ನಬಹುದಾದ ಲೋಕಗಳು ಏಕಘಟಕಗಳಲ್ಲ. ಅಲ್ಲೂ ಅಲಕ್ಷಿತ ಸ್ತರಗಳಿವೆ. ಮಾದಿಗರÀಲ್ಲಿ ದಕ್ಕಲರದು, ದಲಿತರಲ್ಲಿ ಮಹಿಳೆಯರದು, ಮುಸ್ಲಿಮರಲ್ಲಿ ಪಿಂಜಾರರದು-ಹೀಗೆ.
‘ಅಲ್ಷಕಿತ’ ಲೋಕಗಳ ಬಗ್ಗೆ ಚಿಂತಿಸುವುದು ತರತಮವಿರುವ ಸಮಾಜದಲ್ಲಿ ಒಂದು ರಾಜಕೀಯ ಕ್ರಿಯೆ. ಇದು ಅಧಿಕಾರಸ್ಥ ರಚನೆಗಳ ಯಜಮಾನಿಕೆಯನ್ನು ಪ್ರಶ್ನಿಸುವ ಮತ್ತು ಒಡೆಯುವ ಪ್ರತಿರೋಧದ ಆಯಾಮ ಒಳಗೊಂಡಿದೆ; ಇದು ಅಲಕ್ಷಿತ ಲೋಕಗಳ ಕೀಳರಿಮೆ ತೊಡೆಯುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯೂ ಹೌದು. ಇದೊಂದು ದ್ವಿಮುಖಿ ಚಲನೆ. ಕಿರುಗುಂಪುಗಳ ದನಿಯನಾಲಿಸದ ಪ್ರಭುತ್ವಗಳ ಸಂವೇದನೆಯನ್ನು ವಿಸ್ತರಿಸಲು ಅಲಕ್ಷಿತ ಲೋಕದ ದನಿಗಳು ಪ್ರೇರೇಪಿಸಬಹುದು. ಅವುಗಳ ಅಸ್ತಿತ್ವ ಗುರುತಿಸುವುದು, ಅವನ್ನು ಒಳಗೊಳ್ಳುವುದು, ಅರೆಬರೆ ಪ್ರಜಾಪ್ರಭುತ್ವಕ್ಕೆ ಅರ್ಥ ತುಂಬಬಹುದು. ಇದು ಅಧಿಕಾರಸ್ಥ ಲೋಕಗಳು ಪ್ರತಿಷ್ಠಿತ ಮನೋಭಾವದಿಂದ ಹೊರಬಂದು, ಮಾನವೀಯಗೊಳ್ಳುವ ಪ್ರಕ್ರಿಯೆ; ಅಧಿಕಾರಸ್ಥರ ಜ್ಞಾನೋದಯ ಮತ್ತು ಸ್ವವಿಮರ್ಶಾತ್ಮಕ ವಿಸ್ತರಣೆ ಕೂಡ. ವಸಾಹತು ಅಧಿಕಾರದ ನೆಲೆಯಿಂದ ಮತಾಂತರಕ್ಕೆ ಬಂದಿದ್ದ ವೆರಿಯರ್ ಎಲ್ವಿನ್, ಬುಡಕಟ್ಟು ಸಂಸ್ಕøತಿ ಅಧ್ಯಯನ ಮಾಡುತ್ತಲೇ ಅದರ ಭಾಗವಾದನು. ಬಸವಣ್ಣ ತನ್ನ ಬ್ರಾಹ್ಮಣತನವನ್ನು ಕೀಳೀಕರಿಸುವಲ್ಲಿ, ಕುದ್ಮಲ್ ರಂಗರಾಯರ ಸಮಾಜಕಾರ್ಯದಲ್ಲಿ ಈ ಪ್ರಕ್ರಿಯೆಯಿದೆ; ಸಮಗಾರ ಭೀಮವ್ವನ ಮಡಿಲಿಗೆ ಬೀಳುವ ನಾಗಲಿಂಗ ಯತಿಯ ಪರಿತಾಪದಲ್ಲೂ ಇದಿದೆ. ಆದರೆ ಅಲಕ್ಷಿತವನ್ನು ಒಳಗೊಳ್ಳುವಾಗ, ಅಧಿಕಾರಸ್ಥ ನೆಲೆಗಳಿಗೆ ತಮ್ಮನ್ನು ಸಮೃದ್ಧಗೊಳಿಸಿಕೊಳ್ಳುವ ಸ್ವಾರ್ಥವಿರಬಹುದು. ಹೀಗಾಗಿ ಅನೇಕ ಬುಡಕಟ್ಟು ಲೋಕಗಳು ಪಾಶ್ಚಿಮಾತ್ಯ ಮಾನವಶಾಸ್ತ್ರಜ್ಞರ ಪಾಲಿಗೆ ಅಧ್ಯಯನ ಸರಕಾಗಿಬಿಟ್ಟವು. ಇದು ಕೇಂದ್ರೀಕರಣದ ಇನ್ನೊಂದು ತಂತ್ರ. ಭಾರತದ ಬಲಪಂಥೀಯ ರಾಜಕಾರಣವು, ತನ್ನ ಸಾಮಾಜಿಕ ವಿಸ್ತರಣೆಗಾಗಿ ಕೆಳಸ್ತರದ ಜಾತಿಗಳನ್ನು ಒಳಗೊಳ್ಳುವಲ್ಲಿ ಈ ತಂತ್ರವನ್ನು ನೋಡಬಹುದು.
ಆದರೆ ಅಲಕ್ಷಿತ ಲೋಕದೊಳಗಿಂದಲೇ ಹುಟ್ಟುವ ದನಿಯ ಪರಿಯೇ ಬೇರೆ. ದಮನಿತ ಸಮುದಾಯಗಳು ತಮ್ಮ ಭಾಷೆ-ಸಂಸ್ಕøತಿ-ಕಸುಬುಗಳನ್ನು ಅಧಿಕಾರಸ್ಥ ಸಾಂಸ್ಕøತಿಕ ಲೋಕದಲ್ಲಿ ಮಂಡಿಸಿಕೊಳ್ಳುವ ಕ್ರಿಯೆಗೆ ಸಮಾನತೆಯ ಆಶಯವಿರುತ್ತದೆ. ದಲಿತರ ಮಹಿಳೆಯರ ಗೇಗಳ, ಟ್ರಾನ್ಸ್‍ಜೆಂಡರುಗಳ ಅನುಭವ ಮತ್ತು ಅಭಿವ್ಯಕ್ತಿಗಳು ಸಾಹಿತ್ಯದಲ್ಲಿ ಮೂಡಿದ್ದು ಈ ನೆಲೆಯಲ್ಲಿ. `ಭಾರತೀಯ’ ಎನ್ನಲಾಗುವ ಕಾವ್ಯಮೀಮಾಂಸೆ ಪರಿಕಲ್ಪನೆಯ ಮಿತಿಯನ್ನು ಮುರಿಯಲು ದ್ರಾವಿಡ-ಜನಪದ-ದೇಶಭಾಷಾ ಕಾವ್ಯಮೀಮಾಂಸೆಗಳ ಹುಡುಕಾಟಗಳು, ಕೇಂದ್ರೀಕೃತ ಪರಿಕಲ್ಪನೆಗಳಿಗೆ ಪ್ರತಿರೋಧs ಮಾತ್ರವಲ್ಲ, ತಮ್ಮತನದ ಶೋಧವೂ ಆಗಿವೆ. ಇಲ್ಲಿ ಹುಟ್ಟುವ ಚಿಂತನೆ ಮತ್ತು ಕಲಾಕೃತಿಗಳಿಗೆ ಹಕ್ಕೊತ್ತಾಯದ ದನಿಯಿರುತ್ತದೆ. ಈ ದನಿಗಳಲ್ಲಿ ಎಲ್ಲವನ್ನೂ ನ್ಯಾಯಬದ್ಧ ಪ್ರತಿನಿಧಿಗಳೆಂದು ಹೇಳಲಾಗದು. ಸಮುದಾಯದ ಹೆಸರಲ್ಲಿ ವ್ಯಕ್ತಿಸ್ವಾರ್ಥಗಳು ತುಡಿಯುತ್ತಿರಬಹುದು; ಸಮುದಾಯದಿಂದ ತನ್ನನ್ನು ಕತ್ತರಿಸಿಕೊಂಡ ಸ್ವಕೇಂದ್ರಿತ ಚಿಂತನೆಗಳಿರಬಹುದು. ಸಾಮೂಹಿಕ ಬಿಡುಗಡೆ ಮತ್ತು ಹೋರಾಟಪ್ರಜ್ಞೆಯ ಸಂಗವಿಲ್ಲದೆ ಹೋದರೆ, ಅಲಕ್ಷಿತ ಲೋಕಗಳು ಬಲಿಷ್ಠರ ಆಟಿಕೆಗಳಾಗುತ್ತವೆ.
ತರತಮವುಳ್ಳ ಸಮಾಜದಲ್ಲಿ ಅಲಕ್ಷಿತ ಲೋಕಗಳ ಚಿಂತನೆ, ಅನುಭವ ಕಲೆಗಳನ್ನು ಮಂಡಿಸುತ್ತ, ಹೊಸ ಸಂವೇದನೆ ಸೃಷ್ಟಿಸುವುದು ಒಂದು ಸಾಂಸ್ಕøತಿಕ ರಾಜಕಾರಣ ನಿಜ. ಆದರೆ ಅಲಕ್ಷಿತವಾದುದು ಲಕ್ಷಿತವಾದರೆ ಸಮಸ್ಯೆ ಬಗೆಹರಿಯುವುದಿಲ್ಲ. ಅಲಕ್ಷಿತ ಲೋಕಗಳನ್ನು ಘನತೀಕರಿಸುವುದು ಒಂದು ವ್ಯಸನವಾಗುವ ಅಪಾಯವೂ ಇದೆ. ಅಲಕ್ಷಿತಲೋಕದ ಅನುಭವ ಮತ್ತು ವಿಚಾರಗಳು ಅಸೂಕ್ಷ್ಮವೂ ದುರ್ಬಲವೂ ಇದ್ದಲ್ಲಿ, ಹುಟ್ಟುವ ಕೃತಿ ಅಥವಾ ಚಿಂತನೆ ಎತ್ತರಕ್ಕೇರದು. ಅಲಕ್ಷಿತ ಪರಿಕಲ್ಪನೆಯನ್ನು ವಿಚಾರ ಸಾಹಿತ್ಯ ಮತ್ತು ಸಂಶೋಧನ ಬರೆಹದಲ್ಲಿ ಶೋಧಿಸುವ ಕ್ರಮಕ್ಕಿಂತ, ಅಲ್ಲಿನ ಅನುಭವವನ್ನು ಕಲೆಯಾಗಿ ಮರುಸೃಷ್ಟಿಸುವುದು ಬೇರೆ. `ಚೋಮನದುಡಿ’ `ಮದುಮಗಳು’ `ಒಡಲಾಳ’ `ಕುಸುಮಬಾಲೆ’ `ಮೋಹನಸ್ವಾಮಿ’ `ಬದುಕು’ ಕೃತಿಗಳು ಇದನ್ನು ಮಾಡಿವೆ. ಆದರೆ ಅಲಕ್ಷಿತ ಲೋಕದ ಅನುಭವ ಶೋಧಿಸುವ ಎಷ್ಟೊ ಕೃತಿ ಸೋತಿವೆ. ಕಾರಣ, ಅಲಕ್ಷಿತ ಲೋಕಗಳನ್ನು ಮಂಡಿಸುವ ಪ್ರತಿಭೆ ಮತ್ತು ದಾರ್ಶನಿಕತೆಯ ಕೊರತೆ.
ಅಧಿಕಾರಸ್ಥ ಲೋಕದ ಎದುರಾಳಿತನದಿಂದಲೇ ಅಲಕ್ಷಿತದ ಪರಿಕಲ್ಪನೆ ಹುಟ್ಟಿತು. ಹೀಗಾಗಿ ಲಕ್ಷಿತ-ಅಲಕ್ಷಿತಗಳ ನಡುವೆ ಸಂಘರ್ಷದ ಆಯಾಮ ಸಹಜ. ಆದರೆ ಈ ಸಂಘರ್ಷದಾಚೆ ಅನುಸಂಧಾನದ ಸಾಧ್ಯತೆಯೇ ಇಲ್ಲದ ವಿಮುಖತೆ ಅಲಕ್ಷಿತ ಪರಿಕಲ್ಪನೆಯನ್ನು ಸೊರಗಿಸಬಹುದು. ಹೀಗಾಗಿ ಇವು ಸದಾ ಎದುರಾಳಿ ಆಗಬೇಕಿಲ್ಲ. ನಿರ್ದಿಷ್ಟ ಹಂತದ ಬಳಿಕ ಲಕ್ಷಿತ-ಅಲಕ್ಷಿತಗಳು ತಂತಮ್ಮ ವಿಶಿಷ್ಟತೆ ಮತ್ತು ಘನತೆಯಿಂದ ಒಡನಾಡುವ, ಅವಕಾಶವಾದಿಯಲ್ಲದ ರಹದಾರಿಗಳು ಏರ್ಪಡಬಹುದು. `ಮಾರ್ಗ’ವು `ದೇಶಿ’ಯೊಳಗೆ ಹೊಕ್ಕು ಹಾಗೂ `ದೇಶಿ’ಯು ಮಾರ್ಗದ ಸಹವಾಸದಿಂದ ಪರಸ್ಪರ ಹೊಸತನ ಪಡೆದುಕೊಳ್ಳುವ ಪಂಪನ ಕಲ್ಪನೆ ಹುಟ್ಟಿದ್ದು ಈ ಒಡನಾಡು ತತ್ವದ ಮೇಲೆ. ಹಲವು ವರ್ಗದ ಸಮುದಾಯದ ಜೀವನಕ್ರಮ, ಆಲೋಚನಾಕ್ರಮ, ಭಾಷಿಕ ಲಯಗಳನ್ನು ಒಳಗೊಂಡಿರುವ ಒಂದೇ ಕೃತಿಯಲ್ಲಿ ದೇಶಿ-ಮಾರ್ಗ, ಲಕ್ಷಿತ-ಅಲಕ್ಷಿತ ಆಯಾಮಗಳು ಒಟ್ಟಿಗೆ ಇರಬಲ್ಲವು.
ಕನ್ನಡ ಸಂಶೋಧನೆಯ ಆರಂಭದಲ್ಲಿ `ಪ್ರಧಾನ’ ಎನಿಸಿದ ಕವಿ-ಕೃತಿ-ವಸ್ತುಗಳ ಮೇಲೆ ಹೆಚ್ಚು ಸಂಶೋಧನೆ ನಡೆಯಿತು. ನಂತರದ ಹಂತಗಳಲ್ಲಿ ಅದು ಅಲಕ್ಷಿತ ಕ್ಷೇತ್ರಗಳಿಗೆ ಚಾಚಿತು. ಬಸವಣ್ಣ-ಅಲ್ಲಮರ ಕಡೆಯಿಂದ ಕಾಳವ್ವೆ-ನೀಲಮ್ಮರತ್ತ ಹೊರಳಿತು; ಪಂಪ ರನ್ನ ಕುಮಾರವ್ಯಾಸ ಮುಂತಾದ ಕ್ಲಾಸಿಕಲ್ ಕವಿಗಳ ಚರ್ಚೆಗಳು ಮಂಟೆಸ್ವಾಮಿ ಮಾದೇಶ್ವರ ಜುಂಜಪ್ಪರ ಕಥೆಗಳತ್ತ ಚಲಿಸಿದವು. ಶಾಸನ ತಾಳೆಗರಿಯ ಜತೆಯಲ್ಲೇ, ಕಂಪನಿ ನಾಟಕ, ಸಿನಿಮಾ, ಧಾರವಾಹಿ, ಕರಪತ್ರ, ಜಾಹಿರಾತು ಕ್ಷೇತ್ರಗಳ ಮೇಲೆ ಗಮನ ಹರಿಯಿತು. ಯಾವುದೇ ಪ್ರಬುದ್ಧ ಸಮುದಾಯವು ತಿಳಿವನ್ನು ಸೃಷ್ಟಿಸುವ ವಿಷಯದಲ್ಲಿ ತನ್ನ ಪರಿಮಿತಿಯನ್ನು ಅರಿಯಲು ಮತ್ತು ದಾಟಲು ಸದಾ ಹವಣಿಸುತ್ತಿರುತ್ತದೆ. ಈ ವಿಕಸನಶೀಲ ಪ್ರಕ್ರಿಯೆ ಈಗ ಇನ್ನೊಂದು ಹಂತಕ್ಕೆ ದಾಟುತ್ತಿದೆ. ಇದುವರೆಗಿನ ಜ್ಞಾನಸೃಷ್ಟಿಯ ಚಟುವಟಿಕೆಗಳು ಮನುಷ್ಯ ಕೇಂದ್ರಿತವಾಗಿದ್ದವು. ಈಗವು ಪರಿಸರದಲ್ಲಿರುವ ಕೀಟದ ಜೀವಿಸುವ ಹಕ್ಕನ್ನು ಮನ್ನಿಸುವಂತೆ ಹಿಗ್ಗುತ್ತಿವೆ. ಮಾನವಕೇಂದ್ರÀದಿಂದ ಸರ್ವಜೀವಿಕೇಂದ್ರಕ್ಕೆ ಚಲಿಸಿದ್ದರಿಂದ ಹುಟ್ಟಿರುವ ತಿಳುವಳಿಕೆ ಮತ್ತು ಸಂವೇದನೆಗಳು ಮಹತ್ವದ್ದಾಗಿವೆ. ಇಲ್ಲಿ ಊರ್ಮಿಳೆ ಮಾತ್ರ ಕೇಂದ್ರಕ್ಕೆ ಬರುವುದಲ್ಲ. ದಂಡಕಾರಣ್ಯದ ಪಶುಪಕ್ಷಿ ಮರಗಿಡಗಳು, ಅಲ್ಲಿ ವಾಸಿಸುವ ಬುಡಕಟ್ಟುಗಳು ಸಹ ಕೇಂದ್ರಕ್ಕೆ ಬರುವುದು. ಆದರೆ ಈ ದಿಸೆಯಲ್ಲಿ ಹುಟ್ಟುವ ಚಿಂತನೆ, ಪ್ರಭುತ್ವದ ಆಲೋಚನೆ ಮತ್ತು ಕ್ರಿಯೆಯನ್ನು ಪ್ರಭಾವಿಸುತ್ತಿದೆಯೇ? ಅಲಕ್ಷಿತಪರ ಧ್ಯಾನವು ರಾಜಕೀಯ ಕ್ರಿಯೆಯಾಗದೆ, ತತ್ವಚಿಂತನೆಯ ನೆಲೆಯಲ್ಲೇ ಉಳಿದಿದೆಯೇ? ಇದು ಎದುರಿಸಬೇಕಾದ ಪ್ರಶ್ನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...