ಬಹು ನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕ್ ಎದುರು ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದಿದೆ. ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್ (53 ಎಸೆತಗಳಲ್ಲಿ 82 ರನ್) ಮೂಲಕ ಕಳೆದ ವರ್ಷದ ಮೊದಲ ಪಂದ್ಯದ ಸೋಲಿನ ಕಹಿ ಮರೆತಿದೆ. ಅಲ್ಲದೆ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ದವೂ 56 ರನ್ ಗಳ ಜಯ ಕಂಡಿದೆ. ಆದರೆ ಇಷ್ಟಕ್ಕೆ ಭಾರತ ನಿಟ್ಟುಸಿರು ಬಿಡುವ ಪರಿಸ್ಥಿತಿ ಇಲ್ಲ. ಭಾರತ ತಂಡಕ್ಕೆ ಸೂಪರ್ 12 ಹಂತದ ಇನ್ನು ಮೂರು ಪಂದ್ಯಗಳು ಬಾಕಿ ಇದ್ದು ಒಮ್ಮೆ ಮೈ ಮರೆತರೂ ಕಳೆದ ವರ್ಷದಂತೆ ಸೆಮಿಫೈನಲ್ ಪ್ರವೇಶಿಸದೆ ಹೊರಬೀಳುವ ಆತಂಕವಿದೆ.
ಕಳೆದ ವರ್ಷದ ಸೂಪರ್ 12 ಹಂತದಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಪಾಕ್ ಮತ್ತು ನ್ಯೂಜಿಲೆಂಡ್ ಎದುರು ಪರಾಭವಗೊಂಡಿದ್ದ ಭಾರತ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಗ್ರೂಪ್ ಎರಡರಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕ್ರಮವಾಗಿ 5 ಮತ್ತು 4 ಗೆಲುವುಗಳೊಂದಿಗೆ ಸೆಮಿಫೈನಲ್ ತಲುಪಿದ್ದವು. ಈ ಬಾರಿ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದು ವಿಶ್ವಾಸದಲ್ಲಿರುವ ಭಾರತ ತಂಡವು ಉಳಿದ ಪಂದ್ಯಗಳತ್ತ ದೃಷ್ಟಿ ನೆಟ್ಟಿದೆ.
ಗ್ರೂಪ್ ಎರಡರಲ್ಲಿ 6 ತಂಡಗಳಿದ್ದು, ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳಷ್ಟೇ ಸೆಮಿಗೆ ಹೋಗಲು ಸಾಧ್ಯ. ಭಾರತ ಮುಂದಿನ ಎದುರಾಳಿಗಳಾದ ದಕ್ಷಿಣ ಆಫ್ರಿಕಾ, ಮತ್ತು ಬಾಂಗ್ಲಾದೇಶ ತಂಡಗಳು ಸಹ ಬಲಿಷ್ಟವಾಗಿ ಕಾಣಿಸುತ್ತಿವೆ. ಅಲ್ಲದೆ ಪಾಕ್ ತಂಡ ಉಳಿದ ಪಂದ್ಯಗಳಲ್ಲಿ ಕಮ್ ಬ್ಯಾಕ್ ಮಾಡುವ ಉದ್ದೇಶ ಹೊಂದಿದೆ. ಹಾಗಾಗಿ ಭಾರತ ತಂಡ ಸತತ ಗೆಲುವುಗಳೊಂದಿಗೆ ಸೆಮಿಫೈನಲ್ ತಲುಪುವ ಸಾಧ್ಯತೆಗಳು ಈ ಕೆಳಗಿನಂತಿವೆ.
ಇದನ್ನೂ ಓದಿ; ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ: ಸೆಮಿಫೈನಲ್‌ನತ್ತ ಹೆಜ್ಜೆ
ಸಾಧ್ಯತೆ 1: ಭಾರತ ತಂಡವು ತನ್ನ ಮುಂದಿನ ಪಂದ್ಯಗಳನ್ನು ಕ್ರಮವಾಗಿ ದಕ್ಷಿಣ ಆಫ್ರಿಕಾ (ಅಕ್ಟೋಬರ್ 30), ಬಾಂಗ್ಲಾದೇಶ (ನವೆಂಬರ್ 2) ಮತ್ತು ಜಿಂಬಾಬ್ವೆ (ನವೆಂಬರ್ 6) ವಿರುದ್ದ ಸೆಣಸಲಿದೆ. ಈ ಮೂರು ಪಂದ್ಯಗಳನ್ನು ಗೆದ್ದಲ್ಲಿ ಅದು 10 ಪಾಯಿಂಟ್‌ಗಳೊಂದಿಗೆ ನಿರಾಂತಕವಾಗಿ ಸೆಮಿಫೈನಲ್ ತಲುಪಲಿದೆ.
ಸಾಧ್ಯತೆ 2: ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಮಳೆಯ ಕಾರಣದಿಂದ ಸ್ಥಗಿತಗೊಂಡಿತು. ಹಾಗಾಗಿ ಎರಡೂ ತಂಡಕ್ಕೂ ತಲಾ ಒಂದೊಂದು ಅಂಕ ನೀಡಲಾಗಿದೆ. ಹಾಗಾಗಿ ಸೆಮಿಫೈನಲ್ ತಲುಪುವ ಪ್ರಬಲ ತಂಡಗಳಾದ ಪಾಕ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುವ ನವೆಂಬರ್ 3ರ ಪಂದ್ಯಕ್ಕೆ ಭಾರೀ ಮಹತ್ವ ಬಂದಿದೆ. ಆ ಪಂದ್ಯದಲ್ಲಿ ಸೋತ ತಂಡ ಹೊರನಡೆಯುವ ಸಾಧ್ಯತೆಯಿರುತ್ತದೆ. ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಲ್ಲಿ ಸೆಮಿಫೈನಲ್ ದಾರಿ ಸುಲಭವಾಗಲಿದೆ.
ಒಂದು ಪಂದ್ಯ ಸೋತಿರುವ ಪಾಕಿಸ್ತಾನ ಮತ್ತು ಒಂದು ಟೈ ಮಾಡಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡಗಳು ಒಂದು ಪಂದ್ಯ ಸೋತರೂ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಇದೆ. ಏಕೆಂದರೆ ಬಾಂಗ್ಲಾದೇಶ ತಂಡವು ಪರಿಣಾಮಕಾರಿ ಪ್ರದರ್ಶನ ನೀಡುತ್ತಿದೆ. ಭಾರತ ಬಾಂಗ್ಲಾದೇಶ ವಿರುದ್ಧ ಗೆದ್ದಲ್ಲಿ ಸೆಮಿಫೈನಲ್ ತಲುಪುವ ಸಾಧ್ಯತೆ ದಟ್ಟವಾಗುತ್ತದೆ.
ಕಳೆದ ವರ್ಷ ಗ್ರೂಪ್ ಒಂದರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ ನಾಲ್ಕು ಪಂದ್ಯ ಗೆದ್ದು ತಲಾ 08 ಅಂಕ ಗಳಿಸಿದ್ದರು. ಆದರೂ ರನ್ ರೇಟ್ ಆಧಾರದಲ್ಲಿ ಕಡಿಮೆಯಿದ್ದ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಿಂದ ಹೊರಬಿದ್ದರೆ ಉಳಿದ ತಂಡಗಳು ಸೆಮಿಫೈನಲ್‌ಗೇರಿದವು. ಅಂದರೆ ಸೂಪರ್ 12 ಹಂತದಲ್ಲಿ ಭಾರೀ ಪೈಪೋಟಿ ಇರುವುದರಿಂದ ಪ್ರತಿ ತಂಡಗಳು ಜಾಗರೂಕತೆಯಿಂದ ಕಣಕ್ಕಿಳಿಯುತ್ತಿವೆ. ಈ ಆಧಾರದಲ್ಲಿ ಭಾರತ ತಂಡ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಒತ್ತಡದಲ್ಲಿದೆ.
ಇದನ್ನೂ ಓದಿ: ಒಂದು ನೋಬಾಲ್ ಕಥೆ: ಕೊಹ್ಲಿ ಫ್ರೀ ಹಿಟ್ ಬಾಲ್‌ನಲ್ಲಿ ಬೌಲ್ಡ್ ಆಗಿ ಬೈಸ್ ರನ್ ಪಡೆದುದರ ಕುರಿತು ಮುಗಿಯದ…