ಶಿಕ್ಷಣ ವ್ಯವಸ್ಥೆಯ (ಅ)ಅವಸ್ಥೆ ಹಾಗೂ ಸುಧಾರಣೆಗೆ ನಿರ್ದಿಷ್ಟ ಕಾರ್ಯಸೂಚಿಗಳು

ಭವ್ಯ ಭಾರತದ ಕನಸ್ಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರು ಶಿಕ್ಷಣದ ಬಗ್ಗೆ ವಿಶಿಷ್ಠ ನಿಲುವನ್ನು ಹೊಂದಿದ್ದರು, ಜ್ಞಾನದ ಶಿಕ್ಷಣ, ದೈಹಿಕ ಶಿಕ್ಷಣ, ಮಾನಸಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಮಹಿಳಾ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಹೋದಲ್ಲೆಲ್ಲಾ ಹೇಳುತ್ತಿದ್ದರು.

ಶಿಕ್ಷಣವೆಂದರೆ ಮಾನವೀಯತೆಯ ವ್ಯಕ್ತಿತ್ವ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ, ಮನುಷ್ಯನ ವ್ಯಕ್ತಿತ್ವ ರೂಪಿಸುವದೇ ಶಿಕ್ಷಣ ಹಾಗೂ ಶಿಕ್ಷಣ ಒಂದೇ ಭಾರತದ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದು ವಿವೇಕಾನಂದ ಅವರು ನಂಬಿದ್ದರು. ಅದೇ ರೀತಿ ಜಗತ್ತಿನ ಪ್ರಬಲ ನಾಯಕರಾದ ನೆಲ್ಸನ್ ಮಂಡೇಲಾ ಅವರು “ಜಗತ್ತಿನ ದಿಕ್ಕನ್ನೇ ಬದಲಿಸಲು ಶಿಕ್ಷಣವು ಅತ್ಯಂತ ಪ್ರಭಲವಾದ ಅಸ್ತ್ರ” (Education is the Most powerful weapon to change the world) ಎಂದು ಹೇಳಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರವರು ರಚಿಸಿದ ನಮ್ಮ ಸಂವಿಧಾನದ ಅನುಚ್ಛೇಧ 21-ಎ ಅಡಿಯಲ್ಲಿ ದೇಶದ 1-14 ವರ್ಷದೊಳಗಿನ ಮಕ್ಕಳಿಗೆ ಖಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವದು ಸರಕಾರದ ಕರ್ತವ್ಯಗಳಲ್ಲಿ ಒಂದು ಎಂದು ಹೇಳುತ್ತದೆ.

ಆದರೆ ನಾವು ಶಿಕ್ಷಣವನ್ನು ಏಕರೂಪದ ಬದಲಾಗಿ ವಿವಿಧ ರೂಪದಲ್ಲಿ ನೀಡುತ್ತಿದ್ದೇವೆ. ಸರಕಾರಿ ಶಾಲಾ ಕಾಲೇಜು ವ್ಯವಸ್ಥೆಗಳಲ್ಲಿಯೇ ತಾರತಮ್ಯ ಮಾಡುತ್ತಿರುವದು ಅತ್ಯಂತ ವಿಷಾದನೀಯವಾಗಿದೆ. ಸರಕಾರ ನಡೆಸುವ ಪ್ರಾಥಮಿಕ, ಪ್ರೌಡ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಕ್ಕೂ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳು, ಕಸ್ತೂರ ಬಾ ವಸತಿ ಶಾಲೆಗಳು, ರಾಣಿ ಚೆನ್ನಮ್ಮ ವಸತಿ ಶಾಲೆಗಳ ಮೂಲಭೂತ ಸೌಕರ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ, ಅದೇ ರೀತಿ ಖಾಸಗಿ ಶಿಕ್ಷಣ ವ್ಯವಸ್ಥೆ ಮತ್ತು ಸರಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ, ಬಡವರ ಮಕ್ಕಳಿಗೆ ಒಂದು ರೀತಿಯ ಶಿಕ್ಷಣ, ಶ್ರೀಮಂತರ ಮಕ್ಕಳಿಗೆ ಮತ್ತೊಂದು ರೀತಿಯ ಶಿಕ್ಷಣ ನೀಡುವ ವ್ಯವಸ್ಥೆ ನಿರ್ಮಾಣ ಮಾಡಿದ್ದೇವೆ. ಇದೆಲ್ಲ ತೊಡೆದುಹಾಕಿ ಎಲ್ಲ ವರ್ಗಗಳ ಮಕ್ಕಳಿಗೆ ಏಕರೂಪದ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಬೇಕು ಮತ್ತು ಎಲ್ಲವೂ ಸರಕಾರವೇ ನಡೆಸುವಂತಾಗಬೇಕು. ಯಾವುದೇ ಸರಕಾರ ತನ್ನ ದೇಶದ ಅಥವಾ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ನೀಡುವ ಅನುದಾನವು ಅನುತ್ಪಾದಕವೆಂದು ಭಾವಿಸದೇ ಈ ದೇಶದ ಭವಿಷ್ಯ ನಿರ್ಮಾಣಕ್ಕೆ ಮಾಡುತ್ತಿರುವ ಕೆಲಸವೆಂದು ಭಾವಿಸಬೇಕಿದೆ.

ಕರ್ನಾಟಕ ರಾಜ್ಯದ ಸಾಕ್ಷರತೆ ಪ್ರಮಾಣ ದಶಕದಿಂದ ದಶಕಕ್ಕೆ ಗಣನೀಯವಾಗಿ ಹೆಚ್ಚಾಗುತ್ತ ಸಾಗಿದೆ. ರಾಜ್ಯದ ಸಾಕ್ಷರತೆ 1991ರಲ್ಲಿ ಶೇ 56.04 ರಷ್ಟಿತ್ತು, ಅದು 2001ರಲ್ಲಿ ಶೇ 66.64 ರಷ್ಟಿದ್ದ ಸಾಕ್ಷರತೆ 2011ರಲ್ಲಿ 75.60 ರಷ್ಟಾಗಿದ್ದು, ಇದು ದೇಶದ ಸಾಕ್ಷರತೆ ಪ್ರಮಾಣ ಶೇ 74.00 ಕ್ಕಿಂತ ಸ್ವಲ್ಪ ಜಾಸ್ತಿಯಿದೆ. ಆದರೆ, ರಾಜ್ಯದಲ್ಲಿಯೇ ಪ್ರಾದೇಶಿಕ ತಾರತಮ್ಯ ಸಾಕ್ಷರತೆಯಲ್ಲಿ ಎದ್ದು ಕಾಣುತ್ತಿದೆ, ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರತೆ ದಕ್ಷಿಣ ಕನ್ನಡ ಜಿಲ್ಲೆ ಶೇ 88.57 ರಷ್ಟಿದ್ದರೆ, ಯಾದಗೀರ ಜಿಲ್ಲೆ ಶೇ 51.83 ರಷ್ಟಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಸರಾಸರಿ ಸಾಕ್ಷರತೆ ಶೇ 63.71 ರಷ್ಟಿದ್ದು ಇದು ರಾಜ್ಯದ ಸರಾಸರಿಗಿಂತ ಒಂದು ದಶಕಕ್ಕಿಂತ (2001ರಲ್ಲಿ 66.64) ಹೆಚ್ಚು ಹಿಂದಿರುವದಕ್ಕೆ ಸಾಕ್ಷಿ ಒದಗಿಸುತ್ತಿದೆ. ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳ ಸಾಕ್ಷರತೆಯೂ ರಾಜ್ಯಮಟ್ಟದ ಸಾಕ್ಷರತೆಯ ಸಮೀಪವಿಲ್ಲ ಎನ್ನುವದು ನಾವು ಗಂಭೀರವಾಗಿ ಕೆಲಸ ಮಾಡುತ್ತಿಲ್ಲ ಎನ್ನುವದುಕ್ಕೆ ಸಾಕ್ಷಿಯಾಗಿದೆ.

ಬಿದರ್‌ನ ಒಂದು ಶಾಲೆಯ ಸ್ಥಿತಿ (ಕೃಪೆ- ದಿ ಹಿಂದೂ ಪತ್ರಿಕೆ)

ರಾಜ್ಯದಲ್ಲಿ ಸುಮಾರು 20771 ಸರಕಾರಿ ಹಾಗೂ 203 ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳಿವೆ, 22514 ಸರಕಾರಿ ಹಾಗೂ 2783 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳು, 4726 ಸರಕಾರಿ ಹಾಗೂ 3788 ಅನುದಾನಿತ ಪ್ರೌಡಶಾಲೆಗಳು ಸರಕಾರದಿಂದ ನಡೆಯುತ್ತಿವೆ. ಅದೇ ರೀತಿ 1231 ಪದವಿ ಪೂರ್ವ ಸರಕಾರಿ ಕಾಲೇಜುಗಳು, 798 ಅನುದಾನಿತ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 430 ಸರಕಾರಿ ಪದವಿ ಮಹಾವಿದ್ಯಾಲಯಗಳು ಇದ್ದು, 319 ಅನುದಾನಿತ ಪದವಿ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
ನಮ್ಮ ರಾಜ್ಯದ 2020-21ನೇ ಸಾಲಿನ ಬಜೆಟ್ ಗಾತ್ರ 2,37,893.00 ಕೋ.ರೂ. ಆಗಿದ್ದು ಅದರಲ್ಲಿ ಶಿಕ್ಷಣ ಇಲಾಖೆಗೆ ಸರಕಾರ 26,872.36 ಕೋ.ರೂ. ಅನುದಾನ ನಿಗದಿಗೊಳಿಸಿದೆ, ಇದು ಒಟ್ಟು ಬಜೆಟ್ ಗಾತ್ರದ ಶೇ 11.29 ರಷ್ಟಿದೆ. ಕಳೆದ ಐದು ವರ್ಷಗಳಲ್ಲಿ ಶಿಕ್ಷಣ ಇಲಾಖೆಗೆ ನಿಗದಿಗೊಳಿಸಿದ ಬಜೆಟ್ ಹೆಚ್ಚು ಕಡಿಮೆ ಸುಮಾರು 25 ಸಾವಿರ ಕೋಟಿ ಇದೆ, ಆದರೆ ಐದು ವರ್ಷದ ಬಜೆಟ್ ಗಾತ್ರ ಮಾತ್ರ ಕ್ರಮೇಣ ಹೆಚ್ಚಾಗುತ್ತ ಬಂದಿದೆ. ಅದರಲ್ಲಿ ಬಹುತೇಕ ಅನುದಾನ ಇಲಾಖೆಯ ನೌಕರರಿಗೆ ವೇತನ ನೀಡುವುದಕ್ಕೆ ಸರಿಯಾಗಬಹುದು. ಶಾಲಾ ಕಾಲೇಜುಗಳ ಮೂಲಭೂತ ಸೌಕರ್ಯ ಒದಗಿಸಲು ಕಾಟಾಚಾರಕ್ಕೆ ಸ್ವಲ್ಪ ಮಟ್ಟಿನ ಅನುದಾನ ನಿಗದಿಗೊಳಿಸಲಾಗಿದೆ. ಕಾರಣ, ನಮ್ಮ ರಾಜ್ಯದ ಶಿಕ್ಷಣ ಇಲಾಖೆಗೆ ಸರಕಾರ ನೀಡುವ ಅನುದಾನದ ಪ್ರಮಾಣ ಕನಿಷ್ಠ ಶೆ 15 ರಷ್ಟು ಖಡ್ಡಾಯವಾಗಿ ನಿಗದಿಗೊಳಿಸಿದಲ್ಲಿ ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾದ್ಯವಾಗುತ್ತದೆ, ಇಲ್ಲದೇ ಇದ್ದಲ್ಲಿ ಶಾಲೆ ಇದ್ದರೆ ಕೊಠಡಿ ಇಲ್ಲ, ಕೊಠಡಿ ಇದ್ದರೆ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಇಲ್ಲ ಅಥವಾ ಇವರೆಡೂ ಇದ್ದರೂ ಶಿಕ್ಷಕರಿಲ್ಲದ ಸ್ಥಿತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಕೆಲಸ ಮಾಡಬೇಕಾಗುತ್ತದೆ. ಅರಿಸ್ಟಾಟಲ್ ಹೇಳುವ ಪ್ರಕಾರ “ಶಿಕ್ಷಣದ ಬೇರುಗಳು ಕಹಿಯಾಗಿರಬಹುದು, ಆದರೆ ಅದರ ಫಲ ಸಿಹಿಯಾಗೇ ಇರುತ್ತದೆ”.
ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಇಲಾಖೆ:

2019-20ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 22150 ಹುದ್ದೆಗಳು ಖಾಲಿ ಇದ್ದು, ಅತಿಥಿ ಶಿಕ್ಷಕರನ್ನು ನೇಮಿಸುವದರ ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನು ಮುನ್ನಡೆಸಲಾಗುತ್ತಿದೆ. ಹಿರಿಯ ಪ್ರಾಥಮಿಕ ಶಾಲೆಗಳಿಗೆ 6-8ನೇ ತರಗತಿಗಳಿಗೆ ಪದವೀಧರ ಶಿಕ್ಷಕರನ್ನು ನೇಮಿಸಲು 2017ರಿಂದಲೂ ಸರಕಾರ ಪ್ರಯತ್ನಿಸುತ್ತಿದೆ, ಆದರೆ ಸೂಕ್ತ ಅಭ್ಯರ್ಥಿಗಳ ಕೊರತೆಯ ಕಾರಣಕ್ಕೆ ನೇಮಕಾತಿಗೆ ಯಾರೂ ಅರ್ಹತೆ ಪಡೆಯುತ್ತಿಲ್ಲ. 2017ರಲ್ಲಿ ಸರಕಾರ ಸುಮಾರು 10 ಸಾವಿರ ಪದವೀಧರ ಶಿಕ್ಷಕರನ್ನು 6-8ನೇ ತರಗತಿಗೆ ನೇಮಿಸಲು ಅಧಿಸೂಚನೆ ಹೊರಡಿಸಲಾಗಿತ್ತು, ಆ ಹುದ್ದೆಗಳಿಗೆ ನಿಗದಿಗೊಳಿಸಲಾದ ವಿದ್ಯಾರ್ಹತೆ ಪದವಿಯಲ್ಲಿ ಪ್ರತಿ ವಿಷಯದಲ್ಲಿ ಪ್ರತಿ ವರ್ಷ ಕನಿಷ್ಠ 50 ರಷ್ಟು ಅಂಕಗಳನ್ನು ಪಡೆಯಬೇಕೆಂಬ ನಿಯಮ ಮಾಡಲಾಗಿದೆ (ಬಿ.ಎಡ್. ಓದುಲು ಪ್ರವೇಶಕ್ಕಾಗಿ ಪದವಿಯ ಎಲ್ಲ ವಿಷಯಗಳ ಮೂರು ವರ್ಷಗಳ ಸರಾಸರಿ ಶೇ 50 ಅಂಕಗಳು ಪಡೆದರೆ ಸಾಕು) ಹಾಗೂ ಕಡ್ಡಾಯವಾಗಿ ಟಿಇಟಿ ಪಾಸಾಗಬೇಕೆಂಬ ನಿಯಮದಿಂದಾಗಿ (ರಾಜ್ಯದಲ್ಲಿ ಟಿಇಟಿ ಪರೀಕ್ಷೆ ಪ್ರತಿ ಆರು ತಿಂಗಳಿಗೆ ಒಮ್ಮೆ ನಡೆಸಬೇಕೆಂದಿದ್ದರೂ ಮೂರು ವರ್ಷವಾದರೂ ಟಿಇಟಿ ಪರೀಕ್ಷೆ ನಡೆಸಿರುವದಿಲ್ಲ) ಬಹುತೇಕ ಬಿ.ಎಡ್. ಮಾಡಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೇ ಹೊರಗುಳಿದರು, ಅದಾಗ್ಯೂ ಈ ನಿಯಮಗಳನ್ವಯ ಅರ್ಹತೆ ಪಡೆದಿರುವ ಸುಮಾರು 50 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿ ಪತ್ರಿಕೆ-2(ಬಹು ಆಯ್ಕೆ ಪ್ರಶ್ನೆ ಪತ್ರಿಕೆ) ರಲ್ಲಿ ಶೇ 60 ರಷ್ಟು ಕನಿಷ್ಠ ಅಂಕಗಳನ್ನು ಹಾಗೂ ಪತ್ರಿಕೆ-3(ವಿವರಣಾತ್ಮಕ ಬರವಣಿಗೆ) ರಲ್ಲಿ ಕನಿಷ್ಠ ಶೇ 50 ರಷ್ಟು ಅಂಕಗಳನ್ನು ಪಡೆದರೆ ಮಾತ್ರ ಮೆರಿಟ್ ಆಯ್ಕೆಗೆ ಅರ್ಹತೆ ನಿಗದಿಗೊಳಿಸಿರುವದರಿಂದ ಶೇ 20 ರಷ್ಟು ಹುದ್ದೆಗಳಿಗೆ ಮಾತ್ರ ಅಭ್ಯರ್ಥಿಗಳು ನೇಮಕಾತಿಗೆ ಅರ್ಹತೆ ಪಡೆದಿದ್ದರಿಂದ ಸುಮಾರು 10 ಸಾವಿರ ಹುದ್ದೆಗಳಲ್ಲಿ ಸುಮಾರು 2 ಸಾವಿರ ಅಭ್ಯರ್ಥಿಗಳು ಮಾತ್ರ ಆ ಸಂದರ್ಭದಲ್ಲಿ ನೇಮಕವಾಗಿದ್ದರು. ನಂತರ 2019ರಲ್ಲಿ ಮತ್ತೆ ಸುಮಾರು 10500 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು, ಈಗಲೂ ಕಠಿಣ ನಿಯಮದಿಂದಾಗಿ ಬಹುತೇಕ ಅಭ್ಯರ್ಥಿಗಳು ನೇಮಕಾತಿ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಈ ನೇಮಕಾತಿಗಳಲ್ಲಿ ದೇಶದ ಯಾವ ರಾಜ್ಯದಲ್ಲಿಯೂ ಇರದ ನಿಯಮಗಳು ಹಾಗೂ ನಮ್ಮ ರಾಜ್ಯದ ಯಾವ ನೇಮಕಾತಿಯಲ್ಲಿಯೂ ಇರದ ನಿಯಮಗಳು ಅಳವಡಿಸಿರುವದರಿಂದ ಶಾಲೆಗಳಲ್ಲಿ ಹುದ್ದೆಗಳು ಖಾಲಿ ಉಳಿಯುವಂತಾಗಿವೆ. ಪ್ರೌಡ ಶಾಲಾ ಶಿಕ್ಷಕರನ್ನು, ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರನ್ನು, ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಎ.ಎಸ್. ನೇಮಕಾತಿಯೂ ಸಹ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ನಿಯಮವಿದ್ದು, ಆದರೆ 6-8ನೇ ತರಗತಿಗೆ ಮಾತ್ರ ಈ ರೀತಿಯ ಕಠಿಣ ನಿಯಮಗಳನ್ನು ಅಳವಡಿಸುವದರ ಮೂಲಕ ಸರಕಾರಿ ಶಾಲೆಗಳನ್ನು ಮುಚ್ಚುವ ವ್ಯವಸ್ಥಿತ ಸಂಚು ನಡೆದಿದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಆದ್ದರಿಂದ, 6-8ನೇ ತರಗತಿ ಶಿಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪತ್ರಿಕೆ-2 ಹಾಗೂ ಪತ್ರಿಕೆ-3 ರಲ್ಲಿ ಕನಿಷ್ಠ ಅಂಕಗಳನ್ನು ಪಡೆಯಬೇಕೆಂಬ ನಿಯಮವನ್ನು ತೆಗೆದುಹಾಕಿ ಇನ್ನಿತರ ನೇಮಕಾತಿಯಂತೆ ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಂಡಲ್ಲಿ ಮಾತ್ರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾದ್ಯವಾಗುತ್ತದೆ. ಈಗಾಗಲೇ ಅಭ್ಯರ್ಥಿಗಳು ಪದವಿ ವ್ಯಾಸಂಗ ಪೂರ್ಣಗೊಳಿಸಿ ಹಲವು ಪರೀಕ್ಷೆಗಳನ್ನು ಏದುರಿಸಿರುತ್ತಾರೆ, ಬಿ.ಎಡ್. ಪರೀಕ್ಷೆ, ಟಿಇಟಿ ಪರೀಕ್ಷೆ ಎಲ್ಲವೂ ಉತ್ತೀರ್ಣರಾಗಿರುವಾಗ ಅವರ ಗುಣಮಟ್ಟ ಪರೀಕ್ಷೆ ಇದೊಂದೇ ಆಗುವದಿಲ್ಲ ಎನ್ನುವದು ಕನಿಷ್ಠ ಜ್ಞಾನ ಇರುವ ಯಾರಿಗಾದರೂ ಅರ್ಥವಾಗುತ್ತದೆ.

ರಾಜ್ಯದಲ್ಲಿ ಸರಾಸರಿ ಒಂದು ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕ ಹುದ್ದೆ ಖಾಲಿ ಇದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವದರಿಂದ, ಸರಕಾರ ಪ್ರತಿ ವರ್ಷ ಶೈಕ್ಷಣಿಕ ಸಾಲನ್ನು ಮೇ ಕೊನೆಯ ವಾರದಿಂದ ಪ್ರಾರಂಭಿಸುತ್ತದೆ ಆದರೆ, ಅತಿಥಿ ಶಿಕ್ಷಕರನ್ನು ಆಗಷ್ಟ ತಿಂಗಳಲ್ಲಿ ನೇಮಿಸುವದರಿಂದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ಮೂರು ತಿಂಗಳು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಭಾಗದ ಕೆಲವು ಶಾಲೆಗಳಲ್ಲಿ ಎಲ್ಲ ಅತಿಥಿ ಶಿಕ್ಷಕರೇ ಇರುವದರಿಂದ ಸರಕಾರ ಅತಿಥಿ ಶಿಕ್ಷಕರನ್ನು ನೇಮಿಸುವವರೆಗೆ ಆ ಶಾಲೆಗಳು ಬಾಗಿಲು ಹಾಕುವ ಸ್ಥಿತಿ ಇದೆ. ಅದಲ್ಲದೇ ಖಾಯಂ ನೇಮಕಾತಿಗೆ ಹಲವು ನಿಯಮಗಳನ್ನು ಅಳವಡಿಸುವ ಸರಕಾರ ಅತಿಥಿ ಶಿಕ್ಷರನ್ನು ಕೇವಲ ಬಿ.ಎಡ್. ಅಥವಾ ಡಿ.ಎಡ್. ಪಾಸಾದಂತಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವದು ಕೂಡ ಗುಣಮಟ್ಟದ ಶಿಕ್ಷಣದ ಬಗ್ಗೆ ಸರಕಾರದ ದ್ವಂದ್ವ ನಿಲುವು ಎದ್ದು ಕಾಣುತ್ತಿದೆ.
ಕಾರಣ, ಸರಕಾರ ಪ್ರತಿ ವರ್ಷ ಸರಕಾರಿ ಶಾಲೆಗಳಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ನಿವೃತ್ತಿಯಾಗುವ ದಿನಾಂಕ ಇಲಾಖೆಗೆ ಮುಂಚೆಯೇ ಗೊತ್ತಿರುತ್ತದೆ, ಪ್ರತಿ ವರ್ಷ ಅಂತಹ ಶಿಕ್ಷಕರ ಸಂಖ್ಯೆಯನ್ನು ಗುರುತಿಸಿ ನಿವೃತ್ತಿಯ ಒಂದು ವರ್ಷ ಮೊದಲೇ ಖಾಲಿಯಾಗುತ್ತಿರುವ ಹುದ್ದೆಗಳಿಗೆ ಆಯಾ ಜಿಲ್ಲೆಯ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆ ಜಿಲ್ಲಾ ಮಟ್ಟದಲ್ಲಿಯೇ ನಡೆಸಲು ಸರಕಾರ ಮುಂದಾಗಬೇಕಿದೆ. ಈಗಾಗಲೇ ಮಂಜೂರಾಗಿರುವ ಖಾಲಿ ಹುದ್ದೆಗಳ ಭರ್ತಿಗೆ ಪ್ರತಿ ಸಲ ಆರ್ಥಿಕ ಇಲಾಖೆಯ ಅನುಮೋದನೆಗೆ ಕಳಿಸುವ ವಿಳಂಭ ನೀತಿ ಕೈಬಿಡಬೇಕಿದೆ. ಹೊಸದಾಗಿ ಹುದ್ದೆಗಳ ಮಂಜೂರಾತಿ ವಿಷಯವಿದ್ದಲ್ಲಿ ಮಾತ್ರ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಬೇಕು.

ಅದೇ ರೀತಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ 2015ರಲ್ಲಿ ಪ್ರಾರಂಭವಾಗಿ ಇಂದಿನವರೆಗೂ ಪೂರ್ಣವಾಗಿಲ್ಲ, ಒಂದು ನೇಮಕಾತಿಯನ್ನು ಮ್ಯಾರಥಾನ್ ಮಾದರಿಯಲ್ಲಿ ಮುಂದುವರೆಸಿದರೆ ಯಾವ ಗುಣಮಟ್ಟದ ಶಿಕ್ಷಣದ ಬಗ್ಗೆ ಸರಕಾರ ಯೋಚಿಸುತ್ತಿದೆ ಎಂದು ಪ್ರಶ್ನೆ ಮಾಡಬೇಕಾಗುತ್ತದೆ.

ಉನ್ನತ ಶಿಕ್ಷಣ ಇಲಾಖೆ:
ರಾಜ್ಯದಲ್ಲಿ ಸುಮಾರು 430 ಸರಕಾರಿ ಪದವಿ ಕಾಲೇಜುಗಳಿದ್ದು, 319 ಅನುದಾನಿತ ಪದವಿ ಕಾಲೇಜುಗಳಿವೆ, ಸಾವಿರಾರು ಅನುದಾನರಹಿತ ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 5,15,907 ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಸರಕಾರಿ ಪದವಿ ಕಾಲೇಜುಗಳಲ್ಲಿ ಏಷ್ಟೇ ವಿದ್ಯಾರ್ಥಿಗಳು ಬಂದರೂ ಪ್ರವೇಶ ಪಡೆಯಲೇಬೇಕು, ಯಾರನ್ನೂ ವಾಪಸ್ ಕಳುಹಿಸಬಾರದು ಎನ್ನುವದು ಸರಕಾರದ ನಿಯಮ, ಆದರೆ ನಗರ ಪ್ರದೇಶದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿ ತರಗತಿ ನಡೆಸಲು ಕೊಠಡಿಗಳು ಲಭ್ಯವಿರುವದಿಲ್ಲ, ವಿದ್ಯಾರ್ಥಿಗಳು ಕೂಡಲು ಬೆಂಚ್‌ಗಳು ಇರುವದಿಲ್ಲ, ಗ್ರಂಥಾಲಯ, ಶೌಚಾಲಯ, ಪ್ರಯೋಗಾಲಯ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇರದೇ ಇರುವದರಿಂದ ಅಲ್ಲಿರುವ ಪ್ರಾಚಾರ್ಯರು ಕಷ್ಟ ಅನುಭವಿಸಬೇಕಾಗುತ್ತದೆ.

ಸರಕಾರಿ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆಗಳು ಮಂಜೂರಾಗದೇ ಇದ್ದರೂ ವರ್ಕಲೋಡ್ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರಕಾರ ಅವಕಾಶ ನೀಡುತ್ತಿದೆ, ಇದು ಇಡೀ ಪದವಿ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣವಾಗುತ್ತಿದೆ. ಹಾಗಾಗಿ ಪದವಿ ಕಾಲೇಜುಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ನಗರ ಪ್ರದೇಶದಲ್ಲಿರುವ ಪದವಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಗಮನ ಹರಿಸುವಂತಾಗಬೇಕು, ಹಿಂದಿನ ಮೂರು ವರ್ಷಗಳ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ ನೋಡಿಕೊಂಡು, ವಿದ್ಯಾರ್ಥಿಗಳು ಹೆಚ್ಚಾಗಿರುವ ಕಾಲೇಜುಗಳಿಗೆ ಹೆಚ್ಚಿನ ಅನುದಾನ ನೀಡಿ ಕನಿಷ್ಠ ಬೆಂಚ್, ಗ್ರಂಥಾಲಯಕ್ಕೆ ಪುಸ್ತಕಗಳು, ಕಂಪ್ಯೂಟರ್ಸ್‌,  ಪ್ರಯೋಗಾಲಯಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಖರೀದಿಸಲು  ಬೇಡಿಕೆಯಾನುಸಾರ ಅವಕಾಶ ಮಾಡಿಕೊಡಬೇಕು.

ಸರಕಾರ ಉನ್ನತ ಶಿಕ್ಷಣ ಇಲಾಖೆಯಲ್ಲಿ 300 ಕೋ.ರೂ. ಗಳನ್ನು ಖರ್ಚು ಮಾಡಿ ಉಚಿತವಾಗಿ ಲ್ಯಾಪಟಾಪ್‌ಗಳನ್ನು ಹಂಚುತ್ತಿರುವದನ್ನು ರದ್ದುಪಡಿಸಿ ಅದೇ ಅನುದಾನವನ್ನು ಕಾಲೇಜು-ವಿವಿಗಳ ಮೂಲಭೂತ ಸೌಕರ್ಯ ಒದಗಿಸಲು ಬಳಕೆ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.
ರಾಜ್ಯದಲ್ಲಿ ಸುಮಾರು 430 ಪದವಿ ಕಾಲೇಜುಗಳನ್ನು ಸರಕಾರ ನಡೆಸುತ್ತಿದೆ, ಈ ಕಾಲೇಜುಗಳಲ್ಲಿ ಶೇ 90 ಪ್ರಾಚಾರ್ಯರ ಹುದ್ದೆಗಳು ಖಾಲಿ ಇದ್ದು ಪ್ರಭಾರಿ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಪ್ರಾಚಾರ್ಯರ ಹುದ್ದೆ ಭರ್ತಿಗೆ ನಿಯಮ ಮಾಡುವದರಲ್ಲೇ ಒಂದು ದಶಕ ಕಳೆದರೆ ಸರಕಾರ ಯಾವ ರೀತಿ ಕೇಲಸ ಮಾಡುತ್ತಿದೆ ಎನ್ನುವದಕ್ಕೆ ಒಳ್ಳೆಯ ಉದಾಹರಣೆ ಯಾಗುತ್ತದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಗೆ ಕೌನ್ಸಲಿಂಗ್ ಮೂಲಕ ಮಾಡುವ ಕಾನೂನು ಇದೆ, ಆದರೆ ಸರಕಾರ ಮತ್ತು ಅಧಿಕಾರಿಗಳು ಸೇರಿ ಸರಕಾರ ರಚಿಸಿರುವ ವರ್ಗಾವಣೆ ಕಾನೂನು ಉಲ್ಲಂಘಿಸಿ ಉಪನ್ಯಾಸಕರು ಹಾಗೂ ಭೋದಕೇತರರನ್ನು ಅಕ್ರಮವಾಗಿ ವಿವಿಧ ಕಾಲೇಜುಗಳಿಗೆ ನಿಯೋಜನೆ ಮೇರೆಗೆ ಅನಿರ್ದಿಷ್ಠಾವದಿಯವರೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಆಯಾ ಕಾಲೇಜುಗಳು ಅನಗತ್ಯ ಸಮಸ್ಯೆ ಏದುರಿಸುವಂತಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಸುಮಾರು 500 ಜನ ನಿಯೋಜನೆಯ ಮೇರೆಗೆ ತಮಗೆ ಬೇಕಾದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ನಿಯೋಜನೆಯ ಮೇರೆಗೆ ವರ್ಗಾವಣೆಗೊಂಡಿರುವ ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಸಿಬ್ಬಂದಿಗಳನ್ನು ಸರಕಾರ ಒಂದೇ ಆದೇಶದ ಮೂಲಕ ರದ್ದುಪಡಿಸಬೇಕೆಂದು ಕೋರುತ್ತೇನೆ. ಈ ರೀತಿಯ ಅಕ್ರಮ ವರ್ಗಾವಣೆಗೆ ಅನುಕೂಲವಾಗಲಿ ಎಂದು ಪ್ರತಿ ವರ್ಷನಡೆಯಬೇಕಾದ ಉಪನ್ಯಾಸಕರ ವರ್ಗಾವಣೆ ನಡೆಯದಂತೆ ತಡೆಯಲಾಗಿದೆ. ಸರಕಾರ ಕಾನೂನು ಮಾಡಿದ ನಂತರ ಪ್ರತಿ ವರ್ಷ ಶೈಕ್ಷಣಿಕ ವರ್ಷ ಪ್ರಾರಂಭವಾಗುವದಕ್ಕಿಂತ ಮುಂಚೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ವಿಶ್ವವಿದ್ಯಾಲಯಗಳ ಆಡಳಿತ ಅಧೋಗತಿಗೆ ಇಳಿದಿರುವದು ಎಲ್ಲರಿಗೂ ತಿಳಿದಿರುವ ವಿಷಯ. ವಿವಿಗಳ ಕುಲಪತಿಗಳು, ಕುಲಸಚಿವರ ನೇಮಕಾತಿಯು ನಿಯಮಬಾಹಿರವಾದ ಪದ್ದತಿಯನ್ನು ಅನುಸರಿಸುತ್ತಿರುವದರಿಂದ ವಿಶ್ವವಿದ್ಯಾಲಯಗಳು ಭ್ರಷ್ಟಾಚಾರದ ಕುಂಪೆಗಳಾಗಿರುವದು ಅತ್ಯಂತ ನಾಚಿಕೇಗೇಡಿನ ಸಂಗತಿ. ಯಾವುದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ನೇಮಕಾತಿ ಪಾರದರ್ಶಕವಾಗಿ ನಡೆದ ಉದಾಹರಣೆ ಇರುವದಿಲ್ಲ, ಇದರಿಂದ ಆಯಾ ವಿವಿ ಗಳಲ್ಲಿ ಓದುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಯಾವ ವಿಶ್ವಾಸವು ಉಳಿದಿಲ್ಲ. ಬಹುತೇಕ ವಿವಿ ಗಳು ಪರೀಕ್ಷೆಗಳಲ್ಲಿ ಅಕ್ರಮ, ಪಲಿತಾಂಶದಲ್ಲಿ ಅಕ್ರಮ, ಆಡಳಿತದಲ್ಲಿ ಅಕ್ರಮ, ಸಿವಿಲ್ ಕಾಮಗಾರಿ ನಿರ್ವಹಿಸುವದರಲ್ಲಿ ಅಕ್ರಮ ನಡೆಸಿ ಅಪಖ್ಯಾತಿಗೆ ಒಳಗಾಗಿರುವ ಉದಾಹರಣೆಗಳು ದಿನನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಇಂತಹ ಅಕ್ರಮಗಳನ್ನು ತಡೆಯುವ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಅಗತ್ಯವಿದೆ ಎಂದು ಅನಿಸುತ್ತಿದೆ.

ವಿವಿಗಳಿಗೆ ಕುಲಪತಿಗಳು, ಕುಲಸಚಿವರನ್ನು ನೇಮಿಸುವಾಗ ಸರಕಾರ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿರುವ ವಿವಿಗಳಿಗೆ ನೇಮಿಸಬಾರದು, ಬೇರೆ ವಿವಿಗಳಿಗೆ ಪರಿಗಣಿಸಬೇಕು. ಅದರಂತೆ ಕುಲಪತಿಗಳು, ಕುಲಸಚಿವರು(ಆಡಳಿತ), ಕುಲಸಚಿವರು (ಮೌಲ್ಯಮಾಪನ) ಹಾಗೂ ಫೈನಾನ್ಸ್ ಅಧಿಕಾರಿ, ಈ ನಾಲ್ಕು ಜನ ವಿವಿಗಳ ಆಡಳಿತದ ಆಧಾರ ಸ್ತಂಬಗಳಾಗಿದ್ದಾರೆ, ಸರಕಾರ ಇವರಲ್ಲಿ ಕನಿಷ್ಠ ಕುಲಸಚಿವರು (ಆಡಳಿತ) ಕ್ಕೆ ಕೆ.ಎ.ಎಸ್. ಅಧಿಕಾರಿಯನ್ನು ಕಡ್ಡಾಯವಾಗಿ ನೇಮಿಸಬೇಕು ಮತ್ತು ಫೈನಾನ್ಸ್ ಅಧಿಕಾರಿ ಹುದ್ದೆಗೆ ಸ್ಟೇಟ್ ಅಕೌಂಟ್ಸ್‌ ಇಲಾಖೆಯ ಅಧಿಕಾರಿಗಳಿಗೆ ನಿಯೋಜನೆಯ ಮೇರೆಗೆ ನೇಮಿಸಬೇಕು. ಇದರಿಂದ ಆಡಳಿತದ ಅನುಭವ ಇರುವ ಈ ಅಧಿಕಾರಿಗಳು ಕನಿಷ್ಠ ವಿಶ್ವವಿದ್ಯಾಲಯಗಳ ಆಡಳಿತ ಸುಲಲಿತವಾಗಿ ನಡೆಸಲು ಸಾದ್ಯವಾಗುತ್ತದೆ.
ರಾಜ್ಯದ 23 ವಿಶ್ವವಿದ್ಯಾಲಯಗಳು ತಮ್ಮದೇ ಆದ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಅನುಸರಿಸುವದರಿಂದ ಒಂದು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮತ್ತೊಂದು ವಿಶ್ವವಿದ್ಯಾಲಯಕ್ಕೆ ಅದೇ ಶೈಕ್ಷಣಿಕ ವರ್ಷದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯುವದು ಸಾದ್ಯವಾಗುತ್ತಿಲ್ಲ. ಯಾವ ರೀತಿ ರಾಜ್ಯದ ಎಲ್ಲ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಏಕರೂಪದ ಶೈಕ್ಷಣಿಕ ವರ್ಷವಿದೆಯೋ ಅದೇ ರೀತಿ ಎಲ್ಲ ವಿವಿ ಗಳ ಶೈಕ್ಷಣಿಕ ವರ್ಷ ಏಕಕಾಲಕ್ಕೆ ಪ್ರಾರಂಭಿಸಬೇಕು, ಪರೀಕ್ಷೆ ಪಲಿತಾಂಶ ಏಕಕಾಲಕ್ಕೆ ನಡೆಸುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಓದುವದರ ಮೂಲಕ ಭೌದ್ಧಿಕವಾಗಿ ಬೆಳವಣಿಗೆಯಾಗಲು ಸಾದ್ಯವಾಗುತ್ತದೆ ಮತ್ತು ಈ ರೀತಿಯ ವ್ಯವಸ್ಥೆ ದೇಶದ ಅಭಿವೃದ್ದಿಗೆ ಪೂರಕವಾಗುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

LEAVE A REPLY

Please enter your comment!
Please enter your name here