Homeಮುಖಪುಟಆರ್‌ಟಿಐ ಕಾರ್ಯಕರ್ತನ ಮೇಲಿನ ದ್ವೇಷಕ್ಕೆ ಮಗನ ಬಂಧನ: ಅಪ್ರಾಪ್ತ ಬಾಲಕನನ್ನು ವಯಸ್ಕನೆಂದ ಪೊಲೀಸರು!

ಆರ್‌ಟಿಐ ಕಾರ್ಯಕರ್ತನ ಮೇಲಿನ ದ್ವೇಷಕ್ಕೆ ಮಗನ ಬಂಧನ: ಅಪ್ರಾಪ್ತ ಬಾಲಕನನ್ನು ವಯಸ್ಕನೆಂದ ಪೊಲೀಸರು!

'ನಾನು ಭತ್ತದ ಖರೀದಿ ವಿವರಗಳನ್ನು ಆರ್‌ಟಿಐ ಮೂಲಕ ಪ್ರಶ್ನಿಸಿದ್ದರಿಂದ ನನ್ನ ಮಗನನ್ನು ಈ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಪೊಲೀಸರು ನನ್ನ ಅಪ್ರಾಪ್ತ ವಯಸ್ಸಿನ ಮಗನನ್ನು ವಯಸ್ಕರೆಂದು ಹೇಗೆ ಘೋಷಿಸಬಹುದು? ಪರೀಕ್ಷೆ ಬರೆಯಲು ಹೋದ ಆತ ಪಿಸ್ತೂಲ್‌ನೊಂದಿಗೆ ವಾಪಸ್‌ ಬಂದನು ಎಂಬ ಈ ಪೊಲೀಸ್ ಕಥೆಯನ್ನು ಯಾರಾದರೂ ನಂಬಬಹುದೇ?' ಎಂದು ಆರ್‌ಟಿಐ ಕಾರ್ಯಕರ್ತ ಪ್ರಶ್ನಿಸಿದ್ದಾರೆ. 

- Advertisement -
- Advertisement -

ಬಿಹಾರದ ಆರ್‌ಟಿಐ ಕಾರ್ಯಕರ್ತರೊಬ್ಬರ 14 ವರ್ಷದ ಅಪ್ರಾಪ್ತ ವಯಸ್ಸಿನ ಮಗನನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಆತನನ್ನು ವಯಸ್ಕನೆಂದು ನಮೂದಿಸಿರುವ ಅವರು ಆತನೊಂದಿಗೆ ಇತರ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ದಾಖಲಿಸಿ 5 ತಿಂಗಳಿನಿಂದ ಬಕ್ಸಾರ್ ಜೈಲಿನಲ್ಲಿಟ್ಟಿದ್ದಾರೆ.

ಇತ್ತ ಆತನ ತಂದೆ ಆರ್‌ಟಿಐ ಕಾರ್ಯಕರ್ತನಾಗಿದ್ದು, ತನ್ನ ಮಗ ಅಪ್ರಾಪ್ತ ವಯಸ್ಕ, ದಯವಿಟ್ಟು ಬಿಡುಗಡೆ ಮಾಡಿ ಎಂದು ಕಛೇರಿಯಿಂದ ಕಛೇರಿಗೆ ಅಲೆಯುತ್ತಿದ್ದಾರೆ. ಈ ಕುರಿತು ಲಾಕ್ ಡೌನ್ ಗೂ ಮೊದಲು ರಾಜ್ಯ ಡಿಜಿಪಿಗೆ ದೂರು ನೀಡಿದ ಆರ್‌ಟಿಐ ಕಾರ್ಯಕರ್ತ ‘ಫೆಬ್ರವರಿ 29 ರಂದು ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾಗಿ ವಾಪಸ್ ಬರುವಾಗ, ತನ್ನ 14 ವರ್ಷದ ಮಗನನ್ನು ಇಬ್ಬರು ವ್ಯಕ್ತಿಗಳೊಂದಿಗೆ ಬಂಧಿಸಿದ್ದಾರೆ ಎಂದು ದೂರಿದ್ದಾರೆ.

ಬಂಧನಕ್ಕೆ ಮುಂಚೆ ಬರೆದ ಪರೀಕ್ಷೆಯ ಐದು ಪತ್ರಿಕೆಗಳಲ್ಲಿ ತನ್ನ ಮಗ ಒಟ್ಟಾರೆ ಶೇಕಡಾ 83 ರಷ್ಟು ಅಂಕಗಳನ್ನು ಗಳಿಸಿದ್ದಾನೆ. ಇನ್ನೂ ಒಂದು ಪತ್ರಿಕೆ ಬಾಕಿಯಿದೆ. ಆತನ ಶಾಲಾ ದಾಖಲೆಗಳ ಪ್ರಕಾರ ಅವನು 2006 ರ ಏಪ್ರಿಲ್‌ನಲ್ಲಿ ಜನಿಸಿದ್ದಾನೆ. ನನ್ನ ಮೇಲಿನ ದ್ವೇಷಕ್ಕಾಗಿ ಪೊಲೀಸರು ಕೇವಲ 14 ವರ್ಷದ ನನ್ನ ಮಗನನ್ನು ಬಂಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು, ಆ ಯುವಕನಿಂದ ದೇಶೀ ನಿರ್ಮಿತ ಪಿಸ್ತೂಲ್ ಮತ್ತು ಇತರೆ ಇಬ್ಬರಿಂದ ಲೈವ್ ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಂಡಿದ್ದೇವೆ, ಹಾಗಾಗಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ. ಇತರ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದರೂ, ಆರ್‌ಟಿಐ ಕಾರ್ಯಕರ್ತನ ಮಗ ಇನ್ನೂ ಜೈಲಿನಲ್ಲಿದ್ದಾನೆ.

ಆರ್‌ಟಿಐ ಕಾರ್ಯಕರ್ತ, ಸ್ಥಳೀಯವಾಗಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಪ್ರಬಲ ದನಿಯಾಗಿದ್ದರು. ಬಿಹಾರ ಸರ್ಕಾರದ ಹಲವು ಯೋಜನೆಗಳಲ್ಲಿನ ಹಗರಣಗಳನ್ನು ಅವರು ಬಯಲಿಗೆಳೆದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬಿಹಾರ ಸರ್ಕಾರದ ಪ್ರಮುಖ ಯೋಜನೆ, ಸಾತ್ ನಿಸ್ಚೆ (ಗ್ರಾಮ ರಸ್ತೆಗಳು, ನೈರ್ಮಲ್ಯ ಮತ್ತು ಕುಡಿಯುವ ನೀರು), MNREGA ಮತ್ತು ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ (ಪಿಎಸಿಎಸ್) ಭತ್ತದ ಖರೀದಿಗಳಲ್ಲಿನ ಅಕ್ರಮಗಳನ್ನು ಪತ್ತೆಹಚ್ಚಲು ಹಲವಾರು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

‘ನಾನು ಭತ್ತದ ಖರೀದಿ ವಿವರಗಳನ್ನು ಆರ್‌ಟಿಐ ಮೂಲಕ ಪ್ರಶ್ನಿಸಿದ್ದರಿಂದ ನನ್ನ ಮಗನನ್ನು ಈ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಪೊಲೀಸರು ನನ್ನ ಅಪ್ರಾಪ್ತ ವಯಸ್ಸಿನ ಮಗನನ್ನು ವಯಸ್ಕರೆಂದು ಹೇಗೆ ಘೋಷಿಸಬಹುದು? ಪರೀಕ್ಷೆ ಬರೆಯಲು ಹೋದ ಆತ ಪಿಸ್ತೂಲ್‌ನೊಂದಿಗೆ ವಾಪಸ್‌ ಬಂದನು ಎಂಬ ಈ ಪೊಲೀಸ್ ಕಥೆಯನ್ನು ಯಾರಾದರೂ ನಂಬಬಹುದೇ?’ ಎಂದು ಆರ್‌ಟಿಐ ಕಾರ್ಯಕರ್ತ ಪ್ರಶ್ನಿಸಿದ್ದಾರೆ.

ಈ ಹಿಂದೆ ನನ್ನನ್ನು ತಡೆಯಲು ಸ್ಥಳೀಯ ಪಂಚಾಯತ್ ಸದಸ್ಯರೊಬ್ಬರು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದರು. ಆದರೆ ವಿಚಾರಣೆಯ ನಂತರ ನನಗೆ ಕ್ಲೀನ್ ಚಿಟ್ ನೀಡಲಾಯಿತು. ಈಗ ಅವರು ನನ್ನ ಮುಗ್ಧ ಮಗನಿಗೆ ಬಲೆ ಬೀಸಿ, ಪಿತೂರಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನಿರಂತರವಾಗಿ ಲಾಕ್ ಡೌನ್ ಮತ್ತು ನ್ಯಾಯಾಲಯವನ್ನು ಮುಚ್ಚಿರುವುದರಿಂದ ವಿಚಾರಣೆ ವಿಳಂಬವಾಗುತ್ತಿದೆ. ‘ಹುಡುಗನನ್ನು ವಯಸ್ಕನೆಂದು ಘೋಷಿಸಿರುವ ತಪ್ಪನ್ನು ಸರಿಪಡಿಸಲು ಸ್ಥಳೀಯ ಪೊಲೀಸರು ಸಿದ್ದರಿಲ್ಲ. ನಾವು ಬಾಲಾಪರಾಧಿ ನ್ಯಾಯ ಮಂಡಳಿಯನ್ನು ಸಂಪರ್ಕಿಸಿದ್ದೇವೆ ಮತ್ತು ಅವರಿಗೆ ಸರಿಯಾದ ಜನ್ಮ ದಿನಾಂಕವನ್ನು ಹೊಂದಿರುವ ಶಾಲಾ ದಾಖಲಾತಿ ಪತ್ರವನ್ನು ಸಲ್ಲಿಸಿದ್ದೇವೆ’ ಎಂದು ವಕೀಲ ಲಾಲನ್ ಪಾಂಡೆ ತಿಳಿಸಿದ್ದಾರೆ.

ಹತ್ತನೇ ತರಗತಿಯ ವಿದ್ಯಾರ್ಥಿಯನ್ನು ವಯಸ್ಕನೆಂದು ಘೋಷಿಸಿ ಜೈಲಿಗೆ ಕಳುಹಿಸಿದ್ದು ಏಕೆ ಮತ್ತು ಹೇಗೆ ಎಂಬ ಬಗ್ಗೆ ಪೊಲೀಸರು ಯಾವುದೇ ವಿವರ ನೀಡಿಲ್ಲ. “ಇದರಲ್ಲಿ ನನ್ನ ಪಾತ್ರವಿಲ್ಲ. ನನಗೆ ಹೇಳಿದ್ದನ್ನು ನಾನು ಮಾಡಿದ್ದೇನೆ ಅಷ್ಠೇ” ಎಂದು ರಾಜ್‌ಪುರ ಪೊಲೀಸ್ ಠಾಣೆ ಎಎಸ್‌ಐ ಮಹೇಶ್ ಪ್ರಸಾದ್ ಸಿಂಗ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.

‘ಈ ಪ್ರಕರಣದ ಕುರಿತ ಸಂಪೂರ್ಣ ವಿವರವನ್ನು ಸ್ಥಳೀಯ ಪೋಲಿಸ್ ಠಾಣೆಯಿಂದ ಪಡೆದುಕೊಂಡ ನಂತರ ಹುಡುಗನ ತಂದೆಯನ್ನು ಭೇಟಿಯಾಗಲಿದ್ದೇನೆ’ ಎಂದು ಬಕ್ಸರ್ ಎಸ್ಪಿ ಉಪೇಂದ್ರ ನಾಥ್ ವರ್ಮಾ ತಿಳಿಸಿದ್ದಾರೆ.


ಇದನ್ನೂ ಓದಿ: ಗುಜರಾತ್ ಆರ್‍ಟಿಐ ಕಾರ್ಯಕರ್ತನ ಕೊಲೆ: ಆರೋಪಿ ಮಾಜಿ ಬಿಜೆಪಿ ಎಂಪಿ ಅಪರಾಧಿಯೆಂದು ಸಾಬೀತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬ್ರಶ್ಟಾಚಾರ ಬಯಲಿಗೆಳೆಯುವ ಆರ್. ಟಿ.ಐ. ಕಾರ್ಯಕರ್ತರ ಹೋರಾಟ ಕತ್ತಿಯ ಮೇಲಿನ ನಡಿಗೆಯಂತಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...