Homeಮುಖಪುಟ5 ವರ್ಷದ ಎಂಎಸ್ಪಿ ಗುತ್ತಿಗೆ; ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ರೈತ ಮುಖಂಡರು: ನಾಳೆಯಿಂದ ದೆಹಲಿ ಚಲೋ...

5 ವರ್ಷದ ಎಂಎಸ್ಪಿ ಗುತ್ತಿಗೆ; ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ರೈತ ಮುಖಂಡರು: ನಾಳೆಯಿಂದ ದೆಹಲಿ ಚಲೋ ಆರಂಭ

- Advertisement -
- Advertisement -

ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಐದು ವರ್ಷಗಳವರೆಗೆ ಸರ್ಕಾರಿ ಸಂಸ್ಥೆಗಳಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ‘ದೆಹಲಿ ಚಲೋ’ ಆಂದೋಲನದಲ್ಲಿ ಭಾಗವಹಿಸಿದ ರೈತ ಮುಖಂಡರು ಇದು ರೈತರ ಹಿತಾಸಕ್ತಿಯಲ್ಲ ಎಂದು ಹೇಳಿದ್ದು, ನಾವು ಬುಧವಾರ ಪಾದಯಾತ್ರೆ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಅಥವಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿ ಶಾಂತಿಯುತವಾಗಿ ಪ್ರತಿಭಟಿಸಲು ದೆಹಲಿಗೆ ಹೋಗಲು ನಮಗೆ ಅವಕಾಶ ಮಾಡಿಕೊಡಿ ಎಂದು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

ರೈತ ಮುಖಂಡರೊಂದಿಗಿನ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ, ಮೂವರು ಕೇಂದ್ರ ಸಚಿವರ ಸಮಿತಿಯು ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ರೈತರಿಂದ ಐದು ವರ್ಷಗಳವರೆಗೆ ಕನಿಷ್ಠ ಬೆಂಬಲ ಬೆಲೆಗೆ ಖರೀದಿ ಮಾಡಲಾಗುವುದು, ಈ ಖರೀದಿಯು ಸರ್ಕಾರದ ಏಜೆನ್ಸಿಗಳ ಮೂಲಕ ನಡೆಯುತ್ತದೆ ಹಾಗೂ ಖರೀದಿ ವಿಚಾರವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂಬ ಪ್ರಸ್ತಾವವನ್ನು ಕೇಂದ್ರವು ರೈತರ ಮುಂದೆ ಇರಿಸಿತ್ತು. ಸಂಯುಕ್ತ ಕಿಸಾನ್ ಮೋರ್ಚಾ, ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಇದು MSPಗಾಗಿರುವ ರೈತರ ಬೇಡಿಕೆಯನ್ನು ದಿಕ್ಕು ತಪ್ಪಿಸುವ ಮತ್ತು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಆದ್ದರಿಂದ  ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಇರುವ ಶಿಫಾರಸಿನ ಅನುಷ್ಠಾನದ ಹೊರತಾಗಿ ಯಾವುದಕ್ಕೂ ಒಪ್ಪುವುದಿಲ್ಲ ಎಂದು ಹೇಳಿದೆ.

‘ದೆಹಲಿ ಚಲೋ’ ಪಾದಯಾತ್ರೆಯ ನೇತೃತ್ವ ವಹಿಸಿರುವ ಎಸ್‌ಕೆಎಂ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ಎರಡು ವೇದಿಕೆಗಳಲ್ಲಿ ಚರ್ಚೆ ನಡೆಸಿದ ನಂತರ, ಕೇಂದ್ರದ ಪ್ರಸ್ತಾವನೆಯು ಹಿತದೃಷ್ಟಿಯಿಂದ ಕೂಡಿಲ್ಲ ಎಂದು ನಿರ್ಧರಿಸಲಾಗಿದೆ. ನಾವು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದ್ದಾರೆ.

ದೆಹಲಿಗೆ ಪಾದಯಾತ್ರೆ ಮುಂದುವರಿಯಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, ನಾವು ಫೆಬ್ರವರಿ 21ರಂದು ಬೆಳಿಗ್ಗೆ 11 ಗಂಟೆಗೆ ಶಾಂತಿಯುತವಾಗಿ ದೆಹಲಿಗೆ ಪ್ರತಿಭಟನಾ ಮರವಣಿಗೆಯನ್ನು ತೆರಳಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ ರೈತ ಮುಖಂಡರೊಂದಿಗಿನ ಮಾತುಕತೆಯ ನಂತರ ಮಾತನಾಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟದಂತಹ ಸಹಕಾರ ಸಂಘಗಳು ಹಲಸು, ಉದ್ದಿನಬೇಳೆ ಬೆಳೆಯುವ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ. ದಾಲ್ ಅಥವಾ ಮೆಕ್ಕೆಜೋಳವನ್ನು ಮುಂದಿನ ಐದು ವರ್ಷಗಳವರೆಗೆ MSPಯಲ್ಲಿ ಖರೀದಿಸಲು ಒಪ್ಪಂದವನ್ನು ಮಾಡಿಕೊಳ್ಳಲಿದೆ.  ಇದಕ್ಕಾಗಿ ಪೋರ್ಟಲ್‌ನ್ನು ಅಭಿವೃದ್ಧಿಪಡಿಸಲಾಗುವುದು, ಇದಲ್ಲದೆ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ರೈತರೊಂದಿಗೆ ಕಾನೂನು ಒಪ್ಪಂದ ಮಾಡಿಕೊಂಡ ನಂತರ ಐದು ವರ್ಷಗಳವರೆಗೆ ಎಂಎಸ್‌ಪಿ ದರದಲ್ಲಿ ರೈತರಿಂದ ಹತ್ತಿ ಖರೀದಿಸಲಿದೆ ಎಂದು ಗೋಯಲ್ ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಈ ಬಗ್ಗೆ ಮಾತನಾಡಿದ್ದು, ನಾನು ಒಬ್ಬ ವಕೀಲನಾಗಿ ಸಭೆಯಲ್ಲಿ ಪಾಲ್ಗೊಂಡಿದ್ದೇನೆ. ಕೇಂದ್ರದ ಪ್ರಸ್ತಾವದ ಕುರಿತು ಭಾಗಿದಾರರೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಪ್ರತಿಭಟನೆ ವೇಳೆ ಶಾಂತಿ ಕಾಯ್ದುಕೊಳ್ಳಬೇಕು. ಗೋಧಿಗೆ ಬದಲಾಗಿ ಬೇರೆ ಬೆಳೆಗಳ ಕೃಷಿಗೆ ಮುಂದಾಗುವ ಉದ್ದೇಶವಿದೆ. ಆದರೆ, ಕೃಷಿ ಉತ್ಪನ್ನಗಳ ಬೆಲೆ ಎಂಎಸ್‌ಪಿಗಿಂತಲೂ ಕುಸಿದಾಗ ನಷ್ಟ ಅನುಭವಿಸುವ ಭೀತಿ ಇದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಕೇಂದ್ರವನ್ನು ಒತ್ತಾಯಿಸಲು ರೈತರು ಉದ್ದೇಶಿಸಿದ್ದ ‘ದೆಹಲಿ ಚಲೋ’ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಪ್ರತಿಭಟನಾ ನಿರತ ರೈತರು ಹರಿಯಾಣ- ಪಂಜಾಬ್‌ನ ಗಡಿಯಲ್ಲಿರುವ ಶಂಭು ಮತ್ತು ಖಾನೌರಿ ಗಳಲ್ಲಿ ತಂಗಿದ್ದಾರೆ. ಎಂಎಸ್‌ಪಿ ಜಾರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ವಿದ್ಯುತ್‌ ದರ ಏರಿಕೆ ಬೇಡ, ರೈತರ ಮೇಲಿನ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಲಖಿಂಪುರ ಖೇರಿ ಹಿಂಸಾಚಾರ, ಭೂಸ್ವಾಧೀನ ಕಾಯಿದೆ 2013ರ ಮರುಸ್ಥಾಪನೆ ಮತ್ತು 2020-21ರಲ್ಲಿ ಆಂದೋಲನದ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರವನ್ನು ಕೂಡ ನೀಡಬೇಕು ಎಂದು ಆಗ್ರಹಿಸಿ ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದರು.

ಇದನ್ನು ಓದಿ:ಸಿಬಿಐನಿಂದ ಕೊಚ್ಚರ್ ದಂಪತಿಯ ಬಂಧನ: ‘ಅಧಿಕಾರದ ದುರುಪಯೋಗ’ ಎಂದ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್...

0
"ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದ ರೈಲನ್ನು ಜಿಹಾದಿಗಳು ಮುಸ್ಲಿಂ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದ್ದಾರೆ. ಕಾವಲುಗಾರ ವಾಹನ ಹೀಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದರೂ ಜಿಹಾದಿಗಳು ವಾಹನವನ್ನು ಹೀಗೆ ಕಳುಹಿಸಲು ಹಠ ಹಿಡಿದಿದ್ದಾರೆ. ಇದು ಯಾವ...