Homeಮುಖಪುಟಮತ್ತೆ ಮುನ್ನೆಲೆಗೆ ಬಂದ ಲಿಪಿ ಸುಧಾರಣೆ ಚರ್ಚೆ; ಹತ್ತು ದಿಕ್ಕಿನ ಹಲವು ಪ್ರಶ್ನೆಗಳು

ಮತ್ತೆ ಮುನ್ನೆಲೆಗೆ ಬಂದ ಲಿಪಿ ಸುಧಾರಣೆ ಚರ್ಚೆ; ಹತ್ತು ದಿಕ್ಕಿನ ಹಲವು ಪ್ರಶ್ನೆಗಳು

- Advertisement -
- Advertisement -

ಕನ್ನಡ ಭಾಷೆ ಮುಖ್ಯವಾಗಿ ಸಂಸ್ಕೃತ ಮತ್ತು ಪ್ರಾಕೃತ ಪದಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಲಿಪಿಯ ವ್ಯಂಜನಾಕ್ಷರಗಳಲ್ಲಿ ಮಹಾಪ್ರಾಣಗಳನ್ನು ಹಾಗೂ ಕೆಲವು ಸ್ವರಾಕ್ಷರಗಳನ್ನು ಹೊರಗಿನಿಂದ ತೆಗೆದುಕೊಂಡಿದೆ. ಕನ್ನಡ ಜಾಯಮಾನಕ್ಕೆ ಒಗ್ಗದ ಇಂತಹ ನುಸುಳುವಿಕೆಯನ್ನು ತಡೆಯಬಹುದಿತ್ತು ಅಥವಾ ಲಿಪಿಗೆ ಹೊಸ ಅಕ್ಷರಗಳನ್ನು ಸೇರಿಸಕೊಳ್ಳದೆಯೂ ಹೊರಗಿನ ಪದಗಳನ್ನು ಸ್ವೀಕರಿಸಬಹುದಿತ್ತು ಎಂಬ ತಿಳಿವಳಿಕೆಯೊಂದಿಗೆ, ಕೆಲವು ಅಕ್ಷರಗಳನ್ನು ಕೈಬಿಟ್ಟು ಲಿಪಿ ಸುಧಾರಣೆಗೆ ಮುಂದಾಗಬೇಕು ಎಂಬ ವಾದ ಹಲವು ದಶಕಗಳಿಂದ ಇರುವಂತದ್ದೇ. ಆದರೆ ಕೆಲವು ವರ್ಷಗಳಿಂದ ಈ ವಾದ ಚುರುಕು ಪಡೆದಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ರೂಪ ಪಡೆದಿದೆ. ಇದರ ಸುತ್ತ ನಡೆದಿರುವ ಚರ್ಚೆಗೆ ಇರುವ ಆಯಾಮಗಳನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಈ ಅವಲೋಕನ.

ಈ ಸುಧಾರಣೆಯ ಕೂಗು ಮುಖ್ಯವಾಗಿ ನಾಲ್ಕು ನೆಲೆಗಳಲ್ಲಿ ಕೇಳಿ ಬರುತ್ತಿದೆ. ಅವುಗಳಲ್ಲಿ ಕೆಲವು ಒಂದಕ್ಕೊಂದು ಪೂರಕವಾಗಿವೆ ಅಥವಾ ಓವರ್‌ಲ್ಯಾಪ್ ಆಗುತ್ತವೆ ಅನ್ನಿಸಲೂಬಹುದು. ಅವುಗಳು 1. ಮಕ್ಕಳಿಗೆ ಹಾಗೂ ಹೊಸದಾಗಿ ಕನ್ನಡ ಕಲಿಯುವವರಿಗೆ ಮಹಾಪ್ರಾಣಗಳ ಬಳಕೆ ಗೊಂದಲವನ್ನು ಮೂಡಿಸುವುದಲ್ಲದೆ, ಬರವಣಿಗೆಯಲ್ಲಿ ತಪ್ಪುಗಳನ್ನು (ಇಂದಿನ ಪ್ರಭಾವಶಾಲಿ ಗ್ರಹಿಕೆಯ ಪ್ರಕಾರ) ಮಾಡುವಂತೆ ಮಾಡಿ, ಹಿಂಜರಿಕೆ ಉಂಟುಮಾಟುತ್ತದೆ ಅಥವಾ ಹಿಂದುಳಿಯುವಂತೆ ಮಾಡುತ್ತದೆ. ಇದು ಎಷ್ಟೋ ಬಾರಿ ಕೀಳರಿಮೆ ಸೃಷ್ಟಿಸುವುದಕ್ಕೂ ಕಾರಣವಾಗಿದೆ 2. ಬರವಣಿಗೆ ಎಂದಿಗೂ ಆಡುವ ಮಾತಿಗೆ ಹತ್ತಿರವಿದ್ದಷ್ಟೂ ಅದು ಹೆಚ್ಚು ಸ್ಪಷ್ಟವಾಗಿರುತ್ತದೆ ಮತ್ತು ಹಲವು ವಲಯಗಳಲ್ಲಿ ಕನ್ನಡ ಬಳಕೆಗೆ ಅದು ಉತ್ತೇಜಿಸುತ್ತದೆ. 3. ಸಂಸ್ಕೃತದ ಯಜಮಾನಿಕೆಯಿಂದ ಬಂದಿರುವ ಈ ಅಕ್ಷರಗಳನ್ನು ತೆಗೆದುಹಾಕುವ ಮೂಲಕ ದಬ್ಬಾಳಿಕೆಯ ಸಂಸ್ಕೃತಿಯ ವಿರುದ್ಧ ಒಂದು ಮಟ್ಟದ ಪ್ರತಿರೋಧ ತೋರಬಹುದು. 4. ಅಚ್ಚ-ಮೂಲ-ಶುದ್ಧ ಕನ್ನಡ ಇತ್ಯಾದಿ ಬಳಕೆಯ ಹಿನ್ನೆಲೆಯಲ್ಲಿ ಮೂಡುವ ವಾದಗಳು.

ಕಲಿಕೆಯಲ್ಲಿ ಮಕ್ಕಳಿಗಾಗಲೀ ಅಥವಾ ಹೊಸದಾಗಿ ಕನ್ನಡ ಕಲಿಯುವವರಿಗಾಗಲೀ ಅಥವಾ ಕನ್ನಡವನ್ನು ಕಲಿತಿರುವವರಿಗೆ ಕೂಡ ಎಷ್ಟೋ ಬಾರಿ ಬರವಣಿಗೆಯಲ್ಲಿ ಮತ್ತು ಉಚ್ಚಾರಣೆಯಲ್ಲಿ ಗೊಂದಲಕ್ಕೆ ಈಡುಮಾಡುವ ಸಂದರ್ಭಗಳಿಗೆ ಮಹಾಪ್ರಾಣಗಳು ಮಹಾಕಾರಣ ಎಂಬುದನ್ನು ಹಲವು ವರ್ಷಗಳಿಂದ ಭಾಷಾತಜ್ಞರು ನಿರೂಪಿಸಿಕೊಂಡು ಬರುತ್ತಲೇ ಇದ್ದಾರೆ. ನಿರಂತರವಾಗಿ ಬೆಳೆದ ಇಂತಹ ತಪ್ಪು ಗ್ರಹಿಕೆಯ ಕಾರಣದಿಂದ ಮಾತಿಗೆ ಮತ್ತು ಬರಹಕ್ಕೆ ಮಹಾಕಂದಕ ಉಂಟಾಗಿ, ಬರವಣಿಗೆಯಲ್ಲಿ ’ಕಂಡು ಹಿಡಿಯಲಾಗುತ್ತಿರುವ’ ತಪ್ಪುಗಳು ಹುಟ್ಟಿಸುತ್ತಿರುವ ಕೀಳರಿಮೆಯನ್ನು ತಪ್ಪಿಸಲು ಈ ಲಿಪಿ ಸುಧಾರಣೆ ಒಂದು ಮಹತ್ವದ ಹೆಜ್ಜೆಯಾದೀತು. ಆಡುವ ಮಾತಿಗೆ ಬರವಣಿಗೆಯನ್ನು ಹತ್ತಿರ ತರುವ ಈ ಸುಧಾರಣೆಯಿಂದ, ಟಿವಿ ಕಾರ್ಯಕ್ರಮಗಳಲ್ಲಿ, ರೇಡಿಯೋಗಳಲ್ಲಿ ಮತ್ತು ಚಲನಚಿತ್ರಗಳ ಸಂಭಾಷಣೆಗಳಲ್ಲಿ ಹೆಚ್ಚು ಲವಲವಿಕೆಯನ್ನೂ, ಚುರುಕುತನವನ್ನೂ ಸಾಧಿಸಲು ಕಾರಣವಾಗಬಹುದು. ಇದರ ಬಗ್ಗೆ ಹಲವು ಭಾಷಾತಜ್ಞರು ಚರ್ಚಿಸಿದ್ದಾರೆ. (ಹೆಚ್ಚಿನ ಚರ್ಚೆಗೆ: ಕೆ ವಿ ನಾರಾಯಣ ಅವರ ’ಮಾತು ಮತ್ತು ಬರೆಹ’ ಪ್ರಬಂಧ ಓದಬಹುದು – ತೊಂಡುಮೇವು, ಕಂತೆ ಆರು).


ಕನ್ನಡ ಬರವಣಿಗೆಯನ್ನು ಬಹಳಷ್ಟು ಅಭ್ಯಾಸ ಮಾಡಿರುವವರೂ ಕೂಡ ಎಷ್ಟೋ ಪದಗಳನ್ನು ಬರೆಯುವಾಗ ಗೊಂದಲಕ್ಕೆ ಬೀಳುವುದನ್ನು ಸಾಮಾನ್ಯವಾಗಿ ಕಾಣಬಹುದು. ಕೆಲವು ಉದಾಹರಣೆಗಳ ಮೂಲಕ ಹೇಳಬಹುದಾದರೆ ಭೇದ, ನಿರ್ದಿಷ್ಟ, ಸುದ್ದಿ, ಕನಿಷ್ಟ, ಬೋಧಕ ಇಂತಹ ಸಾಮಾನ್ಯ ಬಳಕೆಯ ಪದಗಳಲ್ಲಿಯೂ ಮಹಾಪ್ರಾಣ ಅಕ್ಷರಗಳ ಬಳಕೆಯ ಬಗೆಗಿನ ಸಮಸ್ಯೆ ಅತಿ ಸಾಮಾನ್ಯ ಸಂಗತಿ. ಇದು ಎಷ್ಟೋ ವಿಷಯ ತಜ್ಞರನ್ನು ಕನ್ನಡದಲ್ಲಿ ಬರೆಯುವುದರಿಂದ ಹಿಂದೆ ಉಳಿಯುವಂತೆ ಮಾಡುವ ಅಥವಾ ಉತ್ತೇಜಿಸದಿರುವಂತೆ ಮಾಡುವ ಅಪಾಯ ಹೊಂದಿದೆ. ಈ ಕಾರಣಗಳಿಗಾಗಿ ಮಹಾಪ್ರಾಣಗಳನ್ನು ಕೈಬಿಡುವುದು ಒಟ್ಟಾರೆ ಕನ್ನಡ ಭಾಷೆಯನ್ನು ವ್ಯಾಪಕಗೊಳಿಸುವ ದೃಷ್ಟಿಯಿಂದ ಒಳಿತಿನ ಕ್ರಮ ಎನ್ನಬಹುದು. ನೀತಿ ನಿರೂಪಕರು ಇದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.

ಆದರೆ ಇದೇ ವಾದಸರಣಿಯು ಮುಂದೆ ಹೋಗಿ ಕನ್ನಡ ಜಾಯಮಾನದಲ್ಲಿ ಇಲ್ಲದ ಕೆಲವು ಅಕ್ಷರಗಳನ್ನು, ಜೊತೆಗೆ ಎಷ್ಟೋ ಪದಗಳನ್ನೂ ತ್ಯಜಿಸಬೇಕೆನ್ನುವುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಉದಾಹರಣೆಗೆ ಐ ಮತ್ತು ಔ ಅಕ್ಷರಗಳು ಗೊಂದಲ ಮೂಡಿಸುವ ಸ್ವರಗಳಲ್ಲ. ಇವುಗಳು ಇಲ್ಲದೆಯೂ ಯಾವುದೇ ಪದವನ್ನು ಬರೆಯಬಹುದು ಎಂಬುದನ್ನು ಒಪ್ಪಿಕೊಳ್ಳಬಹುದಾದರೂ, ಐ ಮತ್ತು ಔ ಬಳಕೆಯ ಹಲವು ಸಾಮಾನ್ಯ ಪದಗಳು – ಐಶಾರಾಮಿ, ಐಸ್ಸಾ, ಔಷಧಿ ಇತ್ಯಾದಿಯಾಗಿ ಕನ್ನಡದ ಬಳಕೆಯಲ್ಲಿವೆ. ಇವುಗಳನ್ನು ಅನಗತ್ಯವಾಗಿ ಹೊಸ ರೀತಿಯಲ್ಲಿ ಬರೆಯುವ ಅಭ್ಯಾಸ ಗೊಂದಲವನ್ನು ಹೆಚ್ಚಿಸುವ ಕೆಲಸವಾಗುವುದಿಲ್ಲವೇ ಎಂಬ ಪ್ರಶ್ನೆ ಕೂಡ ಏಳುತ್ತದೆ. ಹೊರಗಿನಿಂದ ಬಂದದ್ದು ಎಂಬ ಕಾರಣಕ್ಕೆ ಬಿಡಬೇಕೆನ್ನುವ ಕೂಗು ಮೂಲಭೂತವಾದಿತನದ್ದು ಎಂಬ ವಾದಕ್ಕೆ ಪುಷ್ಟಿ ನೀಡಿದಂತಾಗುವುದಿಲ್ಲವೇ?

ಹಾಗೆಯೇ ಕನ್ನಡದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಅನ್ಯ ಭಾಷಿಕ ಪದಗಳ ಬದಲಾಗಿ ಕನ್ನಡದ್ದೇ ಪದ ಹುಡುಕಬೇಕೆನ್ನುವ ವಾದಕ್ಕೂ ಮೇಲಿನ ಪ್ರಶ್ನೆ ಅನ್ವಯಿಸುತ್ತದೆ. ಸಂಸ್ಕೃತ ದಬ್ಬಾಳಿಕೆಯಿಂದ, ಸಂಸ್ಕೃತದ ಬಗ್ಗೆ ಅನಗತ್ಯ ಪ್ರೀತಿಯಿಂದ ಟಂಕಿಸಿದ ಎಷ್ಟೋ ಪದಗಳು ವಿಷಯವನ್ನು ಅರ್ಥೈಸಿಕೊಳ್ಳುವುದಕ್ಕೆ ಗೊಂದಲ ಮೂಡಿಸುವ ಬಗ್ಗೆ ಎಚ್ಚರಗೊಂಡು (ಉದಾ: ಅಕಶೇರುಕ, ಕಶೇರುಕ ಎಂಬ ಪದಗಳು) ಅಂತಹ ಪದಬಳಕೆಗಳಿಗೆ ಬದಲಿಗಳನ್ನು ಹುಡುಕುವುದು ಖಂಡಿತಾ ಅತ್ಯವಶ್ಯಕ. ಆ ನಿಟ್ಟಿನಲ್ಲಿ ನೋಡುವುದಾದರೆ, ಸಾಮಾನ್ಯರ ಜೀವನದಲ್ಲಿ ದಬ್ಬಾಳಿಕೆ ನಡೆಸುವ ಸಂಸ್ಕೃತ ಕೇಂದ್ರಿತ
ಆಚರಣೆಗಳ ಬಗ್ಗೆಯೂ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಅದು ಮದುವೆ ಆಚರಣೆ ಇರಬಹುದು, ವ್ಯಕ್ತಿಗತ ಆಧ್ಯಾತ್ಮಿಕ ನಂಬಿಕೆ ಇರಬಹುದು. ಜನಸಾಮಾನ್ಯರ ವೈವಿಧ್ಯ ಸಂಸ್ಕೃತಿ-ನಂಬಿಕೆಗಳನ್ನು ಅಧೀನವಾಗಿಸುವ ಮತ್ತು ಏಕರೂಪಗೊಳಿಸುವ ವಿದ್ಯಮಾನವನ್ನು ಮೆಟ್ಟಿನಿಲ್ಲುವುದು ಅತಿ ಅವಶ್ಯಕ. ಆದರೆ, ಇಂತಹ ಅಧೀನತೆಯನ್ನು ಪ್ರಶ್ನಿಸಿ ಘನತೆಯನ್ನು ನೀಡುವಂತಹ ಅನ್ಯ ಭಾಷಿಕ ನೆಲೆಗಳಿಂದ ಬಂದಂತಹ ಸಂಸ್ಕೃತಿ ಮತ್ತು ಆಚರಣೆಗಳು ಕೂಡ ಇವೆ. ಅವುಗಳನ್ನು ವಿವೇಚಿಸುವ ಪರಿ ಮತ್ತು ದಾರಿ ಬೇರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಪದಬಳಕೆ ಮತ್ತು ಭಾಷೆಯ ವಿಷಯಕ್ಕೆ ಬಂದಾಗ, ಸಂಸ್ಕೃತ ಪದಗಳನ್ನಾಗಲೀ ಅಥವಾ ಪರ್ಶಿಯನ್, ಇಂಗ್ಲಿಷ್ ಮುಂತಾದ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಪದಗಳನ್ನು ಕನ್ನಡೀಕರಿಸಿಕೊಂಡು, ಇಲ್ಲಿನ ಅಗತ್ಯಗಳಿಗೆ ತಕ್ಕಂತೆ ಪಳಗಿಸಿಕೊಂಡು ಜನಸಾಮಾನ್ಯರ ದಿನನಿತ್ಯದ ಭಾಗವಾಗಿ ಬೆಳೆದಿರುವುದನ್ನು ಒಪ್ಪಿಕೊಂಡು ಮುಂದುವರೆಯುವುದರಲ್ಲಿ ಹೆಚ್ಚಿನ ಒಳಿತಿದೆಯೆನಿಸುತ್ತದೆ.

ಉದಾಹರಣೆಗೆ ಸಂಸ್ಕೃತದಿಂದ ಬಂದ ಸೂರ್ಯ ಆಗಲೀ ಚಂದ್ರ ಆಗಲೀ ದಿನವಾಗಲೀ, ಪರ್ಶಿಯನ್‌ನಿಂದ ಬಂದ ಚಿಲ್ಲರೆಯಾಗಲೀ, ಖರ್ಚಾಗಲೀ, ಇಂಗ್ಲಿಷ್‌ನಿಂದ ಬದ ಕಾಲೇಜಾಗಲೀ, ಟೇಬಲ್ ಆಗಲೀ, ಅವುಗಳು ಕನ್ನಡದವೇ ಪದಗಳಾಗಿಹೋಗಿವೆ ಮತ್ತು ಇಂತಹ ಸಾವಿರಾರು ಪದಗಳು ಅವುಗಳಿಗೆ ಇದ್ದಿರಬಹುದಾದ ಕನ್ನಡ ಪದಗಳನ್ನು ಅಧೀನ ದೃಷ್ಟಿಯಿಂದ ಕಾಣುತ್ತವೆ ಎಂಬುದಕ್ಕೆ ಪುರಾವೆಗಳೇನೂ ಇಲ್ಲ. ತಿಂಗಳನ್ನು ಚಂದ್ರ ಬದಲಿಸಿದ್ದರೂ ಬೆಳದಿಂಗಳು ಇನ್ನೂ ಸಾಮಾನ್ಯ ಬಳಕೆಯಲ್ಲಿ ಉಳಿದುಕೊಂಡಿದೆ. ’ಉದಾಹರಣೆ’ ಎಂಬ ಪದವೂ ಅಂತಹದ್ದೇ ಒಂದು. ಅದರ ಬದಲಿಗೆ ’ಎತ್ತುಗೆ’ಯನ್ನು ಬಳಸಿ ಎನ್ನಲಾಗುತ್ತಿದೆ. ಈ ರೀತಿಯ ಸುಧಾರಣೆಯ ಅಭಿಯಾನ ಕಲಿಕೆಯನ್ನು ಮತ್ತೆ ಗೊಂದಲಗೊಳಿಸಿ ಕ್ಲಿಷ್ಟಕರಗೊಳಿಸುವುದಿಲ್ಲವೇ ಎಂಬ ಪ್ರಶ್ನೆಗಳು ಏಳುತ್ತವೆ. ದಿನದ ಬದಲು ಡೇ, ದಿನಾಂಕದ ಬದಲು ಡೇಟ್ ಹೆಚ್ಚು ಸಾಮಾನ್ಯಗೊಳ್ಳುತ್ತಾ ಹೋದರೆ, ಉದಾಹರಣೆಯ ಬದಲು ಎಕ್ಸಾಂಪಲ್ ಹೆಚ್ಚು ಬಾಯಿಗಳಲ್ಲಿ ಕೇಳಿಬರುತ್ತಿದೆಯಾದರೇ ಅವುಗಳನ್ನೇ ಉಳಿಸಿಕೊಳ್ಳುವುದು ಕನ್ನಡ ಭಾಷೆ ಹೆಚ್ಚೆಚ್ಚು ವ್ಯಾಪಕವಾಗಬೇಕು ಎಂಬ ದೃಷ್ಟಿಯಿಂದ ದಿಟದ ದಾರಿಯಾಗುತ್ತದೆ. ಆದುದರಿಂದ ಶುದ್ಧ ಅಥವಾ ಅಚ್ಚ ಕನ್ನಡ ಬಳಸಬೇಕು ಎನ್ನುವ ದೃಷ್ಟಿಗಿಂತಲೂ, ಹೆಚ್ಚು ಜನ ಬಳಸಲು ಸುಲಭವಾಗುವಂತೆ, ಕಲಿಯಲು ಉತ್ತೇಜಿಸುವಂತೆ, ಕೀಳರಿಮೆ ಮತ್ತು ಹೀಗಳಿಕೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಲಿಪಿ ಮತ್ತು ಭಾಷಾ ಸುಧಾರಣೆಗಳು ಯಾವತ್ತಿಗೂ ಸ್ವಾಗತಾರ್ಹ. ಕರ್ನಾಟಕದ ಬೇರೆಬೇರೆ ಪ್ರದೇಶಗಳ ಪದಗಳನ್ನು, ನುಡಿವ್ಯತ್ಯಾಸಗಳನ್ನು ಪರಿಚಯಿಸುವ ವಾದ ಬೇರೆ. ಬೇರೆಬೇರೆ ಡಯಲೆಕ್ಟ್‌ಗಳಲ್ಲಿ ಕೂಡ ಅನ್ಯ ಭಾಷೆಗಳಿಂದ ಬಂದ ಎಷ್ಟೋ ಪದಗಳು ಅಲ್ಲಿಗೆ ತಕ್ಕಂತೆ ಕನ್ನಡೀಕರಣಗೊಂಡು ಬಳಕೆಯಲ್ಲಿರುತ್ತವೆ.

ಇಲ್ಲಿಯವರೆಗೂ ಸೃಷ್ಟಿಯಾಗಿರುವ ವಿವೇಕದ ಬರಹದ ಉಳಿವಿನ ಪ್ರಶ್ನೆ

ಹಳೆಗನ್ನಡ-ನಡುಗನ್ನಡ ನುಡಿಬಳಕೆಯಿಂದ ನಾವು ಈಗ ಎಷ್ಟು ಮುಂದೆ ಬಂದಿದ್ದೇವೆಂದರೆ ಅವುಗಳ ಪಠ್ಯಗಳನ್ನು ಓದುವುದಕ್ಕೆ ಇಂದು ವಿಶೇಷವಾದ ಅಭ್ಯಾಸದ ಅಗತ್ಯ ಇದೆ. ಈಗ ಲಿಪಿಸುಧಾರಣೆಯಾಗಿ ಹೊಸ ರೀತಿಯ ಬರಹಕ್ಕೆ ಮುಂದಿನ ಪೀಳಿಗೆ ಒಗ್ಗಿಕೊಂಡಿತು ಎಂದು ನಾವು ಊಹಿಸಿಕೊಳ್ಳುವುದಾದರೆ, ಆಧುನಿಕ ಜಗತ್ತಿನಲ್ಲಿ ಬರಹ ರೂಪದಲ್ಲಿ ಸೃಷ್ಟಿಯಾಗಿರುವ ವಿವೇಕವನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಹೇಗೆ? ಆಗ ಕುವೆಂಪು, ಕಾರಂತ, ಲಂಕೇಶ, ತೇಜಸ್ವಿ, ದೇವನೂರ ಮಹದೇವ ಮುಂತಾದ ಚಿಂತಕರ ಬರಹಗಳನ್ನು ’ಎಲ್ಲರ ಕನ್ನಡ’ದಲ್ಲಿ ಕಟ್ಟಿಕೊಡುವ ಅಗತ್ಯವಂತೂ ಇದೆಯಲ್ಲವೇ. ಅದನ್ನೂ ಸಮಾನಾಂತರವಾಗಿ ಸೃಷ್ಟಿಸುವ ಕೆಲಸ ಚುರುಕಾಗಬೇಕಿದೆ. ಬಹುಶಃ 30ರ ದಶಕದಿಂದ 90ರ ದಶಕದವರೆಗೆ ಮೂಡಿರುವ ಸಾಹಿತ್ಯ ಮತ್ತು ಚಳವಳಿಗಳು (ಅವುಗಳ ಬರಹದ ಪಠ್ಯಗಳು) ಕನ್ನಡದ ವಿವೇಕವನ್ನು ಒಂದು ಮಟ್ಟಕ್ಕಾದರೂ ಸೃಷ್ಟಿಸಿವೆ, ಬೆಳೆಸಿವೆ. ಇವುಗಳನ್ನು ಹೊಸ ಬರಹದಲ್ಲಿಯೋ ಅಥವಾ ಧ್ವನಿ ರೂಪದಲ್ಲಿಯೋ ಕಟ್ಟುವ ಕೆಲಸ ಮತ್ತು ಅದು ಎಲ್ಲರಿಗೂ ಸುಲಭವಾಗಿ ದಕ್ಕುವಂತೆ ಮಾಡುವ ಕೆಲಸವೂ ಜತೆಜತೆಗಾದರೆ ಎಲ್ಲರ ಕನ್ನಡ ಅಳವಡಿಸಿಕೊಳ್ಳುವ ಬಗ್ಗೆ ಸಾಮಾನ್ಯರಿಗೂ ಒಂದು ಭರವಸೆ ಮೂಡಬಹುದು.


ತಂತ್ರಜ್ಞಾನ ಸಮಸ್ಯೆಯನ್ನು ನಿವಾರಿಸುವಂತಾದರೆ?

ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳ ದೃಷ್ಟಿಯಲ್ಲಿ ಹೇಳುವುದಾದರೆ ತಂತ್ರಜ್ಞಾನ ಆ ಭಾಷೆಗಳ ಬರವಣಿಗೆಯಿಂದ ಹಿಡಿದು, ಉಚ್ಚಾರಣೆ (ಅದರ ಮೇಲೆ ಅಭಿವೃದ್ಧಿಕೊಂಡಿರುವ ’ಸ್ಪೀಚ್ ಟು ಟೆಕ್ಸ್ಟ್’), ಅನುವಾದ ಈ ಎಲ್ಲದಕ್ಕೂ ಊಹೆಗೂ ನಿಲುಕದಷ್ಟು ಕೊಡುಗೆ ನೀಡಿದೆ. ಇಂಗ್ಲಿಷ್‌ನಲ್ಲಿ ಅಕ್ಷರದೋಷಗಳನ್ನು ತಿದ್ದುವ, ವಾಕ್ಯ ರಚನೆ, ವ್ಯಾಕರಣ ದೋಷಗಳನ್ನು ಸರಿಪಡಿಸುವ ತಂತ್ರಾಂಶಗಳೂ ಬಹಳಷ್ಟಿವೆ. ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವ ನಿಟ್ಟಿನಲ್ಲಿ ಬೆಳೆದರೆ, ಅದರ ಉಪಯೋಗವನ್ನು ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷಾಕಲಿಕೆಗೆ ಅಳವಡಿಸಿಕೊಂಡರೆ, ಈಗ ಇರುವಂತೆಯೇ ಲಿಪಿಯನ್ನು ಉಳಿಸಿಕೊಂಡು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆಯಲ್ಲವೇ! ಆಗ ಯಾವುದೋ ಉಚ್ಚಾರಣೆ ಕೀಳು, ಯಾವುದೋ ಪದಬಳಕೆ ಮೇಲು ಎಂಬ ತಾರತಮ್ಯದ ಧೋರಣೆಯನ್ನು ಸಮಗ್ರವಾಗಿ ಬದಲಿಸುವ ನಿಟ್ಟಿನಲ್ಲಿ ಅಭಿಯಾನಗಳನ್ನು ಮಾಡಿದರೆ ಸಾಕಲ್ಲವೇ!

ಇಂತಹ ಹಲವು ಪ್ರಶ್ನೆಗಳೊಂದಿಗೆ ಲಿಪಿ ಸುಧಾರಣೆಯನ್ನು ಹತ್ತು ಹಲವು ದಿಕ್ಕುಗಳಲ್ಲಿ ಅವಲೋಕಿಸಿ, ಚಿಂತಿಸಿ, ಮಂಥನ ನಡೆಸಿ ಯಾವುದು ಒಳಿತು ಎಷ್ಟು ಒಳಿತು ಎಂಬುದನ್ನು ವಿವೇಚಿಸಿ ನೀತಿ ನಿರೂಪಕರನ್ನು ಮನವೊಲಿಸುವ, ಸಾಮಾನ್ಯರನ್ನು ಕೂಡ ಒಳಗೊಳ್ಳುವ ಬಗೆಗಳನ್ನು ಕಂಡುಕೊಳ್ಳಬೇಕಿದೆ.

ವಿ.ಸೂ: ನಾನುಗೌರಿ ನ್ಯಾಯಪಥ ಪತ್ರಿಕೆ ಮಹಾಪ್ರಾಣಗಳನ್ನು ತ್ಯಜಿಸಿದ ಹಲವು ಬರಹಗಳನ್ನು ಈವರೆಗೆ ಪ್ರಕಟಿಸಿದೆ ಮತ್ತು ಮುಂದೆಯೂ ಈ ಪ್ರಯೋಗವನ್ನು ತೆರೆದ ಮನಸ್ಸಿನಿಂದ ನೋಡಲಿದೆ.

  • ಗುರುಪ್ರಸಾದ್ ಡಿ ಎನ್

ಇದನ್ನೂ ಓದಿ: ಹಳತು ವಿವೇಕ : ಕನ್ನಡ ಭಾಷೆಗೆ ಅಸಹಜವಾಗಿ ನುಸುಳಿರುವ ಮಹಾಪ್ರಾಣಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸಂಸ್ಕೃತದ ಪದಗಳನ್ನು ಬರೆಯಲು ಕನ್ನಡದಲ್ಲಿ ಮಹಾಪ್ರಾಣಗಳನ್ನು ಬಳಸಲಾಗುತ್ತಿದೆ. ಅವುಗಳಿಗೆ ತಕ್ಕ ಕನ್ನಡಪದಗಳಿದ್ದರೂ ನಮ್ಮ ಕನ್ನಡ ಬರಹಗಾರಿಗೇಕೊ ಹಿಂಜರಿಕೆ.
    ಕನ್ನಡದಲ್ಲಿ ಎಲ್ಲವನ್ನು ಬರೆಯುವಂತಾದರೆ ಈ ಮಹಾಪ್ರಾಣ, ಕಟಿಣ ವಿಜಾತಿಯ ಒತ್ತಕ್ಷರಗಳಿಂದ ಕೂಡಿರುವ ಸಂಸ್ಕೃತ ಪದಗಳ ಗೊಡವೆ ಕನ್ನಡಕ್ಕೆ ಬೇಕಿಲ್ಲ.
    ಕಂಪ್ಯೂಟರ್‌ ನಲ್ಲಿ ಬರೆಯುವುದು, ಹೊಸಬರಿಗೆ ವೇಗವಾಗಿ ಕನ್ನಡ ಕಲಿಕೆಯಾಗಿ ಕನ್ನಡ ಬೆಳೆಯುತ್ತದೆ.
    ಐ,ಔ:
    ಐದು..ಅಯ್ದು
    ಹೌದು..ಹವ್ದು

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...