ಕೆಲಸ ಕೇಳಿಕೊಂಡು ಬಂದಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮತ್ತು ಸಿಡಿ ವಿವಾದದಲ್ಲಿ ಸಿಲುಕಿಕೊಂಡಿದ್ದ ಸಚಿವ ರಮೇಶ ಜಾರಕಿಹೊಳಿ ಇಂದು ರಾಜೀನಾಮೆ ನೀಡಿದ್ದಾರೆ.
ಸಿಡಿ ನಕಲಿಯಾಗಿದೆ. ನಾನು ರಾಜೀನಾಮೆ ನೀಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದ ರಮೇಶ್ ಜಾರಕಿಹೊಳಿ ಮೇಲೆ ವಿಪಕ್ಷ ನಾಯಕರು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.
ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷಕ್ಕೆ ಮುಜುಗರ ಮಾಡಲು ಬಯಸುವುದಿಲ್ಲ. ತನಿಖೆ ಆದ ಬಳಿಕ ನಿರ್ದೋಷಿಯಾಗಿ ಬರುತ್ತೇನೆ. ನಂತರ ಮತ್ತೆ ಸಚಿವ ಆಗುತ್ತೇನೆ ಎಂದು ರಮೇಶ್ ಅವರು ಮುಖ್ಯಮಂತ್ರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಮ್ಮ ತನಿಖೆ ಸಚಿನ್, ಮಂಗೇಶ್ಕರ್ ವಿರುದ್ಧವಲ್ಲ, BJP ಐಟಿ ಸೆಲ್ ವಿರುದ್ಧ: ಮಹಾರಾಷ್ಟ್ರ ಗೃಹ…
ರಾಜ್ಯದ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಕೆಲಸದ ಆಮಿಷ ಒಡ್ಡಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಗಳು ಕೇಳಿಬರುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದೆ ಎನ್ನಲಾಗಿರುವ ಆಡಿಯೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
“ಕೆಲಸದ ಆಸೆಯಿಂದ ಸಚಿವರನ್ನು ಭೇಟಿ ಮಾಡಿದ ಸಂದರ್ಭ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅತ್ಯಂತ ಹೇಯ ಕೃತ್ಯ. ಬಿಜೆಪಿ ಪಕ್ಷ ಎಂದರೆ ಕಾಮಲೀಲೆ ಪಕ್ಷ ಎಂದು ಮತ್ತೊಮ್ಮೆ ಸಾಬೀತಾಗಿದೆ. ಅಧಿಕಾರದಲ್ಲಿದ್ದಾಗ ಮುಗ್ಧ ಹೆಣ್ಣುಮಕ್ಕಳ ಬಗ್ಗೆ ನಡೆಯುವ ಇಂತಹ ಕಾಮಲೀಲೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಕೂಡಲೇ ಇವರನ್ನ ಪಕ್ಷದಿಂದ ಅಮಾನತುಗೊಳಿಸಿ ಸಚಿವ ಸಂಪುಟದಿಂದ ವಜಾಗೊಳಿಸದೇ ಹೋದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುತ್ತೇವೆ” ಎಂದು ಕಾಂಗ್ರೆಸ್ ಪಕ್ಷವು ಎಚ್ಚರಿಕೆ ನೀಡಿತ್ತು.
ಮಹಿಳಾ ದಿನಾಚರಣೆ ಹತ್ತಿರ ಇರುವಾಗಲೇ ಇಂತಹ ಘಟನೆ ಹೊರಬಂದಿರುವುದು ನಾಚಿಕೆಗೇಡು. ಬಿಜೆಪಿ ಸರ್ಕಾರಕ್ಕೆ ಮಹಿಳಾ ದಿನಾಚರಣೆ ನಡೆಸಲು ನೈತಿಕತೆ ಇದೆಯೇ ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಪ್ರಶ್ನಿಸಿದ್ದರು.
ಇತ್ತ ರಮೇಶ್ ಜಾರಕಿಹೊಳಿಯವರದ್ದು ಎಂದು ಹೇಳಲಾಗುತ್ತಿರುವ ವೀಡಿಯೋ ಕುರಿತು ಸಿಐಡಿ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ಯಡಿಯೂರಪ್ಪ ಅವರನ್ನು ಬಾಲಚಂದರ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಬಾಲಚಂದರ್ ಜಾರಕಿಹೊಳಿ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷರಾಗಿದ್ದು, ರಮೇಶ್ ಜಾರಕಿಹೊಳಿಯವರ ಸಹೋದರರಾಗಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೋಳಿ ಲೈಂಗಿಕ ಹಗರಣದ ಬಗ್ಗೆ CBI ತನಿಖೆ ಅಗತ್ಯ: ಬಾಲಚಂದರ್ ಜಾರಕಿಹೋಳಿ