ಸಿನಿಮಾ ಇತಿಹಾಸ, ಮಾಹಿತಿ, ಫೋಟೋಗಳನ್ನು ದಾಖಲಿಸುವುದರ ಜೊತೆಗೆ ಇಂದಿನ ಪೀಳಿಗೆಗೆ ಸಿನಿಮಾರಂಗದ ದಶಕಗಳ ಹಿಂದಿನ ಅಪೂರ್ವ ಮಾಹಿತಿ, ಫೋಟೋಗಳನ್ನು ತಲುಪಿಸುವುದು, ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ರೂಪಿಸುವ ಆಶಯದೊಂದಿಗೆ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಅನಾವರಣಗೊಳ್ಳುತ್ತಿದೆ.
ಹಿರಿಯ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರನ್ನು ಸ್ಮರಿಸುವುದರ ಜೊತೆಗೆ ಅಪರೂಪದ ಫೋಟೋ, ಪತ್ರ, ಮಾಹಿತಿಗಳನ್ನು ದಾಖಲಿಸುವುದು, ಉತ್ತಮ ಬರಹ, ಲೇಖನ, ವಿಶ್ಲೇಷಣೆಗಳ ಮೂಲಕ ಸಿನಿಮಾ ಕುರಿತಾಗಿ ಒಳನೋಟಗಳನ್ನು ನೀಡುವ ನಿಟ್ಟಿನಲ್ಲಿ ‘ಚಿತ್ರಪಥ’ ಪೋರ್ಟಲ್ ಕೆಲಸ ಮಾಡಲಿದೆ.
ಮಾರ್ಚ್ 6ರ ಶನಿವಾರ ಬೆಂಗಳೂರಿನ ಮಲ್ಲೇಶ್ವರ 18ನೇ ಕ್ರಾಸ್‌ನ ರೇಣುಕಾಂಬ ಸ್ಟುಡಿಯೋದಲ್ಲಿ ಕನ್ನಡ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ‘ಚಿತ್ರಪಥ’ವನ್ನು ಅನಾವರಣಗೊಳಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಚಿತ್ರಸಾಹಿತಿ ಕವಿರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ನಮ್ಮ ತನಿಖೆ ಸಚಿನ್, ಮಂಗೇಶ್ಕರ್ ವಿರುದ್ಧವಲ್ಲ, BJP ಐಟಿ ಸೆಲ್ ವಿರುದ್ಧ: ಮಹಾರಾಷ್ಟ್ರ
ಚಿತ್ರಪಥ ಪೋರ್ಟಲ್‌ನಲ್ಲಿ ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಭಾರತದ ಇತರೆ ಪ್ರಾದೇಶಿಕ ಭಾಷಾ ಸಿನಿಮಾ ಸೇರಿದಂತೆ ಜಾಗತಿಕ ಸಿನಿಮಾ ಕುರಿತಾಗಿಯೂ ಫೋಟೋಗಳು ಮತ್ತು ಮಾಹಿತಿ ಇರಲಿದೆ. ಜಾಗತಿಕ ಸಿನಿಮಾದ ವಸ್ತು, ವಿಷಯವನ್ನು ಕನ್ನಡಿಗರಿಗೆ ತಲುಪಿಸುವ ಪುಟ್ಟ ವಾಹಕವಾಗಿಯೂ ‘ಚಿತ್ರಪಥ’ ಆರ್ಕೈವ್ ಪೋರ್ಟಲ್ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿತ್ರರಂಗ ನಡೆದುಬಂದ ಹಾದಿಯನ್ನು ದಾಖಲಿಸುವ, ಅಲ್ಲಿನ ಶ್ರೀಮಂತಿಕೆ, ಬೆರಗು-ಹೊಳಪನ್ನು ಹೇಳುವ, ಚಿತ್ರರಂಗದ ಅಂದಿನ ಕಾರ್ಯವೈಖರಿ, ಶೂಟಿಂಗ್ ಸ್ಟುಡಿಯೋಗಳು ಹಾಗೂ ಪರಿಕರಗಳ ವಿವರಗಳನ್ನು ನೀಡುವುದು, ಶ್ರೇಷ್ಠ ತಂತ್ರಜ್ಞರು ಹಾಗೂ ಕಲಾವಿದರ ಕುರಿತ ಮಾಹಿತಿ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಒಂದು ಪ್ರಯತ್ನ. ಚಿತ್ರರಂಗದ ದಂತಕಥೆಗಳು ಎನಿಸಿದ ತಂತ್ರಜ್ಞರು ಹಾಗೂ ಕಲಾವಿದರ ಅಪರೂಪದ ಫೋಟೋಗಳೊಂದಿಗಿನ ಮಾಹಿತಿ, ಪ್ರತಿಭಾವಂತರ ಕುರಿತ ಟಿಪ್ಪಣಿಗಳು ಇಲ್ಲಿ ಇರಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಲು ಸಲಹೆ: ಸುಪ್ರೀಂ ನಡೆಗೆ ತೀವ್ರ ಖಂಡನೆ
‘ಚಿತ್ರಪಥ’ದಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿದೆ. ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳು ಪ್ರಮುಖವಾಗಿ ಪೋರ್ಟಲ್‍ನಲ್ಲಿ ಬಳಕೆಯಾಗಲಿವೆ ಎಂದು ತಿಳಿಸಲಾಗಿದೆ.
ಪೋರ್ಟಲ್‌ನಲ್ಲಿ ನಾಸ್ಟಾಲ್ಜಿಯಾ, ಚಿತ್ರ-ಕಥೆ, ಶೂಟಿಂಗ್ ಸೋಜಿಗ, ಮಾಹಿತಿ–ವಿಶೇಷ, ನೆನಪು, ಪೋಸ್ಟರ್ ಮಾಹಿತಿ, ಅತಿಥಿ ಅಕ್ಷರ ಎಂಬ ವಿಭಾಗಗಳಿರಲಿವೆ. ಫೋಟೋಗಳ ಹಿಂದಿನ ಕತೆ, ಸಂದರ್ಭಗಳನ್ನು ಸ್ವತಃ ಫೋಟೋಗಳನ್ನು ಸೆರೆಹಿಡಿದ ಸ್ಥಿರಚಿತ್ರ ಛಾಯಾಗ್ರಾಹಕರು ನಿರೂಪಿಸಿದ್ದು, ಈ ವೀಡಿಯೋಗಳನ್ನು ’ಚಿತ್ರಪಥ’ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.
ಹದಿಮೂರು ವರ್ಷಗಳ ಕಾಲ ಕನ್ನಡಪ್ರಭ, ವಿಜಯ ಕರ್ನಾಟಕ, ದಿ ಸ್ಟೇಟ್ ವೆಬ್ ಪೋರ್ಟಲ್‌ನಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿರುವ ಶಶಿಧರ ಚಿತ್ರದುರ್ಗ ಈ ಪೋರ್ಟಲ್ ಆರಂಭಿಸುತ್ತಿದ್ದಾರೆ. ಇವರು ಸಿನಿಮಾಗೆ ಸಂಬಂಧಿಸಿದಂತೆ ಏಳು ಪುಸ್ತಕಗಳನ್ನು ಪ್ರಕಟಿಸಿದ್ದು, 2015ನೇ ಸಾಲಿನ ರಾಜ್ಯಸರ್ಕಾರದ ಸಿನಿಮಾ ಸಬ್ಸಿಡಿ ಕಮಿಟಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ: 75% ಖಾಸಗಿ ಉದ್ಯೋಗಗಳು ಸ್ಥಳೀಯರಿಗೆ ಮೀಸಲು – ಹರಿಯಾಣ ಸರ್ಕಾರ ಅನುಮೋದನೆ