ಆ ಸಮಾಜಮುಖೀ ಬದುಕಿನ ಹೆಸರು ‘ಶೌಕತ್ ಕೈಫಿ’ : ಡಿ.ಉಮಾಪತಿಯವರು ಬರೆದ ಪ್ರೇಮಕಥೆ

ಅರಸೊತ್ತಿಗೆ ಮತ್ತು ಅನ್ಯಾಯದ ಮೇಲೆ ದಾಳಿ ನಡೆಸಿದ್ದ 'ತಾಜ್' (ಮುಕುಟ) ಎಂಬ ಮತ್ತೊಂದು ಶಕ್ತಿಶಾಲಿ ಕವಿತೆಯನ್ನು ಕೈಫಿ ವಾಚಿಸಿದ್ದರು. ನಿಜಾಮ್ ಆಳ್ವಿಕೆಯ ನಗರದಲ್ಲಿ ಈ ಕವಿತೆ ಓದಲು ಎಂಟೆದೆ ಬೇಕಿತ್ತು ಎಂಬ ಸಂಗತಿಯೇ ಶೌಕತ್ ಅವರನ್ನು ಬಹುವಾಗಿ ಪ್ರಭಾವಿಸಿತ್ತು.

ಕಳೆದ ವಾರ ಮುಂಬಯಿಯಲ್ಲಿ ನಿಧನರಾದ ಶೌಕತ್ ಕೈಫಿ ಹೈದರಾಬಾದಿನ ಸಂಪ್ರದಾಯವಾದಿ ಮುಸ್ಲಿಂ ಕುಟುಂಬವೊಂದರ ಹುಡುಗಿ. ಪ್ರೇಮಕ್ಕಾಗಿ, ಮೌಲ್ಯಗಳಿಗಾಗಿ, ಸಿದ್ಧಾಂತಗಳಿಗಾಗಿ ಹೂಡಿದ ಬಂಡಾಯ, ಮಾಡಿದ ತ್ಯಾಗ, ತುಳಿದ ಹೊಸ ದಾರಿಯ ಸಂಘರ್ಷದ ಬದುಕು ಅವರದು..

ಪ್ರಗತಿಪರ ರಂಗಭೂಮಿ ಚಳವಳಿಯ ಜೊತೆಜೊತೆಗೆ ಬೆಸಗೊಂಡಿದ್ದವರು.. ಪ್ರೇಮಿಯಾಗಿ ಪತಿಯಾದ ನಂತರವೂ ಪ್ರೇಮಿಯಾಗಿ, ಕಡೆತನಕ ಆತ್ಮೀಯ ಸಖನಾಗಿ ಉಳಿದ ಜನಪರ ಕವಿ ಕೈಫಿ ಆಜ್ಮಿ ಬಗೆಗಿನ ಅವರ ಪ್ರೀತಿಯ ಒರತೆ ತಾವು 93ರ ವಯಸ್ಸಿನಲ್ಲಿ ಕಡೆಯ ಉಸಿರೆಳೆವತನಕ ಬತ್ತಲಿಲ್ಲ.

1947ರ ಫೆಬ್ರವರಿಯಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ಉರ್ದು ಪ್ರಗತಿಪರ ಬರೆಹಗಾರರ ಸಮ್ಮೇಳನದಲ್ಲಿ ಭಾಗವಹಿಸಲು ಜನಪರ ಕವಿಗಳನೇಕರು ಅಲ್ಲಿ ಸೇರಿದ್ದಾಗ ಶುರುವಾಗಿತ್ತು ಶೌಕತ್ ಪ್ರೇಮಗಾಥೆ. ಹಲವು ಕವಿಗಳನ್ನು ಶೌಕತ್ ಅವರ ಸಮೀಪ ಬಂಧುವಿನ ಮನೆಯಲ್ಲಿ ಉಳಿಸಲಾಗಿತ್ತು. ಈ ಕವಿಗಳ ವಿನಮ್ರತೆ ಎಳೆಹರೆಯದ ಶೌಕತ್ ಅವರನ್ನು ಮಂತ್ರಮುಗ್ಧಗೊಳಿಸಿತ್ತು.

ಯಾದ್ ಕೀ ರೆಹಗುಝಾರ್ ಎಂಬುದು ಅವರ ಆತ್ಮಚರಿತ್ರೆಯ ಹೊತ್ತಿಗೆ. ಅದರ ಇಂಗ್ಲಿಷ್ ಅನುವಾದಿತ ಅವತರಣಿಕೆ ’Kaifi and I’. ಈ ಪುಸ್ತಕದಲ್ಲಿ ತಮ್ಮ ಜೀವನ ಪಯಣದ ವಿವರಗಳನ್ನು ಅವರು ದಾಖಲಿಸಿದ್ದಾರೆ.

ಕೈಫಿ ಅಂದು ಸಂಜೆ ಓದಿದ ಕವಿತೆ ಔರತ್ (ಹೆಣ್ಣು). ಗಂಡಾಳಿಕೆಯನ್ನು ಪ್ರಶ್ನಿಸಿದ್ದ ಕವಿತೆ.

ನಾ ದಹಿಸುವ ಅದೇ ಬೆಂಕಿಯಲ್ಲಿ ಉರಿಯಬೇಕಿದೆ ನಿನಗೆ,
ಎದ್ದೇಳು ಜೀವದರಸಿಯೇ ನನ್ನ ಹೆಜ್ಜೆಯಲ್ಲೇ ಹೆಜ್ಜೆ ಇಡಬೇಕಿದೆ ನಿನಗೆ
(ಜಿಸ್ ಮೇಂ ಜಲ್ತಾ ಹೂಂ ಉಸೀ ಆಗ್ ಮೇ ಜಲ್ನಾ ಹೈ ತುಝೇ
ಉಠ್ ಮೇರೀ ಜಾಂ ಮೇರೇ ಸಾಥ್ ಹೀ ಚಲ್ನಾ ಹೈ ತುಝೇ)

ತನ್ನನ್ನೇ ಕುರಿತು ಕೈಫಿ ಬರೆದಿದ್ದ ಕವಿತೆಯಿದು ಎನ್ನಿಸಿಬಿಟ್ಟಿತ್ತು ಶೌಕತ್‍ಗೆ. ಮಹಿಳೆಯನ್ನು ಗೌರವಿಸುವ ಪುರುಷನೇ ತನಗೆ ಸೂಕ್ತ ಆತ್ಮಸಂಗಾತಿ ಎಂದು ಆ ಎಳೆ ಯುವತಿ ಭಾವಿಸಿದ್ದರು. ಮೊದಲ ನೋಟದಲ್ಲೇ ಅಂಕುರಿಸಿದ ಪ್ರೇಮ ಅದು. ಮುಷಯಿರಾದ ನಂತರ ಕವಿಗಳ ಹಸ್ತಾಕ್ಷರಗಳಿಗಾಗಿ ಬೇಟೆ ನಡೆದಿತ್ತು. ಕೈಫಿ ಆಜ್ಮಿಯ ಮುತ್ತಿದ್ದ ದೊಡ್ಡ ಗುಂಪು ಕರಗಲೆಂದು ಕಾದ ಶೌಕತ್, ಮತ್ತೊಬ್ಬ ಗಣ್ಯ ಕವಿ ಅಲಿ ಸರ್ದಾರ್ ಜಾಫ್ರಿ ಬಳಿ ನಡೆದರು. ಆ ದಿನಗಳಲ್ಲಿ ಜಾಫ್ರಿ ಅವರ ವರ್ಚಸ್ಸು ಯಾವುದೇ ಕ್ರಾಂತಿಕಾರಿಗಿಂತ ಕಡಿಮೆ ಇರಲಿಲ್ಲ. ಶೌಕತ್ ನಡೆಯನ್ನು ಕೈಫಿ ಕಣ್ಣಂಚು ಗಮನಿಸಿತ್ತು.

ಕಡೆಗೂ ತಮ್ಮೆಡೆ ಸಾರಿ ಬಂದ ಶೌಕತ್ ಕೈಯಲ್ಲಿನ ಡೈರಿಯಲ್ಲಿ ಕಳಪೆ ಕವಿತೆಯ ಎರಡು ಪಂಕ್ತಿಗಳನ್ನು ಗೀಚಿದರು ಕೈಫಿ. ಈ ಸಪ್ಪೆ ಸಾಲುಗಳ ಯಾಕೆ ಬರೆದಿರಿ ಎಂದು ಮುಖ ಊದಿಸಿ ಕೇಳಿದ ಶೌಕತ್ ಅವರೆಡೆಗೆ ತುಂಟ ನಗು ಚಿಮ್ಮಿಸಿದರು ಕೈಫಿ. ಮೊದಲೇ ತನ್ನ ಬಳಿಗೆ ಬಾರದೆ ಸರ್ದಾರ್ ಜಾಫ್ರಿ ಕಡೆ ಹೋದೆಯಲ್ಲ ಅದಕ್ಕೆ ಎಂದರು.

ಅರಸೊತ್ತಿಗೆ ಮತ್ತು ಅನ್ಯಾಯದ ಮೇಲೆ ದಾಳಿ ನಡೆಸಿದ್ದ ‘ತಾಜ್’ (ಮುಕುಟ) ಎಂಬ ಮತ್ತೊಂದು ಶಕ್ತಿಶಾಲಿ ಕವಿತೆಯನ್ನು ಕೈಫಿ ವಾಚಿಸಿದ್ದರು. ನಿಜಾಮ್ ಆಳ್ವಿಕೆಯ ನಗರದಲ್ಲಿ ಈ ಕವಿತೆ ಓದಲು ಎಂಟೆದೆ ಬೇಕಿತ್ತು ಎಂಬ ಸಂಗತಿಯೇ ಶೌಕತ್ ಅವರನ್ನು ಬಹುವಾಗಿ ಪ್ರಭಾವಿಸಿತ್ತು.

ಮದುವೆ ಈಗಾಗಲೆ ಗೊತ್ತಾಗಿರುವ ಶೌಕತ್‍ಗೆ ಅಭಿನಂದನೆ ಹೇಳುವಂತೆ ಶೌಕತ್ ಅಕ್ಕ ಕೈಫಿ ಕಾಲೆಳೆದಿದ್ದರು. ಕವಿಯ ಮುಖ ಬಿಳುಚಿಕೊಂಡಿತು. ಕೈಫಿ ವಿವಾಹವೂ ಸಮೀಪಿಸಿತ್ತು. ಮದುವೆಯ ನಂತರ ನನ್ನನ್ನು ಮರೆತುಬಿಡುವಿ ಎಂದು ತಮಾಷೆ ಮಾಡಿದ ಕೈಫಿ ಮುಖ ಒಡನೆಯೇ ಗಂಭೀರವಾಯಿತು. ತಾನೂ ಮದುವೆಯಾಗುವುದಿಲ್ಲ ಎಂದು ಸಾರಿದರು. ಅಂದು ರಾತ್ರಿ ಇಬ್ಬರೂ ನಿದ್ರಿಸಲಿಲ್ಲ.

ಮರುದಿನ ಆಕೆಗೊಂದು ಭಾವತೀವ್ರ ಕವಿತೆ ಬರೆದು ಕಳಿಸಿದರು ಕೈಫಿ. ಅನುಮಾನ ಬಂದ ಶೌಕತ್ ತಾಯಿ ಇಬ್ಬರೂ ಕಲೆಯದಂತೆ ಕಣ್ಣಿಟ್ಟರು. ಭಾರ ಹೃದಯದಿಂದ ಮರುದಿನವೇ ಮುಂಬಯಿಗೆ ತೆರಳಿದರು ಕೈಫಿ. ದುಃಖದಿಂದ ಹುಚ್ಚಳಂತಾದರು ಶೌಕತ್. ಕೂಡಲೇ ಪತ್ರವೊಂದನ್ನು ಬರೆದರು- “ಕೈಫಿ, ಹೋಲಿಸಲಾಗದಷ್ಟು ಪ್ರೀತಿಸುತ್ತೇನೆ ನಿನ್ನನ್ನು. ಆಕಾಶ, ಪರ್ವತಗಳು, ನದಿಗಳು, ಜನರು, ದೇವದೂತರು ಕಡೆಗೆ ಪರಮೇಶ್ವರ ಸೇರಿದಂತೆ ಯಾರೆಂದರೆ ಯಾರೂ ಇದನ್ನು ಬದಲಾಯಿಸಲಾರರು… ನಿಮ್ಮವಳು ಮತ್ತು ಕೇವಲ ನಿಮ್ಮವಳಾದ ಶೌಕತ್”. ಕೈಫಿಯಿಂದ ಮಾರೋಲೆ ಬಂದಿತ್ತು. ತಮ್ಮ ರಕ್ತದಿಂದ ಬರೆದಿದ್ದರು.

ಈ ಉರ್ದು ಕವಿಗಳನ್ನು ನಂಬಬೇಡ ಕಣಮ್ಮ… ಕುರಿ ರಕ್ತದಿಂದಲೂ ಬರೆದಿರಬಹುದು ಎಂದು ಮಗಳ ಮನಸು ಬದಲಾಯಿಸಲು ನೋಡಿದ್ದರು ಶೌಕತ್ ತಂದೆ. ಆದರೆ ಮಗಳು ಜಗ್ಗಲಿಲ್ಲ. ಕಡೆಗೆ ಸೋತ ತಂದೆಯೇ ಯಾರಿಗೂ ಹೇಳದೆ ಮಗಳನ್ನು ಮುಂಬಯಿಗೆ ಕರೆದೊಯ್ದರು.

ಅಲ್ಲಿ ಕಾದಿತ್ತು ತೆರೆದ ತೋಳುಗಳ ಸ್ವಾಗತ. ತಡವಿಲ್ಲದೆ ನಡೆದಿತ್ತು ಮದುವೆ. ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಐ) ವತಿಯಿಂದ ಅದರ ನಾಯಕ ಬಿ.ಟಿ.ರಣದಿವೆ ಅವರು ನೂರು ರೂಪಾಯಿ ಉಡುಗೊರೆ ನೀಡಿದ್ದರು. ಈ ಲೈಲಾ ಮಜ್ನೂ ಜೋಡಿಯ ನಾಟಕ ಆರು ತಿಂಗಳೊಳಗೆ ಕೊನೆಯಾಗಿ ಪಕ್ಷಕ್ಕೆ ನೂರು ರುಪಾಯಿ ನಷ್ಟವಾಗುವಂತೆ ಆಗಕೂಡದು ಎಂಬ ಷರತ್ತನ್ನೂ ಅವರು ವಿಧಿಸಿದ್ದರು.

ಕೈಫಿ ಶಿಯಾ ಮತ್ತು ಶೌಕತ್ ಸುನ್ನಿ ಒಳಪಂಗಡಗಳಿಗೆ ಸೇರಿದ್ದರು. ಮದುವೆಗೆ ಎರಡೂ ಕಡೆಯ ಕಾಜಿಗಳ ಅಗತ್ಯವಿತ್ತು. ಆದರೆ ಇಬ್ಬರಿಗೆ ಕೊಡುವಷ್ಟು ಹಣವಿರಲಿಲ್ಲ. ಕೈಫಿ ತಾನೂ ಸುನ್ನಿ ಎಂದು ಸಾರಿದರು. ಒಬ್ಬ ಕಾಜಿಯೇ ಸಾಕಾಯಿತು. ಹಸಿದವರು, ತುಳಿಸಿಕೊಂಡವರಿಗಾಗಿ ಮಾನವೀಯ ತುಡಿತಗಳ ಹೊಸ ಸಮಾಜವನ್ನು ನಿರ್ಮಿಸಲು ಹೊರಟಿದ್ದ ಮುಂಬಯಿಯ ಅಂದಿನ ಎಲ್ಲ ಪ್ರಗತಿಪರರೂ ಈ ಮದುವೆಗೆ ಸಾಕ್ಷಿಗಳಾದರು.

ಮುರಿದ ಮಂಚ, ಪುಸ್ತಕಗಳು- ಪತ್ರಿಕೆಗಳ ಹರಡಿದ್ದ ಪುಟ್ಟ ಕೋಣೆಯಲ್ಲಿ ಮೊದಲ ರಾತ್ರಿ ಕಳೆಯಿತು. ಸಿಪಿಐ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ಕೈಫಿಗೆ ತಿಂಗಳಿಗೆ ಸಿಗುತ್ತಿದ್ದ ಖರ್ಚಿನ ಹಣ ನಲವತ್ತೈದು ರೂಪಾಯಿ. ಮೂವತ್ತು ಅವರ ಊಟಕ್ಕೆ, ಹತ್ತು ಅವರ ಓಡಾಟಕ್ಕೆ.

ನಟನೆಯಲ್ಲಿ ತರಬೇತಿ ಇಲ್ಲದ ಶೌಕತ್ ಅವರನ್ನು ಹುರಿದುಂಬಿಸಿ ಪೃಥ್ವೀ ಥಿಯೇಟರ್ ಕಡೆಗೆ ಕಳಿಸಿದವರು ಸಿಪಿಐ ಪ್ರಧಾನಕಾರ್ಯದರ್ಶಿ ಪಿ.ಸಿ.ಜೋಶಿ. ಹಕೀಕತ್, ಉಮ್ರಾವ್ ಜಾನ್, ಬಾಝಾರ್, ಗರಂ ಹವಾ, ಸಲಾಂ ಬಾಂಬೆ ಮುಂತಾದ ಚಿತ್ರಗಳಲ್ಲಿ ಅವರ ಅಭಿನಯ ಜೀವಂತವಾಗಿ ಮೂಡಿತ್ತು.

ಅವರು ಅಭಿನಯಿಸಿದ ಮೊದಲ ನಾಟಕ ಇಸ್ಮತ್ ಚುಗ್ತಾಯಿ ಅವರ ಧಾನಿ ಬಾಂಕೇ. ಹೊಸತಾಗಿ ಜನಿಸಿದ್ದ ಸ್ವತಂತ್ರ ದೇಶದ ಸಾಮಾಜಿಕ ನೇಯ್ಗೆಯನ್ನು ಛಿದ್ರಗೊಳಿಸತೊಡಗಿದ್ದ ಹಿಂದೂ-ಮುಸ್ಲಿಂ ದಂಗೆಗಳು ಅದರ ವಸ್ತು ವಿಷಯ. ಭೀಷ್ಮಸಹಾನಿ, ಪೃಥ್ವೀರಾಜ ಕಪೂರ್, ಉಜ್ರಾ ಭಟ್, ಜೊಹ್ರಾ ಸೆಹಗಲ್ ಮುಂತಾದ ಮಹಾರಥಿಗಳಿದ್ದ IPTA ಆಂದೋಲನದ ಭಾಗವಾದರು.

ರಂಗಭೂಮಿಯ ಹೊಸ ಪರಿಭಾಷೆ ಮತ್ತು ಸೌಂದರ್ಯಪ್ರಜ್ಞೆಯ ಶೋಧನೆಯಲ್ಲಿ ತೊಡಗಿದ್ದ ಪ್ರತಿಬದ್ಧ ಯುವನಟರನ್ನು ಬೆನ್ನಿಗಿರಿಸಿಕೊಂಡು ದೇಶಸಂಚಾರ ಮಾಡಿದರು. ಜಾತಿಧರ್ಮ ಪಂಗಡಗಳ ಮಿತಿಗಳನ್ನು ಮೀರಿದ ಕಲೆಯ ಪ್ರತಿಪಾದಕರಾದರು. ನಾಲ್ಕೂ ನಿಟ್ಟಿನ ಬದಲಾವಣೆಗಳನ್ನು ಗ್ರಹಿಸಿ ಅಳವಡಿಸಿಕೊಂಡರು. ಸಿರಿವಂತ ತೌರನ್ನು ತೊರೆದು ಬಡ ಕಮ್ಯುನಿಸ್ಟ್ ಕವಿಯ ಕೈ ಹಿಡಿದರು. ಧನ ದೌಲತ್ತುಗಳಿಗೆ ಬೆನ್ನು ತೋರಿಸಿ, ಸ್ತ್ರೀಪುರುಷರು ಸಮಾನ ಸಖರೆಂದು ತಿಳಿದು ಸಮಾಜಕ್ಕಾಗಿ ಬದುಕುವ ಹೊಸ ಜಗತ್ತನ್ನು ಪ್ರವೇಶಿಸಿದರು. ಅಭಾವ, ಬಡತನದ ನಡುವೆ ಒಲೆ ಉರಿಸುತ್ತ ಮಕ್ಕಳ ಬೆಳೆಸುತ್ತ ಕವಿತೆ, ಸಾಹಿತ್ಯ, ಕ್ರಾಂತಿಯ ಕುರಿತ ಚರ್ಚೆಗೆ ತೆರೆದುಕೊಂಡರು. ಒಂದು ಪೀಳಿಗೆಯ ಹೆಣ್ಣುಮಕ್ಕಳಿಗೆ ದಾರಿ ತೋರಿದ ಬದುಕನ್ನು ಜೀವಿಸಿದರು.

ಅಂದಹಾಗೆ ಸಮಾಜಮುಖೀ ನಟಿ ಶಬಾನಾ ಆಜ್ಮಿ ಮತ್ತು ಆಕೆಯ ಅಣ್ಣ ಚಲನಚಿತ್ರ ಛಾಯಾಗ್ರಾಹಕ ಬಾಬಾ ಆಜ್ಮಿ ಅವರು ಶೌಕತ್ ಮತ್ತು ಕೈಫಿಯವರ ಮಕ್ಕಳು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here