ಏಪ್ರಿಲ್ 24, 2023, ಬಸವ ಜಯಂತಿಯಂದು ಕರ್ನಾಟಕದಾದ್ಯಂತ 12ನೇ ಶತಮಾನದ ಸಮಾಜ ಸುಧಾರಕ ಕ್ರಾಂತಿಕಾರಿ ಬಸವೇಶ್ವರರನ್ನು ಕೆಲವರಾದರೂ ಒಳ್ಳೆಯ ರೀತಿಯಲ್ಲಿ ನೆನಪಿಸಿಕೊಂಡರು. ಆದರೆ ಚುನಾವಣೆ ಕಾವಿನಲ್ಲಿ ಬೆವರು ಸುರಿಸುತ್ತಿರುವ ರಾಜಕಾರಣಿಗಳು ಅದರಲ್ಲಿಯೂ ಬಿಜೆಪಿ ಪಕ್ಷದ ಮುಖಂಡರು ಕೆಲವು ದಿನಗಳಿಂದ ನಡೆಯುತ್ತಿರುವ ’ಲಿಂಗಾಯತ ಕೇಂದ್ರಿತ ರಾಜಕಾರಣ’ವನ್ನು ಚರ್ಚಿಸಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದರಲ್ಲಿ ಮುಳುಗಿದ್ದರು. ತಾನು ಬಿಜ್ಜಳನ ಅಸ್ಥಾನದಲ್ಲಿ ಮಂತ್ರಿಯಾಗಿದ್ದಾಗ 800 ವರ್ಷಗಳ ಹಿಂದೆಯೇ ಅನುಭವ ಮಂಟಪದ ಮೂಲಕ, ಪ್ರಜಾಪ್ರಭುತ್ವದ ಲಕ್ಷಣಗಳಿಗೆ ಬುನಾದಿ ಹಾಕಿದವರು ಬಸವಣ್ಣ. ಜಾತಿಜಡ ಸಂಪ್ರದಾಯದ ಕೂಪದಲ್ಲಿ ಬಿದ್ದು ಒದ್ದಾಡುತ್ತಿದ್ದ ಸಮಾಜವನ್ನು ಸುಧಾರಿಸಿ, ಮೇಲುಕೀಳು ಮತ್ತು ಶ್ರೇಷ್ಠತೆಯನ್ನು ತಿರಸ್ಕರಿಸಿ ಸಮಸಮಾಜಕ್ಕೆ ಅಡಿಪಾಯ ಹಾಕಹೊರಟವರು ಅವರು. ದೇವಸ್ಥಾನಗಳಲ್ಲಿ ಇದ್ದ ತಾರತಮ್ಯವನ್ನು ವಿರೋಧಿಸಿ ತಮ್ಮದೇ ದೇವರನ್ನು ಸೃಷ್ಟಿಸಿಕೊಳ್ಳಲು ಕರೆಕೊಟ್ಟವರು. ಅನುಭವಮಂಟಪದಲ್ಲಿ ಸಮಾಜದ ಎಲ್ಲ ಬಗೆಯ ಜಾತಿಸಮುದಾಯಗಳು ಪಾಲ್ಗೊಂಡು ಸಂವಾದ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶವಿತ್ತು. ಅಂತರ್ಜಾತಿ ಮದುವೆಯನ್ನು ಪ್ರೋತ್ಸಾಹಿಸಿ, ಅದಕ್ಕೆ ಬಸವಣ್ಣ ಬೆಲೆ ತೆತ್ತೆಬೇಕಾಗಿ ಬಂತು. ಇಂತಹ ಕ್ರಾಂತಿಕಾರಿ ವ್ಯಕ್ತಿಯಿಂದ ಪ್ರಾರಂಭವಾಯಿತೆನ್ನಲಾಗುವ ಲಿಂಗಾಯತ ಧರ್ಮದ ಬಗೆಗಿನ ಇಂದಿನ ಚರ್ಚೆಯ ವಾದವಿವಾದಗಳು, ಪ್ರಜಾಪ್ರಭುತ್ವಕ್ಕೆ ಮಾರಕವಾದ ಬಹುಸಂಖ್ಯಾತವಾದದ ದನಿಯನ್ನು ಪಡೆದಿರುವುದು ಕುಸಿತದ ದ್ಯೋತಕವಾಗಿದೆ.
ಬಿಜೆಪಿಯ ಟಿಕೆಟ್ ಹಂಚಿಕೆಯಿಂದ ಪ್ರಾರಂಭವಾದ ಈ ಚರ್ಚೆ, ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ, ಲಿಂಗಾಯತ ಶಾಸಕನನ್ನು ಬಿಜೆಪಿ ಮುಂದಿನ ಬಾರಿಗೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ಚರ್ಚೆಗಳಿಂದ ಪ್ರಾರಂಭವಾಗಿ, ಸಿದ್ದರಾಮಯ್ಯನವರು ಲಿಂಗಾಯತ ವಿರೋಧಿ, ಅವರು ಲಿಂಗಾಯತರನ್ನು ಭ್ರಷ್ಟರೆಂದು ಕರೆದಿದ್ದಾರೆ, ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗುವುದು ಎಂಬ ಅರ್ಥವಿಲ್ಲದ ಚರ್ಚೆ ಬೆಳೆದು ಇನ್ನೂ ರಾಡಿಯಾಗುತ್ತಲೇ ಇದೆ. ಒಂದು ಕಡೆ ಬಿಜೆಪಿ ರಾಷ್ಟ್ರಮಟ್ಟದಲ್ಲಿ ’ಹಿಂದೂ’-’ಹಿಂದುತ್ವ’ ಎನ್ನುವ ಮೆಜಾರಿಟೇರಿಯನಿಸಂ ಅಥವಾ ಬಹುಸಂಖ್ಯಾತವಾದದ ರಾಜಕಾರಣ ಮಾಡುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕದಲ್ಲಿ ಬಹುಸಂಖ್ಯಾತ ’ಲಿಂಗಾಯತ’ ಜಾತಿರಾಜಕಾರಣಕ್ಕೆ ಅಂಟಿಕೊಂಡಿದೆ. ಎರಡೂ ಕಡೆಗಳಲ್ಲಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರೋಧಿ ಭಾವನೆಯನ್ನು ಉದ್ದೀಪಿಸುವುದು ಮಾತ್ರ ಬದಲಾಗಿಲ್ಲ. ಉದಾಹರಣೆಗೆ ಈ ಚುನಾವಣೆಯಲ್ಲಿಯೂ ಬಿಜೆಪಿ ಯಾವುದೇ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ನೀಡದೆ ತನ್ನ ಸಂಪ್ರದಾಯವನ್ನು ಮುಂದುವರಿಸಿದೆ. ಇನ್ನು ಲಿಂಗಾಯತರಿಗೆ ಸುಮಾರು 65ಕ್ಕೂ ಹೆಚ್ಚು ಟಿಕೆಟ್ ಕೊಟ್ಟಿದೆ. ಅಂದರೆ ವಿಧಾನಸಭಾ ಒಟ್ಟು ಕ್ಷೇತ್ರಗಳ ಸುಮಾರು 30%. ಇವುಗಳಲ್ಲಿ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಹೇಳುವುದಾದರೆ 40% ಟಿಕೆಟ್ ಲಿಂಗಾಯತ ಸಮುದಾಯಕ್ಕೆ ಹೋಗಿವೆ. ಇನ್ನು ಲಿಂಗಾಯತ, ಒಕ್ಕಲಿಗ ಮತ್ತು ಬ್ರಾಹ್ಮಣ ಅಭ್ಯರ್ಥಿಗಳ ಸಂಖ್ಯೆಯನ್ನು ಒಟ್ಟಿಗೆ ತೆಗೆದುಕೊಂಡು, ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿದರೆ ಈ ಮೂರು ಜಾತಿಗಳಿಗೆ ಶೇ.70ಕ್ಕಿಂತಲೂ ಹೆಚ್ಚು ಪ್ರತಿನಿಧಿತ್ವ ಸಿಕ್ಕಿದೆ. ಅಂದರೆ ಶೇ.30 ಟಿಕೆಟ್‌ಗಳನ್ನು ಉಳಿದ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಹಂಚಿದಾಗ ಎಷ್ಟೋ ಸಮುದಾಯಗಳ ಹೆಸರು ಕೂಡ ಅಲ್ಲಿ ಕಾಣುವುದಿಲ್ಲ. (ಮಡಿವಾಳ, ಉಪ್ಪಾರ ಹೀಗೇ ನೂರಾರು ಜಾತಿ ಸಮುದಾಯಗಳಿಗೆ ಪ್ರತಿನಿಧಿತ್ವವೇ ಅಲ್ಲಿಲ್ಲ.) ಲಿಂಗಾಯತರನ್ನು ಯಾರು ಎಷ್ಟು ಅವಮಾನ ಮಾಡುತ್ತಿದ್ದಾರೆಂಬ ಅರ್ಥಹೀನ ಚರ್ಚೆಯಲ್ಲಿ ಈ ಎಲ್ಲ ಸಮುದಾಯಗಳ ಪ್ರತಿನಿಧಿತ್ವದ ಪ್ರಶ್ನೆ ಗೌಣವಾಗಿ ಹೋಗಿದೆ. ಈ ಸಮುದಾಯಗಳ ವ್ಯಕ್ತಿಗಳಿಗೆ ಕನಿಷ್ಠ ಚುನಾವಣೆಯನ್ನು ಎದುರಿಸುವ ಅವಕಾಶವನ್ನಾದರೂ ನೀಡಬೇಕೆಂಬ ಕಾಳಜಿಯೂ ಕಾಣೆಯಾಗಿದೆ. ಬಸವಣ್ಣನವರ ಆಶಯಗಳು ಅಲ್ಲಿಗೆ ಬಸವ ಜಯಂತಿಗಷ್ಟೇ ಮೀಸಲಾಗಿ ಹೋದವು.
ಇದನ್ನೂ ಓದಿ: ‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ
ಇನ್ನು ಚುನಾವಣೆಯಲ್ಲಿ ಅತಿಹೆಚ್ಚು ಅಭ್ಯರ್ಥಿಗಳನ್ನು ನಿಯೋಜಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂಡ ಲಿಂಗಾಯತ ಮತ್ತು ಒಕ್ಕಲಿಗ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಿರುವುದು ಕ್ರೂರ ವಾಸ್ತವಕ್ಕೆ ಕನ್ನಡಿ ಹಿಡಿದಿದೆ. ಮುಸಲ್ಮಾನ ಸಮುದಾಯದ ವ್ಯಕ್ತಿಗಳನ್ನು ಈ ಎರಡೂ ಪಕ್ಷಗಳು ಒಂದು ಮಟ್ಟಕ್ಕೆ ಅಭ್ಯರ್ಥಿಯನ್ನಾಗಿಸಿವೆ ಎಂಬ ಅಂಶವನ್ನು ಹೊರತುಪಡಿಸಿದರೆ, ಟಿಕೆಟ್ ಹಂಚಿಕೆಯಲ್ಲಿ ಬಹುಸಂಖ್ಯಾತವಾದ ಮೂಗಿಗೆ ಬಡಿಯುತ್ತದೆ.
ಇಂತಹ ಸಂದರ್ಭದಲ್ಲಿ ಯಾವ ಪಕ್ಷ ಸರ್ಕಾರ ರಚಿಸಿದರೂ ಇವೇ ಪ್ರಬಲ ಸಮುದಾಯದ ಶಾಸಕರು ಹೆಚ್ಚೆಚ್ಚು ಸಚಿವ ಸ್ಥಾನಗಳನ್ನು ಕಬಳಿಸುವುದರಲ್ಲಿ ಅನುಮಾನವೇನೂ ಉಳಿದಿರುವುದಿಲ್ಲ. ಒಂದು ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸ್ ಅವರು ಅತಿ ಸಣ್ಣಸಣ್ಣ ಸಮುದಾಯದ ವ್ಯಕ್ತಿಗಳಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿ ಅವರನ್ನು ಸಚಿವರನ್ನಾಗಿ ಮಾಡುವ ವಿವೇಕದ ನಡೆಯನ್ನು ಕರ್ನಾಟಕಕ್ಕೆ ಹಾಕಿಕೊಟ್ಟಿದ್ದರು. ನಂತರ ಬಂದ ಸಾಲುಸಾಲು ಸರ್ಕಾರಗಳು ಅದನ್ನು ಮರೆಯುತ್ತಾ ಹೋದವು. ಇನ್ನು ಬಿಜೆಪಿ ಕರ್ನಾಟಕದ ರಾಜಕೀಯದ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಪ್ರವೇಶದ್ವಾರವನ್ನು ಕಲ್ಪಿಸಿಕೊಂಡ ನಂತರವಂತೂ, ಕೆಲವು ಸಮುದಾಯಗಳನ್ನು ಟಾರ್ಗೆಟ್ ಮಾಡಿ ತನ್ನ ವೋಟ್ ಬ್ಯಾಂಕ್ ಮಾಡಿಕೊಂಡಿತು. ಇದರರ್ಥ ಲಿಂಗಾಯತರೋ ಅಥವಾ ಮತ್ಯಾವುದೋ ಒಂದು ಸಮುದಾಯದ ಜನ ಸಾರಾಸಗಟಾಗಿ ಬಿಜೆಪಿಗೇ ಮತ ಚಲಾಯಿಸುತ್ತಾರೆಂದಲ್ಲ. ಆದರೆ ಮುಖ್ಯಮಂತ್ರಿ ತಮ್ಮ ಸಮುದಾಯದದಿನಾಗಬೇಕು ಎನ್ನುವುದನ್ನು ಭಾವನಾತ್ಮಕ ಅಸ್ತ್ರವನ್ನಾಗಿಸಿ, ಪಕ್ಷಗಳು ನಿರ್ದಿಷ್ಟ ಸಮುದಾಯದ ವೋಟುಗಳನ್ನು ತಮ್ಮೆಡೆಗೆ ಪೋಲರೈಸ್ ಮಾಡುವುದು ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ತೀವ್ರವಾಯಿತು. ಈ ಬೆಳವಣಿಗೆಯಿಂದ ಲಿಂಗಾಯತ ಸಮುದಾಯ ಹೆಚ್ಚು ಬಿಜೆಪಿ ಪರ ವಾಲುತ್ತದೆಂಬ ಹವಾ ಸೃಷ್ಟಿ ಮಾಡಲಾಯಿತು. ಇದು ನಿಜವಲ್ಲ ಎಂದು ಸಾಬೀತುಪಡಿಸುವ ಹತ್ತಾರು ಕ್ಷೇತ್ರಗಳು ಕರ್ನಾಟಕದಲ್ಲಿವೆ ಅನ್ನುವುದು ಕೂಡ ವಾಸ್ತವ.
ಇತ್ತೀಚಿಗೆ ಈದಿನ.ಕಾಂ ನಡೆಸಿದ ಸರ್ವೆಯೊಂದರಲ್ಲಿ ಕೂಡ ಒಂದು ಭರವಸೆಯ ಅಂಶ ಬೆಳಕಿಗೆ ಬಂದಿದೆ. ಬಹುತೇಕ ಎಲ್ಲ ಸಮುದಾಯಗಳಲ್ಲೂ ಸದರಿ ಸರ್ಕಾರ ಮರು ಆಯ್ಕೆಯಾಗಬಾರದು ಎಂದು ಹೇಳುವವರ ಸಂಖ್ಯೆ ದೊಡ್ಡದಿದ್ದರೆ, ಲಿಂಗಾಯತ ಸಮುದಾಯದಲ್ಲಿಯೂ 47% ಜನ ಸದರಿ ಸರ್ಕಾರದ ಮರುಆಯ್ಕೆ ಬೇಡವೆಂದಿದ್ದಾರೆ. ಯಾವ ಒಂದು ಸಮುದಾಯ ಬಿಜೆಪಿ ಪಕ್ಷದ ನಿಷ್ಠ ಮತದಾರರು ಎಂದು ನಂಬಲಾಗಿತ್ತೋ ಅವರು ಆ ಪಕ್ಷದಿಂದ ಬಹಳಷ್ಟು ದೂರ ಸರಿಯುತ್ತಿರುವ ಸೂಚನೆ ಅದು. ಯಾರೋ ಒಂದಿಬ್ಬರು ನಾಯಕರು ಬಿಜೆಪಿ ಪಕ್ಷ ತೊರೆದಿರುವುದರಿಂದ ಖಂಡಿತಾ ಇದು ಸಂಭವಿಸಿರುವುದಿಲ್ಲ. ಜನಸಾಮಾನ್ಯರ ವಿವೇಕ ಎಂದಿಗಾದರೂ ಜಾಗೃತವಾಗಬಹುದು. ಅದಕ್ಕೆ ಬಸವಣ್ಣನವರ ಪರಂಪರೆಯೂ ಸಹಕರಿಸಿರಬಹುದು. ಜನಪರ ಹೋರಾಟಗಳೂ! ಒಟ್ಟಿನಲ್ಲಿ ಇನ್ನು ಮುಂದಾದರೂ ಬಹುಸಂಖ್ಯಾತ ಜಾತಿಗಳ ರಾಜಕಾರಣವನ್ನು ಮೀರಿದ ರಾಜಕೀಯ ಕರ್ನಾಟಕದಲ್ಲಿ ಬೆಳೆಯಬೇಕಿದೆ.