ಬಸವಾದಿಗಳು ಆಹಾರದಲ್ಲಿ ಭೇದಭಾವ ಮಾಡಿಲ್ಲ. ಆಹಾರ ಹಸಿವಿಗೆ ಸಂಬಂಧಿಸಿದ್ದು, ಧರ್ಮಕ್ಕಲ್ಲ. ಆಹಾರದಲ್ಲಿ ಶ್ರೇಷ್ಠ ಆಹಾರ – ನಿಕೃಷ್ಟ ಆಹಾರ ಎನ್ನುವುದು ಇರುವುದಿಲ್ಲ. ಹಸಿವನ್ನು ನೀಗಿಸುವ ಎಲ್ಲಾ ಬಗೆಯ ಆಹಾರಗಳು ಶ್ರೇಷ್ಠ ಆಹಾರಗಳೆ. ತಾವು ಇಚ್ಛಿಸಿದ ಆಹಾರ ತಿನ್ನುವುದು ಜನರ ಹಕ್ಕು.ಅಂದು ಜನರ ಆಹಾರ ಹಕ್ಕನ್ನು ಅನುಭವ ಮಂಟಪ ತಲೆಬಾಗಿ ಗೌರವಿಸುತ್ತಿತ್ತು.
ಆಹಾರ ಸಂಸ್ಕೃತಿ ಬಗ್ಗೆ ಅನುಭವ ಮಂಟಪದಲ್ಲಿ ಗಂಭೀರ ಚರ್ಚೆ ನಡದಿದೆ. ಚರ್ಚಾ ಸಂದರ್ಭದಲ್ಲಿ ಮೇಲ್ವರ್ಗದಿಂದ ಬಂದಿರುವ ಕೆಲವು ವಚನಕಾರರು ಸಸ್ಯಾಹಾರದ ಪರ ನಿಲುವು ತಾಳುತ್ತಾರೆ. ಇದಕ್ಕೆ ಅನುಭವ ಮಂಟಪದಲ್ಲಿದ್ದ 95% ತಳವರ್ಗದ ಹಿನ್ನೆಲೆಯಿಂದ ಬಂದ ವಚನಕಾರರು ಇದನ್ನು ಖಂಡಿಸುತ್ತಾರೆ.ಈ ಚರ್ಚಾ ಸಂದರ್ಭದಲ್ಲಿ ಸಸ್ಯಾಹಾರದ ಪರವಾಗಿ ಬಂದಿರುವ ವಚನಗಳನ್ನು ಮಾತ್ರ ಕೆಲವು ಮೇಲ್ಜಾತಿ ಮನಸ್ಥಿತಿಯ ಜನರು ಮುನ್ನಲೆಗೆ ತಂದು. ತಮ್ಮ ಮೇಲ್ಜಾತಿ ಮನಸ್ಥಿತಿಯ ಅನಾವರಣ ಮಾಡುತ್ತಿದ್ದಾರೆ ಅಷ್ಟೇ. ಏಕೆಂದರೆ ಜಾತಿಗೂ ಮತ್ತು ಆಹಾರ ಸಂಸ್ಕೃತಿಗೂ ನೇರ ನಂಟಿದೆ.
ಆ ಕಾಲದ ವ್ಯವಸ್ಥೆಯ ವಿರುದ್ಧ ತಳವರ್ಗದ ಜನರು ಬಸವಣ್ಣನ ನೇತೃತ್ವದಲ್ಲಿ ಕಟ್ಟಿದ ಚಳವಳಿ ಇದು. ಶರಣರ ಹತ್ಯಾಕಾಂಡ ಆಗುವ ಮೂಲಕ ಚಳವಳಿ ಸ್ಥಗಿತಗೊಂಡು ಧರ್ಮದ ಸ್ವರೂಪ ಪಡೆಯುತ್ತದೆ.
ನಾವಿಂದು ವಚನ ಚಳವಳಿಯನ್ನು ಮತ್ತು ವಚನಗಳನ್ನು ನಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಬಸವಾದಿಗಳು ಆಹಾರದಲ್ಲಿ ಭೇದಭಾವ ಮಾಡಿದರು ಎನ್ನುವುದು ವಚನ ಚಳವಳಿಗೆ ಮತ್ತು ಬಸವಾದಿಗಳಿಗೆ ಬಗೆದ ದ್ರೋಹವಾಗುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದ ಧರ್ಮ. ಲಿಂಗಾಯತ ಧರ್ಮದಲ್ಲಿ ಆಹಾರಭೇದ ಇಲ್ಲ. ಮಾಂಸಾಹಾರಿಗಳು ಸಹ ಈ ಧರ್ಮ ಸ್ವೀಕರಿಸಬಹುದು, ಸ್ವೀಕರಿಸಿದ ನಂತರ ಧಾರಾಳವಾಗಿ ತಮ್ಮ ಆಹಾರ ಪದ್ಧತಿ ಮುಂದುವರೆಸಿಕೊಂಡು ಹೋಗಬಹುದು. ಲಿಂಗಾಯತ ತತ್ವ ಕೆಲವು ಮೇಲ್ಜಾತಿ ಮನಸ್ಥಿತಿ ಮೂಲಭೂತವಾದಿಗಳ ಸ್ವತ್ತಲ್ಲ, ಇದು ಇಡೀ ಮಾನವಕುಲದ ಸ್ವತ್ತು.ಆಹಾರದಲ್ಲಿ ಭೇದಭಾವ ಮಾಡಲು ಇದೇನು ವೈದಿಕ ಧರ್ಮವೆ?
ಜಾಗತೀಕರಣದ ಸಂದರ್ಭದಲ್ಲಿ ಆಹಾರ ಸಂಸ್ಕೃತಿ ಬಗ್ಗೆ ಚರ್ಚೆ ನಡೆಸುವುದು ಅಪ್ರಸ್ತುತ.
ಸಿದ್ದಪ್ಪ ಮೂಲಗೆ, ಜನಪರ ಹೋರಾಟಗಾರರು
ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕøತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕøತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.