Homeದಿಟನಾಗರಸಿಂಧೂ ನಾಗರಿಕತೆ ಕುರಿತ ವಿಜ್ಞಾನದ ಹೊಸ ಸಂಶೋಧನೆಗಳೂ... ಸತ್ಯ ತಿರುಚುವ ಪತ್ರಿಕೆಗಳೂ... ಸುಳ್ಳು ಹೇಳಿತೇಕೆ ವಿಜಯ...

ಸಿಂಧೂ ನಾಗರಿಕತೆ ಕುರಿತ ವಿಜ್ಞಾನದ ಹೊಸ ಸಂಶೋಧನೆಗಳೂ… ಸತ್ಯ ತಿರುಚುವ ಪತ್ರಿಕೆಗಳೂ… ಸುಳ್ಳು ಹೇಳಿತೇಕೆ ವಿಜಯ ಕರ್ನಾಟಕ

- Advertisement -
- Advertisement -

| ಹರ್ಷಕುಮಾರ್ ಕುಗ್ವೆ |

ಕಳೆದ ಸೆಪ್ಟೆಂಬರ್ 5 ಮತ್ತು 6ರಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಾದ ಸೆಲ್ ಮತ್ತು ಸೈನ್ಸ್ ಪತ್ರಿಕೆಗಳಲ್ಲಿ ಚಾರಿತ್ರಿಕ ಮಹತ್ವದ ಎರಡು ಪ್ರತ್ಯೇಕ ವರದಿಗಳು ಪ್ರಕಟವಾದವು. ಈ ವರದಿಗಳು ಸಿಂಧೂ ನದಿ ನಾಗರಿಕತೆಯ ಕುರಿತ ಮುಖ್ಯ ಸಂಗತಿಗಳನ್ನು ಜಗತ್ತಿಗೆ ತಿಳಿಯಪಡಿಸಿದವು. ನೂರಾರು ವಿಜ್ಞಾನಿಗಳು ಕಳೆದ ಕೆಲವಾರು ವರ್ಷಗಳಿಂದ ಅವಿರತ ನಡೆಸಿದ ಜೆನೆಟಿಕ್ (ವಂಶವಾಹಿ) ಸಂಶೋಧನೆಗಳ ಫಲವಾಗಿ ಈ ವರದಿಗಳು ಪ್ರಕಟವಾಗಿದ್ದವು. ಈ ವರದಿಗಳ ಕುರಿತು ವಿಜ್ಞಾನಿಗಳು ಸುದ್ದಿಗೋಷ್ಠಿಯನ್ನೂ ನಡೆಸಿದ್ದರು. ಈ ಸಂಶೋಧನೆಗಳಿಗೆ ಸಂಬಂಧüಪಟ್ಟಂತೆ ನಂತರದಲ್ಲಿ ಪ್ರಕಟವಾದ ಪತ್ರಿಕಾವರದಿಗಳು ಮುಖ್ಯವಾಹಿನಿ ಪತ್ರಿಕೋದ್ಯಮ ಎಷ್ಟರಮಟ್ಟಿಗೆ ಹಳ್ಳ ಹಿಡಿದಿದೆ ಮತ್ತು ಎಷ್ಟರಮಟ್ಟಿಗೆ ಪೂರ್ವಗ್ರಹಪೀಡಿತವಾಗಿದೆ ಎಂಬುದಕ್ಕೆ ಉತ್ತಮ ನಿದರ್ಶನ ಒದಗಿಸಿದವು. ರಾಜಕಾರಣಿಗಳು ಮತ್ತು ವಿಚಾರವಾದಿಗಳು ಮಾತಾಡುವುದನ್ನು ಸಂದರ್ಭದಿಂದ ಹೊರಗಿಟ್ಟು ಪ್ರಕಟಿಸಿ ಇಲ್ಲವೇ ಆಯ್ದ ಕೆಲವೇ ಮಾತುಗಳನ್ನು ಸೆನ್ಸೇಷನಲ್ ಆಗಿ ಪರಿವರ್ತಿಸುವುದು, ಇಲ್ಲವೇ ತಿರುಚಿ ಪ್ರಕಟಿಸುವುದು ಮಾಧ್ಯಮಗಳಿಗೆ ಕರಗತವಾಗಿರುವ ಕಲೆ. ಆದರೆ ಇದೇ ಚಾಳಿಯನ್ನು ವೈಜ್ಞಾನಿಕ ಸಂಶೋಧನೆಗಳಿಗೂ ಮುಂದುವರೆಸಿದರೆ ಏನಾಗಬಹುದು? ಸೆ.7ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಉದಾಹರಣೆಯಾಗಿಟ್ಟುಕೊಂಡು ಇಡೀ ವಿಜ್ಞಾನಿಗಳ ಸಂಶೋಧನೆಗಳು ಏನು ಹೇಳಿವೆ ಏನು ಹೇಳಿಲ್ಲ ಎಂದು ಪರಿಶೀಲಿಸೋಣ.

ವಿಜಯ ಕರ್ನಾಟಕ ಪತ್ರಿಕೆಯ ವರದಿಯಲ್ಲಿ ಬಹು ಆಕರ್ಷಕ ವಿನ್ಯಾಸದೊಂದಿಗೆ “ಸಿಂಧೂ ನಾಗರಿಕತೆ ಕಟ್ಟಿದವರು ಹೊರಗಿನವರಲ್ಲ” ಎಂಬ ತಲೆಬರಹದೊಂದಿಗೆ ವಿಜ್ಞಾನಿಗಳ ಸಂಶೋಧನಾ ವರದಿ ಕುರಿತು ಪತ್ರಿಕಾ ವರದಿ ಪ್ರಕಟವಾಗಿತ್ತು. ಈ ವರದಿಯಲ್ಲಿ ರಾಖಿಗರಿ ವಂಶವಾಹಿ ಕುರಿತು ವಿಜ್ಞಾನಿಗಳ ಸಂಶೋಧನೆ ಕೆಳಕಂಡ ವಿಷಯಗಳನ್ನು ತಿಳಿಸಿದೆ ಎಂದು ಬರೆಯಲಾಗಿತ್ತು. ಅದರಲ್ಲಿರುವ ವಾಕ್ಯಗಳು ಹೀಗಿವೆ.

“ದಕ್ಷಿಣ ಏಷಿಯಾದ ಮೂಲನಿವಾಸಿಗಳೇ ಆರ್ಯರು”

“ಹರಪ್ಪನ್ ನಾಗರಿಕತೆಯು ದಕ್ಷಿಣ ಏಷಿಯಾದ ಎಲ್ಲಾ ಜನಸಂಖ್ಯೆಯ ಮೂಲ ಎಂಬುದನ್ನು ಸಂಶೋಧನೆ ಸಾಬೀತುಪಡಿಸಿದೆ”

“ಮೊಹೆಂಜೊದಾರೋದಲ್ಲಿ ದೊರೆತ ಪಳೆಯುಳಿಕೆಗಳು ನೆರೆಯಲ್ಲಿ ಸತ್ತವರದ್ದೇ ಹೊರತು ಆರ್ಯನ್ ದಾಳಿಯಿಂದಲ್ಲ. ಆದರೆ ಮಾರ್ಟಿಮರ್ ವೀಲರ್ ಅವರು ಮಾತ್ರ ಆರ್ಯನ್ ದಾಳಿಯಿಂದ ಸತ್ತಿದ್ದರು ಎಂದು ವಾದಿಸಿದ್ದರು”

“ದಕ್ಷಿಣ ಏಷಿಯಾದ ಮೂಲ ನಿವಾಸಿಗಳೇ ವೇದ ಸಾಹಿತ್ಯವನ್ನು ಅಭಿವೃದ್ಧಿಪಡಿಸಿದ್ದು ಎಂಬುದನ್ನು ಸಂಶೋಧಕರು ಸಾಬೀತುಪಡಿಸಿದ್ದಾರೆ. ಹರಪ್ಪನ್ನರೇ ವೇದಿಕ್ ಜನರು ಆಗಿದ್ದು ಪ್ರಾಚೀನ ಡಿಎನ್‍ಎ ಅಧ್ಯಯನವು ಇದಕ್ಕೆ ದೃಢೀಕರಣ ವೈಜ್ಞಾನಿಕ ಪುರಾವೆಗಳನ್ನು ಒದಗಿಸಿದೆ”

ಪತ್ರಕರ್ತರು ಅಥವಾ ಪತ್ರಿಕೆಗಳ ಸಂಪಾದಕರು ಎನಿಸಿಕೊಂಡವರು ಎಷ್ಟರಮಟ್ಟಿಗೆ ಪೂರ್ವಗ್ರಹ ತುಂಬಿಕೊಂಡು ಸುದ್ದಿಗಳನ್ನು ಪ್ರಕಟಿಸಬಹುದು ಎಂಬುದಕ್ಕೆ ಈ ವರದಿ ಒಂದು ನಿದರ್ಶನವಾಗಿದೆ. ಈ ಮೇಲಿನ ಯಾವ ಹೇಳಿಕೆಗಳೂ ರಾಖಿಗರಿ ಮತ್ತು ಸಿಂಧೂ ನದಿ ನಾಗರಿಕತೆ ಕುರಿತು ವಿಜ್ಞಾನಿಗಳು ಹೇಳಿರುವ ಹೇಳಿಕೆಗಳಾಗಿಲ್ಲ. ವಿಜ್ಞಾನಿಗಳ ಯಾವುದೇ ವರದಿಯಲ್ಲಿ ಈ ಮೇಲಿನ ಹೇಳಿಕೆಗಳು ಉಲ್ಲೇಖವಾಗಿಲ್ಲ. ಈ ಹೇಳಿಕೆಗಳು ಸ್ಪಷ್ಟವಾಗಿ ಈ ವರದಿ ಬರೆದವರ ಅಥವಾ ಅದರಲ್ಲಿ ಕೈ ಆಡಿಸಿರುವವರ ದುರುದ್ದೇಶದ ಸೃಷ್ಟಿಯಾಗಿವೆ. ವಿಜ್ಞಾನಿಗಳು ಹೇಳದೇ ಇರುವ ಹೇಳಿಕೆಗಳನ್ನು ಅವರ ಬಾಯಿಂದ ಹೇಳಿಸುವ ಮೂಲಕ ಈ ಪತ್ರಕರ್ತರು ವಿಜ್ಞಾನಿಗಳಿಗೆ ಮತ್ತು ಅವರ ಹಲವಾರು ವರ್ಷಗಳ ಕಠಿಣ ಶ್ರಮಕ್ಕೆ ಅಪಚಾರ ಎಸಗಿದ್ದಾರೆ.

ವಾಸ್ತವ ಸಂಗತಿಗಳೇನು?
ತಳಿ ವಿಜ್ಞಾನಿಗಳು ಹೇಳಿರುವುದೇನು?

ಮೊನ್ನೆ ಜೆನೆಟಿಕ್ ವಿಜ್ಞಾನಿಗಳು ಪ್ರಕಟಪಡಿಸಿರುವ ಎರಡು ವರದಿಗಳಲ್ಲಿ ಒಂದು ವರದಿ 2015ರಲ್ಲಿ ಹರ್ಯಾಣದ ಹಿಸ್ಸಾರ್ ಜಿಲ್ಲೆಯ ರಾಖಿಗರಿ ಎಂಬಲ್ಲಿ ದೊರೆತ 4600 ವರ್ಷಗಳ ಹಿಂದಿನ ಮಾನವ ಅವಶೇಷದಲ್ಲಿ ದೊರೆತ ವಂಶವಾಹಿಯ ಸಂಶೋಧನೆ ಮತ್ತು ವಿಶ್ಲೇಷಣೆಗೆ ಸಂಬಂಧಿಸಿದ್ದು. ಮತ್ತೊಂದು ವರದಿ ಕಳೆದ 10-12 ಸಾವಿರ ವರ್ಷಗಳಲ್ಲಿ ಮಧ್ಯ ಏಷಿಯಾ ಮತ್ತು ಭಾರತವೂ ಸೇರಿದ ದಕ್ಷಿಣ ಏಷಿಯಾದಲ್ಲಿ ಪುರಾತನ ಜನಸಮುದಾಯಗಳು ನಡೆಸಿರುವ ವಲಸೆ ಇತಿಹಾಸಕ್ಕೆ ಸಂಬಂಧಿಸಿದ ಡಿಎನ್‍ಎ ಸಂಶೋಧನೆ. ಈ ಎರಡೂ ವರದಿಗಳಲ್ಲಿರುವ ಸಾಮಾನ್ಯ ಅಂಶ ಸಿಂಧೂ ನದಿ ನಾಗರಿಕತೆಯಲ್ಲಿ ಇದ್ದ ಜನರು ಯಾರು ಎಂಬ ಕುರಿತಾದದ್ದು.

ವಿಜ್ಞಾನಿಗಳ ವರದಿಯಲ್ಲಿ ತೋರಿಸಲಾದ ಸ್ಟೆಪ್ ಆರ್ಯರ ವಲಸೆಯ ಟೈಮ್ ಲೈನ್ ನಕ್ಷೆ

ರಾಖಿಗರಿ ಡಿಎನ್‍ಎ ಸಂಶೋಧನೆ ಕುರಿತ ವಿಜ್ಞಾನಿಗಳ ವರದಿಯ ಶೀರ್ಷಿಕೆಯೇ “ಪ್ರಾಚೀನ ಹರಪ್ಪನ್ ವಂಶವಾಹಿಯು ಸ್ಟೆಪ್ಪ್ ಪಶುಪಾಲಕ ಜನರ ಅಥವಾ ಇರಾನಿನ ಕೃಷಿಕರ ವಂಶಾವಳಿಯನ್ನು ಹೊಂದಿಲ್ಲ” ಎಂಬುದಾಗಿತ್ತು”. ಸಿಂಧೂ ನದಿ ನಾಗರಿಕತೆ ಕಟ್ಟಿದ ಜನರು ದಕ್ಷಿಣ ಏಷಿಯನ್ನರಾಗಿದ್ದರು ಎಂಬುದನ್ನು ರಾಖಿಗರಿ ಸಂಶೋಧನೆಯು ಸ್ಪಷ್ಟಪಡಿಸಿದೆ. ಆದರೆ ರಾಖಿಗರಿಯಲ್ಲಿ ದೊರೆತ ಪಳೆಯುಳಿಕೆಯ ವಂಶವಾಹಿಯಲ್ಲಿ ಸ್ಟೆಪ್ ಪಶುಪಾಲಕ ಇರಾನಿ ಕೃಷಿಕರಾಗಲೀ ಇರಲಿಲ್ಲ ಎಂದು ಈ ಸಂಶೋಧನೆಗಳು ತಿಳಿಸಿವೆ. ಇಲ್ಲಿ ಸ್ಟೆಪ್ ಪಶುಪಾಲಕರು (ಸ್ಟೆಪ್ ಪ್ಯಾಸ್ಟೊರಲಿಸ್ಟ್) ಎಂದರೆ ಆರ್ಯರೇ ಹೊರತು ಬೇರೆ ಯಾರಲ್ಲ. ರಾಖಿಗರಿಯಲ್ಲಿ ಸಿಂಧೂ ನಾಗರಿಕತೆ ಕುರಿತು ವಿಜ್ಞಾನಿಗಳಿಗೆ ದೊರೆತ ಮೊತ್ತಮೊದಲ ವಂಶವಾಹಿಯಲ್ಲಿ ಸ್ಟೆಪ್ ಅಥವಾ ಆರ್ಯರ ಅನುವಂಶಿಕತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಂತ ಇದೊಂದೇ ಪಳೆಯುಳಿಕೆಯ ಆಧಾರದಲ್ಲಿ ವಿಜ್ಞಾನಿಗಳು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಇದರೊಟ್ಟಿಗೆ ಸಿಂಧೂ ನದಿ ನಾಗರೀಕತೆಯ ಕಾಲದಲ್ಲಿ ಸಾಂಸ್ಕೃತಿಕ ಒಡನಾಟವಿದ್ದ ಮಧ್ಯ ಏಷ್ಯಾದ 11 (ಇಂದಿನ ತುರ್ಕ್ ಮೆನಿಸ್ತಾನದ ಗೋನೂರಿನ 3 ಜನ ಮತ್ತು ಪೂರ್ವ ಇರಾನಿನ ಶೆಹ್ರ್ -ಇ-ಶೋಕ್ತಾದ 8 ಜನ). ಪ್ರಾಚೀನ ಅಸ್ಥಿಪಂಜರಗಳ ಅನುವಂಶಿಕ ವಿವರಗಳ ಜೊತೆಗೆ ರಾಖಿಗರಿ ಡಿಎನ್‍ಎ ಫಲಿತಾಂಶವನ್ನು ತಾಳೆ ಹಾಕಲಾಗಿದೆ. ಈ 11 ಜನರ ಪ್ರಾಚೀನ ವಂಶಾವಳಿಯಲ್ಲಿ ಸಹ ಸ್ಟೆಪ್ ಜನರ ಅನುವಂಶೀಯತೆ ಕಂಡುಬಂದಿಲ್ಲ. ಈ ಅಂಶವೇ ಹರಪ್ಪ ನಾಗರಿಕತೆಯಲ್ಲಿ ಆರ್ಯರ ಪಾತ್ರ ಇರಲಿಲ್ಲ ಎಂದು ವಿಜ್ಞಾನಿಗಳು ಘೋಷಿಸಲು ಪ್ರಮುಖ ಕಾರಣವಾಗಿದೆ.

ಆದರೆ ವಿಜಯ ಕರ್ನಾಟಕದ ವರದಿಗಾರರಿಗೆ ಮಾತ್ರ ಆರ್ಯರು ಭಾರತದ ಮೂಲನಿವಾಸಿಗಳಾಗಿ ಕಂಡಿದ್ದಾರೆ. ವಾಸ್ತವದಲ್ಲಿ ಜೆನೆಟಿಕ್ ಸಂಶೋಧನೆಗಳು ಆರ್ಯರು ಭಾರತದ ಮೂಲನಿವಾಸಿಗಳಲ್ಲ, ಅವರು ಭಾರತಕ್ಕೆ ಬಂದಿರುವ ಮೂರನೇ ವಲಸೆಯ ಜನ ಎಂದು ಅವರ ವಂಶವಾಹಿಗಳನ್ನು ತೋರಿಸಿ ಹೇಳುತ್ತಿವೆ.

ಆರ್ಯರು ಎಂದು ಕರೆಯಲಾಗುವ ಸ್ಟೆಪ್ ಪಶುಪಾಲಕ ಜನರು ಭಾರತಕ್ಕೆ ಹರಪ್ಪ ನಾಗರಿಕತೆಯ ನಂತರದಲ್ಲಿ ಬಂದವರು. ಇವರು ತಮ್ಮ ವಲಸೆಯ ಮೂಲಕವೇ ಇಂಡೊ – ಯೂರೋಪಿಯನ್ (ಸಂಸ್ಕೃತವನ್ನು ಒಳಗೊಂಡಂತೆ ಉತ್ತರ ಭಾರತದ ಬಹುಪಾಲು ಭಾಷೆಗಳು) ಭಾಷೆಗಳನ್ನು ಭಾರತಕ್ಕೆ ಹರಡಿರುವುದಾಗಿ ತಳಿ ವಿಜ್ಞಾನಿಗಳು ತಿಳಿಸಿದ್ದಾರೆ. ರಾಖಿಗರಿ ಸಂಶೋಧನೆಯ ವಿಜ್ಞಾನಿಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ತಳಿ ವಿಜ್ಞಾನಿ ಡೇವಿಡ್ ರೀಚ್ ಈ ಕುರಿತು ಸ್ಪಷ್ಟವಾಗಿ ತಿಳಿಸುತ್ತಾ ಈಗಿನ ವಂಶವಾಹಿ ಸಂಶೋಧನೆಗಳು ಕುರ್ಗನ್ ಹೈಪಾಥಿಸಿಸ್ ಗೆ ಪೂರಕವಾಗಿದೆ ಎಂದಿದ್ದಾರೆ. ಕುರ್ಗನ್ ಅಥವಾ ಸ್ಟೆಪ್ ಹೈಪಾಥಿಸಿಸ್ ಪ್ರಕಾರ ಸಂಸ್ಕೃತವೂ ಸೇರಿದಂತೆ ಇಂಡೋ – ಯೂರೋಪಿಯನ್ ಅಥವಾ ಇಂಡೋ – ಆರ್ಯನ್ ಭಾಷೆಗಳು ಪಾಂಟಿಕ್ ಸ್ಟೆಪ್ ಅಥವಾ ಯಾಮ್ನಾಯ ಸಂಸ್ಕೃತಿಯ ಜನರ ಮೂಲಕವೇ ಯೂರೋಪಿನ ದೇಶಗಳಿಗೂ, ದಕ್ಷಿಣ ಏಷಿಯಾದ (ಭಾರತ) ದೇಶಗಳಿಗೂ ಹರಡಿವೆ.
ವಿಜಯ ಕರ್ನಾಟಕದ ವರದಿಯಲ್ಲಿ ಓದುಗರಿಗೆ ಗೊಂದಲವಾಗುವ ರೀತಿಯಲ್ಲಿ ಆರ್ಯರು ಮತ್ತು ಸ್ಟೆಪ್ ಪ್ಯಾಸ್ಟೊರಲಿಸ್ಟ್ ಗಳು ಬೇರೆ ಬೇರೆ ಎಂಬಂತೆ ವರದಿ ಮಾಡಲಾಗಿದೆ. ಬಹುಶಃ ಸಂಪಾದಕರು ತಮ್ಮ ಪತ್ರಿಕೆ ಓದುಗರು ತಾವು ಹೇಳಿದ್ದನ್ನೆಲ್ಲ ನಂಬುವ ಕುರಿಗಳು ಎಂದುಕೊಂಡಿರಬಹುದು.

ಇತ್ತೀಚಿನ ಕೆಲವು ವರ್ಷಗಳಿಂದ ಮನುಷ್ಯನ ಜಿನೋಮ್ ಕುರಿತು ವ್ಯಾಪಕವಾಗಿ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು ಜಗತ್ತಿನ ಎಲ್ಲಾ ಅನುವಂಶಿಕ ಗುಂಪುಗಳಿಕೆ ಸಂಕೇತಗಳನ್ನು ನೀಡಿದ್ದಾರೆ. ಈ ಅನುವಂಶಿಕ ಗುಂಪುಗಳಿಕೆ ಹ್ಯಾಪ್ಲೋಗ್ರೂಪ್ ಎಂದು ಕರೆಯಲಾಗುತ್ತದೆ. ಯಾಮ್ನಾಯ ಸ್ಟೆಪ್ಪ್ ಪಶುಪಾಲಕ ಆರ್ಯರ ವಂಶಾವಳಿಯ ಜನರು ಪೂರ್ವ ಯೂರೋಪಿನ ಬೇಟೆಗಾರ ಸಂಗ್ರಹಕಾರ (EEHG-East European Hunter Gatherers) ಮೂಲದವರಾಗಿದ್ದು ಡಿಎನ್‍ಎ ಯಲ್ಲಿ U5a ಹ್ಯಾಪ್ಲೋ ಗುಂಪಿನ ಜೊತೆಗೆ, ಅಪ್ಪನಿಂದ ಮಗನಿಗೆ ವರ್ಗಾವಣೆಯಾಗುವ Y ಕ್ರೊಮೋಸೋಮ್‍ಗಳಲ್ಲಿ R1a ಮತ್ತು R1b ಹ್ಯಾಪ್ಲೋ ಗುಂಪನ್ನು ಹೊಂದಿರುತ್ತಾರೆ. ಇದರ ಮೂಲಕ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ 140 ಭಾರತೀಯ ಅನುವಂಶಿಕ ಗುಂಪುಗಳಲ್ಲಿ 10 ಗುಂಪುಗಳ ಜನರು ಸ್ಟೆಪ್ ಜನರನ್ನು (Steppe Pastoralists) ತಮ್ಮ ಪೂರ್ವಜರಾಗಿ ಹೊಂದಿದ್ದು ಕಂಡುಬಂದಿದೆ. ಇವರೇ ಭಾರತಕ್ಕೆ ಕುರ್ಗನ್ ಸಂಸ್ಕೃತಿ ಅಥವಾ ಯೂರೇಷಿಯಾದ ಪಾಂಟಿಕ್ ಸ್ಟೆಪ್ ಹುಲ್ಲುಗಾವಲಿನಲ್ಲಿ ವಿಕಾಸಗೊಂಡ ಯಾಮ್ನಾಯ ಆರ್ಯ ಸಂಸ್ಕೃತಿಯನ್ನು ತಂದವರು. ಆರ್ಯರು ಭಾರತದಲ್ಲಿ ಇತರೆ ಜನಜಾತಿಗಳೊಂದಿಗೆ ಸಂಕರಗೊಂಡಿದ್ದರೂ ಪುರೋಹಿತಿಕೆ ನಡೆಸುವ ಕೆಲವೊಂದು ಬ್ರಾಹ್ಮಣ ಪಂಗಡಗಳು ಈ ಸ್ಟೆಪ್ ಮೂಲದ ಯಾಮ್ನಾಯ ಸಂಸ್ಕೃತಿಯನ್ನು ಈಗಲೂ ಹರಡುತ್ತಿದ್ದಾರೆ ಎಂಬ ಸಂಗತಿಯನ್ನು ರಾಖಿಗರಿ ವಂಶವಾಹಿ ಸಂಶೋಧನೆಯಲ್ಲಿ ತಳಿ ವಿಜ್ಞಾನಿ ಡೇವಿಡ್ ರೀಚ್ ತಿಳಿಸಿದ್ದಾರೆ.

ಇರಾನ್ ಮತ್ತು ಭಾರತದಲ್ಲಿರುವ ಸ್ಟೆಪ್ ಸಂಬಂಧಿ ಜನರ ವಂಶವಾಹಿಯ ಹರಿವನ್ನು ಅಧ್ಯಯನ ಮಾಡಿದಾಗ ಜನಾಂಗಿಕ ವಲಸೆಯ ಮಾರ್ಕರ್ ಗಳು ಸ್ಟೆಪ್ ಜನರು ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದಿರುವುದನ್ನು ತೋರಿಸಿವೆಯೇ ಹೊರತು ಭಾರತದಿಂದ ಪಶ್ಚಿಮಕ್ಕೆ ಅಲ್ಲ ಎಂಬುದನ್ನು ಸಹ ಇದೇ ತಳಿ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಪ್ರಿಯಾ ಮೂರ್ಜಾನಿ ಎಂಬ ವಿಜ್ಞಾನಿ ತಮ್ಮ ಆಳವಾದ ಸಂಶೋಧನೆ ಮತ್ತು ವಿಶ್ಲೇಷಣೆಯ ಮೂಲಕ ಆರ್ಯರ ವಲಸೆಯ ಟೈಮ್ ಲೈನನ್ನೂ ದಾಖಲಿಸಿದ್ದಾರೆ.ಕ್ರಿ.ಪೂ. 3300ರ ಸಮಯದಲ್ಲಿ ಮಧ್ಯ ಏಷ್ಯಾದ ಕಾಕಸಸ್ ಪರ್ವತ ಶ್ರೇಣಿಗಳಲ್ಲಿ ಕಂಡುಬರುವ ಈ ಗುಂಪು ಕ್ರಿ.ಪೂ.2700ರ ಸುಮಾರಿಗೆ ಯುರೋಪಿನತ್ತಲೂ, ಕ್ರಿ.ಪೂ.1700ರ ಸಮಯಕ್ಕೆ ದಕ್ಷಿಣ ಏಷ್ಯಾದತ್ತಲೂ ವಲಸೆ ಹೊರಟಿದ್ದು ಕಂಡು ಬರುತ್ತದೆ. ಇವರು ತಮ್ಮ ವಲಸೆಯೊಂದಿಗೆ ಇಂಡೋ ಯೂರೋಪಿಯನ್ ಭಾಷೆಗಳನ್ನೂ ತಮ್ಮೊಂದಿಗೆ ಹೊತ್ತೊಯ್ದವು. ಈ ಆರ್ಯ ಭಾಷಿಕ ಜನರು ಕ್ರಿ.ಪೂ 2000 ದಿಂದ ಕ್ರಿ.ಪೂ. 1500ರ ನಡುನಿನ ಕಾಲದಲ್ಲಿ ಭಾರತಕ್ಕೆ ಬಂದಿರುವುದನ್ನು ಜೆನೋಮ್ ಅಧ್ಯಯನಗಳು ಸ್ಪಷ್ಟಪಡಿಸಿವೆ. ಸುಮಾರು 7000 ವರ್ಷಗಳ ಹಿಂದೆಯೇ ಆರಂಭಗೊಂಡಿದ್ದ ಸಿಂಧೂ ನದಿ ನಾಗರಿಕತೆ ಆರ್ಯರು ಬರುವ ಸಮಯದಲ್ಲಿ ಅವಸಾನ ಕಂಡಿದೆ.

ಸಿಂಧೂ ನದಿ ನಾಗರಿಕತೆ ಅವಸಾನಕ್ಕೆ ಆರ್ಯರ ದಾಳಿಯೇ ಕಾರಣವೇ ಎಂಬ ಬಗ್ಗೆ ವಂಶವಾಹಿ ವಿಜ್ಞಾನಿಗಳಾಗಲೀ, ಪ್ರಾಕ್ತನಶಾಸ್ತ್ರಜ್ಞರಾಗಲೀ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಈ ಕುರಿತು ಹಲವು ರೀತಿಯ ಅಭಿಪ್ರಾಯಗಳಿವೆ. ಆದರೆ ಈಗ ಪ್ರಕಟವಾಗಿರುವ ಸಂಶೋಧನೆಗಳ ಉದ್ದೇಶ ಇದಾಗಿರಲಿಲ್ಲ. ಹೀಗಾಗಿ ವಿಜ್ಞಾನಿಗಳ ವರದಿಯಲ್ಲಿ ಈ ಕುರಿತು ಉಲ್ಲೇಖವಿಲ್ಲ. ಆದರೆ ವಿಜಯ ಕರ್ನಾಟಕವನ್ನೂ ಒಳಗೊಂಡಂತೆ ಇನ್ನೂ ಕೆಲವು ಪತ್ರಿಕೆಗಳು “ಹೊಸ ಸಂಶೋಧನೆ ಆರ್ಯರ ದಾಳಿಯನ್ನು ತಳ್ಳಿ ಹಾಕಿದೆ” ಎಂದು ವರದಿ ಮಾಡಿವೆ. ವಾಸ್ತವದಲ್ಲಿ ಈ ವಂಶವಾಗಿ ಸಂಶೋಧನೆ ಆರ್ಯರ ವಲಸೆ ಹರಪ್ಪ ನಾಗರಿಕತೆಯ ನಂತರದಲ್ಲಿ ಭಾರತಕ್ಕೆ ಆಗಿದೆ ಎಂಬ ಸಂಗತಿಯನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಹೇಳಿದೆ. ಸಿಂಧೂ ನದಿ ನಾಗರಿಕತೆ ಕಟ್ಟುವಲ್ಲಿ ಆರ್ಯರ ತೃಣಮಾತ್ರದ ಕೊಡುಗೆಯೂ ಇರಲಿಲ್ಲ ಎಂಬುದನ್ನು ಈ ವಂಶವಾಹಿ ಸಂಶೋಧನೆಗಳು ತಿಳಿಸಿವೆ.

ವಿಜಯ ಕರ್ನಾಟಕದ ವರದಿ ತನ್ನ ಓದುಗರಿಗೆ “ದಕ್ಷಿಣ ಏಷಿಯನ್ನರೇ ಆರ್ಯರು” ಎಂಬ ಅಭಿಪ್ರಾಯ ಮೂಡಿಸುವ ಪ್ರಯತ್ನವನ್ನೂ ಮಾಡಿದೆ. ಸಿಂಧೂ ನದಿ ನಾಗರಿಕತೆಯನ್ನು ಕಟ್ಟಿದ್ದು ದಕ್ಷಿಣ ಏಷಿಯನ್ನರು ಎಂದು ತಿಳಿಸಿರುವ ಸಂಶೋಧನೆಗಳು ಸಿಂಧೂ ನಾಗರಿಕತೆಯಲ್ಲಿ ಆರ್ಯರ ಪಾತ್ರ ಇರಲಿಲ್ಲ ಎಂದೂ ತಿಳಿಸಿವೆ. ಇಷ್ಟಾದ ಮೇಲೆ ತಲೆ ಇರುವ ಯಾರಿಗಾದರೂ ಅರ್ಥವಾಗುತ್ತದೆ- ದಕ್ಷಿಣ ಏಷಿಯನ್ನರು ಎಂದರೆ ಆರ್ಯರಿಗೆ ಹೊರತಾದ ಜನರು ಎಂದು. ಅಲ್ಲವೇ? ವಾಸ್ತವದಲ್ಲಿ ದಕ್ಷಿಣ ಏಷಿಯನ್ನರು ಯಾರು ಎಂಬ ಬಗ್ಗೆ ಈಗ ಪ್ರಕಟವಾಗಿರುವ ಅಧ್ಯಯನಗಳು ಸ್ಪಷ್ಟವಾಗಿ ತಿಳಿಸುತ್ತವೆ. ಸಿಂಧೂ ನದಿ ನಾಗರಿಕತೆ ಕಟ್ಟಿದ ದಕ್ಷಿಣ ಏಷಿಯನ್ನರು ಎರಡು ದಿಕ್ಕಿನಿಂದ ಬಂದ ಮೂಲನಿವಾಸಿಗಳು. ಇವರಲ್ಲಿ ಸುಮಾರು 65 ಸಾವಿರ ವರ್ಷಗಳ ಹಿಂದೆ ಆಫ್ರಿಕಾ ಖಂಡದಿಂದ ಭಾರತ ಭೂಮಿಗೆ ಕಾಲಿರಿಸಿದ ಪುರಾತನ ದಕ್ಷಿಣ ಭಾರತೀಯ ಪೂರ್ವಜರಿದ್ದಾರೆ. ಇವರನ್ನು ವಿಜ್ಞಾನಿಗಳು ಪ್ರಾಚೀನ ಪೂರ್ವಿಕ ದಕ್ಷಿಣ ಭಾರತೀಯರು (AASI) ಎಂಬ ಸಂಕೇತದಿಂದ ಗುರುತಿಸಿದ್ದಾರೆ. ಇಂದು ಅಂಡಮಾನ್ ದ್ವೀಪದಲ್ಲಿರು ಆದಿವಾಸಿಗಳು ಇವರ ನೇರ ವಂಶಸ್ಥರಾಗಿದ್ದರೆ ದಕ್ಷಿಣ ಭಾರತದಲ್ಲಿರುವ ಬಹುಪಾಲು ಸಮುದಾಯಗಳಲ್ಲಿ ಈ ವಂಶಾವಳಿ ಹೆಚ್ಚಿನ ಅಂಶದಲ್ಲಿದೆ. ಹಾಗೆಯೇ ಇವರೊಂದಿಗೆ ಭಾರತದ ಕಡೆಗೆ 9000 ವರ್ಷಗಳ ಹಿಂದೆ ವಲಸೆ ಬಂದ ಇರಾನಿನ ಬೇಟೆಗಾರ-ಸಂಗ್ರಾಹಕ ಬುಡಕಟ್ಟುಗಳು (Iranian Hunter Gatherers) ಸೇರಿದ್ದಾರೆ. ಈ ಎರಡು ಸಮುದಾಯಗಳು ಸೇರಿ ಸಿಂಧೂ ಕಣಿವೆಯಲ್ಲಿ ಒಂದು ಸಮುದಾಯವಾಗಿದ್ದಾರೆ. ದಕ್ಷಿಣ ಏಷಿಯನ್ನರು ಎನಿಸಿಕೊಂಡಿದ್ದಾರೆ. ಈ ಆದಿಮ ಜನರೇ 7000 ವರ್ಷಗಳ ಹಿಂದೆ ಸಿಂಧೂ ನದಿ ನಾಗರಿಕತೆ ಕಟ್ಟಿದ ಜನರು. ಇವರೇ ಈ ಉಪಖಂಡದಲ್ಲಿ ಕೃಷಿಯನ್ನು ಆವಿಷ್ಕರಿಸಿದವರು, ಜಗತ್ತೇ ನಿಬ್ಬೆರಗಾಗುವಂತಹ ಕೃಷಿ ನಾಗರಿಕತೆಯನ್ನು ಕಟ್ಟಿದವರು, ಅತ್ಯಾಧುನಿಕ ಎಂದು ಇಂದಿಗೂ ಎನಿಸುವ ದೊಡ್ಡ ದೊಡ್ಡ ನಗರಗಳನ್ನು ನಿರ್ಮಿಸಿದವರು. ಭಾರತದ ಮೊದಲ ಭಾಷೆ, ಮೊದಲ ಧರ್ಮ, ಮೂಲ ಸಂಸ್ಕೃತಿಗಳು ಹುಟ್ಟಿ ಬೆಳೆದಿದ್ದೇ ಈ ಮೂಲ ಭಾರತೀಯರಿಂದ. ಇವರು ನಿರ್ಮಿಸಿದ ಹರಪ್ಪನಾಗರಿಕತೆ ಈಜಿಪ್ಟ್ ಮತ್ತು ಮೆಸೊಪೊಟೇಮಿಯಾ ಎರಡೂ ನಾಗರಿಕತೆಗಳನ್ನು ಸೇರಿಸಿದರೆ ಎಷ್ಟು ವ್ಯಾಪ್ತಿ ಇತ್ತೋ ಅದಕ್ಕಿಂತೂ ಹೆಚ್ಚು ವ್ಯಾಪ್ತಿ ಹೊಂದಿತ್ತು ಎಂಬ ಸಂಗತಿಯನ್ನು ವಿಜ್ಞಾನಿಗಳು ತಮ್ಮ ವರದಿಯಲ್ಲಿ ಕಾಣಿಸಿದ್ದಾರೆ.

ಹರಪ್ಪ ನಾಗರಿಕತೆ ಕಟ್ಟಿದ ದಕ್ಷಿಣ ಏಷಿಯನ್ನರಿಗೂ ಹರಪ್ಪ ನಾಗರಿಕತೆಯ ನಂತರದಲ್ಲಿ ಉತ್ತರ ಭಾರತವನ್ನು ಆವರಿಸಿಕೊಂಡ ಆರ್ಯರಿಗೂ ಯಾವುದೇ ಸಂಬಂಧವಿರಲಿಲ್ಲ. ಹರಪ್ಪ ನಾಗರಿಕತೆ ಅವಸಾನ ಕಂಡ ಬಳಿಕ ಹೆಚ್ಚಿನ ಹರಪ್ಪನ್ನರು ಎರಡು ಕವಲಾಗಿದ್ದಾರೆ. ಒಂದಷ್ಟು ಜನರು ದಕ್ಷಿಣ ಭಾರತ ಕಡೆಗೆ ಬಂದಿರುವುದಾಗಿಯೂ ಮತ್ತೆ ಒಂದಷ್ಟು ಜನರು ಉತ್ತರ ಭಾರತದಲ್ಲಿ ಹರಡಿ ಹೋಗಿರುವುದಾಗಿಯೂ ತಳಿ ಸಂಶೋಧನೆಗಳು ತಿಳಿಸಿವೆ. ಹರಪ್ಪದ ಜನರು ದಕ್ಷಿಣ ಭಾರತದಲ್ಲಿದ್ದ ಜನರೊಂದಿಗೆ ಬೆರೆತು ಪೂರ್ವಿಕ ದಕ್ಷಿಣ ಭಾರತೀಯರೂ(Ancestral South Indians) ಉತ್ತರದಲ್ಲಿನ ಬುಡಕಟ್ಟುಗಳೊಂದಿಗೆ ಬೆರೆತು ಪೂರ್ವಿಕ ಉತ್ತರ ಭಾರತೀಯರೂ (Ancestral North Indians) ಸೃಷ್ಟಿಯಾಗಿರುವ ಬಗ್ಗೆ ಈ ಸಂಶೋಧನೆಗಳು ಮಾಹಿತಿ ನೀಡಿವೆ. ಸ್ಟೆಪ್ ವಂಶವಾಹಿಗಳು ಉತ್ತರ ಭಾರತೀಯ ಪೂರ್ವಿಕರಲ್ಲಿ ಹೆಚ್ಚಾಗಿರುವುದನ್ನು ತಳಿ ಸಂಶೋಧನೆಗಳು ತಿಳಿಸಿವೆ. ಇಂದು ದಕ್ಷಿಣ ಭಾರತದಲ್ಲಿರುವ ಹಲವು ಆದಿವಾಸಿ ಸಮುದಾಯಗಳು (ಕೊರಗ, ಜೇನುಕುರುಬ, ಇರುಳಿಗ, ಇತ್ಯಾದಿ) ದಕ್ಷಿಣಕ್ಕೆ ಬಂದ ಹರಪ್ಪದ ಜನರ ನೇರ ವಂಶಸ್ಥರು ಎಂದು ಸಹ ವಿಜ್ಞಾನಿಗಳ ವರದಿ ಸ್ಪಷ್ಟವಾಗಿ ತಿಳಿಸಿದೆ.ಅದೇ ರೀತಿಯಲ್ಲಿ ಇಂದು ದಕ್ಷಿಣ ಭಾರತದಲ್ಲಿ ಮಾತನಾಡುವ ದ್ರಾವಿಡ ಭಾಷೆಗಳನ್ನು ಹರಪ್ಪ ನಾಗರೀಕತೆಗೆ ಸಂಬಂಧಿಸಿದ ಪೂರ್ವಿಕ ದಕ್ಷಿಣ ಭಾರತೀಯರೇ ಹರಡಿರುವುದು ಎಂದು ಸಹ ಸಂಶೋಧನೆ ತಿಳಿಸಿದೆ. ಸಿಂಧೂ ಲಿಪಿಯಲ್ಲಿ ಬರೆಯಲಾದ ಕೆಲವು ಸಂಕೇತಗಳು ದ್ರಾವಿಡ ಭಾಷೆಗಳ ಮೂಲ ಭಾಷೆಯೇ ಎಂದು ಸಂಶೋಧನೆಗಳು ತಿಳಿಸಿರುವುದಕ್ಕೆ ಪೂರಕವಾಗಿ ತಮ್ಮ ವಂಶವಾಗಿ ಸಂಶೋಧನೆಗಳ ಫಲಿತಗಳಿರುವುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ.

ಬಹಳ ವರ್ಷಗಳಿಂದ ಆರೆಸ್ಸೆಸ್‍ನಂತಹ ಸಂಘಟನೆಗಳು ಸಿಂಧೂ ನದಿ ನಾಗರಿಕತೆ ಆರ್ಯರು ಕಟ್ಟಿ ಬೆಳೆಸಿದ್ದು ಎಂಬ ಹುಸಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ಆರ್ಯರು ಭಾರತೀಯ ಮೂಲದವರೇ ಎಂಬ ವಸಾಹತುಶಾಹಿ ಸಿದ್ಧಾಂತವನ್ನು ಜನರಿಗೆ ನಂಬಿಸುತ್ತಿದ್ದರು. ಆದರೆ ಪ್ರಾಕ್ತನಶಾಸ್ತ್ರಜ್ಞರು ಮತ್ತು ಭಾಷಾ ಶಾಸ್ತ್ರಜ್ಞರು ಮಾತ್ರ ಆರ್ಯರು ಭಾರತಕ್ಕೆ ತಡವಾಗಿ ವಲಸೆ ಬಂದವರು ಎಂದು ಸಂಶೋಧನೆಗಳ ಮೂಲಕ ತೋರಿಸಿದ್ದರು. ಆದರೆ ಈ ಸಂಶೋಧನೆಗಳ ಬಗ್ಗೆಯೇ ಅಪಪ್ರಚಾರ ಮಾಡುವಲ್ಲಿ ಆರೆಸ್ಸೆಸ್ ಬಹುಮಟ್ಟಿಗೆ ಯಶಸ್ವಿಯಾಗಿತ್ತು. ಈಗ ವಂಶವಾಹಿ ವಿಜ್ಞಾನದ ಸಂಶೋಧನೆಗಳು ಅಂಪೈರ್ ರೀತಿಯಲ್ಲಿ ತೀರ್ಪು ನೀಡಿವೆ ಎನ್ನಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ಫುಡ್ಸ್‌ನಿಂದ ಜಿಎಸ್‌ಟಿ ಬಾಕಿ; ₹27.46 ಕೋಟಿ ವಸೂಲಿಗೆ ಶೋಕಾಸ್ ನೋಟಿಸ್

0
ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್‌ಗೆ ಜಿಎಸ್‌ಟಿ ಗುಪ್ತಚರ ಇಲಾಖೆ ಶೋಕಾಸ್ ನೋಟಿಸ್ ನೀಡಿದ್ದು, ₹27.46 ಕೋಟಿ ಮೌಲ್ಯದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಏಕೆ ವಸೂಲಿ ಮಾಡಬಾರದು ಎಂದು ಕಂಪನಿಗೆ ವಿವರಣೆ...