Homeಕರ್ನಾಟಕಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು: ಕೊನೆಯ ಭಾಗ

ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು: ಕೊನೆಯ ಭಾಗ

- Advertisement -
- Advertisement -

(ರಾಜ್ಯದ ಹೊಸ ಸರಕಾರವು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೀತಿಯನ್ನು ರೂಪಿಸಿಕೊಳ್ಳಲು ನೆರವಾಗಬಲ್ಲ ಟಿಪ್ಪಣಿಗಳು)

ಕರ್ನಾಟಕದಲ್ಲಿನ ಸಂಶೋಧನಾ ಸಂಸ್ಥೆಗಳು

ಕರ್ನಾಟಕ ಸರಕಾರದ ಅನುದಾನದಿಂದ ಕಾರ್ಯನಿರ್ವಹಿಸುತ್ತಿರುವ ಸಂಶೋಧನಾ ಸಂಸ್ಥೆಗಳು ಈ ಕೆಳಗಿನಂತಿವೆ.

  •  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು (DSERT)
  •  ಸಾಮಾಜಿಕ ಆರ್ಥಿಕ ಬದಲಾವಣೆಯ ಅಧ್ಯಯನ ಕೇಂದ್ರ (ISEC)
  • ಭಾರತ ಸಂಖ್ಯಾಶಾಸ್ತ್ರ ಸಂಸ್ಥೆ (1978), ಬೆಂಗಳೂರು
  • ಭಾರತ ಆಡಳಿತ ನಿರ್ವಹಣಾ ಸಂಸ್ಥೆ (1972), ಮೈಸೂರು
  • ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು
  • ದೇವರಾಜ್ ಅರಸ್ ಸಂಶೋಧನಾ ಸಂಸ್ಥೆ, ಬೆಂಗಳೂರು
  • ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಬೆಂಗಳೂರು
  • ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಜನಪ್ರಿಯವಾಗಿ ಡಿ.ಎಸ್.ಇ.ಆರ್.ಟಿ (DSERT) ಎಂದು ಕರೆಯಲ್ಪಡುತ್ತಿದೆ. ಇದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಶೋಧನಾಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಬೇಕಾದ ಪಠ್ಯಗಳನ್ನು ಮತ್ತು ಬೋಧನಾ ಕೌಶಲ್ಯವನ್ನು ರೂಪಿಸುವ ನಿಟ್ಟಿನಲ್ಲಿ ತೊಡಗಿಕೊಂಡಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳಲ್ಲಿ ಒದಗಿಸಿದ ಶಿಕ್ಷಣದ ಗುಣಮಟ್ಟದ ಸುಧಾರಣೆಯನ್ನು ಈ ಸಂಸ್ಥೆ ಮೌಲ್ಯಮಾಪನ ಮಾಡುತ್ತದೆ. ಪಠ್ಯಪುಸ್ತಕಗಳ ರಚನೆ, ವಿತರಣೆಯಂತಹ ಮಹತ್ವದ ಕೆಲಸಗಳಲ್ಲಿ ಹೆಚ್ಚಾಗಿ ಮೇಲ್ಜಾತಿಗಳಿಗೆ ಸೇರಿದ, ಅದರಲ್ಲೂ ಆರೆಸ್ಸೆಸ್ ತಮ್ಮ ಅಜೆಂಡಾ ಸಾಧನೆಗಾಗಿ ರೂಪಿಸಿರುವ ಬ್ರಾಹ್ಮಣರು/ನವ ಬ್ರಾಹ್ಮಣರು ಈ ಸಂಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ. ಹಿಂದಿನ ಅಸಮರ್ಥ ಶಿಕ್ಷಣ ಮಂತ್ರಿ ಕರ್ನಾಟಕ ರಾಜ್ಯದ ಪ್ರಾಥಮಿಕ ಶಿಕ್ಷಣವನ್ನು ಹಾಳುಮಾಡಿದ್ದನ್ನು ನಾವು ನೋಡಿದ್ದೇವೆ. ಇದಕ್ಕಾಗಿ ಪ್ರಸ್ತುತ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯಾಗಿಸಿ, ಅಲ್ಲಿ ರಾಜ್ಯದ ಎಲ್ಲ ವರ್ಗಗಳಿಗೆ ಸೇರಿದ ವಿದ್ವಾಂಸರು ಕೆಲಸ ಮಾಡುವಂತಾಗಬೇಕು. ಆಳುವ ಸರಕಾರ ಏನೇ ಹಸ್ತಕ್ಷೇಪ ಮಾಡಿದರೂ ಪ್ರಾಥಮಿಕ ಶಿಕ್ಷಣದ ವೈಚಾರಿಕ ಪರಿಸರ ಹಾಳಾಗದಂತೆ ಕಾಪಾಡಬೇಕು. ಪಠ್ಯಪುಸ್ತಕಗಳನ್ನು ರೂಪಿಸುವ ಮತ್ತು ಅವುಗಳಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸಮಿತಿಗಳಲ್ಲಿ ರಾಜ್ಯದ ಉನ್ನತಮಟ್ಟದ ವೈಚಾರಿಕ ಮತ್ತು ಸಾಮುದಾಯಿಕ ಹಿನ್ನೆಲೆಯ ಶಿಕ್ಷಣ ತಜ್ಞರಿರುವಂತೆ ನಿಯಮಗಳನ್ನು ರೂಪಿಸಬೇಕು. ಕರ್ನಾಟಕದ ಎಲ್ಲಾ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸಿ, ಸುಸಜ್ಜಿತ ಕಟ್ಟಡ, ಶೌಚಾಲಯ, ಗ್ರಂಥಾಲಯ, ಪೀಠೋಪಕರಣ, ಆಟದ ಮೈದಾನ, ಕಂಪ್ಯೂಟರ್ & ವಿಜ್ಞಾನ ಲ್ಯಾಬ್, ರಂಗವೇದಿಕೆ ಮೊದಲಾದ ಮೂಲಭೂತ ಅಗತ್ಯಗಳೊಂದಿಗೆ ಸಂಪೂರ್ಣ ಸಿಬ್ಬಂದಿಗಳ ನೇಮಕಾತಿ ನಡೆಯಬೇಕು. ಅಂಗನವಾಡಿಗಳು ಎಲ್‌ಕೆಜಿ ಮತ್ತು ಯುಕೆಜಿಗಳಾಗಿ ಬದಲಾಗಿ ಗ್ರಾಮೀಣ ಸಮುದಾಯವು ದುಬಾರಿ ಬೆಲೆ ತೆತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಇರುವ ಸಾಮಾಜಿಕ ಒತ್ತಡವನ್ನು ಕಡಿಮೆ ಮಾಡಬೇಕು.

ದೇವರಾಜ್ ಅರಸ್ ಸಂಶೋಧನಾ ಸಂಸ್ಥೆ, ಬೆಂಗಳೂರು

ಶ್ರೀ ದೇವರಾಜ ಅರಸ್ ಸಂಶೋಧನಾ ಸಂಸ್ಥೆಯನ್ನು ಕರ್ನಾಟಕದ ಹಿಂದುಳಿದ ವರ್ಗಗಳ ಕುರಿತು ಸಂಶೋಧನೆ ಮಾಡಲು ಸ್ಥಾಪಿಸಲಾಗಿದೆ. ಆದರೆ ಈ ಸಂಸ್ಥೆಯು ಪ್ರತಿಷ್ಠಿತ ಸಮುದಾಯಕ್ಕೆ ಸೇರಿದ ಅಧಿಕಾರಿಗಳಿಗೆ/ಸಂಘಪರಿವಾರದ ಕೋಮುಕ್ರಿಮಿಗಳ ‘ನಿರಾಶ್ರಿತ ತಾಣಗಳಾಗಿವೆ’. ಉದಾಹರಣೆಗೆ, ದೇವರಾಜ್ ಅರಸ್ ಸಂಶೋಧನಾ ಸಂಸ್ಥೆ ಅಥವಾ ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಗೆ ಕಳೆದ ಹದಿನೈದು ವರ್ಷಗಳಿಂದ ಒಬ್ಬ ಪ್ರಭಾವಿ ಐಎಎಸ್ ಅಧಿಕಾರಿಯ ಪತ್ನಿಯನ್ನು ನಿರ್ದೇಶಕಿಯಾಗಿ ನಿರಂತರವಾಗಿ ನೇಮಕ ಮಾಡಲಾಗುತ್ತಿದೆ. ಇವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಚರಿತ್ರೆ ವಿಭಾಗಕ್ಕೆ ಪ್ರಾಧ್ಯಾಪಕಿಯಾಗಿ ನೇಮಕವಾಗಿದ್ದರೂ, ಎಂದೂ ಈ ವಿಶ್ವವಿದ್ಯಾಲಯದ ತರಗತಿಗಳಲ್ಲಿ ನಿಂತು ಪಾಠ ಮಾಡಲಿಲ್ಲ; ಆದರೆ ಈ ಎರಡೂ ಸಂಸ್ಥೆಗಳಲ್ಲಿ ಕಳೆದ ಹದಿನೈದು ವರ್ಷದಿಂದ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ವರ್ಗ ಮಾಡಿಸಿಕೊಂಡು ಕಾಲಕಳೆಯುತ್ತಿದ್ದಾರೆ. ಸರಕಾರಗಳು ಬದಲಾದಂತೆ, ಆಯಾ ಕಾಲಘಟ್ಟಕ್ಕೆ ಸಂಬಂಧಪಟ್ಟ ಸಚಿವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಈ ಸಂಸ್ಥೆಗಳನ್ನು ತಮ್ಮ ಖಾಸಗಿ ಆಸ್ತಿಯನ್ನಾಗಿಸಿಕೊಂಡಿದ್ದಾರೆ. ಸ್ವತಂತ್ರವಾಗಿ ಯಾವುದೇ ಬಗೆಯ ಶೈಕ್ಷಣಿಕ ಚಟುವಟಿಕೆ ನಡೆಸಲು ಬಾರದ ಇವರು ವಿಶ್ವವಿದ್ಯಾಲಯವನ್ನು ತೊರೆದು ಹದಿನೈದು ವರ್ಷಗಳಾಗಿವೆ. ಯಾವುದೇ ಬೋಧಕ ಸಿಬ್ಬಂದಿ ತನ್ನ ಮಾತೃ ಇಲಾಖೆಯನ್ನು ಬಿಟ್ಟು ಬೋಧಕೇತರ ಹುದ್ದೆಗೆ ಕೇವಲ ನಾಲ್ಕು ವರ್ಷಗಳಿಗೆ ಮಾತ್ರ ನಿಯೋಜನೆಗೊಳ್ಳುವ ಅವಕಾಶವಿದೆ. (ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ಬೋಧಕ ಸಿಬ್ಬಂದಿಗಳು ಶೀಘ್ರ ತಮ್ಮ ಮಾತೃ ಇಲಾಖೆಗಳಿಗೆ ಹಿಂದಿರುಗಬೇಕು ಎಂದು ತೀರ್ಪು ನೀಡಿದೆ.) ಹೀಗಿದ್ದರೂ ಈ ಮಹಿಳೆ ತನ್ನ ಪ್ರಭಾವದಿಂದ ಈ ಎರಡೂ ಸಂಶೋಧನಾ ಸಂಸ್ಥೆಗಳಲ್ಲಿ ಕಳೆದ ಹದಿನೈದು ವರ್ಷಗಳಿಂದ ಬಿಡಾರ ಹೂಡಿದ್ದಾರೆ. ಬಿಜೆಪಿಯ ಅಧಿಕಾರಾವಧಿಯಲ್ಲಿ ಇವರು ದೇವರಾಜ ಅರಸ್ ಸಂಶೋಧನಾ ಸಂಸ್ಥೆಯ ಕುಲಶಾಸ್ತ್ರೀಯ ಅಧ್ಯಯನಗಳನ್ನು ಆರೆಸ್ಸೆಸ್ ವಟುಗಳಿಗೆ ನೀಡಿದ್ದೇ ಹೆಚ್ಚು.

ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಬೆಂಗಳೂರು

ಬೆಂಗಳೂರಿನಲ್ಲಿ 1993-94ನೇ ಸಾಲಿನಲ್ಲಿ ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಾಯ್ತು. ಬಾಬಾಸಾಹೇಬರ ಚಿಂತನೆಗಳನ್ನು ಮತ್ತು ಸಾಂವಿಧಾನಿಕ ಆಶಯಗಳನ್ನು ನಾಡಿನಲ್ಲಿ ಸಂಚಯಿಸುವ ಮಹತ್ವದ ಉದ್ದೇಶಗಳನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಇದರ ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ ಆರ್ಥಿಕ ಸ್ಥಾನಮಾನಗಳನ್ನು ಅಧ್ಯಯನ ಮಾಡುವುದು, ಈ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳ ಸ್ವರೂಪಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಸೂಕ್ತ ಪರಿಹಾರಗಳನ್ನು ನೀಡಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸುವುದು, ಈ ಸಮುದಾಯಗಳ ಮೇಲೆ ಸರಕಾರದ ಅಭಿವೃದ್ಧಿ ಯೋಜನೆಗಳು ಎಂತಹ ಪರಿಣಾಮವನ್ನು ಉಂಟು ಮಾಡುತ್ತವೆ ಎಂಬುದನ್ನು ಅಧ್ಯಯನ ಮಾಡುವುದು ಮತ್ತು ದಲಿತ/ಆದಿವಾಸಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು ಈ ಸಂಸ್ಥೆಯ ಮೂಲ ಉದ್ದೇಶಗಳಾಗಿದ್ದವು. ಸಂಸ್ಥೆಯನ್ನು ಸ್ಥಾಪಿಸಿ ಹಲವು ವರ್ಷಗಳೇ ಕಳೆದುಹೋಗಿವೆ. ಆದರೆ, ಈ ಸಂಸ್ಥೆಯ ಸಾಧನೆಯು ಹೇಳಿಕೊಳ್ಳುವಷ್ಟಿಲ್ಲ. ಏಕೆಂದರೆ, 1. ಸರಕಾರಗಳು ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿವೆ. 2. ಸಂಸ್ಥೆಯನ್ನು ಡಮ್ಮಿಯಾಗಿಸಿ, ‘ಪ್ರತಿಷ್ಠಿತ ನಿರುದ್ಯೋಗಿ’ಗಳ ಆಶ್ರಯ ತಾಣವನ್ನಾಗಿಸಲಾಗಿದೆ. ಇಲ್ಲಿ ತಳಸಮುದಾಯಗಳ ಸಬಲೀಕರಣಕ್ಕಾಗಿ ಅಧ್ಯಯನ ನಡೆಯಬೇಕಿತ್ತು. ಶೋಷಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಹಲವು ತರಬೇತಿ ಶಿಬಿರಗಳನ್ನು ಸಂಘಟಿಸಬೇಕಿತ್ತು. ಆದರೆ ಇಲ್ಲಿ ಇಂತಹ ಮಹತ್ವದ ಕೆಲಸಗಳು ನಡೆದಿಲ್ಲ. ಈ ಸಂಸ್ಥೆಯ ಕಾರ್ಯಕ್ರಮಗಳನ್ನು ಅಲ್ಲಿನ ನಿರ್ದೇಶಕರು ನಿರ್ಧರಿಸುತ್ತಿಲ್ಲ. ಬದಲಿಗೆ ಆರೆಸ್ಸೆಸ್ ಜೊತೆಗೆ ನಿಕಟ ನಂಟಿರುವ ವಾದಿರಾಜ ಸಾಮರಸ್ಯ ಇಲ್ಲಿನ ತರಬೇತಿ ಮತ್ತು ಸಂಶೋಧನಾ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು

ಇನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಪ್ರಾರಂಭವಾಗಿ ಹೆಚ್ಚೂಕಡಿಮೆ ಒಂದುವರೆ ದಶಕ ಕಳೆದುಹೋಗಿದೆ. ಭಾರತದ ಬೇರೆಬೇರೆ ರಾಜ್ಯಗಳಲ್ಲಿನ ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಮಾಡಿರುವ ಕೆಲಸಗಳನ್ನು ಹೋಲಿಸಿ ನೋಡಿದಾಗ ಕರ್ನಾಟಕದ ಬುಡಕಟ್ಟು ಸಂಶೋಧನಾ ಸಂಸ್ಥೆಯು ಶೈಶವಸ್ಥೆಯನ್ನು ದಾಟದೇ ಇರುವುದು ಕಂಡುಬರುತ್ತದೆ. ಹತ್ತು ವರ್ಷಗಳ ಕಾಲ ಕರ್ನಾಟಕ ವಿವಿಯ ಪ್ರಾಧ್ಯಾಪಕನೊಬ್ಬ ಈ ಸಂಸ್ಥೆಗೆ ನಿರ್ದೇಶಕನಾಗಿದ್ದರು. ಈಗ ಹಂಪೆಯ ಕನ್ನಡ ವಿವಿಯ ಪ್ರಾಧ್ಯಾಪಕರೊಬ್ಬರು ನಿರ್ದೇಶಕರಾಗಿದ್ದಾರೆ. ಕರ್ನಾಟಕ ವಿವಿಯ ಪ್ರಾಧ್ಯಾಪಕ ಆಯಾ ಕಾಲದ ಸಮಾಜ ಕಲ್ಯಾಣ ಸಚಿವರನ್ನು ಮತ್ತು ತನ್ನ ಜಾತಿಯ ಮುಖಂಡರನ್ನು ಓಲೈಸುತ್ತ ಕಾಲ ಕಳೆದರೇ ಹೊರತು ಹತ್ತು ವರ್ಷಗಳಲ್ಲಿ ಯಾವ ಕೆಲಸಗಳನ್ನೂ ಮಾಡಲಿಲ್ಲ. (ಇದಕ್ಕಾಗಿ ಪ್ರಸ್ತುತ ಸಂಸ್ಥೆಯ ವೆಬ್‌ಸೈಟನ್ನೊಮ್ಮೆ ಪರಿಶೀಲಿಸಿ ಪ್ರಾಮಾಣಿಸಬಹುದು. http://kstrimysuru.in/page/research/) ಕಳೆದ ಒಂದೂವರೆ ದಶಕದಲ್ಲಿ ಇಲ್ಲಿಗೆ ಮಂಜೂರಾದ ಹಣ ಮತ್ತು ಅಲ್ಲಿ ನಡೆದ ಸಂಶೋಧನಾ ಚಟುವಟಿಕೆಗಳ ತನಿಖೆ ಅಗತ್ಯವಾಗಿ ನಡೆಯಬೇಕಿದೆ. ಎಲ್ಲಾ ಪಕ್ಷಗಳಲ್ಲಿನ ಪ್ರಬಲ ಜಾತಿಗೆ ಸೇರಿದ ರಾಜಕಾರಣಿಗಳ ಸ್ವಜಾತಿ ಪ್ರೇಮ ಇಂತಹ ಸಂಸ್ಥೆಗಳನ್ನು ಕೊಂದುಹಾಕುತ್ತಿದೆ. ಈ ಸಂಸ್ಥೆಯನ್ನೂ ಕೇಶವಕೃಪವು ನಿಯಂತ್ರಿಸುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ.

ಪರಿಹಾರಗಳು

  1. ಈ ಸಂಸ್ಥೆಗಳು ಮುಖ್ಯವಾಗಿ ಹಿಂದುಳಿದ, ದಲಿತ ಮತ್ತು ಆದಿವಾಸಿ ಸಮುದಾಯಗಳ ಜೊತೆಗೆ ಮತ್ತು ವಿದ್ಯಾರ್ಥಿ ಸಮುದಾಯದ ಜೊತೆಗೆ ನೇರ ಒಡನಾಟ ಇಟ್ಟುಕೊಂಡಿರುತ್ತವೆ. ಇಂತಹ ಮುಖ್ಯವಾದ ಸಂಸ್ಥೆಗಳನ್ನು ಆರೆಸ್ಸೆಸ್‌ನ ಕೆಲವರು ನೇರವಾಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಸ್ಥೆಗಳ ಮೂಲಕ ನಡೆಯುವ ಕಾರ್ಯಕ್ರಮಗಳು ಅದರಲ್ಲೂ ಈ ಶೋಷಿತ ಸಮುದಾಯಗಳನ್ನು ನೇರವಾಗಿ ತಲುಪುವ ತರಬೇತಿ ಕಾರ್ಯಕ್ರಮ (Outreach Programme)ಗಳನ್ನು ವಾದಿರಾಜ ಸಾಮರಸ್ಯ, ಮೊದಲಾದವರು ನಿಯಂತ್ರಿಸುತ್ತಿದ್ದಾರೆ. ಶೋಷಿತ ಸಮುದಾಯಗಳ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಆಸಕ್ತ ಸಾಮಾಜಿಕ ಕಾರ್ಯಕರ್ತರಿಗೆ ನೀಡುವ ತರಬೇತಿ ಶಿಬಿರಗಳಲ್ಲಿ ಕೇಶವಕೃಪದ ದ್ವೇಷ ಸಿದ್ಧಾಂತವನ್ನು ನೇರವಾಗಿ ಬೋಧಿಸಲಾಗುತ್ತದೆ. ವನವಾಸಿ ಕಲ್ಯಾಣ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಆರೆಸ್ಸೆಸ್ ಕಾರ್ಯಕರ್ತರಿಂದಲೇ ಈ ತರಬೇತಿ ಶಿಬಿರಗಳನ್ನು ಆಯೋಜಿಸಲು ಒತ್ತಡ ಹಾಕಲಾಗುತ್ತಿದೆ. (ಈ ವನವಾಸಿ ಕಲ್ಯಾಣ ಕೇಂದ್ರಗಳು ಆದಿವಾಸಿಗಳ ನಡುವೆ ಕೆಲಸ ಮಾಡುವ ಆರೆಸ್ಸೆಸ್‌ನ ಅಂಗಸಂಸ್ಥೆಗಳು) ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಮಲೆನಾಡು, ಕರಾವಳಿ ಮತ್ತು ಬಯಲು ಸೀಮೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವನವಾಸಿ ಕಲ್ಯಾಣ ಕೇಂದ್ರಗಳು ಸರಕಾರದ ಅನುದಾನವನ್ನು ಪರೋಕ್ಷವಾಗಿ ಪಡೆದು ಆರ್ಥಿಕವಾಗಿ ಸದೃಢವಾಗಿವೆ. ಈ ಸಂಸ್ಥೆಗಳು ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ನಡುವೆ ವ್ಯಾಪಕವಾಗಿ ಕೋಮು ದ್ವೇಷವನ್ನು ಹರಡುತ್ತಿವೆ. ಮತ್ತು ಈ ಸಮುದಾಯಗಳನ್ನು ಬಿಜೆಪಿಯ ಓಟ್ ಬ್ಯಾಂಕ್ ಆಗಿಸಲು ಆರೆಸ್ಸೆಸ್‌ಗೆ ಸಾಧ್ಯವಾಗಿದೆ.
  2. ಒಂದು ನಿರ್ದಿಷ್ಟ ಸಮುದಾಯದ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರಕಾರ ಸೂಚನೆ ನೀಡಿದಲ್ಲಿ, ಇಂತಹ ಕುಲಶಾಸ್ತ್ರೀಯ ಅಧ್ಯಯನವನ್ನು ಯಾರು ಕೈಗೊಳ್ಳಬೇಕು? ವರದಿಯನ್ನು ಹೇಗೆ ತಿರುಚಿ ಬರೆಯಬೇಕು? ಎಂಬುದನ್ನು ಕೇಶವಕೃಪವೇ ನಿರ್ಧರಿಸುತ್ತಿದೆ. ಕಳೆದ ಎರಡು ದಶಕಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡ ವಿದ್ವಾಂಸರು ನಡೆಸಿದ ಭ್ರಷ್ಟಾಚಾರ ಮತ್ತು ವಂಚನೆಗಳನ್ನು ತನಿಖೆ ಮಾಡಿದಲ್ಲಿ ಹಲವು ವಿದ್ವಾಂಸರು ಜೈಲಿಗೆ ಹೋಗುವುದು ಖಚಿತ. ಅಧ್ಯಯನದ ನೆಪದಲ್ಲಿ ಈ ಅಸಹಾಯಕ ಶೋಷಿತ ಸಮುದಾಯಗಳ ಜೊತೆಗೆ ವಿಶ್ವವಿದ್ಯಾಲಯಗಳ ಮೇಷ್ಟ್ರುಗಳು ಯಾರೂ ಪ್ರದರ್ಶಿಸಬಾರದಷ್ಟು ನೀಚತನವನ್ನು ಪ್ರದರ್ಶನ ಮಾಡಿದ್ದಾರೆ. ಇವರೆಲ್ಲ ಬಲಾಢ್ಯ ಸಮುದಾಯಗಳಿಂದ ಬಂದವರಾಗಿದ್ದ ಕಾರಣಕ್ಕಾಗಿ ಅವರ ಲಂಪಟತನ, ಲಂಚಗುಳಿತನ, ಅಸಹ್ಯ ಮತ್ತು ಅಮಾನವೀಯ ವ್ಯಕ್ತಿತ್ವಗಳು ಹೊರಬಂದಿಲ್ಲ. ಸರಕಾರವು ಈ ಸಂಶೋಧನಾ ಸಂಸ್ಥೆಗಳಿಗೆ ಸಾರ್ವಜನಿಕ ಲಜ್ಜೆ ಮತ್ತು ಜವಾಬ್ದಾರಿಗಳಿರುವ ವಿದ್ವಾಂಸರನ್ನು ನೇಮಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸರಕಾರವು ಈ ಸಂಸ್ಥೆಗಳ ಕಾರ್ಯವೈಖರಿಯನ್ನು ಪರಿಶೀಲಿಸುವಂತಾಗಬೇಕು. ಸಂಘಪರಿವಾರದ Extra-Constitutional ವ್ಯಕ್ತಿಗಳು ಈ ಸಂಸ್ಥೆಗಳಲ್ಲಿ ಬೇರೂರಿದ್ದಾರೆ. ಇಂತವರನ್ನು ಸದರಿ ಸಂಸ್ಥೆಗಳಿಂದ ತೊಲಗಿಸುವ ಅವಶ್ಯಕತೆ ಇದೆ. ಈ ಸಂಸ್ಥೆಗಳಿಗೆ ಮಾನವಂತರನ್ನು ನಿಯೋಜನೆ ಮಾಡಿ, ಡಾ. ಅಂಬೇಡ್ಕರ್, ಗಾಂಧೀಜಿ, ಬಿರ್ಸಾ ಮುಂಡಾ ಮತ್ತು ದೇವರಾಜ್ ಅರಸು ಅವರ ಸಾಮಾಜಿಕ ಮೌಲ್ಯಗಳನ್ನು ಯುವಜನರಲ್ಲಿ ಬಿತ್ತುವ ಕೆಲಸವನ್ನು ಪ್ರಸ್ತುತ ಕಾಂಗ್ರೆಸ್ ಸರಕಾರ ಮಾಡಬೇಕಿದೆ.

ಇದನ್ನೂ ಓದಿ: ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು

ಅಕಾಡೆಮಿಗಳು ಮತ್ತು ಪ್ರಾಧಿಕಾರಗಳು

ಉಳಿದ ಶೈಕ್ಷಣಿಕ ಸಂಸ್ಥೆಗಳಿಗಿಂತ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಸ್ಥಿತಿಗತಿಗಳು ಭಿನ್ನವಾಗೇನೂ ಇಲ್ಲ. ಇಲ್ಲೂ ಸಂಘಪರಿವಾರದ ಮತ್ತು ಸರಕಾರಗಳನ್ನು ಓಲೈಸುವವರ ಸಂಖ್ಯೆ ಅಧಿಕವಾಗಿದೆ. ಅಕಾಡೆಮಿಗಳಿಗೆ ಪ್ರಗತಿಪರ ರಾಜಕೀಯ ಒಳನೋಟಗಳಿರುವ ವಿದ್ವಾಂಸರನ್ನು ನೇಮಕ ಮಾಡುವ ಅಗತ್ಯವಿದೆ.

ಈ ಸಂಸ್ಥೆಗಳಿಗೆ ನಿಯೋಜನೆಯಾಗುವ ವಿದ್ವಾಂಸರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಮಾರ್ಗದರ್ಶಿ ಸೂತ್ರಗಳ ಜೊತೆಗೆ ಸಮಾಜಮುಖಿಯಾಗಿ ಯೋಚಿಸುವ ನೈತಿಕ ಹೊಣೆಗಾರಿಕೆಯನ್ನು ಮೈಗೂಡಿಸುವುದು ಅಗತ್ಯ. ಪ್ರಸ್ತುತ ಸಂಸ್ಥೆಗಳಲ್ಲಿ ಇಂದಿಗೂ ಹಳೆಯ ಕಾಲದ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಮತ್ತು ಅವುಗಳನ್ನು ಪುರಾತನ ಶೈಲಿಯಲ್ಲಿ ಅನುಷ್ಠಾನಗೊಳಿಸುವ ವಿಧಾನವನ್ನು ಅನುಸರಿಸಲಾಗುತ್ತದೆ. ಈ ಕ್ರಮವನ್ನು ಬದಲಿಸಿ, ಜನರನ್ನು ವೈಚಾರಿಕವಾಗಿ ರೂಪಿಸುವ ಮತ್ತು ಹೊಸ ಆಲೋಚನೆಗಳನ್ನು ಹುಟ್ಟುಹಾಕುವ ಹಾಗೂ ಹೆಚ್ಚು ಜನರನ್ನು ತಲುಪುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ.

ಪರಿಹಾರಗಳು

  1. ಸೈದ್ಧಾಂತಿಕವಾಗಿ ಜನಪರವಾಗಿರುವ ವಿದ್ವಾಂಸರನ್ನು ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನಿಯೋಜನೆ ಮಾಡುವುದು. ಯುವಕರಿಗೆ ಈ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆಗಳಿರಬೇಕು.
  2. ಈಗಾಗಲೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ವಯೋವೃದ್ಧರು ರಾಜ್ಯ ಮಟ್ಟದ ಅಕಾಡೆಮಿ/ಪ್ರಾಧಿಕಾರಗಳ ಮೇಲೆ ಕಣ್ಣು ಹಾಕಿಕೊಂಡು ಕುಳಿತಿರುತ್ತಾರೆ. ಇಂಥವರನ್ನು ನಿಷ್ಠೂರವಾಗಿ ದೂರ ಇಟ್ಟು, ಸಂಘ ಪರಿವಾರದ ಕೋಮು ಅಜೆಂಡಾದ ವಿರುದ್ಧ ಮತ್ತು ಜನಪರವಾಗಿ ಹೋರಾಡಿದ, ಚಳವಳಿಗಳನ್ನು ರೂಪಿಸಿದ, ಪತ್ರಿಕೆಗಳಲ್ಲಿ ಜನವಿರೋಧಿ ದ್ವೇಷ ನೀತಿಗಳನ್ನು ಖಂಡಿಸಿ ವಿವೇಕವನ್ನು ಮರುಕಳಿಸಲು ಪ್ರಯತ್ನಿಸಿ ಬರೆದ ವಿದ್ವಾಂಸರಿಗೆ ಈ ಸಂಸ್ಥೆಗಳಲ್ಲಿ ಅವಕಾಶಗಳನ್ನು ಕಲ್ಪಿಸಬೇಕು.
  3. ಕೋಮುವಾದ, ಮೂಲಭೂತವಾದ ಮತ್ತು ಜಾತಿವಾದಗಳನ್ನು ಪ್ರತಿರೋಧಿಸುವ ಬರಹಗಳನ್ನು ಮಾಡಿದವರನ್ನು, ಅಥವಾ ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಸಾಮಾಜಿಕ ಕಾರ್ಯಕರ್ತರನ್ನು ಇಂತಹ ಸಂಸ್ಥೆಗಳಿಗೆ ನೇಮಿಸಬೇಕು. ‘ನಾವು ಎಡವೂ ಅಲ್ಲ ಬಲವೂ ಅಲ್ಲ’ ಎಂದು ಘೋಷಿಸಿಕೊಳ್ಳುವ ಮಧ್ಯಮ ಮಾರ್ಗಿಗಳನ್ನು ಕಡ್ಡಾಯವಾಗಿ ದೂರವಿಡಬೇಕು. ಈ ಮಧ್ಯಮ ಮಾರ್ಗಿಗಳು ಯಾವತ್ತೂ ವ್ಯಕ್ತಿವಾದಿಗಳಾಗಿದ್ದು, ಇವರಿಂದ ಸಾಮಾಜಿಕ ಮುಂಚಲನೆ ಸಾಧ್ಯವಿಲ್ಲ. ಇವರು ಎಂದಿಗೂ Center of the Right ಆಗಿದ್ದು, ಜನವಿರೋಧಿ ಬಲಪಂಥೀಯರಿಗೆ ಅನುಕೂಲವಾಗುವ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಿರುತ್ತಾರೆ. (ಇಂತವರ ಸಂಖ್ಯೆ ಅಧಿಕವಾಗಿರುವುದರಿಂದ ಅವರನ್ನು ಉಲ್ಲೇಖಿಸಲಾರೆ.
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು

ಸರಕಾರ ಈ ಗುರಿಗಳನ್ನು ಹಾಕಿಕೊಳ್ಳಬೇಕು

  1. ಸರಕಾರದ ನೇರ ಅನುದಾನ ಪಡೆಯುವ ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆ, ದೇವರಾಜ್ ಅರಸ್ ಸಂಶೋಧನಾ ಸಂಸ್ಥೆ ಮತ್ತು ಐಸೆಕ್‌ಗಳ ಮೂಲಕ ಆನ್ವಯಿಕ ಸಂಶೋಧನೆಗಳನ್ನು (Applied Research) ಮಾಡುವಂತೆ ನಿರ್ದೇಶನ ನೀಡಬೇಕು. ಇದರಿಂದಾಗಿ ಸರಕಾರದ ಅಭಿವೃದ್ಧಿ ಯೋಜನೆಗಳು ಸಮುದಾಯಗಳನ್ನು ಹೇಗೆ ತಲುಪುತ್ತಿವೆ? ಅದರಿಂದಾಗುವ ಸಾಧಕ-ಬಾಧಕಗಳೇನು ಎಂಬುದನ್ನು ತಿಳಿದುಕೊಳ್ಳಬಹುದು. ಇದರ ಜೊತೆಗೆ, ಯುವಕ/ಯುವತಿಯರಿಗೆ ತರಬೇತಿ ನೀಡುವ, ಸಾಮಾಜಿಕ ಕಾರ್ಯಕರ್ತರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡಲು ಈ ಸಂಶೋಧನಾ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕು. ದಲಿತ, ಆದಿವಾಸಿ, ಅಲೆಮಾರಿ ಮತ್ತು ತಳವರ್ಗದ ಕುಶಲಕರ್ಮಿ ಸಮುದಾಯಗಳ ಸಂಘಟನೆಗಳಿಗೆ ಸಾಂವಿಧಾನಿಕ ಮೌಲ್ಯಗಳನ್ನು ಪ್ರಚುರಪಡಿಸಲು ಉತ್ತೇಜನ ನೀಡಬೇಕು.
  2. ಜನರನ್ನು ನಿತ್ಯ ಮುಖಾಮುಖಿ ಮಾಡುವ ಮತ್ತು ಸಮುದಾಯಗಳಲ್ಲಿ ಅರಿವು ಮೂಡಿಸುವ ಶೈಕ್ಷಣಿಕ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಸರಕಾರ ಜನಪರವಾಗಿಸುವ ನಿಟ್ಟಿನಲ್ಲಿ ತೀವ್ರ ಗಮನ ಹರಿಸಬೇಕು. ಏಕೆಂದರೆ ಜೀವ ವಿರೋಧಿ ರಾಜಕಾರಣವನ್ನು ಸಮಾಜದಲ್ಲಿ ಹರಡಲು ಸಂಘಪರಿವಾರ ಈ ಸಂಸ್ಥೆಗಳನ್ನು ಸದಾ ನಿಯಂತ್ರಿಸುತ್ತದೆ, ಇಲ್ಲವೆ ಅಂತಹ ಸಂಸ್ಥೆಗಳನ್ನು ನೈತಿಕವಾಗಿ ಕುಗ್ಗಿಸುವ ಅಥವಾ ಅವುಗಳನ್ನು ನಾಶ ಮಾಡುವ ಘಾತುಕ ಕೆಲಸಕ್ಕೆ ಸಂಘಪರಿವಾರ ಮುಂದಾಗುತ್ತದೆ.
  3. ಅಕಾಡೆಮಿ ಮತ್ತು ಪ್ರಾಧಿಕಾರಗಳ ಚಟುವಟಿಕೆಗಳನ್ನು ಪರಿಶೀಲಿಸಲು ಮತ್ತು ನೀತಿನಿರೂಪಣೆಗಳನ್ನು ಸಿದ್ಧಪಡಿಸಲು ಒಂದು ನೋಡಲ್ ಸಮಿತಿಯನ್ನು ರಚಿಸುವ ಅಗತ್ಯವಿದೆ. ಈ ನೋಡಲ್ ಸಮಿತಿಯು ಆಯಾ ಪ್ರಾಧಿಕಾರ ಮತ್ತು ಅಕಾಡೆಮಿಗಳನ್ನು ವೈಚಾರಿಕವಾಗಿ ಮುನ್ನಡೆಸುವ ಕೆಲಸವನ್ನು ಮಾಡಬೇಕು. ಜನಪರವಾಗಿ, ಸಾಂವಿಧಾನಿಕ ಮೌಲ್ಯಗಳನುಸಾರ ಕಾರ್ಯನಿರ್ವಹಿಸುವ ಮತ್ತು ಬಲಪಂಥೀಯ ದ್ವೇಷ ರಾಜಕಾರಣವನ್ನು ಎದುರು ಹಾಕಿಕೊಂಡು ಹೊಸ ಸಮಾಜವನ್ನು ಸೃಷ್ಟಿಸುವ ಕನಸು ಕಾಣುವ ವ್ಯಕ್ತಿ/ವಿದ್ವಾಂಸರನ್ನು ಇಂತಹ ಸಮಿತಿಗೆ ನೇಮಕ ಮಾಡಬೇಕು. ಈ ಸಮಿತಿಯು ಅಕಾಡೆಮಿ/ಪ್ರಾಧಿಕಾರಗಳ ಕಾರ್ಯಕ್ರಮಗಳನ್ನು ಪರಿಶೀಲಿಸಿ, ಜನಪರವಾಗಿ ಅವುಗಳ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಹೊಣೆಗಾರಿಕೆಯನ್ನು ನಿಭಾಯಿಸುವಂತಾಗಬೇಕು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ಸಂಸ್ಥೆಗಳನ್ನು ಮುನ್ನಡೆಸುವ ಯಾವ ಪರಿಣಾಮಕಾರಿ ಕ್ರಮಗಳನ್ನೂ ಸಾಮಾನ್ಯವಾಗಿ ಕೈಗೊಳ್ಳುವುದಿಲ್ಲ. ಆದರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಪ್ರಸ್ತುತ ಸರಕಾರ ನಿರ್ಲಕ್ಷಿಸಬಾರದು. ದುರಂತವೆಂದರೆ, 2013ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಹಲವು ಅಕಾಡೆಮಿಗಳಲ್ಲಿ ಆರೆಸ್ಸೆಸ್ ಮತ್ತು ಭಜರಂಗದಳದ ಕಾರ್ಯಕರ್ತರು ತುಂಬಿಹೋಗಿದ್ದರು. ಪ್ರಸ್ತುತ ಸಂದರ್ಭದಲ್ಲಿ ದೇಶದ ಬಹುತ್ವ ಮತ್ತು ಅಗಾಧ ತಾತ್ವಿಕ ವೈವಿಧ್ಯತೆಯನ್ನು, ನೆಲಮೂಲ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಸಾಂಸ್ಕೃತಿಕ ನೀತಿಯನ್ನು ಕಾಂಗ್ರೆಸ್ ಸರಕಾರ ರೂಪಿಸಿಕೊಳ್ಳಬೇಕು. ಈ ನೀತಿಯನ್ನು ಅನುಷ್ಠಾನಗೊಳಿಸಲು ಪ್ರಜ್ಞಾವಂತ ವಿದ್ವಾಂಸರ ಮಂಡಳಿಯನ್ನು ರಚಿಸಬೇಕು. ಈ ಮಂಡಳಿಯ ಮೂಲಕ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಮತ್ತು ಅಕಾಡೆಮಿ-ಪ್ರಾಧಿಕಾರಗಳ ಚಟುವಟಿಕೆಗಳು ನಡೆಯುವಂತಾಗಬೇಕು. ಬಿಜೆಪಿ ಪಕ್ಷವು ತನ್ನದೇ ಸಾಂಸ್ಕೃತಿಕ ನೀತಿಯನ್ನು ರೂಪಿಸಿಕೊಂಡು ವ್ಯಾಪಕವಾಗಿ ಬೆಳೆದುನಿಂತಿದೆ. ತಾನು ತಯಾರು ಮಾಡಿರುವ ಅಂಗಸಂಸ್ಥೆಗಳಿಂದ ತಮ್ಮ ಈ ವಿಚ್ಛಿದ್ರಕಾರಿ ರಾಜಕಾರಣವನ್ನು ಅದು ಅಸ್ತಿತ್ವಕ್ಕೆ ತಂದಿದೆ. ಇಂತಹ ಫ್ಯಾಸಿಸ್ಟ್ ರಾಜಕಾರಣವನ್ನು ಸೋಲಿಸಲು ಸರಕಾರವು ತಕ್ಷಣದಲ್ಲಿ ಒಂದು ನಿಶ್ಚಿತವಾದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೀತಿಯನ್ನು ರೂಪಿಸಬೇಕಿದೆ.


ಇದನ್ನೂ ಓದಿ: ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ನಿರ್ವಹಣೆ: ಸಮಕಾಲೀನ ಅಗತ್ಯಗಳು: ಭಾಗ-2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...