Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಗ್ರಾಮ ದೇವತೆಗಳು ಜನಪದ ಸಂಸ್ಕೃತಿಯ ಮಹಾ ಪಲ್ಲಟದ ಬಗೆಗಿನ ತಿಳಿವು

ಪುಟಕ್ಕಿಟ್ಟ ಪುಟಗಳು: ಗ್ರಾಮ ದೇವತೆಗಳು ಜನಪದ ಸಂಸ್ಕೃತಿಯ ಮಹಾ ಪಲ್ಲಟದ ಬಗೆಗಿನ ತಿಳಿವು

- Advertisement -
- Advertisement -

ಸಂಸ್ಕೃತ ಸಾಹಿತ್ಯ ಮತ್ತು ಇಂಗ್ಲಿಷ್ ಸಾಹಿತ್ಯಗಳ ಆಧಾರದಲ್ಲಿಯೇ ನೆಲದ ಚರಿತ್ರೆಯನ್ನು ಕಟ್ಟುವ ಕೆಲಸವೆಂದರೆ ಅದೊಂದು ಅವೈಚಾರಿಕ, ಅವೈಜ್ಞಾನಿಕ ಮತ್ತು ಅನೈತಿಕ ಕೂಡಾ. ಆಯಾ ನೆಲದ ಭಾಷೆಯ ಜಾನಪದೀಯ ಮೌಖಿಕ ಪರಂಪರೆಯನ್ನು ಅನುಸರಿಸುವ ಒಂದು ವಿಧಾನ ನಿಜಕ್ಕೂ ಅಗತ್ಯ ಮತ್ತು ಅನಿವಾರ್ಯ. ಡಾ ಸಿದ್ಧಲಿಂಗಯ್ಯನವರ ಗ್ರಾಮದೇವತೆಗಳು ಕೃತಿಯೊಂದು ಮಹತ್ತರವಾಗಿ ಕಾಣುವುದು ಇದೇ ದೃಷ್ಟಿಯಿಂದಲೇ.

ಮೊದಲಿಗೆ ತಾಯಾಳಿಕೆಯ ಪರಂಪರೆಯಿದ್ದ ನಮಗೆ ಗ್ರಾಮದೇವತೆಗಳ ಅಧ್ಯಯನದ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಸಿದ್ಧಲಿಂಗಯ್ಯನವರು ಗ್ರಾಮದೇವತೆಗಳ ಪರಿಕಲ್ಪನೆ, ಅದರ ವರ್ಗೀಕರಣ, ಪುರಾಣ ಐತಿಹ್ಯಗಳು; ಎಲ್ಲವನ್ನೂ ಬಿಡಿಸಿತ್ತಾ ಹೋಗುತ್ತಾರೆ.

ಹಾಸನದ ಸಮೀಪದ ಮಳಲಿಯಲ್ಲಿ ಮಳಲಿ ಗಿಡ್ಡಮ್ಮನ ದೇವಸ್ಥಾನವಿದೆ. ಆ ಗಿಡ್ಡಮ್ಮನ ದೇವಸ್ಥಾನದಲ್ಲಿ ಮಾಂಸವೇ ನೈವೇದ್ಯ. ಹಂದಿಯ ಬಾಡನ್ನೂ ದೇವರಿಗೆ ಇಡುತ್ತಾರೆ. ಕೋಳಿಯನ್ನೂ ಕುಯ್ಯುತ್ತಾರೆ. ಅದು ಈಗೀಗ ಮೆಲ್ಲನೆ ಗಿಡ್ಡಮ್ಮ ಎಂಬ ಹೆಸರನ್ನು ಕಳೆದುಕೊಂಡು ಮಳಲಿ ಲಕ್ಷ್ಮೀದೇವಿಯಾಗಿ ಮಾರ್ಪಾಡಾಗುತ್ತಿದ್ದಾಳೆ. ಜನಪದರ ಮೂಲ ಸಂಸ್ಕೃತಿಯು ವೈದಿಕತೆಯ ಪ್ರಭಾವಕ್ಕೆ ಸಿಕ್ಕು ತನ್ನ ಮೂಲದ ಘಮಲನ್ನು ಮರೆಯುವ ಪರಿಯಿದು. ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಪ್ರವೇಶಿಸಿದ ರಾಮಾನುಜರ ಪ್ರಭಾವದಿಂದಾಗಿ ಸುತ್ತಮುತ್ತಲಿನ ಗ್ರಾಮದೇವಿಯರೆಲ್ಲಾ ಲಕ್ಷ್ಮೀದೇವಿಗಳಾಗಿ ಮಾರ್ಪಾಟು ಹೊಂದಿದರು.

ರಾಜಾ ಪ್ರತ್ಯಕ್ಷ ದೈವತಾ ಎಂದು ನಂಬಿದ್ದ ಅಥವಾ ತಮ್ಮ ಅನುಕೂಲಕ್ಕಾಗಿ ಇತರರನ್ನು ಆ ರೀತಿ ನಂಬಿಸಿದ ವೈದಿಕ ಬ್ರಾಹ್ಮಣರು ಸ್ಥಳೀಯ ರಾಜರ ವಿಗ್ರಹಗಳಿಗೂ ದೈವತ್ವವನ್ನು, ಅದರಲ್ಲೂ ವಿಷ್ಣುತ್ವವನ್ನು ಆರೋಪಿಸಿ ದೇವರನ್ನಾಗಿಸಿ, ಗುಡಿಯನ್ನಾಗಿಸಿ ತಮ್ಮ ಪೌರೋಹಿತ್ಯದ ವೃತ್ತಿಯನ್ನು ಗಟ್ಟಿಗೊಳಿಸಿಕೊಂಡರು ಮತ್ತು ತಾವು ಶ್ರೀಮಂತರಾದರು. ತಿಮ್ಮರಾಯ, ವರದರಾಯ, ಚೆಲುವಯ್ಯ ಇತ್ಯಾದಿ ಸ್ಥಳೀಯ ನಾಯಕರ ವಿಗ್ರಹಗಳೆಲ್ಲವೂ ಕಾಲಾಂತರದಲ್ಲಿ ವಿಷ್ಣುವಿನ ಮೂರ್ತಿಗಳಾದವು.

ಗೊರವನಹಳ್ಳಿಯಲ್ಲಿ ತನ್ನ ಪಾಡಿಗೆ ತಾನಿದ್ದ ಮುಗ್ಧ ವೃದ್ಧೆಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ಕೊಡಿಸಿದ ಬಹಳ ಇತ್ತೀಚಿನ ವಿದ್ಯಮಾನವು ನಾವು ಕಂಡಿರುವುದೇ ಆಗಿದೆ. ಗೊರವನಹಳ್ಳಿಗೆ ಭಕ್ತರಾಗಿ ಬಂದವರು ತಮ್ಮ ವೈಯಕ್ತಿಕ ಅನುಭವಗಳನ್ನೆಲ್ಲಾ ಇತರರ ಶ್ರದ್ಧಾ ನಂಬುಗೆಗಳಿಗೆ ದಾಟಿಸಿ ಇಂದು ಅದೊಂದು ಹೆಸರಾಂತ ಪುಣ್ಯಕ್ಷೇತ್ರವಾಗಿದೆ. ಇತ್ತೀಚೆಗೆ ನಿಧನರಾದ ಆ ವೃದ್ಧೆಗೆ ತನ್ನ ಮನೆಯೊಂದು ಇಂತಹದೊಂದು ಕ್ಷೇತ್ರವಾದೀತೆಂದು ಖಂಡಿತ ಎಂದಿಗೂ ಊಹಿಸಿರಲಿಲ್ಲ.

ಕೋಲಾರದ ಹಳ್ಳಿಯೊಂದರಲ್ಲಿ ತಿಕ್ಕ ಶಂಕರಯ್ಯನ ಪವಾಡದ ದಿನಗಳು ನಾವು ಸಣ್ಣವರಾಗಿದ್ದಾಗ ಬಹು ವ್ಯಾಪಕವಾಗಿತ್ತು. ಸಾಮಾನ್ಯ ಹುಚ್ಚನಾಗಿದ್ದು ಅಲೆದಾಡಿಕೊಂಡಿದ್ದ ಶಂಕರಯ್ಯನೆಂಬ ವ್ಯಕ್ತಿಯು ತೀರಿಹೋದಾಗ ಊರಿನವರು ಮರುಕದಿಂದ ಅವನ ಶವಸಂಸ್ಕಾರ ಮಾಡಿದರು. ಆ ಸಮಾಧಿಯ ಬಳಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬನು ತನಗೆ ಅಲ್ಲಿ ದಿವ್ಯ ದರ್ಶನವಾಯಿತೆಂದು ಹೇಳಿದ್ದಲ್ಲದೇ, ಅವನ ದೆವ್ವ (ಹುಚ್ಚು) ಹಿಡಿದ ಸಂಬಂಧಿಯೊಬ್ಬ ಆ ಸಮಾಧಿಯ ಸಾನಿಧ್ಯದಿಂದ ಸರಿಹೋದನೆಂದು ಹೇಳಿದಕೂಡಲೇ, ರಾತ್ರೋ ರಾತ್ರಿ ಖ್ಯಾತಿ ಹೊಂದಿದ ಆ ಸಮಾಧಿಯು, ಕೂಡಲೇ ಮಂದಿರವನ್ನು ಕಂಡಿತು. ಸ್ಪೆಷಲ್ ಬಸ್‌ಗಳನ್ನು ಹೊಂದಿತು. ದೆವ್ವ ಹಿಡಿದವರನ್ನೆಲ್ಲಾ ಅಲ್ಲಿಗೆ ಕರೆದೊಯ್ಯುವುದು ಪ್ರತೀತಿಯಾಯಿತು. ಅಲ್ಲಿ ದೆವ್ವ ಹಿಡಿದಿರುವವರ ಕೂದಲನ್ನು ಕಿತ್ತು, ಅಲ್ಲಿಯೇ ಇದ್ದ ಮರವೊಂದಕ್ಕೆ ಮೊಳೆ ಹೊಡೆದರೆ ದೆವ್ವ ಬಿಡುವುದಾಗಿ ನಂಬಲಾಗಿತ್ತು. ಅಂತೆಯೇ ಅದರ ವೈಭವ ಮತ್ತು ಸತ್ಯವನ್ನು ಸಾರುವಂತಹ ಅನೇಕ ಪುಸ್ತಕಗಳೂ ಕೂಡ ಬಿಡುಗಡೆಯಾಗಿ ಎಲ್ಲೆಡೆ ಪ್ರಚಾರ ಮಾಡಲಾಗುತ್ತಿತ್ತು.

ಹೀಗೆ, ಸಾಮಾನ್ಯ ವ್ಯಕ್ತಿಯೊಬ್ಬನ ಸಮಾಧಿ, ಅಥವಾ ಯಾವುದೋ ಆತನ ಅಥವಾ ಆಕೆಯ ವಸ್ತುವಿನ್ನು ಕೇಂದ್ರವಾಗಿಟ್ಟುಕೊಂಡು ನಾನಾ ರೀತಿಯ ಶ್ರದ್ಧಾ ನಂಬುಗೆಯ ಪರಂಪರೆಗಳು ಹುಟ್ಟಿಕೊಳ್ಳುತ್ತವೆ ಮತ್ತು ಬರಬರುತ್ತಾ ತಮ್ಮ ಮೂಲದ ಕಥೆಯನ್ನೇ ಮರೆತು ಬರಿಯ ಸಂಪ್ರದಾಯವಾಗಿ ಉಳಿಯುತ್ತವೆ.

ತಮಿಳುನಾಡು ಮತ್ತು ಕರ್ನಾಟಕದ ಗಡಿಯಾದ ಹೊಸೂರಿನ ಸಮೀಪ ಕೃಷ್ಣಗಿರಿ ಜಿಲ್ಲೆಯಲ್ಲಿ ತ್ಯಾನದುರ್ಗವೆಂಬ ಹಳ್ಳಿ. ನಮ್ಮ ಸಂಬಂಧಿಗಳು ನೆಲೆಸಿದ್ದ ಆ ಊರಲ್ಲಿ ಸಾಂಸ್ಕೃತಿಕವಾಗಿ ಬಹಳ ಕುತೂಹಲಭರಿತವಾಗಿರುವುದು. ತಮಿಳು ಅಲ್ಲಿನ ಭಾಷೆಯಾದರೂ ತೆಲುಗನ್ನು ವಾಡಿಕೆಯಲ್ಲಿರುವಂತೆ ಮಾತಾಡುತ್ತಾರೆ. ಸಂಸ್ಕೃತಿಯಲ್ಲಿ ಕನ್ನಡದವರೇ ಆಗಿದ್ದು, ಬಹುಪಾಲು ಜನರ ಮನೆ ಮಾತು ಕನ್ನಡ. ಈ ಊರಿನಲ್ಲಿ ಕೆಲವು ವರ್ಷಗಳ ಹಿಂದೆ ಓಡಾಡುವಾಗ, ಅಲ್ಲೊಂದು ಕುತೂಹಲಕರವಾದ ವಿಷಯ ಗಮನಕ್ಕೆ ಬಂದಿತು.

PC : The News Minute

ಒಂದು ಹೊಲದ ಬಳಿ ಸಣ್ಣ ಗುಡಿಯಿದ್ದು ಅದಕ್ಕೆ ಮದ್ದಿನ ಗೌರಮ್ಮನ ಗುಡಿ ಎಂದು ಕರೆಯುತ್ತಿದ್ದರು. ಅಲ್ಲಿದ್ದ ರೈತನೊಬ್ಬ, ಇವಳು ತಾಯಿ ದೇವರು, ಇನ್ನೊಂದು ಹೊಲದ ಬಳಿ ಇವಳ ಮಗಳಿದ್ದಾಳೆ ಅವಳು ಮದ್ದೀರಮ್ಮಾ ಎಂದು ತಿಳಿಸಿದ. ನಾನು ಎರಡೂ ಗುಡಿಗಳನ್ನು ಸಂದರ್ಶಿಸಿದೆ. ಗರ್ಭಗುಡಿಯಲ್ಲಿ ದೇವಿ ಎಂದು ಕರೆಯುವ ಸುಮಾರು ಒಂದು ಅಡಿ ಉದ್ದಕ್ಕೆ ನಿಲ್ಲಿಸಿರುವ ಮೂರ್‍ನಾಲ್ಕು ಕಲ್ಲುಗಳನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಮದ್ದಿನ ಗೌರಮ್ಮ ಎಂದು ಕರೆಯುವ ಒಂದೇ ದೇವಿಯ ಹೆಸರಿದ್ದರೂ ಮೂರ್‍ನಾಲ್ಕು ಕಲ್ಲುಗಳಿವೆ. ಆ ಕಲ್ಲುಗಳಲ್ಲಿ ಯಾವುದು ಮದ್ದಿನ ಗೌರಮ್ಮ ಎಂಬುದು ನನ್ನ ಪ್ರಶ್ನೆಯಾಯಿತು. ಮದ್ದೀರಮ್ಮನ ಗುಡಿಯಲ್ಲಿಯೂ ಅದೇ ರೀತಿ ಮೂರು ಕಲ್ಲುಗಳಿದ್ದವು. ಅಲ್ಲಿ ಕೃಷಿಕರಾಗಿರುವ ಜಯಣ್ಣ ಎಂಬುವರು ನನ್ನ ಜೊತೆಗೆ ಮಾತಾಡುತ್ತಾ ನನ್ನ ಪ್ರಶ್ನೆಗೆ ನೆರವಾಗುವಂತಹ ಕೆಲವು ಸುಳುಹುಗಳನ್ನು ಕೊಟ್ಟರು.

ಒಟ್ಟಾರೆ ನಾನಲ್ಲಿ ಗ್ರಹಿಸಿದ್ದೇನೆಂದರೆ, ಜಯಣ್ಣನವರ ತಾತ ಮುತ್ತಾತಂದಿರ ಕಾಲದಲ್ಲಿ ಗೌರಮ್ಮ ಎಂಬಾಕೆ ಅಲ್ಲಿನ ಸಾಮಾನ್ಯ ರೋಗಗಳಿಗೆ, ಜಡ್ಡುಗಳಿಗೆ ಔಷಧಿ ಕೊಡುತ್ತಿದ್ದಳು. ಆಕೆಯನ್ನು ಮದ್ದಿನ ಗೌರಮ್ಮ ಎಂದೇ ಕರೆಯುತ್ತಿದ್ದರು. ಆಕೆ ಕಾಲವಾದ ನಂತರ ಆಕೆ ಮದ್ದನ್ನು ಅರೆಯಲು ಉಪಯೋಗಿಸುತ್ತಿದ್ದ ಕಲ್ಲುಗಳನ್ನು ಆಕೆಯ ನಂತರದವರು ಪೂಜಿಸುತ್ತಿದ್ದರು. ಪ್ರಾಯಶಃ ಆಕೆಯನ್ನು ಹೂತು ಹಾಕಿದ ಸಮಾಧಿಯ ಮೇಲೆ ಅದೇ ಕಲ್ಲುಗಳನ್ನು ನಿಲ್ಲಿಸಿದ್ದಿರಬೇಕು. ಅದೇ ರೀತಿಯಾಗಿ ಆಕೆಯ ಮಗಳು ಈರಮ್ಮನೂ ತನ್ನ ತಾಯಿಯ ವೈದ್ಯ ವೃತ್ತಿಯನ್ನು ಮುಂದುವರಿಸಿದ್ದಳು. ಅವಳಿಗೆ ಮದ್ದಿನ ಈರಮ್ಮ ಎಂದು ಕರೆಯುತ್ತಿದ್ದರು. ತನ್ನ ಗಂಡನು ಕಾಲನಾದ ಮೇಲೆ ಮಕ್ಕಳಿಲ್ಲದ ಈ ತಾಯಿಯು ಕಾಡೆಲ್ಲಾ ಸುತ್ತಿಕೊಂಡು ಗಿಡಮೂಲಿಕೆಗಳನ್ನು ಸಂಗ್ರಹಿಸಿ ತರುತ್ತಿದ್ದಳಂತೆ. ಅಂತೆಯೇ ಯಾರೇ ಯಾವುದೇ ಕಾಯಿಲೆಯಿಂದ ನರಳುತ್ತಾ ಬಂದರೆ ತನ್ನ ಕೈಲಾದಂತೆ ಮದ್ದು ಮಾಡಿ ಗುಣಪಡಿಸುತ್ತಿದ್ದಳಂತೆ. ಗಂಡ ಹೆಂಡತಿಯರು ದಾಂಪತ್ಯದಲ್ಲಿ ಹೊಂದಾಣಿಕೆಯಿಲ್ಲದಿದ್ದರೂ ಅದಕ್ಕೂ ಒಂದು ಮಾಟದ ಬಳ್ಳಿಯ ತುಂಡೊಂದನ್ನು ಕೊಡುತ್ತಿದ್ದಳಂತೆ. ಹಾಗೆಯೇ ಕಾಡಿನಲ್ಲಿ ಓಡಾಡುವಾಗ ಯಾವುದೋ ಒಂದು ಬಗೆಯ ಬಳ್ಳಿಯನ್ನು ತುಳಿದುಬಿಟ್ಟರೆ ದಾರಿ ತಪ್ಪಿ ಹೋಗುವುದಂತೆ, ಅದಕ್ಕಾಗಿ ಅಂತಹ ಬಳ್ಳಿಗಳನ್ನು ಹುಡುಕಿ ಅವುಗಳನ್ನು ಕಣಿವೆಯಲ್ಲಿ ಹಾಕಿ ಬರುತ್ತಿದ್ದಳಂತೆ. ಈರಮ್ಮನಿಗೆ ಮಾತ್ರ ಈ ಬಳ್ಳಿ ದಾರಿ ತಪ್ಪಿಸುತ್ತಿರಲಿಲ್ಲವಂತೆ. ಆಕೆಯ ಕಾಲಾನಂತರ ಆಕೆಯ ಸಮಾಧಿಯ ಮೇಲೋ ಅಥವಾ ಆಕೆಯ ನೆನಪಿನಿಂದಲೋ ಆಕೆಯು ಅರೆಯುತ್ತಿದ್ದ ಮದ್ದಿನ ಕಲ್ಲುಗಳನ್ನೇ ಮದ್ದಿನ ಈರಮ್ಮ ಎಂದು ಪೂಜಿಸುತ್ತಿದ್ದರಂತೆ. ಅವಳನ್ನು ಈಗ ಕರೆಯುವುದು ಮದ್ದೀರಮ್ಮ ಎಂದು.

ಈ ಕಥೆಗಳ ಪ್ಲೇಗಮ್ಮ, ಸಿಡುಬಿನ ದೇವಿಯಾದ ಅಣ್ಣಮ್ಮ ಅಥವಾ ದೇವಿಯರು ಯಾವ ರೀತಿಯಲ್ಲಿ ನಮ್ಮ ಸಂಪ್ರದಾಯದಲ್ಲಿ ನುಸುಳಿರಬಹುದೆಂದು ವಿಚಾರಿಸಲು ಸೂಕ್ತ ಅಸ್ತಿಭಾರವನ್ನು ನೀಡುತ್ತವೆ. ಗ್ರಾಮ್ಯ ಪ್ರದೇಶಗಳಲ್ಲಿನ ಕೆಲವು ತಾಯಂದಿರು ನಿಸ್ವಾರ್ಥವಾಗಿ ಕೆಲವು ಖಾಯಿಲೆಗಳಿಗೆ ಮದ್ದು ನೀಡುತ್ತಾ ಉಪಚರಿಸುತ್ತಿದ್ದು, ಅವರ ನಂತರ ಅವರ ಸಮಾಧಿಗಳನ್ನೋ, ಅಥವಾ ಅವರ ನೆನಪಲ್ಲಿ ಅವರು ಮದ್ದರೆಯಲು ಉಪಯೋಗಿಸುತ್ತಿದ್ದ ಕಲ್ಲುಗಳನ್ನೋ ಪೂಜಿಸುತ್ತಿದ್ದು, ಕಾಲಾನಂತರ ಸಂಪ್ರದಾಯಗಳೊಳಗೆ ಅಥವಾ ನಂಬಿಕೆಗಳೊಳಗೆ ಹಾಸು ಹೊಕ್ಕಾಗಿರುವ ಸಾಧ್ಯತೆಗಳುಂಟು. ಅಂತಹ ಮದ್ದನ್ನು ನೀಡುವ ಮಹಿಳೆಯರು ಕೆಲವರು ಸಿಡುಬಿಗೆ ಅಥವಾ ಪ್ಲೇಗಿಗೂ ಮದ್ದು ಮಾಡುತಲಿದ್ದು, ಅವರ ನಂತರ ಅವರ ಕಲ್ಲುಗಳು ಅವರ ಹೆಸರಿಂದ ಪೂಜಿಸಲ್ಪಡುತ್ತಾ ಗೌರವಕ್ಕೆ ಒಳಗಾಗುತ್ತಿದ್ದವು.

ಮದ್ದಿನ ಗೌರಮ್ಮ, ಮದ್ದೀರಮ್ಮ, ಮಾರಮ್ಮ, ಅಣ್ಣಮ್ಮ; ಈ ಯಾವುದೇ ದೇವಿಯರನ್ನು ಮೂಲಸ್ಥಾನದಲ್ಲಿ ನೋಡಿದರೆ, ಅಲ್ಲಿರುವುದು ಬರಿಯ ಚೌಕ ಅಥವಾ ಆಯತಾಕಾರದ ಕಲ್ಲುಗಳೇ. ಅವುಗಳು ಒಂದೋ ಮದ್ದಿನ ಕಲ್ಲುಗಳಂತೆ ಕಂಡರೆ, ಕೆಲವು ಸಮಾಧಿಯ ಮೇಲೆ ನೆಡುವ ಕಲ್ಲುಗಳ ಹಾಗೆ ತೋರುತ್ತವೆ.

ಸತ್ತವರನ್ನು ಪೂಜಿಸುತ್ತಾ ಬರುವ ಸಂಸ್ಕೃತಿಯೂ ಕೂಡ ಇಂಥಾ ದೇವಿಯರ ಉಗಮಕ್ಕೆ ಹಲವು ಕಾರಣಗಳಲ್ಲಿ ಒಂದು. ಹಾಗೆಯೇ ಇವರನ್ನು ಮೌಖಿಕ ಪರಂಪರೆಯಲ್ಲಿ ಜೀವಂತವಾಗಿರಿಸುವಾಗ ವೈದಿಕರಿಗೆ ಅಥವಾ ಶಿಷ್ಟ ಸಮಾಜದ ಅಕ್ಷರಸ್ಥರಿಗೆ ಇವರು ಅಷ್ಟೇನೂ ಆಸಕ್ತಿಯ ವಿಷಯವಾಗಿರಲಿಲ್ಲ. ಭಕ್ತಿ ಗೌರವವೂ ಇರಲಿಲ್ಲ. ಹೆಚ್ಚೆಂದರೆ ಅವರು ಇವರನ್ನು ಕ್ಷುದ್ರ ದೇವತೆಗಳ ಪಟ್ಟಿಗೆ ಸೇರಿಸಿ ಕೈ ಬಿಟ್ಟಿದ್ದರು. ನಂತರ ವಿದೇಶಿಯರ ಆಗಮನವಾದ ಮೇಲೆ ಅವರು ಸ್ಥಳೀಯ ಇತಿಹಾಸ-ಪುರಾಣ ಸಂಗ್ರಹಿಸಲು ತೊಡಗಿದಾಗ, ಇವುಗಳ ಬಗ್ಗೆ ಲಿಖಿತ ದಾಖಲೆಗಳು ಇಲ್ಲದ ಕಾರಣ ಕೇಳುಗರನ್ನು ಅವಲಂಬಿಸಬೇಕಾಗಿತ್ತು. ಅವರಿಗೆ ತಮ್ಮ ಪರಂಪರೆಯ ಇತಿಹಾಸ ಹೇಳುವಂತವರೂ ತಮಗೆ ತೋಚಿದಂತೆ ಹೇಳಿತ್ತಿದ್ದರು. ಅವರ ಜ್ಞಾನದ ಪರಿಮಿತಿಯಲ್ಲಿ ವಿವರಿಸುತ್ತಿದ್ದರು.

ಜೀಗನ್ ಬಾಲ್ಗ್ ಎಂಬ ಜರ್ಮನಿಯ ಕ್ರೈಸ್ತ ಪಾದ್ರಿಯು ಮತಾಂತರ ಮಾಡುವ ಉದ್ದೇಶದಿಂದ ಬಂದಿದ್ದವನು ತನ್ನ ಆಸಕ್ತಿಯಿಂದ ಇಂಥಾ ದೇವತೆಗಳ ಬಗ್ಗೆ ವಿವರವನ್ನು ಸಂಗ್ರಹಿಸಿ ಒಂದು ಉಪಕಾರ ಮಾಡಿದ. ಆದರೆ, ತನ್ನ ಪೀಠಿಕೆಯಲ್ಲಿ, “ಜಗತ್‌ರಕ್ಷಕನಾದ ಕ್ರಿಸ್ತನು ಇಲ್ಲಿಯ ಜನ ಪೂಜಿಸುತ್ತಿರುವ ಹುಚ್ಚು ದೇವರುಗಳನ್ನು ನಾಶಮಾಡಲಿ” ಎಂದು ಹೇಳುವುದರಲ್ಲಿ ನಮ್ಮ ಸ್ಥಳೀಯ ದೈವೀ ಅಮ್ಮಂದಿರ ಬಗ್ಗೆ ಅವನ ಧೋರಣೆ ಅರ್ಥವಾಗುತ್ತದೆ. ನಿಮ್ಮ ಶತ್ರುವನ್ನೂ ಪ್ರೀತಿಸಿ ಎಂದು ಸಾರಿದ ಕ್ರಿಸ್ತನು ಈ ದೇವತೆಗಳನ್ನೆಲ್ಲಾ ಹೇಗೆ ನಾಶ ಮಾಡಿಯಾನು ಎಂಬುದನ್ನೂ ಅವನು ತಿಳಿಯದವನು. ಅವನಷ್ಟೇ ಮೂರ್ಖರು ಗೊರವನಹಳ್ಳಿಯ ಒಂದು ಮುಗ್ಧೆಗೆ ಲಕ್ಷ್ಮೀದೇವಿಯ ಪಟ್ಟಕಟ್ಟಿ ಅದನ್ನೊಂದು ಪುಣ್ಯ ಕ್ಷೇತ್ರವಾಗಿಸಿದವರು.

ಹಳೆಯ ಹೆಸರುಗಳನ್ನು ಮರೆಮಾಚುವ ಮೂಲಕ ಮೂಲ ಚರಿತ್ರೆಯನ್ನೂ ಮರೆಸುವ ಪ್ರಯತ್ನ ನಡೆದೇ ಇದೆ. ಪೊಲೆಯರು ಮೂಲದ ಹೊಲೆಯರು ಮತ್ತು ಮಾದಿಗರ ಮೂಲದವರೇ ಅನೇಕ ಕಡೆ ಭೂಮಿಯನ್ನು ಪಾಲಿಸುತ್ತಿದ್ದವರು. ಅವರೇ ಸ್ಥಳೀಯ ದೊರೆಗಳಾಗಿದ್ದವರು. ಅವರ ಕುಟುಂಬಗಳು ಇರುತ್ತಿದ್ದ ಕೇರಿಗಳು ಮಾದಿಗರ ಕೇರಿಗಳಾಗಿದ್ದು, ಹೊಲಗೇರಿಗಳಾಗಿ ಅಸ್ಪೃಶ್ಯವಾಗಿದ್ದು ಅದೆಂತಹ ಭಯಂಕರ ರಾಜಕೀಯ ಹುನ್ನಾರಗಳಿಂದಾಗಿದ್ದಿರಬಹುದು! ಮೈಸೂರಿನ ಜಯಲಕ್ಷ್ಮಿಪುರಂ ಈ ಮೊದಲು ಆಗಿದ್ದದ್ದು ಹೊಲೆಯರ ಕೇರಿ, ಲಕ್ಷ್ಮೇಶ್ವರ ಮೂಲ ಹೆಸರು ಹೊಲಗೇರಿ, ರಾಣೆಬೆನ್ನೂರಿನ ಬಳಿಯ ಹಲಗೇರಿಯು ಈ ಮುನ್ನ ಹೊಲಗೇರಿಯಾಗಿತ್ತು. ಕನಕಪುರದ ಬಳಿ ಹಣಕಡಬೂರು ಕೂಡ ಹೊಲಗೇರಿ, ಮಳವಳ್ಳಿಯಲ್ಲಿ ಕೀರ್ತಿನಗರವು ಚಿಕ್ಕ ಹೊಲಗೇರಿ, ಸಿದ್ಧಾರ್ಥ ನಗರ ದೊಡ್ಡ ಹೊಲಗೇರಿ. ವೈದಿಕ ಬ್ರಾಹ್ಮಣ್ಯದ ಪುರೋಹಿತಶಾಹಿ ಮತ್ತು ಇತರ ಶಿಷ್ಟ ಸಮಾಜದ ಧುರೀಣರು ಹುಟ್ಟು ಹಾಕಿದ ಕೀಳರಿಮೆಯಿಂದಾಗಿ ಸಂಕೋಚಿತರಾಗಿ ಹೊಲಗೇರಿಯನ್ನು ಹಲಗೇರಿಯನ್ನಾಗಿಸುವುದೋ, ಗಿಡ್ಡಮ್ಮನನ್ನು ಲಕ್ಷೀದೇವಿಯನ್ನಾಗಿಸಿಕೊಳ್ಳುವುದೋ ಸ್ವಾಭಿಮಾನ ಧಕ್ಕೆಯ ವಿಷಯ. ಅದಿರಲಿ, ನಾಗರಹೊಳೆಯ ಅರಣ್ಯವು, ಅಲ್ಲಿನ ಹಳೆಯ ಬುಡಕಟ್ಟುಗಳಿಂದ, ಜನರಿಂದ ನಾಗರಹೊಳೆಯಾಗಿದ್ದು, ಅದರ ಹೆಸರು ಈಗ ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ!! ಏನನ್ನೋಣ ಇದಕ್ಕೆ!

ಮೂಲತಃ ಜಾನಪದ ವಿದ್ಯಾರ್ಥಿಯಾದ ಡಾ ಸಿದ್ಧಲಿಂಗಯ್ಯನವರ ಈ ಕೃತಿಯು ನಿಜಕ್ಕೂ ನಮ್ಮ ನೆಲ ಮೂಲದ ತಾಯ್ತನದ ಮೌಲ್ಯವನ್ನು ಎತ್ತಿ ಹಿಡಿಯುವಂತದ್ದು.


ಇದನ್ನೂ ಓದಿ: ನೂರರ ನೋಟ; ದೊಡ್ಡರಂಗೇಗೌಡರು ಆತ್ಮಾವಲೋಕನ ಮಾಡಿಕೊಳ್ಳಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...