Homeಮುಖಪುಟತೆಲಂಗಾಣ: ‘ಜೈ ಶ್ರೀರಾಮ್’ ಕೂಗುವಂತೆ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ, ಘಟನೆಯಲ್ಲಿ ಸಿಲುಕಿದ ಮಹಿಳೆಗೆ ಗರ್ಭಪಾತ

ತೆಲಂಗಾಣ: ‘ಜೈ ಶ್ರೀರಾಮ್’ ಕೂಗುವಂತೆ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ, ಘಟನೆಯಲ್ಲಿ ಸಿಲುಕಿದ ಮಹಿಳೆಗೆ ಗರ್ಭಪಾತ

- Advertisement -
- Advertisement -

‘ಜೈ ಶ್ರೀ ರಾಮ್’ ಎಂದು ಕೂಗುತ್ತಾ ಬಲಪಂಥೀಯ ಕಾರ್ಯಕರ್ತರ ಗುಂಪೊಂದು ಮುಸ್ಲಿಂ ವ್ಯಕ್ತಿಯನ್ನು ಬರ್ಬರವಾಗಿ ಥಳಿಸಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.

ಮೇದಕ್ ಜಿಲ್ಲೆಯ ನರಸಾಪುರ ಪ್ರದೇಶದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದ್ದು, ಥಳಿತಕ್ಕೊಳಗಾದ ವ್ಯಕ್ತಿಯನ್ನು ಇಮ್ರಾನ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಡೀ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಎಲ್‌ಪಿಜಿ ಸಿಲಿಂಡರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಲಿಂಗಂ ಎಂಬವರೊಂದಿಗೆ ಇಮ್ರಾನ್ ಜಗಳವಾಡಿದ ಬಳಿಕ ಈ ಬೆಳವಣಿಗೆಯಾಗಿದೆ. ಇಬ್ಬರ ನಡುವೆ ವಾಗ್ವಾದ ಶುರುವಾದ ನಂತರ ಬಂದ ಕೇಸರಿ ವಸ್ತ್ರಧಾರಿಗಳು ಇಮ್ರಾನ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಈ ಘಟನೆಯು ಮೇ 7 ರಂದು ನಡೆದಿದೆ ಎಂದು ವರದಿಯಾಗಿದೆ ಮತ್ತು ಅದರ ವೀಡಿಯೊ ಇತ್ತೀಚೆಗೆ ವೈರಲ್ ಆಗಿದೆ.

“ಲಿಂಗಂ ಅವರು ತುಂಬಿದ ಎಲ್ಪಿಜಿ ಸಿಲಿಂಡರ್ ಅನ್ನು ಪೂರೈಸಲು ಇಮ್ರಾನ್ ಅವರ ನಿವಾಸಕ್ಕೆ ಹೋಗಿದ್ದರು. ಸಿಲಿಂಡರ್ ವಿತರಿಸುವಾಗ ಲಿಂಗಂ ಖಾಲಿ ಸಿಲಿಂಡರ್ ಕೇಳಿದ್ದು, ಇಮ್ರಾನ್ ಕುಟುಂಬ ನಿರಾಕರಿಸಿದೆ. ನಾಳೆ ಕೊಡುವುದಾಗಿ ತಿಳಿಸಿದ್ದು, ಆ ಬಳಿಕ ವಾಗ್ವಾದವಾಗಿದೆ” ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಇಬ್ಬರ ನಡುವೆ ಜಗಳವಾಯಿತು. ಹನುಮ ಮಾಲೆ ಧರಿಸಿದ್ದ ಲಿಂಗಂ ಅವರಿಗೆ ಇಮ್ರಾನ್‌ ಹೊಡೆದಿದ್ದಾರೆಂದು ಹೇಳಲಾಗುತ್ತಿದೆ. ಬಳಿಕ ಲಿಂಗಂ ಇಲ್ಲಿಂದ ತೆರಳಿದರು. ನಂತರ ಬಂದ ಕೇಸರಿ ವಸ್ತ್ರಧಾರಿಗಳು ಇಮ್ರಾನ್‌ ಅವರನ್ನು ಮನೆಯಿಂದ ಹೊರಗೆ ಎಳೆದು ಸಾರ್ವಜನಿಕವಾಗಿಯೇ ಥಳಿಸಿದ್ದಾರೆ. ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಬೆದರಿಕೆ ಹಾಕಿದ್ದಾರೆ. ಸುತ್ತುವರಿದು ‘ಜೈ ಶ್ರೀರಾಮ್‌’ ಎನ್ನುತ್ತಾ ಇಮ್ರಾನ್ ಅವರ ವಸ್ತ್ರ ಕಳಚುವ ದುಷ್ಕೃತ್ಯಕ್ಕೂ ಕೈ ಹಾಕಿರುವುದು ವಿಡಿಯೊದಲ್ಲಿ ದಾಖಲಾಗಿದೆ.

“ಇಮ್ರಾನ್ ಕೋಪದ ಭರದಲ್ಲಿ ತನ್ನ ಪಾದರಕ್ಷೆಯಿಂದ ಲಿಂಗಮ್‌ಗೆ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಅಸಮಾಧಾನಗೊಂಡ ಲಿಂಗಂ ಸಮೀಪದ ದೇವಸ್ಥಾನದಲ್ಲಿ ಹನುಮ ಮಾಲೆ ಕಾರ್ಯಕ್ರಮದಲ್ಲಿದ್ದ ಇತರರಿಗೆ ದೂರು ನೀಡಿದರು. ಇಮ್ರಾನ್‌ ಮನೆಗೆ ಬಂದ ಗುಂಪು ಇಮ್ರಾನ್‌ ಅವರ ತಾಯಿಯ ಮನವಿಯನ್ನು ನಿರ್ಲಕ್ಷಿಸಿ, ಇಮ್ರಾನ್‌ ಅವರನ್ನು ಮನೆಯಿಂದ ಹೊರಗೆ ಎಳೆದೊಯ್ದು ರಸ್ತೆಯಲ್ಲಿ ಥಳಿಸಿದೆ” ಎಂದು ಪೊಲೀಸರು ತಿಳಿಸಿರುವುದಾಗಿ ‘ದಿ ಕ್ವಿಂಟ್’ ವರದಿ ಮಾಡಿದೆ.

“ಸುಮಾರು 10-15 ಜನರು ಸುತ್ತುವರಿದಿದ್ದರು. ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಲು ಆರಂಭಿಸಿದರು. ಇಮ್ರಾನ್ ಅವರ ತಾಯಿ ಮತ್ತು ಗರ್ಭಿಣಿ ಸಹೋದರಿ ಮಧ್ಯದಲ್ಲಿ ಸಿಕ್ಕಿಬಿದ್ದರು. ಜಗಳದ ಬಗ್ಗೆ ಮಾಹಿತಿ ಪಡೆದ ನಾವು 10-15 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದೆವು. ಇಮ್ರಾನ್ ಮತ್ತು ಇತರರನ್ನು ಕಸ್ಟಡಿಗೆ ತೆಗೆದುಕೊಂಡೆವು” ಎಂದು ಸಿಐ ಮಝರ್ ಮಾಹಿತಿ ನೀಡಿದ್ದಾರೆ.

“ನರಸಾಪುರ ಪೊಲೀಸರು ಇಮ್ರಾನ್ ವಿರುದ್ಧ ಸೆಕ್ಷನ್ 295 (ಧರ್ಮಕ್ಕೆ ಅವಮಾನ) ಮತ್ತು ಹಲ್ಲೆ ನಡೆಸಿದ ಗುಂಪಿನ 10-15 ಜನರ ವಿರುದ್ಧ ಸೆಕ್ಷನ್ 341 (ತಪ್ಪು ಸಂಯಮ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 506 (ಘೋರವಾದ ಗಾಯವನ್ನು ಉಂಟುಮಾಡುವ ಬೆದರಿಕೆ), 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.”

ಇದು ಧಾರ್ಮಿಕ ವಿಷಯವಾಗಿ ಪರಿಣಮಿಸುತ್ತದೆ ಎಂಬ ಆಧಾರದ ಮೇಲೆ ಪೊಲೀಸರು ಇಮ್ರಾನ್‌ನನ್ನು ಮಾತ್ರ ಬಂಧಿಸಿದರು. ಅವರನ್ನು ಕಸ್ಟಡಿಗೆ ತೆಗೆದುಕೊಂಡರು. ಉಳಿದವರೆಲ್ಲರಿಗೂ ನೋಟಿಸ್ ಜಾರಿ ಮಾಡಿ ಬಿಟ್ಟು ಕಳುಹಿಸಿದರು ಎಂದು ‘ಕ್ವಿಂಟ್‌’ ವರದಿ ಮಾಡಿದೆ.

ಇಮ್ರಾನ್ ಸಹೋದರಿಗೆ ಗರ್ಭಪಾತ

ಇಮ್ರಾನ್ ಅವರನ್ನು ಬಲ ಪಂಥೀಯ ಗುಂಪು ಥಳಿಸುತ್ತಿದ್ದಾಗ ಇಮ್ರಾನ್ ಅವರ ಗರ್ಭಿಣಿ ಸಹೋದರಿ ಆಯೇಷಾ ಕೂಡ ಮಧ್ಯಪ್ರವೇಶಿಸಿದ್ದಾರೆ. ತುಂಬು ಗರ್ಭಿಯನ್ನೂ ದುಷ್ಕರ್ಮಿಗಳು ತಳ್ಳಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಈ ಘಟನೆಯಿಂದಾಗಿ ಇಮ್ರಾನ್‌ ಸಹೋದರಿಗೆ ಗರ್ಭಪಾತವಾಗಿದೆ. ಹಸುಗೂಸು ತೀರಿ ಹೋಗಿದೆ ಎಂದು ವರದಿಯಾಗಿದೆ. ಅವರು ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಗೆ ದಾಖಲಾಗಿದ್ದರು. ಮಗು ಬ್ರೇನ್‌ ಡೆಡ್‌ನಿಂದ ಸತ್ತಿದೆ ಎಂದು ಹೇಳಲಾಗುತ್ತಿದೆ. ನಿಖರ ಕಾರಣ ಸ್ಪಷ್ಟವಾಗಿಲ್ಲ.

ಇದನ್ನೂ ಓದಿರಿ: ನ್ಯಾಯಾಂಗ ನಿಂದನೆ; ದೆಹಲಿ ಹೈಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ಇಮ್ರಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನರಸಾಪುರ ಪೊಲೀಸ್ ಠಾಣೆಯ ಹೊರಗೆ ಬಲಪಂಥೀಯ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ಘಟನೆಯೂ ವರದಿಯಾಗಿದೆ.

“ಲಿಂಗಮ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪೊಲೀಸರು ಇದೀಗ ಇಮ್ರಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಮ್ರಾನ್ ಮೇಲೆ ಹಲ್ಲೆ ನಡೆಸಿದ ಬಲಪಂಥೀಯ ಕಾರ್ಯಕರ್ತರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಎರಡೂ ಕಡೆಯವರ ಮೇಲೆ ಕ್ರಮ ಕೈಗೊಳ್ಳಲಾಗಿದೆ” ಎಂದು ಡಿಎಸ್ಪಿ ತೂಪ್ರಾನ್ ಹೇಳಿದ್ದಾರೆ.

ಈ ಘಟನೆಯ ಕುರಿತು ಟ್ವೀಟ್ ಮಾಡಿರುವ ತೆಲಂಗಾಣದ ಮುಸ್ಲಿಂ ರಾಜಕೀಯ ಪಕ್ಷವಾದ ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ಅಧ್ಯಕ್ಷ ಅಮ್ಜೆದ್ ಉಲ್ಲಾ ಖಾನ್, “ದಾಳಿಯಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಬಂಧಿಸಬೇಕು ಮತ್ತು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯಲ್ಲಿ ದಾಖಲೆಯ 52.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು

0
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 52.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ದೆಹಲಿಯ ಮುಂಗೇಶ್‌ಪುರದ ಹವಾಮಾನ ಕೇಂದ್ರವು ಮಧ್ಯಾಹ್ನ 2.30ಕ್ಕೆ 52.3 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಭಾರತದ ಇದುವರೆಗಿನ ಅತ್ಯಂತ ಬಿಸಿಯಾದ ದಿನವನ್ನು ದಾಖಲಿಸಿದೆ....