Homeಕರ್ನಾಟಕಪಠ್ಯಪುಸ್ತಕ ಪರಿಷ್ಕರಣೆ ವಿಚಾರ: ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದ ಸಿಎಂ...

ಪಠ್ಯಪುಸ್ತಕ ಪರಿಷ್ಕರಣೆ ವಿಚಾರ: ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಭಾರೀ ವಿವಾದ ಹುಟ್ಟುಹಾಕಿತ್ತು. ರೋಹಿತ್ ಚಕ್ರತೀರ್ಥ ಎನ್ನುವವರ ಮುಂದಾಳತ್ವದಲ್ಲಿ ನಡೆದ ಪರಿಷ್ಕರಣೆಯಲ್ಲಿ ಪಠ್ಯದಲ್ಲಿ ಅನೇಕ ಮುಖ್ಯವಾದ ವಿಚಾರಗಳನ್ನು ಕೈ ಬಿಟ್ಟು ಅನಗತ್ಯ ವಿಚಾರಗಳನ್ನು ಸೇರಿಸಲಾಗಿದೆ ಎಂದು ನಾಡಿನ ಸಾಹಿತಿಗಳು, ವಿಚಾರವಂತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಪಠ್ಯಪುಸ್ತಕ ಪರಿಷ್ಕರಣೆಗೆ ತಕ್ಷಣವೇ ಸಮಿತಿ ರಚಿಸಬೇಕು ಎಂದು ಸಮಾನ ಮನಸ್ಕರ ಒಕ್ಕೂಟ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದ ಹಿರಿಯ ಸಾಹಿತಿ, ಕಲಾವಿದರು, ಇಂದಿನ ಬದಲಾವಣೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲು ಕೂಡಲೇ ಒಂದು ತಜ್ಞರ ಸಮಿತಿಯನ್ನು ರಚಿಸಬೇಕು’ ಎಂದು ಸಮಾನ ಮನಸ್ಥರ ಒಕ್ಕೂಟದ ಮುಖಂಡರಾದ ಡಾ. ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಪ್ರೊ.ರವಿವರ್ಮಕುಮಾರ್, ಪ್ರೊ. ನಿರಂಜನಾರಾಧ್ಯ, ಡಾ.ವಸುಂಧರ ಭೂಪತಿ ಸೇರಿದಂತೆ ಹಿರಿಯ ಸಾಹಿತಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆಗೆ ತಕ್ಷಣವೇ ಸಮಿತಿ ರಚಿಸಲು 'ಸಮಾನ ಮನಸ್ಕರ ಒಕ್ಕೂಟ'ದಿಂದ ಸಿಎಂಗೆ ಮನವಿ - Varthabharati

”ಬಿಜೆಪಿ ಸರಕಾರವು ಶಿಕ್ಷಣವನ್ನು ಸಂಪೂರ್ಣ ರಾಜಕಾರಣಕ್ಕೆ ಬಳಸಿಕೊಂಡು, ಗೊಂದಲವನ್ನು ಸೃಷ್ಟಿಸಿತ್ತು. ಈಗಾಗಲೇ ಮುದ್ರಣವಾಗಿ ಶಾಲೆಗಳಿಗೆ ತಲುಪಿರುವ ಕಲುಷಿತ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಬಾರದು. ಬದಲಾದ ಪ್ರಮುಖ ಪಾಠಗಳನ್ನು ಮತ್ತು ಕಲಿಕಾಂಶಗಳನ್ನು ಈ ಪುಸ್ತಕಗಳಿಂದ ತೆಗೆದು ಹಾಕಿ ವಿತರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ, ಡಾ.ಜಾಫೆಟ್, ರುದ್ರಪ್ಪ ಹನಗವಾಡಿ, ಪ್ರೊ. ಎಲ್.ಎನ್.ಮುಕುಂದರಾಜ್, ಕೆ.ಶರೀಫಾ, ಕೆ.ಎಸ್.ವಿಮಲಾ, ಡಾ.ಲೀಲಾ ಸಂಪಿಗೆ, ಶ್ರೀಪಾದಭಟ್, ಎ.ಕೆ.ಕರುಣಾಕರ, ಎಚ್‌. ಆರ್.ಜಯರಾಮ್, ಬಿ.ಎ.ನರಸಿಂಹನ್, ಕೆ.ಸುದೀಶ್, ಡಾ.ಗಿರೀಶ್ ಮೂಡ್, ದಿನೇಶ್ ಅಮಿನ್ ಮಟ್ಟು, ಸುರೇಂದ್ರ ರಾವ್, ಜಿ.ಶರಣಪ್ಪ ರಾಜೇಂದ್ರ ಸಿಂಗ್ ಬಾಬು, ಎನ್. ಹನುಮೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆಗೊಂಡ ಪಠ್ಯಪುಸ್ತಕ ರದ್ದು ಮಾಡಿ, ರೋಹಿತ್ ಚಕ್ರತೀರ್ಥ ವಿರುದ್ದ ಕ್ರಮ ಕೈಗೊಳ್ಳಿ: ಸಿಎಂಗೆ ಶಿಕ್ಷಣ ತಜ್ಞರಿಂದ ಪತ್ರ

ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಬಿಜೆಪಿ ಮಾಡಿದ ಎಡವಟ್ಟುಗಳು

ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಶೀಲನೆಗಾಗಿ ರಚಿಸಿದ್ದ ಸಮಿತಿಯು, ತನ್ನ ಮಿತಿಯನ್ನು ಮೀರಿ ತಿರುಚಿದ ಇತಿಹಾಸ ಹಾಗೂ ಜಗತ್ತಿಗೆ ಕೊಡುಗೆ ನೀಡಿದ ದಾರ್ಶನಿಕರ ಪಾಠಗಳಿಗೆ ಕತ್ತರಿ ಹಾಕಿ ಪಠ್ಯವನ್ನು ಪರಿಷ್ಕರಿಸಿತ್ತು.

2019ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಎಸ್. ಸುರೇಶ್‌ಕುಮಾರ್ ಅವರು, ಪಠ್ಯಪುಸ್ತಕ ಪರಿಶೀಲನೆಗಾಗಿ ಶಿಕ್ಷಣ ತಜ್ಞರೇ ಅಲ್ಲದ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು.

ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು, ಪಠ್ಯ ಪರಿಷ್ಕರಣೆ ಹೊಣೆಯನ್ನೂ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿಗೆ ವಹಿಸಿದ್ದರು. ಸಮಿತಿ ನೀಡಿದ್ದ ಸಲಹೆ ಆಧರಿಸಿ, ಪಠ್ಯಗಳನ್ನು ಪರಿಷ್ಕರಣೆ ಮಾಡಿ, ತರಾತುರಿಯಲ್ಲಿ ಮುದ್ರಣಕ್ಕೂ ಕಳುಹಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಅನೇಕ ಲೇಖಕರು, ಸಾಹಿತಿಗಳು ತಮ್ಮ ಕವಿತೆ, ಲೇಖನಗಳನ್ನು ವಾಪಸ್‌ ಪಡೆದಿದ್ದರು. ವಿವಾದ ಭುಗಿಲೆದ್ದ ಅವಧಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ನಾಗೇಶ್, ಚಕ್ರತೀರ್ಥ ಅವರನ್ನು ‘ಐಐಟಿ ಪ್ರೊಫೆಸರ್ ಎಂದು ಸಮರ್ಥಿಸಿಕೊಂಡಿದ್ದು ಅಪಹಾಸ್ಯಕ್ಕೆ ಈಡಾಗಿತ್ತು.

ಪಠ್ಯಪುಸ್ತಕ ಪರಿಷ್ಕರಣೆ ವರದಿ; ರೋಹಿತ್‌ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಾಠಾಂಶ ಅಳವಡಿಕೆಗೆ ಆದೇಶ – The File

ಈ ಪಠ್ಯಪುಸ್ತಕ ಪರಿಷ್ಕರಣೆಯನ್ನು ತೀವ್ರವಾಗಿ ಖಂಡಿಸಿದ್ದ ಅಂದಿನ ವಿರೋಧ ಪಕ್ಷ ಕಾಂಗ್ರೆಸ್, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಅಲ್ಲದೇ, ವೈಜ್ಞಾನಿಕ ಮನೋಭಾವ ಬೆಳೆಸುವ ಪಠ್ಯವನ್ನು ಸೇರಿಸಲಾಗುವುದು ಎಂದೂ ಪ್ರತಿಪಾದಿಸಿತ್ತು. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿದ ಆಂದೋಲನದಲ್ಲಿ ಸಕ್ರಿಯರಾಗಿದ್ದ ಅನೇಕರು, ಚುನಾವಣೆ ವೇಳೆ ಸಮಾನ ಮನಸ್ಕರ ಒಕ್ಕೂಟವನ್ನು ರಚಿಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಮವಾರ ಭೇಟಿ ಮಾಡಿದ ಒಕ್ಕೂಟದ ಪ್ರಮುಖರಿದ್ದ ನಿಯೋಗ, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯವನ್ನೇ ಮುಂದುವರಿಸುವಂತೆ ಮನವಿ ಮಾಡಿದೆ.

ಸಿದ್ದರಾಮಯ್ಯ ಪ್ರತಿಕ್ರಿಯೆ:

”ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯಕ್ಕೆ ಅವಕಾಶ ನೀಡುವುದಿಲ್ಲ. ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಈ ಬಗ್ಗೆ ಪ್ರೊ.ಬರಗೂರು ರಾಮಚಂದ್ರಪ್ಪ ತಮ್ಮ ಅನಿಸಿಕೆ ತಿಳಿಸಿದ್ದು, ”ಪರಿಷ್ಕೃತ ಪಠ್ಯಪುಸ್ತಕಗಳು ಈಗಾಗಲೇ ಮುದ್ರಣಗೊಂಡು ಶಾಲೆಗಳನ್ನು ತಲುಪಿರುವುದರಿಂದ ಈ ಹಂತದಲ್ಲಿ ಬದಲಾವಣೆ ಅಥವಾ ಪರಿಷ್ಕರಣೆ ಕಾರ್ಯಸಾಧುವಲ್ಲ. ಕೊಟ್ಟ ಮಾತೂ ಉಳಿಯಬೇಕು. ಯಡವಟ್ಟುಗಳೂ ಸರಿಯಾಗಬೇಕು”ಎಂದು ಹೇಳಿದ್ದಾರೆ.

”ಪಠ್ಯಪುಸ್ತಕ ಪರಿಷ್ಕರಣೆ ಸುದೀರ್ಘ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಮರುಮುದ್ರಣವೂ ವೆಚ್ಚದಾಯಕ. ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಈಗ ಅಂತಹ ಸಾಹಸ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಸದ್ಯಕ್ಕೆ ಪಠ್ಯಪುಸ್ತಕದಲ್ಲಿರುವ ಸಾಮಾಜಿಕ, ಪ್ರಾದೇಶಕ ಅಸಮಾನತೆಗೆ ಕಾರಣವಾದ ಕೆಲ ಪಾಠಗಳನ್ನು ಕೈಬಿಟ್ಟು, ಪೂರಕವಾದ ಕೆಲ ಪಾಠಗಳನ್ನು ಸೇರಿಸಿಕೊಂಡು ಪಾಠ ಮಾಡಲು ಸುತ್ತೋಲೆ ಹೊರಡಿಸಬೇಕು. ಮಹಾರಾಷ್ಟ್ರದಲ್ಲಿರುವಂತೆ ವಿಷಯ ತಜ್ಞರು, ಅಧಿಕಾರಿಗಳನ್ನು ಒಳಗೊಂಡ ಶಾಶ್ವತವಾದ ಪಠ್ಯಪುಸ್ತಕ ಆಯೋಗ ಅಥವಾ ಪ್ರಾಧಿಕಾರ ರಚಿಸಬೇಕು. ಭವಿಷ್ಯದಲ್ಲಿ ಪಠ್ಯಪುಸ್ತಕಗಳು ಯಾವುದೇ ಪಕ್ಷದ ಪುಸ್ತಕಗಳಾಗದಂತೆ ಕಾನೂನು ರೂಪಿಸಬೇಕು” ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕೇರಳದ ಕಾಂಗ್ರೆಸ್ ನಾಯಕ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ರಾ?

0
ಕೇರಳದ ಕಾಂಗ್ರೆಸ್ ನಾಯಕ ಪಿ.ಸಿ ಜಾರ್ಜ್ ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಲ ಪಂಥೀಯ ಎಕ್ಸ್ ಬಳಕೆದಾರ 'ಜಿತೇಂದ್ರ ಪ್ರತಾಪ್ ಸಿಂಗ್' ವಿಡಿಯೋ ಹಂಚಿಕೊಂಡಿದ್ದು, "...