Homeಕರ್ನಾಟಕಶರಣ ಚಳವಳಿ ನುಡಿ ಬಳಕೆಯ ಪಾಠಗಳು ಮತ್ತು ಕನ್ನಡ ರಾಶ್ಟ್ರೀಯತೆ: ಡಾ.ರಂಗನಾಥ್ ಕಂಟನಕುಂಟೆ

ಶರಣ ಚಳವಳಿ ನುಡಿ ಬಳಕೆಯ ಪಾಠಗಳು ಮತ್ತು ಕನ್ನಡ ರಾಶ್ಟ್ರೀಯತೆ: ಡಾ.ರಂಗನಾಥ್ ಕಂಟನಕುಂಟೆ

ಪ್ರತಿವ್ಯಕ್ತಿಯ ಉಸಿರು ಆಯಾ ವ್ಯಕ್ತಿಯ ಅಸ್ತಿತ್ವವಾಗಿರುವಂತೆ, ‘ನುಡಿ’ ಒಂದು ಸಮುದಾಯದ ಉಸಿರು. ಅದಿಲ್ಲದೆ ಯಾವುದೇ ಸಮುದಾಯಕ್ಕೆ ಜೀವಂತಿಕೆ ಮತ್ತು ನಿರ್ದಿಶ್ಟ ಅಸ್ಮಿತೆಯೇ ಇರುವುದಿಲ್ಲ.

- Advertisement -
- Advertisement -

(ಸೂ: ಹೊಸ ಬರಹದ ಪ್ರಕಾರ ಕನ್ನಡ ಮಾತಿನ ಉಚ್ಚಾರಣೆಗೆ ಒಗ್ಗುವಂತೆ ಇಲ್ಲಿ ಬರೆವಣಿಗೆಯನ್ನು ವಿಭಿನ್ನವಾಗಿ ಬಳಸಲಾಗಿದೆ)

‘ನುಡಿ’ ಒಂದು ಸಾಮುದಾಯಿಕ ಉಸಿರಾಟ. ಪ್ರತಿವ್ಯಕ್ತಿಯ ಉಸಿರು ಆಯಾ ವ್ಯಕ್ತಿಯ ಅಸ್ತಿತ್ವವಾಗಿರುವಂತೆ, ‘ನುಡಿ’ ಒಂದು ಸಮುದಾಯದ ಉಸಿರು. ಅದಿಲ್ಲದೆ ಯಾವುದೇ ಸಮುದಾಯಕ್ಕೆ ಜೀವಂತಿಕೆ ಮತ್ತು ನಿರ್ದಿಶ್ಟ ಅಸ್ಮಿತೆಯೇ ಇರುವುದಿಲ್ಲ. ನಮ್ಮಂತಹ ದೇಶದಲ್ಲಿ ಜಾತಿ, ಧರ್ಮ, ಕಸುಬು, ವರ್ಗ, ಪ್ರದೇಶ ಇತ್ಯಾದಿಗಳ ಆಧಾರದ ಮೇಲೆ ಸಮುದಾಯಗಳನ್ನು ಗುರುತಿಸಲಾಗುತ್ತದೆ. ಆದರೆ ಈ ಗುರುತುಗಳು ಸಮಾಜವನ್ನು ಬೇರ್ಪಡಿಸುತ್ತವೆ. ಇವು ದ್ವೇಶ, ಅಸಮಾನತೆ ಮತ್ತು ಪರಸ್ಪರ ತರತಮವನ್ನು ಸೃಶ್ಟಿಸುತ್ತವೆ.

ಆದರೆ ಒಂದು ನಿರ್ದಿಶ್ಟ ಭೂಪ್ರದೇಶದಲ್ಲಿ ಬಾಳ್ವೆ ನಡೆಸುತ್ತ ಬಂದ ಹಲವು ಸಮುದಾಯಗಳನ್ನು ಒಂದು ಸಮಾಜವಾಗಿ, ರಾಶ್ಟ್ರವಾಗಿ, ರಾಶ್ಟ್ರೀಯತೆಯಾಗಿ ಗುರುತಿಸಲು ಕಾರಣವಾಗುವುದು ನುಡಿ. ಮತ್ತು ಅಂತಹ ಪ್ರಯತ್ನಗಳಿಗೆ ಶಕ್ತಿ ತಂದುಕೊಡುವುದು ನುಡಿ. ಅಲ್ಲದೆ ಸಮುದಾಯಗಳಿಗೆ ರಾಜಕೀಯ ಆರ್ಥಿಕ, ಸಾಂಸ್ಕೃತಿಕ ಸ್ವಾಯತ್ತತೆ ಹಾಗೂ ಸಾರ್ವಭೌಮತ್ವದ ಅಧಿಕಾರ ಪ್ರಾಪ್ತವಾಗುವುದು ನುಡಿಯಿಂದಲೇ ಆಗಿರುತ್ತದೆ. ಅಂದರೆ ‘ರಾಶ್ಟ್ರೀಯತೆ’ ಪರಿಕಲ್ಪನೆಯ ಮುಖ್ಯ ತಳಹದಿಯೇ ನುಡಿ. ಉದಾಹರಣೆಗೆ ಕರ್ನಾಟಕವೆಂಬ ಭೂಪ್ರದೇಶದಲ್ಲಿ ವಿವಿಧ ಜಾತಿ, ಕಸುಬು, ವರ್ಗ ಮತ್ತು ಧರ್ಮಗಳು ಕೂಡಿ ಕನ್ನಡ ಭಾಶಿಕರ ಒಂದು ಬೃಹತ್ ಸಮುದಾಯವನ್ನು ಸೃಶ್ಟಿಸಿರುವುದು ಕನ್ನಡ ಭಾಶೆ. ಇದು ಜಾತ್ಯತೀತ, ಧರ್ಮಾತೀತ ಮತ್ತು ವರ್ಗಾತೀತ ಚಹರೆಯನ್ನು ಹೊಂದಿದೆ. ಎಲ್ಲ ಜಾತಿಯ ಧರ್ಮಗಳ ವರ್ಗಗಳ ಜನರು ಕನ್ನಡವನ್ನು ಮಾತನಾಡುತ್ತಾರೆ. ಜಾತಿ ಧರ್ಮ ವರ್ಗ ಲಿಂಗಗಳನ್ನು ಆಧರಿಸಿ ‘ಭಾಶಿಕ ವ್ಯತ್ಯಾಸಗಳು’ ಕಾಣಿಸಿಕೊಂಡರೂ ಅವೆಲ್ಲ ವೈವಿದ್ಯಗಳನ್ನು ಒಳಗೊಂಡಂತಹ ‘ಒಂದು’ ಮತ್ತು ‘ಎಲ್ಲರ’ ಕನ್ನಡವನ್ನು ಊಹಿಸಿಕೊಳ್ಳಲು ಸಾಧ್ಯವಿದೆ. ಇದರ ಆಧಾರದ ಮೇಲೆಯೇ ಕರ್ನಾಟಕ ರಾಜ್ಯ ಸ್ಥಾಪನೆಯಾಗಿದೆ. ಇದನ್ನೇ ವಿಶಾಲವಾಗಿ ಮತ್ತು ತಾತ್ವಿಕವಾಗಿ ‘ಕನ್ನಡ ರಾಶ್ಟ್ರೀಯತೆ’ ಎಂಬ ಪರಿಕಲ್ಪನೆಯ ಆಧಾರದಲ್ಲಿ ವ್ಯಾಖ್ಯಾನಿಸುತ್ತ ಬರಲಾಗಿದೆ. ಇಂದು ‘ಕನ್ನಡ ರಾಶ್ಟ್ರೀಯತೆ’ಯ ಒಂದು ಚಾರಿತ್ರಿಕ ಅಸ್ಮಿತೆಯಾಗಿ ವಿಕಾಸಗೊಂಡಿದೆ. ಇದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

ಇಂದು ಕನ್ನಡ ನುಡಿ ಕರ್ನಾಟಕದ ಶೇ.65ರಶ್ಟು ಜನರ ತಾಯ್ನುಡಿಯಾಗಿ ಜಾತ್ಯತೀತ ಅಸ್ಮಿತೆಯನ್ನು ಕಲ್ಪಿಸಿಕೊಟ್ಟಿದೆ. ಜಾತಿ ಧರ್ಮಗಳಂತಹ ಉಳಿದ ಕುರುಹುಗಳು ಸಮಾಜವನ್ನು ಅಡ್ಡಡ್ಡವಾಗಿ ಮತ್ತು ಉದ್ದುದ್ದವಾಗಿ ಸೀಳುತ್ತವೆ. ಆದರೆ ಕನ್ನಡ ಭಾಶೆ ಮಾತ್ರ ಎಲ್ಲರ ಉಸಿರಾಗಿ ಕನ್ನಡಿಗರನ್ನು ಕೂಡಿಸಿದೆ; ಸಮಾನವಾಗಿಸಿದೆ ಮತ್ತು ಅವರ ನಡುವಿನ ಸಹಜ ಉಸಿರಾಗಿ ಬಳಕೆಯಾಗುತ್ತಿದೆ. ಹಾಗಾಗಿ ಇಂದು ಇಡೀ ಕರ್ನಾಟಕವನ್ನು ಅದರಾಚೆಗಿನ ಜನರನ್ನೂ ಭಾವನಾತ್ಮಕವಾಗಿ ಒಗ್ಗೂಡಿಸಿರುವುದು ಕನ್ನಡ ಭಾಶೆಯೇ ಆಗಿದೆ. ಕುವೆಂಪು ಅವರು ಹೇಳಿದಂತೆ, ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಹೇಳಿದ್ದರ ಅರ್ಥ ಇದೇ ಆಗಿದೆ. ಮತ್ತು ಕರ್ನಾಟಕವೆಂದರೆ ಅದು ಕೇವಲ ಮಣ್ಣಲ್ಲ. ಅದೊಂದು ‘ಸಂಸ್ಕೃತಿ’ ಎಂದು ಹೇಳಿದ್ದನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ.

ಹೀಗೆ ಕನ್ನಡವನ್ನು ಒಂದು ಸಂಸ್ಕೃತಿಯಾಗಿ, ಜ್ಞಾನವಾಗಿ, ರಾಶ್ಟ್ರೀಯತೆಯ ಅಸ್ಮಿತೆಯಾಗಿ ರೂಪಿಸುವ ಸಂಘಟಿತ ಪ್ರಯತ್ನಗಳನ್ನು ನಿರಂತರವಾಗಿ ಕನ್ನಡ ನುಡಿ ಸಮುದಾಯ ಮಾಡಿಕೊಂಡೇ ಬಂದಿದೆ. ವಿವಿಧ ಸಮುದಾಯಗಳನ್ನು ಒಗ್ಗೂಡಿಸಿ ಹೋರಾಡಲು ಭಾಶೆ ಅನಿವಾರ್ಯವಾಗಿ ಬೇಕಾಗುತ್ತದೆ. ಚರಿತ್ರೆಯಲ್ಲಿ ಕನ್ನಡ ಹೀಗೆ ಹಲವು ಸಮುದಾಯಗಳನ್ನು ಕೂಡಿಸಿ ‘ಕನ್ನಡ ದೇಶ’ವನ್ನು ರೂಪಿಸಿದೆ. ಹೀಗೆ ರೂಪಿಸಲು ಪ್ರಯತ್ನಿಸಿದ ಅತ್ಯುತ್ತಮ ಮಾದರಿಯೆಂದರೆ ಶರಣ ಚಳವಳಿ. ವಿವಿಧ ಜಾತಿ ಮತ್ತು ಕುಲಸಮುದಾಯಗಳು 12ನೇ ಶತಮಾನದಲ್ಲಿ ತಮ್ಮ ಸಾಮುದಾಯಿಕ ಅಭಿವ್ಯಕ್ತಿಗೆ ಕನ್ನಡ ನುಡಿಯನ್ನು ಆಯ್ಕೆ ಮಾಡಿಕೊಂಡವು. ಅಂತಹ ಒಂದು ‘ನುಡಿ’ಯಿಲ್ಲದಿದ್ದರೆ ಶರಣ ಚಳವಳಿ ಸಾಧ್ಯವಾಗುತ್ತಿರಲಿಲ್ಲ. ಜನರ ಒಗ್ಗೂಡುವಿಕೆಗೆ ಕನ್ನಡ ಅಲ್ಲದೆ ಬೇರೆ ನುಡಿ ಬಳಕೆಯಾಗಬಹುದಿತ್ತು. ಆದರೆ ಅವರು ಕನ್ನಡವನ್ನೇ ಬಳಸಿದರು. ಶರಣರಿಗೆ ಶಿವ ಸಮಾನ ಅಂಶವಾಗಿದ್ದಂತೆ, ಸಮಾನವಾಗಿದ್ದ ಮತ್ತೊಂದು ಪ್ರಮುಖ ಸಾಧನ ‘ಕನ್ನಡ ನುಡಿ’ಯೇ ಆಗಿತ್ತು. ಹಾಗಾಗಿಯೇ ಇಂದು ಕನ್ನಡವನ್ನು ಹೊರತುಪಡಿಸಿ ಶರಣರ ಚಳವಳಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿಯೇ ಲಿಂಗಾಯತ ಧರ್ಮ ‘ಕನ್ನಡದ ಧರ್ಮ’ವೂ ಆಗಿ ಬೆಳೆಯಿತು. ಅಂದರೆ ಲಿಂಗಾಯಿತ ಧರ್ಮದ ಭಾಶೆ ಕನ್ನಡವೇ ಆಗಿದೆ. ಹಾಗಾಗಿ ಅದನ್ನು ಬೇರೆ ನುಡಿಗಳಿಗೆ ಅನುವಾದಿಸಿದಂತೆ ಅದರ ಮೂಲ ಸ್ವರೂಪ ನಾಶವಾಗುತ್ತ ಕೃತಕ ಧರ್ಮವಾಗಿ ಬೆಳೆಯುತ್ತದೆ. ಇತರೆ ಸಾಂಸ್ಥಿಕ ಧರ್ಮದಂತೆಯೇ ಜಡವಾಗುತ್ತದೆ.

ಹೀಗೆ ಒಂದು ಸಮುದಾಯ ಧಾರ್ಮಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಹಿತ್ಯ-ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ, ಅತ್ಯಂತ ಪ್ರಮುಖವಾಗಿ ಮಾಡಬೇಕಾದ ಕೆಲಸವೆಂದರೆ, ನುಡಿಯನ್ನು ದೈನಂದಿನ ಬದುಕಿನ ಎಲ್ಲ ಬಗೆಯ ಅಗತ್ಯಗಳಿಗೆ ಬಳಸಬೇಕಿದೆ. ವಚನಕಾರರು ಕನ್ನಡವನ್ನು ತಮ್ಮ ಎಲ್ಲ ಉದ್ದೇಶಗಳಿಗೆ ಯಾವುದೇ ಅಂಜಿಕೆ ಕೀಳರಿಮೆಗಳಿಲ್ಲದೆ ಬಳಸಿದರು. ಹಾಗೆ ಬಳಸಿದ್ದರಿಂದಲೇ ಕರ್ನಾಟಕದಲ್ಲಿ ಮೊಟ್ಟ ಮೊದಲಿಗೆ ಜನರ ಧ್ವನಿ ಕೇಳಲು ಸಾಧ್ಯವಾಯಿತು. ಅದರಲ್ಲಿ ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೂಲ ಬೇರುಗಳು ಅಡಗಿದ್ದವು. ಗಂಡಾಳ್ವಿಕೆ ಪ್ರಶ್ನೆಗೆ ಒಳಗಾಯಿತು. ದೇವರು ಮತ್ತು ಅದರ ಸುತ್ತಲು ಬೆಳೆದಿದ್ದ ಮೌಢ್ಯಗಳು ಚರ್ಚೆಗೆ ಒಳಗಾದವು. ಪುರೋಹಿತಶಾಹಿ ಬೆತ್ತಲಾಯಿತು. ಅದರಿಂದ ಒಂದು ಆರೋಗ್ಯಕರ ಚಿಂತನಾ ಪರಂಪರೆಯ ಬೇರುಗಳು ಗಟ್ಟಿಯಾಗಿ ತಳವೂರಲು ಸಾಧ್ಯವಾಯಿತು. ಧಾರ್ಮಿಕ ಜಿಜ್ಞಾಸೆ ನಡೆಯಿತು. ಕನ್ನಡ ಸಂಸ್ಕೃತದಂತೆಯೇ ಧಾರ್ಮಿಕ ಭಾಶೆಯೂ ಆಗಿ ಬೆಳೆಯಲು ಸಾಧ್ಯವಾಯಿತು. ಇಂದು ಕನ್ನಡ ಸಾಹಿತ್ಯಿಕವಾಗಿ ವ್ಯಾಪಕವಾಗಿ ಬೆಳೆದಿದೆ. ಆದರೆ ವಿಜ್ಞಾನ ಕ್ಶೇತ್ರದ ಭಾಶೆಯಾಗಿ ಅದು ಬೆಳೆದಿಲ್ಲ. ಯಾಕೆಂದರೆ ಅದನ್ನು ವಿಜ್ಞಾನ ಕ್ಶೇತ್ರದಿಂದ ಹೊರಗಿಡಲಾಗಿದೆ. ಅದನ್ನು ಬಳಸುವವರಲ್ಲಿ ಕೀಳರಿಮೆ ತುಂಬಿರುವುದು ಮತ್ತು ಅದನ್ನು ಯಾಕೆ ಬಳಸಲೇಬೇಕಿದೆ ಎಂಬುದರ ಬಗೆಗೆ ಅರಿವಿಲ್ಲದಿರುವುದು ಕಾರಣವಾಗಿದೆ. ಅಲ್ಲದೆ ಬೇರೆ ಭಾಶೆಗಳ ಮೋಹದಲ್ಲಿ ಮುಳುಗಲಾಗಿದೆ. ಪ್ರಭುತ್ವ ಇದಕ್ಕೆ ಇಂಬು ನೀಡಿದೆ. ಹೀಗೆ ಹಲವು ಕಾರಣಗಳಿಂದ ಕನ್ನಡವನ್ನು ವಿಜ್ಞಾನ ಕ್ಶೇತ್ರದಲ್ಲಿ ಬಳಸದೇ ಇರುವುದರಿಂದ ಅದು ಬೆಳೆಯಲು ಸಾಧ್ಯವೇ ಆಗಲಿಲ್ಲ. ಅಂದರೆ ಯಾವುದೇ ವಲಯದಲ್ಲಿ ಒಂದು ಭಾಶೆ ಬೆಳೆಯಬೇಕಾದರೆ ಅದನ್ನು ಆಯಾ ಕ್ಶೇತ್ರದಲ್ಲಿ ಬಳಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಯಾವುದೇ ಅಭಿವ್ಯಕ್ತಿಗೆ ಭಾಶೆಯನ್ನು ಬಳಸಿದಂತೆಲ್ಲಾ ಆ ಭಾಶೆ ಬೆಳೆಯುತ್ತದೆ ಮತ್ತು ಆ ಭಾಶಿಕ ಪರಂಪರೆಯ ಆರೋಗ್ಯವೂ ವೃದ್ಧಿಸುತ್ತದೆ. ಅದರ ಬಾಳಿಕೆಯ ಗುಣ ಹೆಚ್ಚುತ್ತದೆ.

ಅಂದರೆ ಇಂದು ಕನ್ನಡವನ್ನು ಮತ್ತೆ ಸದೃಢವಾಗಿ ಬೆಳೆಸಬೇಕಾದರೆ, ನಾವು ವಚನಕಾರರಿಂದ ಕೆಲವು ಪಾಠಗಳನ್ನು ಕಲಿಯಬೇಕಿದೆ. ಮೊದಲೇ ಹೇಳಿದಂತೆ ನುಡಿಯನ್ನು ದೈನಂದಿನ ಅಗತ್ಯಗಳಿಗೆ ಯಾವುದೇ ಎಗ್ಗಿಲ್ಲದಂತೆ ಬಳಸಬೇಕಾಗುತ್ತದೆ. ಕನ್ನಡ ಬಳಸಬಹುದಾದ ಜಾಗದಲ್ಲಿ ಅನ್ಯನುಡಿಗಳಿಗೆ ಜಾಗ ಕಲ್ಪಿಸಬಾರದು. ಇಂದು ಹಿಂದಿ ಇಂಗ್ಲಿಶ್‍ಗಳು ಕನ್ನಡದ ಜಾಗವನ್ನು ವಶಪಡಿಸಿಕೊಳ್ಳುತ್ತಿವೆ. ವಚನಕಾರರು ಬೇರೆ ಭಾಶೆಗಳಿಗೆ ಅವಕಾಶ ನೀಡದೆ ಕನ್ನಡವನ್ನೇ ಬಳಸಿದ ಕಾರಣಕ್ಕೆ ಕನ್ನಡದ ಕಸುವು ಹೆಚ್ಚಾಗಿ ಅದು ಜನರ ನುಡಿಯಾಗಿ ಬೆಳೆಯಲು ಕಾರಣವಾಯಿತು. ಅದರ ಬದಲು ಮರಾಠಿಯನ್ನೋ, ಸಂಸ್ಕೃತವನ್ನೋ ಇಲ್ಲವೇ ಬೇರಾವುದೇ ಭಾಶೆ ಬಳಸಿದ್ದರೆ ಇಂದು ಇಡೀ ಕರ್ನಾಟಕ ಕನ್ನಡದಿಂದ ದೂರವಾಗಬೇಕಾಗಿತ್ತು. ಇವರ ನಂತರ ಬಂದ ಕೀರ್ತನಾಕಾರರು, ಅನುಭಾವಿಗಳು, ಆರೂಢರು, ಸಂತರು, ತತ್ವಪದಕಾರರು ಕನ್ನಡವನ್ನೇ ಆಯ್ಕೆ ಮಾಡಿಕೊಂಡು ಬಳಸಿದ್ದರಿಂದ ಕನ್ನಡ ಬೆಳೆದಿದೆ ಮತ್ತು ಇಂದಿಗೂ ಉಳಿದಿದೆ. ಅದಿಲ್ಲವಾಗಿದ್ದರೆ ಇಂದು ಕನ್ನಡದ ಕುರುಹೂ ಇಲ್ಲದ ಹಾಗೆ ಕಣ್ಮರೆಯಾಗುತ್ತಿತ್ತು. ಆ ಕಾಲದಲ್ಲಿ ಜನರು ತಮ್ಮ ನುಡಿಕೆಲಸವನ್ನು ಬಹಳ ಶ್ರದ್ದೆಯಿಂದ ನಿರ್ವಹಿಸಿದ್ದಾರೆ. ಈ ನೆಲದಲ್ಲಿ ಹುಟ್ಟಿ ಬೆಳೆದ ಭಕ್ತಿಚಳವಳಿಗಳು ಕನ್ನಡ ನುಡಿಯ ಏಳ್ಗೆಯಲ್ಲಿ ಮಹತ್ತವಾದ ಪಾತ್ರವಹಿಸಿವೆ. ಭಕ್ತಿ ಚಳವಳಿಯಂತೆ ಆ ಪರಂಪರೆಯ ಹಿರಿಮೆಯ ಗರಿಮೆ ಹೊಂದಿರುವ ಎಲ್ಲರೂ ತಮ್ಮ ಚಾರಿತ್ರಿಕ ಕೆಲಸವನ್ನು ನಿರ್ವಹಿಸಬೇಕಿದೆ. ಕನ್ನಡವನ್ನು ಮುಂದಿನ ಪೀಳಿಗೆಯ ಜನರಿಗೆ ಸೃಜನಶೀಲ ಶಕ್ತಿಮೂಲವಾಗಿ ಉಳಿಸಬೇಕಾಗಿದೆ. ಆದರೆ ಇಂದು ಜಾಗತಿಕ ಮಾರುಕಟ್ಟೆ, ಪ್ರಭುತ್ವಗಳು ಹಾಗೂ ವ್ಯಾಪಕವಾಗಿ ಬೆಳೆದಿರುವ ಮಧ್ಯಮ ವರ್ಗದ ನಯವಂಚಕತನದಿಂದ ಇಂದು ಕನ್ನಡ ಇಕ್ಕಟ್ಟಿಗೆ ಒಳಗಾಗಿದೆ. ತನ್ನ ಹಲವು ಬಳಕೆಯ ನೆಲೆಗಳನ್ನು ಹಿಂದಿ ಇಂಗ್ಲಿಶ್‍ಗೆ ತೆರವು ಮಾಡಿದೆ. ಡಿ. ಆರ್. ನಾಗರಾಜ ಅವರು ಹೇಳಿರುವಂತೆ ಆಳುವ ವರ್ಗ ಮತ್ತು ‘ಆತ್ಮಹೀನ’ ಕನ್ನಡದ ಮಧ್ಯಮ ವರ್ಗವೇ ಇದಕ್ಕೆ ನೇರ ಹೊಣೆ. ಹಾಗಾಗಿ ಆಳುವ ವರ್ಗ ಮತ್ತು ಮಧ್ಯಮ ವರ್ಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಲ್ಲವೇ ಅದಕ್ಕೆ ಆತ್ಮಾವಲೋಕನ ಮಾಡಿಕೊಳ್ಳವ ಹಾಗೆ ಜನರು ಮಾಡಬೇಕಿದೆ.

ಅಲ್ಲದೆ ಶರಣರು, ಜೈನ, ಬೌದ್ಧ ಮತ್ತು ವಿವಿಧ ಶೈವ ಪಂಥಗಳಿಂದ ಕಲಿಯಬೇಕಾದ ಮತ್ತೊಂದು ಪಾಠವಿದೆ. ಅದೇನೆಂದರೆ, ಜನರ ಸಮಸ್ಯೆಗಳ ಚರ್ಚೆಗಳಿಗೆ ಅಭಿವ್ಯಕ್ತಿಗೆ ಜನಭಾಶೆಗಳನ್ನು ಆಯ್ಕೆ ಮಾಡಿಕೊಳ್ಳುವುದು. ಈ ಎಲ್ಲ ಪಂಥಗಳು ತಮ್ಮ ವಿಚಾರಗಳ ಅಭಿವ್ಯಕ್ತಿಗೆ ಆಯಾ ಜನಸಮುದಾಯಗಳ ನುಡಿಗಳನ್ನು ಆಯ್ಕೆ ಮಾಡಿಕೊಂಡವೇ ಹೊರತು ಪ್ರಭುತ್ವಗಳ ಆಳುವ ವರ್ಗ ಈ ನುಡಿಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಆದರೆ ಇಂದು ನಮ್ಮಲ್ಲಿ ಜನಪರ ರಾಜಕಾರಣದ ಬಗೆಗೆ ಮಾತನಾಡುವ ಜನರು ಇಂಗ್ಲಿಶ್ ಪರವಾದ ನಿಲುವು ತಳೆಯುವುದು ವಿಚಿತ್ರವಾಗಿದೆ. ಅದರಲ್ಲಿಯೂ ಹಿಂದುಳಿದ ಮತ್ತು ದಲಿತ ಸಮುದಾಯಗಳ ಹಿನ್ನೆಲೆಯಿಂದ ಬಂದ ಚಿಂತಕರು ಹೋರಾಟಗಾರರು ಈ ಬಗೆಯಲ್ಲಿ ಆಲೋಚಿಸುವುದು ಸಮಸ್ಯೆಯೆನ್ನಿಸುತ್ತದೆ. ಅಲ್ಲದೆ ಇಂದು ಧರ್ಮದ ಆಧಾರದ ಮೇಲೆ ಸಮಾಜವನ್ನು ಚಿದ್ರಗೊಳಿಸಿರುವುದರಿಂದ ಕನ್ನಡ ನಾಡಿನ ಒಂದು ವರ್ಗದ ಜನರು ಹಿಂದಿಯ ಪರವಾಗಿ ಹಾಗೆಯೇ ಸಂಸ್ಕೃತದ ಪರವಾಗಿ ಸಮರ್ಥನೆಗೆ ಇಳಿಯುವುದನ್ನು ಗಮನಿಸಬಹುದು. ಇಂತಹ ಸಮರ್ಥನೆಗಳು ಪ್ರಭುತ್ವ ಕೇಂದ್ರಿತವಾಗಿವೆ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಅಂದರೆ ಇಂತಹ ಹುನ್ನಾರಗಳನ್ನು ಅರಿಯುತ್ತಲೇ ಜನಪರ ರಾಜಕಾರಣಕ್ಕೆ ಪರ್ಯಾಯ ಚಳವಳಿ, ಹೋರಾಟದ ಶಕ್ತಿಯಾಗಿ ಸಂಘಟನೆಯ ಸಾಧನವಾಗಿ ಜನನುಡಿಯನ್ನೇ ಆರಿಸಿಕೊಳ್ಳಬೇಕಾಗುತ್ತದೆ. ಅದರ ಮೂಲಕವೇ ಜನರನ್ನು ಸಂಘಟಿಸಬೇಕಾಗುತ್ತದೆ. ವಚನಕಾರರು ಅದನ್ನು ಮಾಡಿಸಿ ತೋರಿಸಿದ್ದಾರೆ. ಅದು ಇಂದಿಗೂ ಕೂಡ ನಮಗೆ ತೋರುದೀಪವಾಗಿದೆ.

ವಚನಕಾರರಿಂದ ನಾವು ಕಲಿಯಬೇಕಾದ ಮತ್ತೊಂದು ಪಾಠವಿದೆ. ಅದೇನೆಂದರೆ, ಅವರ ಪ್ರಕಾರ ‘ನುಡಿ’ ಕೇವಲ ಪದಗಳ ಕಂತೆಯಲ್ಲ. ಅದು ಕನ್ನಡಿಯಂತೆ ಇದ್ದು ಪಾರದರ್ಶಕವಾಗಿರಬೇಕು. ಸತ್ಯದಿಂದ ಕೂಡಿದ್ದು ಪ್ರಮಾಣವಾಗಿರಬೇಕು. ವಚನ ಎಂದರೇನೆ ‘ಪ್ರಮಾಣ’ ಮಾಡುವುದು ಎಂದರ್ಥ. ಮಾತು ದೈವಕ್ಕೆ ಸಮ. ದಾಸಿಮಯ್ಯ ‘ನಿಮ್ಮ ಶರಣರ ಸೂಳ್ನುಡಿಯನಿತ್ತಡೆ ನಿಮ್ಮನ್ನಿತ್ತೆ ಕಾಣ ರಾಮನಾಥ’ ಎನ್ನುತ್ತಾನೆ. ಅಲ್ಲಮ ‘ಮಾತೆಂಬುದು ಜ್ಯೋತಿರ್ಲಿಂಗ’ ಎನ್ನುತ್ತಾನೆ. ಬಸವಣ್ಣ ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎನ್ನುತ್ತಾನೆ. ಅಂದರೆ ನುಡಿ ಈ ನೆಲೆಗೆ ಏರಬೇಕಾದರೆ ಅದನ್ನು ನುಡಿವ ಜನರ ವ್ಯಕ್ತಿತ್ವದ ಶುದ್ಧತೆ ಬಹಳ ಮುಖ್ಯವಾಗುತ್ತದೆ. ಮಾತಿಗೆ ಬೆಲೆ ಬರುವುದೇ ಆಡುವವರ ವ್ಯಕ್ತಿತ್ವದ ಆಧಾರದ ಮೇಲೆ. ನಮ್ಮ ಸಂದರ್ಭದಲ್ಲಿ ರಾಜಕೀಯ ಮುಖಂಡರ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಯಾಕೆಂದರೆ ಅವರ ವ್ಯಕ್ತಿತ್ವದಲ್ಲಿ ದೋಶಗಳು ಮತ್ತು ಭ್ರಶ್ಟತೆಯ ಆರೋಪಗಳಿರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಡೆನುಡಿಗಳ ನಡುವೆ ಬಿರುಕು ಇರುವುದರಿಂದ ಅವರನ್ನು ನಂಬುವುದಿಲ್ಲ. ಅಲ್ಲದೇ ಸುಳ್ಳಿನ ಮೂಲಕವೇ ಲೋಕವನ್ನು ಗೆಲ್ಲುವ ಹಠಕ್ಕೆ ಬಿದ್ದಿರುವ ‘ವಿಶ್ವಗುರು’ಗಳು ಅಧಿಕಾರದಲ್ಲಿರುವಾಗ ಮಾತು ಅರ್ಥ ಕಳೆದುಕೊಳ್ಳುತ್ತದೆ. ಅದು ಲೊಳಲೊಟ್ಟೆಯಾಗುತ್ತದೆ. ಹಾಗಾಗಿ ಅದಕ್ಕೆ ಬೆಲೆ ಬರಬೇಕಾದರೆ ಅದನ್ನು ಬಳಸುವ ವ್ಯಕ್ತಿಗಳ ವ್ಯಕ್ತಿತ್ವ ಪಾರದರ್ಶಕವಾಗಿರಬೇಕು. ನಡೆನುಡಿ ಒಂದಾಗಿರಬೇಕು. ಬಸವಣ್ಣ, ದಾಸಿಮಯ್ಯ, ಅಲ್ಲಮ ಮತ್ತು ಗಾಂಧಿ ಮೊದಲಾದವು ಅಂತಹ ಪಾರದರ್ಶಕ ನುಡಿಯ ಬಗೆಗೆ ಗಂಭೀರವಾಗಿ ಆಲೋಚಿಸಿದ್ದರು.

PC : Lingayat Religion

ಆದರೆ ಇಂದಿನ ಸಾರ್ವಜನಿಕ ಭಾಶೆ ಮಲಿನವಾಗಿದೆ ಮತ್ತು ವಿಶಕಾರಿಯಾಗಿ ಬದಲಾಗಿದೆ. ಇಂದು ವಕ್ರ ಉದ್ದೇಶಗಳಿಗೆ ಕನ್ನಡ ಬಳಕೆಯಾಗುತ್ತಿರುವುದರಿಂದ ಕನ್ನಡದ ಸೃಜನಶೀಲ ಗುಣ ಸಾಯುತ್ತಿದೆ. ವಚನಕಾರರು ಸದಾಶಯಗಳ ಅಭಿವ್ಯಕ್ತಿಗೆ ಬಳಸಿಕ ಕಾರಣ ಕನ್ನಡ ನುಡಿ ಪಾರದರ್ಶಕವಾಗಿ ವಚನದ ಭಾಶೆ ಬೆಳೆದಿತ್ತು. ಸಂಸ್ಕೃತ ಮಾತಿನ ಮರೆಯಾಗಿದ್ದ ಕಾರಣ ಅದು ವಚನಕಾರರಿಂದಲೇ ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಹಾಗಾಗಿ ಇಂದು ಕನ್ನಡವೂ ತನ್ನೆಲ್ಲ ಸಾಧ್ಯತೆಗಳಲ್ಲಿ ಬೆಳೆಯಬೇಕಾದರೆ ಅದರ ಬಳಕೆ ವ್ಯಾಪಕವಾಗಬೇಕಿದೆ. ಮತ್ತು ಅದನ್ನು ಕುವೆಂಪು ಅವರ ಹಾಗೆ, ವಚನಕಾರರ ಹಾಗೆ ಬಳಸಬೇಕು. ಅವರ ಆಶಯ ಉದಾತ್ತವಾಗಿದ್ದ ಕಾರಣ ಕನ್ನಡವೂ ಉದ್ದಾತ್ತವಾಗಿ ಬೆಳೆಯಿತು. ಇದಕ್ಕೆ ತದ್ವಿರುದ್ಧ ಉದಾಹರಣೆಯೆಂಬಂತೆ ಕಾದಂಬರಿಕಾರ ಎಸ್.ಎಲ್. ಬೈರಪ್ಪ ಅವರು ಕನ್ನಡ ಬಳಸುತ್ತಾರೆ ಮತ್ತು ಕನ್ನಡ ಪರ ಕಾಳಜಿ ವ್ಯಕ್ತಪಡಿಸುತ್ತಾರೆ. ಅವರ ಆಶಯ ಉದಾತ್ತವಾಗಿಲ್ಲದೆ ಸಂಕುಚಿತ ಮತ್ತು ಮತೀಯವಾಗಿರುವುದರಿಂದ ಅವರ ಕನ್ನಡ ನುಡಿ ನಂಜಿನದಾಗಿರುತ್ತದೆ. ಅವರು ನಂಜನ್ನು ದಾಟಿಸುವ ಲೇಖಕರಾಗಿಬಿಡುತ್ತಾರೆ. ಇದರಿಂದ ಬಿಡುಗಡೆ ಪಡೆಯಬೇಕಾದ ಅನಿವಾರ್ಯತೆಯಿದೆ. ಅದಾಗದ ಹೊರತು ಭಾಶೆಯ ಮೇಲೆ ಯಾರಿಗೂ ವಿಶ್ವಾಸವೇ ಮೂಡುವುದಿಲ್ಲ.

ಹಾಗಾಗಿ ಇಂದು ಬದಲಿ ಮಾರ್ಗಗಳನ್ನು ಶೋಧಿಸುವ ಚಿಂತಕರು, ಚಳವಳಿಕಾರರು ಯಾರೇ ಆದರೂ ಜನನುಡಿ ಮತ್ತು ಪಾರದರ್ಶಕ ನುಡಿಗಳನ್ನು ರೂಪಿಸಿ ಬಳಸಬೇಕಾಗುತ್ತದೆ. ನಡೆನುಡಿ ಒಂದಾಗಿರಬೇಕಾಗುತ್ತದೆ. ಅಂತಹ ನುಡಿ ದೊರೆಯದ ಹೊರತು ಸಮಾಜದಲ್ಲಿ ಹೊಸತನ ತರಲು, ಜನರಲ್ಲಿ ವಿಶ್ವಾಸ ಮೂಡಿಸಲು ಸಾಧ್ಯವೇ ಇಲ್ಲ.

ಹೊಸ ಸಮಾಜದ ನಿರ್ಮಾಣವೂ ಸಾಧ್ಯವಾಗುವುದಿಲ್ಲ. ಹೊಸ ಸಮಾಜಕ್ಕೆ ಹೊಸದೇ ನುಡಿಗಟ್ಟು ಮತ್ತು ನುಡಿ ಬೇಕಾಗಿರುತ್ತದೆ. ಅಲ್ಲದೆ ಪಾರದರ್ಶಕ ನುಡಿಯನ್ನು ನಾಶ ಮಾಡುವುದೇ ಪುರೋಹಿತಶಾಹಿಯ, ಪ್ರಭುತ್ವದ ಮತ್ತು ಆಳುವ ವರ್ಗಗಳ ಉದ್ದೇಶವಾಗಿರುವುದರಿಂದ ಇದು ಬಹುದೊಡ್ಡ ಸವಾಲಿನ ಕೆಲಸ.

ಇಂದು ಭಾಶೆಯನ್ನು ಸುಳ್ಳುಗಳಿಂದ ಮತ್ತು ನಂಜಿನ ವಿಚಾರಗಳಿಂದ ತುಂಬಿಸಿಬಿಟ್ಟಿರುವುದರಿಂದ ಇದನ್ನು ತೊಳೆಯಲೇಬೇಕಾದ ಅಗತ್ಯವಿದೆ. ಅಂದರೆ ಸುಳ್ಳಿಗೆ ಬದಲು ಸತ್ಯವನ್ನು ಹೆಚ್ಚೆಚ್ಚು ಜನರು ಮಾತನಾಡಬೇಕು. ನಂಜಿನ ಮಾತುಗಳಿಗಿಂತ ಪ್ರೇಮದ ಭಾಶೆಯನ್ನು ಹೆಚ್ಚು ಬಳಸಬೇಕು. ವಿಭಜನೆಯ ಮಾತುಗಳಿಗೆ ಬದಲಾಗಿ ಕೂಡುವಿಕೆಯ ಸಹಬಾಳ್ವೆಯ ಮಾತುಗಳನ್ನಾಡಬೇಕು ಹಾಗೂ ಅದರಂತೆ ಜೀವಿಸಬೇಕು. ಜೀವನದ ಜೊತೆಗೆ ಹೊಸ ಭಾಶೆಯೂ ಹುಟ್ಟುತ್ತದೆ. ಅದು ನಿಧಾನವಾಗಿ ಜನರ ಮನಸ್ಸಿಗೆ ಇಳಿದಾಗ ಸಹನೀಯವಾಗುತ್ತದೆ. ನುಡಿ ಪಾರದರ್ಶಕ ಮತ್ತು ಸೃಜನಶೀಲವಾಗುತ್ತದೆ. ಆದರೆ ಸತ್ಯವನ್ನೇ ನುಡಿಯಲು ಅಂಜುವ ನೆಲದಲ್ಲಿ ಹೊಸನುಡಿ ಹುಟ್ಟಲು ಸಾಧ್ಯವೇ ಇಲ್ಲ. ಇಂದು ಬದಲಿ ಸಮಾಜ ಸೃಶ್ಟಿಯ ಮತ್ತು ಜನತೆಯ ರಾಜಕಾರಣ ಮಾಡಲು ಇಚ್ಚೆಯುಳ್ಳ ಎಲ್ಲರೂ ಶರಣರಂತೆ ಲೋಕ ವಿರೋಧಿಗಳಾಗಿ ನಿರ್ಭೀತರಾಗಿ ನುಡಿಯಬೇಕಿದೆ. ಆ ಮೂಲಕ ತಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನೇ ಬಳಸಬೇಕು ಹಾಗೂ ನನ್ನಿಯ ಮಾತುಗಳನ್ನೇ ಆಡಬೇಕಾಗುತ್ತದೆ. ನಡೆನುಡಿಗಳ ನಡುವೆ ಕಂದಕವಿಲ್ಲದಂತೆ ಜೀವಿಸಬೇಕಾಗುತ್ತದೆ. ಆಗಮಾತ್ರವೇ ಕನ್ನಡಕ್ಕೆ ಕನ್ನಡದ ಬದುಕಿಗೆ ಹೊಸ ಚೈತನ್ಯ ತರಲು ಸಾಧ್ಯವಾಗುತ್ತದೆ. ಕನ್ನಡದ ಸುಸ್ಥಿರ ಮತ್ತು ಬಾಳಿಕೆ ಗುಣ ಹೆಚ್ಚಿಸಲು ಸಾಧ್ಯವಾಗುತ್ತದೆ.

ರಂಗನಾಥ ಕಂಟನಕುಂಟೆ

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ರಂಗನಾಥ ಕಂಟನಕುಂಟೆ ಹೊಸ ತಲೆಮಾರಿನ ಚಿಂತಕ ಮತ್ತು ಕವಿ. ಹಂಪಿ ವಿಶ್ವವಿದ್ಯಾಲಯದಿಂದ ಜನಭಾಷೆ ಮತ್ತು ಪ್ರಭುತ್ವದ ಬಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಲ್ಲಿ ಪಿಎಚ್‍ಡಿ ಅಧ್ಯಯನ ಮಾಡಿದ್ದಾರೆ. ‘ಓದಿನ ಜಾಡು’, ‘ತೀರದ ನಡಿಗೆ’, ‘ಗೋಡೆಯ ಚಿತ್ರ’ ರಂಗನಾಥ ಅವರ ಕೆಲವು ಪುಸ್ತಕಗಳು.


ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...