ಕಳೆದ ವರ್ಷ ಕೋವಿಡ್‌ನಿಂದ ಬೇರೆ ಬೇರೆ ದೇಶಗಳು ಆಕ್ಸಿಜನ್‌ ಕೊರತೆ ಸಮಸ್ಯೆಯನ್ನು ಎದುರಿಸಿದ್ದವು. ಇದನ್ನರಿತ್ತಿದ್ದ ಭಾರತವು ಕೂಡ ಕೋವಿಡ್‌ ಎರಡನೇ ಅಲೆಯನ್ನು ಎದುರಿಸಲು ಸಮರ್ಪಕ ತಯಾರಿ ಮಾಡಿಕೊಳ್ಳದೇ ಇರುವುದು ಸರ್ಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಪ್ರಸಾದ್‌ ಗ್ಯಾಸ್‌ ಸಪ್ಲೈಯರ್ಸ್‌ ಮಾಲೀಕರು ಮತ್ತು ಸಂಕಥನದ ಸಂಪಾದಕರಾಗಿರುವ ರಾಜೇಂದ್ರ ಪ್ರಸಾದ್‌ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಜನಾರೋಗ್ಯ ಚಳವಳಿ ಸಂಘಟನೆಯು ಕರ್ನಾಟಕ ಕೋವಿಡ್‌ ವಾಲೆಂಟಿಯರ್ಸ್‌ ಟೀಮ್‌ ಮತ್ತು ಜನಸಹಾಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ `ಆಕ್ಸಿಜನ್‌ ಸಮಸ್ಯೆಯ ಮೂಲ ಎಲ್ಲಿದೆ?’ ವೆಬಿನಾರ್ ಮತ್ತು ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಮೊದಲಿನಿಂದಲೂ ಆಕ್ಸಿಜನ್ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತಲೇ ಬಂದಿದೆ. ದೇಶದ ಬೇರೆ ಬೇರೆ ರಾಜ್ಯಗಳು ಕೋವಿಡ್‌ ಎರಡನೇ ಅಲೆ ಎದುರಿಸಲು ಪೂರ್ವ ಸಿದ್ಧತೆ ನಡೆಸಿದ್ದವು. ಆದರೆ ನಮ್ಮ ರಾಜ್ಯ ಸರ್ಕಾರವು ಈ ಕುರಿತು ಯಾವುದೇ ಪೂರ್ವ ಸಿದ್ಧತೆ ನಡೆಸಿಲ್ಲದೇ ಇರುವುದು ಕೋವಿಡ್‌ ಪಿಡುಗು ಹೆಚ್ಚಾಗಲು ಕಾರಣವಾಯಿತು ಎಂದರು.

ಕೋವಿಡ್‌ ಎರಡನೇ ಅಲೆ ಉಲ್ಬಣಗೊಂಡ ಸಮಯದಲ್ಲಾದರೂ ಬೇರೆ ಬೇರೆ ದೇಶಗಳಿಂದ ಆಕ್ಸಿಜನ್‌ ಕಾನ್ಸಟ್ರೇಟರ್‌, ಸಿಲೆಂಡರ್‌ಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ಆದರೆ ಸರ್ಕಾರವು ತಾನೂ ಮಾಡಲಿಲ್ಲ, ಬದಲಿಗೆ ಸಾರ್ವಜನಿಕರು ಸೇವೆ ಮಾಡುತ್ತಿರುವಾಗ ಅವರಿಗೆ ಜಿಎಸ್‌ಟಿಯನ್ನು ವಿಧಿಸುತ್ತಾ ಸಮಸ್ಯೆ ಮಾಡುತ್ತಿದೆ ಎಂದರು.

ಕೋವಿಡ್‌ ಪೂರ್ವಸಿದ್ಧತೆಯಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿರುವ ಆಕ್ಸಿಜನ್‌ ಘಟಕಗಳನ್ನು ಸೋಂಕಿತರಿಗೆ ಅನುಗುಣವಾಗಿ ವಿವಿಧ ಜಿಲ್ಲೆಗಳಿಗೆ ವಿತರಣೆ ಮಾಡಬಹುದಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಯಾವುದೇ ಮುನ್ನೋಟ ಇರದೇ ಇದ್ದ ಕಾರಣ ಚಾಮರಾಜನಗರದಂತಹ ದುರ್ಘಟನೆ ನಡೆಯಲು ಕಾರಣವಾಗಿದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಹಲವು ಸೌಲಭ್ಯಗಳು ಇರುವಾಗಲೂ ತೀರಾ ಸಮಸ್ಯೆ ಉಂಟಾಗಿರುವಾಗ ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳೇ ಇಲ್ಲದೇ ಇರುವ ಉತ್ತರ ಕರ್ನಾಟಕದಲ್ಲಿ ಕೋವಿಡ್‌ ಸಾಂಕ್ರಾಮಿಕವನ್ನು ಹೇಗೆ ಎದುರಿಸುತ್ತಾರೆ ಎಂದು ಅವರು ಪ್ರಶ್ನಿಸಿದರು.

ಆಮ್ಲಜನಕದ ನ್ಯಾಯಯುತ ವಿತರಣೆ ಕೇಂದ್ರ ಸರ್ಕಾರದಿಂದ ಸಾಧ್ಯವಿಲ್ಲವೆಂದು ಅರಿತ ಸುಪ್ರೀಂ ಕೋರ್ಟ್ ತಾನು ಆ ಹೊಣೆಯನ್ನು ಟಾಸ್ಕ್ ಫೋರ್ಸ್ ಸಮಿತಿಗೆ ನೀಡಿದೆ. ಆದರೆ ಅಲ್ಲಿಯೂ ಆಮ್ಲಜನಕ ಉತ್ಪಾದನೆ, ವಿತರಣೆ ಕುರಿತು ತಜ್ಞರು ಇಲ್ಲ. ನಮ್ಮ ರಾಜ್ಯ ಸರ್ಕಾರ ಕೂಡ ಈ ವಿಚಾರದಲ್ಲಿ ತಜ್ಞರನ್ನು ಪರಿಗಣಿಸುತ್ತಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಕಾರ್ಯೋನ್ಮುಖವಾಗಬೇಕು. ಕೋವಿಡ್‌ ಎರಡನೇ ಅಲೆ ಶಿಖರ ಮುಟ್ಟಿರುವ ಇಂದಿನ ದಿನಗಳಲ್ಲಿ ಮುಂಬರುವ ಕೋವಿಡ್‌ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಲೇಬೇಕು. ಈಗಲಾದರೂ ಜಿಲ್ಲೆ, ತಾಲ್ಲೂಕು ಹೋಬಳಿ ಮಟ್ಟದಲ್ಲಿ ಪರಿಣಿತರ ಸಮಿತಿ ರಚಿಸಿ ಎಲ್ಲರಿಗೂ ಎಲ್ಲಾ ಜಿಲ್ಲೆಗಳಿಗೂ ಲಿಕ್ವಿಡ್‌ ರೂಪದ ಆಕ್ಸಿಜನ್‌ ಬಳಕೆಗೆ ಸಿಗುವಂತೆ ಮಾಡಬೇಕು. ಸಾಧ್ಯವಾದಲ್ಲಿ ವಿದೇಶಗಳಿಂದ ಆಕ್ಸಿಜನ್‌ ಕಾನ್ಸಂಟ್ರೇಟರ್‌, ಸಿಲೆಂಡರ್‌ಗಳನ್ನು ಆಮದು ಮಾಡಿಕೊಳ್ಳಬೇಕು. ಖಾಸಗಿ ಸಹಭಾಗಿತ್ವದಲ್ಲಿ ಈಗಲಾದರೂ ಆಕ್ಸಿಜನ್‌ ಕಾನ್ಸಟ್ರೇಟರ್‌ಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರದ ಪ್ರಯತ್ನ ಮಾತ್ರವಲ್ಲದೇ ಸಾಮುದಾಯಿಕ ಪ್ರಯತ್ನಗಳು ಕೂಡ ಆಗಬೇಕಿದ್ದು, ಗ್ರಾಮೀಣ ಭಾಗದಲ್ಲಿರುವ ಸಮುದಾಯ ಭವನ, ಕಲ್ಯಾಣ ಮಂಟಪಗಳನ್ನು ಕೋವಿಡ್‌ ಸೆಂಟರ್‌ಗಳಾಗಿ ಪುನರ್‌ಸ್ಥಾಪಿಸಬೇಕು. ಇಬ್ಬರು ಸೋಂಕಿತರಿಗೆ ಒಂದು ಸಿಲೆಂಡರ್‌ನಂತೆ ಆಕ್ಸಿಜನ್‌ ಪೂರೈಸಿದಲ್ಲಿ ಸೋಂಕಿತರ ಆರೋಗ್ಯ ಸುಧಾರಿಸುವಂತೆ ನೋಡಿಕೊಳ್ಳಬಹುದು. ಸಿಖ್‌ ಸಮುದಾಯವು ಗುರುದ್ವಾರಗಳಲ್ಲಿ ಆಕ್ಸಿಜನ್‌ ಬೆಡ್‌ಗಳನ್ನು ಸ್ಥಾಪಿಸಿರುವುದು ಸಾಮುದಾಯಿಕ ಪ್ರಯತ್ನಕ್ಕೆ ಉದಾಹರಣೆಯಾಗಿದೆ ಎಂದರು.

ಸರ್ಕಾರ ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕಿತ್ತು. ಆಕ್ಸಿಜನ್‌ ಕಾನ್ಸಟ್ರೇಟರ್‌, ಆಕ್ಸಿಜನ್‌ ಸಿಲೆಂಡರ್‌ ತರಿಬೇಕಾದದ್ದು, ಸರ್ಕಾರದ ಜವಾಬ್ದಾರಿಯಾಗಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜನರು ಸಾಯುತ್ತಿರುವುದನ್ನು ನಾವು ನೋಡಿದ್ದೇವೆ. ನಾಗರೀಕರಾಗಿ ಈ ಹೊಣೆಯನ್ನು ನಾವು ನಮ್ಮ ಮೇಲೆ ಹಾಕಿಕೊಂಡು ಕೆಲಸ ಮಾಡುತ್ತಿದ್ದೇವೆ. ಎರಡು ಮತ್ತು ಮೂರನೇ ಅಲೆ ನಡುವೆ ಹೆಚ್ಚು ಸಮಯವಿಲ್ಲದೇ ಇರುವುದರಿಂದ ಸರ್ಕಾರವು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವಂತೆ ನಾಗರೀಕರಾಗಿ ನಾವು ಒತ್ತಾಯಿಸಬೇಕು ಎಂದು ಕರ್ನಾಟಕ ಜನಾರೋಗ್ಯ ಚಳವಳಿಯ ಡಾ. ಅಖಿಲಾ ವಾಸನ್‌ ಅಭಿಪ್ರಾಯಪಟ್ಟರು.

ಪ್ರಸ್ತುತ ಬೆಂಗಳೂರಿನಲ್ಲಿ ಉಂಟಾಗಿರುವ ಆರೋಗ್ಯ ಬಿಕ್ಕಟ್ಟು ಜಿಲ್ಲಾ ಮಟ್ಟದಲ್ಲಿಯೂ ಆರಂಭವಾಗಿವೆ. ನಾವು ಬೆಂಗಳೂರು ಮಾತ್ರವಲ್ಲದೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಆರೋಗ್ಯ ಅವ್ಯವಸ್ಥೆಯನ್ನು ಬಯಲಿಗೆಳೆದು, ಅದನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಬೇಕು ಎಂದು ಅವರು ತಿಳಿಸಿದರು.

ಡಾ. ವಾಸು ಎಚ್.ವಿ ಅವರು ಮಾತನಾಡಿ “ಕಳೆದ ವರ್ಷವೇ ತಜ್ಞರು ಎರಡನೇ ಅಲೆ ಬಗ್ಗೆ ಎಚ್ಚರಿಸಿದ್ದರು. ಆದರೆ ಮಾರ್ಚ್ ತಿಂಗಳಿನಲ್ಲಿ ಈ ದೇಶದ ಆರೋಗ್ಯ ಸಚಿವರು ನಾವು ಕೋವಿಡ್‌ ಅಂತ್ಯದಲ್ಲಿದ್ದೇವೆ ಎಂದು ಹೇಳಿಕೆ ನೀಡಿ ಅದನ್ನು ಕಡೆಗಣಿಸಿದರು. ಅದೇ ರೀತಿಯಲ್ಲಿ ಕರ್ನಾಟಕ ಸರ್ಕಾರವು ಸಹ ಏಪ್ರಿಲ್ ಮೂರರಂದು ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದು ಮೇ 5ರಂದು ರಾಜ್ಯದಲ್ಲಿ ಹತ್ತಿರತ್ತಿರ ನಾಲ್ಕು ಲಕ್ಷ ಸಕ್ರಿಯ ಪ್ರಕರಣಗಳು ಇರುವ ಸಾಧ್ಯತೆಯಿದೆ ಎಂದು ಹೇಳಿತ್ತು. ಅದೇ ರೀತಿಯಲ್ಲಿ ಮೇ 5ರಂದು ನಮ್ಮ ರಾಜ್ಯದಲ್ಲಿ 4,60,000 ಪ್ರಕರಣಗಳಿದ್ದವು. ಅಂದರೆ ಸರ್ಕಾರಕ್ಕೆ ಗೊತ್ತಿದ್ದರೂ ಇಂತಹ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಸಮರೋಪಾದಿಯಲ್ಲಿ ಕಾರ್ಯಚರಣೆ ನಡೆಯಬೇಕೊ ಹಾಗೆ ಅದು ಮಾಡಲಿಲ್ಲ. ಆಕ್ಸಿಜನ್ ಬಿಕ್ಕಟ್ಟು ಪರಿಹರಿಸಲು ಇತರೆಡೆಗಳಿಂದ ನೆರವು ಪಡೆದುಕೊಳ್ಳಲು ಇವತ್ತಿನವರೆಗೂ ಸಹ ಸರ್ಕಾರ ಯತ್ನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಂಸಿ-92 ಬ್ಯಾಚ್‌ನ ವೈದ್ಯರೆಲ್ಲರೂ ಸೇರಿ ಕೋವಿಡ್‌ ಸೋಂಕಿತರಿಗೆ ಉಚಿತವಾಗಿ ನೆರವು ನೀಡಲು ಮುಂದಾಗಿದ್ದೇವೆ. ಬೇರೆ ಬೇರೆ ದೇಶಗಳಲ್ಲಿರುವ ವೈದ್ಯರು ಸೇರಿ ಬೆಂಗಳೂರಿಗೆ 350 ಆಕ್ಸಿಜೆನ್‌ ಕಾನ್ಸಂಟ್ರೇಟರ್‌ಗಳನ್ನು ಕಳುಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.


ಇದನ್ನೂ ಓದಿ: ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಸಮಗ್ರ ಪಡಿತರ & ಆರ್ಥಿಕ ನೆರವು ನೀಡಿ: 400 ಸಾಮಾಜಿಕ ಕಾರ್ಯಕರ್ತರ ಜನಾಗ್ರಹ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here