ಅನುವಾದ: ನಿಖಿಲ್ ಕೋಲ್ಪೆ

ಪೌರತ್ವ ತಿದ್ದುಪಡಿ ಕಾಯಿದೆ(CAA)ಯು ಪಾಕಿಸ್ತಾನ ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲು ಬಯಸಿದೆ. ಇಲ್ಲಿ ಧಾರ್ಮಿಕ ನೆಲೆಯನ್ನು ಅನುಸರಿಸಲಾಗಿದೆ. ಆದರೆ, ಇದೇ ಹೊತ್ತಿಗೆ ಮೂಲತಃ ಭಾರತೀಯರಾಗಿದ್ದು ರಬ್ಬರ್, ಚಹಾತೋಟಗಳಲ್ಲಿ ಕೆಲಸ ಮಾಡಲು ಬ್ರಿಟಿಷರು ಕೊಂಡೊಯ್ದು, ನಂತರ ಅಲ್ಲಿಯೇ ನೆಲೆನಿಂತ ಹಿಂದೂ ತಮಿಳರನ್ನು ಈ ಕಾಯಿದೆಯಿಂದ ಹೊರಗಿಡಲಾಗಿದೆ. ದೇಶ ವಿಭಜನೆಯ ಕಾಲದಲ್ಲಿ ಸಾವಿರಾರು ಮಂದಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಅಂತೆಯೇ ಸಾವಿರಾರು ಮಂದಿ ಭಾರತಕ್ಕೆ ವಲಸೆ ಬಂದಿದ್ದರು. (ಆಗ ಬಾಂಗ್ಲಾದೇಶವು ಪೂರ್ವ ಪಾಕಿಸ್ತಾನವಾಗಿತ್ತು.) ಆಗಲೂ ಸಂವಿಧಾನ ಸಭೆಯು ವಲಸಿಗರ ಕುರಿತು ಈಗ ಎತ್ತಲಾಗುತ್ತಿರುವ ಪ್ರಶ್ನೆಗಳನ್ನೂ ಚರ್ಚಿಸಿತ್ತು. ಆ ಕುರಿತ ಕೆಲವು ಕುತೂಹಲಕಾರಿ ವಿವರಗಳು ಇಲ್ಲಿವೆ.

ಕೇವಲ ಹಿಂದೂಗಳು ಮತ್ತು ಸಿಕ್ಖ್ ವಲಸಿಗರಿಗೆ ಮಾತ್ರ ಭಾರತೀಯ ಪೌರತ್ವ ನೀಡಬೇಕು ಎಂದು ಬಲಪಂಥೀಯರು ಬಯಸಿದ್ದರು. ಆದೆ, ಈ ರೀತಿ ಧರ್ಮಾಧರಿತ ಆಯ್ಕೆಗಳನ್ನು ಮಾಡುವುದು ಅನ್ಯಾಯ ಎಂದು ಇನ್ನೂ ಕೆಲವರು ಬಯಸಿದ್ದರು. ಅಷ್ಟಕ್ಕೂ ವಿಭಜನೆಯ ಬಳಿಕ ನಡೆದ ರಕ್ತಸಿಕ್ತ ಹಿಂಸಾಚಾರದಿಂದ ಭಯಗೊಂಡಷ್ಟೇ ವಲಸೆಹೋದ ಮುಸ್ಲಿಮರಿರಬಹುದು. ಅವರು ಎಲ್ಲಾ ಶಾಂತವಾದ ಮೇಲೆ ಮರಳಿ ಬಂದು ಭಾರತೀಯ ಪೌರರಾಗಲು ಬಯಸಿರಬಹುದು.

ಆದರೆ, ಮರಳಿ ಬರಲು ಬಯಸುವ ಮುಸ್ಲಿಮರನ್ನು ಹೊರಗಿಡಬೇಕು ಎಂದು ಕೆಲವರು ಬಯಸಿದ್ದರೆ, ಇಲ್ಲಿ ಬದುಕಲು ಬಯಸುವ ಎಲ್ಲರಿಗೂ ಭಾರತದ ಗಡಿಗಳು ತೆರೆದಿರಬೇಕೆಂದು ಕಾಂಗ್ರೆಸ್ ನಾಯಕ ಬ್ರಿಜೇಶ್ವರ ಪ್ರಸಾದ್ ಅವರಂತವರು ವಾದಿಸಿದ್ದರು. ಮುಸ್ಲಿಮ್ ನಿರಾಶ್ರಿತರು ವಾಸ್ತವದಲ್ಲಿ “ಗೂಢಚಾರ”ರಾಗಿದ್ದು, “ರಾಷ್ಟ್ರೀಯ ಭದ್ರತೆ”ಗೆ ಅಪಾಯವಾಗಬಹುದು ಎಂದು ವಾದಿಸಿದವರೂ ಇದ್ದರು. ಮುಸ್ಲಿಮರ ದೇಶಪ್ರೇಮದ ಮೇಲೆ ಆಗಲೇ ಸಂಶಯದ ಲೇಬಲ್ ಅಂಟಿಸಲಾಗಿತ್ತು.

ಹಿಂದೂ ಬಹುಸಂಖ್ಯಾತವಾದವು ತಲೆಯೆತ್ತಿದರೆ, ಅದು ಭಾರತಕ್ಕೆ ಯಾವುದೇ ಅಲ್ಪಸಂಖ್ಯಾತ ಗುಂಪಿಗಿಂತ ಹೆಚ್ಚಿನ ಅಪಾಯ ಒಡ್ಡಬಹುದು ಎಂಬ ಜವಾಹರಲಾಲ್ ನೆಹರೂ ಅವರ ವಾದನ್ನು ಬ್ರಿಜೇಶ್ವರ ಪ್ರಸಾದ್ ಬೆಂಬಲಿಸಿದ್ದರು. ಮತ್ತೆ ಕೆಲವರು ಮರಳಿ ಬರಬಯಸುವ ಮುಸ್ಲಿಮರನ್ನು ಹಿಂದಕ್ಕೆ ಪಡೆಯುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದೂ ವಾದಿಸಿದ್ದರು.

ಆದರೆ, ಬ್ರಿಜೇಶ್ವರ ಪ್ರಸಾದ್ ಅವರು ಮಾರ್ಮಿಕ ಉತ್ತರ ನೀಡಿ. “ನಾವು ಒಂದು ಅಂಗಡಿ ವ್ಯಾಪಾರಿಗಳ ದೇಶವಲ್ಲ…ಆರ್ಥಿಕ ಪರಿಣಾಮ ಏನೇ ಇದ್ದರೂ, ನಾವು ಕೆಲವು ಕೆಲವು ಆದರ್ಶಗಳ ಮೇಲೆ ನಿಲ್ಲಬಯಸುತ್ತೇವೆ. ಕೆಲವು ನೈತಿಕ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದರ ಮೂಲಕ ಮಾತ್ರ ದೇಶಗಳು ಪ್ರಗತಿ ಸಾಧಿಸುತ್ತವೆ. ಜೀವನದ ಭೌತಿಕ ಅಭಿವೃದ್ಧಿಯು ಪ್ರಗತಿ ಮತ್ತು ನಾಗರಿಕತೆಯ ಮಾನದಂಡವಲ್ಲ. ಅಗ್ಗದ ಆರ್ಥಿಕತೆಗೆ ಭದ್ರವಾದ ರಾಜಕೀಯ ತತ್ವಗಳನ್ನು ಅಡಿಯಾಳಾಗಿಸುವುದು ರಾಜಕೀಯ ಅಥವಾ ಮುತ್ಸದ್ದಿತನವೆಂದು ನಾನು ಭಾವಿಸುವುದಿಲ್ಲ. ಭಾರತೀಯ ಪ್ರಜೆಯಾಗಿರುವ ಒಬ್ಬ ಮುಸ್ಲಿಮನನ್ನು ಈ ಸಂವಿಧಾನದ ಆರಂಭದೊಂದಿಗೆ ಆತನ ಪೌರತ್ವದಿಂದ ವಂಚಿತಗೊಳಿಸಲು ಯಾವುದೇ ಕಾರಣವೂ ನನಗೆ ಕಾಣುವುದಿಲ್ಲ. ಅದೂ ಕೂಡಾ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳಿಗೆ ಭಾರತೀಯ ಪೌರತ್ವ ಪಡೆಯಲು ನಾವು ಆಹ್ವಾನಿಸುತ್ತಿರುವಾಗ” ಎಂದು ಹೇಳಿದ್ದರು.

ಯುದ್ಧವಿನ್ನೂ ಮುಗಿದಿಲ್ಲ

ಬಹುಸಂಖ್ಯಾತವಾದದ ಪರವಿದ್ದವರು 1948ರಲ್ಲಿ ಸಂವಿಧಾನ ಸಭೆಯಲ್ಲಿ ನಿರ್ಣಾಯಕವಾಗಿ ಸೋತಿದ್ದರು. ಆದರೆ, ಜಾತ್ಯತೀತವಾದಿಗಳು ಕೆಲವು ರಾಜಿಗಳನ್ನು ಒಪ್ಪುವಂತೆ ಮಾಡಲು ಅವರು ಸಫಲರಾಗಿದ್ದರು. ಹೀಗಿದ್ದರೂ, ಜನಾಂಗೀಯವಾದದ ವಿಚಾರ ಮತ್ತು ಹೆಚ್ಚು ಪ್ರಜಾಪ್ರಭುತ್ವವಾದಿ ವಿಚಾರಗಳ ನಡುವಿನ ಯುದ್ಧವು ಇನ್ನೂ ಮುಗಿದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳಾದ ಭಾರತೀಯ ಜನತಾ ಪಕ್ಷ ಮುಂತಾದವು ಈ ಚರ್ಚೆಯನ್ನು ತಮ್ಮ ಪರವಾಗಿ ಮುಗಿಸಲು ಶ್ರಮಿಸುತ್ತಿವೆ.

ಕೊನೆಗೂ ಪೌರತ್ವ ತಿದ್ದುಪಡಿ ಕಾಯಿದೆಯು ಕೇವಲ ಊರು ದೇಶಗಳ ಮುಸ್ಲಿಮೇತರರಿಗೆ ಪೌರತ್ವ ನೀಡುವ ಉದ್ದೇಶವನ್ನು ಮಾತ್ರ ಹೊಂದಿಲ್ಲ.  ಅದನ್ನು ಈ ಕಾಯಿದೆ ಇಲ್ಲದೆಯೇ ಮಾಡಬಹುದು. ಭಾರತವು ಕೆಲವರಿಗೆ ಸಹಜ ಮನೆಯಾಗಿದ್ದು, ಮತ್ತೆ ಕೆಲವರು ಇನ್ನೂ ಹೊರಗಿನವರಾಗಿದ್ದಾರೆ ಎಂಬ ಚಿಂತನೆಗೆ ಕಾನೂನು ಮಾನ್ಯತೆ ಒದಗಿಸುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ.

ಬಿ.ಆರ್. ಅಂಬೇಡ್ಕರ್ ಅವರ ಭಯವು ನಿಜವಾಗಿದೆ. “ಭಾರತದಲ್ಲಿ ಪ್ರಜಾಪ್ರಭುತ್ವವು ಭಾರತದ ಮಣ್ಣಿನ ಮೇಲಿನ ಮೇಲುಡುಪು ಮಾತ್ರವಾಗಿದೆ‌; ಅದು ಮೂಲಭೂತವಾಗಿ ಅಪ್ರಜಾಸತ್ತಾತ್ಮಕವಾಗಿದೆ” ಎಂದು ಅವರು ಹೇಳಿದ್ದರು. “ಸಾಂವಿಧಾನಿಕ ನೈತಿಕತೆಯು ಒಂದು ಸಹಜ ಭಾವನೆಯಲ್ಲ. ಅದನ್ನು ಬೆಳೆಸಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನಷ್ಟೇ ಕಲಿಯಬೇಕಾಗಿದೆ” ಎಂದೂ ಅವರು ಹೇಳಿದ್ದರು.

ಇವತ್ತು ಭವಿಷ್ಯಕ್ಕಾಗಿನ ಹೋರಾಟವನ್ನು ಬೀದಿಗಳಲ್ಲಿ- ದೇಶದಾದ್ಯಂತ ಅನೇಕ ಶಾಹೀನ್‌ ಬಾಗ್‌ಗಳಲ್ಲಿ ನಡೆಸಲಾಗುತ್ತಿದೆ. ಸಂಗೀತ, ಕವಿತೆ, ಚಿತ್ರಗಳು, ಫಲಕಗಳು ಮತ್ತು ಘೋಷಣೆಗಳಿಂದ ಸಜ್ಜಿತ ಮಹಿಳೆಯರು ಈ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ಪ್ರತಿಯೊಂದು ಸ್ಥಳವೂ ನಾವು ಸಾಂವಿಧಾನಿಕ ನೈತಿಕತೆಯನ್ನು ಕಲಿಯುವ ಶಾಲೆಯಾಗಿದೆ. ಸಂವಿಧಾನದ ಪೀಠಿಕೆಯನ್ನು ಉಚ್ಛರಿಸುವ, ಪುನರುಚ್ಛರಿಸುವ ಮತ್ತು ವಿಶ್ಲೇಷಿಸುವ ಮೂಲಕ ನಾವು ಸಂವಿಧಾನವು ನಮಗೆ ನೀಡಿರುವುದನ್ನು ಗಳಿಸುತ್ತಿದ್ದೇವೆ. ಅಷ್ಟಕ್ಕೂ ರಸ್ತೆಗಳಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುವುದರ ಹೊರತಾಗಿ ಈ ನಿಟ್ಟಿನಲ್ಲಿ ನಿಜವಾದ ಕಲಿಕೆ ಸಾಧ್ಯವಿಲ್ಲ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here