Homeಮುಖಪುಟಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ..

- Advertisement -
- Advertisement -

ಪಿ. ಸಾಯಿನಾಥ್

ಅನುವಾದ: ನಿಖಿಲ್ ಕೋಲ್ಪೆ


“ಕೊರೋನಾ ಸಂಬಂಧಿ ಸಮಸ್ಯೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸದೇ ಇದ್ದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನಾ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು.” ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಜಗತ್ಪ್ರಸಿದ್ಧ ಪತ್ರಕರ್ತ ಪಿ. ಸಾಯಿನಾಥ್ ಅವರ ಮನೋಜ್ಞ ಲೇಖನದ ಎರಡನೆಯ ಭಾಗ ಇಲ್ಲಿದೆ.


ಕೊರೋನಾ ಬಿಕ್ಕಟ್ಟಿನಿಂದ ಉಲ್ಭಣಿಸುತ್ತಿರುವ ಆರ್ಥಿಕ ಸಂಕಷ್ಟವು ಕೆಲಸ ಮಾಡುವ ಮತ್ತು ಯುವ ಸಮುದಾಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗಲಿದೆ. ಪೀಪಲ್ಸ್ ಹೆಲ್ತ್ ಮೂವ್‌ಮೆಂಟ್ ಸಂಘಟನೆಯ ಜಾಗತಿಕ ನಿರ್ದೇಶಕರಾದ ಪ್ರೊಫೆಸರ್ ಡಾ. ಟಿ. ಸುಂದರರಾಮನ್ ಅವರು “ಪರಿ” (PARI)ಗೆ ತಿಳಿಸಿದಂತೆ, ನಮ್ಮ ಆರೋಗ್ಯ ಸೇವೆಗಳು ಮತ್ತು ಆರ್ಥಿಕ ಬಿಕ್ಕಟ್ಟು ಜೊತೆಸೇರಿ (ನಾವು ತಪ್ಪಿಸಬಹುದಾದ) ಕೊರೋನ ವೈರಸ್ ಸಾವುಗಳಿಗೆ ಬದಲಾಗಿ ಅವುಗಳ ಜಾಗದಲ್ಲಿ ಬೇರೆ ರೋಗಗಳಿಂದ ಸಂಭವಿಸುವ ಸಾವುಗಳಿಗೆ ಕಾರಣವಾಗಬಹುದು.

ತಮ್ಮ 60 ಅಥವಾ ಅದಕ್ಕಿಂತ ಹೆಚ್ಚಿನ ವಯೋವರ್ಗದಲ್ಲಿರುವ ಎಂಟು ಶೇಕಡಾ ಜನಸಂಖ್ಯೆ ಕೊರೋನಾ ವೈರಸ್‌ನಿಂದ ಅತ್ಯಂತ ಹೆಚ್ಚು ಅಪಾಯ ಎದುರಿಸುತ್ತಿದೆ. ಆರೋಗ್ಯ ಸೇವೆಗಳು ಕೈಗೆಟಕದಿರುವುದು ಮತ್ತು ಇತರ ಆರೋಗ್ಯ ಸೇವೆಗಳ ಕಡಿತದ ಜೊತೆಗೆ ಇತರ ರೋಗಗಳು ತಲೆಎತ್ತಿದಲ್ಲಿ ಕೆಲಸ ಮಾಡುವ ಮತ್ತು ಯುವ ಜನಸಮುದಾಯವು ಭಾರೀ ಹೊಡೆತ ಅನುಭವಿಸಬೇಕಾಗಿಬರಬಹುದು.


ಇದನ್ನೂ ಓದಿ: ಮೋದಿಯ ಕೊರೋನ “ಪ್ಯಾಕೇಜ್” : ಕಲ್ಲೆದೆ ಮತ್ತು ಅಜ್ಞಾನಗಳ ಮಿಶ್ರಣ – ಪಿ. ಸಾಯಿನಾಥ್ 


ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್‌ಎಚ್‌ಎಸ್‌ಆರ್‌ಸಿ)ದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಸುಂದರರಾಮನ್, “ಹಿಮ್ಮುಖ ವಲಸೆ ಮತ್ತು ಜೀವನೋಪಾಯಗಳ ನಷ್ಟವನ್ನು ಗುರುತಿಸಿ, ಕಾರ್ಯಾಚರಿಸಬೇಕಾದ ಅತ್ಯಂತ ತುರ್ತು ಅಗತ್ಯವಿದೆ” ಎಂದು ಒತ್ತಿ ಹೇಳುತ್ತಾರೆ.

“ಇಲ್ಲದೇಹೋದಲ್ಲಿ, ಬಹಳ ಕಾಲದಿಂದಲೂ ಹೆಚ್ಚಾಗಿ ಬಡವರನ್ನೇ ಬಾಧಿಸುತ್ತಾ ಬಂದಿರುವ ಇತರ ರೋಗಗಳಿಂದ ಸಂಭವಿಸುವ ಸಾವಿನ ಸಂಖ್ಯೆಯು ಕೊರೋನ ವೈರಸ್‌ನಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಾಗಬಹುದು” ಎಂದೂ ಅವರು ಹೇಳುತ್ತಾರೆ. ನಿರ್ದಿಷ್ಟವಾಗಿ, ಹಿಮ್ಮುಖ ವಲಸೆ ಹೆಚ್ಚಾಗಿ, ನಗರಗಳಲ್ಲಿರುವ ವಲಸೆ ಕಾರ್ಮಿಕರಿಗೆ ಅವರು ಪಡೆಯುತ್ತಿರುವ ಜುಜುಬಿ ಸಂಬಳವೂ ಸಿಗದೇ ಹೋದಲ್ಲಿ ಇದು ಸಂಭವಿಸಬಹುದು.

ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿಯೇ ವಾಸಿಸುತ್ತಾರೆ. ಕೆಲಸದ ಸ್ಥಳವನ್ನು ಮುಚ್ಚಿ, ಹೊರಗೆ ಹೋಗಿ ಎಂದರೆ- ಅವರು ಹೋಗುವುದಾದರೂ ಎಲ್ಲಿಗೆ? ಅವರಲ್ಲಿ ಎಲ್ಲರೂ ಉಹಿಸಲಾಗದಷ್ಟು ಭಾರೀ ದೂರದ ಊರುಗಳಿಗೆ ನಡೆಯಲು ಶಕ್ತರಲ್ಲ. ಅವರಿಗೆ ಪಡಿತರ ಚೀಟಿಗಳೂ ಇಲ್ಲ. ಹೀಗಿರುವಾಗ, ನೀವು ಅವರಿಗೆ ಹೇಗೆ ಆಹಾರ ತಲುಪಿಸುತ್ತೀರಿ?

ಆಂಧ್ರಪ್ರದೇಶದ ಅನಂತಪುರದಿಂದ ಕೇರಳದ ಕೊಚ್ಚಿ ನಡುವೆ ವಾರಕ್ಕೊಮ್ಮೆ ಓಡಾಡುತ್ತಿದ್ದ ವಲಸೆ ಕಾರ್ಮಿಕರು.

ಆರ್ಥಿಕ ಸಂಕಷ್ಟವು ಈಗಾಗಲೇ ವೇಗ ಪಡೆದುಕೊಳ್ಳುತ್ತಿದೆ. ವಸತಿ ಸಂಕೀರ್ಣಗಳು ಈ ಸಮಸ್ಯೆಗೆ “ಅವರೇ” ಕಾರಣವೆಂದು ನಂಬಿರುವುದರಿಂದ, ವಲಸೆ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಮನೆಗೆಲಸದವರು ಮತ್ತು ಇತರ ಬಡವರನ್ನು ದೆವ್ವ ಅಥವಾ ರಾಕ್ಷಸರಂತೆ ಕಾಣುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಸತ್ಯ ಏನೆಂದರೆ, ಕೋವಿಡ್-19 ವೈರಸ್ ಮತ್ತು ಅದಕ್ಕಿಂತ ಮೊದಲು ಸಾರ್ಸ್ ವೈರಸನ್ನು ಹರಡಿದವರು ಬಡವರಲ್ಲ; ವಿಮಾನಗಳಲ್ಲಿ ಓಡಾಡುವ ಶ್ರೀಮಂತರು. ಇದನ್ನು ಗುರುತಿಸಿ ಒಪ್ಪಿಕೊಳ್ಳುವ ಬದಲು ನಾವು ಈ “ಅನಪೇಕ್ಷಣೀಯ” ಜನರನ್ನು ಹೊರದಬ್ಬಿ, ನಗರಗಳನ್ನು ಸ್ವಚ್ಛಗೊಳಿಸಲು ಯತ್ನಿಸುತ್ತಿದ್ದೇವೆ. ಇದನ್ನು ಪರಿಗಣಿಸಿ: ಒಂದುವೇಳೆ ವಿಮಾನದಲ್ಲಿ ಹಾರಾಡುವ ಈ ಶ್ರೀಮಂತರು ಊರಿಗೆ ಮರಳುವ ಈ ವಲಸೆ ಕಾರ್ಮಿಕರಿಗೆ ವೈರಸನ್ನು ಹರಡಿದ್ದರೆ, ಅವರು ತಮ್ಮ ಹಳ್ಳಿ ತಲುಪಿದಾಗ ಪರಿಣಾಮ ಏನಾಗಬಹುದು?

ದಿಲ್ಲಿ ಮತ್ತು ನೊಯಿಡಾದಿಂ ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರ ಕುರಿತು ಕಲಾವಿದೆ ಲಬಾನಿ ಜಾಂಗಿ ಅವರ ವರ್ಣಚಿತ್ರ

ಕೆಲವರು ತಮ್ಮ ಊರಿಗೆ- ಅದು ತಮ್ಮದೇ ರಾಜ್ಯದಲ್ಲಿರಲಿ, ನೆರೆಯ ಅಥವಾ ಬೇರೆ ರಾಜ್ಯದಲ್ಲೇ ಇರಲಿ- ನಡೆದುಕೊಂಡೇ ಮನೆಗೆ ಮರಳುವುದು ಹಿಂದಿನಿಂದಲೂ ನಡೆದುಕೊಂಡುಬಂದಿದೆ. ಈ ಸಾಂಪ್ರದಾಯಿಕ ವಿಧಾನವೆಂದರೆ ದಾರಿಯಲ್ಲಿ ಸಿಗುವ ಚಹಾದಂಗಡಿಗಳು, ದಾಬಾಗಳು ಮುಂತಾದ ಕಡೆ ಅದೂಇದೂ ಕೆಲಸ ಮಾಡಿ, ದಿನದ ಊಟ ಗಳಿಸಿ, ರಾತ್ರಿ ಮಲಗಲು ಅಲ್ಲಿಯೇ ನೆಲೆಕಂಡುಕೊಂಡು ಮುಂದುವರಿಯುವುದು. ಈಗ ಇವುಗಳಲ್ಲಿ ಹೆಚ್ಚಿನವು ಮುಚ್ಚಿರುವುದರಿಂದ ಏನಾಗಲಿದೆ?

ಆದರೆ, ತಾವು ಮನೆಯಲ್ಲಿ ಉಳಿದರೆ ಮತ್ತು ದೈಹಿಕ ಅಂತರ ಕಾಪಾಡಿಕೊಂಡು ಬಂದರೆ ಎಲ್ಲವೂ ಸರಿಯಾಗುತ್ತದೆ ಎಂದು ಸಾಕಷ್ಟು ಸ್ಥಿತಿವಂತರು, ಮತ್ತು ಮಧ್ಯಮ ವರ್ಗದವರು ನಂಬಿದಂತಿದೆ. ಹೌದು; ಅದು ಕನಿಷ್ಟ ಪಕ್ಷ ನಮ್ಮನ್ನು ಸುರಕ್ಷಿತವಾಗಿ ಇಡುತ್ತದೆ. ಆದರೆ, ಆರ್ಥಿಕ ಸಂಕಷ್ಟವು ತಮ್ಮನ್ನು ಹೇಗೆ ಬಾಧಿಸಲಿದೆ ಎಂಬ ಅರಿವು ಅವರಿಗೆ ಇದ್ದಂತಿಲ್ಲ. ಕೆಲವರಿಗೆ ಈ “ಸಾಮಾಜಿಕ ಅಂತರ”ವು ಬೇರೆಯೇ ಅರ್ಥ ಕೊಡುತ್ತದೆ. ನಾವು ಎರಡು ಸಹಸ್ರಮಾನಗಳಿಂದಲೂ ಅತ್ಯಂತ ಪ್ರಬಲವಾದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ. ಅದೆಂದರೆ- ಜಾತಿ. ಜಾತಿ ಮತ್ತು ವರ್ಗ ಸಂಬಂಧಿ ಅಂಶಗಳು ನಮ್ಮ ಇಂದಿನ ಲಾಕ್‌ಡೌನ್ ಪ್ರಕ್ರಿಯೆಯಲ್ಲಿಯೂ ಅಡಕವಾಗಿವೆ.

ಅಕ್ರಮ ವಲಸಿಗರಲ್ಲ ಇವರು! ಊರಿಗೆ ಮರಳಲು ಹಂಬಲಿಸುತ್ತಿರುವ ವಲಸೆ ಕಾರ್ಮಿಕರು.

ಪ್ರತೀವರ್ಷ ಹತ್ತಿರಹತ್ತಿರ ಎರಡೂವರೆ ಲಕ್ಷ ಭಾರತೀಯರು ಕ್ಷಯರೋಗದಿಂದ ಸಾಯುತ್ತಿದ್ದರೆಂಬ ಕುರಿತು ನಮಗೆ ಒಂದು ರಾಷ್ಟ್ರವಾಗಿ ಏನೂ ಅನಿಸುವಂತೆ ಕಾಣುವುದಿಲ್ಲ. ಅಥವಾ ವಾರ್ಷಿಕವಾಗಿ ಅತಿಸಾರ (Diahorea) ಒಂದು ಲಕ್ಷದಷ್ಟು ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿದೆ ಎಂಬುದೂ ನಮ್ಮನ್ನು ಕಾಡುವುದಿಲ್ಲ. ಅವರು ನಾವಲ್ಲ!

ಸುಂದರ ಜನರಿಗೆ- ಕೆಲವು ಮಾರಕ ರೋಗಗಳನ್ನು ಎದುರಿಸುವ ಶಕ್ತಿ ತಮಗಿಲ್ಲ ಎಂದು ತಿಳಿದಾಗ- ತೀರಾ ಭಯ ಹುಟ್ಟುತ್ತದೆ. ಸಾರ್ಸ್ ವೇಳೆ ಆದುದು ಹಾಗೆಯೇ. 1994ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡಾಗಲೂ ಹಾಗೆಯೇ ಆಗಿತ್ತು. ಎರಡೂ ಭಯಾನಕ ರೋಗಗಳು. ಆದರೆ, ಅವು ಭಾರತದಲ್ಲಿ ಕೊಲ್ಲಲು ಸಾಧ್ಯವಿರುವುದಕ್ಕಿಂತ ಕಡಿಮೆ ಜನರನ್ನು ಕೊಂದವು. ಆದರೆ, ಅವು ಬಹಳಷ್ಟು ಗಮನವನ್ನು ಸೆಳೆದವು. ಸೂರತ್ ಕುರಿತು ನಾನು ಆಗ ಹೀಗೆ ಬರೆದಿದ್ದೆ: “ಪ್ಲೇಗಿನ ಕೀಟಾಣುಗಳು ವರ್ಗಬೇಧವನ್ನು ಅನುಸರಿಸದೇ ಇರುವುದಕ್ಕಾಗಿ ಕುಖ್ಯಾತವಾಗಿವೆ… ಇದಕ್ಕಿಂತಲೂ ಕೆಟ್ಟ ವಿಷಯ ಎಂದರೆ…ಅವು ವಿಮಾನ ಹತ್ತಿ ಕ್ಲಬ್‌ ಕ್ಲಾಸ್‌ನಲ್ಲಿ ಹಾರಿ ನ್ಯೂಯಾರ್ಕ್ ತಲಪಬಲ್ಲವು.”

ಕೃಪೆ: “ಪರಿ”

ಇದನ್ನೂ ಓದಿ: ಚಿಪ್ಪುಹಂದಿಗಳಿಂದ ಕೊರೊನಾ ವೈರಸ್ ಹರಡಿರಬಹುದು… 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ ಜಾಮೀನು ಆದೇಶವನ್ನು ಮೇ 10ಕ್ಕೆ ಕಾಯ್ದಿರಿಸಿದ ಸುಪ್ರೀಂ...

0
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ ಮೇ 10 ರಂದು ತನ್ನ...