Homeಮುಖಪುಟಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು.

- Advertisement -
- Advertisement -

ಲಂಗರ್… ರೈತ ಹೋರಾಟ ಶುರುವಾದಾಗಿನಿಂದ ಎಲ್ಲರ ಬಾಯಲ್ಲಿ ಬರುತ್ತಿರುವ ಮತ್ತು ಹೆಚ್ಚು ಪ್ರಚುರಗೊಳ್ಳುತ್ತಿರುವ ಪದ. ಲಂಗರ್ ಎಂದರೆ ಅಡುಗೆಮನೆ ಎಂಬ ಅರ್ಥ ಇದೆ. ಇದು ಸಿಖ್ ಸಮುದಾಯದ ಜನರು ಒಂದಾಗಿ, ಒಕ್ಕೂಟದ ರೀತಿಯಲ್ಲಿ ಅಡುಗೆ ಮಾಡಿ, ಗುರುದ್ವಾರಗಳಲ್ಲಿ ನೀಡುವ ಉಚಿತ ಊಟದ ಸೇವೆಯಾಗಿದೆ.

ಲಂಗರ್‌ಗಳಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಇಲ್ಲಿ ಎಲ್ಲರು ಸಮಾನರು. ಎಲ್ಲರು ಜೊತೆಯಲ್ಲಿ ಕುಳಿತು ಊಟ ಮಾಡಬೇಕು. ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬುದು ಲಂಗರ್‌ಗಳ ಆಶಯ. ಲಂಗರ್‌ಗಳು ಸಸ್ಯಹಾರವನ್ನು ಒದಗಿಸುತ್ತವೆ. ಸಿಖ್ ಸಮುದಾಯದ ಸ್ವಯಂ ಸೇವಕರು ಲಂಗರ್‌ಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಲಂಗರ್‌ಗಳ ಇತಿಹಾಸ

ಲಂಗರ್‌ಗಳಿಗೆ 1500 ವರ್ಷಗಳ ಇತಿಹಾಸವಿದೆ. ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಕಾಲದಿಂದಲು ಲಂಗರ್‌ಗಳು ಸೇವೆ ನೀಡುತ್ತಿವೆ. ಪಂಜಾಬ್‌ನಲ್ಲಿ ಈ ಲಂಗರ್‌ಗಳ ಆರಂಭವಾಯಿತು ಎಂದು ಪ್ರತಿಭಟನಾ ನಿರತ ಪಂಜಾಬ್‌ನ ರೈತರು ತಿಳಿಸುತ್ತಾರೆ.

ಸಿಖ್ ಧರ್ಮದ ಎರಡನೇ ಗುರುಗಳಾದ ಗುರು ಅಂಗದ್ ಅವರು ಗುರುದ್ವಾರಗಳಲ್ಲಿ ಈ ಲಂಗರ್‌ಗಳಿಗೆ ನಿಯಮಬದ್ಧವಾಗಿ ಚಾಲನೆ ನೀಡಿದವರು. ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು. ಗುರುದ್ವಾರಗಳಿಂದ ಹೊರಭಾಗದಲ್ಲೂ ಹಸಿವಿನಿಂದ ಬಳಲುವವರಿಗೆ ಊಟ ಸಿಗಬೇಕು ಎಂದು ಪ್ರತಿಪಾದಿಸಿದರು. ತಮ್ಮನ್ನು ಭೇಟಿಯಾಗಲು ಬರುವವರು ಮೊದಲು ಊಟ ಮಾಡಿ ನಂತರ ಭೇಟಿಯಾಗಬೇಕು ಎಂಬ ಹವ್ಯಾಸವನ್ನು ಬೆಳೆಸಿದರು. ಇದು ಈಗಲೂ ಸಿಖ್ ಸಮುದಾಯದಲ್ಲಿ ಜಾರಿಯಿದೆ.

ಗಡಿಗಳಲ್ಲಿ ಲಂಗ್‌ರ್‌ಗಳು ತಲೆಎತ್ತಿದ ಬಗೆ

ಕಳೆದ 5 ತಿಂಗಳಿನಿಂದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ನಡೆಯುತ್ತಿರುವ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಪ್ರಮುಖವಾಗಿದೆ. ವಿಶ್ವದಾದ್ಯಂತ ಹಬ್ಬಿಕೊಂಡಿರುವ ಲಂಗರ್‌ಗಳು ಈ ಹೋರಾಟದಲ್ಲಿ ಚಾರಿತ್ರಿಕ ಕೊಡುಗೆ ನೀಡುತ್ತಿವೆ. ಪ್ರತಿಭಟನೆಗೆ ಬರುವವರಿಗೆ ಮೊದಲು ಲಂಗರ್‌ಗಳ ದಾರಿ ತಿಳಿಸಲಾಗುತ್ತದೆ. ಮೊದ ಮೊದಲು ಸಾಮಾನ್ಯ ಊಟಕ್ಕೆ ಮಾತ್ರ ಸೀಮಿತವಾಗಿದ್ದ ಲಂಗರ್‌ಗಳು ಈಗ ಜನರ ಜೀವನ ಶೈಲಿ ಜೊತೆಗೆ ಸಾಕಾಷ್ಟು ಬದಲಾವಣೆ ಹೊಂದಿವೆ.

ನವೆಂಬರ್ 26 ರಂದು ಪಂಜಾಬ್ ರೈತರು ಆಂಭಿಸಿದ ದೆಹಲಿ ಚಲೋ ಜೊತೆಗೆ ಲಂಗರ್‌ಗಳು ರೈತರ ಬೆನ್ನು ಹತ್ತಿದ್ದವು. ರೈತರು ತಮ್ಮ ಪ್ರತಿಭಟನಾ ಸ್ಥಳಗಳನ್ನು ಗುರುತಿಸಿ ಟ್ರ್ಯಾಲಿಗಳನ್ನು ನಿಲ್ಲಿಸಿದ ಕೂಡಲೇ ಲಂಗರ್‌ಗಳು ಕೂಡ ಕಾರ್ಯನಿರ್ವಹಿಸಲು ಆರಂಭಿಸಿದ್ದವು. ದೆಹಲಿಯ ಗಡಿಭಾಗಗಳಾದ ಸಿಂಘು ಬಾರ್ಡರ್, ಟಿಕ್ರಿ ಬಾರ್ಡರ್, ಶಹಾಜಾನ್ಪುರ, ಗಾಝಿಪುರ್, ಚಿಲ್ಲಾ, ಪಲ್ವಲ್ ಬಾರ್ಡರ್, ಇಂದ್ರಪ್ರಸ್ಥ ಬಾರ್ಡರ್‌ಗಳು ಸೇರಿದಂತೆ ಲಕ್ಷಾಂತರ ಜನ ಪ್ರತಿಭಟನಾಕಾರರು ಇರುವಲ್ಲಿಯೇ ಸಾವಿರಾರು ಲಂಗರ್‌ಗಳು ತಲೆ ಎತ್ತಿದವು.

ಸಿಖ್ ಧರ್ಮ ರೂಪುಗೊಂಡಿರುವುದೆ ಒಂದು ಸಂಘಟನೆಯ ಮಾದರಿಯಲ್ಲಿ. ಇಲ್ಲಿ ಎಲ್ಲರೂ ನಿಯಮಗಳಿಗೆ ಬದ್ಧರಾಗಿರಬೇಕು. ತಾವು ಸಂಪಾದಿಸಿದ ಸಂಪತ್ತಿನಲ್ಲಿ ಶೇಕಡಾ 10 ರಷ್ಟನ್ನು ಲಂಗರ್‌ಗಳಿಗೆ ಪ್ರತಿಯೊಬ್ಬರು ದೇಣಿಗೆ ನೀಡಲೇಬೇಕು. ಇದರಿಂದಲೇ ಲಂಗರ್‌ಗಳಿಗೆ ಬೇಕಾದ ದೇಣಿಗೆ ಸಂಗ್ರಹವಾಗುತ್ತದೆ.

ದಿನವೀಡಿ ಸೇವೆ

ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿರುವ ಲಂಗರ್‌ಗಳು 24 ಗಂಟೆಗಳು ಪ್ರತಿಭಟನಾ ನಿರತರ ಹಸಿವನ್ನು ಇಂಗಿಸುತ್ತಿವೆ. ಬೆಳಗ್ಗೆ 4 ಗಂಟೆಯಿಂದ ಕಾರ್ಯ ನಿರ್ವಹಿಸಲು ಆರಂಭಿಸುವ ಇವುಗಳ ಕೆಲಸ ರಾತ್ರಿ 10 ಗಂಟೆಯವರೆಗೂ ಸಾಗುತ್ತಲೇ ಇರುತ್ತದೆ. ನಂತರವೂ ಯಾರಾದರೂ ಊಟಕ್ಕೆ ಬಂದರೇ ಇಲ್ಲ ಎನ್ನುವುದಿಲ್ಲ. ರೈತ ಹೋರಾಟದಲ್ಲಿರುವ ಲಂಗರ್‌ಗಳು ಬೆಳಗ್ಗೆ ಚಹಾ ನೀಡುವ ಮೂಲಕ ಆರಂಭವಾಗುತ್ತವೆ. ರಾತ್ರಿ ಹಾಲು ನೀಡುವ ಮೂಲಕ ಕೊನೆಗೊಳ್ಳುತ್ತವೆ.

ಸಾಮಾನ್ಯ ಊಟ ಉಪಚಾರಕ್ಕೆ ಮೀಸಲಾಗಿದ್ದ ಇವುಗಳಲ್ಲಿ ಈಗ ಹಲವಾರು ಬದಲಾವಣೆಗಳು ಕಂಡು ಬಂದಿವೆ. ಹಲವು ವಿಭಿನ್ನ ಲಂಗರ್‌ಗಳು ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿವೆ. ಚಹಾದ ಲಂಗರ್, ಕೀರ್ ಕಿ ಲಂಗರ್, ಬೆಳಗಿನ ತಿಂಡಿ ಲಂಗರ್, ಊಟದ ಲಂಗರ್, ಸಂಜೆ ಸ್ಯಾಕ್ಸ್ ಲಂಗರ್, ಬರ್ಗರ್ ಲಂಗರ್, ಪಿಜ್ಜಾ ಲಂಗರ್, ಪಿಂಡಿ (ಸಿಹಿ ಉಂಡೆಗಳು) ಕಾ ಲಂಗರ್, ಹಲ್ವಾ ಮತ್ತು ಜಿಲೇಬಿ ಲಂಗರ್‌ಗಳೆಂಬ ಹಲವು ರೀತಿಯಲ್ಲಿ ಬದಲಾಗಿವೆ.

ದೇಶ-ವಿದೇಶಗಳ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಂಗರ್‌ಗಳ ಒಂದು ಭಾಗಗಳು ಈ ಪ್ರತಿಭಟನಾ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದೇಶ ವಿದೇಶಗಳ ಸಾವಿರಾರು ಸ್ವಯಂ ಸೇವಕರು ಲಂಗರ್‌ಗಳಲ್ಲಿ ಅಡುಗೆ ಮಾಡುವುದು, ಸ್ವಚ್ಛತೆ, ಬಡಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ಗುರುದ್ವಾರಗಳ ಲಂಗರ್‌ಗಳ ಜೊತೆಗೆ ಪ್ಯಾಮಿಲಿ ಲಂಗರ್‌ಗಳು ಇಲ್ಲಿವೆ. ಹಳ್ಳಿಯ ಎರಡು ಮೂರು ಮನೆಗಳ ಸದಸ್ಯರು ಸೇರಿಯು ಲಂಗರ್‌ಗಳನ್ನು ನಡೆಸುತ್ತಿದ್ದಾರೆ. ಕುಟುಂಬದ ಲಂಗರ್‌ಗಳಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆಗೆ ಹೊರ ಭಾಗಗಳಿಂದ ಬಂದವರಿಗೂ ಆಹಾರ ಒದಗಿಸಲಾಗುತ್ತದೆ. ಇವುಗಳಲ್ಲಿ ಮನೆಯ ಸದಸ್ಯರೇ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ.

ರೈತ ಹೋರಾಟದಲ್ಲಿರುವ ಲಂಗರ್‌ಗಳಲ್ಲಿ ಊಟ ಉಪಚಾರದ ಜೊತೆಗೆ ದಿನ ಬಳಕೆಯ ಅಗತ್ಯ ವಸ್ತುಗಳಾದ ಬ್ರಶ್, ಪೇಸ್ಟ್, ಸೋಪ್, ಶೂ, ಚಪ್ಪಲಿ, ಬಟ್ಟೆ, ಚಳಿಗಾಲದ ಕ್ರೀಮ್‌ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್, ಒಳಉಡುಪುಗಳನ್ನು ಸಹ ನೀಡಲಾಗುತ್ತಿದೆ.

ಲಂಗ್‌ರ್‌ಗಳ ಮಹತ್ವ

70 ದಿನಗಳ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಹೋರಾಟಗಳು ಹಲವು ಬಾರಿ ಹಣಕಾಸು ಕೊರತೆ, ಊಟದ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೊನೆಗೊಂಡ ಉದಾಹರಣೆಗಳಿವೆ. ಲಕ್ಷಾಂತರ ಜನರು ಒಂದೆಡೆ ಇರುವಾಗ ಊಟ-ಉಪಚಾರಗಳು ಸರಿಯಾಗಿ ಇಲ್ಲದಿದ್ದರೇ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹೋರಾಟ ಕೂಡ ಕೊನೆಗೊಳ್ಳಬಹುದು. ಇಂತಹ ಸ್ಥಿತಿಗಳನ್ನು ಈ ಲಂಗರ್‌ಗಳು ಪಾರು ಮಾಡಿವೆ.

ಲಂಗರ್‌ಗಳಲ್ಲಿ ಮೈಕ್‌ಗಳ ಮೂಲಕ ಇಡೀ ದಿನ ಪ್ರತಿಭಟನಾಕಾರರನ್ನು ಊಟಕ್ಕೆ ಕರೆಯಲಾಗುತ್ತಿರುತ್ತದೆ. ಹೋರಾಟಕ್ಕೆ ಶಕ್ತಿ ತುಂಬುವ ವಾಕ್ಯಗಳನ್ನು ಘೋಷಿಸುತ್ತಿರುತ್ತವೆ. ಲಂಗರ್‌ಗಳು ಇಡೀ ದಿನ ಆಹಾರ, ಚಹಾ ನೀಡುವ ಮೂಲಕ ತೀವ್ರ ಚಳಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಚ್ಚಗಿನ ಭಾವ ಒದಗಿಸುತ್ತಿವೆ. ಉತ್ತಮ ಆಹಾರ ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಮನಸ್ಸಿಗೂ ಹೋರಾಟದ ಹುಮ್ಮಸ್ಸು ನೀಡುತ್ತಿದೆ.

  • ಮಮತ ಎಂ

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...