ಮದ್ಯ ಮಾರಾಟ , ಸರ್ಕಾರದ ದ್ವಂದ್ವ ನಿಲುವು

ಭಾರತವು ಹಲವಾರು ರಾಜಕೀಯ ನಿರ್ಧಾರದಿಂದಾಗಿ ಮೊದಲೇ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿತ್ತು. ಏಕಾಏಕಿ ಎರಗಿದ ಕೊರೊನಾದಿಂದಾಗಿ ಈ ಆರ್ಥಿಕ ಮುಗ್ಗಟ್ಟು ಇನ್ನೂ ತೀವ್ರ ರೂಪ ಪಡೆದುಕೊಂಡಿದೆ. ಈ ಹಿಂದಿನಿಂದಲೂ ರಾಜ್ಯಗಳಿಗೆ ಕೇಂದ್ರದಿಂದ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ದೂರುಗಳಿದ್ದವು. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ಬಹಿರಂಗವಾಗಿಯೆ ಹೇಳಿದ್ದರು.

ಕೊರೊನಾ ಲಾಕ್ ಡೌನ್ ನಂತರ ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನಿಲುಗಡೆಯಾದ್ದರಿಂದ ಆರ್ಥಿಕತೆಯೂ ಒಂದು ಹಂತಕ್ಕೆ ನಿಂತೆ ಹೋಗಿತ್ತು. ಒಂದು ಕಡೆ ಕೊರೊನಾ ಭಯ ಹಾಗೂ ಇನ್ನೊಂದು ಕಡೆ ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯ ಸರ್ಕಾರಗಳು ನಲುಗಿ ಹೋಗಿವೆ.

ಇದಕ್ಕಾಗಿಯೇ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಲಾಕ್ ಡೌನ್ ಸಡಿಲಿಕೆ ಮಾಡಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಒಂದು ಹಂತದಲ್ಲಿ ಪ್ರಭುತ್ವದ ಖಜಾನೆ ತುಂಬಿಸುವ ‘ಮದ್ಯ’ ಮಾರಾಟಕ್ಕೆ ತುರಾತುರಿಯಲ್ಲಿ ಅವಕಾಶ ನೀಡಲಾಯಿತು.

ಮದ್ಯ ನಿಷೇದಕ್ಕೆ ಇದು ಸರಿಯಾದ ಕಾಲ ಎಂದು ಹಲವಾರು ಕಡೆಯಿಂದ ಸಲಹೆಗಳು ಬಂದವು ಹಾಗೂ ಸರ್ಕಾರದ ಈ ಮದ್ಯ ಮಾರಾಟಕ್ಕೆ ಎಲ್ಲೆಡೆ ವಿರೋಧವೂ ವ್ಯಕ್ತವಾಯಿತು. ಆದರೆ ತನ್ನ ಖಜಾನೆ ತುಂಬಿಸುವ ಈ ದಾರಿಯನ್ನು ಸರ್ಕಾರ ಯಾವುದೇ ಕಾರಣಕ್ಕೆ ಬಿಟ್ಟುಕೊಡುವ ಮಾತನ್ನು ಎತ್ತಲೇ ಇಲ್ಲ. ತನ್ನ ಆದಾಯದ ಪ್ರಮುಖ ಪಾಲು ತುಂಬುವ ಈ ಮೂಲವನ್ನು ಬೇಡವೆನ್ನಲು ಯಾವ ರಾಜ್ಯಗಳೂ ಹೋಗಲಿಲ್ಲ.

ಆದರೆ ವಿಪರ್ಯಾಸವಿರುವುದು ರಾಜ್ಯಗಳನ್ನು ಆಳುತ್ತಿರುವ ವಿವಿದ ರಾಜಕೀಯ ಪಕ್ಷಗಳ ನಡೆಗಳ ಮೇಲೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುತ್ತದೆ ಇನ್ನೋಂದೆಡೆ ವಿರೋಧ ಪಕ್ಷಗಳ ಸ್ಥಾನದಲ್ಲಿರುವ ರಾಜ್ಯಗಳಲ್ಲಿ ಅದೇ ಪಕ್ಷಗಳು ವಿರೋಧವನ್ನೂ ಮಾಡುತ್ತದೆ. ಈ ಬಗ್ಗೆ ಪತ್ರಕರ್ತರಾದ ರಾಜ್ ದೀಪ್ ಸರ್ದೇಸಾಯಿ ಟ್ವೀಟ್ ಮಾಡಿ ರಾಜಕೀಯ ಪಕ್ಷಗಳಲ್ಲಿ ಇರುವ ದ್ವಂದ್ವತೆಯನ್ನು ಎತ್ತಿ ತೋರಿಸಿದ್ದರು.

ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿ ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆಯುತ್ತದೆ, ವಿರೋಧ ಪಕ್ಷವಾದ ಬಿಜೆಪಿ ವಿರೋಧಿಸುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ತೆರೆಯುತ್ತದೆ, ಕಾಂಗ್ರೆಸ್ ವಿರೋಧಿಸುತ್ತದೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರ ತೆರೆಯುತ್ತದೆ ಎಎಪಿ ವಿರೋಧಿಸುತ್ತದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಸರ್ಕಾರ ತೆರೆಯುತ್ತದೆ, ಬಿಜೆಪಿ ವಿರೋಧಿಸುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ತೆರೆಯುತ್ತದೆ, ಕಾಂಗ್ರೆಸ್ ಅದನ್ನು ವಿರೋಧಿಸುತ್ತದೆ. ಮದ್ಯ ಕೂಡಾ ರಾಜಕೀಯದಂತೆ ಶಾಶ್ವತ ಸ್ನೇಹಿತರು ಅಥವಾ ಶತ್ರುಗಳನ್ನು ಹೊಂದಿಲ್ಲ, ಎಂದು ಪತ್ರಕರ್ತ ರಾಜ್‌ದೀಪ್‌ ಟ್ವಿಟ್ಟರ್‌ನಲ್ಲಿ ರಾಜಕೀಯ ಪಕ್ಷದ ದ್ವಂದ್ವದ ಬಗ್ಗೆ ಹೇಳಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಸಮಯದಲ್ಲಿ ರಾಜಕೀಯ ಚಡುವಟಿಕೆ ಕೂಡಾ ಗರಿಗೆದರಿದೆ ಎಂದು ಕೂಡಾ ಹೇಳಬಹುದು. ಮದ್ಯದ ವಿಷಯದಲ್ಲಿ ಯಾವ ರಾಜಕೀಯ ಪಕ್ಷಗಳೂ ಸರಿಯಾದ ನಿಲುವನ್ನು ಹೊಂದಿಲ್ಲ. ಜನರ ಆರೋಗ್ಯದ ಹೊರತಾಗಿ ಅದೊಂದು ಆದಾಯದ ಮೂಲ, ಅದನ್ನು ಕಳೆದು ಕೊಳ್ಳಲು ಯಾವ ಸರ್ಕಾರಗಳೂ ತಯಾರಾಗಿಲ್ಲ.

ಇದೇ ಸಂದರ್ಭದಲ್ಲಿ ಮದ್ಯ ಪಾನ ಮಾಡುವುದರಿಂದ ಕೊರೊನಾ ಕೊಲ್ಲಬಹುದು ಎಂದ ಸುಳ್ಳು ಸಂದೇಶ ಎಲ್ಲೆಡೆ ಹರಡುತ್ತಿದೆ. ಈ ಕುರಿತು ಡಬ್ಲುಎಚ್‌ಓ ಸ್ಪಷ್ಟನೆ ನೀಡಿದ್ದು ಅದು ಸಂಪೂರ್ಣ ಸುಳ್ಳು ಎಂದಿದೆ. ಕೊರೊನಾ ವಿರುದ್ಧ ಹೋರಾಡಲು ಮನುಷ್ಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕು. ರೋಗ ನಿರೋಧಕ ಶಕ್ತಿ ಹೊಂದಿರಬೇಕು. ಮದ್ಯ ಪಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಮದ್ಯಪಾನದಿಂದ ದೂರ ಇರಬೇಕೆಂದು WHO ಸಲಹೆ ನೀಡಿದೆ.


ಓದಿ: ಮದ್ಯ ಹೋಂ ಡೆಲೆವರಿ ಮಾಡುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸಲಹೆ


ನಮ್ಮ ಯೂಟ್ಯೂಬ್ ಚಾನೆಲ್ ಗೆ ಭೇಟಿ ನೀಡಿ


 

LEAVE A REPLY

Please enter your comment!
Please enter your name here