Homeಮುಖಪುಟಅಗತ್ಯಕ್ಕಿಂತ ಹೆಚ್ಚಿನ ಮುನ್ನೆಚ್ಚರಿಕೆ ಮತ್ತು ಹೆಚ್ಚಿನ ಸಿದ್ಧತೆಯೇ ನಮ್ಮ ಮುಂದಿರುವ ಪರಿಹಾರ: ಡಾ.ರಮಣನ್

ಅಗತ್ಯಕ್ಕಿಂತ ಹೆಚ್ಚಿನ ಮುನ್ನೆಚ್ಚರಿಕೆ ಮತ್ತು ಹೆಚ್ಚಿನ ಸಿದ್ಧತೆಯೇ ನಮ್ಮ ಮುಂದಿರುವ ಪರಿಹಾರ: ಡಾ.ರಮಣನ್

“ನಾವು ಅಗತ್ಯಕ್ಕಿಂತ ಹೆಚ್ಚೇ ಸಿದ್ಧತೆಗಳನ್ನು ಮಾಡಿಕೊಂಡು, ಸ್ವಲ್ಪ ಹೆಚ್ಚೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು, ಕಡಿಮೆ ಸಿದ್ಧತೆ ಮತ್ತು ಮುನ್ನೆಚ್ಚರಿಕೆಗಳಿಂದ ಬಿಕ್ಕಟ್ಟಿಗೆ ಗುರಿಯಾಗುವುದಕ್ಕಿಂತ ಒಳ್ಳೆಯದು”.

- Advertisement -
- Advertisement -

ಭಾರತೀಯ ಮೂಲದ ಡಾ.ರಮಣನ್ ಲಕ್ಷ್ಮಿನಾರಾಯಣ ಅಮೆರಿಕಾದಲ್ಲಿ ರೋಗದ ಡೈನಾಮಿಕ್ಸ್, ಆರ್ಥಿಕತೆ ಮತ್ತು ನೀತಿಯ ಕುರಿತಾದ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಒಬ್ಬ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾಗಿ ಕೊರೊನಾ ಕುರಿತು ಅವರೇನು ಹೇಳುತ್ತಾರೆ ಎಂಬುದಕ್ಕೆ ವಿಶೇಷ ಮಹತ್ವ ಬಂದಿದೆ. ಅವರು ಮೋಜೋ ಟಿವಿಗಾಗಿ ಬರ್ಕಾದತ್ ನಡೆಸಿಕೊಟ್ಟ ಸಂದರ್ಶನದಲ್ಲಿ ಆಡಿದ ಮಾತುಗಳ ಸಂಗ್ರಹಾನುವಾದ ಇಲ್ಲಿದೆ.

‘ನಾವು ಕೊರೊನಾ ಸೋಂಕಿನ ಮೂರನೇ ಹಂತಕ್ಕೆ ಬಂದಾಗಿದೆ; ಈಗ ಅಗತ್ಯವಿರುವುದು ವ್ಯಾಪಕ ಪರೀಕ್ಷೆಗಳು ಮತ್ತು ದೊಡ್ಡ ಸಂಖ್ಯೆಯ ತುರ್ತು ಚಿಕಿತ್ಸಾ ಕೇಂದ್ರಗಳು’
– ಡಾ. ರಮಣನ್ ಲಕ್ಷ್ಮಿನಾರಾಯಣ

ಅಂತಿಮವಾಗಿ ಭಾರತ ಸರ್ಕಾರ ಕೊರೊನಾ ಪರೀಕ್ಷೆಯ ಪ್ರೊಟೊಕಾಲ್ (ಯಾರಿಗೆ ಟೆಸ್ಟ್ ಮಾಡಬೇಕು ಅಥವಾ ಬೇಡ ಎಂಬ ನಿಯಮ)ಗಳನ್ನು ಬದಲಿಸಿದೆ. ಕೇವಲ ವಿದೇಶದಿಂದ ಬಂದವರನ್ನು ಅಥವಾ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಪರೀಕ್ಷಿಸುವುದು ಭಾರತದಲ್ಲಿ ಈವರೆಗೆ ಕೊರೊನಾ ಪರೀಕ್ಷಾ ಪ್ರೊಟೊಕಾಲ್‌ನ ಭಾಗವಾಗಿರಲಿಲ್ಲ. ‘ಇಂಡಿಯನ್ ಸೆಂಟರ್ ಫಾರ್ ಮೆಡಿಕಲ್ ರಿಸರ್ಚ್’ ನಡೆಸಿದ 1000 ಜನರ ರ‍್ಯಾಂಡಮ್ ಪರೀಕ್ಷೆಯಲ್ಲಿ ಒಬ್ಬರೂ ಕೊರೊನಾ ಪಾಸಿಟಿವ್ ಇರಲಿಲ್ಲ. ಹೀಗಾಗಿ ಅಂತಹ ತೊಂದರೆಯೇನಿಲ್ಲ ಎಂಬ ಭಾವವೂ ಇತ್ತು. ಆದರೆ, ಈ ಪರೀಕ್ಷೆಯೂ ಭಾರತದಲ್ಲಿ ಕೊರೊನಾದಂತಹ ವೈರಸ್ ಮೂಲದ ಫ್ಲೂ ಜ್ವರ ಹರಡಬಹುದಾದ ವೇಗಕ್ಕೆ ಹೋಲಿಸಿದರೆ ಎಲ್ಲಿಗೂ ಸಾಲುವುದಿಲ್ಲ ಎಂಬುದು ಕೆಲವು ವೈದ್ಯಕೀಯ ತಜ್ಞರ ಅಭಿಪ್ರಾಯ. ಈ ನಡುವೆ ಭಾರತ ಸರ್ಕಾರವು ದೇಶದಲ್ಲಿ ಕರೋನಾ ಪ್ರಕರಣಗಳು ಹೆಚ್ಚು ಕಂಡು ಬಂದಿರುವುದರಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ಎಲ್ಲೆಡೆ ಅನಿಶ್ಚಿತತೆ ಮತ್ತು ಆತಂಕದ ಛಾಯೆ ಕವಿದಿದೆ.

ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತೆ ಬರ್ಖಾದತ್ ಅವರು ಸಾಂಕ್ರಾಮಿಕ ರೋಗಗಳ ತಜ್ಞ ವೈದ್ಯರಾದ ಡಾ.ರಮಣನ್ ಲಕ್ಷ್ಮಿನಾರಾಯಣ ಅವರೊಂದಿಗೆ ಕೊರೊನಾ ಬಗ್ಗೆ ನಡೆಸಿದ ಚರ್ಚೆಯ ಸಾರಸಂಗ್ರಹ ಇಲ್ಲಿದೆ.

“ಭಾರತದ ಮೊದಲ ಪ್ರಕರಣ ಹೆಚ್ಚೂ ಕಡಿಮೆ ಮಾರ್ಚ್ ಮೊದಲ ಭಾಗದಲ್ಲಿ ಗಮನಕ್ಕೆ ಬಂತು. ಆದರೆ ಅದಾದ ನಂತರ ನಡೆಸಬೇಕಿದ್ದ ವ್ಯಾಪಕ ಆರೋಗ್ಯ ಪರೀಕ್ಷೆಯ ಕೆಲಸವನ್ನು ಭಾರತ ನಡೆಸಿಲ್ಲ. ಅದರಿಂದಾಗಿ ನಮಗೆ ನಿಜಕ್ಕೂ ಭಾರತದಲ್ಲಿ ಈಗಾಗಲೇ ಎಷ್ಟು ಜನ ಸೋಂಕು ಪೀಡಿತರಿದ್ದಾರೆ ಮತ್ತು ಅದರ ನಿಯಂತ್ರಣಕ್ಕೆ ಇನ್ನೂ ಏನೇನು ಮಾಡಬೇಕಾಗಿದೆ ಎಂಬ ಅಂದಾಜಿಲ್ಲ. ನಮ್ಮ ಅಂಕಿ ಸಂಖ್ಯೆಯ ಅಂದಾಜಿನ ಪ್ರಕಾರ ಕೊರೊನಾ ಸೋಂಕು ಒಂದು ಹಂತಕ್ಕೆ ತಹಬಂದಿಗೆ ಬರುವುದರೊಳಗೆ (ಜುಲೈ ಕೊನೆಯವರೆಗೆ) ಭಾರತದಲ್ಲಿ ಕನಿಷ್ಟ 30-50 ಕೋಟಿ ಮಂದಿ (300-500 ಮಿಲಿಯನ್ ಮಂದಿ) ಸೋಂಕು ಪೀಡಿತರಾಗಲಿದ್ದಾರೆ.

ಸೋಂಕು ತನ್ನ ಉಚ್ಚ್ರಾಯ ತಲುಪುವ ವೇಳೆಗೆ-ಅಂದರೆ ಮುಂದಿನ 3ರಿಂದ 10 ವಾರಗಳ ಒಳಗೆ (ಈಗಿನಿಂದ ಮೇ ಅಂತ್ಯದವರೆಗೆ)-ಏನಿಲ್ಲವೆಂದರೂ 10 ಕೋಟಿ ಮಂದಿಯನ್ನು ಆಕ್ರಮಿಸಲಿದೆ. ಅವರಲ್ಲಿ ಕನಿಷ್ಟ ಶೇ.3-4ರಷ್ಟು ಜನರಿಗೆ ತೀವ್ರರೂಪದ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಅವರಲ್ಲಿ 10-20 ಲಕ್ಷದಷ್ಟು ರೋಗಿಗಳು ಸಾವನ್ನಪ್ಪುವ ಸಾಧ್ಯತೆ ಇದೆ. ವರ್ಷವೊಂದರಲ್ಲಿ ಭಾರತದ ಸಾವಿನ ಪ್ರಮಾಣಕ್ಕೆ ಹೋಲಿಸಿದಾಗ ಇದು ಅಷ್ಟೇನೂ ದೊಡ್ಡದಲ್ಲದಿರಬಹುದು. ಆದರೆ, ಕೆಲವೇ ತಿಂಗಳ ಅವಧಿಯಲ್ಲಿ ಆಗಬಹುದಾದ ಇಷ್ಟೊಂದು ಸಾವಿನ ಪ್ರಮಾಣವು ನಿಜಕ್ಕೂ ತುಂಬಾ ದೊಡ್ಡದೇ ಆಗಿರುತ್ತದೆ.”

“ಈ ಅಂಕಿಸಂಖ್ಯೆಗಳು ತನ್ನಂತೆ ತಾನೇ ಗಾಬರಿ ಹುಟ್ಟಿಸುವಂತಹವಲ್ಲ. ಏಕೆಂದರೆ, ಪ್ರತಿ ವರ್ಷ ಭಾರತದಲ್ಲಿ ಹೆಚ್ಚೂ ಕಡಿಮೆ 10 ಕೋಟಿಯಷ್ಟು ಮಂದಿ ಫ್ಲೂ ಜ್ವರಕ್ಕೆ (ಇನ್‌ಫ್ಲೂಯೆಂಜಾ) ಗುರಿಯಾಗುತ್ತಾರೆ. ಆದರೆ ಆ ಸಂದರ್ಭಕ್ಕೂ ಈಗಿನ ಸಾಂಕ್ರಾಮಿಕ ರೋಗದ ಪರಿಸ್ಥಿತಿಗೂ ಇರುವ ವ್ಯತ್ಯಾಸವೆಂದರೆ ಇನ್‌ಫ್ಲೂಯೆಂಜಾದಲ್ಲಿ ಸಾವಿನ ಸರಾಸರಿ ಶೇ.0.1ರಷ್ಟು ಮಾತ್ರ. ಮತ್ತು ಅದು ಇಡೀ ಒಂದು ವರ್ಷದ ಅವಧಿಯುದ್ದಕ್ಕೂ ಹರಡಿಕೊಂಡಿರುತ್ತದೆ. ಈಗಿನ ಸಂದರ್ಭವನ್ನು ಸ್ವಲ್ಪ ಗಮನಿಸಿ. ತೀವ್ರರೂಪದ ಕೊರೊನಾ ಸೋಂಕಿಗೆ ಕೇವಲ ಶೇ.1-2ರಷ್ಟು ಮಂದಿ ಮಾತ್ರವೇ ಸಾವಿಗೆ ಒಳಗಾದರೂ ಅದು ಸಾಮಾನ್ಯ ಫ್ಲೂಗಿಂತ 20ರಿಂದ 30 ಪಟ್ಟು ಹೆಚ್ಚು.

ಮುಂದಿನ ಕೆಲವು ವಾರಗಳಲ್ಲಿ ಕೊರೊನಾ ವೈರಸ್‌ನಿಂದ ತೀವ್ರರೂಪದ ಸೋಂಕಿಗೊಳಗಾಗಿ ಆರೋಗ್ಯಸೇವೆಯ ನೆರವಿಗಾಗಿ ಧಾವಿಸಿ ಬರುವ ಲಕ್ಷಾಂತರ ಜನರನ್ನು ನಮ್ಮ ಆರೋಗ್ಯ ವ್ಯವಸ್ಥೆ ನಿಭಾಯಿಸಲಾರದು”
“ಇದನ್ನು ಸರಿಯಾಗಿ ತಿಳಿಯಬೇಕೆಂದರೆ ವೈರಸ್‌ಗಳಿಗೆ ಸಂಬಂಧಿಸಿದ ವಿಜ್ಞಾನವನ್ನು ನಾವು ಸರಿಯಾಗಿ ಅರಿತುಕೊಳ್ಳಬೇಕು. ವೈರಸ್‌ಗಳು ನಮಗೆ ಪ್ರಾಣಿಗಳಿಂದಲೂ ದಾಟುವುದು ಮತ್ತು ಇದು ಪ್ರತಿ ದಿನ ನಡೆಯುವ ಪ್ರಕ್ರಿಯೆ. ವೈರಸ್‌ಗಳು ನಮ್ಮ ದೇಹ ಪ್ರವೇಶಿಸದಂತೆ ಬದುಕುವುದು ಅಸಾಧ್ಯ. ಸಾಕು ಪ್ರಾಣಿಗಳನ್ನೂ ಸೇರಿದಂತೆ, ಯಾವುದರಿಂದ ಬೇಕಾದರೂ ಅವು ಬರಬಹುದು. ವೈರಸ್ ಮಾನವ ದೇಹವನ್ನು ಪ್ರವೇಶಿಸಿದಾಗೆಲ್ಲ ಅದು ಸಾಂಕ್ರಾಮಿಕ ರೋಗದ ಲಕ್ಷಣವನ್ನೇನೂ ಪಡೆಯುವುದಿಲ್ಲ. ಸಾಂಕ್ರಾಮಿಕ ರೋಗ ತಜ್ಞರು ವಿವರಿಸುವಂತೆ, ವೈರಸ್‌ನಿಂದ ಹರಡುವ ಖಾಯಿಲೆಗಳಿಗೆ ಕಾರಣ ‘ವೈರಸ್ ಮತ್ತು ಮನುಷ್ಯರ ದೇಹಗಳ ನಡುವೆ ಪರಸ್ಪರ ಉಂಟಾಗುವ ತಪ್ಪು ತಿಳುವಳಿಕೆ’. ಆ ನಿರ್ದಿಷ್ಟ ವೈರಸ್‌ನ್ನು ನಮ್ಮ ದೇಹ ಎಂದೂ ನೋಡಿರುವುದಿಲ್ಲವಾದ್ದರಿಂದ, ಅದರಿಂದ ಗಾಬರಿಗೊಂಡು ಅತಿರೇಕದ ಪ್ರಮಾಣದಲ್ಲಿ ರೋಗನಿರೋಧಕ ಜೀವಾಣುಗಳನ್ನು ದೇಹ ಸೃಷ್ಟಿಸುತ್ತದೆ ಮತ್ತು ಅದರಿಂದಾಗಿ ಸಮಸ್ಯೆ ಉಂಟಾಗುತ್ತದೆ.”

“ಯಾವಾಗ ಕೊರೊನಾದಂತಹ ವೈರಸ್‌ಗಳು ಹೀಗೆ ಮಾನವ ದೇಹಗಳ ನಡುವೆ ಹಬ್ಬುವ ಹಂತವನ್ನು ತಲುಪುತ್ತವೋ, ಆಮೇಲೆ ಅದು ದ್ವಿಗುಣಗೊಳ್ಳುತ್ತಾ ಸಾಗುತ್ತದೆ (ಅಂದರೆ ಒಂದರಿಂದ ಎರಡು, ಎರಡರಿಂದ ಮೂರು ಆಗುವುದಿಲ್ಲ; ಬದಲಿಗೆ ಒಂದರಿಂದ ಎರಡು, ಎರಡರಿಂದ ನಾಲ್ಕು, ನಾಲ್ಕರಿಂದ ಎಂಟು, ಹದಿನಾರು ಆಗುತ್ತಾ ಹೋಗುತ್ತದೆ). ಆದ್ದರಿಂದಲೇ ಚೀನಾ ಮತ್ತು ಇಟಲಿಗಳಲ್ಲಿ ನಾವು ಈ ದ್ವಿಗುಣಗೊಳ್ಳುವ ಗ್ರಾಫ್ ಅನ್ನು ನಾವು ನೋಡುತ್ತಿದ್ದೇವೆ. ಭಾರತ ಈಗಾಗಲೇ ಆ ಹಂತವನ್ನು ತಲುಪಿದೆ. ಅಂದರೆ ಸೋಂಕಿನ ಮೂರನೇ ಹಂತವಾದ ಸಾಮೂಹಿಕ ಹಬ್ಬುವಿಕೆಯ ಘಟ್ಟಕ್ಕೆ ನಾವಾಗಲೇ ಬಂದಿದ್ದೇವೆ. ಕೊರೊನಾ ಪ್ರಕರಣದಲ್ಲಿ ಇದು ಹೀಗಿರುತ್ತದೆ. ಸೋಂಕು ಮೊದಲು ನಮ್ಮ ದೇಹವನ್ನು ಪ್ರವೇಶಿಸಿದರೂ ಮೊದಲ ಐದು ದಿನ ಅದರ ಯಾವುದೇ ಲಕ್ಷಣಗಳು ಕಾಣುವುದಿಲ್ಲ. ಆದರೆ, ಲಕ್ಷಣಗಳು ಕಾಣದಿರುವಾಗಲೂ ಅದು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಲೇ ಇರುತ್ತದೆ.”

“ಅದರ ಲಕ್ಷಣಗಳು ನಂತರದ 9 ದಿನಗಳಲ್ಲಿ ಕಾಣುತ್ತವೆ. ಆದ್ದರಿಂದಲೇ ಸೋಂಕಿನ ಲಕ್ಷಣ ಕಾಣಿಸಿ, ನಂತರ ಚಿಕಿತ್ಸೆಗೆಂದು 14 ದಿನಗಳ ಪ್ರತ್ಯೇಕತೆ ಹೇಳಲಾಗುತ್ತದೆ. ಅಂದರೆ, ಈಗಾಗಲೇ ಹಲವು ಸಾವಿರಗಳಷ್ಟು ಮಂದಿಗೆ ಈ ಸೋಂಕು ಹಬ್ಬಿದ್ದರೂ ಅದು ಬ್ರೇಕ್‌ಔಟ್ ಆಗುವುದು ಇನ್ನೂ 3-4 ದಿನ ತಡವಾಗಬಹುದು. ಅದಾದ ನಂತರ ಒಮ್ಮೆಲೆ ಸೋಂಕು ಪೀಡಿತರ ಸಂಖ್ಯೆ ಕೆಲವು ಲಕ್ಷಗಳಷ್ಟು ಕಾಣಬಹುದು. ಇದರರ್ಥ ಇಷ್ಟೇ-ಈಗ ನಾವು ಇನ್ನೂ ಸೋಂಕಿನ ಎರಡನೇ ಹಂತದಲ್ಲಿದ್ದೇವೆ ಎಂದು ಭಾವಿಸುತ್ತಿರುವಾಗಲೇ ನಮ್ಮ ಕಾಲುಗಳ ಕೆಳಗೆ ರೋಗ ವೇಗವಾಗಿ ಹಬ್ಬುತ್ತಾ ಹೋಗುತ್ತಿದೆ.”

“ಕೊರೊನಾ ಸೋಂಕನ್ನು ಪತ್ತೆ ಹಚ್ಚಲು ಅಥವಾ ಯಾವುದೇ ವೈರಸ್ ಸೋಂಕನ್ನು ಪತ್ತೆ ಹಚ್ಚಲು ಎರಡು ಬಗೆಯ ಪರೀಕ್ಷಾ ವಿಧಾನಗಳಿವೆ. ಅದರಲ್ಲಿ ಒಂದು ವಿಧವನ್ನು ಆರ್‌ಟಿ-ಪಿಸಿಆರ್ ಎಂದು ಕರೆಯುತ್ತಾರೆ. ಇದೊಂದು ಜೆನೆಟಿಕ್ ಪರೀಕ್ಷಾ ವಿಧಾನ. ಮನುಷ್ಯನ ದೇಹದೊಳಗಿನಿಂದ ವಂಶವಾಹಿಗಳಿರುವ ಅಂಗಾಂಶವನ್ನು ತೆಗೆದುಕೊಂಡು ಪರೀಕ್ಷೆ ನಡೆಸುವ ವಿಧಾನ. ಇದು ಹೆಚ್ಚೂ ಕಡಿಮೆ ಸಂಪೂರ್ಣ ಖಚಿತ ಫಲಿತಾಂಶ ನೀಡುತ್ತದೆ. ಆದರೆ ಇದರಲ್ಲಿ ಫಲಿತಾಂಶ ಪಡೆಯಲು ಸಾಕಷ್ಟು ಸಮಯ ಹಿಡಿಯುತ್ತದೆ.

ಇನ್ನೊಂದು ವಿಧಾನ ಸರಳವಾಗಿದ್ದು, ವೇಗವಾಗಿ ಫಲಿತಾಂಶ ನೀಡುವುದು ಮಾತ್ರವಲ್ಲದೆ, ಕಡಿಮೆ ಬೆಲೆಯಲ್ಲಿ ಮಾಡಿಸಲು ಸಾಧ್ಯವಾಗುತ್ತದೆ. ಇದರಲ್ಲಿ ನಮ್ಮ ದೇಹ ಯಾವುದಾದರೂ ಸೋಂಕಿಗೆ ಆ್ಯಂಟಿಬಾಡಿ (ರೋಗನಿರೋಧಕಾಣುಗಳು)ಗಳನ್ನು ಬೆಳೆಸಿಕೊಳ್ಳುತ್ತಿದೆಯೇ ಎಂಬುದನ್ನು ಗಮನಿಸುವುದು. ಈ ಪರೀಕ್ಷೆಯಲ್ಲಿ ರಕ್ತದ ಮಾದರಿ ಅಥವಾ ಮೂಗು/ಗಂಟಲಿನ ದ್ರವದ ಮಾದರಿಯನ್ನು ತೆಗೆದುಕೊಂಡು ಪರೀಕ್ಷಿಸಿ ತಕ್ಷಣವೇ ಫಲಿತಾಂಶ ನೀಡಲಾಗುತ್ತದೆ. ಜನಾರೋಗ್ಯದ ಕ್ಷೇತ್ರದಲ್ಲಿರುವ ನಾವುಗಳು ಹೆಚ್ಚು ಸಮಯ ಮತ್ತು ಹಣ ತೆಗೆದುಕೊಳ್ಳುವ ಪಿಸಿಆರ್ ಪರೀಕ್ಷೆಯನ್ನು ಎರಡನೇ ಹಂತದಲ್ಲಿ ಮಾಡೋಣ, ಮೊದಲ ಹಂತದಲ್ಲಿ ಸರಳವಾದ ಪರೀಕ್ಷೆಯನ್ನೇ ಅತ್ಯಂತ ವ್ಯಾಪಕವಾಗಿ ಮಾಡೋಣ ಎಂದು ಹೇಳುತ್ತಲೇ ಬಂದಿದ್ದೇವೆ. ಇದು ತುರ್ತಾಗಿ ಆಗಬೇಕಾದ ಕೆಲಸ”

“ಭಾರತದಂತಹ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಎಂಬುದು ಬಹಳ ಕಷ್ಟ. ಮೊದಲನೆಯದ್ದಾಗಿ ದೊಡ್ಡ ಸಂಖ್ಯೆಯ ಜನರು ಪ್ರತಿದಿನದ ದುಡಿಮೆಯ ಮೇಲೆ ಬದುಕುವವರಾಗಿದ್ದರಿಂದ ಸಾಮಾಜಿಕ ಪ್ರತ್ಯೇಕತೆಯೆಂಬುದು ಅತ್ಯಂತ ಕಷ್ಟಕರ. ಎರಡನೆಯದ್ದಾಗಿ ನಮ್ಮದು ಸರ್ವಾಧಿಕಾರಿ ದೇಶವಲ್ಲವಾದ್ದರಿಂದ, ಸರ್ಕಾರ ಲಾಕ್‌ಡೌನ್ ಘೋಷಿಸಿದರೂ ಅದು ಜಾರಿಯಾಗುವುದು ಶೇ.50ರಿಂದ 70ರಷ್ಟು ಪ್ರಮಾಣಕ್ಕೆ ಮಾತ್ರ. ಇದೆಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ, ಈಗಾಗಲೇ ನಾವು ಲಾಕ್‌ಡೌನ್ ಹಂತವನ್ನು ಹೆಚ್ಚೂ ಕಡಿಮೆ ದಾಟಿದ್ದೇವೆ. ಈಗಾಗಲೇ ಮೂರು ವಾರಗಳ ಹಿಂದೆ ನಾವು ಲಾಕ್‌ಡೌನ್ ಮಾಡಿದ್ದರೆ ಅದರ ಪ್ರಯೋಜನ ಸಿಗಬಹುದಿತ್ತು. ಈಗಲೂ ಮಾಡುವುದೇ ಆಗಿದ್ದಲ್ಲಿ, ಅದು ಭಾಗಶಃ ಲಾಕ್‌ಡೌನ್ ಅಲ್ಲ, ಸಂಪೂರ್ಣ ಲಾಕ್‌ಡೌನ್‌ನ್ನು ಈ ತತ್‌ಕ್ಷಣದಿಂದಲೇ ಜಾರಿಗೊಳಿಸಿದರಾದರೂ ಒಂದಷ್ಟು ಪ್ರಯೋಜನ ಆಗಬಹುದು”.

“ಅದನ್ನು ಬಿಟ್ಟರೆ ಇರುವ ಪರ್ಯಾಯ ಮಾರ್ಗಗಳು ಈ ಕೆಳಗಿನವು-

• ಜನರು ನಮ್ಮ ಬಳಿಗೆ ಬರುವವರೆಗೆ ಕಾಯದೆ, ನಾವೇ ಸ್ವಯಂಪ್ರೇರಣೆಯಿಂದ ವ್ಯಾಪಕ ಪರೀಕ್ಷೆಗಳನ್ನು ಮಾಡುತ್ತಾ, ಸೋಂಕಿಗೊಳಗಾಗಿರುವವರನ್ನು ಪರೀಕ್ಷಿಸುತ್ತಾ ಹೋಗುವುದು. ವಿಶೇಷವಾಗಿ, ಈವರೆಗಿನ ಎಲ್ಲ ದೇಶಗಳ ಅನುಭವದಲ್ಲಿ 65 ವರ್ಷಕ್ಕೆ ಮೇಲ್ಪಟ್ಟವರು ಮತ್ತು 5 ವರ್ಷದೊಳಗಿನ ಮಕ್ಕಳು ಖಾಯಿಲೆಗೆ ಗುರಿಯಾಗುವ ಸಾಧ್ಯತೆ ಅತಿಹೆಚ್ಚಾಗಿರುವುದರಿಂದ, ಅವರುಗಳನ್ನು ನಾವೇ ಮುಂದಾಗಿ ಪರೀಕ್ಷಿಸಿ ಚಿಕಿತ್ಸೆ ಕೊಡುವುದು. ಇದರಿಂದ, ಒಮ್ಮೆಗೆ ದೊಡ್ಡ ಸಂಖ್ಯೆಯ ಜನ ಆರೋಗ್ಯ ಸೇವೆಗಳಿಗಾಗಿ ಧಾವಿಸಿ ಬಂದು ಬಡಿದಾಡುವುದನ್ನು ತಪ್ಪಿಸಬಹುದು.

• ಖಾಸಗಿ ಆರೋಗ್ಯ ಸೇವೆಗಳನ್ನು ನೀಡುವವರನ್ನೂ ಈ ಸಂದರ್ಭದಲ್ಲಿ ಅತಿಕಡಿಮೆ ದರದಲ್ಲಿ ಸೇವೆ ಸಲ್ಲಿಸಲು ಸರ್ಕಾರ ಮನವೊಲಿಸುವುದು.

• ನಾನು ಒಂದು ವೇಳೆ ಸರ್ಕಾರದಲ್ಲಿದ್ದಿದ್ದರೆ, ಮಿ.ಟಾಟಾ, ಮಿ.ಬಿರ್ಲಾ ಮೊದಲಾದ ಉತ್ಪಾದಕರನ್ನು ಮನವಿ ಮಾಡುತ್ತಿದ್ದೆ-ಈ ಕೂಡಲೇ ತುರ್ತಾಗಿ ನಮಗೆ ಯುದ್ಧೋಪಾದಿಯಲ್ಲಿ ಲಕ್ಷಾಂತರ ಸಂಖ್ಯೆಯ ವೆಂಟಿಲೇಟರ್‌ಗಳನ್ನು ತಯಾರಿಸಿಕೊಡಿ-ಎಂದು. ಅಮೇರಿಕಾ ಮಾಡುತ್ತಿರುವುದು ಅದನ್ನೇ. ರೋಲ್ಸ್ರಾಯ್ ಮೊದಲಾದ ಉತ್ಪಾದಕರು ನಿಯಮಿತವಾಗಿ ವೆಂಟಿಲೇಟರ್ ತಯಾರಿಸುವವರಲ್ಲ. ಆದರೆ, ಈಗ ಅವರಿಂದ ಲಕ್ಷಾಂತರ ವೆಂಟಿಲೇಟರ್‌ಗಳನ್ನು ಸರ್ಕಾರ ಮಾಡಿಸಿಕೊಳ್ಳುತ್ತಿದೆ.

• ದೊಡ್ಡ ಸಂಖ್ಯೆಯ ಹೊಸ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತಕ್ಷಣವೇ ಸಿದ್ಧಪಡಿಸಿಕೊಳ್ಳುವುದು. ಕೆಲವು ಕೋಟಿಗಳಷ್ಟು ಇಂತಹ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರಗಳನ್ನು ನಾವು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತ ನಾವು ಈ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಬಲ್ಲೆವು. ಹಾಗೂ ಭಾರತ ಇಂತಹ ಕೆಲವು ಕೋಟಿ ಕೇಂದ್ರಗಳನ್ನು ಸ್ಥಾಪಿಸಿಕೊಳ್ಳುವುದು ಅಸಾಧ್ಯವಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ”.

“ಎಲ್ಲಕ್ಕಿಂತ ಮುಖ್ಯವಾಗಿ ಜನರು ತಿಳಿಯಬೇಕಾದ್ದು, ಗಾಬರಿಯಾಗುವ ಅಗತ್ಯವಿಲ್ಲ; ಮುಖ್ಯವಾಗಿ ಗಾಬರಿಯಾಗುವುದರಿಂದ ಏನೂ ಪ್ರಯೋಜನವಿಲ್ಲ. ಸಾಮಾನ್ಯ ಸಂದರ್ಭಗಳಲ್ಲೂ ಕೆಮ್ಮುವಾಗ, ಸೀನುವಾಗ ಕೈಯ್ಯನ್ನು ಅಡ್ಡ ಹಿಡಿಯಬೇಕೆಂಬ ನಮ್ಮ ಪ್ರಾಥಮಿಕ ತರಗತಿಗಳ ಪಾಠವನ್ನು ನೆನಪಿಡಿ. ಮನೆಯಲ್ಲಿ ಹಿರಿಯರು ಅಥವಾ ತೀರಾ ಚಿಕ್ಕ ಮಕ್ಕಳಿದ್ದರೆ ಹೊರಹೋಗಿ ಮನೆಗೆ ಬಂದ ತಕ್ಷಣ ಸ್ನಾನ ಮಾಡಿ. ನೆಗಡಿ, ಕೆಮ್ಮು ಅಥವಾ ಜ್ವರ ಇದ್ದರೆ, ಯಾರನ್ನೂ ಭೇಟಿಯಾಗಬೇಡಿ, ಯಾರಿಗೂ ತೀರಾ ಸಮೀಪ ಹೋಗಬೇಡಿ. ನೀವು ಹಿರಿಯ ನಾಗರಿಕರಾಗಿದ್ದರೆ, ದಯವಿಟ್ಟು ದಯವಿಟ್ಟು ಹೊರಗೆ ಹೋಗದೆ ಮನೆಯಲ್ಲೇ ಇರಿ”.

“ನಾವು ಅಗತ್ಯಕ್ಕಿಂತ ಹೆಚ್ಚೇ ಸಿದ್ಧತೆಗಳನ್ನು ಮಾಡಿಕೊಂಡು, ಸ್ವಲ್ಪ ಹೆಚ್ಚೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು, ಕಡಿಮೆ ಸಿದ್ಧತೆ ಮತ್ತು ಮುನ್ನೆಚ್ಚರಿಕೆಗಳಿಂದ ಬಿಕ್ಕಟ್ಟಿಗೆ ಗುರಿಯಾಗುವುದಕ್ಕಿಂತ ಒಳ್ಳೆಯದು”.

“ಈ ಸಂದರ್ಭ ನಮ್ಮ ಮುಂದೆ ಬಂದಾಗಿದೆ. ಈಗ ಮಾಡಬೇಕಾದುದಿಷ್ಟೇ; ಗಾಬರಿಯಾಗಬೇಡಿ, ಎಚ್ಚರಿಕೆ ತೆಗೆದುಕೊಳ್ಳಿ, ನಿಮ್ಮವರ ಬಗ್ಗೆ ಗಮನವಹಿಸಿ. ನಾವು ಈ ಆತಂಕದ ಸನ್ನಿವೇಶವನ್ನು ಆದಷ್ಟು ಬೇಗ ದಾಟುತ್ತೇವೆ; ಖಂಡಿತವಾಗಿ ನಾವೆಲ್ಲ ಜೊತೆಗೂಡಿ ಇದನ್ನು ದಾಟಲಿದ್ದೇವೆ”.

ಡಾ.ರಮಣನ್ ಲಕ್ಷ್ಮಿನಾರಾಯಣ
ಸಂದರ್ಶಕಿ: ಬರ್ಖಾದತ್
ಸಂಗ್ರಹ ಬರಹ: ಮಲ್ಲಿಗೆ ಸಿರಿಮನೆ
ಕೃಪೆ: ಮೋಜೋ ಟಿವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...