ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಬರ್ತಡೇ ಸೆಲಬ್ರೇಷನ್ ಇದೇ ತಿಂಗಳಿನಲ್ಲಾಯಿತು. ಮತ್ತೊಬ್ಬ ಸ್ಟಾರ್ ನಟನ ಹುಟ್ಟಿದ ದಿನದ ಆಚರಣೆ ಫೆಬ್ರವರಿಯಲ್ಲಾಗಲಿದೆ. ಆದರೆ ಈ ಮೂರು ಬರ್ತಡೇ ಸೆಲಬ್ರೇಷನ್‍ಗಳು ಒಂದೊಂದು ರೀತಿಯ ವಿಶೇಷ ಮತ್ತು ವಿಚಿತ್ರವಾಗಿವೆ. ಜನವರಿ 08ರಂದು ಹುಟ್ಟಿದ ಹಬ್ಬ ಆಚರಿಸಿಕೊಂಡ ಯಶ್‍ಗೆ ತಮ್ಮ ಬರ್ತಡೆಯನ್ನೂ ಹೆಚ್ಚು ಸೆಲೆಬ್ರೇಟ್ ಮಾಡದ ಅಭಿಮಾನಿಗಳು 5,700 ಕೆ.ಜಿ ಕೇಕ್ ರೆಡಿ ಮಾಡಿಸಿ ಸಂಭ್ರಮ ಆಚರಿಸಿದ್ದರು.

ಯಶ್ ಬರ್ತಡೇಗಿಂತ ವಿಚಿತ್ರವಾಗಿ ಬರ್ತಡೇ ಆಚರಿಸಿಕೊಂಡಿದ್ದು ದುನಿಯಾ ವಿಜಯ್, ಇತ್ತೀಚೆಗೆ ಹೊಡೆದಾಟ, ಬಡಿದಾಟ, ಬೀದಿ-ಮನೆ ಜಗಳಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ವಿಜಯ್ ತನ್ನ ಬರ್ತಡೇ ಆಚರಣೆಯಲ್ಲೂ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಎಲ್ಲರೂ ಬರ್ತಡೇ ಕೇಕನ್ನು ಚಾಕುವಿನಿಂದ ಕತ್ತರಿಸಿದರೆ, ಮೊನ್ನೆ (ಜ.20) ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ವಿಜಯ್ ತಲ್ವಾರ್‍ನಲ್ಲಿ ಕೇಕ್ ಕಟ್ ಮಾಡಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇತ್ತೀಚೆಗೆ ವಿಜಯ್‍ರ ಹೊಡಿ-ಬಡಿ ನಡವಳಿಕೆಗಳನ್ನು ನೋಡಿದ್ದ ಯಾರೋ ಒಬ್ಬ ಅಭಿಮಾನಿ ತಲ್ವಾರ್ ತಂದು ಬರ್ತಡೇ ಕೇಕ್ ಕಟ್ ಮಾಡೋಕೆ ಕೊಟ್ಟಿದ್ದಾನೆ. ಅದನ್ನೇ ಹಿಡಿದು ಕೇಕ್ ಕಟ್ ಮಾಡಿರುವ ವಿಜಯ್‍ರನ್ನು ಜನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ. ಅಯ್ಯೋ ಗೊತ್ತಿಲ್ದೆ ತಪ್ಪಾಗೋಗಿದೆ ಬಿಟ್ಬುಡ್ರಿ ಅಂತ ವಿಜಯ್ ಬಾಯಿ ಬಡ್ಕೊತಾ ಕುಂತಿದ್ದಾರೆ ಪಾಪ. ಆ ಅಭಿಮಾನಿಗೆ ವಿಜಯ್ ಮೇಲೆ ಲವ್ ಜಾಸ್ತಿ ಆಗಿತ್ತೋ, ಕೋಪ ಜಾಸ್ತಿ ಆಗಿತ್ತೋ ಗೊತ್ತಿಲ್ಲ, ವಿಜಯ್‍ರನ್ನು ಎಡವಟ್ಟಿನಲ್ಲಿ ಸಿಕ್ಕಿಸಿಹೋಗಿದ್ದಾನೆ.

ಇದೆಲ್ಲದ ನಡುವೆ ವಿಶೇಷ ಅನ್ನಿಸೋದು ದರ್ಶನ್ ಬರ್ತಡೇ, ಇತ್ತೀಚೆಗೆ ತುಂಬಾ ಸಿಂಪಲ್ ಅಗಿ ಕಾಣಿಸಿಕೊಳ್ತಿರೋ ದರ್ಶನ್, ಅಭಿಮಾನಿಗಳ ಕಷ್ಟಕ್ಕೆ, ಸಹ ನಟರ ಸಮಸ್ಯೆಗಳಿಗೆ ನೆರವು ನೀಡೋದ್ರಲ್ಲೇ ಹೆಚ್ಚು ಸುದ್ದಿ ಆಗ್ತಿದ್ದಾರೆ. ಮುಂದಿನ ತಿಂಗಳು 16ರಂದು ದರ್ಶನ್ ಹುಟ್ಟಿದ ದಿನ. ತನ್ನ ಬರ್ತಡೇ ಇನ್ನು ತಿಂಗಳಿರುವಾಗಲೇ ದರ್ಶನ್ ತಮ್ಮ ಮನೆ ಮುಂದೆ ಬೋರ್ಡ್ ಹಾಕಿಕೊಂಡಿದ್ದು, ಅದರಲ್ಲಿ “ನನ್ನ ಬರ್ತಡೆಗೆ ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ, ಅದೇ ಹಣದಲ್ಲಿ ನಿಮ್ಮ ಕೈಲಾದಷ್ಟು ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ. ಅದನೆಲ್ಲಾ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಲುಪಿಸುವ ಹೊಣೆ ನನ್ನದು” ಎಂದು ಘೋಷಿಸಿದ್ದಾರೆ.

ಈ ಸುದ್ದಿ ಅಭಿಮಾನಿಗಳನ್ನು ಮುಟ್ಟುತಿದ್ದಂತೆಯೇ ಸಾಲು ಸರದಿಯಲ್ಲಿ ತಮ್ಮಿಂದಾಗುವಷ್ಟು ಧಾನ್ಯಗಳನ್ನು ದರ್ಶನ್ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ತನ್ನ ದಾಂಪತ್ಯ ಜೀವನದಲ್ಲಿ ತಾನೇ ಮಾಡಿಕೊಂಡಿದ್ದ ಕಲಹಗಳಿಂದ ವಿಲನ್ ಆಗಿದ್ದ ದರ್ಶನ್, ಅದಾದ ಮೇಲೆ ಇಂತಹ ಒಂದಷ್ಟು ಮಾದರಿಯಾಗುವಂತಹ ಕೆಲಸಗಳಿಂದ ಮತ್ತೆ ಹೀರೋ ಆಗ್ತಿದ್ದಾರೆ.

LEAVE A REPLY

Please enter your comment!
Please enter your name here