Homeಮುಖಪುಟ‘ತಿರುಚಿತ್ರಂಬಲಂ’: ಧನುಷ್‌- ನಿತ್ಯಾ ಮೆನನ್‌ ನಟನೆಯ ನವಿರು ಪ್ರೇಮಕಥೆ

‘ತಿರುಚಿತ್ರಂಬಲಂ’: ಧನುಷ್‌- ನಿತ್ಯಾ ಮೆನನ್‌ ನಟನೆಯ ನವಿರು ಪ್ರೇಮಕಥೆ

- Advertisement -
- Advertisement -

ಅದೊಂದು ಸುಂದರ ಕುಟುಂಬ. ಆಕಸ್ಮಿಕವಾಗಿ ಘಟಿಸುವ ಅಪಘಾತ. ತಂದೆ- ಮಗನ ನಡುವೆ ಬಗೆಹರಿಯದ ಮನಸ್ತಾಪ. ಅಜ್ಜ ಮತ್ತು ಮೊಮ್ಮಗನ ಆತ್ಮೀಯತೆ. ಚಿಕ್ಕನಿಂದಲೂ ಕಥಾನಾಯಕನ ಜೊತೆಗಿರುವ ಗೆಳತಿ, ಆತನ ಏಳು ಬೀಳುಗಳ ಜೊತೆಯಲ್ಲಿ ಸಾಗುತ್ತಾಳೆ. ಕೊನೆಯಲ್ಲೊಂದು ಟ್ವಿಸ್ಟ್‌. ಪ್ರೀತಿ, ಸ್ನೇಹ, ಕೋಪದೊಳಗೆ ಅವಿತಿರುವ ವಾತ್ಸಲ್ಯ- ಇತ್ಯಾದಿಗಳನ್ನು ಹದವಾಗಿ ಬೆರೆಸಿದ ಸಿನಿಮಾ ತಮಿಳಿನ ‘ತಿರುಚಿತ್ರಂಬಲಂ’

ಮಿತ್ರನ್ ಆರ್ ಜವಾಹರ್ ನಿರ್ದೇಶನದ ‘ತಿರುಚಿತ್ರಂಬಲಂ’- ಎಲ್ಲಿಯೂ ಭಾರವೆನಿಸದೆ, ಮೊದಲಿನಿಂದ ಕೊನೆಯವರೆಗೂ ನವಿರು ಹಾಸ್ಯ ಹಾಗೂ ನವಿರು ಸಂಭಾಷಣೆ ಮೂಲಕ, ಖುಷಿ, ಕೋಪ, ದುಃಖ, ಪ್ರೀತಿ, ಸ್ನೇಹ, ಸಂಬಂಧಗಳ ಏರಿಳಿತದೊಂದಿಗೆ ಸಾಗುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ.

ಧನುಷ್‌, ನಿತ್ಯಾ ಮೆನನ್‌, ಪ್ರಕಾಶ್ ರಾಜ್‌, ಭಾರತೀರಾಜ ಮೊದಲಾದ ಕಲಾವಿದರು ಹಠಕ್ಕೆ ಬಿದ್ದಂತೆ ನಟಿಸಿರುವ ‘ತಿರುಚಿತ್ರಂಬಲಂ’- ಲವ್‌ಸ್ಟೋರಿ ಆಧಾರಿತ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕ ವರ್ಗಕ್ಕೆ ಭರಪೂರ ಮನರಂಜನೆ ನೀಡಬಲ್ಲದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಥೆ ಸರಳವಾದರೂ ಚಿತ್ರಕಥೆಯ ನಿರೂಪಣಾ ಶೈಲಿ ಹೊಸ ಅನುಭವವನ್ನು ನೀಡುತ್ತದೆ. ಅನುರುದ್ಧ್ ಅವರ ಸಂಗೀತ- ಹಿತವೆನಿಸುತ್ತದೆ. ಕಥೆಯ ತೂಕವನ್ನು ಹೆಚ್ಚಿಸಿದೆ. ಪ್ರೀತಿಗಾಗಿ ಹಂಬಲಿಸುತ್ತಿರುವ ಪಡಮ್‌ (ತಿರುಚಿತ್ರಂಬಲಂ), ಸೋತು ಗೆಲ್ಲುತ್ತಾನೋ, ಪ್ರೀತಿಯನ್ನು ಧಕ್ಕಿಸಿಕೊಳ್ಳುತ್ತಾನೋ ಎಂಬುದು ಕಥೆ.

ಮಧ್ಯಮ ವರ್ಗದ ಕುಟುಂಬಗಳ ಸುತ್ತ ನಡೆಯುವ ಈ ಸಿನಿಮಾದಲ್ಲಿ ಧನುಷ್‌ (ಪಡಂ) ಒಬ್ಬ ಡೆಲಿವರಿ ಬಾಯ್‌. ಅಪ್ಪ (ಪ್ರಕಾಶ್ ರಾಜ್‌) ಪೊಲೀಸ್‌ ಅಧಿಕಾರಿ. ತಾತ (ಭಾರತೀರಾಜ) ಜನರೇಷನ್‌ ಗ್ಯಾಪ್ ದಾಟಿ ಮೊಮ್ಮಗನೊಂದಿಗೆ ಜಾಲಿಯಾಗಿರುವ ವ್ಯಕ್ತಿ. ಜೊತೆಯಲ್ಲೇ ಕೂತು ಬಿಯರ್‌ ಹೀರುವ ಪ್ರೀತಿ. ಚಿಕ್ಕಂದಿನಿಂದಲೂ ಜೊತೆಯಲ್ಲೇ ಬೆಳೆದಿರುವ ಗೆಳತಿ ಶೋಭನಾ (ನಿತ್ಯಾ ಮೆನನ್‌), ಪಡಂನ ಎಲ್ಲ ಸುಖ, ದುಃಖ, ನೋವು, ನಲಿವು, ಇಷ್ಟ-ಕಷ್ಟಗಳ ಭಾಗ.

ಈ ಸಿನಿಮಾ ಕೇವಲ ಪ್ರೀತಿಯ ಹುಡುಕಾಟದ ಕಥೆಯಾಗಿಯಷ್ಟೇ ಉಳಿಯದೆ ಜನರೇಷನ್‌ಗಳ ನಡುವೆ ಇರುವ ಗೋಡೆಗಳನ್ನು ಕೆಡವುತ್ತ ಹೋಗುತ್ತದೆ. ಚಿತ್ರಕತೆಯ ಜೊತೆಗೆ ಕಥೆಗೆ ಪೂರಕವಾದ ಸಂಭಾಷಣೆ ಇಲ್ಲಿನ ಮತ್ತೊಂದು ಹೈಲೈಟ್‌. ಒಳ್ಳೆಯ ಕಥೆಗೆ ದೊಡ್ಡ ಬಜೆಟ್ ಬೇಕಿಲ್ಲ ಎಂಬುದನ್ನು ತಿರುಚಿತ್ರಂಬಲಂ ಮತ್ತೊಮ್ಮೆ ಸಾಬೀತು ಮಾಡಿದೆ.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ವಿವಾದಿತ ಆಧಾತ್ಮಿಕ ಗುರುವೆನಿಸಿದ ಓಶೋ ರಜನೀಶ್‌, “ಪ್ರೀತಿ ಕೊಟ್ಟು ಸಂತೋಷ ಪಡುತ್ತದೆ. ಅಹಂಕಾರ ಕಿತ್ತುಕೊಂಡು ಸಂತೋಷಪಡುತ್ತದೆ (Love is happy when it is able to give something. The ego is happy when it is able to take something)” ಎಂದಿದ್ದರು. ಇಲ್ಲಿಯೂ ಅಷ್ಟೇ- ಕೊಟ್ಟು ಸಂತೋಷಪಡುವ ತಾತ್ವಿಕತೆಯೇ ಮೇಲುಗೈ ಸಾಧಿಸುತ್ತದೆ.

ಪಡಂನ ಮೂರು ಪ್ರೇಮ ಕಥೆಗಳು ಇಲ್ಲಿವೆ. ಸಿದ್ಧಮಾದರಿಗಳನ್ನು ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲಿ ಮೂರನೇ ಪ್ರೇಮಕಥೆ- ತುಸು ಅವಸರವಾಯಿತೇನೋ ಎಂಬ ಅಳುಕು ಪ್ರೇಕ್ಷಕನನ್ನು ಕಾಡುವ ಹೊತ್ತಿಗೆ ಅದನ್ನು ಭಾವುಕ ಸನ್ನಿವೇಶಗಳ ಮೂಲಕ ಭಾರವೆನಿಸದಂತೆ ಕಟ್ಟಿಕೊಟ್ಟಿರುವುದು ಮಿತ್ರನ್‌ ಅವರ ನಿರೂಪಣಾ ಜಾಣ್ಮೆಗೆ ಕನ್ನಡಿ ಹಿಡಿದಿದೆ. ಕ್ಲೈಮ್ಯಾಕ್ಸ್‌ ನಿರೀಕ್ಷಿತವೆನಿಸಿದರೂ ಅದು ಪ್ರೇಕ್ಷಕನಿಗೆ ಒಪ್ಪಿತವಾಗುವುದು ಹೆಚ್ಚುಗಾರಿಕೆ. ಮನೆಮಂದಿಯೆಲ್ಲ ಒಟ್ಟಿಗೆ ಕೂತು ನೋಡಬಹುದಾದ ನವಿರು ಪ್ರೇಮಕಥೆ- ‘ತಿರುಚಿತ್ರಂಬಲಂ’.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...